ಅಭಿಮತ
ಆದರ್ಶ್ ಶೆಟ್ಟಿ ಉಪ್ಪಿನಂಗಡಿ
ನಮ್ಮ ದೇಶದಲ್ಲಿ ವ್ಯಕ್ತಿಗಳ ಜೀವಮಾನ ಸಾಧನೆಗಾಗಿ ಸರಕಾರಗಳು, ವಿವಿಧ ಸಂಘ-ಸಂಸ್ಥೆಗಳು ನೂರಾರು ಪ್ರಶಸ್ತಿಗಳನ್ನು ಘೋಷಿಸುತ್ತವೆ. ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ, ಸಮಾಜಸೇವೆ, ಜನಪದ, ಕ್ರೀಡೆ, ವೈದ್ಯಕೀಯ, ಸಂಗೀತ, ಯಕ್ಷಗಾನ, ಶಾಸೀಯ ಸಂಗೀತ, ಪರಿಸರ, ಧಾರ್ಮಿಕ, ನಾಟಕ, ಕಲೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಲ್ಪಡುತ್ತದೆ.
ಪ್ರಶಸ್ತಿಗೆ ಭಾಜನರಾಗಲು ಬೇಕಾದ ಅರ್ಹತೆ, ಯೋಗ್ಯತೆ ಇದ್ದವರಿಗೆ ಮಾನದಂಡ ಅನ್ವಯವಾಗುವ ಸಾಧಕ ರಿಗೆ ಪ್ರತಿಷ್ಠಿತ ಪ್ರಶಸ್ತಿಗಳು ತಪ್ಪಿಹೋಗಲು ಪ್ರಮುಖ ಕಾರಣ ರಾಜಕೀಯ ಲಾಬಿ. ಇಂದು ರಾಜಕಾರಣ ನುಸುಳದ ಮತ್ತು ಕೈಯಾಡಿಸದ ಕ್ಷೇತ್ರಗಳೇ ಇಲ್ಲ. ಅದು ಕನ್ನಡ ರಾಜ್ಯೋತ್ಸವ, ಪದ್ಮಶ್ರೀ, ಪದ್ಮವಿಭೂಷಣ ಹೀಗೆ ಸರಕಾರದ ಮಟ್ಟದಲ್ಲಿ ದೊರಕುವ ಪ್ರಶಸ್ತಿಗಳಿಗೆ ಸಾವಿರಾರು ಅರ್ಜಿಗಳು ಬಂದಾಗ ಇಲ್ಲಿ ಪ್ರಭಾವ, ಶಿಫಾರಸು ಪತ್ರ, ಮಠಮಾನ್ಯಗಳ ಶಿಫಾರಸುಗಳು ಕೂಡ ಹಲವಾರು ಬಾರಿ ಕೆಲಸ ಮಾಡಿದ್ದಿದೆ. ಈ ಕಾರಣಕ್ಕಾಗಿ ಅರ್ಹರಿಗೆ ಪ್ರಶಸ್ತಿಗಳು ಬಂದಾಗಲೂ ಅಂದಷ್ಟು ಸಮಾಜಕ್ಕೆ ಸಂಶಯಗಳು ಹುಟ್ಟಿಕೊಳ್ಳುವ ಸನ್ನಿವೇಶಗಳು ಎದುರಾಗುತ್ತಿದೆ. ಈ ಕಾರಣಕ್ಕಾಗಿ ಪ್ರಶಸ್ತಿಗಳಿಗೆ ಅರ್ಜಿ ಹಾಕಲು ಸ್ವಾಭಿಮಾನಿಗಳು, ಜೀವಮಾನದ ಶ್ರೇಷ್ಠ ಸಾಧನೆಗೈದವರು, ಅರ್ಹತೆಯುಳ್ಳ ವರು, ಯೋಗ್ಯರು ಹಿಂದೇಟು ಹಾಕುವ ಹಂತಕ್ಕೆ ಬಂದು ತಲುಪಿದೆ ಈ ಪ್ರಶಸಿ ರಾಜಕೀಯ.
ಆದರೆ ಕೇಂದ್ರದ ನರೇಂದ್ರ ಮೋದಿ ಸರಕಾರದ ಆಡಳಿತಾವಽಯಲ್ಲಿ ಸಹಸ್ರಾರು ವೃಕ್ಷಗಳನ್ನು ನೆಟ್ಟು ಪೋಷಿ ಸಿದ ಸಾಲುಮರದ ತಿಮ್ಮಕ್ಕ, ತುಮಕೂರು ಜಿಯ ಪಾವಗಡ ತಾಲೂಕಿನ ಕೃಷ್ಣಾಪುರದ ಹತ್ತು ಸಾವಿರಕ್ಕೂ ಮಿಕ್ಕಿ ಹೆರಿಗೆ ಮಾಡಿಸಿದ ಸೂಲಗಿತ್ತಿ ನರಸಮ್ಮ ಎಂಬ ಸಾಮಾಜಿಕ ಕಾರ್ಯಕರ್ತೆಗೆ ಸೇರಿದಂತೆ ಕೆಲ ರಾಜ್ಯಗಳಲ್ಲಿ ತೆರೆಯಮರೆಯಲ್ಲಿ ಪ್ರಚಾರ, ಹಂಬಲವಿಲ್ಲದೆ ನಿಸ್ವಾರ್ಥವಾಗಿ ಸಮಾಜ ಸೇವೆಗೈದ ಸಾಧಕರನ್ನು ಗುಪ್ತವಾಗಿ ಸರ್ವೇ ನಡೆಸಿ ಕೇಂದ್ರ ಸರಕಾರವು ಗುರುತಿಸಿ ಗೌರವಿಸಿರುವುದು ಅತ್ಯುನ್ನತ ಪ್ರಶಸ್ತಿಗಳ ಮೇಲಿನ ಗೌರವವನ್ನು ಜನಸಾಮಾನ್ಯರಲ್ಲಿ ಹೆಚ್ಚಿಸಿದ್ದು ಸುಳ್ಳಲ್ಲ.
ಕಳೆದ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದವರೆಲ್ಲ ದೆಹಲಿಯ ವಿಮಾನ ಏರಲು ಖರ್ಚು ಮಾಡುವ ಶಕ್ತಿಯುಳ್ಳವರಾಗದಿರುವುದು ಮತ್ತು ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಅವರಲ್ಲಿ ಮೂಡಿದ ಸಾರ್ಥಕತೆಯ ಭಾವ, ಕಣ್ಣಂಚಿನಲ್ಲಿ ಹರಿದ ಕಣ್ಣೀರು ಸಾಕ್ಷೀಕರಿಸುವಂತಿತ್ತು. ಈ ಬಾರಿಯೂ ಕೇಂದ್ರದ ಪ್ರತಿಷ್ಠಿತ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮವಿಭೂಷಣಕ್ಕೆ ವೇದಿಕೆ ಸಜ್ಜುಗೊಂಡಿದೆ. ಈ ಬಾರಿ ವಿಭಿನ್ನವೆಂಬಂತೆ ಜನರ ಪದ್ಮ ಪ್ರಶಸ್ತಿಗೆ ಪ್ರೇರಣಾದಾಯಿ ಸಾಧಕರನ್ನು ನಾಮನಿರ್ದೇಶನ
ಮಾಡುವಂತೆ ಪ್ರಧಾನಮಂತ್ರಿಯವರು ಈಗಾಗಲೇ ಜನರಿಗೆ ಕರೆ ನೀಡಿದ್ದಾರೆ. ಪದ್ಮ ಅವಾರ್ಡ್ ವೆಬ್‌ಸೈಟ್ ಲಿಂಕ್ ತೆರೆದು ಜೀವಮಾನದ ತೆರೆಯಮರೆಯಲ್ಲಿ ಶ್ರೇಷ್ಠ ಸಾಧನೆಗೈದ, ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ, ಬಡಜನರ ಕಣ್ಣೀರೊರೆಸುವ ಶ್ರೇಷ್ಠ ವ್ಯಕ್ತಿಗಳ ಬಗ್ಗೆ 800 ಪದಗಳಿಗೆ ಮೀರದಂತೆ ಸಾಧನೆಯ ಭಾವಚಿತ್ರದೊಂದಿಗೆ ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ ಯಾರನ್ನು ಬೇಕಾದರೂ ನಾಮನಿರ್ದೇಶನ ಮಾಡಬಹುದಾಗಿದೆ.
ನಮ್ಮ ನಡುವೆಯೂ ಇಂತಹ ನೂರಾರು ಸಾಧಕರ ಚಿತ್ರಣಗಳು ಹಾದು ಹೋಗುವ ಸಂದರ್ಭದಲ್ಲಿ ಅರ್ಹ ಯೋಗ್ಯರನ್ನು ನಾಮ ನಿರ್ದೇಶನ ಮಾಡುವ ಮೂಲಕ ಪ್ರಶಸ್ತಿಯ ಗೌರವವನ್ನು ಮತ್ತೊಮ್ಮೆ ಉನ್ನತ ಮಟ್ಟಕ್ಕೇರಿಸಬೇಕಾದ ಮಹತ್ತರವಾದ ಹೊಣೆಗಾರಿಕೆ ನಮ್ಮ ಮೇಲಿದೆ.