Sunday, 10th November 2024

ಕನ್ನಡದ ಕಟ್ಟಾಳು ಪಾಟೀಲ್‌ ಪುಟ್ಟಪ್ಪ

ಸ್ಮರಣೆ 

ಮಾರುತೇಶ್‌ ಅಗ್ರಾರ

ಜನಮಾನಸದಲ್ಲಿ ‘ಪಾಪು ಎಂದೇ ಚಿರಪರಿಚಿತರಾಗಿದ್ದವರು ದಿವಂಗತ ಪಾಟೀಲ್ ಪುಟ್ಟಪ್ಪನವರು.

ಅವರನ್ನು ಅನೇಕರು ನಡೆದಾಡುವ ವಿಶ್ವಕೋಶವೆಂದೇ ಕರೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತರಾಗಿ, ಸಂಪಾದಕರಾಗಿ, ಕನ್ನಡ ಹೋರಾಟಗಾರರಾಗಿ, ಸಾಹಿತಿಯಾಗಿ, ವಕೀಲರಾಗಿ ಹೀಗೆ ಸಮಾಜದ ಎಲ್ಲಾ ರಂಗಗಳಲ್ಲೂ ತಮ್ಮ ಛಾಪು ಮೂಡಿಸಿದ ಹೆಗ್ಗಳಿಕೆ ಡಾ. ಪಾಟೀಲ ಪುಟ್ಟಪ್ಪನವರದ್ದು.ಪಾಟೀಲ್ ಪುಟ್ಟಪ್ಪನವರು ಹುಟ್ಟಿದ್ದು 1921ರ ಜನವರಿ 14 ರಂದು. ಧಾರವಾಡದಲ್ಲಿ.

ಅಂದ ಹಾಗೆ ಇಂದು ಪಾಪು ಅವರ ನೂರನೇ ಜನ್ಮ ದಿನ. ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರ ಪೈಕಿ ಪಾಪು ಪ್ರಮುಖರು. ಕನ್ನಡದ ಉಳಿವಿಗಾಗಿ ಸರ್ವತೋಮುಖ ಬೆಳವಣಿಗೆಗಾಗಿ ಅವರು ಸಲ್ಲಿಸಿದ ಸೇವೆ ನಾಡಿನ ಇತಿಹಾಸದಲ್ಲಿ ಚಿರಸ್ಮರಣೀಯವಾಗಿ ಉಳಿದಿದೆ. ಅಂದಹಾಗೆ ಪಾಟೀಲ ಪುಟ್ಟಪ್ಪನವರು ತಮ್ಮ ಬದುಕಿನುದ್ದಕ್ಕೂ ಎಲ್ಲಿಯೂ ಸಹ ಕೃತಿಗೂ ವ್ಯಕ್ತಿತ್ವಕ್ಕೂ ಚ್ಯುತಿಯಾಗದಂತೆ ಬದುಕಿದವರು.

ಪಾಪುರವರು ನೋಡುವುದಕ್ಕೆ ಎಷ್ಟು ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರೋ ತಮ್ಮ ಚಿಂತನೆ ಹಾಗೂ ಅಭಿಪ್ರಾಯಗಳನ್ನು ಮಂಡಿಸುವಲ್ಲಿ ಅಷ್ಟೇ ನಿಷ್ಟುರವಾದಿಯೂ, ಕಠೋರವಾದಿಯೂ ಆಗಿದ್ದರು. ಸ್ಥಳ, ವೇದಿಕೆ ಯಾವುದಾದರೂ ಸರಿಯೇ ತಮಗ ನಿಸಿದ್ದನ್ನು ಮುಚ್ಚುಮರೆಯಿಲ್ಲದೆ ಸಮಾಜದ ಮುಂದೆ ಮಂಡಿಸುತ್ತಿದ್ದರು. ಅದು 2017ನೆ ಇಸವಿ. ಯಾದಗಿರಿಯಲ್ಲಿ ‘ಕನ್ನಡ ನುಡಿ ಸಂಭ್ರಮ ಎಂಬ ಒಂದು ಕಾರ್ಯಕ್ರಮ ಆಯೋಜನೆಯಾಗಿತ್ತು.

ಯಾವುದೇ ಕಾರ್ಯಕ್ರಮವಾದರೂ ಅಂದು ಪ್ರಾರ್ಥನಾ ಗೀತೆ ಇದ್ದೇ ಇರುತ್ತದೆ. ಅದು ದೇವರ ಗೀತೆಯಾಗಿರಬಹುದು ಅಥವಾ
ಭಕ್ತಿಗೀತೆಯಾಗಿರಬಹುದು ಅಂತಹ ಪ್ರಾರ್ಥನಾ ಗೀತೆ ಕಾರ್ಯಕ್ರಮಕ್ಕೊಂದು ಭೂಷಣವಿದ್ದಂತೆ. ಆದರೆ ಅಂದು ಆಯೋಜನೆ ಯಾಗಿದ್ದ ಕಾರ್ಯಕ್ರಮದಲ್ಲಿ ಪಾಪುರವರು ವಂದೇ ಮಾತರಂ ಗೀತೆಯನ್ನು ಹಾಡಿದರೆ ಮಾತ್ರ ನಾನು ಕಾರ್ಯಕ್ರಮ ಉದ್ಘಾಟಿ ಸುತ್ತೇನೆ ಎಂದುಬಿಟ್ಟರು! ಅಲ್ಲಿ ನೆರೆದಿದ್ದ ಅನೇಕರಿಗೆ ಒಂದುಕ್ಷಣ ಶಾಕ್ ಹೊಡೆದಂತಾಗಿಬಿಟ್ಟಿತು! ಆದರೆ ಪಾಪು ಮಾತ್ರ ತಮ್ಮ ಹಠದಿಂದ ಹಿಂದೆ ಸರಿಯಲಿಲ್ಲ.

ವಂದೇ ಮಾತರಂ ಹಾಡಿದರೆ ಮಾತ್ರ ನಾನು ಕಾರ್ಯಕ್ರಮ ಉದ್ಘಾಟಿಸೋದು ಎನ್ನುವ ಮೂಲಕ ರಾಷ್ಟ್ರಾಭಿಮಾನ ಮೆರೆದಿದ್ದರು. ನಂತರ ಅಲ್ಲಿಯೇ ಇದ್ದ ಕೊಳಲುವಾದಕರೊಬ್ಬರು ವಂದೇ ಮಾತರಂ ಗೀತೆಯನ್ನು ತಮ್ಮ ಕೊಳಲಿನಲ್ಲಿ ನುಡಿಸಿ ಪಾಪುರವರ ಮನತಣಿಸಿದ್ದರು. ಮತ್ತೊಂದು ಕಾರ್ಯಕ್ರಮದಲ್ಲಿ ಆಯೋಜಕರು ಪಾಪುರವರಿಗೆ ಗೌರವ ಸೂಚಕವಾಗಿ ಮೈಸೂರು ಪೇಟ ತೊಡಿಸಲು ಮುಂದಾಗಿದ್ದರು.

ಇದ್ದಕ್ಕಿದ್ದಂತೆ ಎದ್ದು ನಿಂತ ಪಾಪುರವರು ತಮ್ಮ ಕಣ್ಣುಗಳನ್ನು ಕೆಂಪಗೆ ಮಾಡಿ ನನಗೆ ‘ಮೈಸೂರು ಪೇಟ ತೋಡಿಸಬೇಡಿ, ನಾನು ಸದಾ ಮೈಸೂರು ಅರಸರ ವಿರೋಽ ಎನ್ನುವ ಮೂಲಕ ಅಲ್ಲಿ ನೆರೆದಿದ್ದ ಹಾಗೂ ವೇದಿಕೆ ಮೇಲಿದ್ದವರಲ್ಲಿ ದಿಗ್ಭ್ರಾಂತಿ ಮೂಡಿಸಿ ದ್ದರು. ಅವರು ಮೈಸೂರು ಅರಸರನ್ನು ವಿರೋಧಿಸುತ್ತಿದ್ದಕ್ಕೆ ಕಾರಣವೇನು ಗೊತ್ತಾ? ಮೈಸೂರು ರಾಜರ ಆಡಳಿತದಲ್ಲಿ ಉತ್ತರ ಕರ್ನಾಟಕ ಹಾಗೂ ಇಂದಿನ ಕಲ್ಯಾಣ ಕರ್ನಾಟವನ್ನು ನಿರ್ಲಕ್ಷ್ಯದಿಂದ ನೋಡಿದ್ದ ಪರಿಣಾಮ ಆ ಭಾಗಗಳು ಅಭಿವೃದ್ಧಿಯಿಂದ ವಂಚಿತವಾಗಿ ಅನ್ಯಾಯಕ್ಕೆ ಒಳಗಾಗಿವೆ ಎಂಬುದು ಪಾಪುರವರಿಗೆ ಮೈಸೂರು ಅರಸರ ಮೇಲಿನ ಕೋಪಕ್ಕೆ ಕಾರಣ ವಾಗಿತ್ತು.

ಹೀಗೆ ಪಾಪುರವರು ಅನೇಕ ವೇದಿಕೆಗಳಲ್ಲಿ ತಮಗನಿಸಿದ್ದನ್ನು ಮುಚ್ಚುಮರೆಯಿಲ್ಲದೇ ಮಾತನಾಡಿ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದುಂಟು.ಆದರೆ ಎಂದಿಗೂ ಸಹ ತಮ್ಮ ತತ್ತ್ವ, ಸಿದ್ಧಾಂತಗಳ ವಿರುದ್ಧವಾಗಿ ನಡೆಯಲಿಲ್ಲ. ಜತೆಗೆ ಇಂದಿನ ಕೆಲ ಸಾಹಿತಿಗಳ ರೀತಿ ರಾಜಕೀಯ ನಾಯಕರ ಹಿಂದೆ ಬಕೆಟು ಹಿಡಿದು ಓಡಾಡಿದ ಸಾಹಿತಿಯಲ್ಲ ಪಾಪು ಎಂಬುದು ಗಮನಾರ್ಹ.