Saturday, 14th December 2024

Dr Vijay Darda Column: ಆಕ್ಸ್ ಫರ್ಡ್ ಯೂನಿಯನ್‌ ಯಾರದೋ ಕೈಗೊಂಬೆಯೇ ?

ಸಂಗತ

ಡಾ.ವಿಜಯ್‌ ದರಡಾ

ತಣ್ಣಗಿನ ಬ್ರಿಟನ್‌ನಲ್ಲಿ ಕಾಶ್ಮೀರವು ಯಾವಾಗಲೂ ಬಿಸಿ ಚರ್ಚೆಯ ವಿಷಯವಾಗುವುದೇಕೆ? ಅವರಿಗೆ ಅವರದೇ ಸಮಸ್ಯೆಗಳನ್ನು ಇನ್ನೂ ಬಗೆಹರಿಸಿಕೊಳ್ಳಲು ಆಗಿಲ್ಲ. ಹಾಗಿರುವಾಗ ನಮ್ಮ ವ್ಯವಹಾರಗಳಲ್ಲಿ ಮೂಗು ತೂರಿಸುವ ದರ್ದು ಏಕೆ? ಸ್ವತಂತ್ರ ಚಿಂತನೆಯ ಸೋಗಿನಲ್ಲಿ ಭಾರತದ ವಿರುದ್ಧ ಹುನ್ನಾರ ನಡೆಸಲು ಯಾರಿಗೂ ನಾವು ಅವಕಾಶ ನೀಡುವುದಿಲ್ಲ.

ಖ್ಯಾತ ಚಿತ್ರನಿರ್ದೇಶಕ ಹಾಗೂ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಕಳೆದ ವಾರ ಆಕ್ಸ್ ಫರ್ಡ್ ಯೂನಿಯನ್‌ನ
ಸಂವಾದದಲ್ಲಿ ಪಾಲ್ಗೊಳ್ಳಲು ನಿರಾಕರಿಸಿರುವುದು ದೊಡ್ಡ ಸುದ್ದಿಯಾಗಿದೆ. ವಿವೇಕ್ ಅಗ್ನಿಹೋತ್ರಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಚಿತ್ರ ನಿರ್ದೇಶಕ. ಅವರ ‘ದಿ ಕಾಶ್ಮೀರ್ ಫೈಲ್ಸ್’ ಜಗತ್ತಿನಾದ್ಯಂತ ಸದ್ದು ಮಾಡಿತ್ತು.

ಹೀಗಾಗಿ ಅವರು ಪ್ರತಿಷ್ಠಿತ ಆಕ್ಸ್ ಫರ್ಡ್ ಯೂನಿಯನ್‌ನ ಆಹ್ವಾನವನ್ನು ತಿರಸ್ಕರಿಸಿದಾಗ ಸಹಜವಾಗಿಯೇ ಸುದ್ದಿಯಾಗುತ್ತದೆ. ಆದರೆ ನಿಮಗೊಂದು ವಿಷಯ ಗೊತ್ತೇ? 2022ರಲ್ಲೂ ಒಮ್ಮೆ ಆಕ್ಸ್ ಫರ್ಡ್ ಯೂನಿಯನ್‌ನಲ್ಲಿ ವಿವೇಕ್ ಅಗ್ನಿಹೋತ್ರಿಯವರ ಸಂವಾದ ನಿಗದಿಯಾಗಿತ್ತು. ಅದರಲ್ಲಿ ಪಾಲ್ಗೊಳ್ಳಲು ವಿವೇಕ್ ಸಿದ್ಧರಾಗಿದ್ದರು. ಆದರೆ ಪಾಕಿಸ್ತಾನದ ಸಣ್ಣದೊಂದು ಗುಂಪು ಅದರ ವಿರುದ್ಧ ಪ್ರತಿಭಟಿಸಿತು ಎಂಬ ಕಾರಣಕ್ಕೆ ಆಕ್ಸ್ ಫರ್ಡ್ ಯೂನಿಯನ್ನಿ ನವರು ತರಾತುರಿಯಲ್ಲಿ ಆ ಸಂವಾದವನ್ನೇ ರದ್ದುಪಡಿಸಿದ್ದರು.

ಈಗ ಮತ್ತೊಮ್ಮೆ ಆಕ್ಸ್ ಫರ್ಡ್ ಯೂನಿಯನ್‌ನಿಂದ ವಿವೇಕ್ ಅಗ್ನಿಹೋತ್ರಿಗೆ ಆಹ್ವಾನ ಬಂದಿದ್ದರಿಂದ ಇದನ್ನು
ಪ್ರಸ್ತಾಪಿಸಬೇಕಾಯಿತು. ಈ ಬಾರಿ ಅವರ ಜತೆಗೆ ಸಂವಾದಕ್ಕೆ ನಿಗದಿಪಡಿಸಿದ್ದ ವಿಷಯ, ‘ಸದನಕ್ಕೆ ಕಾಶ್ಮೀರದ ಸ್ವಾತಂತ್ರ್ಯದಲ್ಲಿ ನಂಬಿಕೆಯಿದೆ’. ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಇಂಥ ಪೂರ್ವಗ್ರಹಪೀಡಿತ ವಿಷಯದ ಕುರಿತ ಸಂವಾದದಲ್ಲಿ ಭಾರತೀಯರು ಯಾರಾದರೂ ಭಾಗವಹಿಸುತ್ತಾರೆಯೇ? ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೂಡ ಒಂದು ಭಾಗವನ್ನು ಅಚಾತುರ್ಯದಿಂದ ಚೀನಾಕ್ಕೆ ಉಡುಗೊರೆ ನೀಡಲಾಗಿದೆ ಮತ್ತು ಅದು ಸಹ ಭಾರತದ ಅವಿಭಾಜ್ಯ ಭಾಗವೇ ಆಗಿದೆ ಎಂಬುದು ಕೂಡ ಎಲ್ಲರಿಗೂ ತಿಳಿದಿದೆ.

ಅದು ಭಾರತಕ್ಕೆ ಸೇರಿದ ಭಾಗವಾಗಿರುವುದರಿಂದ ಈ ವಿಷಯದಲ್ಲಿ ಸಂವಾದ ನಡೆಸುವ ಪ್ರಶ್ನೆಯೇ ಉದ್ಭವಿಸುವು ದಿಲ್ಲ. ಹೀಗಾಗಿ ವಿವೇಕ್ ಅಗ್ನಿಹೋತ್ರಿ ತಮಗೆ ಆಕ್ಸ್ ಫರ್ಡ್ ಯೂನಿಯನ್ನಿನ ಆಹ್ವಾನ ಬಂದಾಗ ಅದಕ್ಕೆ ಸರಿ
ಯಾದ ಉತ್ತರವನ್ನೇ ನೀಡಿದ್ದಾರೆ. ‘ನಿಮ್ಮ ಡಿಬೇಟಿನ ವಿಷಯ ನೇರವಾಗಿ ಭಾರತದ ಸಾರ್ವಭೌಮತೆಗೆ ಸವಾಲೆಸೆ ಯುವಂತಿದೆ. ಹೀಗಾಗಿ ಇಂಥ ಸಂವಾದದಲ್ಲಿ ನಾನು ಪಾಲ್ಗೊಳ್ಳಲು ಸಾಧ್ಯವೇ ಇಲ ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

‘ನೀವು ಚರ್ಚೆಗೆ ಆಯ್ದುಕೊಂಡಿರುವ ವಿಷಯ ಪೂರ್ವಗ್ರಹ ಪೀಡಿತ ಮಾತ್ರವಲ್ಲ, ಭಾರತೀಯರಿಗೆ ನೋವು ಉಂಟು ಮಾಡುವ ಸಂಗತಿ ಕೂಡ ಆಗಿದೆ. ಇದು 140 ಕೋಟಿ ಭಾರತೀಯರಿಗೆ ಅವಮಾನ ಮಾಡುವಂಥ ವಿಷಯ. ಅಷ್ಟೇಕೆ, 1990ರಲ್ಲಿ ನಡೆದ ಕಾಶ್ಮೀರದ ಹತ್ಯಾಕಾಂಡದಲ್ಲಿ ಸಂತ್ರಸ್ತರಾಗಿ ತಾಯ್ನೆಲ ತೊರೆದು ನಿರಾಶ್ರಿತರಾದ ಲಕ್ಷಾಂತರ ಹಿಂದೂಗಳನ್ನು ರೊಚ್ಚಿಗೇಳಿಸುವ ವಿಷಯ ಕೂಡ ಆಗಿದೆ. ಇದನ್ನೊಂದು ಚರ್ಚೆಯೆಂದು ಕರೆಯು ವುದು ದುರಂತವೊಂದನ್ನು ‘ಪಾರ್ಲರ್ ಗೇಮ್’ ರೀತಿ ಆಡಿದಂತೆ… ಬೌದ್ಧಿಕ ಆಟಕ್ಕಾಗಿ ಆಕ್ಸ್ ಫರ್ಡ್ ಯೂನಿಯನ್ ಇನ್ನಾರಿಗೋ ಆಗಿರುವ ಗಾಯವನ್ನು ಕೆರೆದು ಹುಣ್ಣು ಮಾಡುವ ಕೆಲಸಕ್ಕೆ ಕೈಹಾಕಬಾರದು ಎಂದು ವಿವೇಕ್ ಅಗ್ನಿಹೋತ್ರಿ ತೀಕ್ಷ್ಣವಾದ ಉತ್ತರ ನೀಡಿದ್ದಾರೆ.

ವಿವೇಕ್ ಹೇಳಿದ ಮಾತಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಆಕ್ಸ್ ಫರ್ಡ್ ಯೂನಿಯನ್ ಅಷ್ಟೇ ಅಲ್ಲ, ಜಗತ್ತಿನ ಯಾವುದೇ ದೇಶದ ಸಂಸತ್ತು ಈ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳುವ ಸಾಹಸಕ್ಕೆ ಕೈಹಾಕಿದರೆ ಭಾರತ ಸುಮ್ಮನಿ ರುವುದಿಲ್ಲ. ಸಾರ್ವಭೌಮ ಸ್ವತಂತ್ರ ರಾಷ್ಟ್ರದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರವನ್ನು
ಭಾರತದಿಂದ ಬೇರ್ಪಡಿಸುವ ಉಪದ್ವ್ಯಾಪಕ್ಕೆ ಯಾವ ದೇಶ ಕೈಹಾಕಿದರೂ ಅದನ್ನು ನೋಡಿಕೊಂಡು ಭಾರತ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಇಷ್ಟಕ್ಕೂ ಅಂಥ ದುಸ್ಸಾಹಸಕ್ಕೆ ಕೈಹಾಕುವ ಧೈರ್ಯವಾದರೂ ಯಾರಿಗಿದೆ!
ಅದು ಹಾಗಿರಲಿ, ಈ ಆಕ್ಸ್ ಫರ್ಡ್ ಯೂನಿಯನ್ ಅಥವಾ ಬ್ರಿಟನ್ ಸರಕಾರಕ್ಕೆ ಬೇರೆಯವರ ಗೊಡವೆ ಏಕೆ?
ಬ್ರಿಟನ್ ದೇಶವೇ ಇಂದು ನೂರೆಂಟು ಸಮಸ್ಯೆಗಳಲ್ಲಿ ಮುಳುಗಿದೆ. ಅಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ.

ಆರ್ಥಿಕ ಕುಸಿತ ಉಂಟಾಗಿದೆ. ಆರೋಗ್ಯ ಸೇವೆಗಳು ಹಳ್ಳ ಹಿಡಿದಿವೆ. ಜನರು ಸರಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಬ್ರಿಟಿಷರು ಬೆಲೆಯೇರಿಕೆಯ ಬಿಸಿಯಿಂದ ತತ್ತರಿಸುತ್ತಿದ್ದಾರೆ. ಅದನ್ನೆಲ್ಲ ಸರಿಪಡಿಸಿಕೊಳ್ಳುವುದಕ್ಕೇ ಇನ್ನೂ ಅವರಿಗೆ ಸಾಧ್ಯವಾಗಿಲ್ಲ. ಹೀಗಿರುವಾಗ ತಮ್ಮ ದೇಶದ ಬಿಕ್ಕಟ್ಟಿನ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ನಮ್ಮ ವ್ಯವಹಾರ ದಲ್ಲಿ ಮೂಗು ತೂರಿಸುವ ದರ್ದು ಅವರಿಗೆ ಏಕೆ? ತಣ್ಣಗೆ ಮೈಕೊರೆಯುವಂಥ ಚಳಿಯ ಹವಾಮಾನದ ಬ್ರಿಟನ್ ದೇಶಕ್ಕೆ ಕಾಶ್ಮೀರದಂಥ ಬಿಸಿ ಚರ್ಚಾವಿಷಯ ಏಕೆ ಬೇಕು? ಇಷ್ಟಕ್ಕೂ ಆಕ್ಸ್ ಫರ್ಡ್ ಯೂನಿಯನ್ ಎಂಬುದು ಇನ್ನಾರದೋ ಕೈಗೊಂಬೆಯೇ? ಎಲ್ಲೋ ಕುಳಿತ ಮಾಸ್ಟರ್ ಅಥವಾ ಹ್ಯಾಂಡ್ಲರ್‌ಗಳು ಹೇಳಿಕೊಟ್ಟಿದ್ದನ್ನು ಈ
ಯೂನಿಯನ್ ಮಾಡುತ್ತಿದೆಯೇ? ಅವರ ತುತ್ತೂರಿಯನ್ನು ಯೂನಿಯನ್ ಊದುತ್ತಿದೆಯೇ? ಒಂದು ವಿಷಯವನ್ನು
ಬ್ರಿಟನ್ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಬೇರೆ ದೇಶಗಳನ್ನು ಒಡೆದು ಆಳುವ ಕಾಲ ಹೋಯಿತು. ಬ್ರಿಟಿಷರು ಏನೇ ತಿಪ್ಪರಲಾಗ ಹಾಕಿದರೂ ಇನ್ನುಮುಂದೆ ಯಾವ ದೇಶವನ್ನೂ ಆಳಲು ಸಾಧ್ಯವಿಲ್ಲ. ಶತಮಾನಗಳ ಹಿಂದೆ ಅವರು ಮಾಡಿದ್ದ ಸಾಹಸಗಳೆಲ್ಲ ಈಗ ಇತಿಹಾಸ. ಅದು ಮರುಕಳಿಸುವ ಸಾಧ್ಯತೆ ಲವಲೇಶವೂ ಇಲ್ಲ.

ಹೀಗಿರುವಾಗ ಅಂಥ ದುಸ್ಸಾಹಸದ ಕನಸು ಕಾಣುವುದಕ್ಕೂ ಬ್ರಿಟನ್ ಹೋಗಬಾರದು. ಬೇರೆ ದೇಶಗಳ ಆಂತರಿಕ ವ್ಯವಹಾರದಲ್ಲಿ ಕೈಹಾಕಿ ಕಚ್ಚಿಸಿಕೊಳ್ಳುವ ಕೆಲಸವನ್ನು ಮೊದಲು ನಿಲ್ಲಿಸಬೇಕು. ನನಗೆ ಚೆನ್ನಾಗಿ ನೆನಪಿದೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯಲು ಸಂವಿಧಾನದ ೩೭೦ನೇ ಪರಿಚ್ಛೇದವನ್ನು
ರದ್ದುಪಡಿಸಿದಾಗಲೂ ಆಕ್ಸ್-ರ್ಡ್ ಯೂನಿಯನ್ ಈ ವಿಷಯದ ಬಗ್ಗೆ ಸಂವಾದ ಏರ್ಪಡಿಸಿತ್ತು. ‘ಕಾಶ್ಮೀರದ ವಿಶೇಷ
ಸ್ಥಾನಮಾನ ರದ್ದುಪಡಿಸುವುದು ಸರಿಯೇ? ಎಂಬುದು ಚರ್ಚೆಯ ವಿಷಯವಾಗಿತ್ತು. ಬಿಜೆಪಿಯ ಹಿರಿಯ ನಾಯಕ
ಬೈಜಯಂತ್ ಪಾಂಡಾ ಹಾಗೂ ಸಿಪಿಎಂನ ಹಿರಿಯ ನಾಯಕ ದಿ.ಸೀತಾರಾಂ ಯೆಚೂರಿ ಆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಆಗಲೂ ನನಗೆ ಇವರು ಏಕೆ ಅಂಥ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಆಶ್ಚರ್ಯವಾಗಿತ್ತು. ನಾನು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆಯಿಟ್ಟಿರುವ ವ್ಯಕ್ತಿ. ಅಪ್ಪಟ ಮುಕ್ತ ಚಿಂತನೆಯನ್ನು ನಾನು ಪ್ರತಿಪಾದಿಸುತ್ತೇನೆ. ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆ ನಾನು. ಹೀಗಾಗಿ ಚರ್ಚೆ ಮತ್ತು ಸಂವಾದದಲ್ಲಿ ನನಗೆ ತುಂಬಾ
ವಿಶ್ವಾಸವಿದೆ. ಆದರೆ ಚರ್ಚೆಯ ಉದ್ದೇಶ ಒಳ್ಳೆಯದಿರಬೇಕು. ಯಾವಾಗ ಚರ್ಚೆಯ ಹಿಂದೆ ಷಡ್ಯಂತ್ರದ ಅನುಮಾನ ಗಳು ಮೂಡುತ್ತವೆಯೋ ಆಗ ಅಂಥ ಚರ್ಚೆಯನ್ನು ಬಹಿಷ್ಕರಿಸಬೇಕು.

ಇದು ನನ್ನ ಸಿದ್ಧಾಂತ. ವಿವೇಕ್ ಅಗ್ನಿಹೋತ್ರಿಗೆ ನೀಡಿದ ಆಹ್ವಾನದಂತೆಯೇ ಆ ಸಂವಾದಕ್ಕೆ ಒಬ್ಬ ಪಾಕಿಸ್ತಾನಿ ವಾಗ್ಮಿ
ಗೂ ಆಹ್ವಾನ ನೀಡಲಾಗಿತ್ತು. ಅಂದರೆ ಅದರ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗುತ್ತದೆ. ಜಾಗತಿಕ ಮಟ್ಟ ದಲ್ಲಿ ಕಾಶ್ಮೀರದ ವಿಷಯವನ್ನು ಚೌಕಟ್ಟು ಮೀರಿ ಪುನಃ ಚರ್ಚೆಗೆ ಎಳೆಯುವ ಹುನ್ನಾರ ಇದರ ಹಿಂದಿದೆ ಎಂಬು ದರಲ್ಲಿ ಯಾವ ಅನುಮಾನವೂ ಇಲ್ಲ. ದುಷ್ಪರಿಣಾಮ ಕಣ್ಣೆದುರೇ ಇರುವಾಗ ಅದನ್ನು ಮೈಮೇಲೆ ಎಳೆದು ಕೊಳ್ಳುವವರು ದಡ್ಡರು.

ನಾವು ಎಲ್ಲಾ ರೀತಿಯ ಸಂವಾದಗಳಿಗೂ ಮುಕ್ತರಾಗಿದ್ದೇವೆ. ಆದರೆ, ಸಂವಾದದ ವಿಷಯವೇನು ಎಂಬುದರ ಬಗ್ಗೆ
ನಮಗೆ ನಮ್ಮದೇ ಆದ ಆದ್ಯತೆಗಳೂ, ಆಯ್ಕೆಗಳೂ, ಸ್ಪಷ್ಟತೆ ಗಳೂ ಇವೆ. ಹೀಗಿರುವಾಗ ಆಕ್ಸ್ ಫರ್ಡ್ ಯೂನಿಯನ್
ನಂಥ ವಿದೇಶಿ ಸಂಸ್ಥೆಗಳು ಭಾರತದ ಕುರಿತು ಪೂರ್ವಗ್ರಹಪೀಡಿತ ವಿವಾದಾಸ್ಪದ ಚರ್ಚೆಗಳಿಗೆ ಕೈಹಾಕಿದರೆ ಅದನ್ನು
ಭಾರತ ಸರಕಾರ ಕೂಡ ಅಧಿಕೃತವಾಗಿಯೇ ವಿರೋಧಿಸಬೇಕು. ನಿಮಗೆ ಸಂವಾದಗಳನ್ನು ಏರ್ಪಡಿಸಲೇಬೇಕು
ಅಂತಾದರೆ ಕಾಶ್ಮೀರದಲ್ಲಿ ಈವರೆಗೆ 40000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಭಯೋತ್ಪಾದನೆಯ ಬಗ್ಗೆ ಸಂವಾದ ಏರ್ಪಡಿಸಿ. ಕಾಶ್ಮೀರದಲ್ಲಿ ಒಂದಿಡೀ ತಲೆಮಾರಿನ ಜನರು ಯೌವನದ ಸುಂದರ ದಿನಗಳನ್ನು ನೋಡದೆ ಯೇ ಬೆಳೆದು ಮುದುಕರಾಗಿದ್ದಾರೆ.

ಒಳ್ಳೆಯ ಬದುಕು, ಸುಂದರ ಜಗತ್ತು, ಉತ್ತಮ ಶಿಕ್ಷಣ, ಆಟದ ಮೈದಾನ, ಸಿನಿಮಾ, ಮನರಂಜನೆ ಹೀಗೆ ಏನೂ ಇಲ್ಲದೆ ಅವರು ತಮ್ಮ ಬದುಕಿನ ಕೊನೆಯ ಘಟ್ಟವನ್ನು ತಲುಪಿದ್ದಾರೆ. ಆ ತಲೆಮಾರಿನ ಜನರು ಜೀವನದುದ್ದಕ್ಕೂ ನೋಡಿದ್ದು ಬರೀ ಭಯೋತ್ಪಾದನೆ, ಕೇಳಿಸಿಕೊಂಡಿದ್ದು ಗುಂಡಿನ ಸದ್ದು. ಅವರ ಬಾಲ್ಯ, ಯೌವನ ಹಾಗೂ ಫಲಪ್ರದ ವರ್ಷಗಳನ್ನು ಭಯೋತ್ಪಾದನೆಯೆಂಬ ರಾಕ್ಷಸ ಕಿತ್ತುಕೊಂಡಿದ್ದಾನೆ.

ಭಯೋತ್ಪಾದನೆಯು ಅಲ್ಲಿನ ಹೆಣ್ಣುಮಕ್ಕಳನ್ನು ವಿಧವೆಯರನ್ನಾಗಿ ಮಾಡಿದೆ. ತಾಯಂದಿರಿಗೆ ಪುತ್ರವಿಯೋಗದ
ದುಃಖ ನೀಡಿದೆ. ಈ ವಿಷಯದ ಬಗ್ಗೆ ಏಕೆ ಆಕ್ಸ ಫರ್ಡ್ ಯೂನಿಯನ್ ಚರ್ಚಿಸಬಾರದು? ಅಥವಾ, ಚೀನಾದಲ್ಲಿ
ಸಂಕಷ್ಟಕ್ಕೆ ಸಿಲುಕಿರುವ ಹತ್ತು ಲಕ್ಷಕ್ಕೂ ಹೆಚ್ಚು ಉಯಿಗುರ್ ಮುಸ್ಲಿಮರ ಬಗ್ಗೆ ಚರ್ಚೆ ನಡೆಸಲಿ. ಏಕೆ ಬರೀ ಕಾಶ್ಮೀರದ ಕಡೆಯೇ ಕಣ್ಣು ನೆಟ್ಟು ಕುಳಿತುಕೊಳ್ಳಬೇಕು? ಬ್ರಿಟಿಷರು ಚೀನಾದ ಬಗ್ಗೆ ಮಾತನಾಡುವುದಿಲ್ಲ, ಏಕೆಂದರೆ ಅವರಿಗೆ ಡ್ರ್ಯಾಗನ್ ದೇಶದ ಜತೆಗೆ ಒಳ್ಳೆಯ ಹೊಂದಾಣಿಕೆಯಿದೆ.

ಆಕ್ಸ್ ಫರ್ಡ್ ಯೂನಿಯನ್ನಿನಲ್ಲೇ ಆಕ್ಸ್ ಫರ್ಡ್ ಚೀನಾ ಫೋರಂ ಎಂಬ ಇನ್ನೊಂದು ಘಟಕವೇ ಇದೆ. ಅವರು
ಏನಾದರೂ ಮಾಡಿಕೊಳ್ಳಲಿ, ನನಗೆ ಅದರ ಬಗ್ಗೆ ಚಿಂತೆಯಿಲ್ಲ. ಆದರೆ, ಭಾರತದ ಬಗ್ಗೆ ಎಲ್ಲಾ ದಿಕ್ಕುಗಳಿಂದಲೂ ನಡೆಸುವ ಷಡ್ಯಂತ್ರಗಳ ಬಗ್ಗೆ ನನಗೆ ಕಳವಳವಿದೆ. ಇದನ್ನು ನಾನು ವಿರೋಧಿಸಿಯೇ ತೀರುತ್ತೇನೆ.

ಇಂಥ ವಿಚಾರಗಳಲ್ಲಿ ನಮ್ಮ ವಿದೇಶಾಂಗ ಸಚಿವ ಎಸ್.ಜೈಶಂಕರ್ ಬಹಳ ಸ್ಪಷ್ಟವಾದ ನಿಲುವು ವ್ಯಕ್ತಪಡಿಸುತ್ತಾರೆ.
ನಾನು ಅವರನ್ನು ನೂರಕ್ಕೆ ನೂರು ಅನುಮೋದಿಸುತ್ತೇನೆ. ಬ್ರಿಟಿಷರಿಗೆ ಭಾರತದ ವಿಷಯದಲ್ಲಿ ಇನ್ನೂ ವಸಾಹತು ಶಾಹಿ ಮನಸ್ಥಿತಿಯೇ ಉಳಿದುಕೊಂಡಿದೆ. ಅದರಿಂದ ಹೊರಬರುವುದಕ್ಕೆ ಅವರಿಗೆ ಆಗುತ್ತಿಲ್ಲ ಎಂದು ಜೈಶಂಕರ್ ಹೇಳಿದ್ದಾರೆ. ಖಂಡಿತ ನಿಜ. ಶತಮಾನಗಳ ಕಾಲ ತಮ್ಮಿಂದ ಆಳಿಸಿಕೊಂಡ ದೇಶವು ಇಂದು ಆರ್ಥಿಕಾಭಿವೃದ್ಧಿಯಲ್ಲಿ ತಮ್ಮನ್ನೇ ಮೀರಿಸಿ ಮುಂದೆ ಹೋಗುತ್ತಿದೆ ಎಂಬುದನ್ನು ಅರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ.

ತಮ್ಮನ್ನು ಹಿಂದಿಕ್ಕಿ ಭಾರತವೀಗ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ದಾಪುಗಾಲು ಇಡುತ್ತಿದೆ ಎಂಬ ಸಂಗತಿ ಅವರನ್ನು ಕಂಗೆಡಿಸಿದೆ. ನಮ್ಮ ನೆರೆರಾಷ್ಟ್ರದವರಿಗೂ ಈ ವಿಷಯ ಜೀರ್ಣವಾಗುತ್ತಿಲ್ಲ. ಹೀಗಾಗಿ ಅವರು ಭಯೋತ್ಪಾದನೆ ಹಾಗೂ ಇನ್ನಿತರ ಷಡ್ಯಂತ್ರಗಳನ್ನು ರೂಪಿಸಿ ಭಾರತವನ್ನು ಹಿಂದಕ್ಕೆ ಎಳೆಯಲು
ಪ್ರಯತ್ನಿಸುತ್ತಾರೆ.

ಆದರೆ ಅವರಿಗೆಲ್ಲ ನಾನು ಹೇಳುವುದಿಷ್ಟೇ: ನೀವು ಬೇಕಾದ್ದು ಮಾಡಿ, ಎಷ್ಟೇ ಅಡೆತಡೆಗಳನ್ನು ಒಡ್ಡಿ, ಬೇಕಾದರೆ ನಮ್ಮೆದುರು ತಲೆಕೆಳಗಾಗಿ ನಿಲ್ಲಿ. ನಿಮ್ಮಿಂದ ಭಾರತದ ಅಭಿವೃದ್ಧಿಯ ಓಟವನ್ನು ತಡೆಯಲು ಸಾಧ್ಯವೇ ಇಲ್ಲ. ಇದನ್ನು ಬೇಕಾದರೆ ಬರೆದಿಟ್ಟುಕೊಳ್ಳಿ. ‘ಇತಿಹಾಸದ ಪುಟಗಳಲ್ಲಿ ದುರಂತಗಳು ಸಮಾಧಿಯಾಗಿವೆ ಇದು ಹೊಸ ಯುಗದ ಭಾರತ ನಾವು ನಿಲ್ಲುವುದಿಲ್ಲ, ತಲೆಬಾಗುವುದಿಲ್ಲ ನನ್ನ ಪ್ರೀತಿಯ ಶತ್ರುಗಳೇ, ನಾವೀಗ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತೇವೆ!’

(ಲೇಖಕರು ಹಿರಿಯ ಪತ್ರಿಕೋದ್ಯಮಿ)

ಇದನ್ನೂ ಓದಿ: Dr. Vijay Darda Column: ಇಷ್ಟಕ್ಕೂ ರಾಷ್ಟ್ರಪತಿಗಳ ಆಘಾತಕ್ಕೆ ಬಲವಾದ ಕಾರಣವಿದೆ !