ಸಂಸ್ಮರಣೆ
ಕಿರಣ್ ಉಪಾಧ್ಯಾಯ, ಬಹ್ರೈನ್
dhyapaa@gmail.com
ವಿಜ್ಞಾನ ಓದಿ, ಮುಂಬೈನ ವಿಲ್ಸನ್ ಕಾಲೇಜಿನಿಂದ ಪದವಿ ಪಡೆದು, ಆರಂಭದ ದಿನಗಳಲ್ಲಿ ತಬಲಾ ಕಲಿತು, ಮಾಸ್ಟರ್ ನವರಂಗ್ ಅವರಲ್ಲಿ ಸಂಗೀತ
ತರಬೇತಿ ಪಡೆದು, ವೈದ್ಯರಾಗಬೇಕೆಂದು ಬಯಸಿ, ಗಝಲ್ ಹಾಡುಗಾರನಾಗಿ ಭಾರತೀಯರ ಮನ ತಟ್ಟಿ, ಸಂಗೀತ ಕಛೇರಿಯಲ್ಲಿ ಬಾಲ ಕಲಾವಿದನಾಗಿ ಹಾಡಿದ ಮೊದಲ ಹಾಡು ‘ಏ ಮೇರೆ ವತನ್ ಕೆ ಲೋಗೋ’ಕ್ಕೆ ಪ್ರೇಕ್ಷಕರಿಂದ ಐವತ್ತೊಂದು ರುಪಾಯಿಯ ಬಹುಮಾನ ಪಡೆದು, ಕಾರುಗಳಲ್ಲಿ ಅತೀವ ಆಸಕ್ತಿ ಉಳ್ಳವರಾಗಿ, ಚಿತ್ರನಟ ಜಾನ್ ಅಬ್ರಹಾಂನಂಥವರಿಗೆ ಪ್ರೇರಣೆಯಾಗಿ, ಗಝಲ್ ಲೋಕದ ತಾರೆಯಾಗಿ, ಸಂಗೀತ ಪ್ರೇಮಿಗಳ ಹೃದಯಸಾಮ್ರಾಟ ನಾಗಿ ಕೆಲ ವರ್ಷ ಮೆರೆದು, ಹಾಗೆಯೇ ಗಪ್-ಚುಪ್ ಆಗಿ ಯಾರಿಗೂ ತಿಳಿಯದಂತೆ, ಎಲ್ಲರನ್ನೂ ಬಿಟ್ಟು ಹೋದವರು, ಪಂಕಜ್ ಉಧಾಸ್.
ಪಂಕಜ್ ಉಧಾಸ್ ಎಂದಾಕ್ಷಣ ನೆನಪಾಗುವುದು ‘ಚಿಟ್ಟಿ ಆಯೀ ಹೈ…’ ಹಾಡು. ವಿದೇಶದಲ್ಲಿ ನೆಲೆಸಿ ತನ್ನ ಊರನ್ನು, ತನ್ನವರನ್ನು ಮರೆತ ಭಾರತೀಯರಿಗಾಗಿ ತಾಯ್ನಾಡಿನಿಂದ ಪತ್ರವನ್ನು ತಲುಪಿಸಿದ ಓಲೆಕಾರ ಪಂಕಝ್ ಉಧಾಸ್. ‘ಚಿಟ್ಟಿ ಆಯೀ ಹೈ… ವತನ್ ಸೆ ಚಿಟ್ಟಿ ಆಯೀ ಹೈ…’ ಎಂದು
ಹಾಡುತ್ತಾ, ಊರಲ್ಲಿರುವ ತಾಯಿಯ ಅನಾರೋಗ್ಯ, ಅವಳ ಸೇವೆ ಮಾಡುತ್ತಿರುವ ಮಡದಿ, ಮದುವಣಗಿತ್ತಿಯಾಗಿ ಪಲ್ಲಕ್ಕಿಯಲ್ಲಿ ಕುಳಿತ ತಂಗಿ, ಸುಗ್ಗಿ-ದೀಪಾವಳಿ-ಹೋಳಿ ಯಂಥ ಹಬ್ಬಗಳಲ್ಲಿ ನಿರ್ಮಾಣವಾದ ನಿರ್ವಾತ, ಎಲ್ಲವನ್ನೂ ಹೇಳುವ ಪತ್ರ ಅದು.
ಬಹುಶಃ ಮಗನಿಂದ ದೂರ ಇರುವ, ಒಬ್ಬ ಹತಾಶ, ಭಾವುಕ ತಂದೆ ತನ್ನ ಮಗನಿಗೆ ಬರೆಯಬಹುದಾದ ಅತ್ಯುತ್ತಮ ಪತ್ರ ಎಂದರೆ ತಪ್ಪಾಗಲಾರದು.
‘ನಾಮ್’ ಹಿಂದಿ ಚಿತ್ರಕ್ಕೆ ಆನಂದ್ ಬಕ್ಷಿ ಬರೆದ ಹಾಡನ್ನು ಅಂಚೆಯವನಾಗಿ ತಮ್ಮ ದನಿಯಲ್ಲಿ ಜನರಿಗೆ ತಲುಪಿಸಿದ್ದು ಪಂಕಜ್ ಉಧಾಸ್. ಕೆಲಸಕ್ಕೆಂದು ದುಬೈಗೆ ಹೋದ ನಾಯಕ ನಟ ಸಂಜಯ್ ದತ್ ಅಭಿನಯ, ಲಕ್ಷ್ಮೀಕಾಂತ್ -ಪ್ಯಾರೆಲಾಲ್ ಸಂಗೀತ, ಚಿತ್ರೀಕರಣ, ಎಲ್ಲವೂ ಅದ್ಭುತ. ಇಂದಿಗೂ ‘ನಾಮ್’ ಎಂದಾಕ್ಷಣ ಮೊದಲು ನೆನಪಾಗುವುದೇ ‘ಚಿಟ್ಟಿ ಆಯೀ ಹೈ…’ ಹಾಡು.
ಈ ಹಾಡು ಬಿಬಿಸಿ ರೇಡಿಯೋದ ಸಹಸ್ರಮಾನದ ನೂರು ಹಾಡುಗಳ ಪಟ್ಟಿಯಲ್ಲಿ ಸ್ಥಾನ ಪಡೆದರೆ ಅದಕ್ಕೆ ಪಂಕಜ್ ಉಧಾಸ್ ಕೂಡ ಕಾರಣ
ಎನ್ನುವುದರಲ್ಲಿ ಎರಡು ಮಾತಿಲ್ಲ. ಪಂಕಜ್ ಉಧಾಸ್ ಗಝಲ್, ಹಿಂದಿ ಹಾಡುಗಳ ಜತೆಗೆ ಕನ್ನಡದಲ್ಲೂ ಹಾಡಿ, ಕರ್ನಾಟಕದಲ್ಲೂ ಮನೆಮಾತಾಗಿದ್ದ
ವರು. ಸುದೀಪ್ ಅಭಿನಯದ ‘ಸ್ಪರ್ಶ’ ಚಿತ್ರದಲ್ಲಿ ‘ಚೆಂದಕಿಂತ ಚೆಂದ…’ ಎಂದು ಹಾಡಿ ಜನಪ್ರಿಯರಾಗಿದ್ದ ಪಂಕಜ್ ಉಧಾಸ್, ಸ್ವತಃ ಸುರದ್ರೂಪಿಯೂ ಆಗಿದ್ದರು. ಮನಸ್ಸು ಮಾಡಿದ್ದರೆ ಸಾಕಷ್ಟು ಸಿನಿಮಾಗಳಲ್ಲಿ ಅವರು ಅಭಿನಯಿಸಬಹುದಾಗಿತ್ತು.
ಆದರೆ ಅವರಿಗೆ ಅಭಿನಯದಲ್ಲಿ ಆಸಕ್ತಿ ಇರಲಿಲ್ಲವೋ ಅಥವಾ ಭಯವಿತ್ತೋ ಗೊತ್ತಿಲ್ಲ, ಒಟ್ಟಿನಲ್ಲಿ ಅಭಿನಯಿಸಲು ಹಿಂಜರಿದರು. ಅವರ ಈ ಹಿಂಜರಿಕೆ
ಯಿಂದಾಗಿ ‘ನಾಮ್’ ಚಿತ್ರದ ಜನಪ್ರಿಯ ಹಾಡನ್ನು ಹಾಡುವ ಅವಕಾಶವೂ ಅವರ ಕೈತಪ್ಪಿ ಹೋಗುವ ಸಾಧತೆಯಿತ್ತು. ‘ನಾಮ್’ ಚಿತ್ರದಲ್ಲಿ, ಈ ಹಾಡು ಹಾಡಿದ ಗಾಯಕರೇ ಅಭಿನಯಿಸಬೇಕು ಎನ್ನುವುದು ನಿರ್ಮಾಪಕರಾದ ರಾಜೇಂದ್ರ ಕುಮಾರ್ ಮತ್ತು ನಿರ್ದೇಶಕರಾದ ಮಹೇಶ್ ಭಟ್ ಇಬ್ಬರದ್ದೂ ಆಸೆಯಾಗಿತ್ತು. ‘ನಮ್ಮ ಚಿತ್ರದಲ್ಲಿ ನೀವು ಒಂದು ಹಾಡು ಹಾಡುವುದಷ್ಟೇ ಅಲ್ಲ, ಅಭಿನಯಿಸಬೇಕು’ ಎಂದು ಉಧಾಸ್ ಅವರಲ್ಲಿ ಕೇಳಿಕೊಂಡಿದ್ದರು.
ಅದನ್ನು ಕೇಳಿದ ಉಧಾಸ್ ಎರಡು ವಾರಗಳವರೆಗೆ ಉತ್ತರವನ್ನೇ ಕೊಟ್ಟಿರಲಿಲ್ಲ. ಇದರಿಂದ ಕೋಪಗೊಂಡ ನಿರ್ಮಾಪಕ- ನಿರ್ದೇಶಕರು, ಪಂಕಜ್ ಅವರ ಹಿರಿಯ ಅಣ್ಣನೂ, ಗಾಯಕರೂ ಆದ ಮನ್‌ಹರ್ ಉಧಾಸ್ ಅವರಲ್ಲಿ ವಿಷಯ ತಿಳಿಸಿದರು. ಮನ್‌ಹರ್ ಪಂಕಜ್ ಅವರಲ್ಲಿ ಕೇಳಿದಾಗ, ಹಾಡುವುದಾದರೆ ಪರವಾಗಿಲ್ಲ, ಅಭಿನಯ ನನ್ನ ಪಾಲಿನ ತುತ್ತಲ್ಲ ಎಂದುಬಿಟ್ಟರು. ಈ ವಿಷಯವನ್ನು ಮನ್‌ಹರ್, ಮಹೇಶ್ ಭಟ್ ಮತ್ತು ರಾಜೇಂದ್ರ ಕುಮಾರ್ ಅವರಲ್ಲಿ
ತಿಳಿಸಿದಾಗ, ‘ಅವರು ಬೇರೆ ಪಾತ್ರದಲ್ಲಿ ಅಭಿನಯಿಸುವುದಲ್ಲ, ಹಾಡುಗಾರ ಪಂಕಜ್ ಉಧಾಸ್ ಆಗಿ ಅದೊಂದೇ ಹಾಡಿಗೆ ಅಭಿನಯಿಸಬೇಕು’ ಎಂದರು.
ಆಗ ಪಂಕಜ್ ಉಧಾಸ್ ‘ನಾಮ್’ ಚಿತ್ರದಲ್ಲಿ ಹಾಡಲು, ಅಭಿನಯಿಸಲು ಒಪ್ಪಿದ್ದರು. ಅದೆಷ್ಟೋ ಗಾಯಕರು ಒಂದೋ-ಎರಡೋ ಹಾಡು ಹಾಡಿ ಕಣ್ಮರೆಯಾಗುತ್ತಾರೆ. ಆದರೆ ಉಧಾಸ್ ದಶಕಗಳ ಕಾಲ ಭಾರತದ ಸಂಗೀತಪ್ರಿಯರ ಮನದಲ್ಲಿ ಸ್ಥಾಯಿಯಾಗಿ ಉಳಿದವರು. ಅದರಲ್ಲೂ ಮದ್ಯಪ್ರಿಯರ ಹೃದಯಕ್ಕೆ ಬಹಳ ಹತ್ತಿರವಾಗಿದ್ದವರು ಪಂಕಜ್ ಉಧಾಸ್. ‘ಎಕ್ ಐಸಾ ಘರ್ ಚಾಹಿಯೇ ಮುಝ್‌ಕೊ…’ ಎಂದು ಹಾಡುತ್ತಾ, ‘ನನಗೆ ಎಂತಹ ಮನೆ ಬೇಕೆಂದರೆ, ಒಂದು ಮೂಲೆಯಲ್ಲಿ ಗಝಲ್ ಕೂಟ ಇರಬೇಕು, ಇನ್ನೊಂದು ಮೂಲೆಯಲ್ಲಿ ಶರಾಬು ಸರಬರಾಜಾಗುತ್ತಿರಬೇಕು. ಆ ಮನೆಗೆ ರಾತ್ರಿ ಯಾರದರೂ ಬಂದರೆ ಬೆಳಗಿನವರೆಗೂ ಎಚ್ಚರಾಗಿದ್ದು, ಎರಡನ್ನೂ ಆನಂದಿಸಬೇಕು’ ಎನ್ನುತ್ತಾರೆ.
‘ಏ ಗಮೇ ಜಿಂದಗಿ…’ ಹಾಡಿನಲ್ಲಿ ‘ನಿನ್ನ ನೋಟದ ಶೆರೆ ಕುಡಿದು ಪ್ರe ತಪ್ಪಿದ ನನಗೆ ಮತ್ತೆಂದೂ ಪ್ರe ಹಿಂತಿರುಗಿ ಬಂದ ದಾವೆ ಮಾಡಲು ಆಗಲೇ ಇಲ್ಲ’ ಎನ್ನುತ್ತಾ, ‘ನನ್ನ ದುಃಖದ ಜೀವನವೇ, ಯಾವುದಾರೊಂದು ಸಲಹೆ ಕೊಡು. ಒಂದು ಕಡೆ ಅವಳ ಮನೆಯಿದೆ, ಇನ್ನೊಂದು ಕಡೆ ಶರಾಬು ಅಂಗಡಿಯಿದೆ. ನಾನು ಯಾವ ಕಡೆ ಹೋಗಬೇಕೆಂದು ಅರ್ಥ ವಾಗುತ್ತಿಲ್ಲ, ಇಬ್ಬರೊಟ್ಟಿಗೂ ನನಗೆ ಹತ್ತಿರದ ಸಂಬಂಧವಿದೆ, ನೀನೇ ಸಲಹೆ ನೀಡು’ ಎಂದು ಜೀವನವನ್ನೇ ಕೇಳುತ್ತಾರೆ. ‘ಸಬ್ ಕೊ ಮಾಲೂಮ್ ಹೈ ಮೈ ಶರಾಭೀ ನಹಿ…’ ಹಾಡಿನಲ್ಲಿ ‘ನಾನು ಕುಡುಕ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತು, ಆದರೆ ಯಾರಾದರೂ ಒತ್ತಾಯ ಮಾಡಿ ಕುಡಿಸಿದರೆ ನಾನಾದರೂ ಏನು ಮಾಡಲಿ?’ ಎನ್ನುತ್ತಾರೆ.
‘ಹುಯಿ ಮೆಹಂಗಿ ಬಹುತ್ ಹೈ ಶರಾಬ್ ಕಿ…’ ಎನ್ನುತ್ತಾ, ‘ಮದ್ಯದ ಬೆಲೆ ಹೆಚ್ಚಾಗಿದೆ, ಅದಕ್ಕಾಗಿ ಸ್ವಲ್ಪ ಸ್ವಲ್ಪವೇ ಕುಡಿ’ ಎಂದು ಮಾರ್ಮಿಕವಾಗಿ ಶೆರೆಯನ್ನು ನಿಧಾನವಾಗಿ ಕುಡಿಯುವಂತೆ ಹೇಳುತ್ತಾರೆ. ಅವರ ‘ಶರಾಬ್ ಚೀಜ್ ಹಿ ಐಸಿ ಹೈ’, ‘ನಿಖಲೋ ನಾ ಬೇನಖಾಬ್, ಜಮಾನಾ ಖರಾಬ್ ಹೈ’, ‘ಚಾಂದಿ ಜೈಸೆ ರಂಗ್ ಹೈ ತೇರಾ’, ‘ನಾ ಕಜರೇಕಿ ಧಾರ್’, ‘ಔರ್ ಆಹಿಸ್ತಾ ಕೀಜಿಯೆ ಬಾತೇ’, ‘ಘೂಂಘಟ್ ಕೊ ಮತ್ ಖೋಲ್’ ಎಲ್ಲವೂ ಜನಪ್ರಿಯ ಹಾಡುಗಳೇ. ‘ಸಾಜನ್’ ಚಿತ್ರದ ‘ಜಿಯೆ ತೋ ಜಿಯೇ ಕೈಸೆ, ಬಿನ್ ಆಪ್ ಕೆ’ ಹಾಡನ್ನು ಎಂದಾದರೂ ಮರೆಯಲು ಸಾಧ್ಯವೇ? ಇಂಥ ನೂರಾರು ಹಾಡನ್ನು ಹಾಡಿದವರು ಪಂಕಜ್ ಉಧಾಸ್. ಈ ಎಲ್ಲ ಹಾಡುಗಳನ್ನು ಬರೆದವರಿಗೆ ಎಷ್ಟು ಕೀರ್ತಿ ಸಲ್ಲಬೇಕೋ ಅಷ್ಟೇ ಕೀರ್ತಿ ಪಂಕಜ್ ಉಧಾಸ್ ಅವರಿಗೂ ಸಲ್ಲಬೇಕು.
ಒಂದು ಕುತೂಹಲಕಾರಿ ವಿಷಯ ಏನು ಗೊತ್ತೇ? ಅವರು ಯಾವುದೇ ಸಂಗೀತ ಕಛೇರಿಯಲ್ಲಿ ಹಾಡಲಿ, ಅದು ಕುಡುಕರ ಹಾಡು, ವೇಶ್ಯೆಯ ಹಾಡು, ಸೂಫಿ ಗೀತೆ, ಪ್ರೇಮ ಕವಿತೆ ಯಾವುದೇ ಕಾರ್ಯಕ್ರಮವಿದ್ದರೂ, ಮೊದಲು ಹನುಮಾನ್ ಚಾಲೀಸಾ ಪಠಿಸಿ, ನಂತರವೇ ವೇದಿಕೆಯ ಮೇಲೆ ಹೋಗುತ್ತಿದ್ದರು ಉಧಾಸ್. ತಮ್ಮ ಮೊದಲ ಅಲ್ಬಂ ಬಿಡುಗಡೆಗೊಳ್ಳಬೇಕಾಗಿದ್ದ ಗಳಿಗೆಯಲ್ಲಿ ಹಣಕಾಸಿನ ತೊಂದರೆ ಎದುರಿಸುತ್ತಿದ್ದಾಗ, ವೃತ್ತಿಯಲ್ಲಿ ಗಗನಸಖಿಯಾಗಿದ್ದ ಮಡದಿ ಸಹಾಯಕ್ಕೆ ನಿಂತಿದ್ದರು. ಈಗ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ತುತ್ತಾಗಿ, ಮಡದಿ, ಇಬ್ಬರು ಪುತ್ರಿಯರು, ಅಪಾರವಾದ ಸಂಗೀತದ ಬಂಧು-ಬಳಗವನ್ನು ಬಿಟ್ಟು ಹೋಗಿದ್ದಾರೆ. ‘ಮೊಹೆ ಆಯೀ ನ ಜಗ ಸೆ ಲಾಜ್… ಕೆ ಘುಂಗರೂ ಟೂಟ್ ಗಯೇ’ ಎಂದದ್ದು ಮಾತ್ರ ನಮ್ಮ ಕಿವಿಯಲ್ಲಿ
ಈಗಲೂ ಸುಳಿಯುತ್ತಿದೆ.