Wednesday, 11th December 2024

ಅಧಿಕಾರಕ್ಕಿಂತ ದೇಶ ಹಿತ ಮುಖ್ಯವಾಗಲಿ

ಅಭಿಮತ

ಹೇಮಲತಾ ಆರ್‌.

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್, ಕಾಂಗ್ರೆಸ್‌ನಿಂದ ಮಾತ್ರ  ದೇಶದ ಏಕತೆಯನ್ನು ಕಾಪಾಡಲು ಸಾಧ್ಯ ಎಂದು ಮೈಕ್ ಸಿಕ್ಕಿದಾಗೆಲ್ಲಾ ಭಾಷಣ ಬಿಗಿಯೋ ಕಾಂಗ್ರೆಸ್ ನಾಯಕರ ಏಕತೆ ಅಂದರೆ ಇದೇನಾ? ದೇಶದ ರಕ್ಷಣೆ, ಸಾಮಾಜಿಕ ಬದ್ಧತೆ, ಜನಪರ ಕೆಲಸಗಳ ಮೂಲಕ ದೇಶವಾಸಿಗಳ ಮನಸ್ಸನ್ನು ಗೆಲ್ಲಲೂ ಕಾಂಗ್ರೆಸ್ ಪ್ರಯತ್ನಿಸಲಿ.

ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅಂತಹದ್ದೇ ಮತ್ತೊಂದು ಎಡವಟ್ಟು ಹೇಳಿಕೆ ನೀಡಿ ದೇಶದಲ್ಲಿ ಈಗ ಸುದ್ದಿಯಾಗಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370 ವಿಧಿಯನ್ನು ಜಾರಿಗೆ ತರುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಪುನಃ ವಿಶೇಷ ಸ್ಥಾನಮಾನ ಕಲ್ಪಿಸುವ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಇವರ ಈ ಹೇಳಿಕೆ ದೇಶದ ಸಮಗ್ರತೆ ಮತ್ತು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದ್ದು, ರಾಷ್ಟ್ರದ ಏಕತೆಗೆ ಅಪಾಯಕಾರಿಯಾಗಿದೆ.

ನಮ್ಮ ಸಂವಿಧಾನವೂ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ಕಲ್ಪಿಸಿದೆ. ಭಾಷೆ, ಪ್ರದೇಶ, ಧರ್ಮಗಳ ಆಧಾರ ದಲ್ಲಿ ಯಾರಿಗೂ-ಯಾವುದೇ ತಾರತಮ್ಯ ಮಾಡುವಂತಿಲ್ಲ. ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಸಮಾನರು. ಈ ದೃಷ್ಟಿ ಯಿಂದ ಹೇಳುವುದಾದರೆ ಈ ಹಿಂದೆ ಕಾಶ್ಮೀರಕ್ಕೆ ಆರ್ಟಿಕಲ್ 370 ಮೂಲಕ ಕಲ್ಪಿಸಲಾಗಿದ್ದ ವಿಶೇಷ ಸ್ಥಾನಮಾನ ಸಂವಿ ಧಾನ ವಿರೋಧಿಯಾಗಿದ್ದು, ಈ ವಿಧಿಯನ್ನು ಮೋದಿ ನೇತೃತ್ವದ ಕೇಂದ್ರ ಸರಕಾರ ರದ್ದುಗೊಳಿಸುವ ಮೂಲಕ ಸಂವಿಧಾನದ ಆಶಯದಂತೆ ಏಕತೆಯನ್ನು ಎತ್ತಿ ಹಿಡಿದಿದೆ.

ಆರ್ಟಿಕಲ್ 370 ಮರುಸ್ಥಾಪನೆ ಬಗ್ಗೆ ಹೇಳಿಕೆ ನೀಡಿದ್ದ, ದಿಗ್ವಿಜಯಸಿಂಗ್ ವಿರುದ್ಧ ದೇಶದೆಲ್ಲೆಡೆ  ಸಾಕಷ್ಟು ಟೀಕೆಗಳು ಕೇಳಿ ಬಂದವು. ಪರಿಗಣಿಸುತ್ತೇವೆ ಹಾಗೂ ಖಂಡಿತವಾಗಿ ಮಾಡುತ್ತೇವೆ ಎಂಬ ಪದಗಳ ಅರ್ಥ ಕೆಲವರಿಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ತಮ್ಮ ಸಾಹಿತ್ಯ ಪ್ರದರ್ಶನದೊಂದಿಗೆ ಟೀಕೆಕಾರರ ಬಾಯಿ ಮುಚ್ಚಿಸಲು ಸಿಂಗ್ ಯತ್ನಿಸಿದ್ದಾರೆ. ಕೇಂದ್ರ ಸರಕಾರ ಆರ್ಟಿಕಲ್ ೩೭೦ ರದ್ದುಗೊಳಿಸಿದ್ದನ್ನೂ, ಅಂದು ಇಡೀ ದೇಶದ ಜನತೆ ತುಂಬು ಹೃದಯದಿಂದ ಸ್ವಾಗತಿಸಿದ್ದರು. ಈಗಾ ಅದು ಮುಗಿದ ಅಧ್ಯಾಯ.

ವಿಶೇಷ ಸ್ಥಾನಮಾನ ರದ್ದಾದ ಆದ ಮೇಲೆ ಕಾಶ್ಮೀರ ಶಾಂತವಾಗಿದ್ದು ಅಭಿವೃದ್ಧಿಯತ್ತ ಸಾಗುತ್ತಿದೆ. ಇಂಥ ಸಂದರ್ಭದಲ್ಲಿ ಆರ್ಟಿಕಲ್ 370 ಮರು ಸ್ಥಾಪನೆ ಬಗ್ಗೆ ಮಾತಾಡುವಂತಹದ್ದು ಕಾಂಗ್ರೆಸ್ ನಾಯಕರಿಗೆ ಅವಶ್ಯಕತೆ ಏನು ಇತ್ತು? ಮುಗಿದು ಹೋಗಿರುವ ವಿಷಯಕ್ಕೆ ಮರು ಜೀವ ಕೊಟ್ಟು ದೇಶದಲ್ಲಿ ಕೋಮುವಾದಕ್ಕೆ ಪ್ರೇರಣೆ ನೀಡಿ, ರಾಷ್ಟ್ರದಲ್ಲಿ ಅಶಾಂತಿ ಸೃಷ್ಟಿಸಿ ಮೋದಿ ಸರಕಾರಕ್ಕೆ ಕೆಟ್ಟು ಹೆಸರು ತಂದು ಆ ಮೂಲಕ ಕುತಂತ್ರದಿಂದ ಅಧಿಕಾರ ಹಿಡಿಯಲು ಕಾಂಗ್ರೆಸ್ ನಾಯಕರು ಯೋಚಿಸಿದ್ದೀರಾ? ನಿಮ್ಮ ಹೇಳಿಕೆ ಅಂತಹದೊಂದು ಅನುಮಾನಕ್ಕೆ ಎಡೆಮಾಡಿ ಕೊಡುತ್ತಿದೆ. ಅದು ನಿಜವೇ ಆಗಿದ್ದರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ!

ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್, ಕಾಂಗ್ರೆಸ್‌ಯಿಂದ ಮಾತ್ರ ದೇಶದ ಏಕತೆಯನ್ನು ಕಾಪಾಡಲು ಸಾಧ್ಯ ಎಂದು ಮೈಕ್ ಸಿಕ್ಕಿದಾಗೆಲ್ಲಾ ಭಾಷಣ ಬಿಗಿಯೋ ಕಾಂಗ್ರೆಸ್ ನಾಯಕರ ಏಕತೆ ಅಂದರೆ ಇದೇನಾ? ದೇಶದ ರಕ್ಷಣೆ, ಸಾಮಾಜಿಕ ಬದ್ಧತೆ,
ಜನಪರ ಕೆಲಸಗಳ ಮೂಲಕ ಕಾಂಗ್ರೆಸ್ ದೇಶವಾಸಿಗಳ ಮನಸ್ಸನ್ನು ಗೆಲ್ಲಲ್ಲೂ ಪ್ರಯತ್ನಿಸಲಿ. ಅದನ್ನು ಬಿಟ್ಟು, ದೇಶದ ಏಕತೆಗೆ ಭಂಗ ತರುವ ಇಂಥಹ ಓಲೈಕೆ ರಾಜಕಾರಣದ ಮೂಲಕ ಕುತಂತ್ರದಿಂದ ದೇಶದ ಅಧಿಕಾರ ಹಿಡಿಯಲು ಪ್ರಯತ್ನಿಸಬೇಡಿ. ಕಾಂಗ್ರೆಸ್‌ಗೆ ನಿಜವಾಗಿಯೂ ದೇಶಪ್ರೇಮ, ದೇಶವಾಸಿಗಳ ಬಗ್ಗೆ ಕಾಳಜಿ ಇದ್ದರೆ, ಅವರಿಗೆ ಅಧಿಕಾರಕ್ಕಿಂತ ದೇಶ ಹಿತ ಮುಖ್ಯ  ವಾಗಲಿ.