Friday, 13th December 2024

ಹೆಸರಿನಷ್ಟೇ ಇವರ ಕೆಲಸವೂ ವಿಶಿಷ್ಟ !

ಶಶಾಂಕಣ

shashidhara.halady@gmail.com

ನಮ್ಮ ಹಳ್ಳಿಯಲ್ಲಿ ‘ಕೊಂಬ’ ಎಂಬ ಶ್ರಮಜೀವಿಯಿದ್ದ. ‘ಕೊಂಬ’ ಎಂಬ ಹೆಸರೇ ವಿಶಿಷ್ಟ ಅಲ್ಲವೆ? ಆ ತಲೆಮಾರಿನ ಹಲವು ಹಳ್ಳಿಗರಿಗೆ ಇಂತಹ ವಿಶಿಷ್ಟ ಹೆಸರುಗಳಿದ್ದವು. ಕೊಂಬ ಎಂಬಾತನ ಪೂರ್ತಿ ಹೆಸರು ಕೊಂಬ ಹಾಂಡ. ಇವನ ಮನೆ ನಮ್ಮ ಮನೆಯ ನೇರ ಹಿಂಭಾಗದಲ್ಲಿತ್ತು. ನಮ್ಮ ಮನೆ ಎದುರಿನಲ್ಲಿ ಪೂರ್ವಕ್ಕೆ ಸಾಗಿದ್ದ ಚೇರ್ಕಿ ಬೈಲಿನಲ್ಲಿ ಅರ್ಧ ಕಿ.ಮೀ. ಸಾಗಿದರೆ, ಹೂವ ಹಾಂಡ ಎಂಬ ಇನ್ನೊಂದು ವಿಶಿಷ್ಟ ಹೆಸರನ್ನಿಟ್ಟುಕೊಂಡಿದ್ದ ವ್ಯಕ್ತಿಯ ಮನೆಯಿತ್ತು.

ನಮ್ಮ ಹಳೆಯ ಮನೆಯನ್ನು ರಿಪೇರಿ ಮಾಡಿಸಿ, ಒಂದು ಭಾಗ ಸೇರಿಸಿ ಕಟ್ಟಿಸಿದಾಗ, ಗೋಡೆಯ ಗಾರೆ ಕೆಲಸಕ್ಕೆ, ಸಿಮೆಂಟು ಗಾರೆ ಕೆಲಸಕ್ಕೆ ಬಂದಿದ್ದ ಒಬ್ಬ ವ್ಯಕ್ತಿಯ ಹೆಸರು ‘ಸಂಕ’. ಈ ಹೆಸರು ಸ್ವಲ್ಪ ವಿಚಿತ್ರವೇ. ಏಕೆಂದರೆ, ನಮ್ಮ ಹಳ್ಳಿಯ ಭಾಷೆ ಯಲ್ಲಿ ಸಂಕ ಎಂದರೆ, ತೋಡು ಅಥವಾ ಪುಟ್ಟ ಹೊಳೆಯನ್ನು ದಾಟಲು ಎರಡೂ ದಡಗಳಿಗೆ ಅಡ್ಡಲಾಗಿ ಹಾಕುವ ಮರದ ಕಾಂಡ. ‘ಸಂಕದ ಮೇಲಿ ನಡಿಗೆ’ ಎಂದರೆ, ಕೆಳಗೆ ಹರಿಯುತ್ತಿರುವ ನೀರಿಗೆ ಬೀಳದೇ, ಅದರ ರಭಸ ಕಂಡು ಬೆದರದೇ, ಬ್ಯಾಲೆನ್ಸ್ ಮಾಡಿಕೊಂಡು ಆ ಏಕೈಕ ಮರದ ಕಾಂಡದ ಮೇಲೆ ನಡೆಯುವುದು!

ನನ್ನ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ಸಮಯದಲ್ಲಿ, ದಿನವೂ ಹನ್ನೆರಡು ಬಾರಿ ಮರದ ಸಂಕವನ್ನು ದಾಟಬೇಕಿತ್ತು – ಬೆಳಗ್ಗೆ ಹೋಗುವಾಗ ಮೂರು ಬಾರಿ, ಮಧ್ಯಾಹ್ನ ಊಟಕ್ಕೆ ಬರುವಾಗ ಮೂರು ಬಾರಿ, ಊಟವಾದ ನಂತರ ಹೋಗುವಾಗ ಮೂರು ಬಾರಿ, ಸಂಜೆ ಬರುವಾಗ ಮತ್ತೆ ಮೂರು ಬಾರಿ! ಮಳೆಗಾಲ ದಲ್ಲೋ, ಆ ತೋಡುಗಳಲ್ಲಿ ಕೆಂಪನೆಯ ನೀರು ರಭಸ ವಾಗಿ ಹರಿಯುತ್ತಿತ್ತು!

ಅದರಲ್ಲಿ ಒಂದು ತೋಡು ಸಾಕಷ್ಟು ದೊಡ್ಡದೇ, ಮಕ್ಕಳು ಅಕಸ್ಮಾತ್ ಬಿದ್ದರೆ ಕೊಚ್ಚಿ ಹೋಗುವಷ್ಟು ನೀರು ಒಮ್ಮೊಮ್ಮೆ ಅದರಲ್ಲಿ ಹರಿಯುತ್ತಿತ್ತು. ಆ ನೀರಿನ ರಭಸವನ್ನೇ ನೋಡುತ್ತಾ, ಸಂಕದ ಮೇಲೆ ನಡೆದರೆ ಕಾಲುಜಾರಿ ಬೀಳುವುದೇ ಸೈ. ಆ ನೀರಿನ
ಭಯದಿಂದ ದೂರಾ ಗಲು ಜತೆಗಾರರು ಒಂದು ಉಪಾಯ ಹೇಳಿಕೊಡುತ್ತಿದ್ದರು ‘ನೀರನ್ನು ಕಾಂಬು ಕಾಗ, ಸಂಕವನ್ನು ಮಾತ್ರ ಕಂಡಕಂಡ್ ನಡಿಕ್. ಆಗ ಹೆದ್ರಿಕೆ ಆತಿಲ್ಲೆ’. ಇಂತಹ ಉಪಾಯ ಅನುಸರಿಸಿ, ಅಂತೂ ಆ ತೋಡಿಗೆ ಬೀಳದೇ ಸಂಕ ದಾಟುತ್ತಾ
ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದೆ ಅನ್ನಿ.

ನಮ್ಮ ಮನೆಯ ಗೋಡೆಗಳಿಗೆ, ಚಿಟ್ಟೆಗೆ, ಚಾವಡಿಗೆ ಸುಣ್ಣಗಾರೆ ಮತ್ತು ಸಿಮೆಂಟ್ ಗಾರೆ ಮಾಡುತ್ತಿದ್ದ ‘ಸಂಕ’ ಎಂಬ ವ್ಯಕ್ತಿಯನ್ನು ಕಂಡಾಕ್ಷಣ, ನನಗೆ ಮೊದಲು ನೆನಪಾಗುತ್ತಿದ್ದುದು ತೋಡು ದಾಟುವ ಸಂಕ. ಶಾಲೆಯಿಂದ ಬಂದ ಕೂಡಲೇ, ಸಂಕನನ್ನು ಈ
ಕುರಿತು ಶ್ಲೇಷೆ ವ್ಯಕ್ತಪಡಿಸಿ ತಮಾಷೆ ಮಾಡುತ್ತಿದ್ದೆ. ಆತ ಮೃದು ಹೃದಯಿ; ಅವನಿಗೆ ಸಾಕಷ್ಟು ವಯಸ್ಸೂ ಆಗಿತ್ತು. ಆ ಇಳಿ ವಯಸ್ಸಿನಲ್ಲೂ ಗಾರೆ ಕೆಲಸ ಮಾಡುವ ಅನಿವಾರ್ಯತೆ ಅವನಿಗೆ ಇತ್ತು ಅನಿಸುತ್ತೆ.

ಪ್ರತಿದಿನ ಬೆಳಗ್ಗೆ ಮೂರ‍್ನಾಲಕ್ಕು ಕಿ.ಮೀ. ನಡೆದು ಬಂದು, ಹಗಲಿಡೀ ಗಾರೆ ಮಾಡಿ, ಸಂಜೆ ತನ್ನ ಮನೆಗೆ ವಾಪಸಾಗುತ್ತಿದ್ದ. ನಮ್ಮ ಮನೆ ರಿಪೇರಿಗಾಗಿ ಆತ ಮಾಡಿದ ಗಾರೆಯ, ಐದು ದಶಕಗಳ ನಂತರ, ಈಗಲೂ ಕೆಲವು ಜಾಗಗಳಲ್ಲಿ ಚೆನ್ನಾಗಿಯೇ
ಉಳಿದುಕೊಂಡಿದೆ! ನಮ್ಮ ಆ ಮನೆ ಹಳೆಯದಾದರೂ, ಸಂಕನ ಕೈಯಿಂದ ಮಾಡಿಸಿಕೊಂಡ ಗಾರೆ ಇನ್ನೂ ಅಲ್ಲಲ್ಲಿ ಗಟ್ಟಿಯಾಗಿ ಗಚ್ಚಿಕೊಂಡಿರುವುದು ವಿಶೇಷ. ಆತ ಮಾತನಾಡುವುದೂ ಬಹಳ ನಿಧಾನಗತಿಯಲ್ಲಿ.

ಮಾತಿನುದ್ದಕ್ಕೂ ಮೆಲುನಗು. ಹಲವು ಹಲ್ಲುಗಳು ಉದುರಿಹೋಗಿದ್ದ ಆತನ ಬೊಚ್ಚು ಬಾಯಿಯ ನಗು, ಮೆಲುದನಿಯ
ಮಾತುಗಳ ಚಂದವು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಈ ‘ಸಂಕ’ನ ಹೆಸರಿನಷ್ಟೇ ವಿಶಿಷ್ಟವಾದ, ಈ ಬರಹದ ಮೊದಲ ಸಾಲಿನಲ್ಲೇ ಕಾಣಿಸಿಕೊಂಡ ‘ಕೊಂಬ’ನ ಕೆಲಸ ಇನ್ನೂ ವಿಶಿಷ್ಟ. ನಮಗೆ ಮೂರನೆಯ ತರಗತಿಯಲ್ಲಿ ಒಂದು ಪಾಠವಿತ್ತು.
‘ತಿಗರಿಯ ತಿರುಗೇ ಗರಾ ಗರಾ, ಮಡಕೆಯ ಮಾಡಿ ಬರಾ ಬರಾ’ (ಕೆಲವು ಶಬ್ದಗಳು ಸರಿಯಾಗಿ ನೆನಪಿಲ್ಲ). ಇದು ಮಣ್ಣಿನಿಂದ ಮಡಕೆ ಮಾಡುವ ಕಲೆಯ ಕುರಿತ ಪದ್ಯ. ಆ ಪಠ್ಯದಲ್ಲಿ ವ್ಯಕ್ತಿಯೊಬ್ಬ ಒಂದು ಮರದ ಚಕ್ರವನ್ನು ತಿರುಗಿಸಿ, ಅದರ ಮೇಲೆ
ಮಣ್ಣಿನ ಮಡಕೆ ತಯಾರಿಸುವ ಚಿತ್ರವಿತ್ತು.

ನಮ್ಮ ಮನೆಯ ನೇರ ಹಿಂದೆ ಮನೆ ಕಟ್ಟಿಕೊಂಡಿದ್ದ ಕೊಂಬನದ್ದೂ ಅದೇ ಕೆಲಸ. ಮರದ ದೊಡ್ಡಚಕ್ರವನ್ನು ತಿರುಗಿಸಿ, ಅದರ ಮೇಲೆ ಆವೆ ಮಣ್ಣಿನ ಉಂಡೆಯನ್ನಿಟ್ಟು, ಕಲಾತ್ಮಕ ರೂಪ ನೀಡಿ ವಿವಿಧ ಗಾತ್ರದ ಮಡಕೆಗಳನ್ನು ತಯಾರಿಸುವುದರಲ್ಲಿ
ಕೊಂಬ ನಿಷ್ಣಾತ. ನಮ್ಮ ಮನೆಯ ಪಶ್ಚಿಮ ದಿಕ್ಕಿನಲ್ಲಿದ್ದ ಕಿಟಕಿಯಿಂದ, ಅವನು ಮಡಕೆ ಮಾಡುವುದನ್ನು ನೋಡಬಹುದಿತ್ತು, ಅದೂ ಒಂದೆರಡು ದಿನವಲ್ಲ, ವರ್ಷಗಟ್ಟಲೆ. ಬಿಸಿಲು ಇರುವ ಸಮಯದಲ್ಲಿ ಪ್ರತಿದಿನ ಅವನು ನಾನಾ ವಿನ್ಯಾಸದ ಮಡಕೆ ಗಳನ್ನು ತಯಾರಿಸಿ, ಮನೆಯ ಮುಂದಿನ ಅಂಗಳದಲ್ಲಿ ಸಾಲಾಗಿ ಒಣಗಿಸಿಡುತ್ತಿದ್ದುದನ್ನು ಕಾಣಬಹುದಿತ್ತು.

ಅವನ ಮಕ್ಕಳು ಆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ನಾಲ್ಕಾರು ಕಿ.ಮೀ. ದೂರದಲ್ಲಿದ್ದ ವಂಡಾರಿನ ಹತ್ತಿರದ ಕೆಲವು ಗದ್ದೆಗಳಲ್ಲಿ ಮಾತ್ರ ಮಡಕೆ ಮಾಡಲು ಅನುಕೂಲವಾದ ಆವೆ ಮಣ್ಣು ಸಿಗುತ್ತಿತ್ತು. ೨-೩ ವಾರಗಳಿಗೊಮ್ಮೆ ಕೊಂಬ ಮತ್ತು
ಅವನ ಮಕ್ಕಳು ಬೆಳಗ್ಗೆ ಬೇಗನೆ ಹೋಗಿ, ಆವೆ ಮಣ್ಣನ್ನು ಗದ್ದೆಯಿಂದ ಅಗೆದು ಸಂಗ್ರಹಿಸಿ, ಬೆತ್ತದ ಬುಟ್ಟಿಯಲ್ಲಿಟ್ಟು ತಲೆಯ ಮೇಲೆ ಹೊತ್ತು, ಬಿಸಿಲೇರುವ ಮುನ್ನವೇ ವಾಪಸ್ ಬರುತ್ತಿದ್ದರು. ಆ ಮಣ್ಣನ್ನು ಕೊಳೆ ಹಾಕಿ, ನೆನೆಸಿ, ಚೆನ್ನಾಗಿ ಹದ ಮಾಡಿದ ನಂತರ, ಉಂಡೆ ಮಾಡಿ ಮಡಕೆ ಮಾಡುವ ಕೆಲಸ. ಮರದ ಚಕ್ರ ತಿರುಗಿಸಿ, ಆವೆಮಣ್ಣಿನಿಂದ ಮಡಕೆಗಳನ್ನು ಮಾಡಿ, ಅಂಗಳದಲ್ಲಿಟ್ಟು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಹದಿನೈದು ದಿನಗಳಿಗೊಮ್ಮೆ ಅವುಗಳನ್ನು ಹದವಾಗಿ ಬೆಂಕಿಯಲ್ಲಿ ಸುಡುತ್ತಿದ್ದ.
ಮಡಕೆ ಸುಡಲೆಂದೇ, ಮನೆಯಿಂದ ಸ್ವಲ್ಪ ದೂರ ದಲ್ಲಿ, ಪ್ರತ್ಯೇಕವಾಗಿ ಒಂದು ಗುಡಿಸಲು ಇತ್ತು.

ಹಾಡಿ ಗುಡ್ಡಗಳಿಂದ ಸೌದೆ, ಅಡರು ತಂದು, ಕಲಾತ್ಮಕವಾಗಿ ಜೋಡಿಸಿ, ಆ ಹಸಿ ಮಡಕೆಯನ್ನು ಸುಡುವುದೂ ಒಂದು ಕಲೆ. ಸ್ವಲ್ಪ ಏರು ಪೇರಾದರೆ, ಸುಟ್ಟದ್ದು ಹೆಚ್ಚು ಕಡಿಮೆಯಾದರೆ, ಆ ಒಂದು ಲಾಟ್ ಮಡಕೆಯ ಗುಣಮಟ್ಟ ಕುಸಿದುಹೋಗಬಹುದು!
ಜತೆಗೆ, ಬಬ್ಬರಿಯನಿಗೆ ಕೋಪ ಬಾರದಂತೆ ನೋಡಿಕೊಳ್ಳಬೇಕು! ಇಲ್ಲವಾದರೆ, ಅವನು (ದೈವ) ರಾತ್ರಿ ಹೊತ್ತು ಅದಾವ ಮಾಯಕದಲ್ಲೋ ಬಂದು, ತನ್ನ ದೈತ್ಯ ಕಾಲನ್ನು ಆ ಗುಡಿಸಲಿನಲ್ಲಿ ತೂರಿ, ಮಡಕೆಗಳನ್ನು ಒಡೆದುಹಾಕುತ್ತಾನಂತೆ!

ಆದ್ದರಿಂದ ಬೊಬ್ಬರಿಯನಿಗೆ ಆಗಾಗ ತೆಂಗಿನ ಕಾಯಿ ಒಡೆಸಬೇಕು. ಈ ರೀತಿ ಕೊಂಬನಿಂದ ಮತ್ತು ಹಲವರಿಂದ ಪೂಜಿಸಿ ಕೊಳ್ಳುತ್ತಿರುವ ಬೊಬ್ಬರಿಯ ದೈವದ ಗುಡಿಯು ನಮ್ಮೂರಿನ ಮಹಾಲಿಂಗೇಶ್ವರ ದೇವಾಲಯದ ಹೊರಸುತ್ತಿನಲ್ಲಿದೆ.
ಇಷ್ಟೆಲ್ಲಾ ಜಾಗ್ರತೆ ವಹಿಸಿದರೂ, ಕೊಂಬ ತಯಾರಿಸಿದ ಮಡಕೆಗಳು ಒಮ್ಮೊಮ್ಮೆ ಕೈಗೆ ಸಿಗದೇ ಇರುವ ಸಾಧ್ಯತೆ ಇದೆ. ಒಣಗಿಸಿದ ಮಡಕೆಗಳನ್ನು ಜೋಡಿಸಿ, ಜಾಗರೂಕತೆಯಿಂದ ಸೌದೆ ತುಂಬಿ, ಮೇಲೆಲ್ಲಾ ಮಣ್ಣು ಮೆತ್ತಿ, ಬೆಂಕಿ ಹಚ್ಚಿ, ಅದನ್ನು ನೋಡುತ್ತಾ ರಾತ್ರಿ ಇಡೀ ಎಚ್ಚರಿಕೆಯಿಂದ ಇರಬೇಕು.

ಹೀಗೇ ಒಂದು ರಾತ್ರಿ ಮಡಕೆ ಸುಡುತ್ತಿದ್ದಾಗ, ಆಕಸ್ಮಿಕವಾಗಿ, ಇಡೀ ಗುಡಿಸಲಿಗೇ ಬೆಂಕಿ ಬಿತ್ತು. ಸದ್ಯ, ಹತ್ತಿರದಲ್ಲೇ ಇದ್ದ ಅವನ ಮನೆಗೆ ಬೆಂಕಿ ಹಬ್ಬಲಿಲ್ಲ, ಅದೇ ಸಮಾಧಾನ. ಆಗ ಅವನ ಮನೆಯೂ ಸಹ ಹುಲ್ಲಿನ ಛಾವಣಿಯದ್ದು! ಆ ನಡುರಾತ್ರಿಯಲ್ಲಿ ಸುತ್ತಮುತ್ತ ಲಿನ ಜನರು ಒಟ್ಟಾಗಿ, ಬಗ್ಗು ಬಾವಿಯಿಂದ ನೀರು ಸೇದಿ, ಸುರಿದು ಬೆಂಕಿ ಆರಿಸಿದರು. ಆ ಒಂದು ಲಾಟ್ ಮಡಕೆಗಳು ಪುಡಿಪುಡಿಯಾದವು.

ಪ್ರತಿ ಭಾನುವಾರ ಕೊಂಬ ಮತ್ತು ಅವನ ಮಕ್ಕಳು ಒಂದು ದೊಡ್ಡ ಕಣ್ಣು ಹೆಡಿಗೆಯ ತುಂಬಾ ಮಡಕೆಗಳನ್ನು ತುಂಬಿ, ನಾಜೂಕಾಗಿ ಹಗ್ಗದಿಂದ ಕಟ್ಟಿ, ತಲೆಯ ಮೇಲೆ ಹೊತ್ತು, ಚೇರ್ಕಿ ಬೈಲಿನು ದ್ದಕ್ಕೂ ನಡೆದು, ತುದಿಯಲ್ಲಿದ್ದ 120 ಮೆಟ್ಟಿಲು ಗಳನ್ನು ಹತ್ತಿ ಹೈಕಾಡಿಯಾಗಿ ಗೋಳಿ ಅಂಗಡಿ ಸಂತೆಗೆ ತೆಗೆದುಕೊಂಡು ಹೋಗುತ್ತಿದ್ದರು. ಗೋಳಿ ಅಂಗಡಿ ಸಂತೆ ಅಂದು ಪ್ರಸಿದ್ಧ. ಅದು ನಡೆಯುತ್ತಿದ್ದುದು ಪ್ರತಿ ಭಾನುವಾರ. ಸುತ್ತಲಿನ ಹತ್ತೆಂಟು ಹಳ್ಳಿಯ ಜನ ಆ ಸಂತೆಗೆ ಬಂದು, ಬೇಕು ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದರು.

ಸಂಜೆಯ ಹೊತ್ತಿಗೆ ಕೊಂಬನ ಕೈಯಲ್ಲಿ ನಾಲ್ಕು ಕಾಸು ಸೇರುತ್ತಿತ್ತು. ಅದರಲ್ಲಿ ಒಂದು ಭಾಗವನ್ನು ಶೇಂದಿಗೆ ಖರ್ಚು ಮಾಡಿ,
ಕತ್ತಲಾಗುವ ಹೊತ್ತಿಗೆ ವಾಪಸಾಗುತ್ತಿದ್ದ ಕೊಂಬನ ಗತ್ತನ್ನು ನೋಡಿಯೇ ನಂಬಬೇಕು. ನಮ್ಮೂರಿನಲ್ಲಿ ಕೊಂಬ, ಸಂಕ, ಹೂವ – ಈ ರೀತಿಯ ವಿಶಿಷ್ಟ ಹೆಸರುಗಳನ್ನು ಪಟ್ಟಿ ಮಾಡತೊಡಗಿ ದರೆ, ಆ ಪಟ್ಟಯಲ್ಲಿ ಅಗತ್ಯವಾಗಿ ಸೇರಲೇಬೇಕಾದ ಇನ್ನೂ ಕೆಲವು ಹೆಸರುಗಳಿವೆ. ಕುಯಿರ ನಾಯಕ, ಗಿಡ್ಡ ನಾಯಕ, ಕುಪ್ಪ ಮೊದಲಾದವೇ ಆ ಹೆಸರುಗಳು. ಈಗ ಯೋಚಿಸಿದಾಗ ಅನಿಸುತ್ತದೆ,
ಕುಗ್ರಾಮವಾಗಿದ್ದ ನಮ್ಮ ಹಳ್ಳಿ, ರಸ್ತೆ ಸಂಪರ್ಕವಿಲ್ಲದ ವಾಸಸ್ಥಳಗಳು, ಹಾಡಿ ಗುಡ್ಡಗಳ ನಡುವಿದ್ದ ಮನೆಗಳು, ಬಹುಪಾಲು ಜನರ ವಿದ್ಯಾಭ್ಯಾಸಕ್ಕೆ ಅವಕಾಶವೇ ಇಲ್ಲದ ಅಂದಿನ ವಾತಾವರಣ – ಇವೆಲ್ಲವೂ ಸೇರಿ, ಇಂತಹ ಅಪರೂಪದ ಹೆಸರುಗಳು
ಬಳಕೆಯಲ್ಲಿರಲು ಕಾರಣವಾಗಿರಬೇಕು. ಈ ಮೇಲೆ ಹೇಳಿದವರ ಕುಟುಂಬದ ಇಂದಿನ ತಲೆಮಾರಿಗೆ ಅಕ್ಷರಾಭ್ಯಾಸ ದೊರೆತಿದೆ, ಅವರೆಲ್ಲರೂ ಸಾಕಷ್ಟು ಪರಿಚಿತ ಹೆಸರುಗಳನ್ನೇ ಇಟ್ಟುಕೊಂಡಿದ್ದಾರೆ.

ಮೇಲಿನ ಪಟ್ಟಿಯಲ್ಲಿ ಕಾಣಿಸಿಕೊಂಡ ಕುಯಿರ ನಾಯಕನ ಕಥೆ, ಬೇರೊಂದೇ ರೀತಿಯಲ್ಲಿ ವಿಶಿಷ್ಟ. ಬಡತನದಿಂದಾಗಿ, ಆತ ಬೇರೆ ಬೇರೆ ಕಡೆ ಕೃಷಿ ಕಾರ್ಮಿಕನಾಗಿ ದುಡಿಯುವ ಅನಿವಾರ್ಯತೆ. ಅಕ್ಷರಾಭ್ಯಾಸವಿಲ್ಲ. ಮನೆಯಲ್ಲೂ ಅನುಕೂಲ ಕಡಿಮೆ. ಅದರಿಂದಾಗಿಯೇ ಇರಬಹುದು, ಅವನ ದೈಹಿಕ ಬೆಳವಣಿಗೆ ಸರಾಸರಿಗಿಂತ ಕಡಿಮೆ. ಆತ ಎತ್ತರವೇನೋ ಇದ್ದ, ಆದರೆ ಸಪೂರಕ್ಕೆ ಬೆಳೆದಿದ್ದ. ಗದ್ದೆ ಬಯಲಿನಲ್ಲಿ ನಡೆಯುತ್ತಾ ಬಂದರೆ, ಗಾಳಿಗೆ ತೇಲುವ ಅಡಕೆ ಮರದ ರೀತಿ ಕಾಣುತ್ತಿದ್ದ.
ಆದ್ದರಿಂದ, ಅವನಿಂದ ಕಠಿಣ ಎನಿಸುವ ಯಾವುದೇ ಕೆಲಸ ಮಾಡಲು ಸಾಧ್ಯವಿರಲಿಲ್ಲ. ಆದರೆ, ಕೆಲಸ ಮಾಡದಿದ್ದರೆ ಜೀವನ ಸಾಗುವುದು ಕಷ್ಟ.

ಅದಕ್ಕೆಂದೇ, ಆತ ಯಾರದ್ದಾದರೂ ಮನೆಯಲಲ್ಲಿ ಖಾಯಂ ಕೆಲಸಗಾರನಾಗಿ ಕೆಲಸ ಸ್ವೀಕರಿಸುತ್ತಿದ್ದ. ಖಾಯಂ ಕೆಲಸಗಾರ ನೆಂದರೆ, ಕೆಲಸ ಕೊಟ್ಟವರ ಮನೆಯಲ್ಲೇ, ಒಂದು ಭಾಗದಲ್ಲಿ ಇರಬೇಕಿತ್ತು. ಮನೆಯ ಮುಂದಿನ ವೆರಾಂಡದಂತಹ ಜಾಗದಲ್ಲೇ ರಾತ್ರಿ ಕಳೆಯುವ ಅನಿವಾರ್ಯತೆ. ಸ್ನಾನಕ್ಕೆ ಬಾವಿ ನೀರು, ಬೆಳಗಿನ ಕೆಲಸಗಳಿಗೆ ದೂರದಲ್ಲಿ ಹರಿಯುವ ತೋಡು. ನಮ್ಮೂರಿ ನಲ್ಲಿ ಆಗ ತಿಂಗಳ ಸಂಬಳ ಎಂದರೆ ಅತಿ ಕಡಿಮೆ ಮಟ್ಟದ್ದು. ನನಗೆ ಗೊತ್ತಿದ್ದಂತೆ, ಆತ ತಿಂಗಳಿಗೆ ಕೇವಲ ರು.೫೦ ಕ್ಕೆ ಒಬ್ಬರು ಕೃಷಿಕರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಪ್ರತಿದಿನ ಎರಡು ಊಟ, ಒಂದು ತಿಂಡಿ, ಎರಡು ಚಾ, ತಿಂಗಳ ಕೊನೆಯಲ್ಲಿ ರು.೫೦ ನಗದು. ಮಳೆಗಾಲವಾದಸಮಯದಲ್ಲಿ ಒಂದು ಕಂಬಳಿಯನ್ನು ಕೊಡಿಸುತ್ತಿದ್ದರು.

ಅದು ಹೊದೆಯಲೂ ಆಗುತ್ತಿತ್ತು, ಸದಾ ಸುರಿಯುವ ಮಳೆಯಲ್ಲಿ ಕೆಲಸ ಮಾಡಲು ರಕ್ಷಣೆಗೂ ಆಗುತ್ತಿತ್ತು. ದನ ಕಾಯುವುದು, ಸೊಪ್ಪು ತರುವುದು, ದನಗಳಿಗೆ ಹುಲ್ಲು ತರುವುದರಿಂದ ಆರಂಭಿಸಿ, ಸಣ್ಣ ಪುಟ್ಟ ಅಥವಾ ತುಸು ಶ್ರಮದ ಎಲ್ಲಾ ಕೆಲಸಗಳನ್ನು ಆತ ಮಾಡುತ್ತಾ ಇರಬೇಕುತ್ತು. ಆದರೆ ಕಠಿನ ಕೆಲಸಗಳಾದ ಹೊದ್ದು ಕಡಿಯುವುದು, ಮಣ್ಣು ಹೊರುವುದು, ಮರಕಡಿದು ಚಕ್ಕೆ
ಮಾಡುವುದು ಮೊದಲಾದ ಕೆಲಸಗಳು ಅವನಿಂದ ಸಾಧ್ಯವಾಗದೇ ಇರುವುದರಿಂದಾಗಿ, ಅಂತಹ ಕೆಲಸಗಳನ್ನು ಅವನಿಗೆ ಹೇಳುತ್ತಲೇ ಇರಲಿಲ್ಲ.

ಕುಯಿರ ನಾಯಕನದು ಮಾತು ಕಡಿಮೆ; ಹಾಡಿ ಗುಡ್ಡೆಗಳಿಗೋ, ಸೊಪ್ಪಿನ ಅಣೆಯ ತಪ್ಪಲಿಗೋ ಹಸು ಕರುಗಳನ್ನು ಎಬ್ಬಿಕೊಂಡು ಹೋಗಿ, ‘ದನ ಕಾಯುವುದು’ ಅವನಿಗೆ ಇಷ್ಟದ ಕೆಲಸ. ಆ ಕೃಷಿಕರ ಮನೆಯಲ್ಲಿ ಆರು ತಿಂಗಳು ಕೆಲಸ ಮಾಡಿದ ನಂತರ, ಒಂದಷ್ಟು ದಿನ ತನ್ನ ಸ್ವಂತ ಮನೆಯಲ್ಲಿದ್ದು, ಪುನಃ ಬೇರೊಬ್ಬ ಕೃಷಿಕರ ಮನೆಯಲ್ಲಿ ಅದೇ ರೀತಿ ತಿಂಗಳ ಸಂಬಳದ ಕೆಲಸಕ್ಕೆ ಸೇರಿಕೊಂಡ. ಈ ಎರಡೂ ಮನೆಗಳಿಂದ, ಅವನ ಮನೆಗೆ ಅಬ್ಬಬ್ಬಾ ಎಂದರೆ ಸುಮಾರು ೩ ಕಿ.ಮೀ. ದೂರ. ಆದರೆ, ಪ್ರತಿದಿನ ರಾತ್ರಿ ಆತ ತನ್ನ ಮನೆಗೆ ಹೋಗುತ್ತಿರಲಿಲ್ಲ, ಹೋಗು ವಂತೆಯೂ ಇರಲಿಲ್ಲ; ಕೆಲಸಕ್ಕಿದ್ದವರ ಮನೆಯಲ್ಲೇ
ತಂಗಿ, ಬೆಳಗ್ಗೆ ಬೇಗನೆದ್ದು ಕೆಲಸ ಆರಂಭಿಸುವುದು ಕಡ್ಡಾಯ. ಅಂತಹ ಕೆಲಸಕ್ಕೆ ಸೇರಬೇಕಿದ್ದ ಅವನ ಅನಿವಾರ್ಯತೆಯನ್ನು ಈಗ ನೆನಪಿಸಿಕೊಂಡರೆ ಕನಿಕರ ಹುಟ್ಟುತ್ತದೆ.

ನಮ್ಮ ಹಳ್ಳಿಯಲ್ಲಿ ಆಗಿನ ದಿನಗಳಲ್ಲಿ ವಿಶಿಷ್ಟ ಹೆಸರುಗಳನ್ನು ಹೊಂದಿದ, ಇನ್ನೂ ವಿಶಿಷ್ಟ ಕೆಲಸಗಳನ್ನು ಮಾಡುತ್ತಿದ್ದವರ ಇನ್ನಷ್ಟು ವಿವರಗಳು ಮುಂದೊಮ್ಮೆ.