ಅಭಿಮತ
ಭಾರತಿ ಎ.ಕೊಪ್ಪ
ಪಂಚತಂತ್ರ, ರಾಜ-ಮಹಾರಾಜರ ಕಥೆಗಳು, ಜಗತ್ತಿಗೆ ಬೆಳಕು ತೋರಿದ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದರಂಥವರ ದಿವ್ಯಜೀವನದ ನಿದರ್ಶನಗಳು ಹೀಗೆ ತರಹೇವಾರಿ ಮೌಲ್ಯಯುತ ಕಥೆಗಳು ದಶಕಗಳ ಹಿಂದೆ ಶಾಲಾ ಶಿಕ್ಷಣದ ವೇಳಾಪಟ್ಟಿಯ ಅವಿಭಾಜ್ಯ ಅಂಗಗಳಾಗಿದ್ದವು.
ಹಾಗಂತ ಈಗಿನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ವೇಳಾಪಟ್ಟಿಯಲ್ಲಿ ನೀತಿ ಶಿಕ್ಷಣದ ತರಗತಿ ಇಲ್ಲವೆಂದೇನಲ್ಲ. ಆದರೆ ಅಂಕಗಳಿಕೆಯ ನಾಗಾಲೋಟ ದಲ್ಲಿ, ಶೇಕಡ ೧೦೦ ಫಲಿತಾಂಶವನ್ನು ಶಾಲೆಗಳು ಕೊಡಲೇ ಬೇಕೆಂಬ ಪೈಪೋಟಿಯಲ್ಲಿ ನೀತಿಶಿಕ್ಷಣದ ಅವಧಿಯನ್ನು ಗಣಿತ, ಇಂಗ್ಲಿಷ್ ಅಥವಾ ವಿಜ್ಞಾನ ಶಿಕ್ಷಕರು ಹೆಚ್ಚುವರಿ ಅವಧಿಯಾಗಿ ತೆಗೆದುಕೊಳ್ಳುವುದು ಸರ್ವೇಸಾಮಾನ್ಯವಾಗಿದೆ.
ಗ್ರಂಥಾಲಯದ ಓದು: ಮೊಬೈಲ್ ಗುಂಗಿನಿಂದಾಗಿ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ತೋರುತ್ತಿಲ್ಲ ಎಂದು ಆಕ್ಷೇಪಿಸುವವರು ಕೂಡ ಈ ಬಾಬತ್ತನ್ನು ಗಮನಿಸುವುದೇ ಇಲ್ಲ. ತಮ್ಮ ಮಗು ವಾರದಲ್ಲೊಮ್ಮೆಯಾದರೂ ಶಾಲಾ ಗ್ರಂಥಾಲಯದಿಂದ ಒಂದು ಉತ್ತಮ ಪುಸ್ತಕವನ್ನು ತಂದು ಮೌಲ್ಯಯುತ ಕಥೆಗಳನ್ನು ತಾನೇ ಓದಲಿ ಎಂದು ಬಯಸುವ ಪಾಲಕರು ಕಡಿಮೆಯೆನ್ನಬೇಕು. ಮಕ್ಕಳು ಶಾಲಾಪಠ್ಯದ ಓದಿನತ್ತಲೇ ಗಮನ ಹರಿಸಲಿ ಎಂಬುದು ಅವರ ಆಶಯವಾಗಿರುತ್ತದೆ. ಆದರೆ ಮಕ್ಕಳು ಗ್ರಂಥಾಲಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಾಗ, ಸಾಧಕರ ಸಾಧನೆಗಳು ಒಂದಷ್ಟು ಸ್ಫೂರ್ತಿ ತುಂಬುವುದರ ಜತೆಗೆ ಮಕ್ಕಳ ಕಲ್ಪನಾಶಕ್ತಿಯೂ ಹಿಗ್ಗುತ್ತದೆ ಎಂಬುದನ್ನು ಪಾಲಕರು ಅರಿಯಬೇಕು.
ಸಂಘ-ಸಂಸ್ಥೆಗಳ ಕಾಳಜಿ: ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ದೊರಕಿಸಿಕೊಡುವ ಸದುದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ‘ಶಾಂತಿವನ ಟ್ರಸ್ಟ್’ ನಾಡಿನ ಹಿರಿಯ-ಕಿರಿಯ ಬರಹಗಾರರ ಮೌಲಿಕ ಲೇಖನಗಳನ್ನು ಆಯ್ದು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಿಗೆಂದು ಕೃತಿಗಳನ್ನು ಪ್ರಕಟಿಸುತ್ತಾ ಬಂದಿದೆ. ಅವನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿ, ಬಳಿಕ ಪುಸ್ತಕ ಆಧರಿತ ಸೂಕ್ತ ಸ್ಪರ್ಧೆಗಳನ್ನೂ ಏರ್ಪಡಿಸಿ, ಜೀವನ ಮೌಲ್ಯಗಳನ್ನು ಅವರಲ್ಲಿ ತುಂಬುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸುತ್ತದೆ ಈ ಟ್ರಸ್ಟ್. ಇದೊಂದು ಉದಾಹರಣೆ ಮಾತ್ರ. ಇಂಥ ಪರಿಪಾಠವನ್ನು ರಾಜ್ಯದೆಲ್ಲೆಡೆಯ ಸಂಘ-ಸಂಸ್ಥೆಗಳು ಅನುಸರಿಸಬಹುದು.
ಜಗತ್ತಿನ ವಿವಿಧ ದೇಶಗಳಲ್ಲಿ ನೀತಿಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. ಜಪಾನ್‌ನಲ್ಲಿ ಒಂದರಿಂದ ೯ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಜೀವನದ ಮಹತ್ವ, ಇತರರ ವಿಭಿನ್ನ ಅಭಿಪ್ರಾಯಗಳನ್ನು ಆಲಿಸುವಿಕೆ, ನ್ಯಾಯಯುತವಾಗಿ ವರ್ತಿಸುವಿಕೆ, ದೇಶವನ್ನು ಗೌರವಿಸುವಿಕೆ ಮತ್ತು ವಿದೇಶಿ ಸಂಸ್ಕೃತಿಗಳ ಕಲಿಕೆ ಮೊದಲಾದ ವಿಷಯಗಳನ್ನು ಶಿಕ್ಷಣದಲ್ಲಿ ಅಳವಡಿಸಲಾಗಿದೆ.
ನೀತಿಶಿಕ್ಷಣವು ಸ್ವೀಡಿಶ್ ಶಾಲೆಗಳ ಒಂದು ಭಾಗವಾಗಿದ್ದರೆ, ಥಾಯ್ಲೆಂಡ್‌ನಲ್ಲಿ ಬೌದ್ಧ ಧಾರ್ಮಿಕ ಶಿಕ್ಷಣದ ಸಂದರ್ಭದಲ್ಲಿ ಸಾಂಪ್ರದಾಯಿಕ ಮೌಲ್ಯ ಗಳನ್ನು ಕಲಿಸಲಾಗುತ್ತದೆ. ಆಸ್ಟ್ರೇಲಿಯಾ ಸರಕಾರವು ಶಾಲೆಗಳಲ್ಲಿನ ನೀತಿಶಿಕ್ಷಣಕ್ಕೆ ಧನಸಹಾಯ ನೀಡುವುದನ್ನು ಆದ್ಯತೆಯಾಗಿ ಪರಿಗಣಿಸಿದೆ. ಕೇವಲ ಪುಸ್ತಕದ ಓದನ್ನೇ ನೀತಿಶಿಕ್ಷಣ ಎನ್ನಲಾಗದು. ಮಗುವು ತನ್ನ ಬಹುತೇಕ ಸಮಯವನ್ನು ಶಾಲೆಯಲ್ಲಿ ಕಳೆಯುವುದರಿಂದ ಅಲ್ಲಿನ ಪರಿಸರದ ಪ್ರತಿ ಚಟುವಟಿಕೆಯಲ್ಲೂ ಮೌಲ್ಯವು ರೂಢಿಗತವಾಗುವಂತಿರಬೇಕು. ಪರಸ್ಪರ ಸಹಕಾರ, ಊಟದಲ್ಲಿ ಶಿಸ್ತು, ಹಂಚಿ ತಿನ್ನುವಿಕೆ, ಸ್ನೇಹಪರತೆ, ಶಾಲಾ ಪರಿಸರದ ಶುಚಿತ್ವ ಕಾಪಾಡುವುದು ಇಂಥ ಮೌಲ್ಯಗಳಾಗಿವೆ.
ಮನೆಯಲ್ಲೂ ಹಿರಿಯರ ಆರೈಕೆ, ಓರಗೆಯವರೊಂದಿಗೆ ಹೊಂದಾಣಿಕೆ ಇಂಥ ಮೌಲ್ಯಗಳನ್ನು ಮಕ್ಕಳು ತಮಗರಿವಿಲ್ಲದಂತೆ ಅಭ್ಯಾಸ ಮಾಡಿಕೊಳ್ಳುವ ವಾತಾವರಣವನ್ನು ಪಾಲಕರು ರೂಪಿಸಬೇಕು. ಪ್ರಾಣಿ-ಪಕ್ಷಿ, ಗಿಡ-ಮರಗಳ ಆರೈಕೆಯೂ ನೀತಿಶಿಕ್ಷಣದ ಭಾಗವೇ. ದಿನಪತ್ರಿಕೆಗಳಲ್ಲಿ ಸುಭಾಷಿತ,
ದಾರ್ಶನಿಕರ ನುಡಿ, ಸಾಧಕರ ಕಥೆ, ಸಂಸ್ಕೃತಿಗಳ ಪರಿಚಯದ ಬರಹಗಳು ಇದ್ದೇ ಇರುತ್ತವೆ. ಇವುಗಳ ಓದಿಗೆ ಮಕ್ಕಳನ್ನು ಪ್ರೇರೇಪಿಸಬೇಕಾದ್ದು ಪಾಲಕರ ಕರ್ತವ್ಯ.
‘ಹಕ್ಕಿಯಂತೆ ಹಾರುವುದನ್ನು, ಮೀನಿನಂತೆ ಈಜುವುದನ್ನು ಮಾನವ ಕಲಿತಿದ್ದಾನೆ; ಆದರೆ ಮೌಲ್ಯಗಳನ್ನು ಅಳವಡಿಸಿಕೊಂಡು ಬಾಳುವುದನ್ನು ಮಾತ್ರ ಕಲಿಯಲಿಲ್ಲ’ ಎಂದಿದ್ದಾರೆ ಡಾ.ಎಸ್. ರಾಧಾಕೃಷ್ಣನ್. ಹಾಗಾಗಿ ನಾವಿಂದು ವೈಜ್ಞಾನಿಕವಾಗಿ ಎಷ್ಟೇ ಪ್ರಗತಿ ಹೊಂದಿದ್ದರೂ, ನೈತಿಕ ಮೌಲ್ಯ ಬೆಳೆಸುವ ಜೀವನ ಶಿಕ್ಷಣವೂ ಅವರ ಕಲಿಕೆಯ ಭಾಗವಾಗುವಂತೆ ನೋಡಿಕೊಳ್ಳಬೇಕಿದೆ.
(ಲೇಖಕಿ ಹವ್ಯಾಸಿ ಬರಹಗಾರ್ತಿ)