Friday, 13th December 2024

ರಾಷ್ಟ್ರಪತಿ ಏರ್ಪಡಿಸಿದ ಔತಣಕೂಟದಲ್ಲಾದ ಎಡವಟ್ಟು ಪ್ರಸಂಗವು !

ಇದೇ ಅಂತರಂಗ ಸುದ್ದಿ

vbhat@me.com

ಯಾವುದೇ ದೇಶದ ಗಣ್ಯರು ಭೇಟಿ ನೀಡಿದಾಗ, ಅವರ ಉಪಚಾರದ ಹೊಣೆ ಹೊತ್ತ ಅಧಿಕಾರಿಗಳು ಅತಿಥಿ ಸತ್ಕಾರದಲ್ಲಿ ಎಲ್ಲೂ ಲೋಪವಾಗದಂತೆ ಸಾಕಷ್ಟು ನಿಗಾವಹಿಸುತ್ತಾರೆ. ವಿದೇಶಿ ಗಣ್ಯರ ಸತ್ಕಾರದಲ್ಲಿ ಸಾಕಷ್ಟು ಅನುಭವವಿರುವ ಹಿರಿಯ, ನುರಿತ ಅಧಿಕಾರಿಗಳಿಗೆ ಈ ಹೊಣೆಗಾರಿಕೆಯನ್ನು ವಹಿಸಲಾಗುತ್ತದೆ.
ಕಾರಣ ಅವರಿಗೆ ತಮ್ಮ ಸೇವಾವಯಲ್ಲಿ ನೂರಾರು ಗಣ್ಯರ ಸತ್ಕಾರ, ಉಪಚಾರಗಳಲ್ಲಿ ತೊಡಗಿಸಿಕೊಂಡ ಅನುಭವವಿರುತ್ತದೆ.

ಅದರಲ್ಲೂ ಅಮೆರಿಕ, ರಷ್ಯಾ, ಚೀನಾ, ಜಪಾನ್, ಬ್ರಿಟನ್, ಫ್ರಾನ್ಸ್ ಮುಂತಾದ ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಿಗಳ ಭೇಟಿಗೆ ಇನ್ನಿಲ್ಲದ ಮಹತ್ವವಿರುವು ದರಿಂದ, ಹೊಣೆಗಾರಿಕೆ ಮತ್ತಷ್ಟು ಜಾಸ್ತಿ. ಯಾವುದೇ ದೇಶದ ಗಣ್ಯರ ಭೇಟಿಯಿರಬಹುದು, ಆತಿಥ್ಯದಲ್ಲಿ ಹೆಚ್ಚು-ಕಮ್ಮಿ ಆಗುವಂತಿಲ್ಲ. ಪ್ರತಿ ಹಂತದಲ್ಲೂ ಶಿಷ್ಟಾಚಾರವನ್ನು ಪಾಲಿಸಲೇಬೇಕು. ಒಂದು ಸಣ್ಣ ಅಪಚಾರವಾದರೂ ಅದನ್ನು ಲೋಪವೆಂದೇ ಪರಿಗಣಿಸಲಾಗುತ್ತದೆ. ಈ ಎಲ್ಲ ಕಾರಣಗಳಿಂದ, ವಿದೇಶಿ ಗಣ್ಯರ ಭೇಟಿ ಅಂದ್ರೆ ಅದರ ಹೊಣೆ ಹೊತ್ತ ಅಧಿಕಾರಿಗಳಿಗೆ ದೊಡ್ಡ ತಲೆನೋವು. ಹಾಗಿರುವಾಗ ಜಿ-೨೦ಯಂಥ ಸಮಾವೇಶ ಸಂಘಟಿಸುವಾಗ, ಉಪಚಾರ, ಶಿಷ್ಟಾಚಾರ ಯಾವ ಪ್ರಮಾಣ ದಲ್ಲಿರುತ್ತದೆ ಎಂಬುದು ಊಹೆಗೂ ನಿಲುಕದ್ದು.

ಭಾರತದ ನೆಲದ ಮೇಲೆ ಕಾಲಿಟ್ಟ ವಿದೇಶಿ ಗಣ್ಯರು ವಾಪಸ್ ಮರಳುವ ತನಕ ಸಕಲ ಉಪಚಾರದ ಉಸ್ತುವಾರಿಯನ್ನು ಹೊತ್ತ ಅಧಿಕಾರಿಗಳು ಮೈಯೆಲ್ಲಾ ಕಣ್ಣಾಗಿರುತ್ತಾರೆ. ಸಾಮಾನ್ಯವಾಗಿ ವಿದೇಶಾಂಗ ಇಲಾಖೆಯ ಪ್ರಮುಖ ಅಧಿಕಾರಿಗಳು, ಆಯಾ ದೇಶದಲ್ಲಿರುವ ಭಾರತದ ರಾಯಭಾರಿಗಳು ಈ ಹೊಣೆಯನ್ನು
ಹೊತ್ತಿರುತ್ತಾರೆ. ಸಾಕಷ್ಟು ದಿನಗಳ ಮುನ್ನವೇ ಅವರ ಭೇಟಿಯ ಕಿರ್ದಿಯನ್ನು ರೂಪಿಸಿರುತ್ತಾರೆ. ಅದರಲ್ಲೂ ವಿದೇಶಿ ಗಣ್ಯರು ನಮ್ಮ ದೇಶದ ರಾಷ್ಟ್ರಪತಿ ಮತ್ತು ಪ್ರಧಾನಿ ಭೇಟಿ ಸಂದರ್ಭಗಳಲ್ಲಿ ಶಿಷ್ಟಾಚಾರ ಗರಿಷ್ಠ ಪ್ರಮಾಣದಲ್ಲಿರುತ್ತದೆ.

ಕೆ.ಆರ್.ನಾರಾಯಣನ್ ರಾಷ್ಟ್ರಪತಿಯಾಗಿದ್ದಾಗ, ವಿಯೆಟ್ನಾಮ್ ಅಧ್ಯಕ್ಷ ಟ್ರಾನ್ ಡುಕ್ ಲುವಾಂಗ್ ದೆಹಲಿಗೆ ಭೇಟಿ ನೀಡಿದ್ದರು. ಅವರ ಗೌರವಾರ್ಥ ನಾರಾಯಣನ್ ಔತಣಕೂಟ ಏರ್ಪಡಿಸಿದ್ದರು. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ಔತಣ ಕೂಟದ ಆರಂಭದಲ್ಲಿ ಉಭಯ ದೇಶಗಳ ರಾಷ್ಟ್ರಗೀತೆಗಳನ್ನು
ನುಡಿಸುವುದು ಸಂಪ್ರದಾಯ. ಭಾರತದ ರಾಷ್ಟ್ರಗೀತೆ ನಂತರ, ವಿಯೆಟ್ನಾಮ್ ರಾಷ್ಟ್ರಗೀತೆ. ಆದರೆ ಅಂದು, ಎಲ್ಲರಿಂದ ತಿರಸ್ಕಾರಕ್ಕೊಳಗಾದ ಮತ್ತು ೧೯೭೫ರಲ್ಲೇ ಬರಖಾಸ್ತಾದ ದಕ್ಷಿಣ ವಿಯೆಟ್ನಾಮ್‌ನ ರಾಷ್ಟ್ರಗೀತೆಯನ್ನು ಪ್ರಮಾದವಶಾತ್ ನುಡಿಸಲಾಯಿತು.

ಈ ಪ್ರಮಾದ ವಿಯೆಟ್ನಾಮ್ ಅಧ್ಯಕ್ಷರು ಮತ್ತು ಅವರ ನಿಯೋಗದಲ್ಲಿದ್ದವರಿಗೆ ತಕ್ಷಣಕ್ಕೆ ಗಮನಕ್ಕೆ ಬಂದಿತು. ಆದರೆ ಅಂದು ರಾಷ್ಟ್ರಪತಿ ಭವನದಲ್ಲಿದ್ದ ಭಾರತದ ಕಡೆಯ ಅಧಿಕಾರಿಗಳಿಗೆ, ಸದಸ್ಯರಿಗೆ ಮತ್ತು ಆಹ್ವಾನಿತರಿಗೆ ಮತ್ತು ಉಳಿದ ಯಾರಿಗೂ ಈ ಪ್ರಮಾದ ಗೊತ್ತೇ ಆಗಲಿಲ್ಲ. ಇದನ್ನು ವಿಯೆಟ್ನಾಮಿನಲ್ಲಿರುವ
ಭಾರತದ ರಾಯಭಾರಿ ಅ-ಬ್ ಸೇಥ್ ಕೂಡ ಗಮನಿಸಿದರು. ಒಂದು ಕ್ಷಣ ಅವರ ಜಂಘಾಬಲವೇ ಉಡುಗಿಹೋಯಿತು. ಔತಣಕೂಟದ ಆರಂಭದಲ್ಲಾದ ಈ ಎಡವಟ್ಟನ್ನು ವಿಯೆಟ್ನಾಮ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದರಲ್ಲದೇ, ಸೇಥ್ ಅವರನ್ನು ಪಕ್ಕಕ್ಕೆ ಕರೆದು ಪ್ರತಿಭಟಿಸಿದರು. ಅಂದು ಸೇಥ್, ವಿಯೆಟ್ನಾಮಿ ಅಧಿಕಾರಿಗಳಿಗೆ ಪರಿಪರಿಯಾಗಿ ಬೇಡಿಕೊಂಡು, ಆದ ಪ್ರಮಾದಕ್ಕೆ ಕ್ಷಮೆಯಾಚಿಸಿದರಲ್ಲದೇ, ಸ್ವಲ್ಪ ಕಾಲಾವಕಾಶ ನೀಡುವಂತೆ ಕೋರಿದರು.

ಆದರೆ ವಿಯೆಟ್ನಾಮ್ ಅಧಿಕಾರಿಗಳು ಅಷ್ಟಕ್ಕೇ ಸಮಾಧಾನರಾಗಲಿಲ್ಲ. ಬೆಳಗಾಗುತ್ತಿದ್ದಂತೆ, ಅಧಿಕೃತ ಭೇಟಿಯನ್ನು ರದ್ದು ಗೊಳಿಸಿ ಸ್ವದೇಶಕ್ಕೆ ಮರಳುವ ಕುರಿತು ಮಾತಾಡುತ್ತಿದ್ದರು. ಹಾಗೇ ನಾದರೂ ಆಗಿದ್ದರೆ ಭಾರತಕ್ಕೆ ಭಾರಿ ಮುಖಭಂಗವಾಗಿ, ಅದು ಅಂತಾರಾಷ್ಟ್ರೀಯ ಮಟ್ಟದ ಹೆಡ್‌ಲೈನ್ ಆಗುತ್ತಿತ್ತು. ಹಾಗಂತ
ಭಾರತದ ರಾಯಭಾರಿ ನೀಡಿದ ಸ್ಪಷ್ಟೀಕರಣ ಮತ್ತು ಕ್ಷಮೆಯನ್ನು ಒಪ್ಪಿಕೊಂಡು ವಿಯೆಟ್ನಾಮ್ ಅಧಿಕಾರಿಗಳು ಸುಮ್ಮನಾಗುವಂತಿರಲಿಲ್ಲ. ಈ ಘಟನೆಯಿಂದ ಖುದ್ದು ವಿಯೆಟ್ನಾಮ್ ಅಧ್ಯಕ್ಷರೇ ಕ್ರುದ್ಧರಾಗಿದ್ದರು. ಅದು ಅವರ ದೇಶದ ಅಸ್ತಿತ್ವದ ಪ್ರಶ್ನೆಯಾಗಿತ್ತು. ವಿಯೆಟ್ನಾಮಿನಲ್ಲಿ ಈ ಪ್ರಮಾದ ದೊಡ್ಡ ರಾಜಕೀಯ ವಿಪ್ಲವವನ್ನೇ ಹುಟ್ಟುಹಾಕುತ್ತಿತ್ತು.

ಈ ಪ್ರಮಾದದ ತೀವ್ರತೆ ಭಾರತದ ಅಧಿಕಾರಿಗಳಿಗಾಗಲಿ, ಸಚಿವ ಸಂಪುಟದ ಸದಸ್ಯರಿಗಾಗಲಿ, ಪ್ರಧಾನಿ ಮತ್ತು ರಾಷ್ಟ್ರಪತಿ ಗಳಿಗಾಗಲಿ ಗೊತ್ತಾಗಲಿಲ್ಲ. ಭಾರತದ ಪ್ರಧಾನಿ ಅಥವಾ ರಾಷ್ಟ್ರಪತಿ ಸಮ್ಮುಖದಲ್ಲಿ ನಮ್ಮ ರಾಷ್ಟ್ರಗೀತೆ ನುಡಿಸುವ ಬದಲು ಪಾಕಿಸ್ತಾನದ ರಾಷ್ಟ್ರಗೀತೆ ನುಡಿಸಿದರೆ ಏನಾಗಬೇಡ? ಇದು ಆ ರೀತಿಯ ಪ್ರಮಾದವಾಗಿತ್ತು. ಔತಣಕೂಟ ಮುಗಿಯುತ್ತಿದ್ದಂತೆ, ಈ ವಿಷಯವನ್ನು ಅಫ್ತಾಬ್ ಸೇಥ್ ಪ್ರಧಾನಿ ಮತ್ತು ರಾಷ್ಟ್ರಪತಿಯವರ ಗಮನಕ್ಕೆ ತಂದರು.

ಅವರಿಬ್ಬರ ಸೂಚನೆ ಮೇರೆಗೆ, ರಾತ್ರೋರಾತ್ರಿ ಭಾರತದ ಪರ ಅಧಿಕೃತ ಕ್ಷಮಾಪಣೆ ಪತ್ರದ ಕರಡನ್ನು ಸಿದ್ಧಪಡಿಸಿದರು. ರಾತ್ರಿಯೇ ಅದನ್ನು ವಿದೇಶಾಂಗ ಕಾರ್ಯದರ್ಶಿ, ರಾಷ್ಟ್ರಪತಿಯವರ ಕಾರ್ಯದರ್ಶಿ, ಪ್ರಧಾನಿಯವರ ಉನ್ನತ ಅಧಿಕಾರಿಗಳಿಗೆ ತೋರಿಸಿದರು. ನಂತರ ಆ ಮಧ್ಯರಾತ್ರಿ ರಾಷ್ಟ್ರಪತಿ ಮತ್ತು ಪ್ರಧಾನಿ
ಗಳಿಗೂ ಕ್ಷಮಾಪತ್ರದ ಒಕ್ಕಣಿಕೆಯನ್ನು ತೋರಿಸಿ, ಅವರಿಂದ ಅನುಮತಿ ಪಡೆದು, ಬೆಳಗಾಗುತ್ತಲೇ ವಿಯೆಟ್ನಾಮ್ ಅಧ್ಯಕ್ಷರ ನಿಯೋಗದಲ್ಲಿದ್ದ ಉನ್ನತ ಅಧಿಕಾರಿಗಳಿಗೆ ನೀಡಿದರು.

ಗಮನಾರ್ಹ ಸಂಗತಿಯೆಂದರೆ, ಈ ಕ್ಷಮಾಪಣೆ ಪತ್ರ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರ ಹೆಸರಿನಲ್ಲಿತ್ತು ಮತ್ತು ಖುದ್ದು ಅವರೇ ಸಹಿ ಮಾಡಿದ್ದರು! ಅದನ್ನು ಎರಡೆರಡು ಸಲ ಓದಿದ ವಿಯೆಟ್ನಾಮ್ ಅಧ್ಯಕ್ಷರು ಸುಮ್ಮನಾದರು. ಅಲ್ಲಿಗೆ ಇಡೀ ಘಟನೆ ಸುಖಾಂತ್ಯ ಕಂಡಿತು. ಈ ವಿಷಯವನ್ನು ನಲವತ್ತು ವರ್ಷಗಳ ಕಾಲ ವಿದೇಶಾಂಗ ಸೇವಾ ಅಧಿಕಾರಿಯಾಗಿ, ವಿವಿಧ ಉನ್ನತ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಅಫ್ತಾಬ್ ಸೇಥ್ ತಮ್ಮ A Diplomat’s Garden ಕೃತಿಯಲ್ಲಿ ಸ್ವಾರಸ್ಯವಾಗಿ ಬರೆದಿದ್ದಾರೆ.

ಏನಾಗ್ತಾರೋ, ಯಾರಿಗೆ ಗೊತ್ತು?

ಇತ್ತೀಚೆಗೆ ನಾನು ಇದನ್ನು ‘ದೈನಿಕ್ ಭಾಸ್ಕರ್’ ಪತ್ರಿಕೆಯಲ್ಲಿ ಓದಿದ್ದು. ಮಾರಿಶಸ್‌ನ ಒಟ್ಟು ಜನಸಂಖ್ಯೆ ಹದಿಮೂರು ಲಕ್ಷ. ಆ ಪೈಕಿ ಭಾರತೀಯ ಮೂಲದವರು ಶೇ.೬೮ರಷ್ಟು. ಅಲ್ಲಿ ಭಾರತೀಯರ ಸಂಖ್ಯೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೆಲೆಗೊಂಡಿರುವುದಕ್ಕೆ ಕಾರಣವೂ ಇದೆ. ೧೮೩೪ರಿಂದ ೧೯೨೦ರ ನಡುವೆ ಸುಮಾರು ಐದು ಲಕ್ಷ ಮಂದಿ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲೆಂದು ಭಾರತದಿಂದ ಅಲ್ಲಿಗೆ ಹೋಗಿ ನೆಲೆಸಿದರು. ಈಗ ನೀವು ಮಾರಿಶಸ್‌ಗೆ ಹೋದರೆ ವಿದೇಶಿ ನೆಲದಲ್ಲಿದ್ದೀರಿ ಎಂದು ಅನಿಸುವುದಿಲ್ಲ. ಅಲ್ಲಿ ಬಹುತೇಕರಿಗೆ ಹಿಂದಿ ಬರುತ್ತದೆ.

ಭಾರತೀಯ ಉದ್ಯಮಿಗಳು ಅಲ್ಲಿ ತಮ್ಮ ದೇಶದ ಯುವಕ- ಯುವತಿಯರಿಗೆ ನೌಕರಿಯನ್ನೂ ಕೊಡುತ್ತಾರೆ. ಹೀಗಾಗಿ ಭಾರತೀಯರ ಸಂಖ್ಯೆ ಅಲ್ಲಿ ಹೆಚ್ಚೇ ಇದೆ.
ಹಣ ಗಳಿಸಲೆಂದು ಬೇರೆ ಬೇರೆ ದೇಶಗಳಿಗೆ ಹೋದ ಭಾರತೀಯರು, ಆಟೋಟಗಳಲ್ಲಿ ಭಾಗವಹಿಸಿ ಪದಕ ಗೆಲ್ಲುವ ಮಟ್ಟಕ್ಕೆ ಬೆಳೆದಿದ್ದಾರೆ. ಫುಟ್ಬಾಲ್ ಆಟದ ವಿಚಾರಕ್ಕೆ ಬಂದಾಗ ಕೋಲ್ಕತ್ತಾದ ಮೋಹನ್ ಬಾಗನ್ ಹೆಸರು ನೆನಪಿಗೆ ಬರದೇ ಇರಲಾರದು. ಆದರೆ ಕೇರಳದ ಮಂದಿ ಫುಟ್ಬಾಲ್ ಆಡಿ ಫೀಫಾ ರ‍್ಯಾಂಕಿಂಗ್ ಪಡೆದಿದ್ದಾರೆ ಎಂಬುದನ್ನು ಕಲ್ಪನೆ ಕೂಡ ಮಾಡಲಾಗದು. ಫೀಫಾ ರ‍್ಯಾಂಕಿಂಗ್‌ನಲ್ಲಿ ಭಾರತ ೯೯ನೇ ಸ್ಥಾನದಲ್ಲಿದೆ.

ಆದರೆ ಮಾಲ್ಟಾದಲ್ಲಿ ವೇಟರ್, ಲ್ಯಾಬ್ ಟೆಕ್ನಿಷಿಯನ್, ಶಿಕ್ಷಕ, ಟ್ಯಾಕ್ಸಿಚಾಲಕ, ಎಲೆಕ್ಟ್ರಿಷಿಯನ್ ಹೀಗೆ ಹಲವು ಕೆಲಸಗಳನ್ನು ಮಾಡಿಕೊಂಡಿದ್ದ ವ್ಯಕ್ತಿ ಮಾಲ್ಟಾಗೆ ಫೀ-ದಲ್ಲಿ ೧೭೧ನೇ ಸ್ಥಾನವನ್ನು ಕೊಡಿಸಿದ್ದಾರೆ. ಅಲ್ಲಿಯೇ ಫುಟ್ಬಾಲ್ ಕ್ಲಬ್ ಕೂಡ ಸ್ಥಾಪನೆ ಮಾಡಿದ್ದಾರೆ. ಹೊಟ್ಟೆಪಾಡಿಗೆಂದು ವಿದೇಶಿ ನೆಲದಲ್ಲಿ ದುಡಿದು ಭಾರತ ದಲ್ಲಿರುವ ತನ್ನ ಅವಲಂಬಿತರಿಗೆ ಹಣ ಕಳುಹಿಸುವುದು ಒಂದೆಡೆಯಾದರೆ, ಅಲ್ಲಿ ಯುರೋಪಿಯನ್ ಟೀಮ್‌ಗಳ ಜತೆಗೆ ಸೆಣಸಿ ಆಟವಾಡಿ ಸ್ಥಾನ ಗಿಟ್ಟಿಸಿಕೊಳ್ಳು ವುದು ಸಣ್ಣ ಮಾತಲ್ಲ. ಆದರೆ ಇದನ್ನು ಮಾಲ್ಟಾದ ಹವ್ಯಾಸಿ ಫುಟ್ಬಾಲ್ ಆಟಗಾರರು ಮಾಡಿ ತೋರಿಸಿದ್ದಾರೆ.

೨೦೧೫ರಲ್ಲಿ ಕ್ಲಬ್ ಸ್ಥಾಪನೆ ಮಾಡಿದಾಗ ಹವ್ಯಾಸಕ್ಕಾಗಿ ಫುಟ್ಬಾಲ್ ಆಡೋಣ ಎಂಬ ಸೂತ್ರಕ್ಕವರು ಅಂಟಿಕೊಂಡಿದ್ದರು. ಹಣಕಾಸಿನ ಸಮಸ್ಯೆಯೂ ಇತ್ತು. ೨೦೧೮ರಲ್ಲಿ ಕೇರಳದ ಮಂದಿ ಸೇರಿಕೊಂಡು ಮಲಯಾಳಿ ಫುಟ್ಬಾಲ್ ಕ್ಲಬ್ಬನ್ನು ಮಾಲ್ಟಾದಲ್ಲಿ ಪ್ರಾರಂಭಿಸಿದರು. ತಮ್ಮ ಮೊದಲ ಪ್ರಯತ್ನದಲ್ಲೇ ಚಾಂಪಿಯನ್ ಆಗಬಹುದೆಂಬ ಕಲ್ಪನೆ ಕೂಡ ಅವರಲ್ಲಿರಲಿಲ್ಲ. ಆ ಟೀಮಿನಲ್ಲಿರುವ ಬಹುತೇಕ ಮಂದಿ ಮಲಯಾಳಿಗಳೇ ಆಗಿದ್ದಾರೆ. ೨೬ ಸದಸ್ಯರ ಟೀಮ್‌ನಲ್ಲಿ ಪಾಕಿಸ್ತಾನ್‌ ನೊಂದಿಗೆ ವಿಶ್ವಕಪ್ ಆಡಿದ ದೇಶಗಳಾದ ಅಜೆಂಟೀನಾ, ಕೊಲಂಬಿಯಾ ಮತ್ತು ನೈಜೀರಿಯಾದ ಆಟಗಾರರೂ ಇದ್ದಾರೆ. ಈಗ ಈ ತಂಡ ಮಾಲ್ಟಾದಲ್ಲಿ ಸೆಕೆಂಡ್ ಡಿವಿಜನ್‌ನಲ್ಲಿ ಆಟ ವಾಡುತ್ತಿದೆ ಮತ್ತು ಅವರೊಂದು ಯೋಜನೆ ಸಿದ್ಧಪಡಿಸಿಕೊಂಡಿದ್ದಾರೆ. ಅವರು ಕೇರಳದಿಂದಲೇ ಕ್ರೀಡಾಳುಗಳನ್ನು ಕರೆಸಿಕೊಂಡು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದಾರೆ.

ಹೀಗೆ ಕರೆಸಿಕೊಳ್ಳುವ ಕೇರಳದ ಯುವಕರ ಎಲ್ಲ ಖರ್ಚುವೆಚ್ಚಗಳನ್ನು ಕ್ಲಬ್ ಭರಿಸುತ್ತದೆ. ಜತೆಗೆ ಉಚಿತ ತರಬೇತಿಯನ್ನೂ ಕೊಡಲಾಗುತ್ತದೆ. ನಂತರ ಅವರಿಗೊಂದು ಉದ್ಯೋಗ ದೊರಕಿಸಿಕೊಡುವ ಕೆಲಸವನ್ನೂ ಮಾಡಲಾಗುತ್ತದೆ. ಹೀಗೆ ಮಾಲ್ಟಾ ಫುಟ್ಬಾಲ್ ತಂಡಕ್ಕೆ ಆಯ್ಕೆಯಾದ ಯುವಕ ಕೇರಳದಲ್ಲಿ ಕಳೆದ ಸೀಸನ್‌ ನಲ್ಲಿ ಸಂತೋಷ್ ಟ್ರೋಫಿ ಗೆದ್ದಿದ್ದ. ತಂಡಕ್ಕೆ ಸೇರಿಸಿಕೊಂಡ ನಂತರ ಈ ಹುಡುಗರಿಗೆ ದುಬೈನ ಕ್ಲಬ್ ನೊಂದಿಗೆ ಆಡಲು ಅನುಕೂಲ ಮಾಡಿಕೊಡಲಾಯಿತು.

ಇದೊಂದು ಬಗೆಯ ತರಬೇತಿ ಕ್ರಮ. ಕೇರಳದಲ್ಲಿ ಶಾಲಾ ಸಮಯದ ನಂತರ ದೈಹಿಕ ಕಸರತ್ತಿಗೆಂದು ಶುರುವಾಗಿದ್ದ ಆಟ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸುವ ಮಟ್ಟಕ್ಕೆ ಬೆಳೆದಿದೆ. ಇದರಿಂದ ಹಣ ಗಳಿಸುವುದು ಒಂದೇ ಉದ್ದೇಶವಲ್ಲ, ಒಂದು ಉಪವೃತ್ತಿಯನ್ನು ಹೊಂದುವುದು ಕೂಡ ಸಾಧ್ಯವಾಗುತ್ತಿದೆ. ಹೀಗೆ ತರಬೇತು ಪಡೆದು ತಂಡಕ್ಕೆ ಸೇರಿರುವ ೨೬ ಆಟಗಾರರ ಪೈಕಿ ಯಾರಾದರೊಬ್ಬರು ಮುಂದೊಂದು ದಿನ ವಿಶ್ವ ಮಟ್ಟದ ಚಾಂಪಿಯನ್ ಆಗಬಲ್ಲರು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಅಷ್ಟೇ ಅಲ್ಲ ಈ ಆಟಗಾರರು ಕೋಚ್, ರೆಫರಿ ಅಥವಾ ಇನ್ನಾವುದೇ ಭೂಮಿಕೆಯಲ್ಲಿ ಜಾಗತಿಕವಾಗಿ ಗುರುತಿಸಿಕೊಳ್ಳಬಲ್ಲರು.

ಶಶಿ ತರೂರ್ ಆಣಿಮುತ್ತುಗಳು

ಕಾಂಗ್ರೆಸ್ ಲೋಕಸಭಾ ಸದಸ್ಯ ಮತ್ತು ಲೇಖಕ ಶಶಿ ತರೂರ್ ಹಾಗೂ ತಮ್ಮನ್ನು ಫ್ರೀ-ಥಿಂಕರ್ ಮತ್ತು ಹಾಸ್ಯ ಬರಹಗಾರ ಎಂದು ಕರೆದುಕೊಂಡಿರುವ ಜೋಸೆಫ್ ಝಕಾರಿಯಸ್ ಸೇರಿ, The less you PREACH The more you LEARN: Aphorisms For Our Age ಎಂಬ ಪುಟ್ಟ ಪುಸ್ತಕವನ್ನು ಇತ್ತೀಚೆಗೆ ಬರೆದಿದ್ದಾರೆ. ಈ ಕಾಲಘಟ್ಟವನ್ನು ಅತ್ಯಂತ ಕುತೂಹಲ ದಿಂದ ಗಮನಿಸಿದ ಇವರಿಬ್ಬರು ‘ವಕ್ರತುಂಡೋಕ್ತಿ’ ಮಾದರಿಯಲ್ಲಿ ಒಂದು ವಾಕ್ಯದಷ್ಟು ಉದ್ದದ ಸಾಲಿನಲ್ಲಿ ಬದುಕಿನ ಕಾಣ್ಕೆಗಳನ್ನು ಮುಂದಿಟ್ಟಿದ್ದಾರೆ.

೧೮೨ ಪುಟಗಳ ಈ ಪುಸ್ತಕವನ್ನು ಒಂದು ಗಂಟೆಯ ಅವಧಿಯಲ್ಲಿ ಓದಿ ಮುಗಿಸಿಬಿಡಬಹುದು. ಇದನ್ನು ತರೂರ್, ‘೨೧ನೇ ಶತಮಾನದಲ್ಲಿ ಜೀವನದ ಅವಲೋಕನ ಗಳು’ ಎಂದು ಕರೆದಿದ್ದಾರೆ. Aphorisms ಎನ್ನುವುದು ಇಂಗ್ಲಿಷಿನ ಜನಪ್ರಿಯ ಪ್ರಕಾರ. ಇದನ್ನು ಕನ್ನಡದಲ್ಲಿ ಪಡೆನುಡಿ ಅಥವಾ ನಾಣ್ಣುಡಿ ಎನ್ನುತ್ತಾರೆ. ಅಷ್ಟಕ್ಕೂ Aphorisms ಎನ್ನುವುದು ಒಂದು ಸಂಕ್ಷಿಪ್ತ ಹೇಳಿಕೆ ಅಥವಾ ವೀಕ್ಷಣೆಯ ಸಾರ. ಅದು ಸಾಮಾನ್ಯ ಸತ್ಯ, ತತ್ವ ಅಥವಾ ಬುದ್ಧಿವಂತಿಕೆಯ ಗಟ್ಟಿಯನ್ನು ಆದರ್ಶ ವಾಗಿ ಸ್ಮರಣೀಯ ಅಥವಾ ಹಾಸ್ಯದ ರೀತಿಯಲ್ಲಿ ವ್ಯಕ್ತಪಡಿಸುವ ಸಾಲು. Aphorisms ಯಾವತ್ತೂ ಚಿಕ್ಕದಾಗಿರುತ್ತವೆ. ಅವು ಸಂಕ್ಷಿಪ್ತ, ಸ್ಪಷ್ಟ ಮತ್ತು ಬುದ್ಧಿ ವಂತಿಕೆಯೊಂದಿಗೆ ಆಳವಾದ ಒಳನೋಟವುಳ್ಳ ಕಲ್ಪನೆಯನ್ನು ತಿಳಿಸುವ ಉದ್ದೇಶವನ್ನು ಹೊಂದಿವೆ. ತಿಳಿಹಾಸ್ಯ, ವಿಡಂಬನೆ, ನವಿರು ಚೋದ್ಯ ಇದರ ಪ್ರಧಾನ ಲಕ್ಷಣ.

ತತ್ವಜ್ಞಾನಿಗಳು, ವಿದ್ವಾಂಸರು ತಮ್ಮ ಚಿಂತನೆಯ ಲಹರಿಯನ್ನು ಲಘು ಧಾಟಿಯಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಕಂಡುಕೊಂಡ ಮಾರ್ಗವಿದು. ಒಂದು ಪ್ರಬಂಧ ಬರೆದುಬಿಡಬಹುದು. ಒಮ್ಮೊಮ್ಮೆ ಒಂದು ಸಾಲಿನ ಅನುಭವೋಕ್ತಿ ಬರೆಯಲು ತಿಣಕಾಡಬೇಕಾಗುತ್ತದೆ. ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ಇದು ಒಂದು
ಸಾಹಿತ್ಯ ಪ್ರಕಾರವಾಗಿ ಬೆಳೆದಿದೆ. ಹಾಸ್ಯ ಅಥವಾ ವಿಡಂಬನೆಯೇ oneliner ಜೀವಾಳ. ಆದರೆ Aphorisms ನಲ್ಲಿ ತಿಳಿಹಾಸ್ಯದ ಜತೆಗೆ ಜೀವನಾಮೃತವೂ ಸೇರಿರುತ್ತದೆ.

ತರೂರ್ ಹಾಗೂ ಝಕಾರಿಯಸ್ ಇಬ್ಬರೂ ಸೇರಿ ತಾವು ಕಂಡ ಜೀವನದ ೨೨೨ ಆಣಿಮುತ್ತುಗಳನ್ನು ಇಲ್ಲಿ ಆರಿಸಿಕೊಟ್ಟಿದ್ದಾರೆ. ಆ ಪೈಕಿ ಇಷ್ಟವಾದ ೨೬ ಆಣಿಮುತ್ತುಗಳನ್ನು ಇಲ್ಲಿ ನೀಡುತ್ತಿದ್ದೇನೆ.

? ನೀವು ಜೀವನದಿಂದ ಕಡಿಮೆ ನಿರೀಕ್ಷಿಸಿದರೆ, ಹೆಚ್ಚು ಸಂತೋಷವಾಗಿರುತ್ತೀರಿ.
? ನಿರಾಶಾವಾದಿ ಹವಾಮಾನದ ಬಗ್ಗೆ ದೂರುತ್ತಾನೆ. ಆಶಾವಾದಿ ಅದು ಬದಲಾಗುತ್ತದೆ ಎಂದು ಭಾವಿಸುತ್ತಾನೆ. ವಾಸ್ತವಿಕವಾದಿ ಮಾತ್ರ ಛತ್ರಿಯೊಂದಿಗೆ ಹೊರಗೆ ಹೋಗುತ್ತಾನೆ.
? ಬಾಸ್ ಜತೆ ಎಂದಿಗೂ ಕುಡಿಯಬಾರದು. ಅವನ ಬ್ಯಾಗನ್ನು ಸಹ ಎಂದಿಗೂ ಹೊತ್ತುಕೊಂಡು ಹೋಗಬಾರದು.
? ಸಾಧಕರು ಗಡಿಯನ್ನು ನೋಡುವುದಿಲ್ಲ, ಅವರು ಅದನ್ನು ಗಮನಿಸದೇ ದಾಟುತ್ತಲೇ ಹೋಗುತ್ತಾರೆ.
? ಮೊದಲು ಬಟ್ಟೆಯ ಒಳಗೆ ಇಸಿ ಮಾಡಿ, ನಂತರ ಹೊರಗೆ ಮಾಡಿ. ವ್ಯತ್ಯಾಸವನ್ನು ಗಮನಿಸಿ. ಸ್ವಸುಧಾರಣೆಯೂ ಹಾಗೆಯೇ.
? ಹಾಗಿರಬೇಕು, ಹೀಗಿರಬೇಕು ಎಂದು ಅಪ್ಪ ಹೇಳುತ್ತಾನೆ. ಆದರೆ ನಿಮಗೆ ಕಲಿಸುವವಳು ಅಮ್ಮ.

? ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಮತ್ತು ಆಕೆ, ‘ನೀನು ಸುಧಾರಿಸುವುದು ಸಾಕಷ್ಟಿದೆ’ ಎಂದು ಪುರುಷನಿಗೆ ಹೇಳುತ್ತಲೇ ಇರುತ್ತಾಳೆ.
? ನಿಮ್ಮ ಪತ್ನಿಯನ್ನು ಸ್ನೇಹಿತೆಯನ್ನಾಗಿ ಮಾಡಿಕೊಳ್ಳಿ. ಲೈಂಗಿಕ ಆಕರ್ಷಣೆಗಳು ಮಾಸುತ್ತವೆ. ಸ್ನೇಹ ಕೊನೆ ತನಕ ಇರುತ್ತದೆ.
? ಹಿರಿಯರಿಗೆ ನಾವು ಮಾಡಬಹುದಾದ ಉತ್ತಮ ಸಹಾಯ ಗಳಲ್ಲಿ ಅವರ ಕಾಲ್ಬೆರಳಿನ ಉಗುರನ್ನು ಕತ್ತರಿಸುವುದೂ ಒಂದು.
? ಜೀವನದ ಆರಂಭದಲ್ಲಿ ನಾನು ಗೌರವಿಸುವ ಯಾರಾದರೂ ಹಾದು ಹೋದಾಗಲೆಲ್ಲಾ ಎದ್ದು ನಿಲ್ಲುವ ಅಭ್ಯಾಸವನ್ನು ರೂಢಿಸಿಕೊಂಡೆ. ನನ್ನ ವೃದ್ಧಾಪ್ಯದಲ್ಲೂ ಅದೇ ನನ್ನ ಫಿಟ್‌ನೆಸ್ ನ ಗುಟ್ಟು.
? ನಾವು ನಮ್ಮ ಸ್ನೇಹಿತರೊಂದಿಗೆ ವಾದಿಸಲು ಸಾಧ್ಯವಿಲ್ಲ. ಏಕೆಂದರೆ ಸ್ನೇಹಿತರ ನಡುವೆ ವಾದಿಸಲು ಏನೂ ಇರುವುದಿಲ್ಲ.
? ಬಾಸ್ ಯಾವತ್ತೂ ಅನುಭವಿ ಹೊಸಬರನ್ನು (ಫ್ರೆಶರ್ಸ್) ಹುಡುಕುತ್ತಾನೆ. ನಾಯಕನಾದವನು ಯಾವತ್ತೂ ಫ್ರೆಶ್ ಆಗಿರುವ ಅನುಭವಿಗಳನ್ನು ಹುಡುಕುತ್ತಾನೆ.
? ನಿಜವಾದ ನಾಯಕನಾದವನು ಎಲ್ಲ ಕ್ರೆಡಿಟ್ಟುಗಳನ್ನು ಬೇರೆಯ ವರಿಗೆ ಕೊಡುತ್ತಾನೆ, ಟೀಕೆಗಳನ್ನು ತನಗೆ ಇರಿಸಿಕೊಳ್ಳುತ್ತಾನೆ.
? ಕೆಟ್ಟ ಭಿಕ್ಷುಕರು ಯಾರೆಂದರೆ ಬೇರೆಯವರು ತಮಗಾಗಿ ಬೇಡುವಂತೆ ಮಾಡುವುದು.
? ರಾಜನಿದ್ದವನು ಭಿಕ್ಷುಕನಾಗುವುದಕ್ಕಿಂತ, ಭಿಕ್ಷುಕನಾಗಿದ್ದವನು ರಾಜನಾಗುವುದು ಲೇಸು.
? ನಾವು ಮನುಷ್ಯರಿಗೆ ಹೆದರಿ, ದೇವರನ್ನು ಪ್ರೀತಿಸಬೇಕು ಅಥವಾ ಮನುಷ್ಯರನ್ನು ಪ್ರೀತಿಸಿ, ದೇವರಿಗೆ ಹೆದರಬೇಕು. ಎರಡೂ ಸಾಧ್ಯವಿಲ್ಲ.
? ನಿಮ್ಮನ್ನೇ ನೀವು ಸಾಯಿಸಿಕೊಳ್ಳಬಾರದು. ದೇವರು ಕರುಣಾಮಯಿ. ಆ ಕೆಲಸವನ್ನು ಅವನಿಗೆ ಬಿಡಬೇಕು.
? ನಮ್ಮ ಸಿಟ್ಟನ್ನು ಯಾವತ್ತೂ ಹಿಂದಿನ ಕಿಟಕಿಯಿಂದ ಕಳಿಸಬೇಕು, ಮುಂದಿನ ಬಾಗಿಲಿನಿಂದ ಅಲ್ಲ.
? ಯುವ ತತ್ವಜ್ಞಾನಿ ಮತ್ತು ಮುದಿ ಸನ್ಯಾಸಿ ಬಗ್ಗೆ ಯಾವತ್ತೂ ಎಚ್ಚರಿಕೆಯಿಂದಿರಬೇಕು.
? ಕುದುರೆಗಳನ್ನು ಪಂಜರದಲ್ಲಿಡಬಾರದು, ಕತ್ತೆಗಳನ್ನು ಬೀಡಾಡಿಯಾಗಿ ಬಿಡಬಾರದು.
? ರೊಬೋಟುಗಳ ದೊಡ್ಡ ಶಕ್ತಿಯೆಂದರೆ ಅವುಗಳಿಗೆ ಭಾವನೆ ಇಲ್ಲದಿರುವುದು. ಅವುಗಳ ದೊಡ್ಡ ದೌರ್ಬಲ್ಯವೂ ಅದೇ.
? ಎರಡು ರೀತಿಯ ರೆಸ್ಟೋರೆಂಟುಗಳಿರುತ್ತವೆ. ಒಂದು, ದಪ್ಪ ವೇಟರುಗಳು ಮತ್ತು ತೆಳ್ಳನೆ ಮ್ಯಾನೇಜರುಗಳಿರುವ ಹಾಗೂ ಎರಡನೆಯದು, ತೆಳ್ಳನೆ ವೇಟರು ಮತ್ತು ದಪ್ಪ ಮ್ಯಾನೇಜರುಗಳಿರುವ ರೆಸ್ಟೋರೆಂಟುಗಳು. ಈ ಪೈಕಿ ಯಾವ ರೆಸ್ಟೋರೆಂಟನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ನಿಮಗೆ ಬಿಟ್ಟಿದ್ದು.
? ಅತ್ಯುತ್ತಮ ಕಥೆ ಯಾವುದೆಂದರೆ ನಮಗೆ ನಾವು ಹೇಳಿಕೊಂಡಿದ್ದು.
? ಹೇಳುವ ರೀತಿಯಲ್ಲಿ ಹೇಳದಿದ್ದರೆ ಯಾವ ಕಥೆಯೂ ಚೆನ್ನಾಗಿರುವುದಿಲ್ಲ.
? ನಿಮಗೆ ನಿಮ್ಮ ಪ್ರೀತಿಯನ್ನು ಪದಗಳಲ್ಲಿ ಹೇಳುವುದು ಸಾಧ್ಯವಾದರೆ, ಅದನ್ನು ಆಗಲೇ ಕುಗ್ಗಿಸಿದ್ದೀರಿ ಎಂದರ್ಥ.

? ಮೂರ್ಖನಾದವನು ಚಂದಿರನೆಡೆ ಬೊಟ್ಟು ಮಾಡಿದರೆ, ಬುದ್ಧಿವಂತನಾದವನು ಆ ಬೊಟ್ಟುಗಳನ್ನು ನೋಡುವುದಿಲ್ಲ.