Friday, 13th December 2024

ರಾಷ್ಟ್ರಪೇಮಕ್ಕೆ ನಾಡಾದರೇನು? ಮರಳುಗಾಡಾದರೇನು?

ವಿದೇಶ ವಾಸಿ

ಕಿರಣ್ ಉಪಾಧ್ಯಾಯ, ಬಹ್ರೈನ್

ಈ ಮೊದಲು ನಾನು ಒಂದೆರಡು ಸಲ ಸೌದಿ ಅರೇಬಿಯಾದ ಮರಳುಗಾಡಿನಲ್ಲಿ ಅಲೆದಾಡುವ ಬದುಗಳ ರಾಷ್ಟ್ರಭಕ್ತಿಯ ವಿಷಯ ಪ್ರಸ್ತಾಪಿಸಿದ್ದೆ. ಆದರೆ ವಿವರವಾಗಿ ಹೇಳಿರಲಿಲ್ಲ. ಕಳೆದ ಒಂದೆರಡು ವಾರ ಮರುಭೂಮಿ ಮತ್ತು ಬದುಗಳ ವಿಷಯ ಬರೆದಾಗ ಕೆಲವು ಓದುಗರು ಅಲೆಮಾರಿಗಳ ದೇಶಭಕ್ತಿ ಕುರಿತು ಕೇಳಿದ್ದರು. ಬದುಗಳ ದೇಶಭಕ್ತಿ ನಿಜಕ್ಕೂ ಮಾದರಿಯಾದದ್ದು.

ಯಾವುದೇ ಸೌಲಭ್ಯ ಇಲ್ಲದಿದ್ದರೂ, ಸರಕಾರಿ ಸೌಲಭ್ಯ ಪಡೆಯದಿದ್ದರೂ, ಅವರ ರಾಷ್ಟ್ರಪ್ರೇಮದಲ್ಲಿ ಎಳ್ಳಷ್ಟೂ ಕೊರತೆ ಇಲ್ಲ. ತಮ್ಮ ದೇಶಕ್ಕೆ ಕೆಟ್ಟ ಹೆಸರು ತರುವ ಯಾವ ಕೆಲಸವನ್ನೂ ಅವರು ಮಾಡುವುದಿಲ್ಲ. ಒಂದು ವಿಷಯ ಹೇಳಿ, ಮತ್ತೆ ಮುಂದುವರಿಯುತ್ತೇನೆ. ಬದುಗಳು ಮರುಭೂಮಿಯಲ್ಲಿ ಅಲೆದಾಡುವವರಾದರೂ ಸಾಮಾನ್ಯವಾಗಿ ಎದ್ದು ಕಾಣುವುದು ಅವರ ಮನೆಯ ಮೇಲೆ ಇರುವ ರಾಷ್ಟ್ರಧ್ವಜ. ನಿಜ, ಬಹುತೇಕ ಬದುಗಳ ಡೇರೆಯ ಮೇಲೆ ರಾಷ್ಟ್ರಧ್ವಜ ಸದಾ ಹಾರಾಡು ತ್ತಿರುತ್ತದೆ. ಅವರು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗುವಾಗ ಆ ಧ್ವಜವನ್ನು ತಮ್ಮ ಜತೆ ಕೊಂಡುಹೋಗುತ್ತಾರೆ.

ಹೊಸ ಜಾಗದಲ್ಲಿ ಡೇರೆಯ ಜತೆಗೆ ತುದಿಯಲ್ಲಿ ಧ್ವಜವನ್ನು ಹೂಡಿಯೇ ಅವರ ದೈನಂದಿನ ಕಾರ್ಯಚಟುವಟಿಕೆ ಆರಂಭಿಸುತ್ತಾರೆ. ನಗರ ಪ್ರದೇಶದಲ್ಲಿ ಅಥವಾ ಎಲ್ಲ ಸೌಲಭ್ಯಗಳಿರುವ ಪ್ರದೇಶದಲ್ಲೂ ಮನೆಯ ಮೇಲೆ ರಾಷ್ಟ್ರಧ್ವಜ ಕಾಣುವುದು ವಿರಳವಾಗಿರುವ ದಿನಗಳಲ್ಲಿ, ಅಕ್ಷರ ಪ್ರಪಂಚದಿಂದ ದೂರ ಇರುವವರು ರಾಷ್ಟ್ರಧ್ವಜ ವನ್ನು ಎದೆಗವುಚಿಕೊಂಡು ಹೋಗುವುದು ಶ್ಲಾಘನೀಯವೇ ಅಲ್ಲವೇ? ಸುಮ್ಮನೆ ಒಂದು ಉದಾಹರಣೆ ನೋಡಿ. ಸೌದಿ ಅರೇಬಿಯಾದ ಸಂಪತ್ತು ಇರುವುದೇ ಮರಳುಗಾಡಿನ ಭೂಗರ್ಭದಲ್ಲಿ, ಕ್ರೂಡ್ ಆಯಿಲ್ ರೂಪದಲ್ಲಿ. ಈ ಕಪ್ಪು ಬಣ್ಣದ ಎಣ್ಣೆಯೊಂದು ಇಲ್ಲದಿದ್ದರೆ ಸೌದಿ ಅರೇಬಿಯಾ ಅಷ್ಟೇ ಅಲ್ಲ, ಭೂಪಟದಲ್ಲಿರುವ ಇನ್ನೂ ಅನೇಕ ರಾಷ್ಟ್ರಗಳು ಇಂದಿಗೂ ಬಡ ರಾಷ್ಟ್ರವಾಗೇ ಉಳಿದುಕೊಳ್ಳುತ್ತಿದ್ದವು ಎನ್ನುವುದರಲ್ಲಿ ಎರಡು ಮಾತಿಲ್ಲ.

ಇರಲಿ, ಭೂಮಿಗೆ ತೂತು ಕೊರೆದು, ಅದನ್ನು ಮೇಲಕ್ಕೆತ್ತಿ, ಕೊಳವೆಯ ಮುಖಾಂತರ ಮೊದಲು ಸಂಕೀರ್ಣ (ಮೆನಿಫೋಲ್ಡ್)ಕ್ಕೆ, ನಂತರ ತೈಲ, ಅನಿಲ ಮತ್ತು ಖನಿಜಗಳನ್ನು ಬೇರ್ಪಡಿಸುವ ಸ್ಥಳಕ್ಕೆ ಸಾಗಿಸಲಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ. ತೈಲ ಅಥವಾ ಅನಿಲ ತನ್ನ ಸ್ಥಾನದಿಂದ ಹೊರಟು ಅಂತಿಮ ಸಂಸ್ಕರಣಾ ಕೇಂದ್ರ ತಲುಪುವವರೆಗೆ ಲಕ್ಷಕ್ಕೂ ಹೆಚ್ಚು ಕಿಲೋಮೀಟರ್ ಕೊಳವೆ ಅಥವಾ ಪೈಪ್‌ಲೈನ್ ಉಪಯೋಗಿಸಲಾಗುತ್ತದೆ. ಇದರಲ್ಲಿ ಎಲ್ಲಾ ಕಾಲದಲ್ಲೂ ಎಲ್ಲಾ ಕೊಳವೆಗಳಲ್ಲೂ ತೈಲ ಅಥವಾ ಅನಿಲ (ಕೆಲವೊಮ್ಮೆ ನೀರು) ಇರಲೇಬೇಕೆಂದೇನೂ ಇಲ್ಲ. ನಿಕ್ಷೇಪದ ಬಾವಿ ಬತ್ತಿಹೋದ ಮೇಲೆ ಈ ಕೊಳವೆಗಳಿಗೆ ಯಾವ ಕೆಲಸವೂ ಇಲ್ಲ. ಅನೇಕ ವರ್ಷ ಬಳಕೆ ಆಗಿರುವುದರಿಂದ ಪುನಃ ಅವನ್ನು ಬಳಸುವ ಸ್ಥಿತಿಯಲ್ಲೂ ಇರುವುದಿಲ್ಲ.

ಅವೆಲ್ಲ ಕಿಲೋ ಲೆಕ್ಕದಲ್ಲಿ ಗುಜರಿಗೆ ಆದೀತೇ ವಿನಃ ಉಳಿದ ಯಾವುದೇ ಕೆಲಸಕ್ಕೂ ಪ್ರಯೋಜನಕಾರಿ ಆಗಲಾರದು. ಇಂತಹ ಕೆಲಸಕ್ಕೆ ಬಾರದ ಕೊಳವೆಗಳನ್ನೆಲ್ಲ ಒಟ್ಟುಗೂಡಿಸಿ ಸಂಸ್ಥೆಯವರೇ ಮಾರಾಟ ಮಾಡುತ್ತಾರೆ. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಅದರ ಮೌಲ್ಯ ಕಿಲೋ ಒಂದಕ್ಕೆ ಹತ್ತರಿಂದ ಇಪ್ಪತ್ತು
ರುಪಾಯಿ ಇರುತ್ತದೆ. ಕೆಲವರಿಗೆ ಇದು ಮರುಭೂಮಿಯಲ್ಲಿ ಬಿದ್ದ ಕಬ್ಬಿಣದ ಚಿಂದಿಯಂತೆ ಕಂಡರೂ ಕೆಲವರಿಗೆ ಇದು ಕಬ್ಬಿಣದ ಹಣ. ಆದ್ದರಿಂದ ಅದನ್ನು ಕಳ್ಳತನ ಮಾಡಿ ಮಾರುವವರೂ ಇದ್ದಾರೆ.

ಇದೇ ರೀತಿ ಮರುಭೂಮಿಯಿಂದ ಅಲ್ಯುಮಿನಿಯಂ ಕೊಳವೆಗಳನ್ನು ಕದಿಯುವವರೂ ಇದ್ದಾರೆ. ಈ ಮೊದಲು ನಾನು ಬಾವಿ ಕೊರೆಯುವ ರಿಗ್ ಕುರಿತು ಬರೆದದ್ದು ನಿಮಗೆ ನೆನಪಿರಬಹುದು. ರಿಗ್ ಇರುವ ಸ್ಥಳ ಮತ್ತು ಕ್ಯಾಂಪ್ ಇರುವ ಸ್ಥಳಕ್ಕೆ ನೀರಿನ ಸೌಕರ್ಯಕ್ಕೆ ಬೇಕಾಗಿ ನಾಲ್ಕರಿಂದ ಆರು ಇಂಚು ವ್ಯಾಸದ ಅಲ್ಯುಮಿನಿಯಂ ಕೊಳವೆ ಬಳಸುತ್ತಾರೆ. ರಸ್ತೆಯಿರುವ ಜಾಗದಲ್ಲಿ ಈ ಕೊಳವೆಗಳನ್ನು ರಸ್ತೆಯ ಕೆಳಗೆ ಹಾಕಿರುತ್ತಾರೆ. ತಮ್ಮ ಕಾರ್ಯ ಮುಗಿದ ನಂತರ, ಮುಂದೆ ಎಂದಾದರೂ
ಪ್ರಯೋಜನಕ್ಕೆ ಬರಬಹುದು ಎಂಬ ಕಾರಣಕ್ಕಾಗಿ ಅಥವಾ ಅದನ್ನು ಅಗೆದು ತೆಗೆಯುವಾಗ ರಸ್ತೆ ಹಾಳಾಗುತ್ತದೆ ಎಂಬ ಕಾರಣಕ್ಕಾಗಿ ಆ ಕೊಳವೆಗಳನ್ನು
ಅ ಬಿಟ್ಟಿರುತ್ತಾರೆ. ರಸ್ತೆಯ ಅಗಲಕ್ಕೆ ಅನುಗುಣವಾಗಿ, ಆರು ಮೀಟರ್ ಉದ್ದದ ಎರಡು ಅಥವಾ ಮೂರು ಪೈಪ್ ಬಿಟ್ಟು ಹೋಗುವುದರಿಂದ ಪುನಃ ರಸ್ತೆ ಅಗೆಯುವ ಕೆಲಸ ತಪ್ಪಿಸಬಹುದಲ್ಲ ಎಂಬ ಸದುದ್ದೇಶ ಸಂಸ್ಥೆಯದ್ದಾಗಿರುತ್ತದೆ.

ಆದರೆ ರಸ್ತೆ ಅಗೆದು ಅದನ್ನೂ ಕದ್ದು ಮಾರುವವರಿದ್ದಾರೆ. ಅಲ್ಯುಮಿನಿಯಂ ಚಿಂದಿಗೆ ಕಬ್ಬಿಣಕ್ಕಿಂತ ಬೆಲೆ ಹೆಚ್ಚು. ಇದನ್ನು ಗುಜರಿಗೆ ಹಾಕಿದರೆ ಕಿಲೋ ಒಂದಕ್ಕೆ ನೂರ ಇಪ್ಪತ್ತರಿಂದ ನೂರ ನಲವತ್ತು ರುಪಾಯಿ ಸಿಗುತ್ತದೆ. ರಸ್ತೆ ಕೆಳಗೆ ಇರುವ ಪೈಪ್ ಕದ್ದು ಮಾರಿದರೆ ಸಿಗುವುದು ಅಬ್ಬಬ್ಬಾ ಎಂದರೆ ಎರಡೂವರೆಯಿಂದ
ಮೂರು ಸಾವಿರ ರುಪಾಯಿ. (ಅದೇ ರಸ್ತೆ ಸರಿಪಡಿಸಲು ಸಂಸ್ಥೆಗೆ ಅದಕ್ಕಿಂತ ಹೆಚ್ಚು ಹಣ ಖರ್ಚಾಗುತ್ತದೆ). ಆದರೆ, ನಾನು ಕಂಡಂತೆ ಅದನ್ನು ಕದ್ದು ಮಾರುವವರು ಪರಕೀಯರೇ ವಿನಃ ಸ್ಥಳೀಯರೂ ಅಲ್ಲ, ಅಶಿಕ್ಷಿತರಾದ ಬದುಗಳೂ ಅಲ್ಲ. ಅದಕ್ಕೆ ಎರಡು ಪ್ರಮುಖ ಕಾರಣಗಳಿವೆ.

ಮೊದಲನೆಯದು, ಹೀಗೆ ಮರುಭೂಮಿಯಲ್ಲಿ ಅನಾಥವಾಗಿ ಬಿದ್ದ ಪೈಪ್‌ಗಳನ್ನು ಸಾಗಿಸುವುದು ಸುಲಭದ ಕೆಲಸವಲ್ಲ. ಗುಜರಿ ಸಾಮಾನು ಸಾಗಿಸುವುದು ಸುಲಭ, ಒಳ್ಳೆಯ ವಸ್ತುಗಳನ್ನು ಸಾಗಿಸುವುದು ಕಷ್ಟ. ಒಳ್ಳೆಯ ವಸ್ತುಗಳನ್ನು ಸಾಗಿಸುವಾಗ ಅಲ್ಲಲ್ಲಿ ಇರುವ ಚೆಕ್‌ಪೋಸ್ಟ್ ಗಳಲ್ಲಿ ಅದಕ್ಕೆ ಸಂಬಂಧಪಟ್ಟ ದಾಖಲೆ ತೋರಿಸ ಬೇಕು. ಚಿಂದಿ ಸಾಗಿಸಲು ಅಷ್ಟೊಂದು ದಾಖಲೆಗಳ ಅವಶ್ಯಕತೆ ಇವಾದ್ದರಿಂದ ಅದು ಸುಲಭ. ಅದಕ್ಕಾಗಿಯೇ ಮರುಭೂಮಿಯಿಂದ ಕಳ್ಳತನ ಮಾಡುವವರು ಮೊದಲು ಒಳ್ಳೆಯ ವಸ್ತುಗಳನ್ನೂ ಗುಜರಿಯನ್ನಾಗಿ ಪರಿವರ್ತಿಸುತ್ತಾರೆ.

ಕೊಳವೆಗಳನ್ನು ನುಜ್ಜುಗುಜ್ಜು ಮಾಡಿ ಪ್ರಯೋಜನಕ್ಕೆ ಬಾರದ ಸ್ಥಿತಿಗೆ ತಂದು, ನಂತರ ಅದನ್ನು ದೊಡ್ಡ ವಾಹನದಲ್ಲಿ ತುಂಬಿ ನಗರದ ಕಡೆಗೆ ಸಾಗಿಸುತ್ತಾರೆ. ಈ ಕೆಲಸಕ್ಕೆ ಅತ್ಯವಶ್ಯಕವಾಗಿ ಬೇಕಾದದ್ದು, ರಸ್ತೆ ಅಗೆದು, ಬಿಟ್ಟು ಹೋದ ಕೊಳವೆ ತೆಗೆದು, ಚೂರು ಮಾಡಿ ವಾಹನದಲ್ಲಿ ತುಂಬುವುದಕ್ಕೆ ಬುಲ್ ಡೋಜರ್, ಲೋಡರ್, ಜೆಸಿಬಿಯಂತಹ ಯಂತ್ರಗಳು ಬೇಕು. ಅದನ್ನು ಸಾಗಿಸಲು ಲಾರಿ, ಟ್ರೇಲರ್‌ನಂತಹ ದೊಡ್ಡ ವಾಹನಗಳು ಬೇಕು. ಸಾಮಾನ್ಯವಾಗಿ ಇಂತಹ ಯಂತ್ರಗಳು, ವಾಹನಗಳನ್ನು ನಡೆಸುವವರು ವಿದೇಶಿಯರು, ಅದರಲ್ಲೂ ಭಾರತ, ಪಾಕಿಸ್ತಾನ, ಬಾಂಗ್ಲಾದೇಶದವರು.

ಅವರು ಕಳ್ಳತನಕ್ಕೆಂದೇ ಹೋಗುವವರು ಅಲ್ಲವಾದರೂ, ಬೇರೆ ಬೇರೆ ಕಾರ್ಯನಿಮಿತ್ತ ಮರುಭೂಮಿಗೆ ಹೋಗುವವರು. ಬರುವಾಗ ಇಂಥದ್ದೊಂದು ಕೆಲಸ ಮಾಡಿಕೊಂಡು ಬರುವವರು. ಅವರಿಗೆ ಈ ಕೆಲಸಕ್ಕೆಂದು ಪೆಟ್ರೋಲ, ಡೀಸೆಲ್ ತುಂಬಿಸಬೇಕೆಂದಿಲ್ಲ, ಮೇಲಾಧಿಕಾರಿಗಳಿಂದ ವಿಶೇಷ ಪರವಾನಿಗೆ ಪಡೆಯ ಬೇಕೆಂದೇನಿಲ್ಲ. ಅಸಲಿಗೆ ಅವರು ಹೋಗುವ ಕೆಲಸವೇ ಅದಾಗಿರುವುದಿಲ್ಲ. ಬರುವಾಗ ಒಂದಷ್ಟು ಗುಜರಿ (ಒಳ್ಳೆಯದನ್ನೂ ಗುಜರಿಯಾಗಿ ಪರಿವರ್ತಿಸಿ) ತಂದು ಮಾರುವುದರಿಂದ ಅವರಿಗೆ ಯಾವ ಖರ್ಚೂ ಇಲ್ಲ.

ಆದ್ದರಿಂದ ಬಂದದ್ದೇ ಲಾಭವೇ. ಹೊಳೆಗೆ ಬಿದ್ದಾಗಿದೆ, ಮೇಲೆದ್ದು ಬರುವಾಗ ಪದಾರ್ಥಕ್ಕೆ ಒಂದೆರಡು ಮೀನು ಹಿಡಿದುಕೊಂಡು ಹೋಗೋಣ ಎನ್ನುತ್ತಾರಲ್ಲ, ಹಾಗೆಯೇ. ಬದುಗಳಲ್ಲಿ ಯಂತ್ರಗಳೂ ವಾಹನಗಳೂ ಇರುವುದಿಲ್ಲವಾದ್ದರಿಂದ ಅವರು ಈ ಕೆಲಸ ಮಾಡುವುದಿಲ್ಲ. ಒಂದು ವೇಳೆ ಅವೆಲ್ಲ ಇದ್ದರೂ, ಅವರು ಇಂತಹ ಕಾರ್ಯಕ್ಕೆ ಇಳಿಯುವವರಲ್ಲ. ಅದಕ್ಕೆ ಕಾರಣ ಎರಡನೆಯದು. ಬದುಗಳಲ್ಲಿ ತಮ್ಮ ದೇಶದ ಬಗ್ಗೆ ಇರುವ ಗೌರವ, ಕಾಳಜಿ ಎರಡನೆಯ ಕಾರಣ. ಬದು ಗಳು ಸುಶಿಕ್ಷಿತರಲ್ಲ. ಅಲೆಮಾರಿಗಳಿಗೆ ಒಂದೇ ಶಾಲೆ ಎಂಬುದಿಲ್ಲ.

ಅವರದೇನಿದ್ದರೂ ಅನುಭವದ ಶಾಲೆಯೇ ಶಿವಾಯ್ ಪುಸ್ತಕದ ವಿದ್ಯೆಯಲ್ಲ. ಆದರೂ ದೇಶಭಕ್ತಿ ಎಂಬುದು ಅವರಿಗೆ ಚಿಕ್ಕಂದಿನಿಂದಲೇ ಮೈಗೂಡಿಕೊಂಡಿರುತ್ತದೆ.
ತನ್ನ ನೆಲವನ್ನು ಹೇಗೆ ಗೌರವಿಸಬೇಕು ಮತ್ತು ತನ್ನ ನೆಲದ ವಸ್ತುಗಳ ರಕ್ಷಣೆ ಹೇಗೆ ಮಾಡಬೇಕು ಎನ್ನುವುದನ್ನು ಅವರು ಚೆನ್ನಾಗಿ ಅರಿತವರಾಗಿರುತ್ತಾರೆ. ಅವರಿಗೆ ಎಷ್ಟೇ ಬಡತನವಿದ್ದರೂ, ದೇಶದ ಸ್ವತ್ತನ್ನು ತನ್ನ ಬಳಕೆಗಾಗಿ ಬಳಸುಕೊಳ್ಳುವವರಲ್ಲ, ದೇಶದ ಆಸ್ಥಿಯನ್ನು ತನ್ನದೇ ಎಂದು ತಿಳಿದು ಮಾರುವವರಲ್ಲ. ಅದು ದೇಶಕ್ಕೆ ನಿಷ್ಪ್ರಯೋಜಕವೇ ಆಗಿದ್ದು, ತನಗೆ ಅಲ್ಪ ಸ್ವಲ್ಪ ಪ್ರಯೋಜನಕ್ಕೆ ಬರುತ್ತಿದ್ದರೂ, ಅವರು ಅದಕ್ಕೆ ಕೈ ಹಚ್ಚುವುದಿಲ್ಲ. ದೇಶದ ಆಸ್ತಿ ಎಂದರೆ ಅದು ದೇಶದ
ಆಸ್ತಿ ಅಷ್ಟೇ. ಅದರ ಹಿಂದೆ, ಮುಂದೆ ಯಾವ ಪ್ರಶ್ನೆಯೂ ಇಲ್ಲ, ಆಸೆಯೂ ಇಲ್ಲ.

ಅವರ ಲೆಕ್ಕದಲ್ಲಿ ದೇಶದ ಹಿತಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳೂ, ಅದರಲ್ಲಿ ಕೆಲಸ ಮಾಡುವ ಜನರೂ ದೇಶದ ಆಸ್ತಿಯೇ. ಅವರಿಗೆ ಸಂಬಂಧಪಟ್ಟ ವಸ್ತುಗಳೂ ಕೂಡ ದೇಶದ ಸ್ವತ್ತೇ. ಆ ಕಾರಣಕ್ಕಾಗಿಯೇ ಮರುಭೂಮಿಯಲ್ಲಿ ಕಳ್ಳತನ ಮಾಡುವ ವಿದೇಶಿ ಕಳ್ಳರು ಪೊಲೀಸರಿಗಿಂತಲೂ ಬದುಗಳಿಗೇ ಹೆಚ್ಚು ಹೆದರುತ್ತಾರೆಂದರೆ
ಸುಳ್ಳಾಗಲಾರದು. ಶಾಲೆಗೆ ಹೋಗಿ ವಿದ್ಯೆ ಕಲಿಯದವರಿಗೆ ದೇಶದ ಕುರಿತು ಇಷ್ಟೊಂದು ಅಭಿಮಾನ ಹೇಗೆ ಎಂದು ಹುಡುಕಿದರೆ ಸಿಗುವುದು ಎರಡು ಕಾರಣಗಳು.
ಬದುಗಳು ಮೊದಲಿಂದಲೂ ಕಾವ್ಯದ ಭಾಷೆಯನ್ನು ಬಳಸಿದವರು. ಹುಬ್ಬೇರಿಸಬೇಡಿ, ಇದು ನಿಜ. ಇದು ಒಂದು ರೀತಿಯಲ್ಲಿ ನಮ್ಮ ಜನಪದ ಗಾಯನ
ಇದ್ದಂತೆಯೇ.

ಮನೆಮಂದಿಯೆಲ್ಲ ಒಟ್ಟಾಗಿ ಕುಳಿತಾಗ ಮನರಂಜನೆಗಾಗಿ ಬದುಗಳು ಕಾವ್ಯವಾಚನ ಮಾಡುತ್ತಾರೆ. ಅದನ್ನು ಮೌಖಿಕ ಕಾವ್ಯ ಅನ್ನಿ ಅಥವಾ ಆಶು ಕಾವ್ಯ ಅನ್ನಿ. ತಮ್ಮ ದೇಶದ ವಿಷಯ, ದೇಶಕ್ಕಾಗಿ ಹೋರಾಡಿದ ವೀರರ ವಿಷಯ, ಇತ್ಯಾದಿಗಳನ್ನು ಅವರು ಈ ಕಾವ್ಯದ ಮುಖೇನ ಅರುಹುತ್ತಾರೆ. ತಮ್ಮ ದೇಶದ ವಿವಿಧ ನಗರಗಳು, ಅಲ್ಲಿನ ವಿಶೇಷತೆ, ತಮ್ಮ ನೆಲದ ವೈಶಿಷ್ಠ್ಯ, ಜನರ ಉಡುಗೆ ತೊಡುಗೆ ಇತ್ಯಾದಿ ಎಲ್ಲ ವಿಷಯಗಳನ್ನೂ ಅವರು ಕಾವ್ಯದಿಂದ, ಹಾಡಿನಿಂದ ಯುವ ಪೀಳಿಗೆಗೆ ತಿಳಿಸುತ್ತಾರೆ. ತಮ್ಮ ಸಂಸ್ಕೃತಿಯ ತಿರುಳನ್ನು ಮುಂದಿನ ಪೀಳಿಗೆಗೆ ಅವರು ಇದೇ ಮಾದರಿಯಲ್ಲಿ ತಿಳಿಸಿಕೊಡುತ್ತಾರೆ.

ಇದು ಅನಾದಿ ಕಾಲದಿಂದಲೂ ಬದುಗಳು ನಡೆಸಿಕೊಂಡು ಬಂದಿರುವ ಪರಿಪಾಠ. ಇದನ್ನು ಅವರು ಕಥೆಯ ರೂಪದ, ಭಾಷಣದ ರೂಪದ ಅಥವಾ ಸುಮ್ಮನೆ ಮಾತಿನಲ್ಲಿ ಹೇಳಬಹುದಿತ್ತು ಎಂದೆನಿಸುತ್ತದೆಯಾದರೂ, ಅದೇ ಅವರ ಪದ್ಧತಿ. ಇನ್ನೊಂದು, ಬದುಗಳು ಸದಾ ರೇಡಿಯೊ ಆಲಿಸುವವರು. ಅವರು ಬಹಳಷ್ಟು ಪ್ರಚಲಿತ ವಿಷಯಗಳನ್ನು ತಿಳಿದುಕೊಳ್ಳುವುದು ಈ ಮಾಧ್ಯಮದಿಂದ. ರೇಡಿಯೊದಲ್ಲಿ ಬರುವ ಸುದ್ದಿಗಳು ಮತ್ತು ಇತರ ಕಾರ್ಯಕ್ರಮವನ್ನು ಪ್ರತಿನಿತ್ಯ ಆಸಕ್ತಿ ಯಿಂದ ಕೇಳಿಸಿಕೊಳ್ಳುತ್ತಾರೆ. ತಮ್ಮನ್ನು ತಾವೇ ಅಪ್‌ಡೇಟ್ ಮಾಡಿಕೊಳ್ಳುತ್ತಾರೆ. ಆದ್ದರಿಂದ ಒಂಟೆ, ಕುರಿಗಳಂತೆ ರೇಡಿಯೊ ಕೂಡ ಅವರ ನಿತ್ಯ ಬದುಕಿನ
ಅವಿಭಾಜ್ಯ ಅಂಗ.

ಇತ್ತೀಚಿನ ದಿನಗಳಲ್ಲಿ ಕೆಲವು ಬದುಗಳು ನೌಕರಿಯ ಕಡೆ ಹೋಗುತ್ತಿದ್ದಾರೆ. ಅಲ್ಲಿ ಕೂಡ ಅವರ ಆಯ್ಕೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಪೋಲೀಸ್, ಸೇನೆ ಅಥವಾ
ಉಳಿದ ರಕ್ಷಣಾ ಕಾರ್ಯಗಳು. ಅದಕ್ಕೆ ತಕ್ಕದಾದ ಮೈಕಟ್ಟು, ಮನಸ್ಥಿತಿ ಎಲ್ಲವೂ ಅವರಿಗೆ ಇರುವುದು ಅವರಿಗೆ ಒಂದು ಪ್ಲಸ್ ಪಾಯಿಂಟ್. ಅಥವಾ ಆಕಾರಣ ಕ್ಕಾಗಿಯೇ ಅವರು ಆ ರೀತಿಯ ವೃತ್ತಿಯನ್ನು ಆಯ್ದುಕೊಳ್ಳುತ್ತಾರೋ ಏನೋ. ಕಾರಣ ಯಾವುದಾದರೇನು? ದೇಶಕ್ಕೆ ಒಳಿತೇ ಅಲ್ಲವೇ?