Saturday, 23rd November 2024

ನೋವಿನಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ !

ಇದೇ ಅಂತರಂಗ ಸುದ್ದಿ

vbhat@me.com

‘you wont always love the workout, but you will always love the result’. . ನನ್ನ ಟ್ರೇನರ್ ಹೇಳುವ ಮಾತು ಸದಾ ನಿಜವೆಂದು
ಅನಿಸುತ್ತದೆ. ಮನಸ್ಸನ್ನು ಬಾಗಿಸುವುದು ಸುಲಭ. ದೇಹ ದಂಡಿಸುವುದು ವಿಪರೀತ ಕಷ್ಟ. ಕಾರಣ ದೇಹ ದಂಡನೆಗೊಳಗಾಗಲು, ಮನಸ್ಸು ಬಿಡುವುದಿಲ್ಲ. ಅದು ಹತ್ತಾರು ತಂತ್ರಗಳನ್ನು ಹೊಸೆಯುತ್ತದೆ. ಉಪಾಯಗಳನ್ನು ಹೇಳಿಕೊಡುತ್ತದೆ. ಕೊನೆಗೂ ದೇಹಕ್ಕೆ ಸ್ವಲ್ಪವೂ ಆಯಾಸವಾಗದಂತೆ ಪಾರಾಗುವ ಮಾರ್ಗವನ್ನು
ಹುಡುಕುತ್ತದೆ.

ನನಗೆ ಬಾಡಿ ಬಿಲ್ಡರ್‌ಗಳನ್ನು ಕಂಡರೆ ಆಗುತ್ತಿರಲಿಲ್ಲ. ನಾನು ಅವರಂತೆ ಇಲ್ಲ ಎಂಬ ಕಾರಣಕ್ಕೆ ಅಸೂಯೆಗಿಂತ ಹೆಚ್ಚಾಗಿ, ಅವರು ದೇಹಕ್ಕೆ ಕೊಡುವಷ್ಟು ಪ್ರಾಮುಖ್ಯ ಹಾಗೂ ಮಹತ್ವವನ್ನು ಬುದ್ಧಿಗೆ ಕೊಟ್ಟಿದ್ದರೆ, ಮಹಾನ್ ವ್ಯಕ್ತಿಗಳಾಗುತ್ತಿದ್ದರಲ್ಲ ಎಂದು ಅನಿಸುತ್ತಿತ್ತು. ದೇಹದಾರ್ಢ್ಯತೆಗೆ ಮಹತ್ವ ಕೊಟ್ಟರೆ, ಅದರಿಂದ ಅವರಿಗೆ ಮಾತ್ರ ಲಾಭವಾಗಬಹುದು, ಅದರಿಂದ ಉಳಿದವರಿಗೆ ಏನು ಪ್ರಯೋಜನ ಎಂದು ಅಂದುಕೊಳ್ಳುತ್ತಿದ್ದೆ. ಹೀಗಾಗಿ, ನಾನು ನನ್ನ ಜೀವನದಲ್ಲಿ ಗರಡಿಮನೆ, ವ್ಯಾಯಾಮ ಶಾಲೆ, ಜಿಮ್ ಕಡೆ ಸುಳಿದವನೇ ಅಲ್ಲ.

ಕಳೆದ ನಾಲ್ಕು ವರ್ಷಗಳ ಹಿಂದೆ, ಹಾಲಿವುಡ್ ನಟ, ಡ್ವಾಯ್ನ್ ಜಾನ್ಸನ್ ‘Enjoy the pain’ ಹಾಗೂ ‘Pain is pleasure ’ಎಂಬ ಎರಡು ಸಿಡಿಗಳನ್ನು ನೋಡಿದ ನಂತರ ಬಾಡಿ ಬಿಲ್ಡರ್‌ಗಳ ಬಗೆಗಿನ ನನ್ನ ಪೂರ್ವಗ್ರಹ ಗಳೆಲ್ಲ ನಿವಾರಣೆ ಯಾಯಿತು. ಪ್ರತಿ ಚಲನೆಯೂ ನೋವು ತರಿಸಿದರೂ, ಭಾರ ಎತ್ತುವಾಗ ನರನರಗಳು, ಸ್ನಾಯು ಸ್ನಾಯುಗಳು ಚೀರಿಕೊಂಡರೂ ಅದರ ಮಜಾ ಅನುಭವಿಸುವುದು ಹೇಗೆ, ಅತ್ಯಂತ ತೀವ್ರವಾದ ನೋವನ್ನು ನಲಿವಾಗಿ ಕಾಣುವುದು ಹೇಗೆಂದು ಜಾನ್ಸನ್ ಪ್ರಾತ್ಯಕ್ಷಿಕೆಗಳ ಮೂಲಕ ಹೇಳುತ್ತಾ ಹೋಗುತ್ತಾನೆ. ಒಂದು ಸಂದರ್ಭದಲ್ಲಿ ಅವನ ಟ್ರೇನರ್ ೪೮ ಕೆಜಿ ಭಾರದ ಎರಡು ಡಂಬೆಲ್ ಗಳನ್ನು ತಂದಿಡುತ್ತಾನೆ. ಅವುಗಳನ್ನು ೪೮ ಸಲ ಎತ್ತುವಂತೆ ಹೇಳುತ್ತಾನೆ. ಜಾನ್ಸನ್‌ಗೆ ಕೇವಲ ೩೭ ಸಲ ಎತ್ತಲು ಸಾಧ್ಯವಾಗುತ್ತದೆ.

ಆದರೆ ಟ್ರೇನರ್ ಕೇಳುವುದಿಲ್ಲ. ೫೪ ಕೆಜಿ ಭಾರದ ಎರಡು ಡಂಬೆಲ್‌ಗಳನ್ನು ಇಟ್ಟು, ೪೮ ಸಲ ಎತ್ತು ಎನ್ನುತ್ತಾನೆ. ‘ನನಗೆ ೪೮ ಕೆಜಿ ಭಾರದ ಡಂಬೆಲ್ ಎತ್ತಲು ಸಾಧ್ಯವಾಗಲಿಲ್ಲ. ಹೀಗಿರುವಾಗ ೫೪ ಕೆಜಿ ಭಾರವನ್ನು ಎತ್ತು ಎಂದರೆ ಹೇಗೆ? ಇಂಪಾಸಿಬಲ್’ ಅಂತಾನೆ ಜಾನ್ಸನ್. ಅದಕ್ಕೆ ಅವನ ಟ್ರೇನರ್, ‘ನೀನು ಎತ್ತುವುದು ಭಾರವನ್ನಲ್ಲ, ಮನಸ್ಸಿನೊಳಗಿನ ಹೊರೆಯನ್ನು. ೪೮ ಕೆಜಿ ಸುಲಭ. ಆದರೆ ೫೪ ಕೆಜಿ ಇನ್ನೂ ಸುಲಭ ಎಂಬ ಚಿತ್ರಣವನ್ನು ಮನಸ್ಸಿನಲ್ಲಿ ಛಾಪಿಸಿಕೊ. ಆಗ ಅದು ಅಷ್ಟೊಂದು ಭಾರ ಅನಿಸಲ್ಲ’ ಎಂದು ಹುರಿದುಂಬಿಸುತ್ತಾನೆ.

ಜಾನ್ಸನ್ ಹೂಂ ಎಂದು ತಲೆಯಾಡಿಸಿ, ೫೪ ಕೆಜಿ ಡಂಬೆಲ್ಸ್‌ನ್ನು ಎತ್ತುತ್ತಿದ್ದಂತೆ, ಮೈಯಲ್ಲಿನ ಸ್ನಾಯುಗಳೆಲ್ಲ ಚೀರಲಾರಂಭಿಸುತ್ತವೆ. ಹತ್ತಕ್ಕಿಂತ ಹೆಚ್ಚು ಸಲ ಎತ್ತುವುದು ಸಾಧ್ಯವೇ ಇಲ್ಲ ಎಂದು ಅವನಿಗೆ ಮನದಟ್ಟಾಗುತ್ತದೆ. ಬೆವರು ಪ್ರತೀ ರಂಧ್ರದಿಂದ ಕಿತ್ತು ಬರಲಾರಂಭಿಸುತ್ತದೆ. ಆಗ ಟ್ರೇನರ್ ಹುರಿದುಂಬಿ
ಸಲಾರಂಭಿಸುತ್ತಾನೆ – ‘ಜಾನ್ಸನ್, ನೋವನ್ನು ಅನುಭವಿಸು, ನೋವನ್ನು ಆನಂದಿಸು, ನೋವಿನಂಥ ಮಜಾ ಮತ್ತೊಂದಿಲ್ಲ. ನೋವು ಅದ್ಭುತ ಖುಷಿ ಕೊಡು ವಂಥದ್ದು. ನೋವಿನಲ್ಲಿ ಸುಖ ಕಾಣು. Enjoy the pain, Pain is the greatest pleasure’ ಎಂದು ಗಟ್ಟಿಯಾಗಿ ಹೇಳುತ್ತಾ ಹೋಗುತ್ತಾನೆ. ಜಾನ್ಸನ್‌ನ ಚಲನೆ ಜಾಸ್ತಿಯಾಗುತ್ತದೆ.

ಮೂವತ್ತಕ್ಕಿಂತ ಹೆಚ್ಚು ಸಲ ಎತ್ತಲು ಸಾಧ್ಯವೇ ಇಲ್ಲ ಎಂದುಕೊಂಡ ಅವನಲ್ಲಿ, ಅದೆಂಥದೋ ಹುಚ್ಚು ಹುರುಪು. ಎರಡೂ ಕೈಗಳು ಮೆಲ್ಲಗೆ ಅದರಲಾರಂಭಿಸುತ್ತವೆ. ‘ಜಾನ್ಸನ್, ನೋವಿನಲ್ಲಿ ಸುಖ ಸಿಗುವ ತನಕ ನಿಲ್ಲಿಸಬೇಡ’ ಎಂದು ಟ್ರೇನರ್ ಹುರಿದುಂಬಿಸುತ್ತಿದ್ದರೆ, ಜಾನ್ಸನ್ ಆ ವಿಪರೀತ ನೋವಿಗೆ ಹಾತೊರೆಯುವವನಂತೆ
ಜೋರಾಗಿ ಅವುಗಳನ್ನು ಎತ್ತಲಾರಂಭಿಸುತ್ತಾನೆ. ೪೮ ಎಂದು ಎಣಿಸುತ್ತಿದ್ದಂತೆ ಡಂಬೆಲ್ಸ್ ಚೆಲ್ಲುವ ಬದಲು, ೫೦ ಆಗುವ ತನಕ ಎತ್ತುತ್ತಲೇ ಇರುತ್ತಾನೆ.

‘೪೮ ಕೆಜಿ ಭಾರವನ್ನು ೪೮ ಸಲ ಎತ್ತಲಾಗದೇ ಕೈ ಚೆಲ್ಲಿದೆ. ಆದರೆ, ೫೪ಕೆಜಿ ಭಾರವನ್ನು ೫೦ ಸಲ ಹೇಗೆ ಎತ್ತಿದೆ?’ ಎಂದು ಟ್ರೇನರ್ ಕೇಳಿದ್ದಕ್ಕೆ ಜಾನ್ಸನ್, ‘ನೋವಿನಲ್ಲೂ ಎಂಥಾ ಆನಂದವಿದೆ ಎಂಬುದು ಗೊತ್ತೇ ಇರಲಿಲ್ಲ’ ಅಂತಾನೆ. ಬಾಡಿ ಬಿಲ್ಡಿಂಗ್ ಬಗ್ಗೆ ನನಗಿದ್ದ ಕಲ್ಪನೆಯೇ ಬದಲಾಗಿ ಹೋಯಿತು. ಈಗ ಯಾರಾದರೂ ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ಸ್ ಮಾಡಿದ ಬಾಡಿ ಬಿಲ್ಡರ್‌ಗಳನ್ನು ನೋಡಿದರೆ, ಇವರು ಅದೆಷ್ಟು ಮಜಾ, ಸಂತೋಷ ಅನುಭವಿಸಿದ್ದಿರಬಹುದು ಎಂದು ವಿಸ್ಮಯದಿಂದ ಚಕಿತನಾಗುತ್ತೇನೆ. ಮನಸ್ಸಿನೊಳಗೇ ಅವರಿಗೆ ಶಿರಸಾಷ್ಟಾಂಗ ನಮಸ್ಕಾರ ಹಾಕುತ್ತೇನೆ.

ಮೂರು ಮುದುಕರು
ಓಶೋ ಹೇಳಿದ ಈ ಮೂವರು ವೃದ್ಧರ ಕತೆಯನ್ನು ಕೇಳಿ. ಒಬ್ಬರಿಗೆ ಎಪ್ಪತ್ತು ವರ್ಷ, ಮತ್ತೊಬ್ಬರಿಗೆ ಎಂಬತ್ತು, ಮೂರನೆಯವರಿಗೆ ತೊಂಬತ್ತು ವರ್ಷ. ಮೂರೂ ಜನ ಸ್ನೇಹಿತರು ನಿವೃತ್ತರಾಗಿ, ಪಾರ್ಕಿನಲ್ಲಿ ಸುತ್ತಾಡಿ ಕಲ್ಲುಬೆಂಚಿನ ಮೇಲೆ ಕುಳಿತು ಲೋಕಾಭಿರಾಮವಾಗಿ ಹರಟುತ್ತಿದ್ದರು. ಅವರಲ್ಲೇ ಕಿರಿಯರಾದ ಎಪ್ಪತ್ತರ
ವೃದ್ಧರು ತುಂಬಾ ಬೇಸರಗೊಂಡವರಂತೆ ಇದ್ದರು.

ಎಂಬತ್ತರ ವೃದ್ಧರು ಅವರನ್ನು ಕುರಿತು, ‘ಏನು ವಿಷಯ? ತುಂಬಾ ಬೇಸರದಲ್ಲಿರುವಂತಿದೆಯಲ್ಲ?’ ಎಂದರು. ಆಗ ಆ ಎಪ್ಪತ್ತರ ವೃದ್ಧರು ಹೇಳಿದರು ‘ನನಗೆ ತುಂಬಾ ಅಪರಾಧಿ ಭಾವ ಕಾಡುತ್ತಿದೆ. ನಿಮ್ಮೊಡನೆ ಹಂಚಿಕೊಂಡರೆ ಸ್ವಲ್ಪ ಭಾರ ಕಡಿಮೆಯಾಗಬಹುದೇನೋ. ಒಂದು ಘಟನೆ ನಡೆಯಿತು.

ಒಂದು ಸುಂದರವಾದ ಹೆಣ್ಣು ನಮ್ಮ ಮನೆಗೆ ಅತಿಥಿಯಾಗಿ ಬಂದಿದ್ದಳು. ಆಕೆ ಸ್ನಾನ ಮಾಡುತ್ತಿರುವಾಗ ಸ್ನಾನದ ಮನೆಯ ಕಿಂಡಿಯೊಂದರಿಂದ ನಾನು
ನೋಡುತ್ತಾ ನಮ್ಮ ತಾಯಿಯ ಕೈಗೆ ಸಿಕ್ಕಿಬಿದ್ದೆ’ . ಅವರ ಮಾತು ಕೇಳಿ ವಯಸ್ಸಾದ ಇನ್ನಿಬ್ಬರು ಮಿತ್ರರು ಬಾಯಿ ತುಂಬಾ ನಕ್ಕರು. ನಂತರ ‘ನೀನೊಬ್ಬ ಮೂರ್ಖ, ಎಲ್ಲರೂ ಚಿಕ್ಕಂದನಲ್ಲಿ ಹೀಗೆಯೇ ಮಾಡಿರುತ್ತಾರೆ’ ಎಂದರು. ಆಗ ಅವರು ‘ಇದು ಚಿಕ್ಕ ವಯಸ್ಸಿನಲ್ಲಿ ಆಗಿದ್ದಲ್ಲ. ಇಂದು ಬೆಳಗ್ಗೆ ನಡೆದ ಘಟನೆ’ ಎಂದರು.

ಎರಡನೆಯವರು ಆಗ ‘ಹಾಗಿದ್ದರೆ ಅದು ಗಂಭೀರವಾದುದೇ. ಹೀಗೆ ನನಗೂ ಕಳೆದ ಮೂರು ದಿನಗಳಿಂದ ಆಗುತ್ತಿರುವ ಅನುಭವ ಹೇಳುತ್ತೇನೆ ಕೇಳು. ಅದನ್ನು ನನ್ನ ಹೃದಯದಲ್ಲೇ ಭಾರವಾದ ಬಂಡೆಯಂತೆ ಇಟ್ಟುಕೊಂಡಿದ್ದೇನೆ. ಕಳೆದ ಮೂರು ದಿನಗಳಿಂದ ನನ್ನ ಪತ್ನಿ ಪ್ರಣಯದಾಟಕ್ಕೆ ನಿರಾಕರಿಸುತ್ತಲೇ ಇದ್ದಾಳೆ’ ಎಂದರು.

ಆಗ ಮೊದಲನೆಯವರು ‘ಇದು ನಿಜಕ್ಕೂ ಕೆಟ್ಟ ಸಂಗತಿಯೇ’ ಎಂದರು. ಆಗ ತೊಂಬತ್ತರ ವೃದ್ಧರು ಜೋರಾಗಿ ನಗುತ್ತಾ ‘ಮೊದಲು ಅವನ ಪ್ರಣಯ ದಾಟ ಏನು ಎನ್ನುವುದನ್ನು ಕೇಳು’ ಎಂದರು. ಹಾಗೆ ಕೇಳಿದಾಗ ಎರಡನೆಯವರು, ಸವಿಸ್ತಾರವಾಗಿ ‘ನಾನು ಅವಳಿಂದ ಹೆಚ್ಚೇನೂ ಕೇಳುವುದಿಲ್ಲ. ನನ್ನನ್ನು ಹೆಚ್ಚು ಮುಜುಗರಕ್ಕೆ ಸಿಲುಕಿಸಬೇಡಿ. ಅದೊಂದು ಸರಳವಾದ ಕ್ರಿಯೆ. ನನ್ನ ಹೆಂಡತಿಯ ಕೈ ಹಿಡಿದು, ಮೂರು ಬಾರಿ ಅಮುಕುತ್ತೇನೆ. ನಂತರ ಅವಳೂ ನಿದ್ದೆ ಹೋಗುತ್ತಾಳೆ. ನಾನೂ ನಿದ್ದೆಗೆ ಜಾರಿಕೊಳ್ಳುತ್ತೇನೆ. ಆದರೆ ಕಳೆದ ಮೂರು ದಿನಗಳಿಂದ, ನಾನು ಕೈ ಹಿಡಿಯಲು ಹೋದಾಗೆಲ್ಲ, ಅವಳು ‘ಇವತ್ತು ಬೇಡ, ಇಂದು ಬೇಡ! ನನಗೆ ನಾಚಿಕೆಯಾಗುತ್ತಿದೆ. ನಿಮಗೂ ವಯಸ್ಸಾಯಿತು, ಇಂದು ಬೇಡ’ ಎಂದು ಬಿಡು ತ್ತಾಳೆ. ಹೀಗೆ ಕಳೆದ ಮೂರು ದಿನಗಳಿಂದ ಆಕೆಯೊಂದಿಗೆ ಪ್ರಣಯದಾಟದಲ್ಲಿ ತೊಡಗುವುದು ನನಗೆ ಸಾಧ್ಯವಾಗಿಲ್ಲ’ ಎಂದರು.

ಆಗ ತೊಂಬತ್ತರ ವೃದ್ಧರು ಹೇಳಿದರು, ‘ಇದೆಲ್ಲಾ ಸಮಸ್ಯೆಯೇ ಅಲ್ಲ. ನನಗೆ ಆಗುತ್ತಿರುವುದನ್ನು ನಿಮ್ಮೆದುರು ನಾನು ಹೇಳಿಕೊಳ್ಳಲೇಬೇಕು. ನಿಮಗಿನ್ನೂ ಚಿಕ್ಕ ವಯಸ್ಸು. ಆದ್ದರಿಂದ ಈ ಅನುಭವ ನಿಮಗೆ ಖಂಡಿತಾ ಮುಂದೆ ಉಪಯೋಗ ವಾಗುತ್ತದೆ. ಕಳೆದ ರಾತ್ರಿ, ಬಹುತೇಕ ರಾತ್ರಿ ಕಳೆದು ಬೆಳಗಾಗುವ ಸಮಯದಲ್ಲಿ ನಾನು ನನ್ನ ಪತ್ನಿಯೊಂದಿಗೆ ರತಿಕ್ರೀಡೆ ಆರಂಭಿಸಿದೆ. ಕೂಡಲೇ ಅವಳು, ‘ಅಯ್ಯೋ ಮೂರ್ಖ! ಇದೇನು ಮಾಡುತ್ತಿರುವೆ?’ ಎಂದು ರೇಗಿದಳು. ನಾನೂ ‘ನನಗೆ ಬೇಕೆನಿಸಿತು, ಆದ್ದರಿಂದ ನಿನ್ನೊಡನೆಯೇ ಪ್ರಣಯ ಚೇಷ್ಟೆ ಆರಂಭಿಸಿದೆ’ ಎಂದೆ.

ಅವಳು ‘ಇದು ಈ ರಾತ್ರಿಯಲ್ಲಿ ಮೂರನೇ ಸಲ. ನೀನೂ ನಿದ್ದೆ ಮಾಡುವುದಿಲ್ಲ, ನನಗೂ ನಿದ್ರಿಸಲು ಬಿಡುವುದಿಲ್ಲ. ರಾತ್ರಿಯೆಲ್ಲಾ ಹೀಗೆ ರತಿಕ್ರೀಡೆಯಾಡುತ್ತಿದ್ದರೆ ಹೇಗೆ’ ಎಂದು ಕೂಗಾಡಿದಳು. ಈಗ ನನಗನ್ನಿಸುತ್ತಿದೆ ‘ನನಗೆ ಅರಳು ಮರುಳು ಉಂಟಾಗಿರಬೇಕು. ನೆನಪಿನ ಶಕ್ತಿ ಕ್ಷೀಣಿಸುತ್ತಿದೆ. ನಿಮ್ಮ ಸಮಸ್ಯೆಗಳು ಇದರ
ಮುಂದೆ ಏನೂ ಅಲ್ಲ. ನನ್ನ ನೆನಪಿನ ಶಕ್ತಿಯೇ ಹೊರಟು ಹೋಗುತ್ತಿದೆ’ ಎಂದರು.

ಯಾವ ಪಶ್ನೆ ಕೇಳಲಿ?
ಓಶೋ ಹೆಸರಲ್ಲಿ ಸುಮಾರು ಆರುನೂರು ಪುಸ್ತಕಗಳಿವೆ. ಇವೆಲ್ಲ ವನ್ನೂ ಅವರು ಬರೆದಿದ್ದಲ್ಲ. ಅವರ ಭಾಷಣ, ಪ್ರಶ್ನೋತ್ತರ ಗಳನ್ನು ಸೇರಿಸಿ ಅಷ್ಟು ಪುಸ್ತಕಗಳನ್ನು ಹೊರತರಲಾಗಿದೆ. ಇನ್ನೂ ನಾನೂರು ಪುಸ್ತಕಗಳಿಗಾಗುವಷ್ಟು ಓಶೋ ಮಾತಾಡಿದ್ದಾರೆ. ಅವರ ಭಾಷಣಗಳಿಗೆ ಅಕ್ಷರರೂಪ ಕೊಡುವ ಕೆಲಸ ನಿರಂತರವಾಗಿ
ನಡೆಯುತ್ತಿದೆ. ಪ್ರತಿದಿನ ಓಶೋ ಎರಡು ಗಂಟೆಗಳ ಕಾಲ ಮಾತಾಡುತ್ತಿದ್ದರು. ಶಿಷ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಒಮ್ಮೆ ಓಶೋ ಶಿಷ್ಯರೊಂದಿಗೆ ಮಾತಾಡುವಾಗ ಒಬ್ಬ ಕೇಳಿದ-‘ನಿಮಗೆ ಏನಾದರೂ ಪ್ರಶ್ನೆ ಕೇಳಬೇಕೆಂದು ಒಂದು ವರ್ಷದಿಂದ ಯೋಚಿಸುತ್ತಿದ್ದೇನೆ. ಏನೂ ಹೊಳೆಯುತ್ತಿಲ್ಲ. ಯಾವ ಪ್ರಶ್ನೆ ಕೇಳಲಿ?’ ಅದಕ್ಕೆ ಓಶೋ ಹೇಳಿದರು-‘ಭೇಷ್! ದಯವಿಟ್ಟು ಏನೂ ಕೇಳಬೇಡ. ಈಗ ಕೇಳಿದ್ದೇ ಸಾಕು. ಒಂದೋ ನೀನು ರಾಜಕಾರಣಿಯಾಗುತ್ತೀಯಾ ಇಲ್ಲವೇ ಝೆನ್ ಗುರುವಾಗುತ್ತೀಯಾ’.

ಸೀರೆ ಉಡಿಸುವುದು ಹೇಗೆ? 
ಈ ಘಟನೆ ನಡೆದದ್ದು ೧೯೪೮ರಲ್ಲಿ. ಭಾರತದ ಪ್ರಮುಖ ವ್ಯಕ್ತಿ ಯೊಬ್ಬರು ಲಂಡನ್‌ನಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಅಲ್ಲಿಯೇ ನೆರವೇರಿಸಲು ನಿರ್ಧರಿಸಲಾಯಿತು. ನಿಧನ ರಾದವರು ಮಂಡಿ ಪ್ರಾಂತದ ಮಹಾರಾಣಿ. ಹೀಗಾಗಿ ಸಕಲ ರಾಜಮರ್ಯಾದೆಗಳೊಂದಿಗೆ ಅಂತಿಮ ಸಂಸ್ಕಾರ ಮಾಡಬೇಕೆಂದು
ಸೂಚಿಸಲಾಯಿತು. ಈ ಜವಾಬ್ದಾರಿಯನ್ನು ‘ಕೆನ್ಯಾನ್ ಅಂಡರ್ ಟೇಕರ‍್ಸ್’ ಎಂಬ ಸಂಸ್ಥೆಗೆ ವಹಿಸಲಾಯ್ತು. ಆ ಸಂಸ್ಥೆ ಅಂತ್ಯಕ್ರಿಯೆ ನೆರವೇರಿಸುವುದರಲ್ಲಿ ಪ್ರಸಿದ್ಧ.
ಮಹಾರಾಣಿ ತನ್ನ ಉಯಿಲಿನಲ್ಲಿ ಅಂತ್ಯಸಂಸ್ಕಾರದ ಸಮಯ ದಲ್ಲಿ ಕಳೇಬರಕ್ಕೆ ಮದುವೆಯಲ್ಲಿ ಧರಿಸಿದ ಸೀರೆಯನ್ನು ಉಡಿಸಬೇಕೆಂದು ಬರೆದಿದ್ದಳು. ಆ ಸೀರೆಯೇನೋ ಸಿಕ್ಕಿತು. ಆದರೆ ಪಾರ್ಥಿವ ಶರೀರಕ್ಕೆ ಹೇಗೆ ಸೀರೆ ಉಡಿಸುವುದು ಎಂಬ ಪ್ರಶ್ನೆಎದುರಾಯಿತು. ಆ ದಿನಗಳಲ್ಲಿ ಲಂಡನ್‌ನಲ್ಲಿ ಸೀರೆ ಉಡುವ
ವರನ್ನು ಎಲ್ಲಿ ಹುಡುಕುವುದು? ಕೆನ್ಯಾನ್ ಅಂಡರ್ ಟೇಕರ‍್ಸ್ ಸಂಸ್ಥೆಯ ಅಧಿಕಾರಿಗಳು ಬಹಳ ತಲೆಕೆಡಿಸಿಕೊಂಡರು. ಆ ನಂತರ ಲಂಡನ್‌ನಲ್ಲಿರುವ ಭಾರತೀಯ ಹೈ ಕಮಿಶನ್ ಕಚೇರಿಯ ಅಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಿದರು. ಆ ದಿನಗಳಲ್ಲಿ ಖುಷವಂತ ಸಿಂಗ್ ಭಾರತೀಯ ಹೈ ಕಮಿಶನ್ ಕಚೇರಿಯಲ್ಲಿ
ಪ್ರೆಸ್ ಆ?ಸರ್ ಆಗಿ ಕೆಲಸ ಮಾಡುತ್ತಿದ್ದರು.

ಅಲ್ಲದೇ, ಪಬ್ಲಿಕ್ ರಿಲೇಶನ್ಸ್ ವಿಭಾಗದ ಉಸ್ತುವಾರಿಯನ್ನೂ ನಿರ್ವಹಿಸುತ್ತಿದ್ದರು. ಕೆನ್ಯಾನ್ ಅಂಡರ್‌ಟೇಕರ‍್ಸ್ ಅಧಿಕಾರಿಯೊಬ್ಬ ಖುಷವಂತ ಸಿಂಗ್ ಅವರನ್ನು ಭೇಟಿ ಮಾಡಿ, ‘ಮಹಿಳೆಯೊಬ್ಬಳಿಗೆ ಸೀರೆ ಉಡಿಸಬೇಕಾಗಿದೆ. ಸೀರೆ ಉಡಿಸುವುದು ಹೇಗೆಂದು ನಮಗೆ ತಿಳಿಯುತ್ತಿಲ್ಲ. ಅದು ಹೇಗೆ ಎಂಬುದನ್ನು ತಿಳಿಸುತ್ತೀರಾ?’ ಎಂದು ಕೇಳಿದ. ಖುಷವಂತ್ ಸಿಂಗ್‌ಗೆ ಅವರು ಬಂದ ಹಿನ್ನೆಲೆ, ಅಂತ್ಯ ಕ್ರಿಯೆಯ ಶಿಷ್ಟಾಚಾರದ ಅಗತ್ಯ ಮುಂತಾದ ವಿವರಗಳೇನೂ ಗೊತ್ತಿರಲಿಲ್ಲ. ‘ನೋಡಿ, ನೀವು ಒಬ್ಬ ರಾಂಗ್ ಪರ್ಸನ್‌ನ್ನು ಭೇಟಿ ಮಾಡಿದ್ದೀರಿ. ನನಗೆ ಸೀರೆ ಬಿಚ್ಚುವುದು ಗೊತ್ತೇ ಹೊರತು, ಉಡಿಸುವುದು ಗೊತ್ತಿಲ್ಲ. ಕಾರಣ, ನಾನು ನನ್ನ ಜೀವನದಲ್ಲಿ
ಒಂದು ಸಲವೂ ಸೀರೆ ಉಡಿಸಿಲ್ಲ. ಅವೆಷ್ಟೋ ಸಲ ಬಿಚ್ಚಿದ್ದೇನೆ’ಎಂದರು ಖುಷವಂತ ಸಿಂಗ್.

ಈ ಮಾತನ್ನು ಕೇಳಿದ ಕೆನ್ಯಾನ್ ಅಂಡರ್‌ಟೇಕರ‍್ಸ್ ಅಧಿಕಾರಿ ಸಿಟ್ಟಿಗೆದ್ದು, ಹೈ ಕಮಿಶನ್ ಆಫೀಸಿನ ಹಿರಿಯ ಅಧಿಕಾರಿಯೊಬ್ಬರನ್ನು ಭೇಟಿ ಮಾಡಿ ದೂರು ನೀಡಿದ. ಖುಷವಂತ ಸಿಂಗ್‌ರನ್ನು ಅವರು ಕರೆಸಿದರು. ಅದಕ್ಕೆ ಸಿಂಗ್, ‘ನಿಮಗೆ ಗೊತ್ತಿದೆಯಾ ಸಾರ್? ಜೀವನದಲ್ಲಿ ನೀವು ಎಂದಾದರೂ ನಿಮ್ಮ ಹೆಂಡತಿಗೆ ಅಥವಾ ಬೇರೆ
ಹೆಂಗಸರಿಗೆ ಸೀರೆ ಉಡಿಸಿದ್ದೀರಾ? ನೀನು ರಾಂಗ್ ಪರ್ಸನ್‌ನ್ನು ಭೇಟಿ ಮಾಡಿದೆ ಅಂತ ಅವನಿಗೆ ಹೇಳಿದೆ. ನನ್ನ ತಪ್ಪೇನು ಬಂತು ಹೇಳಿ? ಇರೋ ವಿಷಯವನ್ನು ನೇರವಾಗಿ ಹೇಳಿದೆ ಅಷ್ಟೇ’ ಎಂದರು. ಮೇಲಧಿಕಾರಿಯೂ ಜೋರಾಗಿ ನಕ್ಕರು.

ಯಾವುದು ಅಪಾಯಕಾರಿ?
ಬಿಯರ್‌ಗಿಂತ ಟೀ ಹೆಚ್ಚು ಡೇಂಜರಸ್! ಹೇಗೆ ಗೊತ್ತಾ? ನಿನ್ನೆ ಮಧ್ಯರಾತ್ರಿ ಒಂದು ಗಂಟೆ ತನಕ ಪಬ್‌ನಲ್ಲಿ ಎಂಟು ಬಾಟಲಿ ಬಿಯರ್ ಕುಡಿದೆ. ನನ್ನ ಹೆಂಡತಿ ಮನೆಯಲ್ಲಿ ಟೀ ಕುಡಿಯುತ್ತಿದ್ದಳು. ನಾನು ಮನೆಗೆ ಹೋಗುತ್ತಿದ್ದಂತೆ ಆಕೆ ರೌದ್ರಾವತಾರ ತಾಳಿದಳು. ಬಾಯಿಗೆ ಬಂದಂತೆ ಬಯ್ಯಲಾರಂಭಿಸಿದಳು. ‘ಇಂದು ಯಾವುದಕ್ಕೂ ಒಂದು ತೀರ್ಮಾನ ಆಗಲೇಬೇಕು. ಒಂದೋ ನಾನಿರಬೇಕು, ಇಲ್ಲ ನೀವಿರಬೇಕು’ ಎಂದು ಕೂಗಲಾರಂಭಿಸಿದಳು. ನಾನು ಶಾಂತವಾಗಿದ್ದೆ. ಆಕೆಯ ಎಲ್ಲ ಬಯ್ಗುಳ ಗಳನ್ನೂ ಕೇಳಿಸಿಕೊಂಡೆ. ಆದರೆ ಅವಳ ಕೂಗಾಟ, ಕಿರುಚಾಟ ನಿಂತಿರಲಿಲ್ಲ. ಕೇಳುವಷ್ಟು ಕೇಳಿ, ನಂತರ ಸುಮ್ಮನೆ ಬೆಡ್‌ರೂಮಿಗೆ ಹೋಗಿ ಮಲಗಿದೆ. ಆದರೆ ಆಕೆಯ ಬಯ್ಗುಳ ಮಾತ್ರ ನಿಂತಿರ ಲಿಲ್ಲ. ನಾನು ಹೇಳ್ತೀನಿ, ಟೀ ಬಹಳ ಅಪಾಯಕಾರಿ. (ಬೆಂಗಳೂರಿನ ಪಬ್ ಒಂದರಲ್ಲಿ ಕಾಣಿಸಿದ ಪೋಸ್ಟರ್ ಇದು. ಗುಂಡುಗಲಿ ಮಿತ್ರರೊಬ್ಬರು ಕಳಿಸಿದ್ದು).

ಖಾಲಿ ಗ್ಲಾಸಿನ ಭಯ!
ಕುಡುಕರಿಗೆ ಒಂದು ವಿಚಿತ್ರ ಭಯ (ಫೋಬಿಯಾ) ಇರುತ್ತದೆ ಯಂತೆ. ಅದೇನೆಂದರೆ ನಾನು ಕುಡಿಯಲಾರಂಭಿಸಿದಾಗ ಗುಂಡು ಖರ್ಚಾದರೆ ಏನು ಮಾಡುವುದು ಎಂದು. ಇದು ಎಲ್ಲ ಕುಡುಕರ ಭಯ ಅಲ್ಲ. ವಿಪರೀತ ಕುಡಿಯುತ್ತಾರಲ್ಲ, ಪ್ರತಿದಿನ ಕುಡಿಯುತ್ತಾರಲ್ಲ ಅವರ ಸಮಸ್ಯೆ. ಇಂಥವರಿಗೆ ತಾವು ಕುಡಿಯುವ ಗ್ಲಾಸು
ಈ ಖಾಲಿ ಗ್ಲಾಸಿನ ಭಯಕ್ಕೆ ಸಿನೋಸಿಲ್ಲಿಕಾಫೋಬಿಯಾ (Cenosillicaphobia) ಎಂದು ಹೆಸರು. ಬಿಯರ್ ಪ್ರಿಯ ರಲ್ಲಿ ಈ ಫೋಬಿಯಾ ಹೆಚ್ಚಂತೆ. ನಮ್ಮಂಥ ಕುಡುಕರಲ್ಲದವರಿಗೆ ಇದು ತುಸು ಅತಿಯೆಂದು ಅನಿಸುವುದು ಸಹಜ. ವಿಚಿತ್ರ ಅಂದ್ರೆ ಶೇ.೨೧ರಷ್ಟು ಕುಡುಕರಲ್ಲಿ ಈ ಫೋಬಿಯಾ ಇದೆಯಂತೆ.
ಬಡಿಸುವ ಕೈ ಬೆಚ್ಚಗಿರಲಿ ಸುಮಾರು ಹನ್ನೆರಡು ವರ್ಷದ ಬಾಲಕ ಹೋಟೆಲ್‌ಗೆ ಓಡೋಡಿ ಬಂದ. ಅವನು ಕುಳಿತ ಟೇಬಲ್ ಬಳಿ ಬಂದ ವೇಟ್ರೆಸ್ ಒಂದು ಗ್ಲಾಸ್ ನೀರನ್ನಿಟ್ಟು, ‘ಏನು ಬೇಕು?’ ಎಂದು ಕೇಳಿದಳು.

‘ಎರಡು ಸ್ಕೂಪ್ ಬಟರ್‌ಸ್ಕಾಚ್ ಐಸ್‌ಕ್ರೀಮ್‌ಗೆ ಎಷ್ಟಾಗುತ್ತದೆ?’ ಎಂದು ಕೇಳಿದ ಬಾಲಕ. ‘ಐವತ್ತು ರುಪಾಯಿ’ ಎಂದಳು ವೇಟ್ರೆಸ್. ಆ ಬಾಲಕ ತನ್ನ ಪ್ಯಾಂಟಿನ ಜೇಬಿನೊಳಗೆ ಕೈ ಹಾಕಿ ನೋಟುಗಳನ್ನು ಎಣಿಸಲಾರಂಭಿಸಿದ. ‘ಬಟರ್‌ಸ್ಕಾಚ್ ಬದಲು ಸಾದಾ ಐಸ್‌ಕ್ರೀಮ್‌ಗೆ ಎಷ್ಟಾಗುತ್ತದೆ?’ ಎಂದು ಕೇಳಿದ ಬಾಲಕ. ವೇಟ್ರೆಸ್‌ಗೆ ಕೋಪ ಬಂದಿತು. ಎಂಥಾ ಗಿರಾಕಿಯಪ್ಪಾ ಎಂದು ಮನದಲ್ಲೇ ಗೊಣಗಿಕೊಂಡಳು. ‘ಸಾದಾ ಐಸ್‌ಕ್ರೀಮ್‌ಗೆ ನಲವತ್ತು ರುಪಾಯಿ ಆಗುತ್ತದೆ’ ಎಂದಳು ತುಸು ಸಿಡುಕಿನಿಂದ.

ಅದಕ್ಕೆ ಆ ಬಾಲಕ ‘ಹಾಗಾದರೆ ನನಗೆ ಆ ಸಾದಾ ಐಸ್ ಕ್ರೀಮನ್ನೇ ಕೊಡಿ’ ಎಂದ. ವೇಟ್ರೆಸ್ ಸಾದಾ ಐಸ್‌ಕ್ರೀಮ್‌ನ್ನು ತಂದಿಟ್ಟಳು. ಬಾಲಕ ಅದನ್ನು ತಿನ್ನುವ ಮೊದಲೇ ಬಿಲ್‌ನ್ನು ತಂದಿಟ್ಟಳು. ಬಾಲಕ ಬಿಲ್ ನೋಡಿದ. ನಲವತ್ತು ರುಪಾಯಿ ಎಂದಿತ್ತು. ತನ್ನ ಜೇಬಿನ ಲ್ಲಿದ್ದ ಐವತ್ತು ರುಪಾಯಿಯನ್ನು ಇಟ್ಟು ಅಲ್ಲಿಂದ ಹೊರಟು
ಹೋದ. ವೇಟ್ರೆಸ್ ಆ ಟೇಬಲ್ ಬಳಿ ಬಂದು ನೋಡಿದರೆ, ಅವಳಿಗೆ ಪುಟ್ಟ ಅಚ್ಚರಿ ಕಾದಿತ್ತು. ಆ ಬಾಲಕ ಟಿಪ್ಸ್ ಕೊಡುವುದಕ್ಕಾಗಿ ಹತ್ತು ರುಪಾಯಿ ಉಳಿಸಲು, ಬಟರ್‌ಸ್ಕಾಚ್ ಬದಲು ಸಾದಾ ಐಸ್ ಕ್ರೀಮ್ ಆರ್ಡರ್ ಮಾಡಿದನೆಂಬುದು ಆಕೆಗೆ ಗೊತ್ತಾಯಿತು. ಬಾಲಕನೆಡೆಗೆ ತೋರಿದ ಅಸಹನೆ ಹಾಗೂ ತಿರಸ್ಕಾರಕ್ಕೆ
ವ್ಯಥೆ ಪಟ್ಟುಕೊಂಡಳು.

ಹೆಸರೇನು? ಒಳ್ಳೆಯ ಹೆಸರೇನು? ಈ ಪ್ರಯೋಗ ಚಾಲ್ತಿಯಲ್ಲಿರೋದು ಭಾರತೀಯರಲ್ಲಿ ಮಾತ್ರ. ಅಪರಿಚಿತರು ಭೇಟಿಯಾದಾಗ ಇಂಗ್ಲಿಷಿನಲ್ಲಿ ‘What’s your
good name?’ ಎಂದು ಕೇಳುತ್ತಾರೆ. ಜಗತ್ತಿನ ಬೇರೆ ಯಾವ ದೇಶದಲ್ಲೂ ಇಂಗ್ಲಿಷಿನಲ್ಲಿ ಹೀಗೆ ಕೇಳುವುದಿಲ್ಲ. ಕನ್ನಡದಲ್ಲೂ ‘ನಿಮ್ಮ ಹೆಸರೇನು?’ ಎಂದು ಕೇಳುತ್ತೇವೆ. ಅದೇ ಹಿಂದಿಯಲ್ಲಿ ‘ಆಪ್ ಕಾ ಶುಭ್ ನಾಮ್ ಕ್ಯಾ?’ ಎಂದು ಕೇಳುವುದು ಸಂಪ್ರದಾಯ. ಹಿಂದಿಯ ಶುಭನಾಮ್ ಇಂಗ್ಲಿಷಿನಲ್ಲಿ good
name ಆಗಿರಲಿಕ್ಕೆ ಸಾಕು. ಎಲ್ಲ ತಂದೆ-ತಾಯಿಗಳೂ ತಮ್ಮ ಮಕ್ಕಳಿಗೆ ಒಳ್ಳೆಯ ಹೆಸರನ್ನೇ ಇಟ್ಟಿರುತ್ತಾರೆ.

ಅಷ್ಟಕ್ಕೂ ಕೆಟ್ಟ ಹೆಸರು ಎಂಬುದು ಇಲ್ಲವೇ ಇಲ್ಲ. ಹೀಗಿರುವಾಗ ‘What’s your good name??’ ಎಂದು ಕೇಳಬೇಕಿಲ್ಲ. ‘What’s your name? ಎಂದಷ್ಟೇ ಕೇಳಿ. ಯಾರೂ ತಪ್ಪು ಭಾವಿಸುವುದಿಲ್ಲ. ಅದೇ ರೀತಿ ಭಾರತೀಯರು ಮತ್ತೊಂದು ವಿಚಿತ್ರ ಪ್ರಯೋಗ ಮಾಡುತ್ತಾರೆ. ಅದೇನೆಂದರೆ ಮದರ್ ಪ್ರಾಮಿಸ್. ಆಕ್ಸ್-ರ್ಡ್ ಡಿಕ್ಷನರಿ ತೆಗೆದು ನೋಡಿ, ಮದರ್ ಪ್ರಾಮಿಸ್ ಎಂಬ ಪ್ರಯೋಗ ಕಾಣಿಸುವುದಿಲ್ಲ. ಈ ಬಳಕೆ ಹೇಗೆ ಬಂತೋ ಗೊತ್ತಿಲ್ಲ. ಆಣೆ, ಪ್ರಮಾಣ ಮಾಡುವಾಗ ‘ಮದರ್ ಪ್ರಾಮಿಸ್’ ಎಂದು ಹೇಳುವುದು ಸಹಜವಾಗಿದೆ. ಕನ್ನಡದ ತಾಯಾಣೆ, ಹಿಂದಿಯ ‘ಮಾ ಕಸಮ್’ ಇಂಗ್ಲಿಷಿನಲ್ಲಿ ಯಥಾವತ್ತಾಗಿ ‘ಮದರ್ ಪ್ರಾಮಿಸ್’
ಆಗಿರಬಹುದು. ಇಂಗ್ಲಿಷಿನಲ್ಲಿ ಆಣೆ ಹಾಕುವ ಪ್ರಸಂಗ ಬಂದರೆ ಪ್ರಾಮಿಸ್ ಎಂದಷ್ಟೇ ಹೇಳಿ. ಅಲ್ಲಿ ತಾಯಿಯನ್ನು ಎಳೆದು ತರಬೇಕಿಲ್ಲ.