Saturday, 14th December 2024

ಪಂಚಮಸಾಲಿ ಮೀಸಲೆಂಬ ಸವಾಲು

ಮೂರ್ತಿ ಪೂಜೆ

ಆರ್‌.ಟಿ.ವಿಠ್ಢಲಮೂರ್ತಿ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಹೆಸರು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಬಾರಿ ಅವರನ್ನು ರಣಾಂಗಣದ ಮಧ್ಯೆ ಎಳೆದು ತಂದವರು ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ.

ಪಂಚಮ ಸಾಲಿ ಸಮುದಾಯವನ್ನು ಹಿಂದುಳಿದ ಪ್ರವರ್ಗ 2ಎ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆ ಯನ್ನಿಟ್ಟುಕೊಂಡು ಹೋರಾಟ ನಡೆಯುತ್ತಿದೆಯಲ್ಲ? ಈ ಹೋರಾಟದ ಮುಂಚೂಣಿ ಯಲ್ಲಿರುವವರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ.
ಅಂದ ಹಾಗೆ ಈ ಹೋರಾಟವನ್ನು ಬೆಂಬಲಿಸಿ ಪಂಚಮಸಾಲಿ ಸಮುದಾಯಕ್ಕೆ ಸೇರಿದ ಬಿಜೆಪಿ ನಾಯಕ ಬಸವನಗೌಡ
ಪಾಟೀಲ್ ಯತ್ನಾಳ್ ಅವರು ಕಳೆದ ಶುಕ್ರವಾರ ವಿಧಾನಸಭೆಯಲ್ಲಿ ಧ್ವನಿ ಎತ್ತಿದರು.

ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿ ಅವರಾಡಿದ ಮಾತುಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ಪಂಚಮಸಾಲಿ ಗಳಿಗೆ ಈ ಸವಲತ್ತನ್ನು ಒದಗಿಸುವ ಸಂಬಂಧ ನಾನೇನೂ ಮಾಡಲು ಸಾಧ್ಯವಿಲ್ಲ. ಬೇಕಿದ್ದರೆ ರಾಜ್ಯದಿಂದ ಆಯ್ಕೆಯಾಗಿರುವ ಇಪ್ಪತ್ತೈದು ಮಂದಿ ಸಂಸದರನ್ನು ದೆಹಲಿಗೆ ಕರೆದುಕೊಂಡು ಹೋಗಿ ಕೇಂದ್ರ ಸರಕಾರಕ್ಕೆ ಹೇಳಿಸಿ ಎಂಬುದು ಅವರ ಮಾತು.

ಇದರಿಂದ ಕೆರಳಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ; ಪಂಚಮಸಾಲಿಗಳು ಕೇಳುತ್ತಿರುವ ಮೀಸಲಾತಿ ಏನಿದೆ? ಈ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರ ಮುಖ್ಯಮಂತ್ರಿಗಳಿಗಿದೆ. ಹೀಗಾಗಿ ಇದನ್ನು ಪ್ರಧಾನಿ ಹಾಗೂ ಗೃಹ ಸಚಿವರ ಮೇಲೆ ಹಾಕುವ ನಾಟಕ ಬೇಡ ಎಂದು ಅಬ್ಬರಿಸಿದರು.

ಅಷ್ಟೇ ಅಲ್ಲ, ನಾವು ಕೇಳುತ್ತಿರುವ ಮೀಸಲಾತಿ ಏನಿದೆ? ಇದನ್ನು ಒದಗಿಸಿದರೆ ಪಂಚಮಸಾಲಿ ಸಮುದಾಯ ಬಲಿಷ್ಠವಾಗುತ್ತದೆ. ಅದು ಬಲಿಷ್ಠವಾದರೆ ಮುಖ್ಯಮಂತ್ರಿಗಳ ಕುಟುಂಬಕ್ಕೆ ತೊಂದರೆಯಾಗುತ್ತದೆ. ಮುಖ್ಯಮಂತ್ರಿ ಆಗಬೇಕು ಎಂಬ ಅವರ ಮಗನ ಕನಸು ನುಚ್ಚು ನೂರಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಂಚಮಸಾಲಿ ಸಮುದಾಯ ಕೇಳುತ್ತಿರುವ ಮೀಸಲಾತಿಗೂ, ಮುಖ್ಯಮಂತ್ರಿಗಳ ಪುತ್ರ ವಿಜಯೇಂದ್ರ ಅವರು ಮುಖ್ಯಮಂತ್ರಿಯಾಗುವ ಕನಸಿಗೂ ಎಲ್ಲಿಂದೆಲ್ಲಿಯ ಸಂಬಂಧ? ಹಾಗಂತ ಹುಡುಕುತ್ತಾ ಹೋದರೆ ಈ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಒಳ ಆಟಗಳು ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತವೆ.

ವಾಸ್ತವವಾಗಿ ಪಂಚಮಸಾಲಿ ಸಮುದಾಯ ಯಾವತ್ತೂ ಯಡಿಯೂರಪ್ಪ ಅವರ ನಾಯಕತ್ವದ ವಿರುದ್ದ ನಿಂತಿಲ್ಲ. ಆದರೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ತಮ್ಮ ಸಮುದಾಯವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಶಂಕೆ ಅದಕ್ಕೆ ಬಂದಿದ್ದು ನಿಜ. ಯಡಿಯೂರಪ್ಪ ಅವರು ಸಚಿವ ಸಂಪುಟವನ್ನು ವಿಸ್ತರಿಸಲು ಹೊರಟಾಗ ನಡೆದ ಬೆಳವಣಿಗೆಗಳು ಇದಕ್ಕೆ ಕಾರಣ. ಅಂದ ಹಾಗೆ ಅವತ್ತು ತಮ್ಮ ಸಂಪುಟದಲ್ಲಿ ಯಾರ‍್ಯಾರನ್ನು ಸೇರಿಸಬೇಕು ಎಂದು ಯಡಿಯೂರಪ್ಪ ಹುಡುಕಾಟ ಆರಂಭಿಸಿದರಲ್ಲ? ಆ ಸಂದರ್ಭದಲ್ಲಿ ನಡೆದ ಸಭೆಯೊಂದರಲ್ಲಿ; ಪಂಚಮಸಾಲಿ ಸಮುದಾಯಕ್ಕೆ ಸೇರಿದವರಿಗೆ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿ ದ್ದರು.

ಇದರಿಂದ ಕೆರಳಿದ ಯಡಿಯೂರಪ್ಪ ‘ನೀವು ಸಲಹೆ ಕೊಡಿ. ಆದರೆ ಈ ರೀತಿ ಒತ್ತಡ ಹೇರುವುದನ್ನು ನಾನು ಸಹಿಸುವುದಿಲ್ಲ’ ಎಂದು ಉಲ್ಪಾ ಹೊಡೆದುಬಿಟ್ಟರು. ಯಾವಾಗ ಈ ಬೆಳವಣಿಗೆ ನಡೆಯಿತೋ? ಇದಾದ ನಂತರ ಪಂಚಮಸಾಲಿ ಸಮುದಾಯದ ಆಳದಿಂದ ಅಪಸ್ವರ ಕೇಳಿ ಬರತೊಡಗಿತು. ವಸ್ತುಸ್ಥಿತಿ ಎಂದರೆ ಸಮುದಾಯಕ್ಕೆ ಸೇರಿದ ಮುರುಗೇಶ್ ನಿರಾಣಿ, ಬಸವನಗೌಡ
ಪಾಟೀಲ್ ಯತ್ನಾಳ್ ಅವರನ್ನು ಮಂತ್ರಿಗಳನ್ನಾಗಿಸುವುದು ಸ್ವಾಮೀಜಿಯವರ ಆಗ್ರಹದ ಹಿಂದಿದ್ದ ಉದ್ದೇಶ.

ಆದರೆ ಯಾವಾಗ ಯಡಿಯೂರಪ್ಪ ಅವರು ಇದನ್ನು ಒಪ್ಪದೆ ಪ್ರತಿಭಟಿಸಿದರೋ?ಇದಾದ ನಂತರ ಮಂತ್ರಿಯಾಗದಿದ್ದರೇನಂ
ತೆ?ಮುಖ್ಯಮಂತ್ರಿ ಹುzಗಾಗಿಯೇ ಪ್ರಯತ್ನಿಸ ಬಹುದಲ್ಲ? ಎಂಬ ಪ್ರಶ್ನೆ ನಿರಾಣಿ,ಯತ್ನಾಳ್ ಅವರ ಮುಂದೆ ಸಮುದಾಯ
ದ ಪ್ರಮುಖರಿಂದ ಮಂಡನೆಯಾಗ ತೊಡಗಿತು. ಅಂದ ಹಾಗೆ ರಾಜ್ಯದಲ್ಲಿ ವೀರಶೈವ – ಲಿಂಗಾಯತರ ಒಟ್ಟಾರೆ ಜನಸಂಖ್ಯೆ ಏನಿದೆಯೋ? ಇದರಲ್ಲಿ ಪಂಚಮಸಾಲಿ ಸಮುದಾಯದ ಸಂಖ್ಯೆ ಶೇಕಡಾ ನಲವತ್ತೈದರಷ್ಟಿದೆ.

ಮೂಲತಃ ಕೃಷಿಕರಾದ ಪಂಚಮಸಾಲಿಗಳು ಹೆಚ್ಚಾಗಿ ಸಣ್ಣ ಹಿಡುವಳಿದಾರರು. ಇವರು ಒಗ್ಗಟ್ಟಾಗಿ ತಮ್ಮ ಸಮುದಾಯ ದಿಂದಲೇ ಒಬ್ಬರನ್ನು ಮುಖ್ಯಮಂತ್ರಿ ಹುzಯ ತನಕ ತೆಗೆದುಕೊಂಡು ಹೋಗಬಲ್ಲರು ಎಂಬುದು ಈ ಪ್ರಮುಖರ ಮಾತುಗಳಲ್ಲಿದ್ದ
ಧ್ವನಿ. ಯಾವಾಗ ಈ ಮಾತು ಚಲಾವಣೆಯ ನಾಣ್ಯವಾಗಿ ಪರಿವರ್ತನೆಯಾಯಿತೋ? ಆಗ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟ ಮೊದಲಿಗರು ಎಂದರೆ ಮುರುಗೇಶ್ ನಿರಾಣಿ. ಹಿಂದೆ ಯಡಿಯೂರಪ್ಪ ಅವರ ಮಂತ್ರಿ ಮಂಡಲದಲ್ಲಿ ಭಾರೀ
ಕೈಗಾರಿಕಾ ಸಚಿವರಾಗಿದ್ದ ಮುರುಗೇಶ್ ನಿರಾಣಿ ಇವತ್ತು ರಾಜಕೀಯವಾಗಿ, ಆರ್ಥಿಕವಾಗಿ ತುಂಬ ಶಕ್ತಿಶಾಲಿಯಾಗಿ ಎದ್ದು
ನಿಂತಿದ್ದಾರೆ.

ಸಕ್ಕರೆ, ಇಂಧನ, ಶಿಕ್ಷಣ, ಬ್ಯಾಂಕಿಂಗ್ ಸೇರಿದಂತೆ ಹತ್ತಕ್ಕೂ ಹೆಚ್ಚು ಬಗೆಯ ಉದ್ಯಮಗಳಲ್ಲಿ ತೊಡಗಿರುವ ಮುರುಗೇಶ್ ನಿರಾಣಿ ಸಮುದಾಯದ ಪ್ರಮುಖರ ಒತ್ತಾಸೆಯಿಂದ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು ಸಹಜವೇ. ಕಳೆದ ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ನಡೆಯುತ್ತಾ ಬಂದಿರುವ ಯಡಿಯೂರಪ್ಪ ಪದಚ್ಯುತಿಯ ಪ್ರಹಸನ ವೇನಿದೆ? ಈ ಪ್ರಹಸನದಲ್ಲಿ ಪದೇ ಪದೇ ಕಣ್ಣಿಗೆ ಕಂಡಿದ್ದು ಇದೇ ಮುರುಗೇಶ್ ನಿರಾಣಿ.

ಯಡಿಯೂರಪ್ಪ ಅವರ ವಿರುದ್ಧ ನಿಂತ ಶಾಸಕರನ್ನು ಒಗ್ಗೂಡಿಸಲು ಮುರುಗೇಶ್ ನಿರಾಣಿ ಮಾಡಿದ ಪ್ರಯತ್ನ ಸಣ್ಣದಲ್ಲ. ಅವರ ಈ ಪ್ರಯತ್ನ ಯಶಸ್ವಿಯಾಗದೇ ಇರಬಹುದು. ಆದರೆ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವರ ಹೆಸರು ನುಸುಳಲು ಹೈಕಮಾಂಡ್ ವರಿಷ್ಠರು ಕಾರಣ ಎಂಬುದು ಅವರಿಗಿರುವ ಶಕ್ತಿಯನ್ನು ಸೂಚಿಸುತ್ತದೆ.

ಸ್ವತಃ ಯಡಿಯೂರಪ್ಪ ಅವರಿಗೆ ಮುರುಗೇಶ್ ನಿರಾಣಿ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳುವುದು ಇಷ್ಟವಿರಲಿಲ್ಲ
ವಾದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿರಾಣಿ ಹೆಸರನ್ನು ಪ್ರಸ್ತಾಪಿಸಿದ ಮೇಲೆ ನಿರಾಕರಿಸಲೂ ಅವರಿಂದ
ಸಾಧ್ಯವಾಗಲಿಲ್ಲ. ಹೀಗೆ ಮಂತ್ರಿ ಮಂಡಲಕ್ಕೆ ಸೇರುವಲ್ಲಿ ಯಶಸ್ವಿಯಾದ ಮುರುಗೇಶ್ ನಿರಾಣಿ ಅವರ ಮೇಲೆ ಯಡಿಯೂರಪ್ಪ ಅವರಿಗೆ ಇನ್ನೂ ಅನುಮಾನದ ಕಣ್ಣಿದೆ. ಭವಿಷ್ಯದ ಲಿಂಗಾಯತ ನಾಯಕತ್ವಕ್ಕಾಗಿ ನಡೆಯುತ್ತಿರುವ ಪೈಪೋಟಿಯಲ್ಲಿ ನಿರಾಣಿ
ಹೆಸರೂ ಇದೆ ಎಂಬುದು ಅವರಿಗೆ ಗೊತ್ತು.

ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕೂಡಾ ಇಂತಹ ರೇಸಿನಲ್ಲಿ ಇರಬಹುದು. ಬಹಿರಂಗವಾಗಿ ಹೋರಾಡುವ ವಿಷಯದಲ್ಲಿ ಅವರೇ ಮುಂದಿರಬಹುದು. ಆದರೆ ಈ ವಿಷಯದಲ್ಲಿ ನಿರಾಣಿ ತುಂಬ ಪವರ್‌ ಫುಲ್ ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತು. ಯಾಕೆಂದರೆ ಇವತ್ತು ರಾಜಕಾರಣಕ್ಕೆ ಏನು ಬೇಕೋ? ಅದು ನಿರಾಣಿ ಅವರ ಬಳಿ ಇದೆ. ಹೀಗಾಗಿ ಅವರು ಲಿಂಗಾಯತ ನಾಯಕತ್ವದ ವಿಷಯದಲ್ಲಿ ತಮ್ಮ ಪುತ್ರನಿಗೆ ಅಡ್ಡಿಯಾಗಬಹುದು ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರ. ಅವರ ಇಂತಹ ಲೆಕ್ಕಾಚಾರ ಹಿಂದಿನಿಂದಲೂ ಚಾಲ್ತಿಯಲ್ಲಿರು ವುದರಿಂದ ಪಂಚಮಸಾಲಿ ಸಮುದಾಯವನ್ನು ಬಲಿಷ್ಟ ಗೊಳಿಸುವ ಬೇಡಿಕೆಯನ್ನು ಅವರು ಒಪ್ಪುತ್ತಿಲ್ಲ ಎಂಬುದು ಸದ್ಯದ ವಾದ.

ಇದು ಒಂದು ಮಟ್ಟಿಗೆ ನಿಜವಾದರೂ ಮತ್ತೊಂದು ಕಡೆಯಿಂದ ಯಡಿಯೂರಪ್ಪ ಅವರಿಗೆ ವೀರಶೈವ – ಲಿಂಗಾಯತರು ಒಗ್ಗಟ್ಟಾ ಗಿರಬೇಕು. ಅವರು ಒಗ್ಗಟ್ಟಾಗಿರುವ ಕಾರಣಕ್ಕಾಗಿಯೇ ತಮ್ಮ ನಾಯಕತ್ವಕ್ಕೆ ಶಕ್ತಿ ದಕ್ಕಿದೆ ಎಂಬುದು ಗೊತ್ತಿದೆ. ಹೀಗಾಗಿಯೇ ಅವರು ಪಂಚಮಸಾಲಿ ಸಮುದಾಯವನ್ನಷ್ಟೇ ನೋಡದೆ ಒಟ್ಟಾರೆಯಾಗಿ ವೀರಶೈವ – ಲಿಂಗಾಯತರನ್ನು ಪ್ರವರ್ಗ 2 ಎ ಪಟ್ಟಿಗೆ ಸೇರಿಸ ಬೇಕು ಎಂದು ಪ್ರಯತ್ನಿಸುತ್ತಿದ್ದಾರೆ.

ಇಂತಹ ಕಾಲದಲ್ಲಿ ವಿಶೇಷವಾಗಿ ಪಂಚಮಸಾಲಿ ಸಮುದಾಯಕ್ಕೆ ಈ ಸವಲತ್ತು ಸಿಕ್ಕರೆ ಸಹಜವಾಗಿಯೇ ಸಾದರು, ಕುಡು ಒಕ್ಕಲಿಗರು ಸೇರಿದಂತೆ ಹಲ ಒಳಪಂಗಡ ಗಳಿಗೆ ಅಸಮಾಧಾನ ಶುರುವಾಗುತ್ತದೆ. ಈ ಅಸಮಾಧಾನ ವೀರಶೈವ – ಲಿಂಗಾಯತ ನಾಯಕತ್ವದ ಕಿರೀಟಕ್ಕಾಗಿ ಕನಸು ಕಾಣುತ್ತಿರುವ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಅಡ್ಡಗಾಲಾಗಬಹುದು ಎಂಬುದು ಯಡಿಯೂರಪ್ಪ ಅವರ ಯೋಚನೆ.

ಇದೇ ಕಾರಣಕ್ಕಾಗಿ ಅವರು ಪಂಚಮಸಾಲಿ ಸಮುದಾಯ ವನ್ನು ಹಿಂದುಳಿದ ಪ್ರವರ್ಗ 2 ಎ ಪಟ್ಟಿಗೆ ಸೇರಿಸಬೇಕು ಎಂಬ ಕೂಗಿಗೆ ಹೆಚ್ಚು ಆದ್ಯತೆ ಕೊಡಲಿಲ್ಲ. ಪರಿಣಾಮ? ಅವರ ವಿರುದ್ಧ ಸಮುದಾಯದ ಬಸವ ಜಯ ಮೃತ್ಯುಂಜಯ ಸ್ವಾಮಿ ನೇರವಾಗಿ ತಿರುಗಿ ಬಿದ್ದಿದ್ದಾರೆ. ಯಾವಾಗ ಅವರು ತಿರುಗಿ ಬಿದ್ದರೋ? ಆಗ ಮುಖ್ಯಮಂತ್ರಿ ಯಡಿಯೂರಪ್ಪ; ಈ ಸಂಬಂಧ ಅಧ್ಯಯನ ನಡೆಸಿ ವರದಿ ನೀಡುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ ನೀಡಿದ್ದಾರೆ. ಆದರೆ ಇದು ಅಷ್ಟಕ್ಕೇ ನಿಲ್ಲುವ ಅಟವಾಗಿ ಕಾಣುತ್ತಿಲ್ಲ.

ಯಾಕೆಂದರೆ ಇಷ್ಟೆಲ್ಲ ನಡೆದ ಮೇಲೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಕ್ಕರೂ ಇದು ತಮ್ಮ ಹೋರಾಟದ ಫಲ ಎಂದು ಹೇಳಿಕೊಳ್ಳಲು ಸಮುದಾಯದ ನಾಯಕರು, ಮಠಾಧಿಪತಿಗಳಿಗೆ ಸಾಧ್ಯವಾಗುತ್ತದೆ. ಒಂದು ವೇಳೆ ಸಿಗದೇ ಇದ್ದರೂ ತಮ್ಮ ಪುತ್ರನನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಪಂಚಮ ಸಾಲಿಗಳು ಒಗ್ಗಟ್ಟಾಗಲು ಯಡಿಯೂರಪ್ಪ ಬಿಡುತ್ತಿಲ್ಲ ಎಂಬ ಕೂಗು ಮತ್ತಷ್ಟು ಗಟ್ಟಿಯಾಗುತ್ತದೆ. ಭವಿಷ್ಯದ ಲಿಂಗಾಯತ ನಾಯಕತ್ವದ ಮೇಲೆ ಕಣ್ಣಿಟ್ಟಿರುವ ವಿಜಯೇಂದ್ರ ಅವರಿಗೆ ಇದು
ನಿಶ್ಚಿತ ವಾಗಿಯೂ ದೊಡ್ಡ ಅಡ್ಡಿ.

ಅಂದ ಹಾಗೆ ರಾಮಕೃಷ್ಣ ಹೆಗಡೆ ಅವರ ನೆತ್ತಿಯ ಮೇಲೆ ಕುಳಿತಿದ್ದ ಲಿಂಗಾಯತ ನಾಯಕತ್ವದ ಕಿರೀಟ ಯಡಿಯೂರಪ್ಪ ಅವರ ನೆತ್ತಿಯ ಮೇಲೆ ಜಾರಿದ ಸಂದರ್ಭಕ್ಕೂ, ಈಗಿನ ಸಂದರ್ಭಕ್ಕೂ ಬಹಳ ವ್ಯತ್ಯಾಸವಿದೆ. 2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತಲ್ಲ? ಆ ಸಂದರ್ಭದಲ್ಲಿ ಜೆಡಿಎಸ್ ಜತೆಗೂಡಿ ಸರಕಾರ ರಚಿಸುವ ಅನಂತಕುಮಾರ್ ಅವರ ಪ್ರಯತ್ನ ವಿಫಲವಾಯಿತು. ಆದರೂ ಶಾಸಕಾಂಗ ಪಕ್ಷದ ಮೇಲೆ ತಮ್ಮ ನಿಯಂತ್ರಣವಿರಲಿ ಎಂಬ ಕಾರಣಕ್ಕಾಗಿ ಅನಂತಕುಮಾರ್ ಅವರು ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಅವರನ್ನು ತರಲು ಮುಂದಾದರು.

ಈ ಬೆಳವಣಿಗೆಯಿಂದ ಕೆರಳಿದ ಯಡಿಯೂರಪ್ಪ ಅವರು ತಮ್ಮ ಹುಟ್ಟು ಹಬ್ಬದ ಹೆಸರಿನಲ್ಲಿ ಸಮಾರಂಭವೊಂದನ್ನು
ಏರ್ಪಡಿಸಿದರಲ್ಲ? ಈ ಸಮಾರಂಭದಲ್ಲಿ ಭಾಗವಹಿಸಿದ ಲಿಂಗಾಯತ ಮಠಾಧೀಪತಿಗಳು, ತಮ್ಮ ಸಮುದಾಯವನ್ನು
ನಿರ್ಲಕ್ಷಿಸಿದರೆ ಸಹಿಸುವುದಿಲ್ಲ ಎಂದು ಬಿಟ್ಟರು. ಯಾವಾಗ ಅವರು ಈ ಮಾತುಗಳನ್ನು ಹೇಳಿದರೋ? ಇದನ್ನು ಗ್ರಹಿಸಿದ
ಬಿಜೆಪಿ ಹೈಕಮಾಂಡ್ ಎಚ್ಚೆತ್ತುಕೊಂಡಿತು.

ಅಷ್ಟೇ ಅಲ್ಲ, ಯಡಿಯೂರಪ್ಪ ಇಲ್ಲಿಗೆ, ಅನಂತಕುಮಾರ್ ದಿಲ್ಲಿಗೆ ಎಂಬ ಸೂತ್ರವನ್ನು ರೂಪಿಸಿ ಸಮಸ್ಯೆಯನ್ನು ಬಗೆ ಹರಿಸಿತು.
ಅಲ್ಲಿಯವರೆಗೆ ಈ ನಾಡಿನ ರೈತ ನಾಯಕರಾಗಿದ್ದ ಯಡಿಯೂರಪ್ಪ ಲಿಂಗಾಯತ ನಾಯಕರಾಗಿ ಪರಿವರ್ತನೆಯಾಗಿದ್ದು ಹೀಗೆ. ಆದರೆ ಅವತ್ತಿನ ಸ್ಥಿತಿಗೂ, ಇವತ್ತಿನ ಸ್ಥಿತಿಗೂ ಹೋಲಿಕೆಯೇ ಇಲ್ಲ. ಅವತ್ತು ಲಿಂಗಾಯತ ನಾಯಕತ್ವದ ವಿಷಯದಲ್ಲಿ ಯಡಿಯೂ ರಪ್ಪ ಅವರ ವಿರುದ್ಧ ನಿಲ್ಲುವ ಮತ್ತೊಬ್ಬ ಲಿಂಗಾಯತ ನಾಯಕ ಇರಲಿಲ್ಲ.

ಆದರೆ ಅದೇ ಪರಿಸ್ಥಿತಿ ವಿಜಯೇಂದ್ರ ಅವರ ಕಣ್ಣ ಮುಂದಿಲ್ಲ. ಹೀಗಾಗಿ ಅವರ ದಾರಿ ಬಹಳ ದುರ್ಗಮ. ಪಂಚಮಸಾಲಿ ಸಮುದಾಯದ ಧ್ವನಿ ಏಕಕಾಲಕ್ಕೆ ಯಡಿಯೂರಪ್ಪ ಅವರಿಗೆ ಮತ್ತು ವಿಜಯೇಂದ್ರ ಅವರಿಗೆ ಈ ಅಂಶವನ್ನು ಮನದಟ್ಟು ಮಾಡಿಕೊಟ್ಟಿದೆ ಎಂಬುದು ನಿಜ.