ರಾಮರಥ
ಯಗಟಿ ರಘು ನಾಡಿಗ್
naadigru@gmail.com
ದೇವಾನುದೇವತೆಗಳನ್ನೇ ಜಯಿಸಿ ತನ್ನ ಮನೆಯ ಆಳನ್ನಾಗಿಸಿಕೊಂಡಿದ್ದವ ರಾವಣ. ಹತ್ತು ತಲೆಗಳನ್ನೂ ಇಪ್ಪತ್ತು ಬಲಾಢ್ಯ ಬಾಹುಗಳನ್ನು ಹೊಂದಿದ್ದವ, ಸುವರ್ಣಲಂಕೆಯ ಅಧಿಪತಿಯೆನಿಸಿದ್ದವ ರಾವಣ. ಸ್ವತಃ ಶಿವನೆದುರೇ ಆತನ ಹೆಂಡತಿಯನ್ನೇ ಎತ್ತಿಕೊಂಡು ಬಂದಿದ್ದವ ರಾವಣ. ಇಂಥ ಬಾಹುಬಲಿ ರಾವಣನು ಶ್ರೀರಾಮನ ಪತ್ನಿ ಸೀತೆಯನ್ನು ಯಾಮಾರಿಸಿ ಲಂಕೆಗೆ ಹೊತ್ತೊಯ್ಯುತ್ತಾನೆ. ಆದರೆ ಆಕೆಯನ್ನು ತನ್ನ ವಶ ಮಾಡಿಕೊಳ್ಳಲಾಗಲೀ, ಮದುವೆಯಾಗಲಾಗಲೀ ರಾವಣನಿಗೆ ಕೊನೆಗೂ ಆಗಲೇ ಇಲ್ಲ.
ಹೀಗೇಕೆ? ಈ ಪ್ರಶ್ನೆಗೆ ಲ್ಲಿದೆ ನೋಡಿ ಉತ್ತರ: ಸೋದರ ಭರತನಿಗೆ ಸಿಂಹಾಸನ ವಹಿಸಿಕೊಡುವ ಕಾರ್ಯಭಾರವು ಸುಸೂತ್ರವಾಗಿ ನೆರವೇರಲೆಂದು ಮತ್ತು
ಮಂಥರೆ-ಕೈಕೇಯಿಯರ ಸಂಚಿನ ಭಾಗವಾಗಿ ಶ್ರೀರಾಮ ವನವಾಸಕ್ಕೆ ತೆರಳಬೇಕಾಗುತ್ತದೆ. ಆದರೆ ರಾಮ ಮತ್ತು ಸೀತೆಯರ ನಡುವೆ ಇದ್ದುದು ಅನನ್ಯ ಪ್ರೇಮ; ರಾಮನನ್ನು ಅಗಲಿರಲಾಗದ ಸೀತೆ ವನವಾಸಕ್ಕೆ ಅವನನ್ನು ಅನುಸರಿಸುತ್ತಾಳೆ. ಅಣ್ಣ-ಅತ್ತಿಗೆಯರನ್ನು ಬಿಟ್ಟಿರಲಾಗದ ಲಕ್ಷ್ಮಣನೂ ಅವರೊಂದಿಗೆ ಹೆಜ್ಜೆಹಾಕುತ್ತಾನೆ. ಅರಣ್ಯದಲ್ಲಿ ಅವರೊಂದು ಪುಟ್ಟ ಪರ್ಣಕುಟಿಯಲ್ಲಿ ವಾಸವಿರುತ್ತಾರೆ. ಆದರೆ ರಾಮ-ಲಕ್ಷ್ಮಣ ಇಬ್ಬರೂ ಇಲ್ಲದ ಸಮಯದಲ್ಲಿ ಅಲ್ಲಿಗೆ ಕಪಟ ಸನ್ಯಾಸಿಯ ವೇಷದಲ್ಲಿ ಬರುವ ಪರಸ್ತ್ರೀ ವ್ಯಾಮೋಹಿ ರಾವಣ, ಭಿಕ್ಷೆ ಹಾಕಿಸಿಕೊಳ್ಳುವ ನೆಪದಲ್ಲಿ ಸೀತೆಯನ್ನು ಅಪಹರಿಸಿ ಲಂಕೆಯ ಅಶೋಕ ವನದಲ್ಲಿ ತಂದಿರಿಸುತ್ತಾನೆ.
ಆಕೆಯನ್ನು ಒಲಿಸಿ-ವರಿಸಿ ಪಟ್ಟದರಸಿಯನ್ನಾಗಿ ಮಾಡಿಕೊಳ್ಳಬೇಕು ಎಂಬುದು ರಾವಣನ ಹಂಬಲ. ಆದರೆ ರಾವಣನಿಗೆ, ‘ಯಾವುದೇ ಹೆಣ್ಣನ್ನು ಆಕೆಯ ಅನುಮತಿಯಿಲ್ಲದೇ ಸ್ಪರ್ಶಿಸಲು ಯತ್ನಿಸಿದರೂ ಸಾಯುವ’ ಶಾಪ ಇರುತ್ತದೆ. ಹೀಗಾಗಿ ಸೀತೆಯನ್ನು ಶತಾಯಗತಾಯ ಒಲಿಸಿಕೊಳ್ಳಲು ಆತ ಹರಸಾಹಸ ಪಡುತ್ತಿರುತ್ತಾನೆ. ಆದರೆ ಅವನ ಬಯಕೆಗೆ ಸೀತೆ ಬಾಗುವುದಿಲ್ಲ. ಇದು ರಾವಣನ ಅಹಂಗೆ ಪೆಟ್ಟು ನೀಡುತ್ತದೆ. ಜತೆಗೆ, ‘ಸುವರ್ಣಲಂಕೆ’ ಎಂದೇ ಹೆಸರಾಗಿ ಸುಖ-ಸಮೃದ್ಧಿ ತುಂಬಿ ತುಳುಕುತ್ತಿರುವ ಸಾಮ್ರಾಜ್ಯದ ಒಡೆಯನಾದ ತನಗೆ ಸೀತೆ ಮನಸೋಲುತ್ತಿಲ್ಲವಲ್ಲಾ ಎಂಬ ವ್ಯಾಕುಲ ರಾವಣನಲ್ಲಿ ಮನೆಮಾಡುತ್ತದೆ. ಹೀಗಾಗಿ ಮಾರೀಚನಲ್ಲಿ ಆತ ಅಳಲು ತೋಡಿಕೊಂಡಾಗ, ‘ಮರ್ಯಾದಾ ಪುರುಷೋತ್ತಮ ರಾಮನನ್ನು ಬಿಟ್ಟು ಪರಪುರುಷನನ್ನು ಕಣ್ಣೆತ್ತಿಯೂ ನೋಡದ ಗುಣವಂತೆ, ಪತಿವ್ರತೆ ಸೀತೆ’ ಎಂಬ ಸೂಕ್ಷ್ಮವನ್ನು ಅರುಹುತ್ತಾನೆ ಮಾರೀಚ.
ಆಗ ಮಾಯಾವಿ ರಾವಣ ಸ್ವತಃ ರಾಮನ ವೇಷವನ್ನು ತಳೆದು ಅಶೋಕವನಕ್ಕೆ ತೆರಳಿ ಸೀತೆಯನ್ನು ಸಮೀಪಿಸಲು ಹೋಗುತ್ತಾನೆ. ಆದರೆ ಕೆಲಕ್ಷಣದಲ್ಲೇ ಅರಮನೆಗೆ ಮರಳಿಬಿಡುತ್ತಾನೆ ರಾವಣ! ನಿಬ್ಬೆರಗಾದ ಆತನ ಪತ್ನಿ ಮಂಡೋದರಿ, ‘ಯಾಕೆ ಖಾಲಿ ಕೈಯಲ್ಲಿ ಬಂದಿರಿ? ಸೀತೆಯನ್ನು ಕರೆತರದೇ ಒಬ್ಬರೇ
ಅಂತಃಪುರಕ್ಕೆ ಮರಳಿದಿರಲ್ಲಾ, ಏನಾಯಿತು?’ ಎಂದು ಕೇಳುತ್ತಾಳೆ. ಆಗ ರಾವಣ, ‘ಸೀತೆಯನ್ನು ನನ್ನೊಂದಿಗೆ ಅಂತಃಪುರಕ್ಕೆ ಕರೆತರುವುದೇ? ಅಯ್ಯೋ ಹುಚ್ಚೀ… ಅದು ಹೇಗೆ ತಾನೇ ಸಾಧ್ಯವಾದೀತು?’ ಎಂದು ಹಲುಬುತ್ತಾನೆ.
ಆಗ ಮಂಡೋದರಿ, ‘ಯಾಕೆ? ಸೀತೆ ನಿಮ್ಮನ್ನು ತನ್ನ ಹತ್ತಿರಕ್ಕೆ ಬರಗೊಡಲಿಲ್ಲವೇ? ಆಕೆಯೊಂದಿಗೆ ಮಾತಾಡಿ ಮನವೊಲಿಸಲಿಲ್ಲವೇ? ಆಕೆ ನಿಮ್ಮ ಮಾತು ಕೇಳಲಿಲ್ಲವೇ?’ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಾಗ ರಾವಣ, ‘ಸೀತೆಯ ಸನಿಹಕ್ಕೆ ನಾನು ತೆರಳಿ ಮಾತಾಡಿ ಮನವೊಲಿಸುವುದಿರಲಿ, ನಾನು ರಾಮನ ಮಾಯಾವೇಷವನ್ನು ಧರಿಸಿದಾಕ್ಷಣ ನನ್ನ ಒಂದಿಡೀ ವ್ಯಕ್ತಿತ್ವವೇ ಬದಲಾಗಿ ಹೋಯಿತು. ನನ್ನಲ್ಲಿ ತುಂಬಿದ್ದ ಪರಸ್ತ್ರೀ ವ್ಯಾಮೋಹದ ಗುಳ್ಳೆ ಒಡೆದುಹೋಯಿತು. ಪತ್ನಿ ಮಂಡೋದರಿಯನ್ನು ಬಿಟ್ಟು ಮಿಕ್ಕೆಲ್ಲಾ ಸ್ತ್ರೀಯರನ್ನು ನನ್ನ ಸೋದರಿಯರಂತೆ, ತಾಯಿಯಂತೆ ನೋಡುವ ಚಿತ್ತಸ್ಥಿತಿ ನನ್ನಲ್ಲಿ ಕೆನೆಗಟ್ಟಿತು. ಸೀತೆಯ ಬಗ್ಗೆ ವಾಂಛೆಗಳು ಮೂಡು ವುದಿರಲಿ, ನನ್ನ ಹೃದಯದ ತುಂಬ ನಿನ್ನ ಕುರಿತಾದ ಆಲೋ ಚನೆಗಳೇ ತುಂಬಿದ್ದವು ಮಂಡೋದರಿ…’ ಎನ್ನುತ್ತಾನೆ.
ಮಂಡೋದರಿಯ ಮುಖದಲ್ಲಿ ಮಂದಹಾಸ ಮೂಡುತ್ತದೆ…. ಇದು, ರಾಮಾಯಣದ ಕಥೆಯ ಮಧ್ಯೆ ತೂರಿಬರುವ ಹಲವು ಉಪಕಥೆಗಳಲ್ಲೊಂದು. ರಾಮನನ್ನು ‘ಕಲ್ಯಾಣ ರಾಮ’ ಎಂದು ಕರೆಯುವುದೇಕೆ ಎಂಬುದು ಗೊತ್ತಾಯಿ ತಲ್ಲಾ? ಇಂಥ ಹತ್ತು ಹಲವು ಕಲ್ಯಾಣಗುಣಗಳ ಆಗರವೇ ಆಗಿದ್ದವನು ಶ್ರೀರಾಮ. ಏಕಪತ್ನೀ ವ್ರತಸ್ಥನಾಗಿದ್ದ ಶ್ರೀರಾಮ, ಸೀತೆಯನ್ನು ಹೊರತುಪಡಿಸಿ ಮತ್ತೊಂದು ಹೆಣ್ಣನ್ನು ವ್ಯಾಮೋಹಿಸಿದವನಲ್ಲ. ಇಂಥ ರಾಮನ ‘ದಿವ್ಯ ಪ್ರಭೆ’ಯ ಕೃಪಾಕಟಾಕ್ಷಕ್ಕೆ ಒಳಗಾದವರೇ ಕನಸುಮನಸಿ ನಲ್ಲೂ ತಪ್ಪುಕಾರ್ಯವನ್ನು ಎಸಗುವುದಿಲ್ಲ; ಅಂಥದ್ದರಲ್ಲಿ ಕೆಲ ಕ್ಷಣಗಳವರೆಗಾದರೂ ರಾಮನ ‘ದಿವ್ಯರೂಪ’ವನ್ನೇ ಧರಿಸಿದ್ದ ರಾವಣನಿಗೆ, ಸೀತೆಯೊಂದಿಗೆ ಅನುಚಿತವಾಗಿ ನಡೆದುಕೊಳ್ಳುವ ಮನಸ್ಸಾದರೂ ಹೇಗೆ ಬಂದೀತು? ನಾಟಕಗಳಲ್ಲೋ ಯಕ್ಷಗಾನ ಪ್ರಸಂಗಗಳಲ್ಲೋ, ಯೋಧ, ಅಡುಗೆಯವ, ಹಾಸ್ಯಗಾರ ಹೀಗೆ ನಿರ್ದಿಷ್ಟ ಪಾತ್ರವನ್ನು ಅಭಿನಯಿಸುತ್ತಿರುವವರು, ತಮಗೆ ಅರಿವಿಲ್ಲದೆಯೇ ಆಯಾ ಪಾತ್ರದ ಗುಣಲಕ್ಷಣಗಳನ್ನು ಮೈಗೂಡಿಸಿ
ಕೊಳ್ಳುತ್ತಾರೆ, ಅದರಂತೆಯೇ ವರ್ತಿಸಲು ಶುರುಮಾಡು ತ್ತಾರೆ. ಅದು ‘ವೇಷಧಾರಣೆ’ ಎಂಬುದರಿಂದ ಅಯಾಚಿತ ವಾಗಿ ಆಗುವ ‘ಗುಣಾವಾಹನೆ’.
ಇಲ್ಲಿಯೂ ಮಾಯಾವಿ ರಾವಣ ಧರಿಸಿದ್ದು ರಾಮನ ದಿವ್ಯರೂಪವನ್ನು; ಅದರ ಹಿಂದಿದ್ದ ಉದ್ದೇಶ ಸೀತೆಯನ್ನು ತನ್ನವಳಾಗಿಸಿಕೊಳ್ಳುವುದೇ ಆಗಿತ್ತು. ರಾಮನ ವೇಷ ಧರಿಸಿಬಿಟ್ಟರೆ ಸೀತೆ ಒಲಿದು ಬಿಡುತ್ತಾಳೆ ಎಂಬುದು ರಾವಣನ ಲೆಕ್ಕಾಚಾರವೂ ಆಗಿತ್ತು. ಆದರೆ ರೂಪದಲ್ಲಿ ‘ರಾಮತ್ವ’ವನ್ನು ಆವಾಹಿಸಿಕೊಳ್ಳುತ್ತಿದ್ದಂತೆ
(ಅದು ಮೋಸದಿಂದಲೇ ಆಗಿರಲಿ!), ಅವನಲ್ಲಿದ್ದ ‘ರಾವಣತ್ವ’ ಮಾಯವಾಗಿತ್ತು, ದುರುದ್ದೇಶವು ಸದುದ್ದೇಶ ವಾಗಿ ಬದಲಾಗಿತ್ತು. ‘ಕಾಮ’ದ ಜಾಗವನ್ನು ‘ರಾಮ’ ಆವರಿಸಿದ್ದ. ಹಲವು ಶಸ್ತ್ರ-ಶಾಸ್ತ್ರ ಪಾರಂಗತನೂ, ತನ್ನ ಕರುಳನ್ನೇ ವೀಣೆಯ ತಂತಿಯಾಗಿಸಿ ಮೀಟಿ, ಶಿವನನ್ನು ಸ್ತುತಿಸಿ ಒಲಿಸಿಕೊಂಡ ಮಹಾನ್ ಸಂಗೀತಗಾರನೂ ಆಗಿದ್ದ ರಾವಣ, ‘ಪರಸ್ತ್ರೀ ವ್ಯಾಮೋಹ’ ಎಂಬ ನ್ಯೂನತೆಯಿಂದಾಗಿ ತನ್ನ ಪಾಂಡಿತ್ಯದ ಭಂಡಾರಕ್ಕೇ ಕರಿಛಾಯೆ ಕವಿಸಿಕೊಂಡಿದ್ದ.
ಆದರೆ, ‘ರಾಮರೂಪ ಧಾರಣೆ’ ಎಂಬ ಸ್ಪರ್ಶಮಣಿಯು ರಾವಣ ಎಂಬ ಕಾಗೆಬಂಗಾರವನ್ನು ಕೆಲಕ್ಷಣದವರೆಗಾದರೂ ‘ಅಪ್ಪಟ ಬಂಗಾರ’ವನ್ನಾಗಿಸಿತ್ತು. ‘ಸಜ್ಜನರ ಸಂಗ ತಾ ಹೆಜ್ಜೇನು ಸವಿದಂತೆ’ ಎಂದು ಬಲ್ಲವರು ಹೇಳಿರುವುದು ಈ ಕಾರಣಕ್ಕೇ ಅಲ್ಲವೇ?
(ಲೇಖಕರು ಪತ್ರಕರ್ತರು)