ಅಭಿಪ್ರಾಯ
ಪ್ರೊ.ಜಿ.ವಿ.ಜೋಶಿ
profgvjoshi@gmail.com
ಕೌಶಲ ರಹಿತ ಅಸಂಘಟಿತ ವಲಯದ ಕಾರ್ಮಿಕರಿಗೂ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಪ್ರವಾಸೋದ್ಯಮ ನೆರವಾಗಬಲ್ಲದು. ಜತೆಗೆ ರಾಜ್ಯ ಸರಕಾರ ಗಳಿಗೂ ಪ್ರವಾಸೋದ್ಯಮ ಆದಾಯ ತರಬಲ್ಲದು. ಕೆಲವು ಕಿರು, ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಉದ್ಯೋಗ ಸೃಷ್ಟಿ ಮಾಡಿ ಬಡತನ ನಿವಾರಣೆಗೆ ದಾರಿ ಮಾಡಬಲ್ಲವು.
ಇಡೀ ವಿಶ್ವಕ್ಕೇ ದಿಗ್ಭ್ರಮೆ ಹುಟ್ಟಿಸಿದ ಕರೋನಾ ಹಾವಳಿ ಈಗ ದುರ್ಬಲ ವರ್ಗಗಳ ಉಳಿವಿಗಾಗಿ, ಏಳಿಗೆಗಾಗಿ ಒಳಗೊಳ್ಳುವಿಕೆಯ ಅಭಿವೃದ್ಧಿಯ ಅಗತ್ಯವನ್ನು ತೋರಿಸುತ್ತಿರುವುದಂತೂ ಸ್ಪಷ್ಟವಾಗಿದೆ. ಇಂಥ ಕಾರಣಗಳಿಂದಾಗಿಯೇ ಮುಂದಿನ ದಿನಗಳಲ್ಲಿ ಅಭಿವೃದ್ದಿ ಅರ್ಥಶಾಸಕ್ಕೆ ಹೊಸ ತಿರುವು ಬರಬಹುದು. ಮಾರು ಕಟ್ಟೆ ಆಧಾರಿತ ಆರ್ಥಿಕ ಸುಧಾರಣೆಗಳಿಂದಲೇ ಪ್ರಗತಿ ಸಾಧ್ಯ ಎನ್ನುವ ವಾದ ಸ್ವಲ್ಪ ಬದಿಗೆ ಸರಿಸಿ, ಸರಕಾರದ ಪಾತ್ರದ ಕುರಿತು ಮರುಚಿಂತನೆ ಪ್ರಾರಂಭ ವಾಗುವ ಸಾಧ್ಯತೆ ಸದ್ಯದ ಮಟ್ಟಿಗೆ ಜೋರಾಗಿ ಗೋಚರಿಸುತ್ತಿದೆ.
ನಮ್ಮ ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಯಲ್ಲಿ ತಲ್ಲಣಗಳ ಸಾಲನ್ನೇ ಸೃಷ್ಟಿಸಿದ ಕರೋನಾ ಈವರೆಗಿನ ಅಲ್ಪ ಸ್ವಲ್ಪ ಅಭಿವೃದ್ಧಿ ಪ್ರಕ್ರಿಯೆಯ ಬೇರು ಗಳನ್ನು ಅಡಿಸಿ ಬಿಟ್ಟಿದೆ. ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆಯೆಂದರೆ ದೊಡ್ಡ ಸಂಖ್ಯೆಯಲ್ಲಿರುವ ಬಡವರ ಹಿತದೃಷ್ಟಿಯಿಂದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸ ದಿದ್ದರೆ ಇಡೀ ಆರ್ಥಿಕ ವ್ಯವಸ್ಥೆಗೇ ಕಂಟಕ ಬರಬಹುದೆಂಬ ಭೀತಿ ಯುಂಟು ಮಾಡಿದೆ. ಇಲ್ಲಿಯ ತನಕ ಸಾಧಿಸಲು ಸಾಧ್ಯವಾಗದ ಗುರಿಯನ್ನು ಶೀಘ್ರದ ಸಾಧಿಸುವ ಉದ್ದೇಶದಿಂದ 16ನೇ ಹಣಕಾಸಿನ ಆಯೋಗ 2022ರ ಹೊತ್ತಿಗೆ ಜನಸಾಮಾನ್ಯರಿಗೆ ಬೇಕಾದ ಸೇವೆ- ಸೌಲಭ್ಯಗಳನ್ನು ಒದಗಿಸಲು ಒಟ್ಟು ಸಾರ್ವಜನಿಕ ವೆಚ್ಚದ ಶೇ.8ರಷ್ಟು ಭಾಗವನ್ನು ಆರೋಗ್ಯ ವ್ಯವಸ್ಥೆಯ ಸುಧಾರಣೆಗೆ ಮೀಸಲಿಡಬೇಕೆಂದು ಶಿಫಾರಸು ಮಾಡಿರುವುದು ಕೂಡ ಅಭಿವೃದ್ಧಿಯ ಅಗತ್ಯವನ್ನು ಇನ್ನಷ್ಟು ಮುನ್ನೆಲೆಗೆ ತಂದಿದೆ. ಕರೋನಾ ದಾಳಿ ಪ್ರಾರಂಭವಾಗುವ ಮುನ್ನ ಆದ ಆರ್ಥಿಕಾಭಿವೃದ್ಧಿಯ ಲಾಭಗಳಿಂದ ವಂಚಿತರಾಗಿರುವ ಸಾಮಾಜಿಕ ಗುಂಪುಗಳಿಗೆ ಈ ಲಾಭಗಳನ್ನು ಇನ್ನು ಮುಂದಾದರೂ ತಲುಪಿಸುವುದೇ ವಾಸ್ತವತೆಯುಳ್ಳ ಒಳಗೊಳ್ಳುವಿಕೆಯ ಅಭಿವೃದ್ಧಿ.
ಒಳಗೊಳ್ಳುವಿಕೆಯ ಅಭಿವೃದ್ಧಿಗೆ ಬೇಕೇ ಬೇಕಾದ ಆರೋಗ್ಯಕ್ಕೆ ಸಂಬಂಧಪಟ್ಟ ಹೆಚ್ಚಿನ ವಿಷಯಗಳು ಸಂವಿಧಾನದ ರಾಜ್ಯ ಯಾದಿಯಲ್ಲಿವೆ. ಕೊರೊನಾ ಹುಟ್ಟು ಹಾಕಿದ ಸಮಸ್ಯೆಗಳನ್ನು, ಸವಾಲುಗಳನ್ನೂ ಗಮನಿಸಿ ಒಳಗೊಳ್ಳುವಿಕೆಯ ಅಭಿವೃದ್ಧಿಗೆ ಬೇಕಾದ ಸಾಂಸ್ಥಿಕ ವ್ಯವಸ್ಥೆ ಉದಯಿಸಿ ಬರಬೇಕಾದರೆ ಸಂವಿಧಾನ ದಲ್ಲಿ ತಿದ್ದುಪಡಿ ಮಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮತ್ತು ಸ್ಥಾನಿಕ ಸ್ವರಾಜ್ಯ ಸಂಸ್ಥೆ ಗಳ ಪಾತ್ರವನ್ನು ಇನ್ನೂ ಹೆಚ್ಚು ಸ್ಪಷ್ಟವಾಗಿ ಗುರುತಿಸಬೇಕು.
ಅಧಿಕ ಪ್ರಮಾಣದಲ್ಲಿ, ಸ್ಪಷ್ಟವಾಗಿ ಹೊಣೆಗಾರಿಕೆಯನ್ನು ವಿತರಣೆ ಮಾಡಲು ಕಾಲ ಕೂಡಿ ಬಂದಿದೆಯೆಂದೇ ಲೆಕ್ಕ. ಒಂದು ನಿಶ್ಚಿತ ಚೌಕಟ್ಟಿನಲ್ಲಿ ಕಾನೂನಿನ ರೂಪ ದಲ್ಲಿ ಸ್ಪಷ್ಟವಾದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮತ್ತು ಪಂಚಾಯತಿ ವ್ಯವಸ್ಥೆಯ ಹೊಣೆಗಾರಿಕೆಗಳ ವಿತರಣೆಯಾಗಿದ್ದರಿಂದಲೇ ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆಯನ್ನು ಕರೋನಾ ಹಾವಳಿಯ ಕಾಲದಲ್ಲಿ ಆಪದ್ಬಂಧು ಎಂದು ಪರಿಗಣಿಸಬೇಕಾಯಿತು.
ಮುಂದಾಲೋಚನೆಗೆ ಹೆಸರಾಗಿದ್ದ ಅರುಣ್ ಜೇಟ್ಲಿ ಕೇಂದ್ರ ವಿತ್ತ ಸಚಿವರಾಗಿ ಈ ಯೋಜನೆಗೆ ತಮ್ಮ ಬಜೆಟ್‌ಗಳಲ್ಲಿ ಒತ್ತು ನೀಡಿ, ಕೃಷಿ ರಂಗಕ್ಕೆ ಇದು ನೇರವಾಗಿ
ನೆರವಾಗಬೇಕೆಂದು ಸಂಸತ್ತಿನಲ್ಲಿ ಸಾರಿದ್ದರು. ಈಗ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಈ ಯೋಜನೆಯ ಮಹತ್ವವನ್ನು ತಮ್ಮ ಮುಂಗಡ ಪತ್ರಗಳಲ್ಲಿ ಕುಗ್ಗಿಸಿ ತಪ್ಪು ಮಾಡಿದ್ದಾರೆ. ಗ್ರಾಮ ಭಾರತದಲ್ಲಿ ಉದ್ಯೋಗ ಸೃಷ್ಟಿಯ ಮೂಲಕ ಬಡತನ ನಿವಾರಣೆ ಮಾಡುವ ಧ್ಯೇಯ ಹೊಂದಿದ ಉದ್ಯೋಗ ಭರವಸೆ ಯೋಜನೆ ನಿಜವಾದ ಅರ್ಥದಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿಯ ಗುರಿ ಹೊಂದಿದ ರಾಷ್ಟ್ರವ್ಯಾಪಿ ಕಾರ್ಯಕ್ರಮ.
ನಗರ ಪ್ರದೇಶದಲ್ಲಿ ಉದ್ಯೋಗ ಕಳೆದುಕೊಂಡು ಹತಾಶರಾಗಿರುವ ನಿರುದ್ಯೋಗಿಗಳಿಗೆ ಈಗ ನೆರವಾಗಲು ಉದ್ಯೊಗ ಭರವಸೆ ಯೋಜನೆ ಬೇಕಾಗಿದೆಯೆಂದು
ಆರ್ಥಿಕ ತಜ್ಞ ಜೀನ್ ಡ್ರೆಝ್ ಪ್ರತಿಪಾದಿಸಿ ಮೇಲ್ಪಂಕ್ತಿ ಹಾಕಿದ್ದು, ಅವರ ಸಾಮಾಜಿಕ ಕಳಕಳಿಗೆ ಒಂದು ದೊಡ್ಡ ಪುರಾವೆ. ಇದರ ಅಗತ್ಯವನ್ನು ಮನಗಂಡ ಕೇರಳ ಸರಕಾರ 2010-11ರ ಗ್ರಾಮೀಣ ಉದ್ಯೋಗ ಖಾತ್ರಿಯನ್ನು ಹೋಲುವ ನಗರ ಪ್ರದೇಶಕ್ಕೆ ಬೇಕಾದ ಯೋಜನೆ ರೂಪಿಸಿ, ನಂತರ ಬೇಕಾದ ಮಾರ್ಪಾಡು ಗಳನ್ನು ಮಾಡಿ ಇತರ ರಾಜ್ಯಗಳಿಗೆ ಒಂದು ಮಾದರಿಯಾಗಿದೆ.
2018-19ನೇ ಸಾಲಿನಲ್ಲಿ ಈ ಯೋಜನೆಯನ್ನು ಇನ್ನಷ್ಟು ರೂಪಾಂತರಗೊಳಿಸಿ ನಗರ ಪ್ರದೇಶಕ್ಕೆ ನೆರವಿನ ಹಸ್ತ ನೀಡಿದೆ, ಕೇರಳದ ರಾಜ್ಯ ಬಜೆಟ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ಅನುದಾನ ಮಂಜೂರು ಮಾಡಿರುವುದಂತೂ ಯೋಜನೆಯ ಮಹತ್ವಕ್ಕೆ ದೊಡ್ಡ ಸಾಕ್ಷಿ. ಈಗ ಕರೋನಾದಿಂದ ಬಸವಳಿದು ಹೋದ ಇತರ ರಾಜ್ಯಗಳಿಗೆ ಈ ಹಂತದಲ್ಲಿ ನಗರ ಪ್ರದೇಶದಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿ ಸಾಧಿಸಲು ಕೇರಳದ ಯೋಜನೆ ಗಣನೀಯ ಪ್ರಮಾಣದಲ್ಲಿ
ಮಾರ್ಗದರ್ಶಿಯಾಗಬಲ್ಲುದು.
ಈ ತನಕ ದೇಶದಲ್ಲಿ ಒಳಗೊಳ್ಳುವಿಕೆಯ ಅಭಿವೃದ್ಧಿ ಕುರಿತು ನಡೆಯಬೇಕಾದ ಸಮಗ್ರ ಚಿಂತನೆ ನಡೆದಿಲ್ಲ. ಅದರಲ್ಲೂ ಒಣ ರಾಜಕೀಯದ ಪ್ರತಿಷ್ಠಾಪನೆಗಾಗಿಯೇ
ಹೆಚ್ಚು ಸಮಯ ಹೋಯಿತು. ಆರ್ಥಿಕ ಸುಧಾರಣೆಗಳು ಜಾರಿಯಾದ ಮೇಲೆ ಬೃಹತ್ ರೂಪ ಪಡೆದ ಆರ್ಥಿಕ ಅಸಮಾನತೆಯನ್ನು ತಡೆದು ನಿಲ್ಲಿಸುವ ಉದ್ದೇಶ ದಿಂದ ಒಳಗೊಳ್ಳುವಿಕೆಯುಳ್ಳ ಅಭಿವೃದ್ಧಿಯ ದಾಳ ಉರುಳಿಸುವ ಪ್ರಯತ್ನ ಯುಪಿಎ ಸರಕಾರದಿಂದ ಲಂಘು ಲಗಾಮಿಲ್ಲದೆ ಆಗಿಹೋಯಿತು. ಸಹಜವಾಗಿ ಈ ಪ್ರಯತ್ನಕ್ಕೆ ಲೀಡರ್ ಆಗಿದ್ದಲ್ಲದೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿಯೂ ಆಗಿದ್ದ ಸೋನಿಯಾ ಗಾಂಧಿ 2009ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಾಗ ಸಿದ್ಧ(!) ಭಾಷಣ ಮಾಡುತ್ತ ಹೇಳಿದ್ದು, ಆರ್ಥಿಕ ಬೆಳವಣಿಗೆ ನ್ಯಾಯ-ನೀತಿಯುಳ್ಳzಗಬೇಕಾದರೆ ಅದು ಸುದೀರ್ಘವಾಗಿರಬೇಕು.
ಆರ್ಥಿಕ ಬೆಳವಣಿಗೆ ಸುದೀರ್ಘವಾಗಬೇಕಾದರೆ ಅದು ಎಲ್ಲರನ್ನೂ ಒಳಗೊಳ್ಳಬೇಕು. ಎಲ್ಲರನ್ನೂ ಒಳಗೊಳ್ಳುವುದು ಅಂದರೆ ಅತಿ ಹೆಚ್ಚಿನ ಸಂಖ್ಯೆಯ ಜನರ ಅತಿ ಹೆಚ್ಚಿನ ಕ್ಷೇಮಾಭಿವೃದ್ಧಿ ಎಂದು ಅರ್ಥೈಸಬೇಕಾದ ಅಗತ್ಯವೇ ಇಲ್ಲ. ನಿಜವಾಗಿ ಇದು ಎಲ್ಲರ ಅಭ್ಯುದಯವಾಗಿದೆ. ಈ ಮತಗಳಿಕೆಯ ಉದ್ದೇಶವುಳ್ಳ ನುಡಿಮುತ್ತು ಗಳ ಸತ್ವವನ್ನು ಪ್ರಶ್ನಿಸುವ ಧೈರ್ಯ ಆಗ ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೂ ಇರಲಿಲ್ಲ.
ಇದರ ಸಾಧ್ಯಾಸಾಧ್ಯತೆಯನ್ನು ಪರೀಕ್ಷಿಸುವ ಗೋಜಿಗೆ ಯಾರೂ ಹೋಗಲಿಲ್ಲ. ಇಂಥವರ ಸಾಲಿಗೆ ಚತುರತೆ, ಮುಂದಾಲೋಚನೆ ಮತ್ತು ರಾಜಕೀಯ ಅನುಭವ ಗಳಿಗೆ ಹೆಸರಾಗಿದ್ದ, ಆಗ ಕೇಂದ್ರ ವಿತ್ತ ಸಚಿವರಾಗಿದ್ದ ಪ್ರಣವ್ ಮುಖರ್ಜಿ ಕೂಡ ಸೇರಿ ಹೋದರು! 2009-16ರಂದು ಮಧ್ಯಂತರ ಬಜೆಟ್ ಮಂಡಿಸುವಾಗ ಪ್ರಣವ್, ಮೇಡಮ್ ಹೇಳಿದ ಅಮೃತವಾಣಿಯನ್ನು ಸ್ಮರಿಸಿ ಧನ್ಯತೆ ಮೆರೆದರು!
2021ರ ಅಧಿಕೃತವಾಗಿ ಬೆಳಕುಕಂಡ ರಾಷ್ಟ್ರಪತಿ ಜೀವನದ ಅನುಭವಗಳನ್ನು (2012-17) ಬಹಳ ಸೊಗಸಾಗಿ ಒದುಗರಿಗೆ ಒದಗಿಸುವ ಪುಸ್ತಕದಲ್ಲಿ ಉದಾತ್ತ ವಿಚಾರಗಳು ಯುಪಿಎ ಅವಽಯಲ್ಲಿ ಶುದ್ಧ ಅವಕಾಶವಾದಿತ್ವ ಹೊಂದಿದ ನಾಯಕರ ಕೋಲಾಟದಿಂದ ಹೇಗೆ ನುಚ್ಚು ನೂರಾಗಿ ಹೋದವು ಎನ್ನುವುದನ್ನು ಪ್ರಣವ್ ತಿಳಿಸಿದ ರೀತಿ ರೋಚಕವಾಗಿದೆ. ಅದೇ ಸಾಲಿಗೆ ಒಳಗೊಳ್ಳುವಿಕೆಯ ಅಭಿವೃದ್ಧಿಯ ಪರಿಕಲ್ಪನೆಯೂ ಸೇರಿ ಹೋಗಿತ್ತು! ಮೋದಿ ಸರಕಾರ ಮೀಸಲಾತಿ ಧೋರಣೆ ಯಲ್ಲಿ ರಾಷ್ಟ್ರಮಟ್ಟದಲ್ಲಿ ಬದಲಾವಣೆ ತಂದದ್ದು ಹೌದು, ಸಂವಿಧಾನದಲ್ಲಿ ತಿದ್ದುಪಡಿ ಮಾಡಿದ್ದೂ ಹೌದು. ಆದರೆ ರಾಷ್ಟ್ರಮಟ್ಟದ ಸಮೀಕ್ಷೆಗಳು ತೋರಿಸಿದಂತೆ ಆರ್ಥಿಕ ಅಸಮಾನತೆ ಮತ್ತಷ್ಟು ತೀವ್ರವಾಗಿದೆ.
ನಿಜವಾದ ಒಳಗೊಳ್ಳುವಿಕೆಯ ಅಭಿವೃದ್ಧಿಯ ಶಕೆ ಇನ್ನೂ ಪ್ರಾರಂಭವಾಗಿಲ್ಲ. ಇದಕ್ಕೆ ಯಾವುದೇ ರಾಜಕೀಯದ ಬಣ್ಣ ಬಳೆಯಬೇಕಾಗಿಲ್ಲ. ದೇಶಕ್ಕೆ ಬೇಕಾದ ಒಳಗೊಳ್ಳುವಿಕೆಯ ಅಭಿವೃದ್ಧಿ ಸಾಧಿಸುವ ಪ್ರಯತ್ನ ತುರ್ತಾಗಿ ಆಗಬೇಕಾಗಿದೆ . ಒಳಗೊಳ್ಳುವಿಕೆಯ ಅಭಿವೃದ್ಧಿ ಈ ತನಕ ಹೇಗೊ ಪ್ರಚಾರದಲ್ಲಿರುವ ರೀತಿಯಲ್ಲಿ
ಆಗಬೇಕೆಂದು ಹೇಳುವದರಲ್ಲಿ ಯಾವ ಅರ್ಥವೂ ಇಲ್ಲ. ೨೦೧೧ರ ಜುಲೈರಂದು ಪೆರು ದೇಶದಲ್ಲಿ ಒಳಗೊಳ್ಳುವಿಕೆಯ ಪರಿಕಲ್ಪನೆಯ ಕುರಿತು ದೊಡ್ಡ ಕಾರ್ಯಾ ಗಾರ ನಡೆಯಿತು. ಒಳಗೊಳ್ಳುವ ಬೆಳವಣಿಗೆಯ ಪರಿಕಲ್ಪನೆಗೆ ಪೂರಕವಾದ ಮುಂಗಡ ಪತ್ರ ತಯಾರಿಸುವ ವಿಧಾನವನ್ನು ದಕ್ಷಿಣ ಆಫ್ರಿಕಾದ ಅನುಭವಗಳ ಬೆಳಕಿನಲ್ಲಿ ಬಜೆಟ್ ತಜ್ಞ ವಾರೆನ್ ಕ್ರಾಫ್ಚಿಕ್ ವಿವರಿಸಿದ ರೀತಿ ಪ್ರಶಂಸಾರ್ಹವಾಗಿತ್ತು.
ಆರ್ಥಿಕ ಬೆಳವಣಿಗೆ ಪ್ರಕ್ರಿಯೆಯ ಲಾಭಗಳಿಂದ ವಂಚಿತರಾದವರನ್ನು ಈ ಪ್ರಕ್ರಿಯೆಯ ವ್ಯಾಪ್ತಿಯಲ್ಲಿ ತರುವ ಮುಂಗಡ ಪತ್ರದ ನೀತಿಯ ಅಗತ್ಯವನ್ನು ಕ್ರಾಫ್ಚಿಕ್
ಸಮರ್ಥವಾಗಿ ಮಂಡಿಸಿದ್ದರು. ಈ ನೀತಿ ಭಾರತದಲ್ಲಿ ಈಗ ಅಗತ್ಯವಾಗಿದೆ. ಒಳಗೊಳ್ಳುವ ಬೆಳವಣಿಗೆಯೆಂದರೆ ಸರ್ವರನ್ನೂ ಒಳಗೊಂಡಿರುವ ಪ್ರಕ್ರಿಯೆ ಎಂಬ ಸಂದೇಶ ಕ್ರಾಫ್ಚಿಕ್ ಅವರ ಮಂಡನೆಯಲ್ಲಿ ಎಲ್ಲೂ ಇರಲಿಲ್ಲ. ಇದನ್ನು ನಮ್ಮ ಕೇಂದ್ರ ಮತ್ತು ರಾಜ್ಯಗಳು ಈಗ ಗಮನಿಸಬೇಕು. ಯಾವುದೋ ಒಂದು ಗಟ್ಟಿ ತಳಪಾಯವಿಲ್ಲದ ಆದರ್ಶವಾದಕ್ಕೆ ಜೋತು ಬಿದ್ದು ಇದನ್ನು ಹೇಳಬೇಕಿಲ್ಲ.
ವಾಸ್ತವವಾದಕ್ಕೆ ಅಂಟಿಕೊಂಡೇ ಇದನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರುಗಣಿಸಬೇಕಾದ ತುರ್ತು, ನಮ್ಮ ದೇಶದಲ್ಲಿ ನೆಲೆಯೂರಿ ನಿಂತಿದೆ. ಇದಕ್ಕೆ 2021ರ ಭಾರತದ ಪರಸರದ ಸ್ಥಿತಿಗತಿಯ ವರದಿಯೂ ಪುಷ್ಠಿ ನೀಡುತ್ತದೆ. ಕೆಲವೇ ದಿನಗಳ ಹಿಂದೆ ಆರ್‌ಬಿಐ ಮಾಜಿ ಗವರ್ನರ್ ಡಿ. ಸುಬ್ಬರಾವ್ ಕರೋನಾ ದಾಳಿಯಿಂದ ದೇಶದ ತೀವ್ರ ಅಸಮಾನತೆಯನ್ನು ಗುರುತಿಸುತ್ತ ಅಸಂಘಟಿತ ವಲಯದ ಗಾತ್ರ ಹೆಚ್ಚಾದ ಸತ್ಯವನ್ನು ವಿವರಿಸಿದ್ದರು. ಕರ್ನಾಟಕದ ಹೆಚ್ಚು ಕಡಿಮೆ 11 ವರ್ಗಗಳ ಅಸಂಘಟಿತ ವಲಯದ ಕಾರ್ಮಿಕರು (ಅಗಸರು, ಗೃಹಕಾರ್ಮಿಕರು, ಹೊಲಿಗೆ ಕೆಲಸ ಮಾಡುವವರು, ಅಕ್ಕಸಾಲಿಗರು ಇತ್ಯಾದಿ) ತೊಂದರೆಗೆ ಸಿಲುಕಿದ್ದಾರೆ.
ಸರಕಾರ ನೀಡಿದ ಧನಸಹಾಯ ಕರೋನಾ ಮೊದಲನೇ ಅಲೆಯ ಸಂದರ್ಭದಲ್ಲಿ ತಲುಪಬೇಕಾದವರನ್ನು ತಲುಪಲಿಲ್ಲವೆಂದು ಮುಖ್ಯಮಂತ್ರಿ ಯಡಿಯೂರಪ್ಪ ನವರು ಒಪ್ಪಿಕೊಂಡಿದ್ದರು. ತೊಂದರೆಗೀಡಾದ ಅಸಂಘಟಿತ ವಲಯದ ಕಾರ್ಮಿಕರಿಗೆ ನೆರವಾಗಲು ರಾಜ್ಯಮಟ್ಟದಲ್ಲಿ ವಿಶೇಷ ವ್ಯವಸ್ಥೆ ಮಾಡಬೇಕಾಗಿದೆ. ಸ್ವಲ್ಪವೂ ವಿಳಂಬವಿಲ್ಲದೆ ಪ್ರಥಮ ಸುತ್ತಿನ ಸಾಮಾನ್ಯ ನೆರವು ನೀಡಲು ಜಿಲ್ಲಾ ಮಟ್ಟದ ಪ್ರತ್ಯೇಕ ನಿಧಿ ನಿರ್ಮಾಣ ಮಾಡಬಹುದು.
ಕೌಶಲ ರಹಿತ ಅಸಂಘಟಿತ ವಲಯದ ಕಾರ್ಮಿಕರಿಗೂ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಪ್ರವಾಸೋದ್ಯಮ ನೆರವಾಗಬಲ್ಲದು. ಜತೆಗೆ ರಾಜ್ಯ ಸರಕಾರ ಗಳಿಗೂ ಪ್ರವಾಸೋದ್ಯಮ ಆದಾಯ ತರಬಲ್ಲದು. ಕೆಲವು ಕಿರು, ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳು ಉದ್ಯೋಗ ಸೃಷ್ಟಿ ಮಾಡಿ ಬಡತನ ನಿವಾರಣೆಗೆ ದಾರಿ ಮಾಡಬಲ್ಲವು. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿರುವ ರಾಜ್ಯ ಯೋಜನಾ ಮಂಡಳಿಗಳು ವಿವಿಧ ವಲಯಗಳಲ್ಲಿರುವ ಒಳಗೊಳ್ಳುವಿಕೆಯ ಅಭಿವೃದ್ಧಿಯ ಅವಕಾಶಗಳನ್ನು ಗುರುತಿಸಿ ಮಾರ್ಗದರ್ಶನ ಮಾಡಲು ಇದು ಸೂಕ್ತ ಸಮಯ.