ದಾಸ್ ಕ್ಯಾಪಿಟಲ್
ಟಿ.ದೇವಿದಾಸ್, ಬರಹಗಾರ, ಶಿಕ್ಷಕ
ಕೆಲವರನ್ನು ನೋಡಿ: ಊರ ಮೇಲೆ ಊರು ಬಿದ್ದು ಹೋದರೂ ಅವರಿಗೆ ಯಾವ ಚಿಂತೆಯೂ ಇರುವುದಿಲ್ಲ. ತಮ್ಮದೇ ಆದ ಶಿಸ್ತಿನ ಅತಿರೇಕದ ಆದರ್ಶದ ಬದುಕಿನ ಗುಂಗಿನ ಇರುತ್ತಾರೆ. ಮನೆಯಲ್ಲಿ ಯಾರೇ ಕಾಯಿಲೆ ಬಿದ್ದರೂ ಐದು ಗಂಟೆಗೇ ಏಳಬೇಕು. ಮಳೆಗಾಲ ಆಗಿರಲಿ, ಚಳಿಗಾಲ ಆಗಿರಲಿ, ಉರಿ ಬೇಸಗೆಯೇ ಆಗಿರಲಿ ಮನೆಯ ಮಕ್ಕಳು ಎಲ್ಲರೂ ಎದ್ದು ಜಾಗಿಂಗಿಗೋ ವಾಕಿಂಗಿಗೋ ಹೋಗಲೇಬೇಕು.
ಮೈಯಲ್ಲಿ ಜ್ವರವಿದ್ದರೂ ಅದನ್ನು ತಪ್ಪಿಸುವ ಹಾಗಿಲ್ಲ. ಇನ್ನು ಇಂಥವರ ಹೆಂಡತಿಯ ಕತೆಯಂತೂ ಕೇಳುವುದೇ ಬೇಡ. ಗಂಡ ಏಳುವ ಮುಂಚೆ ಅವನ ದಿನಚರಿಗೆ ಬೇಕಾಗುವುದೆಲ್ಲವನ್ನೂ ನಿತ್ಯವೂ ಅವನು ಕೇಳುವ ಮೊದಲೇ ಸಿದ್ಧವಾಗಿರಬೇಕು. ಟೇಬಲ್ ಮೇಲೆ ಇರಬೇಕಾದ್ದು ಸ್ವಲ್ಪ ಆಚೆ ಈಚೆ ಸ್ಥಳಾಂತರವಾದರೂ ಇಂಥವರು ಸಿಡಿಮಿಡಿ ಗೊಳ್ಳುತ್ತಾರೆ.
ಆರು ಗಂಟೆಯೊಳಗೆ ಸ್ನಾನಾದಿ ಕರ್ಮಗಳು ಮುಗಿಯಬೇಕು. ಏಳು ಗಂಟೆಗೆ ಕಾಫಿಯೋ ಟೀಯೋ ಸಿದ್ಧವಾಗಲೇಬೇಕು. ಏಳು ಗಂಟೆಯೊಳಗೇ ಅಂದಿನ ನ್ಯೂಸ್
ಪೇಪರ್ ಮನೆಯ ಬಾಗಿಲಲ್ಲಿ ಬಿದ್ದಿರಬೇಕು. ಅರ್ಧ ಗಂಟೆಗೆ ಅದನ್ನು ಓದಿ ಮುಗಿಸಬೇಕು. ಎಂಟು ಗಂಟೆಗೆ ತಿಂಡಿಯಾಗಬೇಕು. ಅಷ್ಟೊತ್ತಿಗೆ ಶೂ ಪಾಲಿಷ್ ಆಗಿರಬೇಕು. ಟೈ ಬೆಲ್ಟ ರೆಡಿಯಾಗಿರಬೇಕು. ಮತ್ತೊಮ್ಮೆ ಅಲ್ಲಿಗೆ ಹೋಗಿ ಬಂದು ಆಫೀಸಿಗೆ ರೆಡಿಯಾಗಬೇಕು. ಒಂಬತ್ತೂವರೆಗೆ ಆಫೀಸಲ್ಲಿ ಎಲ್ಲರಿಗಿಂತ ಮುಂಚೆ ಹಾಜರಿರಲೇಬೇಕು. ಇಡೀ ಮನೆಯನ್ನು ಗುಡಿಸಿ ಒರೆಸಿ, ನೀಟಾಗಿ ವಸ್ತುಗಳನ್ನು ಜೋಡಿಸಿಡಬೇಕು. ಯಾವುದೂ ಒಂಚೂರು ಆಚೆ ಈಚೆ ಯಾಗಬಾರದು. ನೆಲ ಗೋಡೆಗಳು ನಿತ್ಯ ಬಳಕೆಯ ವಸ್ತುಗಳು ಧೂಳಂಟದೇ ಥಳಥಳಿಸುತ್ತಿತಬೇಕು. ಟೈಮಿಗೆ ಸರಿಯಾಗಿ ಊಟ ನೀರು ನಿzಯಾಗಲೇಬೇಕು. ಆಫೀಸಿಂದ ಮನೆಗೆ
ಬರುತ್ತಿದ್ದ ಹಾಗೆ ಬಿಸಿ ಬಿಸಿ ಕಾಫಿ ಟೀ ಸಿದ್ಧವಾಗಿರಬೇಕು.
ಮಕ್ಕಳೂ ಅಷ್ಟೇ. ಪ್ರತಿಯೊಂದಕ್ಕೂ ಟೈಮ್ ಅಂದ್ರೆ ಟೈಮ್ ಎನ್ನುವ ಹಾಗೆ ತಮ್ಮ ಕೆಲಸಗಳನ್ನು ಮಾಡಿ ಮುಗಿಸಿಕೊಳ್ಳಲೇ ಬೇಕು. ಬೆಳಗ್ಗೆ ಹಾಸಿಗೆಯಿಂದ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಟೈಮ್ ಮೆಂಟೇನ್ ಮಾಡಬೇಕು. ಸ್ವಲ್ಪ ವ್ಯತ್ಯಾಸವಾಗಬಾರದು. ತಿಂಡಿಗೆ, ಊಟಕ್ಕೆ, ಆಟಕ್ಕೆ, ಟಿವಿ
ನೋಡುವುದಕ್ಕೆ ಅಂತ ಟೈಮ್ ಫಿಕ್ಸ್ ಆಗಿರುತ್ತದೆ. ಅದರಂತೆ ನಡೆಯಲೇಬೇಕು.
ಹೀಗೆ ನಿತ್ಯದ ಬದುಕಿನ ಪ್ರತಿ ವ್ಯವಹಾರಕ್ಕೂ, ನಡೆಗೂ, ಕಟ್ಟುನಿಟ್ಟುತನವನ್ನು ಅಳವಡಿಸಿಕೊಂಡು ಬದುಕುವವರನ್ನು ನೋಡುತ್ತಿರುತ್ತೇವೆ. ನೂರು ರುಪಾಯಿ ಯನ್ನು ಕಿಸೆಯೊಳಗೆ ಇಟ್ಟುಕೊಂಡು ತರಕಾರಿ ತರಲು ಹೋದ ವ್ಯಕ್ತಿ ಎಂಥಾ ಸಂದರ್ಭದಲ್ಲೂ ನೂರು ರುಪಾಯಿಯನ್ನು ಮೀರಿದ ತರಕಾರಿಯನ್ನು ಖರೀದಿಸ ಲಾರ. ಲೆಕ್ಕ ಅಂದ್ರೆ ಪಕ್ಕಾ ಲೆಕ್ಕ. ವಾರಕ್ಕೆ ಇಷ್ಟು ರುಪಾಯಿ ತರಕಾರಿಗೆ, ಇಷ್ಟು ರುಪಾಯಿ ದಿನಸಿಗೆ, ಇಷ್ಟು ರುಪಾಯಿ ಕರೆಂಟ್ ಬಿಲ್ಲಿಗೆ, ಹಾಲಿಗೆ, ಪೇಪರಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ, ಮನೆ ಖರ್ಚಿಗೆ ಅಂತ ಹೆಂಡತಿಗೆ ಅಂತ ಲೆಕ್ಕಹಾಕಿ ಜೀವನ ನಡೆಸುವವರು ಆಕಸ್ಮಾತ್ತಾಗಿ ಹೆಚ್ಚಿಗೆ ಒಂದು ರುಪಾಯಿಯನ್ನು ಖರ್ಚು ಮಾಡಲಾರರು. ಅಂಥ ಪರಿಸ್ಥಿತಿ ಬಂದರೂ ಹಣವನ್ನು ಖರ್ಚು ಮಾಡದೆ ಹಿಂದಿರುಗುವವರು ಇದ್ದಾರೆ.
ಇಷ್ಟೇ ರುಪಾಯಿಯ ನೋಟ್ಸ್ ಬುಕ್ಸ್, ಇಷ್ಟೇ ಹಣದಲ್ಲಿ ಹೊಸಬಟ್ಟೆ, ಇಂತಿಂಥ ಹಬ್ಬಹರಿದಿನಗಳಿಗೆ ಇಷ್ಟೇ ಖರ್ಚು ಮಾಡಬೇಕು ಎಂದು ಇಡಿಯ ವರ್ಷದ ಖರ್ಚುಗಳನ್ನು ಲೆಕ್ಕಹಾಕಿ ಸಮತೂಕ, ಸಮತೋಲನದಲ್ಲಿ ಬದುಕುವ ಅದೆಷ್ಟು ಜನ ನಮ್ಮಲ್ಲಿಲ್ಲ ಹೇಳಿ? ಸಂಪತ್ತಿನ ಗಳಿಕೆ ಮತ್ತು ವಿನಿಯೋಗದ ಬಗ್ಗೆ ಎಚ್ಚರ ವಿರಬೇಕು ಎನ್ನುವುದು ನೂರಕ್ಕೆ ನೂರು ಸತ್ಯ. ಆದರೆ ಅದೇ ಕಾರಣಕ್ಕೆ ಬದುಕು ಗೋಳಾಗುವಂತೆ ಕ್ರಮನಿಯಮಗಳನ್ನು ಪಾಲಿಸಬೇಕು ಅಂತೇನಿಲ್ಲವಲ್ಲ! ವ್ಯತ್ಯಯಗಳನ್ನು ಯಾವ ಬಗೆಯಲ್ಲೂ ಸ್ವೀಕರಿಸಲು ಸಿದ್ಧವಾಗಿರಬೇಕು. ಹಾಗಂತ ಪ್ರತಿಯೊಂದಕ್ಕೂ ಬೇಕಾಬಿಟ್ಟಿ ಖರ್ಚುಗಳನ್ನು ಮಾಡಿ ಯಾವುದಕ್ಕೂ ಹಿಂದು ಮುಂದು ನೋಡದೆ ಬದುಕು ಸಾಗಿಸುವುದೂ ಕಷ್ಟ. ತೀರಾ ಅತಿರೇಕದ ಆದರ್ಶವನ್ನು ಇಟ್ಟುಕೊಂಡು ಬದುಕಲೂ ಬಾರದು.
ಇಂಥವರ ಇನ್ನೂ ಕೆಲವರಿರುತ್ತಾರೆ: ಟೈಮ್ ಅಂದ್ರೆ ಟೈಮ. ಊಟ, ತಿಂಡಿ, ಚಾ, ಕಾಫಿ, ಆಫೀಸು, ಕೆಲಸ ಎಲ್ಲದರಲ್ಲೂ ಟೈಮ್ ಟೈಮ್ ಟೈಮ! ಒಂಚೂರು
ವ್ಯತ್ಯಾಸವಾಗಲೇ ಬಾರದು. ಮನೆಯ ಒಳಗೆ ಹೊರಗೆ ಕಸ ಕಾಣಲೇಬಾರದು. ಅದರಲ್ಲೂ ಮನೆ ಒಳಗೆ ಕಂಡರಂತೂ ಸಾಕ್ಷಾತ್ ದೂರ್ವಾಸರೇ ಆಗುತ್ತಾರೆ. ಬಟ್ಟೆಯೂ ಅಷ್ಟೆ, ನೀಟಾಗಿ ಜೋಡಿಸಿಟ್ಟಿರಬೇಕು. ಟೇಬಲ್ ಮೇಲಿದ್ದ ವಸ್ತುಗಳು, ಕಪಾಟಿನ ಒಳಗಿದ್ದ ವಸ್ತುಗಳು ಅಲುಗಾಡಬಾರದು.
ಸಾಮಾನ್ಯವಾಗಿ ಇಂಥ ಸ್ವಭಾವದವರನ್ನು ಆದರ್ಶವಾದಿಗಳು ಎಂದು ಕರೆಯುವುದುಂಟು. ಆದರ್ಶಗಳನ್ನು ಧ್ಯೇಯವಾಗಿ ಇಟ್ಟುಕೊಂಡು ಬದುಕುವುದು ಬೇರೆ. ಇಂಥ ಭೌತಿಕ ಆದರ್ಶವಾದ ಬೇರೆ. ಈ ಭೌತಿಕವಾದ ಆದರ್ಶವಾದ ಇದೆಯಲ್ಲ, ಇದೊಂದು ಥರ ವ್ಯಸನವಾಗಿ ಕಾಣುತ್ತದೆ. ಪ್ರಸಿದ್ಧ ಮನೋವೈದ್ಯ ಕಾರ್ಲ್ ಯೂಂಗ್ ಹೇಳುವ ಪ್ರಕಾರ, ಎಲ್ಲಾ ತರಹದ ಚಟಗಳೂ ಕೆಟ್ಟದ್ದೇ ಆಗಿರುತ್ತದೆ. ಅದು ಡ್ರಗ್ಸ್ ಸೇವನೆಯಾಗಿರಬಹುದು, ಕುಡಿತವಾಗಿರಬಹುದು, ಆಫೀಮು
ಸೇವನೆಯಾಗಿರಬಹುದು, ಅಥವಾ ಆದರ್ಶವಾದವೂ ಆಗಿರಬಹುದು. ಕಚೇರಿಯಲ್ಲಿ ಅತೀ ನಿಯತ್ತಾಗಿ ಕೆಲಸ ಮಾಡುವ ನೌಕರನೂ, ಮನೆಯಲ್ಲಿ ಆದರ್ಶ
ಗಂಡನಾಗುವವನೂ ಒಂದು ರೀತಿಯಲ್ಲಿ ತೊಡಕೇ ಆಗಿರುತ್ತಾನೆ. ಅಡಚಣೆಯಾಗೇ ಕಾಣುತ್ತಾನೆ. ಕೊನೆಕೊನೆಗೆ ಅವನ ಆದರ್ಶವಾದವೂ ಇತರರಿಗೆ ಕಿರಿಕಿರಿ ಯಾಗಿ, ಹಿಂಸೆಯಾಗಿ ಕಾಣತೊಡಗುತ್ತದೆ.
ಸಂಶೋಧನೆಗಳ ಪ್ರಕಾರ, ಬದುಕಿನಲ್ಲಿ ಎಲ್ಲದರಲ್ಲೂ ಪರಿಪೂರ್ಣರಾಗಲು ಬಯಸುವವರು ಮುಪ್ಪಿನಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ತಮ್ಮ ಆದರ್ಶವಾದ ದಿಂದ ಬಹುದೊಡ್ಡದನ್ನು ಸಾಧಿಸುವ ಹಂಬಲವಿರುವವನು ಶಾರೀರಿಕ, ಮಾನಸಿಕ, ಮಾನವೀಯ ಸಂಬಂಧಗಳ ಸಮಸ್ಯೆಗೆ ಈಡಾಗುತ್ತಾರೆ. ಅಂದುಕೊಂಡಿದ್ದನ್ನು ಸಾಧಿಸುತ್ತಾರೋ ಇಲ್ಲವೋ ಆ ಮಾತು ಬೇರೆ. ಆದರೆ ಸತತ ಪ್ರಯತ್ನದಲ್ಲಿ ತಮ್ಮ ಲೋಪ ದೋಷಗಳನ್ನು, ನ್ಯೂನತೆಗಳನ್ನು ಇತರರಿಂದ ಮರೆಮಾಚಲು ಒಳಗೊಳಗೇ ಯತ್ನಿಸುತ್ತಾರೆ. ನೆಗೆಟಿವಿಟಿ ಇವರಲ್ಲಿ ಅಂಟಿಕೊಂಡಿರುತ್ತದೆ. ಒಬ್ಬ ಕಟ್ಟರ್ ಪ್ರಾಮಾಣಿಕನಿಗೆ ತನ್ನ ಪ್ರಾಮಾಣಿಕತೆಯ ಬಗ್ಗೆ ದುರಭಿಮಾನ ಬೆಳೆಯ ಬಹುದು.
ಮಾನವೀಯತೆಯ ಒರತೆ ಬತ್ತಿಹೋಗಬಹುದು. ಒಬ್ಬ ನಿಷ್ಠಾವಂತನಿಗೂ, ಕರ್ಮಠನಿಗೂ ಇದು ಅನ್ವಯಿಸುತ್ತದೆ. ಈ ಪರಿಪೂರ್ಣತೆಯ ಹಪಹಪಿ ಇರುವವರಲ್ಲಿ ಒಂದಿಷ್ಟು ವಿಚಿತ್ರವಾದ ಏಕಮುಖೀ ಮನೋಧೋರಣೆಗಳಿರುತ್ತವೆ. ಆಂತರ್ಯದ ಬದುಕಿನಲ್ಲಿ ಇಂಥವರ ಬದುಕು ಕಾಂಪ್ಲಿಕೇಟೆಡ್ ಆಗಿರುತ್ತದೆ. ಪರಿಸ್ಥಿತಿ ಬಂದ ಹಾಗೆ ಒಪ್ಪಿ ಸ್ವೀಕರಿಸುವ ಔದಾರ್ಯ ಇಂಥವರಲ್ಲಿ ನಶಿಸಿರುತ್ತದೆ. ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿಭಾಯಿಸುವ, ನಿರ್ವಹಿಸುವ ತಾಕತ್ತು ಇವರಲ್ಲಿ ಇರುವುದಿಲ್ಲ. ಆದರ್ಶದ ಬೆನ್ನುಹತ್ತಿ ಪರಿಪೂರ್ಣತೆ ಯನ್ನು ಸಾಽಸಲು ಆಗದೆ ಬದುಕಿನುದ್ದಕ್ಕೂ ಒಂದು ತಳಮಳ, ಚಡಪಡಿಕೆ ಇವರನ್ನು ಕಾಡುತ್ತದೆ.
ಪರಿಸ್ಥಿತಿ ಏನೇ ಆದರೂ ತಮ್ಮ ನಿಯಂತ್ರಣದ ಇರಬೇಕು ಎಂಬ ಅವಸರದ ವಾಂಛೆ ಇವರಲ್ಲಿರುತ್ತದೆ. ತನ್ನ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಇಲ್ಲದ್ದನ್ನು ಸೃಷ್ಟಿಸುವ ಹುನ್ನಾರದ ಬುದ್ಧಿ ಕ್ರಮೇಣ ಕರಗತ ವಾಗುತ್ತ ಹೋಗುತ್ತದೆ. ತನ್ನಲ್ಲಿ ಇಲ್ಲದ ಶಕ್ತಿ ಸಾಮರ್ಥ್ಯ ತಾಕತ್ತು ಪ್ರತಿಭೆ ಮತ್ತೊಬ್ಬರಲ್ಲಿ ಇರುವುದನ್ನು ಕಂಡರೆ ಇವರು ಸಹಿಸಲಾರರು. ಪ್ರತಿ ಹಂತದ ಅವಸರದ ನಡೆಯಲ್ಲೂ ಇವರಂದು ಉದ್ವೇಗ, ಆವೇಗ ಇರುವುದರಿಂದ ಜತೆಯಲ್ಲಿ ಇದ್ದವರಿಗೂ ಇದೇ ರೀತಿ ಅನುಭವ ವಾಗುತ್ತದೆ. ಈ ರೀತಿಯ ನಡೆಗಳು ದೇಹಾರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತದೆ. ಬಿಪಿ, ಷುಗರ್, ಅಸಿಡಿಟಿಗೂ ಆಹ್ವಾನ ವೀಯುತ್ತದೆ. ಖಿನ್ನತೆಯೂ ಬಾಧಿಸಬಹುದು. ಆಹಾರ ಸೇವನೆಯಲ್ಲೂ ವ್ಯತ್ಯಯ ಉಂಟಾಗಬಹುದು.
ಆತ್ಮರತಿ ಯಾರಿಗೂ ಹಿತವಲ್ಲ. ಸಣ್ಣ ಸಣ್ಣ ವಿಷಯಗಳಿಗೂ, ವಿಚಾರಗಳಿಗೂ ಅತೀಯಾಗಿ ಪ್ರತಿಕ್ರಿಯಿಸುವ, ಸ್ಪಂದಿಸುವ ಇಂಥವರಿಗೆ ಮಾನಸಿಕ ಸ್ವಾಸ್ಥ್ಯವೂ ದೈಹಿಕ ಸ್ವಾಸ್ಥ್ಯವೂ ಕುಸಿಯುತ್ತದೆ. ಕ್ಷುಲ್ಲಕ ಅಸಂಗತಗಳಿಗೆ ಹೌಹಾರುವ ಇಂಥವರು ಸಾಧಿಸುವುದಾದರೂ ಏನನ್ನು ಎಂಬುದು ಅವರ ಪ್ರಶ್ನೆಯಾಗಿರುತ್ತದೆ. ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡವರಾಗಿ ಎಲ್ಲರಂತೆ ಸಹಜವಾಗಿ ಸ್ವಾಭಾವಿಕವಾದ ನೆಲೆಯಲ್ಲಿ ಇವರು ಅಭಿವ್ಯಕ್ತಿಸಲಾರರು ಎಂಬುದನ್ನು ಸಮಾಜ ಗುರುತಿಸುತ್ತದೆ. ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳುವ ಕಾಯ್ದುಕೊಳ್ಳುವ ಇವರು ಅದಕ್ಕಾಗಿಯೇ ಬದುಕಿನುದ್ದಕ್ಕೂ ಹೆಣಗಾಡುತ್ತಾರೆ.
ಅತೀಯಾದ ಆದರ್ಶವಾದಕ್ಕೂ ಶುದ್ಧ ಕರ್ಮಠತನಕ್ಕೂ ಯಾವ ಅಂತರವೂ ಇಲ್ಲವೆಂದೇ ನಾನು ಭಾವಿಸುತ್ತೇನೆ. ಬದುಕು ಯಾವ ಹಂತದಲ್ಲೂ ಕರ್ಮಠವಾಗ ಬಾರದು. ಇಷ್ಟವಿಲ್ಲದ ಕೆಲಸಗಳನ್ನು ಮಾಡದೇ ಇರಬಹುದು. ಆದರೆ ಬಿಡುವುದೇ ಒಂದು ಚಟವಾಗಬಾರದು! ಪ್ರತಿಯೊಂದರಲ್ಲೂ ಅತೀ ಆದರ್ಶವನ್ನು ಹುಡುಕುತ್ತಾ ಹೋದರೆ ಅಥವಾ ಕಟ್ಟಿಕೊಳ್ಳುತ್ತಾ ಹೋದರೆ ಮನುಷ್ಯ ಸಂಬಂಧಗಳು ತೀರಾ ಎಂಬಷ್ಟು ಸಹಜವಾಗಿರುವುದಿಲ್ಲ. ಪ್ರತಿಯೊಂದರಲ್ಲೂ ಡಿಸಿಪ್ಲೀನ್ ಅಂತ ಬದುಕಿನುದ್ದಕ್ಕೂ ಗುದುಮುರಿಯುವ ಇಂಥವರು ಹೆಂಡತಿ ಮಕ್ಕಳನ್ನು ಗೋಳು ಹೊಯ್ಕೋತಾರೆ. ಅಲ್ಲಿಟ್ಟದ್ದು ಸರಿಯಿಲ್ಲ, ಇಲ್ಲಿ ಮುಟ್ಟಿದ್ದು ಸರಿಯಿಲ್ಲ, ಅದು ಹಾಗೆ ಆಗಬೇಕಿತ್ತು, ಇದಿನ್ನೂ ನೀಟಾಗಿ ಇಡಬೇಕಿತ್ತು ಎಂಬ ವರಾತ ತೆಗೆಯುವವನಲ್ಲಿ ತನ್ನಿಂದಾಗುವ ಹಿಂಸೆಗಳ ಬಗ್ಗೆ ಪಶ್ಚಾತ್ತಾಪದ ಭಾವವೇ ಸತ್ತು ಹೋಗಿರುತ್ತದೆ.
ಬೇಗ ಏಳುವ, ಜಾಗಿಂಗ್ ಮಾಡುವ,ಕಸ ಗುಡಿಸುವ, ಸ್ನಾನ ಮಾಡುವ, ಪೂಜೆ ಮುಗಿಸುವ, ಪೇಪರ್ ಓದುವ, ಚಾ ತಿಂಡಿ ಮಾಡಿಕೊಡೇ, ಬಟ್ಟೆ ತೊಳೆದುಕೊಡೇ ಎಂದು ಅಬ್ಬರಿಸುವುದನ್ನೇ ಡಿಸಿಪ್ಲೀನ್ ಎಂದು ಭಾವಿಸುವ ಇಂಥವರಿಗೆ ಡಿಸಿಪ್ಲೀನ್ ಹಿಂದೆ ಡಿಸೈಪಲ್ ಅಂತ ಒಂದು ಪದ ಇದೆ ಎಂದು ಗೊತ್ತೇ ಇರುವುದಿಲ್ಲ. ಇಸಿ ಮಾಡಿದ ಪ್ಯಾಂಟು ಶರ್ಟುಗಳನ್ನು ನೀಟಾಗಿ ಧರಿಸಿ, ಟೈ ಬೆಲ್ಟಗಳನ್ನು ಚೂರು ಓರೆಯಾಗದೆ ಅಂಟಿಸಿಕೊಂಡು, ಪಾಲಿಷ್ ಮಾಡಿದ ಷೂವನ್ನು ಹಾಕಿ ಟೈಮಿಗೆ
ಸರಿಯಾಗಿ ಆಫೀಸಿಗೆ ಹೋಗಿ ತನ್ನದು ಎಷ್ಟುಂಟೋ ಅಷ್ಟೇ ಕೆಲಸ ಮಾಡಿಕೊಂಡು ಸ್ವಲ್ಪ ಕೂಡ ಆಚೀಚೆ ತಿರುಗದೆ ಯಾರನ್ನೂ ಮಾತಾಡಿಸದೆ ಸಂಜೆ ಹೊತ್ತು ಸೀದಾ ಮನೆಗೆ ಬರುವವನ ಆದರ್ಶದಿಂದೇನು ಲಾಭವಿದೆ? ಅಂಥವನು ವೇಸ್ಟ್ ಫೆಲೋ.
ಬದುಕಿನ ಗತಿಬಿಂಬಕ್ಕೆ ಇಳಿಯಬೇಕು. ಓದಬೇಕು, ಹಾಸ್ಯಪ್ರಜ್ಞೆ ಮೂಡಬೇಕು. ಒಂದು ಸಣ್ಣ ಸಿಟ್ಟು, ಮುನಿಸು, ಜಗಳ, ದೊಡ್ಡ ಪ್ರೀತಿ, ಮತ್ತೊಬ್ಬರಿಗೆ ಚೂರು ಆಸರೆ, ಯಾರಿಗೂ ಸಾಂತ್ವನ ಕೊಡದೇ ಹೋದ ಆದರ್ಶದ ಬದುಕನ್ನು ಕಟ್ಟಿಕೊಂಡು ಏನು ಮಾಡಲು ಸಾಧ್ಯ? ಸಾಂದರ್ಭಿಕವಾದ ಒಂದು ಸಣ್ಣ ತಮಾಷೆ, ವಿನೋದಕ್ಕೂ ಅವಕಾಶ ಇಲ್ಲದವನು, ಪ್ರತಿ ಹಂತದಲ್ಲೂ ಮುಸಿ ಮುಸಿ ಅನ್ನುವವನು ಬದುಕಿನಲ್ಲಿ ಯಾವ ಆದರ್ಶವನ್ನು ಇಟ್ಟುಕೊಂಡು ಏನು ಪ್ರಯೋಜನವಿದೆ ಹೇಳಿ? ಮಕ್ಕಳೊಂದಿಗೆ ಮಕ್ಕಳಲ್ಲಿರುವ ಮುಗ್ಧತೆಯನ್ನು ಅಪ್ಪಿದ ಅಪ್ಪನಾಗಬೇಕು, ಹೆಂಡತಿಗೆ ಪ್ರೀತಿಯನ್ನು ಮೊಗೆದು ಕೊಡುವ ಗಂಡನಾಗಬೇಕು, ಕುಟುಂಬಕ್ಕೆ ಸಭ್ಯ ಸಂಸಾರಸ್ಥನಾಗಬೇಕು, ಸಮಾಜಕ್ಕೆ ಒಳ್ಳೆಯ ಗೃಹಸ್ಥನಾಗಬೇಕು.
ಕೆಲಸಕ್ಕೆ ಬಾರದ ಆದರ್ಶವನ್ನು ಇಟ್ಟುಕೊಂಡು ತನ್ನವರಿಂದಲೇ ತೀರಾ ಉಪೇಕ್ಷೆಗೆ ಒಳಪಡುವ ಗಂಡಸು ಮಾಡುವುದಾದರೂ ಏನನ್ನು? ಗೆಲ್ಲುವುದಾದರೂ
ಯಾರನ್ನು? ಯಾವುದನ್ನು? ನಾಕು ಜನರ ಎದುರಲ್ಲಿ ಆದರ್ಶದ ಸೋಗಿನಲ್ಲಿ ವ್ಯವಹರಿಸುವ ಹೆಂಗಸು ಒಳ ಬದುಕಿನಲ್ಲಿ ದಾರಿತಪ್ಪಿದ ಗಂಡಸಿನಂತೆ ಇರುವುದನ್ನು ನೋಡಿದ್ದೇನೆ. ಗಂಡಸು ಸಭ್ಯತೆಯನ್ನು ಮೀರಬಾರದು. ಮಾತೂ ಆಡಬಾರದು. ಆದರೆ ಬೀದಿಯಲ್ಲಿ ನಿಂತು ಹೆಂಗಸೊಬ್ಬಳು ಗಂಡಸನ್ನು, ಗಂಡನನ್ನು ಹೀಯಾ ಳಿಸಿಯೋ ಅವಮಾನಿಸಿಯೋ ಮಾತನಾಡಿದರೆ ಅದು ಕುಡಿದು ರೇಗಾಡುವ ಗಂಡಸಿಗಿಂತ ಹೆಚ್ಚಿನ ಅಸಹ್ಯ ಹುಟ್ಟಿಸುವಂಥದ್ದು. ಹೆಣ್ಣಾಗಲೀ ಹೆಂಗಸಾಗಲೀ
ಚೀಪ್ ಆಗಬಾರದು ಎಂದು ಈ ಸಮಾಜ ಬಯಸುತ್ತದೆಂಬುದು ನೂರಕ್ಕೆ ನೂರು ಸತ್ಯ!
ಗಂಡ ತೀರಾ ಎಂಬಷ್ಟು ಆದರ್ಶವಾದಿಯಾದರೆ ಯಾವ ಹೆಂಗಸೂ ಸಹಿಸಲಾರಳು. ಜಾತ್ರೆಗೋ ಸಂತೆಗೋ ಮದುವೆ ಸಮಾರಂಭಕ್ಕೋ ಅಥವಾ ಮನೆಯ ಮಕ್ಕಳೊಂದಿಗೆ ಬೆರೆಯುವುದಕ್ಕೋ ಸಾಧ್ಯವಾಗದೇ ಹೋದ ಗಂಡನೊಂದಿಗೆ ಬದುಕುವ ಯಾವ ಹೆಂಡತಿಯೂ ಅಂತರಂಗದಲ್ಲಿ ಗಂಡನ ಬಗ್ಗೆ ಯಾವ ಭಾವ ವನ್ನೂ ತಾದಾತ್ಮ್ಯವನ್ನೂ ಜೀವಂತವಾಗಿ ಉಳಿಸಿಕೊಳ್ಳಲಾರಳೇನೋ ಎನಿಸುತ್ತದೆ. ಕೌಟುಂಬಿಕವಾಗಿ ಇವರಿಂದ ಯಾವ ಸುಖ, ಸಂತೋಷಗಳೂ ಇವರೊಂದಿಗೆ ಬದುಕುವವರಿಗೆ ಸಿಗಲಾರದು. ತನ್ನ ನಿಯಂತ್ರಣದ ತನ್ನ ಕುಟುಂಬ ಇರಬೇಕೆನ್ನುವ ಇವರಲ್ಲಿ ಅದು ಸಾಧ್ಯವಾಗದೇ ಹೋಗಿ ತೀರಾ ನೋವನ್ನು ಅನುಭವಿಸುತ್ತಾರೆ. ಮರುಗುತ್ತಾರೆ.
ತನ್ನ ಹೆಂಡತಿಯನ್ನೂ ಮಕ್ಕಳನ್ನೂ ಪ್ರೀತಿಸಲು ಇವರಿಗೆ ಸಾಧ್ಯವಾಗುವುದಿಲ್ಲ. ಇವರ ಎಲ್ಲ ಅಭಿವ್ಯಕ್ತಿಗಳೂ ಕೃತಕವಾಗೇ ಕಾಣುತ್ತದೆ. ಇವರಲ್ಲಿ ಹೇಗೆ ಸಂಶಯ ಇರುತ್ತದೋ ಹಾಗೆ ಇವರ ಪ್ರೀತಿಯ ಮೇಲೂ ಸಂಶಯ ಹುಟ್ಟುತ್ತದೆ. ಮನೆಯಲ್ಲಿ ಎಲ್ಲರನ್ನೂ ನಿಯಂತ್ರಿಸುವ ಅಥವಾ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದೇನೆಂಬ ಭ್ರಮೆ ಇಂಥವರಲ್ಲಿ ಯಾವಾಗಲೂ ಮನೆಮಾಡಿರುತ್ತದೆ. ಇಂಥ ಅತಿರೇಕದ ಆದರ್ಶದ ಗುಂಗಿನಿಂದ ಹೊರಬರಲಾರದೆ ತಾನೂ ವ್ಯಸನಿಯಾಗುವುದಲ್ಲದೆ
ಮನೆಮಂದಿಗೂ ವ್ಯಸನವಾಗುವಂತೆ ಮಾಡುತ್ತಾರೆ. ಹಾಗಂತ ಯಾವ ಆದರ್ಶವೂ ಇಲ್ಲದ ಬದುಕು ಕೂಡ ಒಂಥರಾ ವ್ಯಸನವೇ ಆಗಿದೆ!