Wednesday, 11th December 2024

ದಿವಾಳಿಯಾಗಿರುವ ಪಾಕಿಸ್ತಾನ ವಿಘಟನೆಯ ಅಂಚಿನಲ್ಲಿದೆ

ನೆರೆಹೊರೆ ನೋಟ

ಜಿ.ಎಂ.ಇನಾಂದಾರ್‌

ಪಾಕಿಸ್ತಾನ ವಿಘಟನೆಗೊಳ್ಳುವ ಅಂಚಿನಲ್ಲಿದೆ. ಪಾಕಿಸ್ತಾನದ ಇಂಥ ಗಂಭೀರ ಪರಿಸ್ಥಿತಿಯಿಂದ ಭಾರತವೇನೂ ಸಂತೋಷಪಡಬೇಕಿಲ್ಲ. ಪಾಕಿಸ್ತಾನದ ಹೆಂಗಸರು, ಮಕ್ಕಳಿಗೆ ಭಾರತದಲ್ಲಿ ಶರಣಾರ್ಥಿಗಳಾಗಿ ಒಳಬಿಡಬೇಕೆಂಬ ಕೂಗು ‘ಅಮನ್ ಕಿ ಆಶಾ’ ಎನ್ನುವ ಎಡಚರರಿಂದ ಏಳಬಹುದು. ಆದರೆ ಭಾರತ ಸರಕಾರವು ಯಾವ ಕಾರಣಕ್ಕೂ ಈ ಕೂಗಿಗೆ ಸೊಪ್ಪುಹಾಕದೆ ಸುಮ್ಮನಿರುವುದೇ ಮೇಲು.

ಪಾಕಿಸ್ತಾನ ದಿವಾಳಿಯಾಗಿದೆ. ಪಾಕಿಸ್ತಾನದ ರಕ್ಷಣಾ ಮಂತ್ರಿ ಖ್ವಾಜಾ ಆಸಿಫ್ ಅವರು, ಪಾಕಿಸ್ತಾನ ದಿವಾಳಿಯಾಗಿದೆ ಎಂಬ ಸತ್ಯವನ್ನು ಇತ್ತೀಚೆಗೆ ಅಧಿಕೃತವಾಗಿ ಘೋಷಿಸಿದ್ದಾರೆ. ಹಾಗಾದರೆ ಪಾಕಿಸ್ತಾನದಲ್ಲಿ ಏನು ನಡೆದಿದೆ? ಇಂಟರ್‌ ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಾಲಿನಾ ಜಾರ್ಜಿಯೇವಾ ಅವರು ಇತ್ತೀಚೆಗೆ ಮ್ಯೂನಿಕ್‌ ನಲ್ಲಿ , ‘ಪಾಕಿಸ್ತಾನ ಒಂದು ಜವಾಬ್ದಾರಿಯುತ ರಾಷ್ಟ್ರವಾಗಿರುವುದನ್ನು ಕಲಿಯಬೇಕಿದೆ.

ಅದರ ಶ್ರೀಮಂತ ಪ್ರಜೆಗಳು ತೆರಿಗೆ ಕೊಡುವಂತೆ ಹಾಗೂ ಅನುದಾನಗಳು ಬಡವರಿಗೆ ಮಾತ್ರ ಸಿಗುವಂತೆ ಮಾಡಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಅದು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು. ಪಾಕಿಸ್ತಾನದಲ್ಲಿ ಹಣದುಬ್ಬರ ವಿಪರೀತವಾಗಿ ಏರಿದೆ. ದಾಖಲಾರ್ಹ ಎನ್ನಬಹುದಾದ ಶೇ. ೪೦ರಷ್ಟು ಹಣದುಬ್ಬರ ಅಲ್ಲಿ ಕಂಡುಬಂದಿದೆ. ಅಲ್ಲಿ ಈಗ ಪ್ರತಿ ಲೀಟರ್ ಹಾಲಿನ ಬೆಲೆ ೨೧೦ ರುಪಾಯಿ, ಪ್ರತಿ ಲೀಟರ್ ಪೆಟ್ರೋಲ್ ಬೆಲೆ ೨೫೭ ರುಪಾಯಿ. ಈ ರೀತಿ ಬೆಲೆಗಳು ಗಗನಕ್ಕೇರಿವೆ. ಆಹಾರದ ಅಭಾವ ತಲೆದೋರಿದೆ. ಅಲ್ಲಿನ ಸಾಮಾನ್ಯ ಜನ ಕೂಳಿಗಾಗಿ ಪರದಾಡುತ್ತಿದ್ದಾರೆ. ಇಂಟರ್ ನ್ಯಾಷನಲ್ ಮಾನಿಟರಿ ಫಂಡ್‌ನ ಎದುರು ಪಾಕಿಸ್ತಾನ ೨೩ನೇ ಬಾರಿ ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಐಎಂಎಫ್ ಕಠಿಣ ಕ್ರಮಗಳನ್ನು ಕೈಗೊಳ್ಳಲು ಷರತ್ತು ವಿಧಿಸುತ್ತಿದೆ.

‘Beggers are not choosers’ ಎಂಬುದನ್ನು ಮರೆತು ಪಾಕಿಸ್ತಾನದ ವಿತ್ತಮಂತ್ರಿ ಇಶಾಕ್ ದಾರ್, ‘ನಾನು ಐಎಂಎಫ್ ನಿಂದ ಸೂಚನೆಗಳನ್ನು
ಸ್ವೀಕರಿಸುವುದಿಲ್ಲ’ ಎಂದು ದರ್ಪದ ಮಾತಾಡಿದವರು, ಇದೀಗ ಐಎಂಎಫ್ ನಿಂದ ಒಂದು ಬಿಲಿಯನ್ ಡಾಲರ್ ಸಾಲಕ್ಕಾಗಿ ಮೊರೆಯಿಡುತ್ತಿದ್ದಾರೆ. ಆದರೆ ಐಎಂಎಫ್ ಇತರ ಮಿತ್ರರಾಷ್ಟ್ರಗಳಿಂದಲೂ ಸಾಲದ ಮರುಪಾವತಿಗೆ ಒತ್ತಾಯಿಸದಂತೆಯೂ ಹಾಗೂ ಸಾಲದ ಅವಧಿಯನ್ನು ಬದಲಾಯಿಸು ವಂತೆಯೂ ಷರತ್ತುಗಳನ್ನು ವಿಧಿಸುತ್ತಿದೆ. ಇಲ್ಲವಾದಲ್ಲಿ ಪಾಕಿಸ್ತಾನ ಮುಂದಿನ ವರ್ಷ ಇನ್ನೂ ದೊಡ್ಡ ಭಿಕ್ಷಾಪಾತ್ರೆ ಹಿಡಿದು ಐಎಂಎಫ್ ಮುಂದೆ ನಿಲ್ಲುವ ಸಂದರ್ಭವಿದೆ.

ಇದೇ ಸಮಯದಲ್ಲಿ ಚೀನಾ ತನ್ನ CPEC (China Pakistan Economic Corridor) ಯೋಜನೆಯ ಹಣವನ್ನು ಶೇ. ೫೬ರಷ್ಟು ಕಡಿತಗೊಳಿಸಿದೆ. ಪಾಕಿಸ್ತಾನದ ಮೇಲೆ ಯಾರೂ ವಿಶ್ವಾಸವಿಡದ ಸಂದರ್ಭ ಒದಗಿದೆ. ಅದರ ಮಿತ್ರರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ, ಚೀನಾ ಕೂಡ ಕೆಟ್ಟ ಹಣದ ಹಿಂದೆ ಒಳ್ಳೆಯ ಹಣ ನೀಡಲು ನಿರಾಕರಿಸುತ್ತಿವೆ(Throwing good money after bad money). ಬಹುಶಃ ಪಾಕಿಸ್ತಾನವು ಹಣದ ವಿಷಯದಲ್ಲಿ ಲಕ್ಷ್ಮಣರೇಖೆಯನ್ನು ದಾಟಿದೆ. ಇದೇ ಸಂದರ್ಭದಲ್ಲಿ ಪಾಕ್ ವಿಘಟನೆ ಆಗುವ ಸಂದರ್ಭ ಬಂದಿದೆ. ಅದು ವಿಘಟನೆಗೊಳ್ಳಲಿದೆಯೇ? ಪಾಕಿಸ್ತಾನದಲ್ಲಿ ಇದೀಗ ಡೀಸಲ್ ಇಲ್ಲ, ಪೆಟ್ರೋಲ್ ಇಲ್ಲ, ಖಾದ್ಯ ತೈಲ ಇಲ್ಲ ಹಾಗೂ ವಿದ್ಯುಚ್ಛಕ್ತಿ ಇಲ್ಲ ಎನ್ನುವ ಪರಿಸ್ಥಿತಿ ಬಂದಿದೆ. ಅವರ ವಿದೇಶಿ ವಿನಿಮಯದ ಭಂಡಾರ ಪಾತಾಳಕ್ಕಿಳಿದಿದೆ. ಪಾಕಿಸ್ತಾನದ ರೈಲ್ವೆಯು ‘ನಮ್ಮಲ್ಲಿ ನಾಳೆಗೆ ಮಾತ್ರ ಸಾಲುವಷ್ಟು ಡೀಸಲ್ ಇದೆ’ ಎಂದು ಘೋಷಣೆ ಮಾಡಿದೆ.

ಐಎಂಎಫ್ನಿಂದ ಸಾಲ ಸಿಗದಿದ್ದರೆ ಪಾಕಿಸ್ತಾನ ತನ್ನ ವಿದೇಶಿ ಸಾಲಗಳ ಮರುಪಾವತಿ ಮಾಡದೆ ಸುಸ್ತಿದಾರನಾಗುವ ಅಂಚಿನಲ್ಲಿದೆ. ಪಾಕಿಸ್ತಾನದಲ್ಲಿ ಪಂಜಾಬ್, ಸಿಂಧ್, ಬಲೂಚಿಸ್ತಾನ್ ಮತ್ತು ಖೈಬರ್-ಪಖ್ತುಂಖ್ವಾ ಎಂಬ ನಾಲ್ಕು ಭೌಗೋಳಿಕ ಪ್ರದೇಶಗಳಿವೆ. ಈ ಪೈಕಿ ಪಂಜಾಬ್ ಅತ್ಯಂತ ಸಮೃದ್ಧ
ಕೃಷಿಭೂಮಿ ಹೊಂದಿದ್ದು ಐದು ನದಿಗಳು, ನಾಲೆಗಳಿಂದ ಕೂಡಿದೆ. ಪಾಕಿಸ್ತಾನ ಸರಕಾರದ ಮುಖ್ಯಸ್ಥರು ಹಾಗೂ ಸೇನಾ ಮುಖ್ಯಸ್ಥರು ಪಂಜಾಬಿನವರೇ ಆಗಿರುತ್ತಾರೆ.

ಸಿಂಧ್ ಪ್ರದೇಶದಲ್ಲಿ ಸಾಮಾನ್ಯವಾಗಿ ವ್ಯವಹಾರಗಳನ್ನು ನಡೆಸುವ ಜನರಿದ್ದಾರೆ. ಭಾರತದಿಂದ ಬಂದ ಹೆಚ್ಚು ಜನ ಮುಸ್ಲಿಮರು ವಾಸವಾಗಿದ್ದು
ಇಲ್ಲಿಯೇ, ಅವರನ್ನು ಮುಹಾಜಿರ್‌ಗಳು ಎಂದು ಕೀಳಾಗಿ ನೋಡಲಾಗುತ್ತದೆ. ಇಲ್ಲಿನ ಮೂಲ ಸಿಂಧ್‌ನ ಜನ ಅಲ್ಪಸಂಖ್ಯಾತರಾಗಿದ್ದು ದೌರ್ಜನ್ಯಕ್ಕೆ
ಒಳಗಾಗಿದ್ದಾರೆ. ಬಲೂಚಿಸ್ತಾನದ ಶೇ. 40ರಷ್ಟು ಭಾಗ ಮರುಭೂಮಿಯಾಗಿದ್ದರೂ, ಖನಿಜ ಮತ್ತು ಇತರೆ ಸಂಪನ್ಮೂಲಗಳು ಹೇರಳವಾಗಿವೆ.

ಪಾಕಿಸ್ತಾನದ ಜನಸಂಖ್ಯೆಯ ಕೇವಲ ಶೇ.೬ರಿಂದ ೭ರಷ್ಟು ಜನ ಇಲ್ಲಿ ವಾಸವಾಗಿದ್ದಾರೆ. ಆದರೆ ಪಾಕಿಸ್ತಾನ ಸತತವಾಗಿ ಈ ಭಾಗವನ್ನು ಶೋಷಿಸುತ್ತಲೇ ಬಂದಿದೆ. ಆದ್ದರಿಂದ ಇಲ್ಲಿ ‘ಬಲೂಚಿಸ್ತಾನ ಲಿಬರೇಷನ್ ಆರ್ಮಿ’ (ಆಔಅ) ಜನ್ಮತಾಳಿದ್ದು ಇವರು ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೋಸ್ಕರ ಇಲ್ಲಿ ಬಂದಿರುವ ಚೀನಿಯರನ್ನು ಹತ್ಯೆಮಾಡುತ್ತಿದ್ದಾರೆ. ಖೈಬರ್-ಪಖ್ತುಂಖ್ವಾ ಅಂದರೆ ಪಠಾಣರ ಭೂಮಿಪ್ರಾಂತ್ಯ. ಅಫ್ಘಾನಿಸ್ತಾನಕ್ಕೆ ಹೊಂದಿ ಕೊಂಡಿದ್ದು ಎರಡು ಪ್ರಾಂತ್ಯಗಳ ಮಧ್ಯೆ ‘ರೋಟಿ-ಬೇಟಿ’ ಸಂಬಂಧಗಳಿರುವುದರಿಂದ ಈ ಭೂಮಿ ಅಫ್ಘಾನಿಸ್ತಾನಕ್ಕೆ ಸೇರಬೇಕೆಂದು ತೆಹ್ರೀಕ್-ಎ-ತಾಲಿ ಬಾನ್ ಪಾಕಿಸ್ತಾನ್ ಸಂಘಟನೆ ಪಾಕಿಸ್ತಾನದ ವಿರುದ್ಧವೇ ಭಯೋತ್ಪಾದಕ ಕೃತ್ಯ ನಡೆಸುತ್ತಿದೆ.

ಇಷ್ಟೇ ಅಲ್ಲದೆ, ಅದು ಇತ್ತೀಚೆಗೆ ತನ್ನ ಸ್ವತಂತ್ರ ಮಂತ್ರಿಮಂಡಲವನ್ನು ಘೋಷಣೆ ಮಾಡಿದೆ. ವಿಷದ ಹಾವಿಗೆ ಹಾಲೆರೆದು ಅದರಿಂದ ಕಚ್ಚಿಸಿಕೊಳ್ಳುವ
ಸ್ಥಿತಿಯಲ್ಲಿ ಪಾಕಿಸ್ತಾನವಿದೆ. ಮುಸ್ಲಿಂ ಕಟ್ಟರ್‌ವಾದಿ ತಾಲಿಬಾನ್‌ಗೆ ಬೆಂಬಲ ನೀಡಿತ್ತು ಪಾಕಿಸ್ತಾನ; ತಾಲಿಬಾನ್ ಕಾಶ್ಮೀರವನ್ನು ತನಗೆ ದೊರಕಿಸಿ  ಕೊಡುತ್ತದೆ ಎಂಬ ಭ್ರಮೆಯಲ್ಲಿದ್ದ ಪಾಕಿಸ್ತಾನಕ್ಕೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಸಂಘಟನೆಯು ಪಾಕಿಸ್ತಾನದ ವಿರುದ್ಧವೇ ತಿರುಗಿಬಿದ್ದು ತಲೆನೋವು ತಂದಿದೆ.

ಈ ಎಲ್ಲಾ ಪರಿಸ್ಥಿತಿಗಳಿಂದ ಪಾಕಿಸ್ತಾನ ವಿಘಟನೆಗೊಳ್ಳುವ ಅಂಚಿನಲ್ಲಿದೆ. ಪಾಕಿಸ್ತಾನದ ಇಂಥ ಗಂಭೀರ ಪರಿಸ್ಥಿತಿಯಿಂದ ಭಾರತವೇನೂ ಸಂತೋಷ ಪಡಬೇಕಿಲ್ಲ. ಪಾಕಿಸ್ತಾನದ ಹೆಂಗಸರು, ಮಕ್ಕಳಿಗೆ ಭಾರತದಲ್ಲಿ ಶರಣಾರ್ಥಿಗಳಾಗಿ ಒಳಬಿಡಬೇಕೆಂಬ ಕೂಗು ‘ಅಮನ್ ಕಿ ಆಶಾ’ ಎನ್ನುವ ಎಡಚರ ರಿಂದ ಏಳಬಹುದು. ಆದರೆ ಭಾರತ ಸರಕಾರವು ಯಾವ ಕಾರಣಕ್ಕೂ ಈ ಕೂಗಿಗೆ ಸೊಪ್ಪುಹಾಕದೆ ಸುಮ್ಮನಿರುವುದೇ ಮೇಲು.

ಮುಸ್ಲಿಂ ಜನರಿಗೆ ಆಶ್ರಯ ಕೊಟ್ಟು ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳು ಅನುಭವಿಸುತ್ತಿರುವ ತೊಂದರೆಗಳಿಂದ ಭಾರತ ಪಾಠ ಕಲಿಯಬೇಕಿದೆ.
ಇದಲ್ಲದೆ ಭಾರತದ ಭಾಗವಾಗಿದ್ದ ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ವಶಪಡಿಸಿಕೊಳ್ಳಲು ಇದು ಅತ್ಯಂತ ಸೂಕ್ತ ಅವಕಾಶ.

 
Read E-Paper click here