Friday, 13th December 2024

ಇತಿಹಾಸದ ಒಂದು ಮೈಲಿಗಲ್ಲು: ಪಿ.ವಿ.ನರಸಿಂಹರಾವ್‌

ಅವಲೋಕನ

ಗ.ನಾ.ಭಟ್ಟ

1991 ಜುಲೈ 24 ಭಾರತದ ಪಾಲಿಗೆ ಒಂದು ಹೊಸಯುಗ ಆರಂಭವಾಗಿತ್ತು. ಭಾರತದ ರಾಜಕೀಯ ಇತಿಹಾಸದಲ್ಲಿ ಅಲ್ಲಿಯ ತನಕ ವಿಜೃಂಭಿಸುತ್ತಿದ್ದ ಒಂದು ಕರಾಳ ಅಧ್ಯಾಯ ಕೊನೆ ಗೊಂಡಿತ್ತು. ಅದೊಂದು ಚಾರಿತ್ರಿಕ ಘಟನೆಯ ದಿನವಾಗಿ ಘೋಷಣೆ ಗೊಂಡಿತ್ತು. ಆ ಘಳಿಗೆ ಹೊಸಯುಪ್ರವರ್ತನೆಗೆ ನಾಂದಿ ಹಾಡಿತ್ತು. ಅದುವರೆಗೂ ವ್ಯಾಪಾರ – ವಹಿವಾಟುಗಳ ಮೇಲೆ ಜಾರಿಗೊಳಿಸಿದ್ದ ಕೇಂದ್ರ ಸರಕಾರದ ಕಪಿಮುಷ್ಟಿಯ ನೀತಿಯು ಕಾಲದಲ್ಲಿ ಲೀನವಾಗಿತ್ತು. ಅಲ್ಲಿಯವರೆಗೆ ಯಾವುದೇ ಉದ್ಯಮವನ್ನು ಆರಂಭಿಸುವುದಕ್ಕೆ ಮೊದಲು ಸರಕಾರದ ಮರ್ಜಿಗೆ ಕಾಯಬೇಕಾಗಿದ್ದ ಅನಿಷ್ಟ ಸಂಪ್ರದಾಯವೊಂದು ಕೊನೆ ಉಸಿರೆಳೆದಿತ್ತು.

ಮುಖ್ಯವಾಗಿ ಇವಕ್ಕೆಲ್ಲ ಮಾರಕವಾಗಿದ್ದ ಇಂಡಸ್ಟ್ರಿಯಲ್ ಪರ್ಮಿಟ್ ರಾಜ್ ಅಥವಾ ಲೈಸೆನ್ಸ್ ಪರ್ಮಿಟ್ ಕೋಟಾ ರಾಜ್ ರದ್ದುಗೊಂಡಿತ್ತು. ಹಾಗೆಯೇ ಕೇಂದ್ರ ಸರಕಾರವು ಅದುವರೆಗೂ ದಶಕಗಳ ಕಾಲ ಅಽಕಾರಿಶಾಹಿಗಳ ಮತ್ತು ಸಮಾಜವಾದದ ಕಪಿಮುಷ್ಟಿಯಲ್ಲಿ ಸಿಲುಕಿ ಕೊಂಡು ಹೈರಾಣಾಗಿದ್ದ ನಮ್ಮ ದೇಶದ ಉದ್ದಿಮೆಗಳಿಗೆ ಅತ್ಯಗತ್ಯ ವಾಗಿದ್ದ ವಿಮೋಚನೆಯನ್ನು ನೀಡಿತ್ತು ಮಾತ್ರವಲ್ಲ. ಆರ್ಥಿಕ ಸುಧಾರಣೆ ಮತ್ತು ಉದಾರೀಕರಣವನ್ನು ಅನುಷ್ಠಾನ ಗೊಳಿಸಿತ್ತು. ನಿಜಕ್ಕೂ ಇದೊಂದು ಐತಿಹಾಸಿಕ ಸಾಧನೆ. ಈ ಸಾಧನೆಯನ್ನು ಅನುಷ್ಠಾನಕ್ಕೆ ತಂದವರು ಬೇರೆ ಯಾರೂ ಅಲ್ಲ. ಅವರೇ ಬಹುಭಾಷಾ ಪ್ರವೀಣ, ಸಾಹಿತ್ಯ- ತತ್ತ್ವಜ್ಞಾನ – ರಾಜಕೀಯ – ಆರ್ಥಿಕ ಚಿಂತಕ, ಮಾತಿನ ಮಲ್ಲ, ತಿಳಿಹಾಸ್ಯದ ಮೋಡಿಗಾರ ಪಿ.ವಿ.ನರಸಿಂಹ ರಾವ್.

ಭಾರತ ಕಂಡ ಹದಿನೈದು ಪ್ರಧಾನಮಂತ್ರಿಗಳಲ್ಲಿ ಪಿ.ವಿಎನ್ ಅವರಿಗೆ ಪ್ರತ್ಯೇಕವಾದ, ವಿಶಿಷ್ಟವಾದ ಸ್ಥಾನವಿದೆ. ಅವರು ಧೀಮಂತರೂ,
ಮಹಾಮುತ್ಸದ್ಧಿಗಳೂ, ರಾಜತಾಂತ್ರಿಕ ತಜ್ಞರೂ ಆಗಿದ್ದರು. ಅವರು ದಕ್ಷಿಣ ಭಾರತ ದಿಂದ ಆಯ್ಕೆಯಾದ ಪ್ರಥಮ ಪ್ರಧಾನಮಂತ್ರಿ ಎಂಬ
ಅಗ್ಗಳಿಕೆಗೆ ಪಾತ್ರರಾದುದಷ್ಟೇ ಅಲ್ಲ, ಅವರೊಬ್ಬ ವಿದ್ವಾಂಸ ರಾಗಿದ್ದರು. ಅವರು ಹದಿಮೂರು ಭಾಷೆಗಳನ್ನು ಬಲ್ಲವ ರಾಗಿದ್ದರು. ಅವುಗಳಲ್ಲಿ
ಆರು ಭಾಷೆಗಳಲ್ಲಿ ಚೆನ್ನಾಗಿ ಓದುವ ಮತ್ತು ಬರೆಯುವ ಪ್ರಭುತ್ವವನ್ನು ಹೊಂದಿದ್ದರು. ಅದರಲ್ಲೂ ಅವರು ಹಿಂದಿಯನ್ನು ಲೀಲಾಜಾಲವಾಗಿ
ಆಡುತ್ತಿದ್ದರು. ಆ ಕಾರಣಕ್ಕಾಗಿಯೇ ಅವರನ್ನು ಉತ್ತರದವರು ಮತ್ತು ದಕ್ಷಿಣದವರು ಸಮಾನವಾಗಿ ಪ್ರೀತಿಸಿದರು. ಜತೆಗೆ ಅವರಿಗೆ ನೆಹರೂ – ಗಾಂಧಿ ಕುಟುಂಬನಿಷ್ಠ ಎಂಬ ಇನ್ನೊಂದು ಅರ್ಹತೆಯಿತ್ತು. ಆದರೆ ಅವರು ಅದರ ಪಡಿಯಚ್ಚಿನಲ್ಲಿ ಸಾಗಲೇ ಇಲ್ಲ. ತಮ್ಮ ಸ್ವಂತಿಕೆ, ಯೋಗ್ಯತೆ, ಅರ್ಹತೆಗಳಿಂದಲೇ ದೇಶದ ಮೆಚ್ಚುಗೆಗೆ ಪಾತ್ರರಾದರು.

ನೆಹರೂ ಕುಟುಂಬಕ್ಕೆ ಉಘೇ ಉಘೇ ಎಂದು ಹೇಳುತ್ತಾ, ಅವರನ್ನೇ ಪ್ರಶ್ನಾತೀತ ನಾಯಕರೆಂದು ಹಾಡಿ ಹೊಗಳುತ್ತಾ  ಗುಲಾಮಗಿರಿ ಯನ್ನು ಪ್ರದರ್ಶಿಸುವ ಪರಿಪಾಟ ಇಂದಿಗೂ ಕಾಂಗ್ರೆಸ್ಸಿನಲ್ಲಿ ಇದೆ. ಆದರೆ ಪಿವಿಎನ್ ಇದ್ಯಾವುದನ್ನೂ ಮಾಡದೆ ಸಮಯೋಚಿತವಾಗಿ ಕಾಂಗ್ರೆಸ್ಸಿನ ಸಾಧನೆಯನ್ನು ಯಥಾರ್ಥವಾಗಿ ಬಣ್ಣಿಸುತ್ತಾ, ಅಲ್ಲಿಯ ಲೋಪದೋಷ ಗಳನ್ನು ಸರಿಪಡಿಸುತ್ತಾ, ಆಗ ದೇಶಕ್ಕೆ ಅತ್ಯಗತ್ಯ ವಾಗಿದ್ದ ಆರ್ಥಿಕ ಉದಾರೀಕರಣವನ್ನು ಜಾರಿಗೆ ತಂದೇಬಿಟ್ಟರು. ಅವರು ಅದನ್ನು ಜಾರಿಗೆ ತರುವ ಮೊದಲು 1980ರ ದಶಕದಲ್ಲಿ ಈ ದೇಶದ ಚುಕ್ಕಾಣಿ ಹಿಡಿದಿದ್ದ ರಾಜೀವ್ ಗಾಂಧಿ ಮತ್ತು ವಿಶ್ವನಾಥ್ ಪ್ರತಾಪ್ ಸಿಂಗ್ ಇಬ್ಬರೂ ಉದ್ದಿಮೆಗಳ ವೇಗಕ್ಕೆ ಕೊಡಲಿಪ್ರಾಯವಾದ ಲೈಸೆನ್ಸ್ ಪರ್ಮಿಟ್ ರಾಜ್ ನ್ನು ಕೊನೆಗೊಳಿಸಬೇಕೆಂದು ಹೇಳುತ್ತಿದ್ದರೇ ವಿನಃ ಅದನ್ನು ಕೊನೆಗಾಣಿಸುವ ಧೈರ್ಯವನ್ನು ತೋರುತ್ತಿರಲಿಲ್ಲ. ಅದನ್ನು ತೋರಿದವರು ಪಿವಿಎನ್.

ಅಲ್ಲಿ ತನಕ ನೆಹರು ಮತ್ತು ಇಂದಿರಾ ಜಾರಿಗೆ ತಂದಿದ್ದ ಕೈಗಾರಿಕಾ ನೀತಿಯು ಯಾವ ಬದಲಾವಣೆಯೂ, ಪರಿಷ್ಕಾರವೂ ಇಲ್ಲದೆ ಸರಕಾರದ ಕಪಿಮುಷ್ಟಿಯಲ್ಲಿ ಉಸಿರುಗಟ್ಟಿ ಸಾಯತೊಡಗಿತ್ತು. ಉದ್ಯಮಿಯೊಬ್ಬ ಯಾವುದೇ ಉದ್ಯಮವನ್ನು ಆರಂಭಿಸುವುದಿದ್ದರೂ ಕೈಗಾರಿಕಾ ಸಚಿವಾಲಯದ ಜಂಟಿ ಕಾರ್ಯದರ್ಶಿಯ ಬಳಿ ಹೋಗಿ ಅವನ ಅನುಮತಿಗಾಗಿ ಅಂಡೆಲೆಯಬೇಕಿತ್ತು. ಇಂಥ ದುರವಸ್ಥೆಯನ್ನು ತಪ್ಪಿಸಿ ಕೈಗಾರಿಕಾ ನೀತಿಗೆ ಮುಕ್ತ ವಾತಾವರಣವನ್ನು ಕಲ್ಪಿಸಿ, ಆರ್ಥಿಕ ಉದಾರೀಕರಣವನ್ನು ಅನುಷ್ಠಾನಕ್ಕೆ ತಂದ ಕೀರ್ತಿ ನರಸಿಂಹ ರಾಯರಿಗೇ ಸಲ್ಲಬೇಕು.

ಪಿ. ವಿ. ನರಸಿಂಹರಾಯರು ಅಪ್ರತಿಮ ಮೇಧಾವಿಯೂ, ರಾಜತಂತ್ರಿಕ ನಿಪುಣರೂ, ಮಹಾ ವಿದ್ವಾಂಸರೂ ಆಗಿದ್ದರು. ಅವರು ರಾಜಕೀಯ ಜೀವನವನ್ನು ಆರಂಭಿಸಿದ್ದು ಆಗಿನ ಆಂಧ್ರಪ್ರದೇಶದ ತೆಲಂಗಾಣ ಸೀಮೆಗೆ ಸೇರಿದ ಕರೀಂನಗರ ಜಿಲ್ಲೆಯಲ್ಲಿ. ಆಗ ಅವರು ಅಲ್ಲಿಯ ಸ್ಥಳೀಯ ರಾಜಕಾರಣ, ದೇವಸ್ಥಾನದ ಆಡಳಿತ, ಶಾಲಾಶಿಕ್ಷಣ. ಭೂಸುಧಾರಣೆ ಮುಂತಾದುವುಗಳ ಬಗ್ಗೆ ಗಮನ ಹರಿಸುತ್ತಿದ್ದರು. ಹೊಸ ಹೊಸ ಸಂಗತಿಗಳನ್ನು ಬಹುಬೇಗೆನೆ ಕಲಿಯುತ್ತಿದ್ದರು. ಬಹುಭಾಷಾಪ್ರವಿಣರಾಗಿದ್ದ ಅವರು ಬಕಾಸುರ ಓದುಗರಾಗಿದ್ದರು. ಹೊರಜಗತ್ತಿನ ವಿದ್ಯಮಾನಗಳ ಬಗ್ಗೆ ಅವರಿಗೆ ಗಾಢವಾದ ಆಸಕ್ತಿಯಿತ್ತು.

ಆ ಕಾಣಕ್ಕಾಗಿಯೇ ಪಿವಿಎನ್ ಅವರಿಗೆ ವಿದೇಶಾಂಗ ಖಾತೆ ಅತ್ಯಂತ ಪ್ರಿಯವಾಗಿತ್ತು. ‘ಪಿವಿಎನ್ ಅವರಿಗೆ ಅಧಿಕಾರ ವರ್ಗದವರು
ಯಾವುದೇ ವಿಚಾರವನ್ನು ವಿವರಿಸುವುದು ಒಂದು ರೋಚಕ, ಚೇತೋಹಾರಿಯಾದ ಅನುಭವ ವಾಗಿತ್ತು’ಎಂದು How
P.V.Narasimha Rao made History ಕೃತಿಯ ಕತೃ ಸಂಜಯ ಬರೂ ಹೇಳುತ್ತಾರೆ. ಪಿವಿಎನ್ ಅವರಿಗೆ ಹೊಸಹೊಸ ಸಂಗತಿ ಗಳನ್ನು ಕಲಿಯಲು ಅದಮ್ಯವಾದ ಆಸಕ್ತಿಯಿರುವಂತೆ ಸಾಮಾನ್ಯವಾದ ಎಲ್ಲಾ ಸಂಗತಿಗಳ ಬಗ್ಗೆಯೂ ಅವರಿಗೆ ಅಪಾರವಾದ ತಿಳಿವಳಿಕೆ ಯಿತ್ತು. ಪಿವಿಎನ್ ಅವರು ಒಮ್ಮೆ ಉಜ್ಬೆಕಿಸ್ತಾನಕ್ಕೆ ಭೇಟಿ ನೀಡಲು ಹೋದಾಗ, ತಾಷ್ಕೆಂಟ್‌ನಲ್ಲಿ ಇಳಿದಾಗ ಅವರ ಕೈಯಲ್ಲಿ ಇಂಗ್ಲಿಷ್ – ಉಜ್ಬೆಕ್ ನಿಘಂಟು ಇದ್ದುದನ್ನು ರಾಜತಾಂತ್ರಿಕ ಅಽಕಾರಿಯೊಬ್ಬರ ಮಡದಿ ಈಗಲೂ ಸ್ಮರಿಸಿಕೊಳ್ಳುತ್ತಿರುವುದು ಪಿವಿಎನ್ ಆವರ ಜ್ಞಾನದಾಹಕ್ಕೆ ಸಾಕ್ಷಿಯಾಗಿದೆ.

ಇಂದು ನಾವು ಆರ್ಥಿಕ ಉದಾರೀರಣದ ಫಲವನ್ನು ಉಣ್ಣುತ್ತಿರುವುದಕ್ಕೆ ಮುಖ್ಯ ಕಾರಣ ಪಿ.ವಿ. ನರಸಿಂಹ ರಾವ್ ಅವರೇ. ಅಂದು ಆರ್ಥಿಕ ಸುಧಾರಣೆಗೆ ಅವರು ಇಟ್ಟ ದಿಟ್ಟ ಹೆಜ್ಜೆಯೇ ಇಂದು ನಾವು ನೋಡುತ್ತಿರುವ ಕೋಕ್ಸ್, ಪೆಪ್ಸಿಯಂಥ ಉದ್ದಿಮೆಗಳು ವಿಜೃಂಭಿಸುವುದಕ್ಕೆ ಕಾರಣವಾಗಿದೆ. ಜತೆಜತೆಗೆ ಉನ್ನತ ತಂತ್ರಜ್ಞಾನವೂ ಆಗಮಿಸಿತು. ಇಂದು ನಾವು ಬಳಸುವ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಎಟಿಎಂ, ಮೊಬೈಲ್, ಸೆಲ್ ಫೋನ್ ಎಲ್ಲದಕ್ಕೂ ಪಿವಿಎನ್ ಕಾರಣ.

1990ರವರೆಗೂ ಬಹುರಾಷ್ಟ್ರೀಯ ಕಂಪನಿಗಳೆಂದು ನಾವು ಗುರುತಿಸುತ್ತಿದ್ದುದು ಟಾಟಾ, ಬಿರ್ಲಾ ಮಾತ್ರ. ಈಗ ಹಾಗಿಲ್ಲ. ಇಂದು ರಿಲಯನ್ಸ್, ಇನೋಸಿಸ್, ವಿಪ್ರೋ, ಸತ್ಯಂ, ಸಿಪ್ಲಾ, ರ‍್ಯಾನ್‌ಬಾಕ್ಸಿ, ರೆಡ್ಡೀಸ್‌ಗಳಂಥ ಕಂಪನಿಗಳೊಂದಿಗೆ ಇತ್ತೀಚೆಗೆ ಹುಟ್ಟಿದ ಇನ್ನೂ ಅನೇಕ ಕಂಪನಿಗಳು ಬಹುರಾಷ್ಟ್ರೀಯ ಕಂಪನಿಗಳಾಗಿ ಕೆಲಸ ಮಾಡುತ್ತಿವೆ. ಇದಕ್ಕೆಲ್ಲ ಕಾರಣೀಪುರುಷ ಪಿವಿಎನ್.

ಈ ಎಲ್ಲಾ ಅಭ್ಯುದಯ, ಪ್ರಗತಿಗಳಿಗೆ ಅವರ ಮಂತ್ರಿಸಂಪುಟದಲ್ಲಿ ಇದ್ದ ಖ್ಯಾತ ಅರ್ಥಶಾಸಜ್ಞ, ಹಣಕಾಸು ಸಚಿವ ಡಾ.ಮನಮೋಹನ್
ಸಿಂಗ್ ಕಾರಣವಲ್ಲವೆ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತವೆ. ಹಾಗೆ ಅನೇಕರು ಕೇಳುತ್ತಲೂ ಇರುತ್ತಾರೆ. ಅವರ ಪ್ರಶ್ನೆಯಲ್ಲಿ
ಅಸಹಜವಾದುದೇನೂ ಇಲ್ಲ. ಆ ಅರ್ಥಸಚಿವನಿಂದಲೇ ದೇಶ ಪ್ರಗತಿಪರ ಹೆಜ್ಜೆ ಇಟ್ಟಿತು ಅನ್ನವುದರಲ್ಲೂ ಎರಡು ಮಾತಿಲ್ಲ. ಆದರೆ
ಅದರ ಇನ್ನೊಂದು ಮಗ್ಗುಲನ್ನು ನೋಡಬೇಕು. ಅದನ್ನು ಹೇಳಿದವರು ಪಿವಿಎನ್ ಅವರೇ. ಪಿವಿಎನ್ ನಿಧನರಾಗುವುದಕ್ಕೆ ಒಂದೆರಡು ವರ್ಷಗಳ ಮೊದಲು ಒಬ್ಬರು ಪಿವಿಎನ್ ಅವರ ಬಳಿ ‘1991-92ರಲ್ಲಿ ನೀವು ಜಾರಿಗೆ ತಂದ ಆರ್ಥಿಕ ಸುಧಾರಣೆಗಳಿಗೆ ನೀವು ಎಷ್ಟು ಶ್ರೇಯಸ್ಸನ್ನು ತೆಗೆದುಕೊಳ್ಳುತ್ತೀರಿ? ಮನಮೋಹನ್ ಸಿಂಗ್ ಅವರಿಗೆ ಎಷ್ಟು ಶೇಯಸ್ಸನ್ನು ಕೊಡುತ್ತೀರಿ?’ ಅಂತ ಕೇಳಿದರಂತೆ. ಅದಕ್ಕೆ ಪಿವಿಎನ್ ಅವರು ಮೊದಲು ಸಿಂಗ್ ಅವರ ನಿಷ್ಠೆ ಮತ್ತು ಕೊಡುಗೆಯನ್ನು ಶ್ಲಾಘಿಸಿ ಅವರಿಗೆ- ‘ನೋಡಿ, ಒಬ್ಬ ಹಣಕಾಸು ಸಚಿವ ಒಂದು ಸೊನ್ನೆ ಇದ್ದಂತೆ.

ಆ ಸೊನ್ನೆಯ ಮುಂದೆ ನೀವು ಯಾವ ಸಂಖ್ಯೆಗಳನ್ನು ಸೇರಿಸುತ್ತಾ ಹೋಗುತ್ತೀರಿ ಅನ್ನುವುದರ ಮೇಲೆ ಹಣಕಾಸು ಸಚಿವರ ಶಕ್ತಿ
ತೀರ್ಮಾನವಾಗುತ್ತದೆ. ಒಬ್ಬ ಹಣಕಾಸು ಸಚಿವನ ಯಶಸ್ಸು ಆತನಿಗೆ ಪ್ರಧಾನಮಂತ್ರಿಯು ಕೊಡುವ ಬೆಂಬಲವನ್ನು ಅವಲಂಬಿಸಿ ರುತ್ತದೆ.’  ಅಂದರಂತೆ. ಇದಕ್ಕೆ ಮತ್ತೆ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ. ಇದು ಪಿವಿ ನರಸಿಂಹರಾಯರ ಆಳವಾದ ಪಾಂಡಿತ್ಯ ಮತ್ತು ದಟ್ಟ ಜೀವನಾನುಭವ ಬೆಸೆದ ಮಾರ್ಮಿಕೋಕ್ತಿ.

ಈ ಆರ್ಥಿಕ ಉದಾರೀಕರಣವನ್ನು ಜಾರಿಗೆ ತರುವ ಮೊದಲು ಪಿವಿಎನ್ ಅವರು ಜಾಗತಿಕ ಆರ್ಥಿಕ ವಿದ್ಯಮಾನಗಳನ್ನೂ, ರಾಜಕೀಯ
ವಲಯದಲ್ಲಿ ಉಂಟಾಗುತ್ತಿರುವ ಏರುಪೇರುಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವರು ಜವಾಹರಲಾಲ್ ನೆಹರೂ ಅನುಸರಿಸುತ್ತಿದ್ದ
ಸೋವಿಯೆತ್ ಒಕ್ಕೂಟದ ಪರ ನೀತಿ ಮತ್ತು ಇಂದಿರಾ ಗಾಂಧಿ ಅಳವಡಿಸಿಕೊಂಡಿದ್ದ ಅಲಿಪ್ತನೀತಿಯ ಎರಕದಲ್ಲಿ ತಮ್ಮ ಚಿಂತನೆಗಳನ್ನು
ರೂಪಿಸಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಅವರು ಹಳೆಯ ತಲೆಮಾರಿನ ರಾಜತಾಂತ್ರಿಕ ಅಧಿಕಾರಿಗಳು ನೀಡುತ್ತಿದ್ದ ಸಲಹೆಗಳನ್ನು
ತಿರಸ್ಕರಿಸತೊಡಗಿದರು. ಅವರ ಜಾಗದಲ್ಲಿ ತರುಣರೂ, ದಕ್ಷರೂ ಆದ ಶ್ಯಾಮ್ ಶರಣ್, ರೊನೇನ್ ಸೇನ್, ರಾಮೂ ದಾಮೋದರನ್
ಮೊದಲಾದವರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಈ ಮಹನೀಯರು ಜಾಗತಿಕ ವಿದ್ಯಮಾನಗಳು ಮತ್ತು ಭಾರತದ ಹಿತಾಸಕ್ತಿಗಳ ವಿಚಾರವಾಗಿ ತುಂಬಾ ಪ್ರಾಯೋಗಿಕ ನಿಲುವುಗಳನ್ನು ತಳೆದಿದ್ದರು. ಇವರಿಗೆ ಪೂರಕವಾಗಿ ಪಿವಿಎನ್ ಅವರು ವಿದೇಶಾಂಗ ಸೇವಾ ವಲಯದಲ್ಲಿ ಅತ್ಯಂತ ದಕ್ಷ ಮತ್ತು ಪ್ರತಿಭಾವಂತ ಅಧಿಕಾರಿಯೆನಿಸಿಕೊಂಡಿದ್ದ ಜೆ.ಎನ್.ದೀಕ್ಷಿತ್ ಅವರನ್ನು ತಮ್ಮ ರಾಜತಾಂತ್ರಿಕ ಸಲಹೆಗಾರರನ್ನಾಗಿ ನೇಮಿಸಿಕೊಂಡರು.

ಈ ದೀಕ್ಷಿತ್ ಅವರು ಬಾಂಗ್ಲಾ, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಭಾರತದ ಹೈಕಮಿಷನರ್ ಆಗಿ ಕೆಲಸ ಮಾಡಿದವರು. ಅವರೊಬ್ಬ ಸಮರ್ಥ ರಾಜತಾಂತ್ರಿಕ ನಿಪುಣರಷ್ಟೇ ಆಗಿರದೇ ಘನವಿದ್ವಾಂಸರೂ ಆಗಿದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಅವರು ಮತ್ತು ಪಿವಿಎನ್ ಸೇರಿ ಭಾರತದ ವಿದೇಶಾಂಗ ನೀತಿಯ ದಿಕ್ಕುದೆಸೆಗಳನ್ಣೇ ಬದಲಿಸಿಬಿಟ್ಟರು. ಪ್ರತಿಭೆ ಮತ್ತು ಬುದ್ಧಿಮತ್ತೆಗಳ ಸಂಗಮ ಹೇಗಿರುತ್ತದೆಯೆನ್ನುವುದಕ್ಕೆ ಇದೊಂದು ಸುಂದರ ಉದಾಹರಣೆ.

ಪಿ.ವಿ.ನರಸಿಂಹರಾವ್ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಭಾರತ ಅತ್ಯಂತ ಸಂಕಷ್ಟದ ಸಮಯದಲ್ಲಿ ಇತ್ತು. ದೇಶವು ತಾನು ಮಾಡಿದ್ದ ವಿದೇಶೀ ಸಾಲವನ್ನು ಹಿಂದಿರುಗಿಸಲಾಗದೇ ಡಿಫಾಲ್ಟರ್ ಎಂಬ ಹಣೆಪಟ್ಟಿಯನ್ನು ಪಡೆಯುವುದರಲ್ಲಿ ಇತ್ತು. ಆಗ ತೈಲೋತ್ಪನ್ನಗಳ ಬೆಲೆಯೂ ಗಗನಕ್ಕೇರಿತ್ತು. ಅಂಥ ಕಠಿಣ ಸಂದರ್ಭದಲ್ಲಿ ಚಿನ್ನವನ್ನು ಮಾರಾಟ ಮಾಡದೇ ಬೇರೆ ದಾರಿಯೇ ಇರಲಿಲ್ಲ. ದೇಶದ ಈ ಅಧೋಗತಿಯಿಂದ ಪಾರಾಗುವುದಕ್ಕೆ ಪಿವಿಎನ್ ಅವರು ಮರುಖರೀದಿಯ ಅವಕಾಶವನ್ನು ಮುಕ್ತವಾಗಿಟ್ಟುಕೊಂಡು ೨೦೦ ಮಿಲಿಯನ್ ಡಾಲರ್ ಮೌಲ್ಯದ ೨೦ ಮೆಟ್ರಿಕ್ ಟನ್ ಚಿನ್ನವನ್ನು ಯೂನಿಯನ್ ಬ್ಯಾಂಕ್ ಆಫ್ ಸ್ವಿಸರ್ ಲ್ಯಾಂಡ್‌ಗೆ ಮಾರಾಟ ಮಾಡಿದರು. ಭಾರತ ಡಿಫಾಲ್ಟರ್ (ಸುಸ್ತಿದಾರ) ಎಂಬ ಅಪಕೀರ್ತಿ ಯನ್ನು ತಪ್ಪಿಸಿಕೊಳ್ಳುವುದಕ್ಕೆ ಚಿನ್ನವನ್ನು ಮಾರಾಟ ಮಾಡಿದ್ದು ಇದೇ ಮೊದಲ ಸಲ. ಇದರ ಜತೆಗೆ ಪಿವಿಎನ್ ಅವರು ಸ್ಪಷ್ಟ ಬಹುಮತವಿಲ್ಲದ ಮೈತ್ರಿ ಸರಕಾರವನ್ನು ನಡೆಸಿಕೊಂಡು ಹೋಗಬೇಕಿತ್ತು. ಇವೆಲ್ಲವನ್ನೂ ಸಮರ್ಥವಾಗಿಯೇ ಮುನ್ನಡೆಸಿದರು ಅವರು.

ಆರ್ಥಿಕ ದಿವಾಳಿತನ, ಮೈತ್ರಿ ಸರಕಾರದ ಜಂಜಡ, ಭ್ರಷ್ಟಾಚಾರದಿಂದ ನಲುಗಿಹೋದ ದೇಶದ ಹೀನಸ್ಥಿತಿ ಮುಂತಾದ ಅನಿಷ್ಟಗಳೊಡನೆ
ಅವರ ಅವಽಯಲ್ಲೇ 1992 ಡಿಸೆಂಬರ್ 6 ರಂದು ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ತಡೆಯದಿದ್ದುದಕ್ಕೆ ಪಿವಿಎನ್ ಅವರೇ
ಕಾರಣ ಎಂಬ ಆಪಾದನೆಯನ್ನು ಹೊರಿಸಲಾಯಿತು. ವಿಪರ್ಯಾಸವೆಂದರೆ 1986ರಲ್ಲಿ ಸ್ವತಃ ರಾಜೀವ್ ಗಾಂಧಿಯವರೇ ಬಾಬರೀ
ಮಸೀದಿಗೆ ಹಾಕಿದ್ದ ಬೀಗಮುದ್ರೆಯನ್ನು ಒಡೆಸಿ ಹಿಂದೂಗಳಿಗೆ ಪೂಜೆಯನ್ನು ಸಲ್ಲಿಸಲು ಅವಕಾಶ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಆ
ಪ್ರಕರಣವನ್ನು ವಿಶ್ಲೇಷಿಸುವುದಾದರೆ ಬಾಬರೀ ಮಸೀದಿ ಧ್ವಂಸಕ್ಕೆ ಕಾಂಗ್ರೆಸ್ಸೇ ಬೆಂಬಲವಾಗಿ ನಿಲ್ಲಬೇಕಿತ್ತು. ಪಿವಿಎನ್ ಪರೋಕ್ಷವಾಗಿ
ಹಾಗೆಯೇ ಮಾಡಿದರು ಎಂಬ ಆಭಿಪ್ರಾಯವೂ ಇದೆ. ಅದು ಬೇರೆ ವಿಚಾರ.

ಪಿ.ವಿ. ನರಸಿಂಹ ರಾಯರು ತಮ್ಮ ಆಡಳಿತಾವಽಯ ಕೊನೆಯಲ್ಲಿ 1995ರಲ್ಲಿ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸಲು ಯೋಜನೆಯನ್ನು
ಹಾಕಿಕೊಂಡಿದ್ದರು. ಹಾಗೇನಾದರೂ ಆಗಿದ್ದರೆ ಅವರ ಆಡಳಿತದ ಆರಂಭದಂತೆಯೇ ಕೊನೆಯೂ ಕೂಡಾ ಸುವರ್ಣಾಕ್ಷರಗಳಲ್ಲಿ
ಬರೆದಿಡುವಂಥದ್ದು ಆಗುತ್ತಿತ್ತು. ಆದರೆ ಅದು ಹಾಗಾಗಲಿಲ್ಲ. ಅದರ ಕೀರ್ತಿ ಬಿಜೆಪಿಗೆ ಹೋಯಿತು. ಪಿವಿಎನ್ ಅವರ ರಾಜಕೀಯ ಜೀವನ ಯಾತ್ರೆ ಬಹಳ ದೀರ್ಘವಾದುದು. ಅಷ್ಟೇ ಅಲ್ಲ. ಅತ್ಯಂತ ಶ್ರೀಮಂತವಾದುದು.

1971ರಿಂದ 1973ರವರೆಗೆ ಅವರು ಆಂಧ್ರದ ಮುಖ್ಯಮಂತ್ರಿಯಾಗಿದ್ದರು. 1975ರಲ್ಲಿ ಇಂದಿರಾ ಅವರು ಹೇರಿದ್ದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರೇ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ಪ್ರಧಾನಿಯಾಗುವುದಕ್ಕೆ ಮೊದಲು ಕೇಂದ್ರ ದಲ್ಲಿ ಗೃಹ, ರಕ್ಷಣೆ, ವಿದೇಶಾಂಗ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ – ಹೀಗೆ ನಾಲ್ಕು ಖಾತೆಗಳನ್ನು ನಿರ್ವಹಿಸಿದ ಅಪಾರ ಅನುಭವ ಅವರದಾಗಿತ್ತು. ದೇಶ ಅತ್ಯಂತ ಕಷ್ಟಕರ ಸಂದರ್ಭದಲ್ಲಿದ್ದಾಗ ಪಿವಿಎನ್ ಅವರು ದೇಶದ ಚುಕ್ಕಾಣಿ ಹಿಡಿದು ದೇಶದ ಪ್ರಗತಿಗಾಗಿ ಶ್ರಮಿಸಿದ್ದರು.

ಇಂಥ ಮಹಾನುಭಾವನನ್ನು ಕಾಂಗ್ರೆಸ್ಸು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿತು. ಅವರ ಹೆಸರನ್ನು ಅಳಿಸಿಹಾಕಿತು. 2004 ಡಿಸೆಂಬರ್
23ರಂದು ಅವರು ನಿಧನರಾದಾಗ ಅವರ ಪಾರ್ಥಿವ ಶರೀರವನ್ನು ಪಕ್ಷದ ಕಚೇರಿಯಲ್ಲಿ ಇಡಲೂ ಕೂಡಾ ಅವಕಾಶ ಕೊಡದೆ ಅವರಿಗೆ ಅವಮಾನ ಮಾಡಿತು. ಅದಕ್ಕೆ ಕಾರಣ ಸ್ಪಷ್ಟ. ಕಾಂಗ್ರೆಸ್ಸಿಲ್ಲಿ ಅದೂವರೆಗೂ ಇಲ್ಲದಿದ್ದ ಪಕ್ಷದ ಆಂತರಿಕ ಚುನಾವಣೆಯನ್ನು ಘೋಷಿಸಿ ನೆಹರೂ – ಗಾಂಧಿ ಕುಟುಂಬ ರಾಜಕಾರಣಕ್ಕೆ ಎಳ್ಳುನೀರು ಬಿಟ್ಟಿದ್ದರು. ವಂಶಪಾರಂಪರ್ಯ ಆಡಳಿತಕ್ಕೆ ಕೊನೆಯ ಮೊಳೆ ಹೊಡೆದಿದ್ದರು.