Wednesday, 11th December 2024

ಮರುಭೂಮಿಯ ಶರಣ ಸಂಭ್ರಮ, ಮಹಾಮನೆಯ ಓಯಾಸಿಸ್‌

ವಿದೇಶವಾಸಿ

dhyapaa@gmail.com

ಕನ್ನಡ ಸಂಘ ಇಲ್ಲಿಯ ಎಲ್ಲ ಕನ್ನಡದ, ಕನ್ನಡಿಗರ ಸಂಘ ಸಂಸ್ಥೆಗಳ ಮಾತೃ ಸಂಸ್ಥೆಯಿದ್ದಂತೆ. ಒಂದು ವರ್ಷವೂ ತಪ್ಪದಂತೆ ಇಲ್ಲಿ ಬಸವ ಜಯಂತಿ ನಡೆಯುತ್ತದೆ. ಪ್ರತಿ ವರ್ಷವೂ ಇದು ನಡೆಯುತ್ತಿರುವುದು ಕನ್ನಡ ಸಂಘದ ಆಶ್ರಯದಲ್ಲಿ ಅಥವಾ ಪ್ರೋತ್ಸಾಹದಲ್ಲಿ. ಇದು ಹೀಗೆಯೇ ಆಗಬೇಕು ಎಂಬ ಇದಮಿತ್ಥಂ ಏನೂ ಇಲ್ಲ.

ಬಹ್ರೈನ್ ದೇಶದ ಕುರಿತು ನೀವು ಈಗಾಗಲೇ ಸಾಕಷ್ಟು ತಿಳಿದುಕೊಂಡಿರು ತ್ತೀರಿ. ಒಂದಾನೊಂದು ಕಾಲದಲ್ಲಿ ಇಲ್ಲಿ ದಿಲ್ಮನ್ ನಾಗರೀಕತೆ ಇತ್ತು ಎನ್ನುವುದನ್ನು ನೀವು ಓದಿರಬಹುದು. ಇಲ್ಲಿಯ ಮರುಭೂಮಿಯ ಮಧ್ಯದಲ್ಲಿ ಕಳೆದ ನಾಲ್ಕುನೂರ ನಲವತ್ತು ವರ್ಷದಿಂದ ಜೀವ ವೃಕ್ಷ (Tree of life) ವೊಂದು ನೀರಿಲ್ಲದೇ ಬದುಕುತ್ತಿದೆ ಎಂದು ನೀವು ತಿಳಿದಿರಬಹುದು. ಒಂದು ಕಾಲದಲ್ಲಿ ಬಹ್ರೈನ್ ಸಾಗರದ ಗರ್ಭದಲ್ಲಿ ದೊರೆಯುವ ಮುತ್ತುಗಳಿಗೆ ಹೆಸರಾಗಿತ್ತು ಎನ್ನುವುದಾಗಲಿ, ಇವತ್ತು ಜಗತ್ತಿಗೆ ಅತಿ ಅವಶ್ಯಕವೂ, ಜಗತ್ತನ್ನು ಆಳುತ್ತಿರುವ ಕಚ್ಚಾ ತೈಲ, ಕೊಲ್ಲಿ ರಾಷ್ಟ್ರಗಳಲ್ಲಿ ಮೊತ್ತಮೊದಲು ದೊರೆತದ್ದು ಬಹ್ರೈನ್‌ನಲ್ಲಿ ಎಂಬು ದಾಗಲಿ ನಿಮಗೆ ಗೊತ್ತಿರಬಹುದು.

ಇವೆಲ್ಲ ಬಹ್ರೈನ್ ದೇಶದ ಆಕರ್ಷಣೆಗೆ ಕಾರಣ ಎನ್ನುವುದು ನಿಜವಾದರೂ, ಇತ್ತೀಚಿನ ವರ್ಷಗಳಲ್ಲಿ ಬಹ್ರೈನ್‌ನ ಫಾರ್ಮುಲಾ ವನ್ ಕಾರ್ ರೇಸ್ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದರೆ, ಕರ್ನಾಟಕದ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದರ ಪರಿಣಾಮ ವಾಗಿ ಬಹ್ರೈನ್ ದೇಶದ ನಾಗರಿಕರೂ ಕೂಡ ಕನ್ನಡ, ಕರ್ನಾಟಕ, ಬೆಂಗಳೂರು, ಮಂಗಳೂರು ಎಂದರೆ ತಿರುಗಿ ನೋಡುವಂತಾಗಿದೆ.

ಒಂದನ್ನು ಮಾತ್ರ ಗಂಟಾಘೋಷವಾಗಿ ಹೇಳುತ್ತೇನೆ. ಸುಮಾರು ಇಪ್ಪತ್ತು ಸಾವಿರ ಕನ್ನಡಿಗರು ನೆಲೆಸಿರುವ ಯಾವುದೇ ಸ್ಥಳದಲ್ಲೂ ಇಷ್ಟೊಂದು ಕರ್ನಾಟಕದ, ಕನ್ನಡದ ಕಾರ್ಯಕ್ರಮಗಳು ನಡೆಯುವುದಿಲ್ಲ. ವರ್ಷದಾದ್ಯಂತ ಪ್ರತಿ ವಾರದ ಅಂತ್ಯ
ದಲ್ಲಿ ಒಂದೇ ಒಂದು ಕನ್ನಡ-ತುಳು, ಕೊಂಕಣಿ ಕಾರ್ಯಕ್ರಮ ಜರಗಲಿಲ್ಲವೆಂದರೆ ಅದು ಬಹ್ರೈನ್ ದೇಶವೇ ಅಲ್ಲ. ಈ ದೇಶದಲ್ಲಿ ಕನ್ನಡ ಸಂಘದ ಕಾರ್ಯ ಕ್ರಮಗಳಂತೂ ಇದ್ದೇ ಇದೆ.

ಅದರೊಂದಿಗೆ ಬಂಟರ, ಬಿಲ್ಲವರ, ವೀರಶೈವರ, ಮೊಗವೀರರ, ಕುಲಾಲರ, ಮುಸ್ಲಿಮರ, ಕ್ರಿಶ್ಚನ್ನರ ಸಂಘಟನೆಗಳೂ
ಸಕ್ರಿಯ ವಾಗಿವೆ. ಅವರೆಲ್ಲ ತಮ್ಮ ಸದಸ್ಯರಿಗಾಗಿ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಅದರ ಹೊರತಾಗಿ ನಾಟಕ, ಯಕ್ಷಗಾನ, ಭಜನೆ, ಭಜನೆ ಕುಣಿತ, ತುಳು ಉತ್ಸವ, ಕುಡ್ಲೋತ್ಸವ, ಕನ್ನಡ ಮತ್ತು ತುಳು ಚಲನಚಿತ್ರ
ಪ್ರದರ್ಶನ ಇತ್ಯಾದಿಗಳೂ ನಡೆಯುತ್ತಿರುತ್ತವೆ. ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಒಂದೊಂದು ಮೈಲುಗಲ್ಲು. ಏಕೆಂದರೆ ಇದು ನಡೆಯುವುದು ನಮ್ಮ ನಾಡಿನಿಂದ ಬರೋಬ್ಬರಿ ಮೂರು ಸಾವಿರದ ಇನ್ನೂರು ಕಿಲೋಮೀಟರ್ ದೂರದಲ್ಲಿ.
ಸಾಂಸ್ಕೃತಿಕವಾಗಿ ಬಿಡಿ, ಅಲಂಕಾರಕ್ಕೆ ಬೇಕಾಗುವ ಬಾಳೆ, ಮಾವು, ತೆಂಗು ಬೆಳೆಯದ ದೇಶದಲ್ಲಿ.

ಆದರೆ ಇಲ್ಲಿರುವ ಕನ್ನಡದ ಮನಸ್ಸುಗಳು ಈ ಎಲ್ಲ ಮೇರೆಯನ್ನೂ ಮೀರಿ ನಿಂತಿರುವುದರಿಂದ ಇದು ಸಾಧ್ಯವಾಗುತ್ತಿದೆ. ಮೊನ್ನೆಯೂ ಕೂಡ ಇಂಥ ಒಂದು ಅದ್ಭುತ ಕಾರ್ಯಕ್ರಮ ಜರಗಿತು. ಕಳೆದ ಏಪ್ರಿಲ್ ೨೩ನೇ ತಾರೀಖಿನಂದು ಬಹ್ರೈನ್ ನಲ್ಲಿ ಬಸವ ಸಮಿತಿ ಆಯೋಜಿಸಿದ ಬಸವ ಜಯಂತಿ. ಆ ಕಾರ್ಯಕ್ರಮಕ್ಕೆ ಶರಣ ಹೊಂಗಿರಣ ಎಂಬ ಸುಂದರವಾದ ಶೀರ್ಷಿಕೆ. ಅದೊಂದು ಬಂಧುತ್ವ, ಸದ್ಭಾವ, ಸಮತೆ, ವಿವೇಕದ ಕಿರಣ ಹೊರಸೂಸುವ ಮಾಲಿಕೆ. ಬಹ್ರೈನ್‌ನ ರಾಜಧಾನಿ ಮನಾಮಾದ ಪ್ರಮುಖ ಬೀದಿಯಲ್ಲಿರುವ ಇಂಡಿಯನ್ ಕ್ಲಬ್‌ನ ಸಭಾಂಗಣದಲ್ಲಿ ವಿಶ್ವಗುರು ಬಸವಣ್ಣನ ತತ್ತ್ವ-ಸಿದ್ಧಾಂತಗಳ ಮರುಕಳಿಕೆ.
ಪ್ರವೇಶದ್ವಾರದಲ್ಲಿ ಬಾಳೆಗಿಡದ ತೋರಣ ಕಟ್ಟಿ, ಪಕ್ಕಾ ಭಾರತೀಯ ವಾದ್ಯ ಮೇಳದೊಂದಿಗೆ, ಎರಡೂ ಕಡೆಗಳಲ್ಲಿ ಪೂರ್ಣ ಕುಂಭ ಹಿಡಿದು ನಿಂತ ಮಾತೆಯರು ತಾಯ್ನಾಡಿನಿಂದ ಬಂದ ಅತಿಥಿ-ಗಣ್ಯರನ್ನು ಸ್ವಾಗತಿಸಲು ಸಿದ್ಧರಾಗಿದ್ದರು.

ಬಂದ ಅತಿಥಿಗಳ ತಲೆಗೆ ಕೇಸರಿ ಪೇಟ ಕಟ್ಟಿ, ಎದೆಗೆ ಬ್ಯಾಜ್ ಹಾಕಿ ಸಭಾಂಗಣದೊಳಕ್ಕೆ ಕರೆತರಲಾಯಿತು ಎಂದರೆ ಅದು ತೀರಾ ಸಾಮಾನ್ಯ ಹೇಳಿಕೆ. ಬಹುತೇಕ ಎಲ್ಲ ಕನ್ನಡದ ಕಾರ್ಯಕ್ರಮಗಳೂ ಅಥವಾ ಬಹ್ರೈನ್ ನಲ್ಲಿರುವ ಬಹುತೇಕ ಭಾರತೀಯ ಸಾಂಸ್ಕೃತಿಕ ಸಂಘ ಸಂಸ್ಥೆಗಳು ಈ ಬಗೆಯ ರೀತಿ-ರಿವಾಜು ಇಟ್ಟುಕೊಂಡಿವೆ. ದಕ್ಷಿಣ ಭಾರತದ ರಾಜ್ಯಗಳಾದರೆ
ಚೆಂಡೆ, ಉತ್ತರದ್ದಾದರೆ ಡ್ರಮ್ಸ್, ಅಥವಾ ಡೋಲು ಅಷ್ಟೇ ವ್ಯತ್ಯಾಸ.

ಒಳಗೆ ಬರುತ್ತಿದ್ದಂತೆ ಜನರನ್ನು ಸ್ವಾಗತಿಸುವುದು ಸಭಾಂಗಣದ ಗೋಡೆಗೆ ಅಂಟಿಸಿದ ಬಸವಣ್ಣನ ವಚನಗಳು. ಹೂವಿನ ಮಾಲೆ, ಕಲಶಗಳಿಂದ ಅಲಂಕೃತಗೊಂಡ ವೇದಿಕೆ. ದೊಡ್ಡ ಕಟ್ಟಿಗೆಯ ಮಂಟಪದಲ್ಲಿ ಪುಷ್ಪಾಲಂಕಾರದೊಂದಿಗೆ ಆಸೀನವಾದ ಬಸವಣ್ಣನ ಭಾವಚಿತ್ರ. ವಿಶ್ವಕ್ಕೇ ಜ್ಞಾನದ ಜ್ಯೋತಿಯನ್ನು ಬೆಳಗಿದವನ ಮುಂದೆ ಇಟ್ಟ ದೀಪಸ್ತಂಭದಲ್ಲಿ ಸಾಂಕೇತಿಕವಾಗಿ ದೀಪ ಬೆಳಗಿ, ಹಣೆಗೆ ವಿಭೂತಿ ಬಳಿದು, ನಾಮಾಮೃತ ನುಡಿದು, ಭಜನೆ ಹಾಡುವ ಶರಣ ಶರಣೆಯರು. ಸಾಂಬ ಸದಾಶಿವ… ನಾಮದಿಂದ ಆರಂಭಿಸಿ, ಲೋಕಾ ಸಮಸ್ತಾ ಸುಖಿನೋ ಭವಂತು ಎಂಬ ಮಂತ್ರದ ನಂತರ ಆರತಿ ಬೆಳಗಿ ಅಂದಿನ ಕಾರ್ಯಕ್ರಮದ ಶುಭಾರಂಭ.

ಕಾರ್ಯಕ್ರಮದ ಆರಂಭದಲ್ಲಿ ನಮ್ಮ ಜನ್ಮಭೂಮಿ ಭಾರತ ಮತ್ತು ಕರ್ಮಭೂಮಿ ಬಹ್ರೈನ್‌ನ ರಾಷ್ಟ್ರಗೀತೆ ಹಾಡಿ ಗೌರವ ಸಮರ್ಪಣೆ (ಈ ವರ್ಷ ದೈವಾಧೀನರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೇದಿಕೆಗೂ ಅವರ ಹೆಸರನ್ನಿಟ್ಟು ಗೌರವ ಸೂಚಿಸ ಲಾಗಿತ್ತು) ಮತ್ತು ಯುಕ್ರೇನ್-ರಷ್ಯಾ ಯುದ್ಧದಲ್ಲಿ ಮಡಿದ ಯೋಧರಿಗೆ ಸಂತಾಪ ಸೂಚಿಸಲು ಒಂದು ನಿಮಿಷದ ಮೌನಾಚರಣೆ.
ಅತಿಥಿ ಕಲಾವಿದರಾಗಿ ಆಗಮಿಸಿದ್ದ ಶ್ರೀಮತಿ ಕಲಾವತಿ ಪುತ್ರನ್ ಮತ್ತು ಸ್ಥಳೀಯ ಪ್ರತಿಭೆ ನಾಗರಾಜ್ ಹಡಪದರಿಂದ ಪ್ರಾರ್ಥನೆ. ನಂತರ ಸಮಿತಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲು ಗಣೇಶ ಮತ್ತು ಶಿವ ಸ್ತುತಿಯ ನೃತ್ಯ. ನಂತರ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಅದ್ಭುತ ಚಿತ್ರಣ. ಜಾನಪದ, ವಚನಗಳಿಗೆ ಕುಣಿತ. ಇದೆಲ್ಲ ಒಂದು ಕಡೆಯಾದರೆ, ಶರಣ ದರ್ಶನದಲ್ಲಿ ಕಸ ಕಾಯಕದ ಸತ್ಯಕ್ಕ, ಹಡಪದ ಅಪ್ಪಣ್ಣ, ಗಂಗಾಂಬಿಕೆ, ಗೋರಕ್ಷಕನಾಥ, ಅಕ್ಕ ನಾಗಲಾಂಬಿಕೆಯರ ಪಾತ್ರಗಳು ವೇದಿಕೆಯಲ್ಲಿ ಬರುತ್ತಿದ್ದಂತೆ ಹಿಂದಿನಿಂದ ಅವರ ಪಾತ್ರದ ಪರಿಚಯ, ಅವರು ಬರೆದ ವಚನಗಳ ಸಂಖ್ಯೆ ಇತ್ಯಾದಿ ಮಾಹಿತಿ.

ಸುಮಾರು ಮೂವತ್ತರಿಂದ ನಲವತ್ತು ನಿಮಿಷ ಕಲೆಯ ದಾಸೋಹ. ವಿಶೇಷವೆಂದರೆ ಇದರಲ್ಲಿ ಭಾಗವಹಿಸಿದ ಬಹುತೇಕರು ಮಕ್ಕಳು. ನಂತರ ನಡೆದದ್ದು ಕಲಾವತಿ ಪುತ್ರನ್ ಅವರ ಮೃದು, ಬಿರುಸು, ಬಿಸುಪಿನ ಗಾಯನ. ಮುಕ್ಕಾಲರಿಂದ ಒಂದು ತಾಸು ಎಂದು ಅಂದಾಜಿಸಲಾಗಿದ್ದ ಹಾಡಿನ ಪ್ರವಾಹ ಮುಕ್ಕಾಲು ಗಂಟೆ ಹೆಚ್ಚುವರಿ ಯಾಗಿ ಮುಂದುವರಿಯಿತು. ಕುವೆಂಪು, ಬೇಂದ್ರೆ ಯವರ ಪದ್ಯಗಳು, ಜಾನಪದ, ವಚನಗಳನ್ನು ಹಾಡಿದ ಕಲಾವತಿಯವರು ಅಂದು ಎಲ್ಲರ ಆತ್ಮವನ್ನು ತಟ್ಟಿದ್ದರು. ಯಾಕೆ ಬಡದಾಡ್ತಿ ತಮ್ಮ, ಸೋರುತಿಹುದು ಮನೆಯ ಮಾಳಿಗಿ, ಬಾ ಇಲ್ಲಿ ಸಂಭವಿಸು, ಕುರುಡು ಕಾಂಚಾಣ… ಒಂದೇ?
ಎರಡೆ? ಅಂದು ಪ್ರೇಕ್ಷಕ ವರ್ಗದಲ್ಲಿದ್ದ ಕುಣಿಯುವ ಕಾಲುಗಳಿಗೆ ಕಡಿವಾಣವೇ ಇರಲಿಲ್ಲ. ಅದೊಂದು ಗಾನ ದಾಸೋಹ.

ಅದರ ನಡುವೆ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಶೋಧಕರೂ, ಭಾಷಣಕಾರರೂ, ಬರಹಗಾರರೂ ಆದ ಡಾ. ಜಿ.ಬಿ. ಹರೀಶ ಅವರ ವಾಗ್ಝರಿ. ಮುಕ್ಕಾಲು ಗಂಟೆ ನಿರರ್ಗಳ ವಿಚಾರಧಾರೆ. ಬಸವಣ್ಣನ ವ್ಯಕ್ತಿತ್ವ, ಮಹಾಮನೆಯ ನಿಜ ಅರ್ಥ, ವಚನಗಳ ವಿಶೇಷತೆ, ಎಲ್ಲದಕ್ಕೂ ವಿವರವಾದ ವಿಶ್ಲೇಷಣೆ . ಅದೊಂದು ಜ್ಞಾನ ದಾಸೋಹ. ಅದೇ ಸಭೆಯಲ್ಲಿ ಡಾ. ಹರೀಶ, ಶ್ರೀಮತಿ ಪುತ್ರನ್, ವಿಶೇಷ ಅತಿಥಿಯಾಗಿ ಬಂದಿದ್ದ ಧಾರಾವಾಹಿ ಮತ್ತು ಚಿತ್ರನಟಿ ಅಮೂಲ್ಯ ಗೌಡ ಮತ್ತು ಕನ್ನಡ ಸಂಘಕ್ಕೆ ಸಮಿತಿಯ ಅಧ್ಯಕ್ಷರಾದ ಬಸವರಾಜ್ ಧೂಳೆಹೊಳಿ, ಉಪಾಧ್ಯಕ್ಷರಾದ ಹೇಮಾ ಪಾಟೀಲ್, ಕಾರ್ಯದರ್ಶಿಯಾದ ಸೂರ್ಯ ಕಾಂತ್ ದೇಶಮುಖ್ ಅವರಿಂದ ಸನ್ಮಾನ.

ಹಾಗೆ ನೋಡಿದರೆ ಅಮೂಲ್ಯ ಅವರು ಬಂದದ್ದು ಮೊದಲ ದಿನ ಕನ್ನಡ ಸಂಘದ ಹಬ್ಬ ಸಂಭ್ರಮ ಕಾರ್ಯಕ್ರಮಕ್ಕೆ. ಆದರೆ ಅಲ್ಲಿ ಯಾವುದೇ ಭೇದ ಎಣಿಸದೇ ಅವರನ್ನೂ ತಮ್ಮವರೆಂದೆಣಿಸಿದ್ದು ಉದಾರತೆಯೋ ಅಥವಾ ಇವನಾರವ ಎಂದೆಣಿಸದೆ, ಇವ ನಮ್ಮವ ಎಂದೆಣಿಸಯ್ಯ ಎಂಬ ವಚನದ ಪಾಲನೆಯೋ? ಎಂದು ಕೇಳಿದರೆ, ಎರಡನೆಯದೇ ಹೆಚ್ಚು ಸೂಕ್ತ. ಬಹ್ರೈನ್‌ನ ಶರಣರು ಇದನ್ನು ರಕ್ತಗತವಾಗಿಸಿಕೊಂಡಿದ್ದಾರೆ. ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು.

ಮೊನ್ನೆ ನಡೆದದ್ದು ಹದಿನಾಲ್ಕನೆಯ ಬಸವ ಜಯಂತಿ. ಕನ್ನಡ ಸಂಘ ಇಲ್ಲಿಯ ಎಲ್ಲ ಕನ್ನಡದ, ಕನ್ನಡಿಗರ ಸಂಘ ಸಂಸ್ಥೆಗಳ ಮಾತೃ ಸಂಸ್ಥೆಯಿದ್ದಂತೆ. ಒಂದು ವರ್ಷವೂ ತಪ್ಪದಂತೆ ಇಲ್ಲಿ ಬಸವ ಜಯಂತಿ ನಡೆಯುತ್ತದೆ. ಪ್ರತಿ ವರ್ಷವೂ ಇದು ನಡೆಯು ತ್ತಿರುವುದು ಕನ್ನಡ ಸಂಘದ ಆಶ್ರಯದಲ್ಲಿ ಅಥವಾ ಪ್ರೋತ್ಸಾಹದಲ್ಲಿ. ಇದು ಹೀಗೆಯೇ ಆಗಬೇಕು ಎಂಬ ಇದಮಿತ್ಥಂ ಏನೂ ಇಲ್ಲ. ಈ ದೇಶದಲ್ಲಿ ಯಾವ ಸಂಸ್ಥೆಯ ಪ್ರೋತ್ಸಾಹ ಅಥವಾ ಆಶ್ರಯ ಇಲ್ಲದೆಯೂ ಈ ರೀತಿಯ ಕಾರ್ಯ ಕ್ರಮಗಳನ್ನು
ಮಾಡಬಹುದು. ಈ ವರ್ಷದ್ದೇ ಉದಾಹರಣೆ ಹೇಳಬೇಕೆಂದರೆ, ಕಾರ್ಯಕ್ರಮ ನಡೆದದ್ದು ಇಂಡಿಯನ್ ಕ್ಲಬ್‌ನಲ್ಲಿ.

ಅತಿಥಿಗಳಿಗೆ ವೀಸಾ ಮಾಡಿಕೊಟ್ಟದ್ದು ಟ್ರಾವೆಲ್ ಏಜನ್ಸಿಯವರು. ಅವರ ತಾಲೀಮು, ತಯಾರಿ ನಡೆದದ್ದೆಲ್ಲ ಬೇರೆ ಕಡೆಯೇ.
ಬಸವ ಜಯಂತಿ ಕನ್ನಡ ಸಂಘದ ಆಶ್ರಯದಲ್ಲಿಯೇ ಆಗಬೇಕು ಎಂಬ ಯಾವುದೇ ನಿಯಮ, ಕಟ್ಟುಕಟ್ಟಳೆ ಬಸವ ಸಮಿತಿಗೆ ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಆದರೂ, ನಾನು ಕಂಡಂತೆ, ಒಂದೇ ಒಂದು ಕಾರ್ಯಕ್ರಮವನ್ನೂ ಅವರು ಕನ್ನಡ ಸಂಘವನ್ನು ಬಿಟ್ಟು ಮಾಡಲಿಲ್ಲ. ಇದು ಒಂದು ಮಗು ತಾಯಿಗೆ ಕೊಡುವ ಗೌರವ ಮತ್ತು ತೋರಿಸುವ ಪ್ರೀತಿ. ತಾಯಿಯಿಂದ ನಮಗೆ ಏನೇ ಸಿಗಲಿ, ಬಿಡಲಿ, ತಾಯಿ ನಮ್ಮೊಂದಿಗಿರಬೇಕು ಎಂಬ ಭಾವ.

ಆ ಭಾವವೇ ಸಂಬಂಧಗಳನ್ನು ಇನ್ನಷ್ಟು ಹತ್ತಿರವಾಗುವಂತೆ ಬೆಸೆಯುವುದು, ನಮ್ಮನ್ನು ಬೆಳೆಸುವುದು. ಕಾರ್ಯಕ್ರಮದ ನಂತರ ನೆರೆದ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಜನರಿಗೆ ಮಹಾಪ್ರಸಾದ. ಅದು ಅನ್ನ ದಾಸೋಹ. ಇನ್ನೊಂದು ವಿಷಯ ಏನು ಗೊತ್ತಾ? ಬಸವ ಸಮಿತಿಯವರು ವರ್ಷಕ್ಕೆ ಒಂದೇ ಕಾರ್ಯಕ್ರಮ ಮಾಡುವುದಲ್ಲ. ಪ್ರತಿ ತಿಂಗಳೂ ಬಹ್ರೈನ್‌ನಲ್ಲಿ
ಮಹಾಮನೆ ನಡೆಯುತ್ತದೆ. ಬಸವ ಜಯಂತಿಯ ಮರುದಿನವೇ ಮಹಾಮನೆಯೂ ಇತ್ತು. ಅದು ನೂರ ಅರವತ್ತೊಂಬತ್ತನೆಯ ಮಹಾಮನೆ. ಪ್ರತಿ ಮಹಾಮನೆಯಲ್ಲಿಯೂ ಮಕ್ಕಳಿಗೆ ವಚನಗಳ ಪಾಠವಾಗುತ್ತದೆ.

ನಮ್ಮ ಸಂಸ್ಕೃತಿಯ ಪರಿಚಯವಾಗುತ್ತದೆ. ಇಲ್ಲಿಯ ಮಕ್ಕಳು ಟ್ವಿಂಕಲ್ ಟ್ವಿಂಕಲ್… ರೇನ್ ರೇನ್ ಗೋ ಅವೇ… ಹಾಡುತ್ತಾರೋ ಬಿಡುತ್ತಾರೋ, ವಚನಗಳನ್ನಂತೂ ಹೇಳುತ್ತಾರೆ. ಇನ್ನೊಂದು ಹೆಮ್ಮೆ ಏನು ಗೊತ್ತಾ? ಸಮಿತಿಯ ಎಲ್ಲ
ಕಾರ್ಯಕ್ರಮಗಳಲ್ಲೂ ಕನ್ನಡವೇ ಪ್ರಧಾನ. ಪ್ರತಿ ಮಹಾಮನೆಯಲ್ಲಿಯೂ ಅನ್ನ ದಾಸೋಹ ನಡೆಯುತ್ತದೆ. ಸದಸ್ಯರು ಮನೆಯಲ್ಲಿಯೇ ಅಡುಗೆ ಮಾಡಿ ತಂದು ಸ್ವತಃ ಬಡಿಸಲು ನಿಂತು ಉಣಿಸುತ್ತಾರೆ.

ಸಾಮಾನ್ಯವಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ, ಅದರಲ್ಲೂ ವಿದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಯು ವಾಗ ಹೋಟೆಲ್‌ನ ಊಟ ತರಿಸಿ ಬಡಿಸುತ್ತಾರೆ ಎಂಬ ಕಲ್ಪನೆ ಇದ್ದವರು ಬಹ್ರೈನ್ ಮಹಾಮನೆಗೆ ಬಂದು ನೋಡಬೇಕು. ಅಷ್ಟು ನಮ್ಮತನ ಇಲ್ಲಿ ತುಂಬಿಕೊಂಡಿದೆ. ಒಂದು ಕಾಲದಲ್ಲಿ ಅನೀಲ್ ಭಾಸಗಿ, ಶಿವಕುಮಾರ ಕಲ್ಲಯ್ಯನಮಠ, ಶಿವಾನಂದ ಪಾಟೀಲ್, ಪ್ರದೀಪ್ ಮಠದ್ ಮತ್ತು ಸತೀಶ್ ಕೊಲ್ಯ ಅವರು ಸೇರಿ, ಯು.ಎಚ್.ನೀಲಕಂಠ ಅವರ ಗೌರವಾಧ್ಯಕ್ಷತೆಯಲ್ಲಿ ಬಿತ್ತಿದ ಬಸವ ತತ್ತ್ವದ ಬೀಜ ಇಂದು ಮರವಾಗಿ ಬೆಳೆದಿದೆ.

ಐದರಲ್ಲಿ ಮೂರು ಜನ ಬಹ್ರೈನ್ ಬಿಟ್ಟು ಹೋಗಿದ್ದಾರೆ. ಉಳಿದ ಇಬ್ಬರೂ ಒಂದಲ್ಲ ಒಂದು ದಿನ ಬಹ್ರೈನ್ ಬಿಟ್ಟು ಹೋಗುವವರೇ ಎನ್ನುವುದು ಎಲ್ಲರೂ ತಿಳಿದ ವಿಚಾರವೇ. ಆದರೆ ಇವರೆಲ್ಲ ಮುಂದಿನ ತಲೆಮಾರಿಗೆ ತಮ್ಮ ವಿಚಾರಗಳನ್ನು ಧಾರೆ ಎರೆದಿದ್ದಾರೆ. ಮುಂದಿನ ಪೀಳಿಗೆ ಇದನ್ನೆಲ್ಲ ಮುಂದುವರಿಸಿಕೊಂಡು ಹೋದರೆ ಇವರೆಲ್ಲರ ಶ್ರಮ ಸಾರ್ಥಕ. ಹನ್ನೆರಡನೆಯ ಶತಮಾನದಲ್ಲಿ ಅನುಭವ ಮಂಟಪ ಕಟ್ಟಿದಾಗ ಎಲ್ಲ ಜಾತಿ ಧರ್ಮಗಳ ಜನರೂ ಅಲ್ಲಿ ಬಂದು ಸೇರುತ್ತಿದ್ದರಂತೆ. ಆ ಕಾಲದಲ್ಲಿ ಸುಮಾರು ಎರಡು ಲಕ್ಷ ಜನ ಶರಣರಿದ್ದರಂತೆ. ಆ ಶರಣರ ಸಂತಾನ ಇಂದು ಭಾರತಕ್ಕಷ್ಟೇ ಸೀಮಿತವಾಗಿರದೆ, ವಿಶ್ವದಾದ್ಯಂತ ಹಬ್ಬಿದೆ. ಅದು ಇನ್ನಷ್ಟು ವೃದ್ಧಿಸಲಿ. ನಮ್ಮ ಸಂಸ್ಕಾರ, ಸಂಸ್ಕೃತಿಯೂ ಬೆಳೆಯಲಿ, ಉಳಿಯಲಿ.