ಪ್ರಸ್ತುತ
ವಿಜಯ್ ದರ್‌ಡ
ಪೊಲೀಸ್ ಮತ್ತು ಪತ್ತೆದಾರಿ ದಳದ ಕಣ್ಣುಗಳಿಂದ ನೀವು ಹೇಗೆ ತಪ್ಪಿಸಿಕೊಂಡಿರಿ ಎಂಬುದನ್ನು ನೀವು ಒಂದು ದಿನ ಖಂಡಿತವಾಗಿ ನಮ್ಮ ಮುಂದೆ ಹೇಳುತ್ತೀರೆಂಬ ವಿಶ್ವಾಸವಿದೆ. ನಾಪತ್ತೆ ಮಾರ್ಗೋಪಾಯಗಳ ಬಗ್ಗೆ ನೀವು ಪೋಲೀಸ್ ಮತ್ತು ಇಂಟೆಲಿಜೆನ್ಸ್ ಸಿಬ್ಬಂದಿಗೆ ತರಬೇತಿ ಕಾರ‍್ಯಾಗಾರವನ್ನು ನೀವು ನಡೆಸಿ ಕೊಡಬೇಕು, ಪರಮ ಬೀರ್‌ಸಿಂಗ್!
ಪರಮ್ ಬೀರ್ ಸಿಂಗ್ ಎಲ್ಲಿದ್ದಾರೆಂಬ ಬಗ್ಗೆ ಸರಕಾರಿ ಆಡಳಿತ ಯಂತ್ರಕ್ಕೇ ಗೊಂದಲವಿತ್ತು. ಇಂಥ ಸನ್ನಿವೇಶದಲ್ಲಿ ಮರಳಿ ಬಂದ ಪರಮಬೀರ್ ಸಿಂಗ್ ನಿಜಕ್ಕೂ ಅನನ್ಯ ವ್ಯಕ್ತಿ. ಅವರಂಥವರು ಇನ್ನೊಬ್ಬರಿಲ್ಲ. ಮಿಸ್ಟರ್ ಇಂಡಿಯಾ ಥರ ತಂಗಾಳಿಯಲ್ಲಿ ಮಾಯವಾಗಿ ಬಿಡುವ ಅಪೂರ್ವ ಶಕ್ತಿ ಅವರಲ್ಲಿದೆ. ಪೊಲೀಸು ಇಲಾಖೆಯ ಅತ್ಯುನ್ನತ ಹುದ್ದೆ ಯಲ್ಲಿದ್ದು, ಇಲಾಖೆ ಮತ್ತು ಸರಕಾರದ ತನಿಸ್ಖಾವ ತಂಡಗಳ ಕಣ್ಣಿಗೆ ಕಾಣಿಸದಂತೆ ಅಗೋಚರ ವಾಗುವ ಅವರ ಮ್ಯಾಜಿಕ್ಕಿಗೆ ಸಾಟಿಯಿಲ್ಲ. ಅವರ ಪುನರಾಗಮನ ಅದೊಂದು ಬಗೆಯ ಪವಾಡ ಸದೃಶ ಸಂಗತಿ, ಅದನ್ನು ಸಂಭ್ರಮಿಸಲೇಬೇಕು.
ಕೊನೆಗೂ ವಾಪಾಸು ಬಂದಿರಲ್ಲ, ಪರಮ್ ಬೀರ್ ಸಿಂಗ್, ಮಹಾರಾಷ್ಟ್ರದ ಜನತೆಯ ಪರವಾಗಿ ನಿಮಗೆ ಶುಭ ಕಾಮನೆಗಳು. ನಿಮ್ಮ ವಾಪಸಾತಿ ಸಂಭ್ರಮಕ್ಕೆ ಕಾರಣವಾಗಿದೆ. ನಿಮ್ಮ ವಾಪಸಾತಿಯ ದಿನವನ್ನು ಸಂತರ ಮತ್ತು ಋಷಿಗಳ ಆಗಮನದ ದಿನದಂತೆ ಆಚರಿಸಬೇಕಾಗಿದೆ. ನಿಮ್ಮ ಆಗಮನದ ದಿನಾಂಕ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಹೌದು, ಯಾಕಾಗ ಬಾರದು? ಪೋಲೀಸ್ ಮತ್ತು ಇಂಟೆಲಿಜೆನ್ಸ್ ಏಜೆನ್ಸಿಗಳು ನಿಮ್ಮನ್ನು ಪತ್ತೆ ಹಚ್ಚುವಲ್ಲಿ ಎಷ್ಟು ಕೆಲಸ ಮಾಡಿಲ್ಲ. ಅದೆಷ್ಟು ಜನ ನಿಮ್ಮ ಶೋಧ ಕಾರ್ಯದ ಹಾದಿಯಲ್ಲಿ ಸುಸ್ತುಹೊಡೆದಿಲ್ಲ ಮತ್ತು ಅದೆಷ್ಟು ಜನರ ಕಣ್ಣೀರು ಸುರಿಸಿಲ್ಲ. ನೀವೊಬ್ಬ ಊಹಾತೀತ ವ್ಯಕ್ತಿ.
ನಿಮ್ಮ ಬರುವಿಕೆ ಗಾಗಿ ನಾವು ಬಹಳ ದಿನಗಳಿಂದ ಕಾತರಿಸಿ ಕಾಯು ತ್ತಿದ್ದೆವು. ತಡವಾದರೂ ಬರುತ್ತಿದ್ದೀರಲ್ಲ. ನೀವೀಗ ವಾಪಸಾಗುತ್ತಿದ್ದೀರಿ. ನಿಮ್ಮ ಬರುವಿಕೆ ಯಾವುದೇ ಪವಾಡಕ್ಕಿಂತ ಕಮ್ಮಿಯಲ್ಲ. ಶ್ರೀಮಾನ್ ಪರಮ್ ಬೀರ್ ಸಿಂಗ್ ಅವರೇ, ನಾನು ನಿಮಗಾಗಿ ಬಹುದಿನಗಳಿಂದ ಕಾಯುತ್ತಿದ್ದೆ. ನೀವು ಎಲ್ಲಿ ಮಾಯವಾಗಿ ಹೋದಿರಿ ಎಂದು ಬಹಳ ಜನರು ಅಚ್ಚರಿ ಪಡುತ್ತಿದ್ದರು. ನೀವು ಗಾಳಿಯಲ್ಲಿ ಮಾಯವಾಗಿ ಹೋದಿರಲ್ಲ? ನೀವು ಮಾಯವಾಗುವುದಕ್ಕೆ ಯಾರಾದರೂ ಕಾರಣರಾದರೇ? ಜಾರಿಯಾಗಿದ್ದ ರೆಡ್ ಕಾರ್ನರ್ ನೋಟಿಸಿನಿಂದ ನೀವು ಹೇಗಾದರೂ ತಪ್ಪಿಸಿಕೊಂಡಿರಿ? ನಿಮ್ಮ ಮುಖಚಹರೆ ಏನಾದರೂ ಬದಲಿಸಿಕೊಂಡಿದ್ದಿರಾ? ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರಾ? ನಿಮ್ಮ ನಾಪತ್ತೆ ಜನಸಾಮಾನ್ಯರಲ್ಲಿ ಎಂತಹ ಅನೂಹ್ಯ ಕಲ್ಪನೆಗಳನ್ನು ಮೂಡಿ ಸಿರಬಹುದು ಎಂಬ ಅಂದಾಜಾದರೂ ನಿಮಗಿದೆಯೇ? ಪ್ರತಿಯೊಬ್ಬರಲ್ಲೂ ನಿಮ್ಮ ಬಗ್ಗೆ ಪ್ರಶ್ನೆ ಗಳಿವೆ.
ನೀವು ಬೆಲ್ಜಿಯಂನಲ್ಲಿದ್ದಿರಿ ಎಂದು ಕೆಲ ವರು ಹೇಳುತ್ತಿದ್ದರು. ಮತ್ತೆ ಕೆಲವರು ನೀವು ಲಂಡನ್‌ಗೆ ಹೋಗಿದ್ದೀರಿ ಎಂದು ಪುಕಾರು ಹಬ್ಬಿಸಿದ್ದರು. ಇನ್ನು ಕೆಲವರು ನಿಮ್ಮನ್ನು ಭೇಟಿಯಾಗಿ ನಿಮ್ಮೊಂದಿಗೆ ಉಪಾಹಾರ ಮತ್ತು ಚಹಾ ಸೇವಿಸಿದ್ದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ನಾವೇನು ಮಾಡಿದ್ದೇವೆ? ಇದೆಲ್ಲವನ್ನೂ ನಾವು ಕೇಳುತ್ತ ಕೂರಬೇಕೇನು? ನಾವು ಯಾರನ್ನೆಂದು ನಂಬೋಣ. ನಮಗೆ ನಿಮ್ಮಲ್ಲಿ ನಂಬಿಕೆ ಇದೆ. ನಿಮ್ಮದೇ ಪೋಲಿಸ್ ಇಲಾಖೆ ಮತ್ತು ದೇಶದ ಪತ್ತೆದಾರಿ ದಳದ ಕಣ್ಣುಗಳಿಂದ ನೀವು ಹೇಗೆ ತಪ್ಪಿಸಿಕೊಂಡು ಹೋದಿರಿ ಎಂಬುದನ್ನು ನೀವು ಒಂದಲ್ಲ ಒಂದು ದಿನ ಖಂಡಿತವಾಗಿ ನಮ್ಮ ಮುಂದೆ ಹೇಳುತ್ತೀರೆಂಬ
ವಿಶ್ವಾಸವೂ ನಮಗಿದೆ.
ನಾಪತ್ತೆಯಾಗುವ ಕುರಿತಾದ ಮಾರ್ಗೋಪಾಯಗಳ ಬಗ್ಗೆ ನೀವು ಪೋಲೀಸ್ ಮತ್ತು ಇಂಟೆಲಿಜೆನ್ಸ್ ವಿಭಾಗದ ಸಿಬ್ಬಂದಿಯವರಿಗೆ ತರಬೇತಿ ಕಾರ‍್ಯಾಗಾರವನ್ನು ನೀವು ನಡೆಸಿಕೊಡಬೇಕು. ನಮ್ಮ ಬೇಹುಗಾರಿಕೆ ದಳದವರಲ್ಲಿ ನಿಮ್ಮ ಕೌಶಲ್ಯ ಮತ್ತು ಉಪಾಯಗಳ ಬಗ್ಗೆ ಅರಿವು ಮೂಡಿದಾಗ ಮಾತ್ರ ಆರೋಪಿಗಳನ್ನು ಹೇಗೆ
ಹಿಡಿಯ ಬಹುದೆಂಬುದು ಅವರಿಗೆ ತಿಳಿಯುತ್ತದೆ. ಇದ್ದಕ್ಕಿದ್ದಂತೆ ನಾಪತ್ತೆಯಾಗುವಲ್ಲಿ ನಿಮಗಿರುವ ವಿಶೇಷ ಕಲೆ ಮಿಸ್ಟರ್ ಇಂಡಿಯಾ ಖ್ಯಾತಿಯ ಅನಿಲ್ ಕಪೂರ್ ಮತ್ತು ಭೂತನಾಥ್ ಖ್ಯಾತಿಯ ಅತಾಭ್ ಬಚ್ಚನ್ ಕೂಡ ನಾಚುವಂತೆ ಮಾಡಿದೆ.
ಅವರಿಬ್ಬರೂ ತೆರೆಯ ಮೇಲೆ ಅದ್ಭುತವಾಗಿ ನಟಿಸಿದ್ದರು. ನೀವು ನಿಜವಾಗಿ ಅದನ್ನು ಮಾಡಿ ತೋರಿದಿರಿ, ರಜತ ಪರದೆಯ ಮೇಲಲ್ಲ, ವಾಸ್ತವ ಜಗತ್ತಿನಲ್ಲಿ. ನಮ್ಮ
ದೇಶದ ಘನತೆವೆತ್ತ ಸಂಸ್ಥೆಗಳ ಮುಖವಾಡ ಕಳಚುವಂತೆ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು. ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರಿಗೆ ಸರಿಸಮವೆಂದು ಹೇಳಿ ಕೊಳ್ಳುತ್ತಿದ್ದ ಮುಂಬೈ ಪೊಲೀಸರು ಮೊದಲನೆಯದಾಗಿ ತಮ್ಮದೇ ಇಲಾಖೆಯ ಒಬ್ಬ ಅಧಿಕಾರಿಯ ಕಣ್ಣಾಮುಚ್ಚಾಲೆ ಆಟವನ್ನು ಕಂಡು ಹಿಡಿಯಲಾಗದೇ ಸೋತಿ ದ್ದಾರೆ. ತನ್ನನ್ನು ತಾನು ಅಜೇಯ ಮತ್ತು ಅತ್ಯುನ್ನತ ತನಿಖಾತಂಡವೆಂದು ಕೊಚ್ಚಿಕೊಳ್ಳುತ್ತಿದ್ದ ನಮ್ಮ ಬೇಹುಗಾರಿಕೆ ಇಲಾಖೆಯ ಹೆಚ್ಚುಗಾರಿಕೆ ಕಟ್ಟುಕಥೆ ಎಂಬು ದನ್ನು ನೀವು ಸಾದರ ಪಡಿಸಿದ್ದೀರಿ.
ಒಬ್ಬ ಪೋಲೀಸು ಅಧಿಕಾರಿ ಬೇಹುಗಾರಿಕೆ ತಂಡಕ್ಕೆ ಚಳ್ಳೆಹಣ್ಣು ತಿನ್ನಿಸಬಹುದು ಎಂಬುದನ್ನು ನೀವು ಸಾಬೀತು ಮಾಡಿದ್ದೀರಿ. ತನಿಖಾಸಂಸ್ಥೆಗಳು ಕಂಬದಿಂದ ಕಂಬಕ್ಕೆ ಓಡಾಡಿ ನಿಮ್ಮ ಹುಡುಕಲು ಯತ್ನಿಸಿ ವಿಫಲರಾಗಿರುವ ಸಂಗತಿ ನಮ್ಮ ಕಣ್ಣಮುಂದಿದೆ. ಮಾನ್ಯ ನ್ಯಾಯಾಲಯ ನಿಮ್ಮನ್ನು ದೇಶಭ್ರಷ್ಟರೆಂದು ಘೋಷಿ ಸಿತ್ತು, ಆದರೆ ನೀವು ಚಂಡೀಗಡದಲ್ಲಿ ಆರಾಮಾಗಿದ್ದು ಎಲ್ಲ ನಾಟಕಗಳನ್ನು ಗಮನಿಸುತ್ತಲೇ ಇದ್ದಿರಿ. ಎಷ್ಟೊಂದು ಅಚ್ಚರಿಯ ಸಂಗತಿ ಅಲ್ಲವೇ. . . ವಾವ್ !! ನಿಮ್ಮ ಕೌಶಲ್ಯಕ್ಕೆ ನಾವೆಲ್ಲ ತಲೆದೂಗಲೇ ಬೇಕು. ಜನರು ಒಂದು ತಪ್ಪು ಪ್ರಶ್ನೆಯನ್ನು ಕೇಳುತ್ತಿದ್ದಾರೆ. ನೀವು, ಪೋಲೀಸರು ಮತ್ತು ಬೇಹುಗಾರಿಕೆ ಸಾಂಸ್ಥೆ – ಈ ಮೂರ ರಲ್ಲಿ ಯಾರು ಅತ್ಯಂತ ಪ್ರಭಾವಶಾಲಿ? ನೀವು ಪೋಲೀಸು ಇಲಾಖೆಯ ಸಾಮ್ರಾಟರು.
ನಿಮ್ಮ ಮನಃಸ್ಥಿತಿಯ ಏರುಪೇರನ್ನು ಬಲ್ಲವರಿಗೆ ಕೂಡ ನೀವಾರು ಮತ್ತು ನೀವೆಲ್ಲಿದ್ದೀರಿ ಎಂಬುದನ್ನು ಕಂಡು ಹಿಡಿಯಲಾಗಲಿಲ್ಲ. ನೀವೆಲ್ಲಿಂದ ಬಂದಿದ್ದೀರಿ
ಮತ್ತು ಎಲ್ಲಿಗೆ ಹೋಗುತ್ತಿದ್ದೀರಿ ಎಂಬುದರ ಅರಿವೂ ಅವರಿಗಿಲ್ಲ. ಸಾಮ್ರಾಟರಿಗೆ ಮಾತ್ರ ಇದೆಲ್ಲ ಗೊತ್ತಿರುತ್ತದೆ. ಅದನ್ನು ನೀವು ಸಾಬೀತು ಮಾಡಿದ್ದೀರಿ. ನಿಮ್ಮನ್ನು ಪತ್ತೆ ಮಾಡುವುದು ಕಷ್ಟ ಮಾತ್ರವಲ್ಲ ಅಸಾಧ್ಯ ಕೂಡ ಎಂಬುದನ್ನೂ ನೀವು ತೋರಿಸಿಕೊಟ್ಟಿದ್ದೀರಿ. ನೀವು ವಾಪಸು ಬಾರದೇ ಇದ್ದರೆ ಏನಾದೀತು ಎಂಬುದರ ಬಗ್ಗೆ ನನ್ನಲ್ಲಿ ಅಚ್ಚರಿಯಿತ್ತು. ನಿಮ್ಮ ಆಸ್ತಿಪಾಸ್ತಿ ಮುಟ್ಟುಗೋಲು ಹಾಕುತ್ತೇವೆಂದು ಕೆಲ ಅಜ್ಞಾನಿಗಳು ಹೇಳುತ್ತಿದ್ದರು.
ನೀವಾರೆಂಬ ಅರಿವೂ ಅವರಿಗಿಲ್ಲ. ನೀವು ವಾಪಸು ಬಂದ ದಿನವನ್ನು ವಿಶೇಷ ದಿನವೆಂದು ಆಚರಿಸುವಂತೆ ನಿಮ್ಮ ಪೋಲೀಸು ಇಲಾಖೆ ಮತ್ತು ಬೇಹುಗಾರಿಕೆ
ಇಲಾಖೆಗಳಲ್ಲಿ ನಾನು ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಆಗಮನದ ದಿನ ಅಽಕೃತವಾಗಿ ಸಂಭ್ರಮಿಸಿ ಆಚರಿಸಬೇಕಾದ ದಿನವೇ ಹೌದು. ಕಳೆದ ಆರು
ತಿಂಗಳಲ್ಲಿ ಏನೆಲ್ಲ ನಡೆದು ಹೋಯಿತು ಎಂಬುದು ನಿಜವಾಗಿಯೂ ಮರೆತುಬಿಡಬೇಕಾದ ಸಂಗತಿ. ನಿಮ್ಮ ವಾಪಸಾತಿಗೆ ಸರಕಾರ ನಿಮಗೆ ಖುದ್ದು ಧನ್ಯವಾದ ಸಲ್ಲಿಸಲೇಬೇಕು, ಏಕೆಂದರೆ ಅದರಿಂದ ಅವರ ತಲೆಬೇನೆ ಸಾಕಷ್ಟು ಕಡಿಮೆಯಾಗಿದೆ ಮತ್ತು ನಿಮ್ಮ ಪತ್ತೆಕಾರ್ಯಕ್ಕೆ ವ್ಯಯವಾಗುವ ಸಂಪನ್ಮೂಲಗಳು ಉಳಿದಂತಾಗುತ್ತದೆ.
ಅಧಿಕಾರಯಂತ್ರಕ್ಕೆ ಸುತ್ತು ವರಿದುಕೊಂಡಿರುವ ಜನಕ್ಕೆ ನೀವು ಮಹದು ಪಕಾರ ಮಾಡಿದ್ದೀರಿ. ಪರಮಬೀರ್ ಸಿಂಗ್ ಮಹಾರಾಜರ ಆಗಮನದ ದಿನ ಎಂದು ಸಂಭ್ರಮಿಸಿ ಆಚರಿಸಬೇಕು. ನಿಮ್ಮ ವಿರುದ್ಧ ದಾವೆ ಹೂಡಿದವರ ಬಗ್ಗೆ ಮತ್ತು ಬಿಲ್ಡರುಗಳಿಂದ ಹದಿನೈದು ಕೋಟಿ ರುಷುವತ್ತು ಕೇಳಿದ್ದರ ಕುರಿತಾಗಿ ನೀವು ತಲೆ ಕೆಡಿಸಿಕೊಳ್ಳಬೇಕಿಲ್ಲ. ಕೇಸುಗಳು ದಾಖಲಾಗುತ್ತಲೇ ಇರುತ್ತವೆ. ನೀವು ಅನಿಲ್‌ದೇಶ್ ಮುಖ್ 100 ಕೋಟಿ ರೂಪಾಯಿ ಸುಲಿಗೆಯನ್ನು ಮಾಡಿದಾರೆಂದು ಆರೋಪಿಸಿದರೆ, ಮತ್ತೆ ಕೆಲವರು ಹದಿನೈದು ಕೋಟಿ ರುಷುವತ್ತು ನೀವು ಪಡೆದಿದ್ದೀರಿ ಎಂದು ಆರೋಪಿಸಿದ್ದಾರೆ.
ಆರೋಪಗಳಲ್ಲಿ ಯಾವುದು ದೊಡ್ಡದು, ಯಾವುದು ಚಿಕ್ಕದು ಎಂಬುದು ಈಗಲಾದರೂ ತಿಳಿಯಿತಲ್ಲ. ಸತ್ಯ ಏನೆಂಬುದು ಆ ದೇವರಿಗೊಬ್ಬನಿಗೇ ಗೊತ್ತು.
ಅಂದ ಹಾಗೆ, ಹುಣಿಸೆಮರದ ಎಲೆಗಳ ಮೇಲೆ ಪಲ್ಟಿ ಹೊಡೆಯುವ ನಿಮ್ಮ ಕಲೆಯನ್ನು ನಾವೆಲ್ಲರೂ ಕಲಿಯಬೇಕಿದೆ. ಏಕೆಂದರೆ ಹುಣಿಸೆಮರದ ಎಲೆ ತುಂಬಾ ಚಿಕ್ಕದು, ಅದರ ಮೇಲೆ ಪಲ್ಟಿ ಹೊಡೆಯುವನಿಗಿಂತ ದೊಡ್ಡ ಲಾಗಾಪಟು ಇನ್ನೊಬ್ಬ ಇರಲು ಸಾಧ್ಯಲ್ಲ. ಹಿಂದಿಯಲ್ಲಿ ‘ಇಮ್ಲಿ ಕೇ ಪತ್ತೀ ಪರ್ ಗುಲಾಟಿ ಮಾರ್ ನಾ’ ಎಂಬ ಉಕ್ತಿ ಇದೆಯಲ್ಲ ಅದನ್ನು ನೀವು ಮಾಡಿ ತೋರಿದಿರಿ. ಇದು ಯಾಕೆ ನೆನಪಾಯಿತೆಂದರೆ, ನಿಮ್ಮ ವಕೀಲರು ಚಾಂಡಿವಾಲ್ ಕುಶನ್ ಮುಂದೆ ಹಾಜರಾಗಿ ಅನಿಲ್ ದೇಶಮುಖರು ತಿಂಗಳಿಗೆ ನೂರುಕೋಟಿ ಸುಲಿಗೆ ಮಾಡುತ್ತಿದ್ದ ಬಗ್ಗೆ ನಿಮ್ಮಲ್ಲಿ ಯಾವುದೇ ಪುರಾವೆ ಇಲ್ಲ ಎಂದು ಹೇಳಿದ್ದಾರೆ.
ಕೆಲ ಅಧಿಕಾರಿಗಳ ಸಲಹೆಯ ಮೇರೆಗೆ ನೀವು ಈ ಆರೋಪ ಹೊರಿಸಿದ್ದೀರಿ. ವಾವ್ ಪರಮಬೀರ ಸಿಂಗರೇ, ನೀವು ಪೋಲೀಸ್ ಕಮಿಶನರ್, ನೀವು ಮಾಡುವ ಆರೋಪಗಳ ಕುರಿತಾಗಿ ನಿಮ್ಮಲ್ಲಿ ಘನವಾದ ಪುರಾವೆ ಇದ್ದೇ ಇರಬೇಕು. ಆದರೂ ನೀವು ಪುಟ್ಟ ಮಗುನಂತೆ ನಟಿಸಿದಿರಿ. ಮೊದಲಿಗೆ ನೀವು ಮಾಜಿ ಸಚಿವರ
ವಿರುದ್ಧ ಬೆಂಕಿಕಾರುತ್ತಿದ್ದಿರಿ. ಆದರೆ ನಿಮ್ಮ ಮೇಲೆಯೇ ಆರೋಪ ಬರುತ್ತಿದ್ದಂತೆ ನೀವು ಹಿಮ್ಮುಖವಾಗಿ ಲಗಾಟಿ ಹೊಡೆಯಲು ಶುರು ಮಾಡಿದಿರಿ. ನೀವೊಬ್ಬ ಅಪೂರ್ವ ಲಾಗಾಪಟು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ನನ್ನದೊಂದು ವಿನಂತಿ, ನಿಮ್ಮಲ್ಲಿರುವ ಈ ವಿಶೇಷ ಕಲೆಯನ್ನು ಬೇರಾವ ಪೋಲೀಸ್ ಅಧಿಕಾರಿಗಳಿಗೂ ಹೇಳಿಕೊಡಬೇಡಿ. ನೀವು ಮಾಡಿದ ಕೆಲಸ ಪೋಲೀಸ್
ಇಲಾಖೆಗೆ ಮಸಿ ಬಳಿದಿದೆ. ಇನ್ನೆಷ್ಟು ಅಸ್ತಿಪಂಜರಗಳು ಮುಚ್ಚಿದ ಕಪಾಟಿನಿಂದ ಹೊರಜಾರಿ ಬೀಳಲಿವೆಯೋ ಗೊತ್ತಿಲ್ಲ. ಪರಮ ಬೀರ್, ನೀವು ನಿಜವಾಗಿಯೂ
ಧನ್ಯರು!
(ಲೇಖಕರು ರಾಜ್ಯಸಭಾ ಮಾಜಿ ಸದಸ್ಯರು ಹಾಗೂ ಖ್ಯಾತ ಪತ್ರಕರ್ತರು)