Wednesday, 11th December 2024

98 ಸಂವತ್ಸರಗಳ ದೇಶಸೇವೆಯ ಹಾದಿಯಲ್ಲಿ…

ದಾಸ್ ಕ್ಯಾಪಿಟಲ್‌

dascapital1205@gmail.com

‘ವಾಯ್ಸ್ ಆಫ್ ಇಂಡಿಯಾ’ ಗ್ರಂಥಮಾಲೆ, ಪ್ರಕಾಶನ ಸ್ಥಾಪಿಸಿ, ಸರ್ವಸ್ವವನ್ನೂ ಅದಕ್ಕರ್ಪಿಸಿ, ಸಾರ್ಥಕ್ಯದ ಬದುಕನ್ನು ಬಾಳಿ ಭಾರತೀಯರನ್ನು ಆತ್ಮವಿಸ್ಮೃತಿಯಿಂದ ಎಬ್ಬಿಸಿದ ಸೀತಾರಾಂ ಗೋಯೆಲ್ ಅವರಿಗೆ ದೆಹಲಿಯ ಆರೆಸ್ಸೆಸ್ ಸಮಾರಂಭಕ್ಕೆ ಜಯಪ್ರಕಾಶರನ್ನು ಒಪ್ಪಿಸಿ ಕರೆತರುವಂತೆ ಪ್ರಾರ್ಥಿಸಲಾಯಿತು. ಈ ವಿಚಾರವನ್ನು ಗೋಯೆಲರು ಜಯಪ್ರಕಾಶರಿಗೆ ತಿಳಿಸಿದಾಗ ಅವರು ಗಾಬರಿಗೊಂಡು, ‘ಸೀತಾರಾಂ! ನನ್ನನ್ನು ತುಂಬ ಇಕ್ಕಟ್ಟಿನಲ್ಲಿ ಸಿಲುಕಿಸಿದೆ!

ಕೋಮುವಾದಿ ಸಂಘಟನೆಯ ಉತ್ಸವಕ್ಕೆ ನಾನು ಬಂದರೆ ನನ್ನ ಹೆಸರೇನಾಗುತ್ತದೆ? ಜನ ಏನು ತಿಳಿಯುತ್ತಾರೆ?’ ಎಂದರಂತೆ. ‘ನೀವು ಪೂರ್ವಾಪರ ವಿಚಾರಿಸದೆಯೇ ಒಂದು ರಾಷ್ಟ್ರಭಕ್ತ ಸಂಸ್ಥೆಯನ್ನು ಕೋಮುವಾದಿ ಎಂಬ ಗುಂಪಿಗೆ ಸೇರಿಸಿದ್ದೀರಿ. ಅಪಪ್ರಚಾರವನ್ನು ಪರಾಮರ್ಶೆ ಮಾಡದೆ ಹೀಗೆನ್ನು ವುದು ಪ್ರತಿಭೆಯೂ ಅಲ್ಲ, ಪ್ರಾಮಾಣಿಕತನವೂ ಅಲ್ಲ. ಸ್ವತಂತ್ರ ವಿಚಾರ, ಪ್ರತ್ಯಕ್ಷ ಅವಲೋಕನವಿಲ್ಲದೆ ಸತ್ಯ-ಮಿಥ್ಯೆಗಳ ವ್ಯತ್ಯಾಸ ತಿಳಿಯುವು
ದಿಲ್ಲ.

ಕೋಮುವಾದಿ ಎನ್ನಲು ಪ್ರಮಾಣ ಬೇಡವೇ?’ ಎಂದು ಗೋಯೆಲರು ಕೇಳಿದಾಗ ಜಯಪ್ರಕಾಶರಿಗೆ ಜ್ಞಾನೋದಯ ವಾಗಿ, ಮನಸ್ಸು ಜಾಗೃತಗೊಂಡು ಸಮಾರಂಭಕ್ಕೆ ಹೋಗಿ, ಭಗವಾಧ್ವಜದ ಬಗ್ಗೆ ಇದ್ದ ‘ಇದು ಶಿವಾಜಿ ಕಾಲದ ಕೋಮುಚಿಹ್ನೆ’ ಎಂಬ ಭ್ರಮೆಯೂ ನೀಗಿ, ಆರೆಸ್ಸೆಸ್ ಬಗ್ಗೆ ಗಟ್ಟಿಯಾಗಿ ನಾಲ್ಕು ಹೊಗಳಿಕೆಯ ಮಾತನ್ನೂ ಆಡದೇ ಕೊನೆಯುಸಿರೆಳೆದರು. ಆರೆಸ್ಸೆಸ್ ಕೋಮುವಾದಿಯೇ? ಅಥವಾ ಕಾಂಗ್ರೆಸ್ಸೇ, ಕಮ್ಯುನಿಸ್ಟೇ? ದೇಶ ಒಡೆದ ಕಾಂಗ್ರೆಸ್ಸಿನ ಮುಂದೆ ದೇಶರಕ್ಷಣೆಯ ಧ್ಯೇಯವನ್ನಿಟ್ಟುಕೊಂಡು ಹುಟ್ಟಿದ ಆರೆಸ್ಸೆಸ್ ಕೋಮುವಾದಿ ಎನ್ನಲು ಒಂದೇ ಒಂದು ನಿದರ್ಶನವನ್ನೂ ಕೊಡಲು ಇನ್ನೂ ಸಾಧ್ಯವಾಗಲಿಲ್ಲ.

ಮುಸ್ಲಿಂ ಲೀಗನ್ನು ದೇಶ ಭಕ್ತ ಪಕ್ಷ ಎಂದ ಇಂದಿರಾ ಗಾಂಧಿ, ಉಗ್ರ ರಾಷ್ಟ್ರೀಯತೆಯಿಲ್ಲದ, ಸೆಕ್ಯುಲರಿಸಮ್ಮಿನ ನಿಜವಾದ ಮೌಲ್ಯಗಳನ್ನು ಹೊಂದಿದ ಆರೆಸ್ಸೆಸ್ಸನ್ನು ಗುಮಾನಿಸಿದರು. ರಾಷ್ಟ್ರೀಯತೆಯ ಮೌಲ್ಯಗಳನ್ನು ಪ್ರತಿನಿಧಿಸುವವರು ಇದಕ್ಕೆ ಸೇರಬಹುದು. ರಾಷ್ಟ್ರದ ದಿಟ್ಟಶಕ್ತಿಯಾದ ಆರೆಸ್ಸೆಸ್ ಹುಟ್ಟಿದ ಸಂದರ್ಭ-ಸನ್ನಿವೇಶಗಳನ್ನು ಅರಿಯುವುದರಲ್ಲೇ ಅದರ ಅಗತ್ಯತೆ, ವ್ಯಾಪಕತೆ ಅರಿವಾಗುತ್ತದೆ. ೧೯೨೫ರ ಸೆಪ್ಟೆಂಬರ್ ೨೭ರಂದು  ಮಹಾ ರಾಷ್ಟ್ರದ ನಾಗಪುರದಲ್ಲಿ ಡಾ. ಕೇಶವ ಬಲಿರಾಮ ಹೆಡಗೆವಾರ್ ಹುಟ್ಟುಹಾಕಿದ ಆರೆಸ್ಸೆಸ್, ಇಂದು ಭಾರತ ಹಾಗೂ ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಘ. ಇದಕ್ಕೆ ರಾಷ್ಟ್ರಾದ್ಯಂತ ೬೦ ಸಾವಿರಕ್ಕೂ ಹೆಚ್ಚು ಶಾಖೆಗಳಿದ್ದು, ಹಿಂದೂ ಸಂಘಟನೆ, ಏಕತೆ, ವ್ಯಕ್ತಿತ್ವ ನಿರ್ಮಾಣ ಮತ್ತು ವಿಕಸನ, ನಾಗರಿಕ ಪ್ರಜ್ಞೆ, ಸಮುದಾಯ ಜೀವನ, ಸಮಾಜಸೇವೆ, ದೇಶಭಕ್ತಿ ಮೊದಲಾದ ರಾಷ್ಟ್ರಕ್ಷೇಮದ ಗುಣಗಳನ್ನು ಬೆಳೆಸುವ ಚಟುವಟಿಕೆಗಳನ್ನು ಇದು ನಿತ್ಯವೂ ಒಂದು ವಿಶಾಲವಾದ ಬಯಲಿನಲ್ಲಿ ತಾಸಿಗೂ ಹೆಚ್ಚಿನ ಅವಧಿವರೆಗೆ ನಡೆಸುತ್ತದೆ.

ಭಾರತೀಯ ಗತ ಇತಿಹಾಸ ಮತ್ತು ಪರಂಪರೆಯ ವೈಭವವನ್ನು ಮೆಲುಕುಹಾಕುತ್ತ, ವರ್ತಮಾನದಲ್ಲಿ ದೇಶಹಿತ ಚಿಂತನೆಯೊಂದಿಗೆ ಸಾಮಾಜಿಕ ಸಾಮರಸ್ಯವನ್ನು ಕಾಣುತ್ತ ದೇಶಕಟ್ಟುವ ಕಾರ್ಯದಲ್ಲಿ ಸೇವೆ ಸಲ್ಲಿಸುತ್ತಿದೆ. ಅಪಾಯಕಾರಿ ಸನ್ನಿವೇಶಗಳ ನಿರ್ವಹಣೆ, ಪ್ರಥಮ ಚಿಕಿತ್ಸೆ, ಅಪಾಯ ದಲ್ಲಿರುವ ಜನರ ರಕ್ಷಣೆ, ಜೀವಜಾಲ ರಕ್ಷಣೆ, ಪುನರ್ವಸತಿ, ಗ್ರಾಮೀಣ ಅಭಿವೃದ್ಧಿ, ಸ್ವಚ್ಛತೆಗಳಲ್ಲಿ ಸ್ವಯಂಸೇವಕರನ್ನು ತೊಡಗಿಸಿಕೊಳ್ಳುತ್ತ ಅನೇಕ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಸಂಘವು ಮಹತ್ತರವಾದ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದೆ. ಉತ್ತಮ ಕಾರ್ಯಕರ್ತರನ್ನು, ನೇತಾರರನ್ನು ಸಂಘವು ನೀಡಿದೆ. ಇದೇ ಸಂದರ್ಭದಲ್ಲಿ ದೇಶದ ಕೆಲವು ವಿದ್ಯಮಾನಗಳೊಂದಿಗೆ ಆರೆಸ್ಸೆಸ್ ಅನ್ನು ತಳಕು ಹಾಕಲಾಗಿದೆ.

ಈ ಸಂಘಟನೆಯನ್ನು ಬರ್ಖಾಸ್ತು ಮಾಡುವವರೆಗಿನ ಯೋಚನೆ-ಯೋಜನೆಗಳು ಉನ್ನತ ಮಟ್ಟದಲ್ಲಿ ನಡೆದಿದ್ದೂ ಇದೆ. ಈಗಲೂ ಇದೆಯೆನ್ನಿ. ತಂಡ ಕಟ್ಟಿ ದೇಶವನ್ನು ನಿಯಂತ್ರಿಸುವುದು ಸಂಘದ ಉದ್ದೇಶವಲ್ಲ. ಜಾತಿ, ಮತ, ಧರ್ಮದ ಭೇದವಿಲ್ಲದೆ ಇದರಲ್ಲಿ ಸಕ್ರಿಯರಾದವರಿದ್ದಾರೆ. ಇದರಲ್ಲಿ ಯಾವುದೇ ಔಪಚಾರಿಕ ಸದಸ್ಯತ್ವವಿಲ್ಲ. ವಯಸ್ಸಿನ ಅಂತರವಿಲ್ಲ. ಮಹಿಳೆಯರಿಗೆ ಪ್ರತ್ಯೇಕ ವಿಭಾಗವಿದೆ. ದೇಣಿಗೆಯನ್ನು ಸ್ವೀಕರಿಸುವಂತಿಲ್ಲ. ಗುರುಪೂರ್ಣಿಮೆಯ ದಿನ ಗುರುದಕ್ಷಿಣೆಯಾಗಿ ಸದಸ್ಯರಿಂದಲೇ ಹಣವನ್ನು ಪಡೆಯಲಾಗುತ್ತದೆ. ಭಾರತಮಾತೆಯನ್ನು ಪೂಜಿಸಲಾಗುತ್ತದೆ. ಕೇಸರಿ ಬಣ್ಣದ ಧ್ವಜವು ತ್ಯಾಗ ಮತ್ತು ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. ಆರೆಸ್ಸೆಸ್‌ನ ಸೇವಾಕಾರ್ಯಗಳು ದೇಶವ್ಯಾಪಿ ನಡೆಯುತ್ತವೆ. ದೇಶದೆಲ್ಲೆಡೆ ಏನೇ ಸಮಸ್ಯೆಯಾದರೂ ಆರೆಸ್ಸೆಸ್ ಸಹಾಯಕ್ಕೆ ಮುಂದಾಗುತ್ತದೆ.

ಅನೇಕ ಪ್ರತಿಕೂಲ ಮತ್ತು ವೈರುದ್ಧ್ಯಗಳ ನಡುವೆಯೇ ಶಾಖೆಗಳ ಸಂಖ್ಯೆ ಏರುತ್ತಿದೆ. ಸಂಘಟನೆಗೆ ಯುವಕರು ಅತ್ಯಾಸಕ್ತಿಯಿಂದ ಸೇರಬಯಸುತ್ತಿದ್ದಾರೆ.
ಭಾರತವೆಂಬುದು ಯಾವುದೇ ವ್ಯಕ್ತಿ, ಸಮಾಜ, ಸರಕಾರ ಅಥವಾ ಸಿದ್ಧಾಂತವಲ್ಲ. ಸಮಾಜವೇ ತನ್ನೆಲ್ಲ ಭೇದವನ್ನು ಮರೆತು ಒಂದಾಗಿಬಿಟ್ಟರೆ ಸರಕಾರ ಮತ್ತು ನಾಯಕರು ಬಗ್ಗಲೇಬೇಕಾಗುತ್ತದೆ. ಆಗ ದೇಶದ ಹಳಿತಪ್ಪುವುದಿಲ್ಲ. ಸ್ವಾತಂತ್ರ್ಯಪೂರ್ವದಲ್ಲೂ, ಸ್ವಾತಂತ್ರ್ಯ ಸಂಗ್ರಾಮದಲ್ಲೂ ವಿವಿಧ ಹಿನ್ನೆಲೆಯಿಂದ ಬಂದ ಅನೇಕ ವಿಚಾರವಂತರಿಗೆಲ್ಲ ಇದ್ದ ಒಂದೇ ಒಂದು ಚಿಂತೆಯೆಂದರೆ, ‘ಈಗೇನೋ ನಮಗೆ ಸ್ವಾತಂತ್ರ್ಯ ಲಭಿಸಬಹುದು. ಆದರೆ ನಮಗೆ ಅಂಟಿರುವ ಈ ವ್ಯಾಧಿ ಮುಗಿಯುವುದಿಲ್ಲ.

ಎಲ್ಲಿಯವರೆಗೆ ಸಾಮಾನ್ಯ ಸಮಾಜವನ್ನು ಏಕಾತ್ಮತಾ ದರ್ಶನದ ಮೂಲಕ ಒಂದಾಗಿ ಕಾಣುವುದಿಲ್ಲವೋ, ಅಲ್ಲಿಯವರೆಗೆ ಈ ದುರ್ದೆಶೆ ಅಂತ್ಯ ವಾಗುವುದಿಲ್ಲ’ ಎಂಬುದು. ಸಂಘದ ೩ನೇ ಶಿಕ್ಷಾವರ್ಗದಲ್ಲಿ ಪ್ರಣವ್ ಮುಖರ್ಜಿಯವರು ಹೇಳಿರುವಂತೆ, ‘ರಾಷ್ಟ್ರವೆಂದರೆ ಒಂದು ಪ್ರದೇಶದಲ್ಲಿನ, ಒಂದೇ ರೀತಿಯ ಸಂಸ್ಕೃತಿ, ಭಾಷೆ/ಇತಿಹಾಸವನ್ನು ಹೊಂದಿದ ಜನರ ಗುಂಪು. ರಾಷ್ಟ್ರೀಯತೆ- ತಮ್ಮ ದೇಶದ ಸತ್ತ್ವದ ಕುರಿತಾಗಿ ಇರುವ ಅಭಿಮಾನ; ದೇಶಭಕ್ತಿ- ತನ್ನ ದೇಶದ ಬಗ್ಗೆ ಇರುವ ಭಕ್ತಿ ಮತ್ತು ತೀವ್ರವಾದ ಬೆಂಬಲ’. ಸಮಾಜದಲ್ಲಿ ಸಂಘಟನೆ ಮಾಡುವುದು ಸಂಘದ ಕಾರ್ಯವಲ್ಲ; ಬದಲಿಗೆ ಸಮಾಜವನ್ನೇ ಸಂಘಟಿಸುವುದು. ಏಕೆಂದರೆ ಸಂಘಟಿತ ಸಮಾಜವೇ ಭಾರತದ ಭಾಗ್ಯವನ್ನು ಬದಲಿಸುತ್ತದೆ ಎನ್ನುತ್ತಾರೆ ಮೋಹನ ಭಾಗವತರು.

‘ಭಾರತವು ಎಲ್ಲ ಅನುಮಾನಗಳಿಗೂ ಮೀರಿದ ಭೌಗೋಳಿಕ ಪ್ರತ್ಯೇಕತೆ ಅಥವಾ ರಾಜಕೀಯ ಶ್ರೇಷ್ಠತೆಯಿಂದ ಉತ್ಪತ್ತಿಯಾಗುವಂತೆಯೇ ಹೆಚ್ಚು ಗಾಢ ವಾದ ಆಧಾರವಾಗಿರುವ ಮೂಲಭೂತ ಏಕತ್ವವವನ್ನು ಹೊಂದಿದೆ. ಈ ಏಕತೆಯು, ಅಸಂಖ್ಯಾತ ವೈವಿಧ್ಯವು ರಕ್ತ, ಬಣ್ಣ, ಭಾಷೆ, ಉಡುಗೆ, ಸ್ವಭಾವ, ನಡೆವಳಿಕೆ, ಪಂಥಗಳಿಂದ ಬಂದುದಾಗಿದೆ’- ಶ್ರೇಷ್ಠ ಇತಿಹಾಸಕಾರ ವಿನ್ಸೆಂಟ್ ಸ್ಮಿತ್‌ನ ಈ ಮಾತುಗಳನ್ನು ಪ್ರಣವ್ ಮುಖರ್ಜಿಯವರು ಹೇಳುತ್ತ, ‘ನಮ್ಮ
ಸಂವಿಧಾನದ ಮೂಲಕ ನಮ್ಮ ರಾಷ್ಟ್ರೀಯತೆ ಹರಿಯುತ್ತದೆ.

ಭಾರತೀಯ ರಾಷ್ಟ್ರೀಯತೆಯ ನಿರ್ಮಾಣವು ‘ಸಾಂವಿಧಾನಿಕ ದೇಶಭಕ್ತಿ’ ಆಗಿದೆ. ಭಾರತದ ಆತ್ಮವು ಬಹುತ್ವ ಮತ್ತು ಸಹಿಷ್ಣುತೆಗಳಲ್ಲಿ ನೆಲೆಸಿದೆ. ನಮ್ಮ ಸಮಾಜದ ಈ ವಿವಿಧತೆಯು ಶತಮಾನಗಳ ಚಿಂತನೆಗಳ ಸಮೀಕರಣದ ಮೂಲಕ ಬಂದಿದೆ. ಸೆಕ್ಯುಲರಿಸಂ ಮತ್ತು ಒಳಗೊಳ್ಳುವಿಕೆ ನಮಗೆ ನಂಬಿಕೆಯ
ವಿಷಯವಾಗಿದೆ. ನಮ್ಮ ಸಂಯುಕ್ತ ಸಂಸ್ಕೃತಿಯಾಗಿರುವ ಇದು ನಮ್ಮನ್ನು ಒಂದು ರಾಷ್ಟ್ರವನ್ನಾಗಿ ಮಾಡುತ್ತದೆ. ಭಾರತದ ರಾಷ್ಟ್ರೀಯತೆ  ನಿಂತಿರುವುದು ಒಂದು ಭಾಷೆಯಿಂದಲ್ಲ, ಒಂದು ರಿಲಿಜನ್‌ನಿಂದಲ್ಲ, ಒಂದು ಶತ್ರುವಿನಿಂದಲ್ಲ.

೧೨೨ಕ್ಕೂ ಹೆಚ್ಚಿನ ಭಾಷೆಗಳು ಮತ್ತು ತಮ್ಮ ದೈನಂದಿನ ಜೀವನದಲ್ಲಿ ೧೬೦೦ ಉಪಭಾಷೆಗಳನ್ನು ಬಳಸಿಕೊಳ್ಳುವ ೧.೩ ಶತಕೋಟಿ ಜನರ ‘ಪೆರಿನಿಯಲ್ ಯೂನಿವರ್ಸಲಿಸಂ’. ೭ ಪ್ರಮುಖ ಮತಗಳನ್ನು ಅನುಸರಿಸುತ್ತ ಭಾರತದಲ್ಲಿ ೩ ಪ್ರಮುಖ ಜನಾಂಗೀಯ ಗುಂಪುಗಳಾದ ಆರ್ಯನ್ನರು,  ಗೋಲಿಯನ್ನರು
ಮತ್ತು ದ್ರಾವಿಡರು ಒಂದೇ ವ್ಯವಸ್ಥೆಯಲ್ಲಿ ವಾಸಿಸುತ್ತಾರೆ. ಒಂದು ಧ್ವಜ ಮತ್ತು ‘ಭಾರತೀಯ’ ಎಂಬ ಗುರುತಿನಡಿ ನಾವೆಲ್ಲ ಬದುಕುತ್ತೇವೆ; ಮತ್ತು ನಮಗೆ ಶತ್ರುಗಳು ಇಲ್ಲ. ಇವುಗಳೇ ಭಾರತವನ್ನು ವೈವಿಧ್ಯಮಯ ಮತ್ತು ಏಕೀಕೃತ ರಾಷ್ಟ್ರವನ್ನಾಗಿಸಿದೆ’ ಎನ್ನುತ್ತಾರೆ.

ಹಿಂದೂ ಮಹಾಸಭಾ ಮತ್ತು ಸಂಘವನ್ನು ಒಪ್ಪದ ಗಾಂಧಿ ಕೂಡ ೧೯೩೪ರಲ್ಲಿ ಶಿಕ್ಷಾವರ್ಗಕ್ಕೆ ಭೇಟಿನೀಡಿ ಅದರ ದಿನಚರಿ ಮತ್ತು ಧ್ಯೇಯವನ್ನು ಹೊಗಳಿದ್ದರು. ಗಾಂಧಿ ಹತ್ಯೆ ವಿಷಯದಲ್ಲಿ ಸಂಘವನ್ನು ದ್ವೇಷಿಸಿದ ಜೆಪಿಯವರು ತುರ್ತು ಪರಿಸ್ಥಿತಿಯ ವಿರುದ್ಧದ ಸಂಘದ ಆಂದೋಲನವನ್ನು ಮೆಚ್ಚಿದ್ದಷ್ಟೇ ಅಲ್ಲದೆ, ೧೯೭೭ರಲ್ಲಿ ಶಿಕ್ಷಾವರ್ಗದಲ್ಲಿ ಪಾಲ್ಗೊಂಡು ಸಂಘವನ್ನು ಹೊಗಳಿದ್ದರು. ಚೀನಾದೊಂದಿಗಿನ ಯುದ್ಧದ ಸಂದರ್ಭದಲ್ಲಿ ಸಂಘವು ತೋರಿದ ರಾಷ್ಟ್ರಭಕ್ತಿಯನ್ನು ಮೆಚ್ಚಿದ ನೆಹರು, ೧೯೬೩ರ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ೩,೦೦೦ ಸ್ವಯಂಸೇವಕರನ್ನು ಆಹ್ವಾನಿಸಿದ್ದರು.

ಅದಕ್ಕೆ ವಿರೋಧಗಳು ಬಂದಾಗ, ‘ರಾಷ್ಟ್ರಭಕ್ತ ಭಾರತೀಯರನ್ನು ನಾನು ಆಹ್ವಾನಿಸಿದ್ದೇನೆ’ ಎಂದಿದ್ದರು. ಸಂಘದ ಶಾಖೆಗಳು ಹೆಚ್ಚಬೇಕು, ಮತ್ತಷ್ಟು ವಿಸ್ತಾರವಾಗಬೇಕೆಂಬ ಅಭಿಲಾಷೆಯನ್ನು ಅಂಬೇಡ್ಕರ್ ಹೊಂದಿದ್ದರು. ‘ಭಾರತದ ವೈವಿಧ್ಯ ವಿಶ್ವದಲ್ಲೇ ಸುಂದರವಾದುದು. ಹೊರಗೆ ಕಾಣುವ ಈ ವಿವಿಧತೆಯ ಸೌಂದರ್ಯವು ಒಂದು ಏಕತೆಯ ಆಧಾರದಲ್ಲಿ ಹುಟ್ಟಿದೆ. ಈ ಮೂಲಕ ನಾವೆಲ್ಲ ಒಂದು ಭಾವವನ್ನು ಹೊಂದಿರಬೇಕು’ ಎನ್ನುವ ಮೋಹನ್ ಭಾಗವತರು, ‘ಯಾರು ಯಾವ ಮೂಲದಿಂದ ಬಂದರೂ ನಮ್ಮ ಜೀವನದ ಮೇಲೆ ಭಾರತೀಯ ಸಂಸ್ಕೃತಿಯ ಅಚ್ಚಳಿಯದ ಪ್ರಭಾವವಿದೆ. ಎಲ್ಲರ ಪೂರ್ವಿಕರೂ ಒಬ್ಬರೇ, ಎಲ್ಲರಿಗೂ ಭಾರತಮಾತೆಯೇ ಮಾತೆ’ ಎಂದು ಹೇಳುತ್ತಾರೆ.

ಆರೆಸ್ಸೆಸ್‌ನದು ಡೆಮಾಕ್ರಟಿಕ್ ಮೈಂಡ್. ಸೌಹಾರ್ದ, ಸೌಶೀಲ್ಯ, ಸುಮನಸ್ಕತೆ ಇದರ ಅಂತಃಸತ್ವಗಳು. ಜಾತ್ಯತೀತತೆಯನ್ನು ಉಪದೇಶಿಸುವ ಅಗತ್ಯ ಸಂಘಕ್ಕಿಲ್ಲ. ಭಾರತೀಯ ಪರಂಪರೆಯಲ್ಲಿ ಬದುಕುವ ಮತ, ಪಂಥ, ಧರ್ಮಗಳ ನಡುವೆಯೂ ಬಿರುಕಿಲ್ಲದೆ ರಾಷ್ಟ್ರೀಯತೆಯು ಸ್ವಯಂಚಾಲಿತವಾಗಿ ರಾಷ್ಟ್ರವಾಸಿಗಳಲ್ಲಿ ಹರಿಯುವಂತಾಗಬೇಕೆಂಬ ಮಹೋನ್ನತ ಅಭಿಲಾಷೆ ಈ ಸಂಘಟನೆಯದು. ಸಂಘಕ್ಕೀಗ ೯೮ರ ಸಂವತ್ಸರ. ಸಂಘದ ಸಿದ್ಧಾಂತ, ಅನುಷ್ಠಾನ, ಮಾನಸಿಕತೆ, ಮನೋಧರ್ಮಗಳು ರಾಷ್ಟ್ರೀಯತೆಯ ಹಿನ್ನೆಲೆಯವು.

ಜಗತ್ತಿನ ಅತಿದೊಡ್ಡ ಸಂಘಟನೆಯಾದ ಇದರಲ್ಲಿ ೧೦ ಕೋಟಿಗೂ ಮಿಕ್ಕಿ ಸ್ವಯಂಸೇವಕರಿದ್ದಾರೆ. ಶಾಖೆಗಳೇ ಇದರ ಜೀವಾಳ. ಯಾವ ಧರ್ಮೀಯನಿಗೂ
ಸಂಘವು ಮುಕ್ತವಾಗಿದೆ. ಸಂಘವು ಅದಮ್ಯ ರಾಷ್ಟ್ರೀಯತೆಯ ಬೃಹತ್ ಶಕ್ತಿಯಾಗಿದ್ದು ದೇಶಸೇವೆಯಲ್ಲಿ ನಿರತವಾಗಿದೆ. ರಾಷ್ಟ್ರೀಯವಾದಿ ಮುಸ್ಲಿಮರ ಒಂದು ವಿಭಾಗವೇ ಸಂಘದಲ್ಲಿದೆ. ಆರೆಸ್ಸೆಸ್‌ನ ಆಳ ಮತ್ತು ಅಗಲದ ವ್ಯಾಪ್ತಿ ಬಹು ವಿಸ್ತಾರವಾದುದು. ಅದು ಅಗೆದಷ್ಟೂ ಆಳ, ಬಗೆದಷ್ಟೂ ಅಗಲ!

 
Read E-Paper click here