Friday, 13th December 2024

’ಕುರಿತೋದದೆಯಂ…ಪರಿಣಿತ ಮತಿಗಳ್’ ಒಂದು ಉದಾಹರಣೆ

ತಿಳಿರು ತೋರಣ

srivathsajoshi@yahoo.com

‘ವನಸುಮದೊಲೆನ್ನ ಜೀವನ’ ನಡೆಸುವವರನ್ನು ಸಾಧ್ಯವಾದಾಗೆಲ್ಲ ಪರಿಚಯಿಸಿ ಗೌರವಿಸುವುದು ಈ ಅಂಕಣದ ಗೌರವವನ್ನು ಹೆಚ್ಚಿಸುತ್ತದೆಂದು ನಾನು ನಂಬಿರುವುದರಿಂದ ಇಂದು ಜಯಲಕ್ಷ್ಮೀ ಆಚಾರ್ಯರ ಬಗೆಗೆ ಬರೆದಿದ್ದೇನೆ. ಉತ್ಸಾಹ ಕ್ರಿಯಾಶೀಲತೆಯಲ್ಲಿ ಅವರು ನಮಗೆಲ್ಲರಿಗೂ ಪ್ರೇರಣೆಯಾಗಿರಲಿ.

ಅಕ್ಷರಗಳು ಯಾರೊಬ್ಬರ ಸ್ವತ್ತೂ ಅಲ್ಲ. ಅಂದರೆ, ಅಕ್ಷರವಿದ್ಯೆಯನ್ನು ಯಾರು ಬೇಕಾ ದರೂ ತಮ್ಮದಾಗಿಸಿಕೊಳ್ಳಬಹುದು. ಆಮೇಲೆ ಅದನ್ನವರು ಯಾವುದಕ್ಕಾಗಿ ಬಳಸಿ ಕೊಳ್ಳುತ್ತಾರೆನ್ನುವುದು ಮಾತ್ರ ಅವರವರ ವ್ಯಕ್ತಿತ್ವದ ಪ್ರತೀಕವಾಗುತ್ತದೆ. ಯಾರೋ ಒಂದಿಷ್ಟು ಜನರು ದ್ವೇಷ ಕಾರುವುದಕ್ಕೆ ಅಕ್ಷರಗಳನ್ನು ಬಳಸಬಹುದು. ಅಂತಹ ಸಮಾಜಕಂಟಕರ ಸಂಗತಿ ಬಿಟ್ಟುಬಿಡಿ.

ಆದರೆ ಸಂತಸದ ವಿಚಾರವೆಂದರೆ ಲೋಕದಲ್ಲಿ ಬಹುಮಂದಿ ರಚನಾತ್ಮಕವಾಗಿ ಅಕ್ಷರಗಳನ್ನು ಬಳಸುತ್ತಾರೆ. ಸದ್ವಿಚಾರಗಳನ್ನು ಸಮಾಜದಲ್ಲಿ ಪಸರಿಸುತ್ತಾರೆ. ತನ್ಮೂಲಕ ಕಲಿತ ವಿದ್ಯೆಗೆ ಸಾರ್ಥಕ್ಯ ಒದಗಿಸುತ್ತಾರೆ; ಅದರಿಂದಲೇ ಧನ್ಯತಾ ಭಾವವನ್ನೂ ಹೊಂದುತ್ತಾರೆ. ಖ್ಯಾತ ಅಮೆರಿಕನ್ ವಾಗ್ಮಿ ಲೇಖಕ ಲಿಯೋ ಬಸ್ಕಾಗ್ಲಿಯಾ ಹೇಳಿದ `Your talent is God’s gift to you. What you do with it is your gift back to God (ನಿಮ್ಮಲ್ಲಿರುವ ಪ್ರತಿಭೆಯು ದೇವರು ನಿಮಗೆ ಕೊಟ್ಟ ಉಡುಗೊರೆ. ಅದರಿಂದ ನೀವು ಏನನ್ನು ಮಾಡುತ್ತೀರೆನ್ನುವುದು ನೀವು ದೇವರಿಗೆ ಕೊಡುವ ಉಡುಗೊರೆ)’ ಎಂಬ ಸೂಕ್ತಿ ಯಲ್ಲಿರುವ ಟ್ಯಾಲೆಂಟು ಅಥವಾ ಪ್ರತಿಭೆಯು ಅಕ್ಷರವಿದ್ಯೆಗೂ ಪಕ್ಕಾ ಅನ್ವಯವಾಗು ತ್ತದೆ.

ಈಗೇಕೆ ಈ ಮಾತೆಂದರೆ ಪ್ರಸ್ತುತ ಈ ಅಂಕಣಬರಹದಲ್ಲಿ ನಾನು ನಿಮಗೆ ಪರಿಚಯಿಸಲಿರುವ ಜಿ.ಆರ್. ಜಯಲಕ್ಷ್ಮೀ ಆಚಾರ್ಯ ಎಂಬುವವರು ಅಕ್ಷರವಿದ್ಯೆಯನ್ನು ವಿನಿಯೋಗಿಸಿರುವ ರೀತಿ. ಇವರು ಸಾಂಪ್ರದಾಯಿಕ ಶಿಕ್ಷಣ ಪಡೆದದ್ದು ಕೇವಲ ಐದನೆಯ ತರಗತಿಯವರೆಗೆ ಮಾತ್ರ. ಈಗ, ಎಪ್ಪತ್ತೈದರ ಹರೆಯದಲ್ಲಿ ಎರಡು ಸತ್ತ್ವಯುತ ಕವನ ಸಂಕಲನಗಳನ್ನು ಬರೆದು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ!

ಮೊನ್ನೆ ಗುರುವಾರ ಜೂನ್ ೨೩ರಂದು ಬಿಡುಗಡೆಯಾದ ಎರಡನೆಯ ಕವನ ಸಂಕಲನ ‘ಮನದಾಳ’ದ ರಕ್ಷಾಕವಚದಲ್ಲಿ ಮುದ್ರಿತ ವಾಗಿರುವಂತೆ ಜಯಲಕ್ಷ್ಮಿಯವರ ಪರಿಚಯವನ್ನು ನಿಮಗೆ ತಿಳಿಸುವುದಾದರೆ: ‘ಉಡುಪಿ ಜಿಲ್ಲೆಯ ಕಮಲಶಿಲೆ
ಶ್ರೀಮತಿ ಭಾಗೀರಥಿ ಮತ್ತು ಪದ್ಮನಾಭ ಭಟ್ಟರ ಸುಪುತ್ರಿಯಾಗಿ ಜನನ. ಶಂಕರನಾರಾಯಣದ ರಾಮರಾಯ ಆಚಾರ್ಯ ರೊಂದಿಗೆ ವೈವಾಹಿಕ ಜೀವನ. ನಡುಹರೆಯದಲ್ಲಿ ಬಂದ ಕಷ್ಟಗಳನ್ನೆಲ್ಲ ಮೆಟ್ಟಿನಿಂತು ತನ್ನ ನಾಲ್ಕು ಮಕ್ಕಳನ್ನು ಮಮತೆಯ ಮಾತು ಗಳಿಂದ ಮುನ್ನಡೆಸಿ ದಾರಿದೀಪವಾದವರು.

ಶಾಲಾ ಕಲಿಕೆಗೆ ಅವಕಾಶಗಳು ಕಡಿಮೆ ಇದ್ದ ಆ ಕಾಲದಲ್ಲಿ ವಿವಾಹಾನಂತರ ಛಲದಿಂದ ಖಾಸಗಿಯಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಕಟ್ಟಿ ಉತ್ತೀರ್ಣರಾದವರು. ಸ್ವಾಧ್ಯಯನದಿಂದಲೇ ಸಾಹಿತ್ಯ, ಸಂಗೀತ, ಮತ್ತು ಕಸೂತಿ ಇತ್ಯಾದಿ ಕಲೆಗಳನ್ನು ಅಭ್ಯಸಿಸಿ ಆಸಕ್ತಿಯಿಂದ ಬೆಳೆಸಿಕೊಂಡವರು. ಎಪ್ಪತ್ತೈದರ ಹರೆಯದಲ್ಲೂ ನಿರಂತರ ಮುಂದುವರಿದಿರುವ ಸಾಹಿತ್ಯಾಸಕ್ತಿ. 2013ರಲ್ಲಿ ಮೊದಲ ಪುಸ್ತಕ ‘ಮಗನ ಮಾತೆ’ ಪ್ರಕಟ. ಕೃಷಿ ಮತ್ತು ತೋಟಗಾರಿಕೆಗಳಲ್ಲಿ ವರ್ಷಾನೇಕಗಳ ಅನುಭವ. ಮನೆಯ  ಮುಂದೋಟ ದಲ್ಲಿರುವ ನೂರಾರು ಹೂಗಿಡಗಳೇ ಸಾಕ್ಷಿ.

ಮಂಗಳೂರು ಆಕಾಶವಾಣಿಯಿಂದ ಪ್ರಸಾರವಾದ ಇವರ ಸಂದರ್ಶನ ‘ಗ್ರಾಮೀಣ ಮಹಿಳೆ’ ಬಹುಜನಪ್ರಿಯವಾಯಿತು. ಸುತ್ತಲಿನ ಜಗತ್ತನ್ನು ಸದಾ ಸೂಕ್ಷ್ಮಾವಲೋಕನ ಮಾಡಿ ಕಲಿಯಬೇಕೆಂಬ ಮಕ್ಕಳಂತಹ ಉತ್ಸಾಹ. ಇದರ ಪ್ರಭಾವದಿಂದಲೇ ಎರಡನೆಯ ಕವನ ಸಂಕಲನ ಮನದಾಳ ನಿಖರವಾಗಿ ಹೊರಹೊಮ್ಮಿದೆ.’ ಇದು, ಟಿಪ್ ಆಫ್ ದಿ ಐಸ್‌ಬರ್ಗ್ ಅಷ್ಟೇ ಆಯಿತು.

ಇದರಲ್ಲಿ ಉಲ್ಲೇಖಿತ ಮಂಗಳೂರು ಆಕಾಶವಾಣಿಯಿಂದ ಪ್ರಸಾರವಾದ ಸಂದರ್ಶನದ ಆರಂಭಿಕ ಮಾತುಗಳನ್ನೂ ಸೇರಿಸೋಣ: ‘ತನ್ನ ಮಗ ದೂರದ ಊರಿನಲ್ಲಿ ಕಾಲೇಜಿನಲ್ಲಿ ಓದುತ್ತ ಇರುವಾಗ ಆತನಿಗೆ ಪತ್ರ ಬರೆಯುತ್ತ ಬರೆಯುತ್ತ ಕವಿಯಾದರು ಜಯ ಲಕ್ಷ್ಮಿಯವರು. ಇವರು ಪಾಕಪ್ರವೀಣೆ. ಮನೆಮದ್ದು, ಕಸೂತಿಗಳಲ್ಲೂ ಎತ್ತಿದ ಕೈ. ಅಮೆರಿಕಕ್ಕೆ ಮಗನ ಮನೆಗೆ ಹೋಗಿದ್ದಾಗ ಅಲ್ಲೊಂದು ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದವರು. ಬಹಳ ಕ್ರಿಯಾಶೀಲ ವ್ಯಕ್ತಿತ್ವ.

ಉತ್ಸಾಹ ಸೃಜನಾತ್ಮಕತೆಗೆ ವಯಸ್ಸಿನ ಹಂಗಿಲ್ಲ ಎಂದು ಇವರನ್ನು ನೋಡಿ ನಾವು ಕಲಿಯಬೇಕು.’ ನಿಜ, ನನಗೆ ಜಯಲಕ್ಷ್ಮಿಯ ವರ ಪರಿಚಯವಾದದ್ದು ಆ ಸಂದರ್ಶನವನ್ನು ಕೇಳಿದ್ದರಿಂದಲೇ. ಪರಿಚಯ ಮಾತ್ರವಲ್ಲ, ಅವರ ಜೀವನಾನುಭವ, ಕ್ರಿಯಾ ಶೀಲತೆ, ಮತ್ತು ಹೃದಯವಂತಿಕೆ ಎಷ್ಟು ಶ್ರೀಮಂತವಾದುದು ಎಂದು ತಿಳಿದು ಆ ಕ್ಷಣದಲ್ಲೇ ಅವರ ಬಗೆಗೊಂದು ಗೌರವಭಾವ ಮೂಡಿತು. ಅದು ಹೇಗೆ ಮುಂದುವರಿಯಿತೆಂಬುದನ್ನು ‘ಮನದಾಳ’ ಕವನ ಸಂಕಲನಕ್ಕೆ ಬರೆದುಕೊಟ್ಟ ಶುಭಾಶಂಸನೆಯಲ್ಲಿ (ಮುನ್ನುಡಿ ಎಂದು ಅವರು ಬರೆಸಿಕೊಂಡದ್ದಾದರೂ ನಾನು ಮುನ್ನುಡಿ ಬರೆಯುವಷ್ಟೆಲ್ಲ ದೊಡ್ಡ ವ್ಯಕ್ತಿ ಅಲ್ಲ, ಆದ್ದರಿಂದ ಶುಭಾಶಂಸನೆ) ತಿಳಿಸಿದ್ದೇನೆ. ಅದನ್ನೇ ಇಂದು ನಿಮ್ಮೊಡನೆ ಸಂತೋಷದಿಂದ ಹಂಚಿಕೊಳ್ಳುತ್ತಿದ್ದೇನೆ.

* * *
‘ಚದುರರ್ ನಿಜದಿಂ ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್’ ಎಂದು ಶ್ರೀವಿಜಯ ಕವಿಯು ಶತಮಾನಗಳ
ಹಿಂದೆ ಕನ್ನಡದ ಮೊತ್ತಮೊದಲ ಆಧಾರಗ್ರಂಥವಾದ ಕವಿರಾಜಮಾರ್ಗದಲ್ಲಿ ಬರೆದಿದ್ದಾನೆ. ಕನ್ನಡಿಗರೆಲ್ಲರನ್ನೂ ಉದ್ದೇಶಿಸಿ
ಹಾಗೆಂದನೇ ಅಥವಾ ಜಯಲಕ್ಷ್ಮೀ ಆಚಾರ್ಯರಂತಹ ಕೆಲವು ಅಪ್ರತಿಮ ಅಸಾಮಾನ್ಯ ಪ್ರತಿಭೆಗಳು ಕನ್ನಡನಾಡಿನಲ್ಲಿ ಹುಟ್ಟಿ ಬರುತ್ತಿರುತ್ತವೆ ಅಂತ ಮೊದಲೇ ಅಂದಾಜು ಮಾಡಿ ಹೇಳಿದನೇ ಎಂದು ನನಗೆ ಕೆಲವೊಮ್ಮೆ ಅನಿಸುವುದಿದೆ!

ಜಯಲಕ್ಷ್ಮಿಯವರ ಈ ಕಾವ್ಯಗುಚ್ಛವನ್ನು ಆಘ್ರಾಣಿಸಿದಾಗ ಯಾರಿಗೇ ಆದರೂ ಅಂತಹದೊಂದು ಸಂತೋಷಾಶ್ಚರ್ಯ ಆಗಿಯೇ ಆಗುತ್ತದೆ ಎಂದು ನನ್ನ ಅಭಿಪ್ರಾಯ. ಶಾಲೆಯಲ್ಲಿ ಕಲಿತದ್ದು ಐದನೆಯ ತರಗತಿಯವರೆಗೆ ಮಾತ್ರ. ಆಮೇಲೆ ಸಂಸಾರಸಾಗರದಲ್ಲಿ
ಈಜುತ್ತಿರುವಾಗಲೇ ಪತಿಯ ಪ್ರೋತ್ಸಾಹದಿಂದ ಖಾಸಗಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟಿ ಅದರಲ್ಲಿ ತೇರ್ಗಡೆ. ಉಳಿದಂತೆ, ಬಾಲ್ಯ ದಲ್ಲಿಯೇ ಊರ ಶಾಲೆಯ ಅಧ್ಯಾಪಕರೊಬ್ಬರಿಂದ ಸೌಹಾರ್ದದ ನೆಲೆಯಲ್ಲಿ ಸಿಕ್ಕ ಅಷ್ಟಿಷ್ಟು ಇಂಗ್ಲಿಷ್, ಹಿಂದೀ ಭಾಷೆಗಳ ಕಲಿಕೆ. ಜಯಲಕ್ಷ್ಮಿಯವರು ‘ಕುರಿತೋದಿದ್ದು’ ಅಷ್ಟು ಮಾತ್ರ. ಹಾಗಾಗಿ, ಕವಿತೆ ಕಟ್ಟುವ ಅವರ ದೈತ್ಯ ಪ್ರತಿಭೆಯೆಲ್ಲವೂ ‘ಕುರಿತೋ ದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿ’ಯೇ ಸೈ ಎಂದು ಧಾರಾಳವಾಗಿ ಹೇಳಲಿಕ್ಕಡ್ಡಿಯಿಲ್ಲ.

ಜಯಲಕ್ಷ್ಮಿಯವರ ಬಗ್ಗೆ ನಾನು ಮೊದಲಿಗೆ ತಿಳಿದುಕೊಂಡದ್ದು ಮೂರುನಾಲ್ಕು ವರ್ಷಗಳ ಹಿಂದೆ ಮಂಗಳೂರು ಆಕಾಶ ವಾಣಿಯಿಂದ ಪ್ರಸಾರವಾದ ಅವರದೊಂದು ಸಂದರ್ಶನದಲ್ಲಿ. ಆಕಾಶವಾಣಿ ನಿಲಯಗಳ ಪ್ರಸಾರವು ಈಗ ಅಂತರಜಾಲ
ದಲ್ಲಿಯೂ ಲಭ್ಯವಾದ್ದರಿಂದ ಅದು ನನಗೆ ಕೇಳಲಿಕ್ಕೆ ಸಿಕ್ಕಿತೇ ವಿನಾ ಎಲ್ಲಿಯ ಅಮೆರಿಕ ಎಲ್ಲಿಯ ಆಕಾಶವಾಣಿ ಮಂಗಳೂರು! ಆದರೆ ಸುಮಾರು ೨೫ ನಿಮಿಷಗಳ ಆ ಸಂದರ್ಶನದಲ್ಲಿ ಜಯಲಕ್ಷ್ಮಿಯವರ ವ್ಯಕ್ತಿತ್ವ ಪರಿಚಯವಾದಾಗ, ಅವರ  ಪ್ರತಿಭಾ ವೈಶಿಷ್ಟ್ಯ ಜೀವನಪ್ರೀತಿಗಳು ಅನಾವರಣವಾದಾಗ, ಅವರ ಬಗೆಗೊಂದು ಅಚ್ಚರಿ ಮತ್ತು ಅಭಿಮಾನ ಒಟ್ಟಿಗೇ ಉಕ್ಕಿಬಂದದ್ದು ನನಗೆ ಈಗಲೂ ನೆನಪಾಗುತ್ತಿದೆ. ಅದಾದ ಮೇಲೆ ಕೆಲ ಕಾಮನ್‌ಫ್ರೆಂಡ್ಸ್ ಮೂಲಕ ಅವರ ವಾಟ್ಸಪ್ ಸಂಖ್ಯೆ ಸಿಕ್ಕಿತು; ಅವರೊಡನೆ ನನಗೆ ಸ್ನೇಹಸಂಪರ್ಕವೂ ಸ್ಥಾಪನೆಯಾಯಿತು.

ಆಗೊಮ್ಮೆ ಈಗೊಮ್ಮೆ ಬರೆಯುತ್ತಿದ್ದ ಕವಿತೆಗಳನ್ನು ಜಯಲಕ್ಷ್ಮಿಯವರು ವಾಟ್ಸಪ್‌ನಲ್ಲಿ ನನ್ನ ಓದಿಗೂ ಒದಗಿಸತೊಡಗಿದರು. ಕಾಟಾಚಾರಕ್ಕಲ್ಲ, ಹೃದಯ ಪೂರ್ವಕವಾಗಿಯೇ ನಾನು ಅವುಗಳನ್ನು ಮೆಚ್ಚಿ ಅವರಿಗೊಂದು ಪ್ರತಿಕ್ರಿಯೆ ಬರೆದುಕಳುಹಿಸುತ್ತಿದ್ದೆ. ನಾನೇನೂ ಕವಿತೆ ಬರೆಯಬಲ್ಲವನಲ್ಲ, ವಿಮರ್ಶೆ ವ್ಯಾಖ್ಯಾನ ಮಾಡಬಲ್ಲ ಸಾಮರ್ಥ್ಯವಂತೂ ಮೊದಲೇ ಇಲ್ಲ. ಆದರೂ ಜಯಲಕ್ಷ್ಮಿಯವರ ಕವಿತೆಗಳಲ್ಲಿ ಏನೋ ಒಂದು ಸೊಗಸು, ಛಂದದ ಬಂಧ, ಸರಳ ಸುಂದರ ಪದಗಳ ಬಳಕೆ, ಓದಿ ಮುಗಿಸಿ ದಾಗ ಮನಸ್ಸಿನ ಮೇಲೆ ಒಂದು ಅಲೆ ಹಿತವಾದ ತಂಗಾಳಿ ಬೀಸಿದ ಅನುಭವ. ಹಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೇ ತಪ್ಪಾಯ್ತೇನೋ (ಒಳ್ಳೆಯ ಅರ್ಥದಲ್ಲಿಯೇ ಇದನ್ನು ಹೇಳುತ್ತಿದ್ದೇನೆ), ‘ಇವೆಲ್ಲ ಕವಿತೆಗಳನ್ನು ಒಟ್ಟುಸೇರಿಸಿ ಒಂದು ಪುಸ್ತಕ  ಪ್ರಕಟಿಸ ಬೇಕೆಂದಿ ದ್ದೇನೆ, ನೀವೇ ಒಂದು ಮುನ್ನುಡಿ ಬರೆದುಕೊಡಿ’ ಎಂದು ನನಗೆ ಪ್ರೀತಿಯ ಆದೇಶ ಇತ್ತರು!

ಹೌದು, ಪ್ರೀತಿಯ ಆದೇಶವೇ. ಒಂದನೆಯದಾಗಿ, ನಾನು ಜಯಲಕ್ಷ್ಮಿಯವರ ಮಕ್ಕಳಿಗಿಂತಲೂ ಚಿಕ್ಕ ಪ್ರಾಯದವನು. ಎರಡನೆ ಯದಾಗಿ, ಆಗಲೇ ಹೇಳಿದಂತೆ ಕವಿತೆರಚನೆ ವಿಮರ್ಶೆ ನನ್ನ ಚಹದ ಕಪ್ಪಲ್ಲ. ಹಾಗಿದ್ದರೂ ನನ್ನಿಂದ ಮುನ್ನುಡಿ ಬರೆಸಬೇಕೆಂಬ ಅವರ ಆಶಯವನ್ನು ನೆಪ ಹೇಳದೆ ಒಪ್ಪಿಕೊಂಡು ಇಲ್ಲಿ ಒಂದೆರಡು ಮಾತುಗಳನ್ನು ಬರೆಯುತ್ತಿದ್ದೇನೆ. ಇದನ್ನು ಮುನ್ನುಡಿ ಎನ್ನುವುದಕ್ಕಿಂತ ಶುಭಾಶಂಸನೆ ಎಂದರೆ ಚನ್ನ. ಆಕಾಶವಾಣಿಯಲ್ಲಿ ಪ್ರಸಾರವಾಗಿದ್ದ ಆ ಸಂದರ್ಶನದಲ್ಲೇ ನಾನು ತಿಳಿದು ಕೊಂಡಂತೆ ಜಯಲಕ್ಷ್ಮಿಯವರು ಒಬ್ಬ ಕವಯಿತ್ರಿಯಾಗಿ ಹೊರಹೊಮ್ಮಿದ್ದೂ ಒಂದು ರೀತಿಯ ಸ್ವಾರಸ್ಯಕರ ಸನ್ನಿವೇಶದಲ್ಲಿ.

ದೂರದ ಊರಿನಲ್ಲಿ ಎಂಜಿನಿಯರಿಂಗ್ ಓದುತ್ತ, ತದ ನಂತರ ವಾಯುಸೇನೆ ಸೇರಿದ ಮೇಲೆ ಮತ್ತೂ ದೂರದ ಊರಿಗೆ ವರ್ಗವಾದ ಮಗನೊಡನೆ ಪತ್ರವ್ಯವಹಾರ ನಡೆಯುತ್ತಿದ್ದದ್ದು ಕವಿತೆಗಳ ರೂಪದಲ್ಲಿ! ಕ್ಷೇಮಸಮಾಚಾರಕ್ಕೆ, ಮತ್ತು ಒಬ್ಬರನ್ನೊಬ್ಬರು ಎಷ್ಟು ಮಿಸ್ ಮಾಡ್ಕೊಳ್ತಿದ್ದೇವೆ ಎಂಬ ಭಾವಾಭಿವ್ಯಕ್ತಿಗೆ, ಅಮ್ಮ-ಮಗ ಬಳಸಿದ್ದು ಕಾವ್ಯ ಮಾಧ್ಯಮ. ಹಾಗೆ ಬರೆದಿದ್ದ ಪತ್ರ-ಪದ್ಯಗಳು ಈಗಾಗಲೇ ಒಂದು ಸಂಕಲನವಾಗಿ ‘ಮಗನ ಮಾತೆ’ ಎಂಬ ಆಪ್ತ ಹೆಸರಿನಿಂದ ಪ್ರಕಟವಾಗಿವೆಯಂತೆ. ಆ ಲೆಕ್ಕದಲ್ಲಿ ಪ್ರಸ್ತುತ ಇದು ಜಯಲಕ್ಷ್ಮಿಯವರ ಮಡಿಲಿನಲ್ಲಿ ಎರಡನೆಯ ಕಾವ್ಯಕೂಸು. ಇದರ ಕುಲಾವಿಗೊದು ಚಂದದ ಕುಚ್ಚು ಅಂಟಿಸುವ ಕೆಲಸವನ್ನು ನನಗೆ ಕೊಟ್ಟಿದ್ದಾರೆ.

ಇಲ್ಲಿಯ ಕವಿತೆಗಳನ್ನು ಪುಸ್ತಕದ ಒಟ್ಟಂದಕ್ಕಾಗಿ ಶಿಶುಗೀತೆಗಳು, ಪ್ರಕೃತಿ-ಪರಿಸರವನ್ನು ಕುರಿತ ಕವನಗಳು, ತತ್ತ್ವಜ್ಞಾನ
ಬೋಧನೆಯ ಪದ್ಯಗಳು, ಮತ್ತು ಭಕ್ತಿಪರ ರಚನೆಗಳು ಎಂದು ಸ್ಥೂಲವಾಗಿ ವಿಂಗಡಿಸಬಹುದಾದರೂ ನಿಜವಾಗಿ ಒಂದೊಂದು
ಕವಿತೆಯೂ ತನ್ನದೇ ಸತ್ತ್ವ, ಸೌಂದರ್ಯ, ಸುಗಂಧ ಇರುವ ಒಂದೊಂದು ಹೂವು. ಎಲ್ಲಿಯೂ ಏಕತಾನತೆ ಕಾಣಿಸದು.

ಶಿಶುಗೀತೆಗಳನ್ನಷ್ಟೇ ನೋಡಿದರೂ ಭರಪೂರ ವೈವಿಧ್ಯ. ಹೆಚ್ಚಿನವೆಲ್ಲ ಬಹುಶಃ ಜಯಲಕ್ಷ್ಮಿಯವರು ತನ್ನ ಮೊಮ್ಮಕ್ಕಳನ್ನು ಆಡಿಸುತ್ತಿದ್ದಾಗ ಮೂಡಿದ ಆಶುರಚನೆಗಳು. ಆದರೆ ಅವುಗಳಲ್ಲೇ ಹಿತವಾದೊಂದು ಲಯ, ಅತ್ಯಂತ ಸಹಜವೆನಿಸುವ ಪ್ರಾಸ, ಮಗುವಿಗೂ ಅರ್ಥವಾಗುವಷ್ಟು ಸರಳತೆ. ಅವುಗಳಲ್ಲಿ ಅನುಕರಣಕ್ಕಾಗಿ ‘ಡೂ ಡೂ ಬಸವಣ್ಣ ಬಕ್ ಬವ್ ಶುನಕಣ್ಣ ಮಿಯಾವ್ ಮಿಯಾವ್ ಬೆಕ್ಕಣ್ಣ’ನೂ ಬರುತ್ತಾರೆ; ಒಂದರಿಂದ ಹತ್ತರವರೆಗೆ ಎಣಿಕೆ ಕಲಿಯಲಿಕ್ಕಾಗಿ ‘ಮಾವಿನ ಮರದಲಿ ಒಂದು ಗೂಡು ಎರಡು ಹಕ್ಕಿ ಮೂರು ಮೊಟ್ಟೆ…’ಗಳೂ ಬರುತ್ತವೆ!

ಇವುಗಳನ್ನು ಶಿಶುಗೀತೆ ಅಂತಾದ್ರೂ ಅನ್ನಿ, ಅಭಿನಯಗೀತೆಗಳು ಅಂತಾದ್ರೂ ಅನ್ನಿ, ಇವು ನಿಮಗೆ ಕರಾವಳಿ ಜಿಲ್ಲೆಯಲ್ಲಿ ಹಿಂದೆ ಆಗಿಹೋದ ಮುಂಡಾಜೆ ರಾಮಚಂದ್ರ ಭಟ್ಟರು, ಪಳಕಳ ಸೀತಾರಾಮ ಭಟ್ಟರು, ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮರಂಥ ಮಕ್ಕಳ ಕವಿಗಳನ್ನು ನೆನಪಿಸುವುದು ಸುಳ್ಳಲ್ಲ. ಅಂತೆಯೇ ಜಯಲಕ್ಷ್ಮಿಯವರ ಲೇಖನಿಯಿಂದ ಮೂಡಿಬಂದಿರುವ ಪ್ರಕೃತಿ-ಪರಿಸರ-ಹೂದೋಟ-ಪ್ರಾಣಿ- ಪಕ್ಷಿಗಳನ್ನು ಕುರಿತ ಕವಿತೆಗಳಲ್ಲಿ ಕಾಣಬರುವ ಜಿ.ಎಸ್ ಶಿವರುದ್ರಪ್ಪ, ಎಸ್.ವಿ.ಪರಮೇಶ್ವರ ಭಟ್, ಕಡಂಗೋಡ್ಲು ಶಂಕರ ಭಟ್ ಮುಂತಾದ ಕವಿವರೇಣ್ಯರ ಛಾಯೆ.

‘ನಮ್ಮ ಮನೆಯಂಗಳ ನಮ್ಮ ಕೈ ತೋಟ’ ಕವಿತೆಯಂತೂ ಮಲ್ಲಿಗೆ, ಮಂದಾರ, ರಂಜೆ, ನಂದಿಬಟ್ಟಲು, ದಾಸವಾಳ, ಕರವೀರ, ಪಾರಿಜಾತ, ಬ್ರಹ್ಮಕಮಲ, ಗೋರಟಿಗೆ, ಲಿಲ್ಲಿ, ಕಣಗಿಲೆ ಮುಂತಾದ ಹತ್ತುಹಲವು ಹಳ್ಳಿಹೂವುಗಳನ್ನು ಪೋಣಿಸಿದ ಸುಂದರ ಮಾಲೆಯಂತಿದ್ದು ಓದುವಾಗ ನನಗೆ ನಮ್ಮ ಊರಿನ ನನ್ನ ಮನೆಯ ಸುತ್ತಮುತ್ತಲಿನ ಹೂಗಿಡಗಳನ್ನೊಮ್ಮೆ ನೋಡಿಕೊಂಡು ಬಂದೆನೋ ಎಂದೆನಿಸುವಂತೆ ಮಾಡಿದೆ. ಬರೋಬ್ಬರಿ ೨೭ ಚರಣಗಳೊಡನೆ ಒಂದು ನೀಳ್ಗವಿತೆಯೇ ಆಗಿರುವ ‘ವರ್ಷವೈಭವ’ ಸಹ ಊರಿನ ಮಳೆಗಾಲದ ದೃಶ್ಯವನ್ನು ಪರಿಣಾಮಕಾರಿಯಾಗಿ ಮೂಡಿಸಿದೆ.

ಹಿತವೆನಿಸುವ ಲಯ, ಸಹಜವಾದ ಪ್ರಾಸ ಜಯಲಕ್ಷ್ಮಿಯವರ ಕವಿತೆಗಳ ಅಗ್ಗಳಿಕೆ. ‘ಬದುಕು’ ಶೀರ್ಷಿಕೆಯ ಕವಿತೆಯನ್ನು
ಓದತೊಡಗಿದಂತೆ ‘ಬಾಳ ದೋಣಿಯು ದಾರಿ ಸಾಗುತ ಏಳು ಬೀಳನು ಗಣಿಸದೆ… ನಾಳೆಗಳು ಸತ್ಪಥವ ತೋರಲಿ ಬಾಳು ನಿಚ್ಚಳ ವಾಗಲಿ….’ ಎನ್ನುವಷ್ಟರಲ್ಲಿ ನಿಮ್ಮ ಮನದಲ್ಲಿ ‘ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ…’ ಮಲ್ಲಿಕಾಮಾಲೆ
ಛಂದಸ್ಸು ತನ್ನಿಂತಾನೇ ಮೂಡುತ್ತದೆ. ಮಿಶ್ರಛಾಪು ತಾಳ ಹಾಕುತ್ತ ಮನಸ್ಸು ಕವಿತೆಯನ್ನು ಗುನುಗುನಿಸುತ್ತದೆ. ಕವಯಿತ್ರಿ
ಯ ರಚನೆ ಓದುಗರ ಒಳಹೊಕ್ಕು ಎದೆಯ ಕದವ ತಟ್ಟಿದೆಯೆಂದು ಗೊತ್ತಾಗಲಿಕ್ಕೆ ಇನ್ನೇನು ಬೇಕು!

ಭಕ್ತಿಪರ ಪದ್ಯಗಳೂ ಅಷ್ಟೇ: ಆದಿಪ್ರಾಸದಿಂದ ಕೂಡಿದ ಸುಂದರ ರಚನೆಗಳು. ಭಕ್ತಿಯೂ ಕಾವ್ಯಶಕ್ತಿಯೂ ತುಂಬಿತುಳುಕುವಂತೆ ಇವೆ. ದಾಸರ ಪದಗಳಿಗಿಂತ ಯಾವ ರೀತಿಯಲ್ಲೂ ಕಮ್ಮಿಯಿಲ್ಲ. ಅದರಲ್ಲೂ ಜೋ ಜೋ ಲಾಲಿ ಹಾಡು ಮತ್ತು ಅದು ದಶಾವ ತಾರ ಸ್ತುತಿ ಆಗಿರುವುದು ನನಗೆ ಬಹಳವೇ ಇಷ್ಟವಾಯಿತು. ಮತ್ತೆ ಅಮ್ಮನನ್ನು ಕುರಿತಾಗಿಯೇ ಬರೆದ ನಾಲ್ಕೈದು ಪದ್ಯಗಳಿವೆ. ಅಮ್ಮ ಅಂದರೆ ಹೊತ್ತು ಹೆತ್ತು ಸಾಕಿ ಸಲಹಿದ ಅಮ್ಮನಷ್ಟೇ ಅಲ್ಲ, ಗೋಮಾತೆ ಮತ್ತು ಭಾರತಮಾತೆಗೂ ಇಲ್ಲಿ ವಂದನೆ ಸಂದಿದೆ.

ಇಷ್ಟಾಗಿಯೂ ಜಯಲಕ್ಷ್ಮಿಯವರೆನ್ನುತ್ತಾರೆ: ‘ಯಾರ ಮೆಚ್ಚಿಸಲೆಂದು ನಾನು ಬರೆದವಳಲ್ಲ… ಮನದಿ ಮೂಡಿಹ ನುಡಿಯ
ಹಿಡಿದಿಡುವೆನು… ಮನದಿ ಮೂಡಿದ ಭಾವ ಸೋರಿ ಹೋಗಲು ಬಿಡದೆ… ಕಾಗದದ ಚೂರಿನಲಿ ಪಡಿಮೂಡಿಸಿ…’ ಆ ಕಾಗದಗಳ
ಚೂರುಗಳೆಲ್ಲ ಒಟ್ಟಾಗಿ ಈ ಕವನ ಸಂಕಲನ ನಿಮ್ಮ ಕೈಯಲ್ಲಿದೆ. ನಿಮ್ಮನ್ನು ಮೆಚ್ಚಿಸಲೆಂದು ಜಯಲಕ್ಷ್ಮಿಯವರು ಬರೆದಿರ ಲಿಕ್ಕಿಲ್ಲ; ಆದರೆ ಈ ಕವಿತೆಗಳೆಲ್ಲ ನಿಮಗೆ ಮೆಚ್ಚಿಗೆಯಾಗದೆಯಂತೂ ಇರುವುದಿಲ್ಲ! ಜೀವನೋತ್ಸಾಹದ ಮೂರ್ತಿಯೇ ಆಗಿರುವ ಜಯಲಕ್ಷ್ಮಿಯವರ ಲೇಖನಿಯಿಂದ ಇನ್ನಷ್ಟು ಕವಿತೆಗಳು- ಅವರ ಹೂದೋಟದಲ್ಲಿ ಬೆಳೆದು ನಳನಳಿಸುವ ಹೂವುಗಳಂತೆ- ಭಾವ ಪರಿಮಳವನ್ನು ಬೀರುತ್ತ ಅರಳುತ್ತಿರಬೇಕು, ಕನ್ನಡ ಸಾಹಿತ್ಯೋ ದ್ಯಾನವನ್ನು ಸಮೃದ್ಧಗೊಳಿಸಬೇಕು ಎಂದು ನನ್ನ ಆಶಯ.’

* * *
ಜಯಲಕ್ಷ್ಮಿಯವರ ಕವಿತಾಶಕ್ತಿ ಹೊರಬರಲು ಕಾರಣರಾದ ಮಗ ವೆಂಕಟಗಿರಿ ಅವರು ಭಾರತೀಯ ವಾಯುಸೇನೆಯಲ್ಲಿ
ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಈಗ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಐಟಿ ಕಂಪನಿಯೊಂದರ ಉನ್ನತ ಹುದ್ದೆಯಲ್ಲಿದ್ದಾರೆ. ಅವರ ಮಗ (ಜಯಲಕ್ಷ್ಮಿಯವರ ಮೊಮ್ಮಗ) ಅರವಿಂದನ ಬ್ರಹ್ಮೋಪದೇಶ ಸಮಾರಂಭವನ್ನು ಊರಿನಲ್ಲಿ ಮೊನ್ನೆ ಗುರುವಾರ ಜೂನ್ 23ರಂದು ಇಟ್ಟುಕೊಂಡಿದ್ದರು. ಕುಟುಂಬಸ್ಥರೆಲ್ಲ ಒಟ್ಟು ಸೇರುವವರಿದ್ದುದರಿಂದ ಆ ಸಂದರ್ಭದಲ್ಲಿಯೇ ಕವನ
ಸಂಕಲನ ಬಿಡುಗಡೆ ಸಮಾರಂಭವನ್ನೂ ಆಯೋಜಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರ ಅಧ್ಯಕ್ಷತೆ. ಕುಂದಾಪುರದ ಹಿರಿಯ ನ್ಯಾಯವಾದಿ, ಸಾಹಿತಿ ಮತ್ತು ನಗೆಮಾತುಗಾರ, 2008ರಲ್ಲಿ ಶಿಕಾಗೊದಲ್ಲಿ ‘ಅಕ್ಕ’ ಸಮ್ಮೇಳನದಲ್ಲಿ ನನಗೆ ಮುಖತಃ ಪರಿಚಯ ರಾದ, ಎ.ಎಸ್.ಎನ್ ಹೆಬ್ಬಾರರಿಂದ ಪುಸ್ತಕ ಬಿಡುಗಡೆ. ನನಗೆ ಫೇಸ್‌ಬುಕ್‌ನಲ್ಲಿ ಪರಿಚಿತೆ, ಉದಯೋನ್ಮುಖ ಬರಹಗಾರ್ತಿ ಪೂರ್ಣಿಮಾ ಕಮಲಶಿಲೆ ಅವರಿಂದ ಕಾರ್ಯಕ್ರಮ ನಿರೂಪಣೆ ಇತ್ತಂತೆ. ಈಹಿಂದೆ ಜಯಲಕ್ಷ್ಮಿ ಯವರ ಸ್ನೇಹಸಂಪರ್ಕ ನನಗಾದದ್ದು ಪೂರ್ಣಿಮಾರಿಂದಲೇ.

ಜಯಲಕ್ಷ್ಮಿಯವರೂ, ಅವರ ಹಿರಿಯ ಮಗ ಡಾ. ವಿಶ್ವನಾಥ ಆಚಾರ್ಯರೂ ನನಗೆ ವಾಟ್ಸಪ್ ಕರೆ ಮಾಡಿ ಪ್ರೀತಿಯಿಂದ ಆಹ್ವಾನಿಸಿದ್ದರು. ಆಗ ಗೊತ್ತಾಯಿತು, ಅವರು ಲಂಡನ್‌ನಲ್ಲಿ ವೈದ್ಯವೃತ್ತಿಯಲ್ಲಿದ್ದಾಗ ಅಲ್ಲಿ ನನ್ನ ಅಣ್ಣನಿಗೂ ಪರಿಚಯ ವಾದವರೇ. ಹೀಗೆ ನನ್ನ ಮಟ್ಟಿಗೆ ಒಂದು ತೆರನಾದ ಆಹ್ಲಾದಕರ ಆತ್ಮೀಯತೆ ಆ ಸಮಾರಂಭದ್ದು. ಭಾರತದಲ್ಲಿರುತ್ತಿದ್ದರೆ ಖಂಡಿತ ಭಾಗವಹಿಸುತ್ತಿದ್ದೆ. ದೂರದ ಅಮೆರಿಕದಲ್ಲಿದ್ದೇನಾದ್ದರಿಂದ ಇಲ್ಲಿಂದಲೇ ಶುಭ ಹಾರೈಸಿದೆ.

‘ವನಸುಮದೊಲೆನ್ನ ಜೀವನ’ ನಡೆಸುವವರನ್ನು ಸಾಧ್ಯವಾದಾಗೆಲ್ಲ ಪರಿಚಯಿಸಿ ಗೌರವಿಸುವುದು ಈ ಅಂಕಣದ ಗೌರವವನ್ನು
ಹೆಚ್ಚಿಸುತ್ತದೆಂದು ನಾನು ನಂಬಿರುವುದರಿಂದ ಇಂದು ಜಯಲಕ್ಷ್ಮಿಯವರ ಬಗೆಗೆ ಬರೆದಿದ್ದೇನೆ. ಅಗ್ನಿಪಥ್‌ನಂಥ ಒಳ್ಳೆಯ ಯೋಜನೆಗೆ ಪ್ರತಿಭಟನೆಗಳಾಗುತ್ತಿರುವಾಗ ‘ಇಲ್ಲಿ ನೋಡಿ. ಮಗನನ್ನು ವಾಯುಸೇನೆಗೆ ಸೇರಿಸಿದ್ದ ಈ ತಾಯಿ ಯನ್ನು!’ ಎಂದು ಪರಿಚಯಿಸುವುದೂ ಸಂದರ್ಭೋಚಿತವೇ. ಉತ್ಸಾಹ ಕ್ರಿಯಾಶೀಲತೆಯಲ್ಲಿ ಜಯಲಕ್ಷ್ಮಿಯವರು ನಮಗೆಲ್ಲರಿಗೂ ಪ್ರೇರಣೆ ಯಾಗಿರಲಿ. ಮಕ್ಕಳು-ಮೊಮ್ಮಕ್ಕಳಿಗಷ್ಟೇ ಅಲ್ಲ ನಮಗೂ ದಾರಿದೀಪವಾಗಲಿ.