Saturday, 14th December 2024

ಇಂದಿಗೂ ಮಾತಾಡುವ, 37 ವರ್ಷಗಳ ಹಿಂದೆ ತೆಗೆದ ಆ ಫೋಟೋ !

ಇದೇ ಅಂತರಂಗ ಸುದ್ದಿ

vbhat@me.com

ಗ್ರಹಾಂ ಮೋರಿಸ್ ಹೆಸರನ್ನು ಕೇಳಿದವರು ಅಪರೂಪ. ಆದರೆ ಆತ ತೆಗೆದ ಈ ಫೋಟೋ ನೋಡಿದರೆ, ಆತನ ಹೆಸರನ್ನು ಕ್ರಿಕೆಟ್ ಪ್ರೇಮಿಗಳು ನೆನಪಿಸಿಕೊಳ್ಳು ತ್ತಾರೆ. ಒಂದು ಫೋಟೋದಿಂದ ಆತ ಜನಮಾನಸದಲ್ಲಿ ಇನ್ನೂ ನೆಲೆಸಿದ್ದಾನೆ. ಮೂಲತಃ ಮೋರಿಸ್ ಫ್ರೀಲಾನ್ಸ್ ಫೋಟೋಗ್ರಾಫರ್. ಆತನಿಗೆ ಕ್ರಿಕೆಟ್ ಗೀಳು. ೧೯೮೭ರಲ್ಲಿ ಇಂಗ್ಲೆಂಡ್-ಪಾಕಿಸ್ತಾನ ನಡುವೆ ಫೈಸಲಾಬಾದ್ ಕ್ರಿಕೆಟ್ ಪಂದ್ಯದ ಫೋಟೋ ತೆಗೆಯಲು ಆತ ಹೋಗಿದ್ದ. ವೆಸ್ಟ್ ಇಂಡೀಸ್ ತಂಡದ ಮಾಲ್ಕಮ್ ಮಾರ್ಷಲ್ ಎಸೆತಕ್ಕೆ ಮೂಗು ಮುರಿದುಕೊಂಡ ನಂತರ, ಸಂಪೂರ್ಣ ಗುಣಮುಖನಾದ ಇಂಗ್ಲೆಂಡ್ ನಾಯಕ ಮೈಕ್ ಗ್ಯಾಟಿಂಗ್ ಮತ್ತು ಅಂಪೈರ್ ಶಕೂರ್ ರಾಣಾ ನಡುವೆ ನಡೆದ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ, ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ದುರದೃಷ್ಟಕರ ಎಂದೇ ಕುಖ್ಯಾತ.

ಈ ದೃಶ್ಯವನ್ನು ಸೆರೆ ಹಿಡಿದ ವನೇ ಗ್ರಹಾಂ ಮೋರಿಸ್. ಈ ದೃಶ್ಯವನ್ನು ಮೋರಿಸ್ ಬಿಟ್ಟರೆ ಬೇರೆ ಯಾವ ಫೋಟೋಗ್ರಾಫರ್ ಸಹ ಕ್ಲಿಕ್ಕಿಸಿರಲಿಲ್ಲ. ಒಂದು
ರೀತಿಯಲ್ಲಿ, ಮೋರಿಸ್‌ಗಾಗಿ ಅವರಿಬ್ಬರೂ ಕಿತ್ತಾಡಿಕೊಂಡಿರಬಹುದಾ ಎಂದು ಸಂದೇಹ ಬರುವಂತಿತ್ತು ಆ ಫೋಟೋ. ಇನ್ನೇನು ಕೆಲ ಕ್ಷಣಗಳಲ್ಲಿ ಆ ದಿನದ ಆಟ ಮುಗಿಯಬೇಕು ಎನ್ನುವಷ್ಟರಲ್ಲಿ ಎಲ್ಲಾ ಫೋಟೋಗ್ರಾಫರುಗಳು ತಮ್ಮ ಕೆಮರಾ ಕಿಟ್‌ನ್ನು ಪ್ಯಾಕ್ ಮಾಡುತ್ತಿದ್ದರು. ಮೋರಿಸ್ ಕಿವಿಗೆ ರೇಡಿಯೋ ರಿಸೀವರ್ ಹಾಕಿಕೊಂಡಿದ್ದ. ಗ್ಯಾಟಿಂಗ್ ಮತ್ತು ರಾಣಾ ನಡುವೆ ಬಿಸಿಬಿಸಿ ಮಾತು ಕೇಳಿದ ಮೋರಿಸ್ ತಕ್ಷಣ ಜಾಗೃತನಾದ.

ಸಾಯಂಕಾಲವಾದ್ದರಿಂದ ಸೂರ್ಯನ ಬೆಳಕು ತುಸು ಮಂದವಾಗಿತ್ತು. ಇಂಗ್ಲೆಂಡ್ ನಾಯಕ ಮತ್ತು ಅಂಪೈರ್ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಮೋರಿಸ್ ಆ ಕ್ಷಣಗಳನ್ನು ಪಟಪಟನೆ ಸೆರೆ ಹಿಡಿದ. “You are a fucking cheat’ ಎಂದು ರಾಣಾ ಜೋರಾಗಿ ಕಿರುಚಿದ. ಆಗ ಮತ್ತಷ್ಟು ಉದ್ರಿಕ್ತನಾದ ಗ್ಯಾಟಿಂಗ್, ಅಂಪೈರ್ ಬಳಿ ಬಂದು ಕಿರುಚಾಡಿದ. ಒಂದು ಅಡಿಯಷ್ಟು ಸನಿಹದಲ್ಲಿ ನಿಂತು ಇಬ್ಬರೂ ಪರಸ್ಪರ ಬೈದುಕೊಂಡರು. ಇಂಗ್ಲೆಂಡ್ ತಂಡದ ಬಿಲ್ ಆತೇ, ತನ್ನ ನಾಯಕನ ಕೈ ಹಿಡಿದು ಎಳೆದು ಕರೆದುಕೊಂಡು ಬರದಿದ್ದರೆ, ಗ್ಯಾಟಿಂಗ್ ಅಂಪೈರ್‌ಗೆ ಹೊಡೆಯುತ್ತಿದ್ದ. ಆಗಬಾರದ ಘಟನೆ ಆಗುತ್ತಿತ್ತು. ಬ್ಯಾಟ್ಸ್‌ಮನ್ ಪೊಸಿಷನ್ ತೆಗೆದುಕೊಂಡ ನಂತರ, ಗ್ಯಾಟಿಂಗ್ ಫೀಲ್ಡರುಗಳ ಸ್ಥಾನವನ್ನು ಬದಲಿಸುವ ತಂತ್ರವನ್ನು ಅಂಪೈರ್ ರಾಣಾ ಪತ್ತೆ ಮಾಡಿದ್ದು ಈ ಎಲ್ಲಾ ರಾದ್ಧಾಂತಕ್ಕೆ ಕಾರಣವಾಗಿತ್ತು.

‘ಕ್ರಿಕೆಟ್ ಜಂಟಲ್ಮನ್‌ಗಳ ಆಟ. ನೀವು ಮಾಡುತ್ತಿರುವುದು ಕುತಂತ್ರ. ಇದು ಆಟದ ನಿಯಮಕ್ಕೆ ವಿರುದ್ಧವಾದುದು’ ಎಂದು ರಾಣಾ ಮುಖಕ್ಕೆ ಹೊಡೆದಂತೆ ಹೇಳಿದಾಗ, ಕುಪಿತನಾದ ಗ್ಯಾಟಿಂಗ್, ‘ಆಟದ ನಿಯಮದ ಬಗ್ಗೆ ಮಾತಾಡಬೇಡಿ. ಆ ನಿಯಮವನ್ನು ಮಾಡುವವರು ನಾವೇ’ ಎಂದು ಹೇಳಿದ್ದು ಕೇಳಿ ರಾಣಾ ಮತ್ತಷ್ಟು ವ್ಯಗ್ರನಾದ. ಇದು ಅವರಿಬ್ಬರ ನಡುವೆ ಕಿತ್ತಾಟಕ್ಕೆ ಕಾರಣವಾಗಿತ್ತು.

ಗ್ಯಾಟಿಂಗ್ ಲಿಖಿತ ಕ್ಷಮಾಪಣೆ ಕೋರುವ ತನಕ ತಾನು ಅಂಪೈರಿಂಗ್ ಮಾಡುವುದಿಲ್ಲ ಎಂದು ರಾಣಾ ಹಠ ಹಿಡಿದ. ತಾನು ಯಾವ ತಪ್ಪನ್ನೂ ಮಾಡದ್ದರಿಂದ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಗ್ಯಾಟಿಂಗ್ ಕೂಡ ಹಠ ಹಿಡಿದ. ಮರುದಿನ ಇಂಗ್ಲೆಂಡ್ ಆಟಗಾರರೆಲ್ಲ ಮೈದಾನಕ್ಕೆ ಬಂದರು. ಆದರೆ ಪಾಕಿಸ್ತಾನಿ ಅಂಪೈರುಗಳು ಬರಲೇ ಇಲ್ಲ. ಕೆಲ ಹೊತ್ತು ಅಂಪೈರು ಗಳಿಗೆ ಕಾದು, ಆಟಗಾರರು ಪೆವಿಲಿಯನ್‌ಗೆ ಮರಳಿದರು. ಇಡೀ ದಿನವಾದರೂ ಆಟ ನಡೆಯಲೇ ಇಲ್ಲ. ಒಂದು ದಿನದ ನಂತರ ಮೋರಿಸ್ ತೆಗೆದ, ಗ್ಯಾಟಿಂಗ್ ಮತ್ತು ರಾಣಾ ಕಿತ್ತಾಡುವ ಫೋಟೋ ಕ್ರಿಕೆಟ್ ಆಡುವ ದೇಶಗಳ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಜೋರಾಗಿ ಪ್ರಕಟವಾಗಿತ್ತು. ಆತ ಬಹಳ ದೊಡ್ಡ ಮೊತ್ತಕ್ಕೆ ಈ ಫೋಟೋವನ್ನು ಮಾರಾಟ ಮಾಡಿದ್ದ.

ಬ್ರಿಟಿಷ್ ರಾಜತಾಂತ್ರಿಕರ ಸಲಹೆ ಮೇರೆಗೆ, ಎರಡೂ ದೇಶಗಳ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕಾರಿಗಳು ತುರ್ತು ಸಭೆ ಮಾಡಿ, ಈ ವಿವಾದವನ್ನು ಇತ್ಯರ್ಥ ಪಡಿಸಲು ನಿರ್ಧರಿಸಿದರು. ಈ ವಿವಾದವನ್ನು ಬೆಳೆಯಲು ಬಿಟ್ಟರೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು
ಅವರು ಆತಂಕ ವ್ಯಕ್ತಪಡಿಸಿದರು. ನಾಲ್ಕನೇ ದಿನದ ಆಟ ಆರಂಭವಾಗುವುದಕ್ಕೆ ಸ್ವಲ್ಪ ಹೊತ್ತಿನ ಮೊದಲು, ಗ್ಯಾಟಿಂಗ್ ತಪ್ಪಾಯಿತೆಂದು ಬರೆದುಕೊಟ್ಟರು. ಈ ಪತ್ರವನ್ನು ನಾನು ಯಾವತ್ತೂ ನನ್ನ ತಲೆದಿಂಬಿನ ಕೆಳಗೆ ಇಟ್ಟುಕೊಳ್ಳುತ್ತೇನೆ ಮತ್ತು ಆಗಾಗ ನೋಡುತ್ತೇನೆ ಎಂದು ಹೇಳಿದರು. ಈ ಘಟನೆಯಿಂದ ಮುಖ ಕಳೆದುಕೊಂಡ ಗ್ಯಾಟಿಂಗ್ ನಾಯಕ ಹುದ್ದೆಯಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಹೇಳಿದರು.

ಆದರೆ ಇತರ ಆಟಗಾರರ ಸಲಹೆ ಮೇರೆಗೆ ಮುಂದುವರಿದರು. ಇಲ್ಲಿಗೆ ಎಲ್ಲವೂ ಅಂತ್ಯವಾಯಿತು ಎಂದು ಅಂದುಕೊಳ್ಳುತ್ತಿರುವಾಗ, ಟೆಸ್ಟ್ ಸರಣಿ ಮುಗಿಯು ತ್ತಿದ್ದಂತೆ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತೀವ್ರ ಒತ್ತಡದಲ್ಲಿ ಆಟವಾಡಿದ ಪ್ರತಿ ಆಟಗಾರರಿಗೆ ತಲಾ ಒಂದು ಸಾವಿರ ಪೌಂಡ್ ಬೋನಸ್ ಘೋಷಿಸಿತು. ಇದನ್ನು ಪಾಕಿಸ್ತಾನಿ ಕ್ರಿಕೆಟ್ ಮಂಡಳಿ ಖಂಡಿಸಿತು. ಇದಾಗಿ ಒಂದು ವರ್ಷದ ನಂತರ, ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ, ಹೋಟೆಲ್ ರೂಮಿನಲ್ಲಿ ಬಾರ್ ಗರ್ಲ್ ಜತೆಗಿದ್ದ ಎಂಬ ಕಾರಣಕ್ಕೆ ಗ್ಯಾಟಿಂಗ್‌ನನ್ನು ತಂಡದಿಂದ ವಜಾ ಮಾಡಲಾಯಿತು. ಆತ ಮುಯ್ಯಿ ತೀರಿಸಿಕೊಳ್ಳಲು ಬಂಡುಕೋರ ಆಟಗಾರರನ್ನೆ ಸೇರಿಸಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿ ಅಲ್ಲಿ ಕ್ರಿಕೆಟ್ ಆಡಿ ಬಂದ.

ಕ್ರಿಕೆಟ್ ಲೇಖಕ ವೇದಂ ಜೈಶಂಕರ ಈ ಘಟನೆಯನ್ನು ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಮೋರಿಸ್ ತೆಗೆದ ಆ ಫೋಟೋ ನೋಡಿದರೆ, ಕ್ರಿಕೆಟ್
ಚರಿತ್ರೆಯ ಸುರುಳಿ ಬಿಚ್ಚಿಕೊಳ್ಳುತ್ತದೆ. ಮೂವತ್ತೇಳು ವರ್ಷಗಳ ಹಿಂದೆ ತೆಗೆದ ಒಂದು ಫೋಟೋ ಇಂದಿಗೂ ಮಾತಾಡುತ್ತದೆ.

ಮುತ್ತು ಕೊಡುವುದು ತಪ್ಪಾ?
ಇದೆಂಥ ಪ್ರಶ್ನೆ ಎಂದು ಕೇಳಬಹುದು. ಮರೆಯಾಗಿದ್ದ ಕರೋನಾ ಮತ್ತೆ ಅಮರಿಕೊಂಡಿರುವ ಈ ಕಾಲದಲ್ಲಿ ಮುತ್ತು ಕೊಡುವ ಮುನ್ನ ಯೋಚಿಸಬೇಕಿದೆ. ಗಂಡ ಅಸ್ವಸ್ಥನಾದ. ಹೆಂಡತಿ ಕಾರ್ಪೊ ರೇಷನ್ ಅಧಿಕಾರಿಗಳಿಗೆ ಫೋನ್ ಮಾಡಿದಳು. ಕರೋನಾ ವಾರಿಯರ್ಸ್ ತಕ್ಷಣ ಧಾವಿಸಿದರು. ಗಂಡನನ್ನು ಕೋವಿಡ್ ಸೆಂಟರ್‌ಗೆ ಕರೆದುಕೊಂಡು ಹೋಗಿ ಪರೀಕ್ಷಿಸಿದರು. ಪಾಸಿಟಿವ್ ಇರುವುದು ಸಾಬೀತಾಯಿತು. ತನಿಖೆ ಆರಂಭಿಸಿದರು.

‘ಕಳೆದ ಹತ್ತು ದಿನಗಳ ಅವಧಿಯಲ್ಲಿ ಯಾರನ್ನೆ ಭೇಟಿಯಾಗಿ ದ್ದೀಯ, ಯಾರ ಸಂಪರ್ಕಕ್ಕೆ ಬಂದಿದ್ದೀಯ’ ಎಂದೆ ಪ್ರಶ್ನೆಗಳ ಸುರಿಮಗೈದರು. ಆತ ತಾನು ಮನೆಯಿಂದ ಹೊರಗೇ ಬಿದ್ದಿಲ್ಲ ಎಂದರೂ ಕೇಳಲಿಲ್ಲ. ಬೇರೆಯವರ ಸಂಪರ್ಕಕ್ಕೆ ಬರದೇ ಕರೋನಾ ಬರಲು ಸಾಧ್ಯವೇ ಇಲ್ಲ ಎಂದು ವೈದ್ಯರು ವಾದಿಸಿ ದರು. ತನಿಖೆ ಮುಂದುವರಿಯಿತು. ಕೊನೆಗೆ ಗಂಡ ಬಾಯಿಬಿಟ್ಟ. ‘ಎರಡು ದಿನಗಳ ಹಿಂದೆ, ಹೆಂಡತಿಗೆ ಮುತ್ತುಕೊಟ್ಟಿದ್ದೆ’ ಎಂದ.

ವೈದ್ಯರು ಮತ್ತಷ್ಟು ಪ್ರಶ್ನೆಗಳನ್ನು ಹಾಕಿದರು. ಆಗ ಆತ, ‘ಹತ್ತು ದಿನಗಳ ಹಿಂದೆ, ಮನೆಯ ಕೆಲಸದವಳಿಗೆ ಮುತ್ತು ಕೊಟ್ಟಿದ್ದೆ’ ಎಂದ. ‘ಹಾಗಾದರೆ ಮನೆಗೆಲಸ ದವಳು ಮತ್ತು ಇವರ ಹೆಂಡತಿಯನ್ನು ಕರೆದುಕೊಂಡು ಬನ್ನಿ’ ಎಂದು ವೈದ್ಯರು ಸೂಚಿಸಿದರು. ಮನೆಗೆಲಸದವಳ ಹೆಸರನ್ನು ಕೇಳುತ್ತಿದ್ದಂತೆ, ಅವಳು ಈಗಾಗಲೇ ಅದೇ ಸೆಂಟರ್‌ನಲ್ಲಿ ಅಡ್ಮಿಟ್ ಆಗಿರುವುದು ಗೊತ್ತಾಯಿತು. ಹೆಂಡತಿಯನ್ನು ಕರೆತರಲು ಆಂಬುಲೆನ್ಸ್ ಹೋಯಿತು. ಆಗ ಗಂಡ ಹೇಳಿದ- ‘ಅವಳಿಗೆ ಕರೋನಾ ಸೋಂಕಲು ಕಾರಣವೇನು ಎಂಬುದು ಈಗ ನಿಮಗೆ ಗೊತ್ತಾಗಿದೆಯಲ್ಲ. ದಯವಿಟ್ಟು ಅವಳಿಗೂ ನನಗೆ ಕೇಳಿದಂತೆ ಪ್ರಶ್ನೆಗಳನ್ನು ಹಾಕಿ ನನ್ನ ಮಾನ ಹರಾಜು ಹಾಕಬೇಡಿ’. ಮುತ್ತು ಕೊಡುವುದು ತಪ್ಪಲ್ಲ, ಆದರೆ ಯಾರಿಗೆ ಅನ್ನೋದು ಮುಖ್ಯ!

ಅಪರೂಪದ ಸಭಿಕರು !

ಕೆಲ ವರ್ಷಗಳ ಹಿಂದೆ ಖ್ಯಾತ ಶಾಸ್ತ್ರೀಯ ಸಂಗೀತಗಾರ ಪಂಡಿತ ಓಂಕಾರನಾಥ ಠಾಕೂರ ಅವರ ಸಂಗೀತ ಕಛೇರಿ ಏರ್ಪಾಟಾಗಿತ್ತು. ಜನ ಕಿಕ್ಕಿರಿದು ಸೇರಿದ್ದರು. ‘ಟಿಕೆಟ್ ಖರೀದಿಸಿದವರಿಗೆ ಮಾತ್ರ ಪ್ರವೇಶ’ ಎಂಬ ಬೋರ್ಡ್ ಹಾಕಲಾಗಿತ್ತು. ಅವರ ಸಂಗೀತ ಕಛೇರಿಯಲ್ಲಿ ಪಾಲ್ಗೊಳ್ಳಲೇಬೇಕು ಎಂಬ ಆಸೆಯಿದ್ದ ನಾಲ್ವರು
ಹೈಸ್ಕೂಲ್ ಮಕ್ಕಳಿಗೆ ಇದರಿಂದ ಬೇಸರವಾಯಿತು. ಕಾರಣ ಅವರಲ್ಲಿ ಹಣವಿರಲಿಲ್ಲ. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಪಂಡಿತ ಠಾಕೂರ ಅವರು ಸಭಾಂಗಣದತ್ತ ಬರುತ್ತಿರುವುದು ಕಾಣಿಸಿತು. ಅವರ ಸನಿಹ ಹೋದ ಈ ನಾಲ್ವರು ಮಕ್ಕಳು, ‘ನಿಮ್ಮ ಸಂಗೀತ ಕೇಳಬೇಕೆಂಬ ಆಸೆಯಿಂದ ಬಂದಿದ್ದೇವೆ. ನಮ್ಮ ಬಳಿ ಹಣ ಇಲ್ಲ. ನೀವು ಒಂದು ಮಾತು ಹೇಳಿದರೆ, ಒಳಬರುತ್ತೇವೆ’ ಎಂದರು. ಅದಕ್ಕೆ ಆ ಸಂಗೀತಗಾರ, ಪ್ರಾಯಶಃ ಅದು ಸಾಧ್ಯವಾಗದೇ ಹೋಗಬಹುದು. ಒಂದು ಕೆಲಸ ಮಾಡಿ, ನಾಳೆ ನಾನು ಉಳಿದುಕೊಂಡ ಅತಿಥಿ ಗೃಹಕ್ಕೆ ಬೆಳಗ್ಗೆ ಬನ್ನಿ ಎಂದರು.

ಆ ನಾಲ್ವರು ಮಕ್ಕಳು ಬೆಳಗ್ಗೆ ಅತಿಥಿ ಗೃಹಕ್ಕೆ ಹೋದರೆ, ಪಂಡಿತ ಠಾಕೂರ ಅವರು ಹೊರಡಲು ಅನುವಾಗುತ್ತಿದ್ದರು. ಈ ಮಕ್ಕಳನ್ನು ಕಂಡ ಕೂಡಲೇ, ಅವರನ್ನು ಕರೆದು ತಮ್ಮ ಪಕ್ಕದಲ್ಲಿ ಕುಳ್ಳಿರಿಸಿಕೊಂಡರು. ಪಕ್ಕದ ಕೋಣೆಯಲ್ಲಿದ್ದ ಪಕ್ಕವಾದ್ಯದವರನ್ನು ಕರೆದರು. ಅವರೆಲ್ಲರೂ ಬಂದರು. ಆ ನಾಲ್ವರು ಹೈಸ್ಕೂಲ್ ಮಕ್ಕಳಿ ಗಾಗಿ ಪಂಡಿತ ಜೀ ಸುಮಾರು ಅರ್ಧ ಗಂಟೆ ತನ್ಮಯರಾಗಿ ಹಾಡಿದರು. ಅವರ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು. ಆ ಮಕ್ಕಳ ಕಣ್ಣುಗಳಲ್ಲೂ ಅವ್ಯಕ್ತ ಭಾವವಿತ್ತು .

ಸೇತುವೆಯನ್ನೇಕೆ ಕಟ್ಟಬೇಕು? 
ವೃದ್ಧನೊಬ್ಬ ನಡೆದು ಹೋಗುತ್ತಿದ್ದ. ಸೂರ್ಯ ಮುಳುಗುವ ಹೊತ್ತು. ಸಣ್ಣಗೆ ಕೊರೆಯುವ ಚಳಿ, ಹಾಗೆ ನಡೆದು ಹೋಗುವಾಗ ಒಂದು ತೊರೆ ಅಡ್ಡ ಬಂತು. ಬಹಳ ಪ್ರಯಾಸಪಟ್ಟು ಅದನ್ನು ದಾಟಿದ ಬಳಿಕ ಅವನಿಗೆ ಅನಿಸಿತು, ‘ಈ ದಾರಿಯಲ್ಲಿ ಅವೆಷ್ಟೊ ಮಂದಿ ಹೋಗಿದ್ದಾರೆ. ಪ್ರತಿದಿನ ಹತ್ತಾರು ಜನ ಹೋಗುತ್ತಾರೆ. ಆದರೆ ಯಾರೂ ಒಂದು ಸಣ್ಣ ಸೇತುವೆಯನ್ನು ಕಟ್ಟಲಿಲ್ಲವಲ್ಲ?’ ತಾನು ಕೂಡ ಹಾಗೇ ಮುಂದೆ ನಡೆದರೆ, ತನಗೂ ಬೇರೆಯವರಿಗೂ ಏನು ವ್ಯತ್ಯಾಸ? ತಾನಾದರೂ ಸೇತುವೆಯನ್ನೇಕೆ ಕಟ್ಟ ಬಾರದು? ಎಂದೆನಿಸಿತು. ಮರುದಿನ ಬೆಳಗ್ಗೆಯಿಂದಲೇ ಆತ ಸೇತುವೆ ನಿರ್ಮಿಸಲು ಆರಂಭಿಸಿದ.

ಅದನ್ನು ನೋಡಿದ ದಾರಿಹೋಕನೊಬ್ಬ, ‘ಅಯ್ಯಾ ಮುದುಕ! ನೀನೇನು ಈ ದಾರಿಯಲ್ಲಿ ಮತ್ತೊಮ್ಮೆ ಬರ‍್ತೀಯಾ? ಇಲ್ಲ ತಾನೆ? ಹೀಗಿರುವಾಗ ಅಂಥ ಉಸಾಬರಿ ಗೇಕೆ ಹೋಗ್ತೀಯಾ? ಸುಮ್ಮನೆ ಯಾಕೆ ತೊಂದರೆ ತಗೋ ತಿಯಾ? ಎಂದು ಕೇಳಿದ. ‘ಎಲ್ಲರೂ ನಿನ್ನಂತೆ ಯೋಚಿಸುವುದರಿಂದ ಇಷ್ಟು ವರ್ಷವಾದರೂ ಸೇತುವೆ ಯನ್ನು ಯಾರೂ ಕಟ್ಟಿಲ್ಲ. ಇದು ನನಗೆ ಗೊತ್ತಾಗಿಯೂ, ನಾನೂ ಮುಂದೆ ಸಾಗಿದರೆ, ನನಗೂ ಉಳಿದವರಿಗೂ ಏನು ವ್ಯತ್ಯಾಸ? ಜಗತ್ತಿನಲ್ಲಿ ಪ್ರತಿ ಸೇತುವೆಯ ನಿರ್ಮಾಣದ ಹಿಂದೆ ಸ್ನೇಹ ಸೇತುವೆಯ ಉದ್ದೇಶವಿದೆ’ ಎಂದು ಹೇಳಿದ ಆ ವೃದ್ಧ ಸೇತುವೆ ನಿರ್ಮಾಣಕ್ಕೆ ಮುಂದಾದ.

ಮದುವೆ: ಹೀಗೇಕೆ?!
ಒಮ್ಮೆ ಮಧ್ಯವಯಸ್ಕ ಗಂಡನೊಬ್ಬ ಓಶೋ ಅವರನ್ನು ಕೇಳಿದನಂತೆ, ‘ನಾನು ಎಂಟು ಸಲ ಮದುವೆಯಾಗಿದ್ದೇನೆ. ಪ್ರತಿ ಸಲ ಮದುವೆಯಾದ ಬಳಿಕ ನಾನು ತಪ್ಪು ಮಾಡಿದೆ ಅಂತ ಅನಿಸುತ್ತದೆ. ನಾನು ಕೈ ಹಿಡಿದ ಹೆಂಗಸು ನನಗೆ ಹೇಳಿ ಮಾಡಿಸಿದವಳಲ್ಲ ಎಂದು ಭಾಸವಾಗುತ್ತದೆ. ಹೀಗಾಗಿ ಪ್ರತಿ ಮದುವೆಯೂ ಬೇಸರ, ವಿಚ್ಛೇದ ನದಲ್ಲಿಯೇ ಕೊನೆಗೊಳ್ಳುತ್ತದೆ. ಹೀಗೇಕೆ?’ ಅದಕ್ಕೆ ಓಶೋ ಹೇಳುತ್ತಾರೆ, ‘ಅಬ್ಬಾ ಎಂಟು ಮದುವೆ!

ಪ್ರತಿ ಸಲವೂ ಕೆಟ್ಟ ಆಯ್ಕೆ! ಪ್ರತಿ ಬಾರಿ ಉತ್ತಮ ಹೆಂಡತಿಯನ್ನೇ ಆರಿಸಬೇಕೆಂದು ಎಚ್ಚರವಹಿಸಿ, ಈ ಸಲ ಮೋಸ ಹೋಗಬಾರದು ಅಂದುಕೊಂಡರೂ ಮೋಸ ಹೋಗುತ್ತಿದ್ದೀಯಾ. ನೀನು ಆರಿಸುವ ಹೆಂಗಸು ಭಿನ್ನವಾಗಿಲ್ಲ ಎಲ್ಲರೂ ಒಂದೇ ಅಂತ ಭಾವಿಸಿದ್ದೀಯಾ. ಆದರೆ ಅವರು ಭಿನ್ನವಾಗಿರಬಹುದು ಅಥವಾ ಇಲ್ಲದಿರ ಬಹುದು. ಆದರೆ ಅವರನ್ನು ಆರಿಸುವವನು ಮಾತ್ರ ನೀನೊಬ್ಬನೇ. ಹೀಗಿರುವಾಗ ನೀನು ಯಾವ ಬದಲಾವಣೆ ನಿರೀಕ್ಷಿಸಲು ಸಾಧ್ಯ? ಆಯ್ಕೆ ಮಾಡುವವನು ಒಬ್ಬನೇ ಆದರೆ, ಆಯ್ಕೆಯೂ ಒಂದೇ ಆಗಿರುತ್ತದೆ. ನೀನು ಆರಿಸುವ ಹೆಂಗಸಿನ ಮುಖ, ಕೂದಲ ವಿನ್ಯಾಸ, ಮೈಮಾಟ, ಮೈಬಣ್ಣ, ಕಣ್ಣಕಾಂತಿ… ಬೇರೆ ಬೇರೆ ಇರಬಹುದು.

ಇವು ಅಪ್ರಸ್ತುತ ಸಂಗತಿಗಳು. ಮದುವೆಗೂ ಮೂಗಿನ ಉದ್ದಕ್ಕೂ, ಕಣ್ಣಕಾಂತಿಗೂ, ದೇಹದ ಮೈಮಾಟಕ್ಕೂ ಸಂಬಂಧವೇ ಇಲ್ಲ. ಒಂದು ವೇಳೆ ಹೆಂಡತಿ ಅವಳ ಕೂದಲ ಬಣ್ಣವನ್ನೇನಾದರೂ ಬದಲಿಸಿಕೊಂಡರೆ ಅದನ್ನು ಗಮನಿಸುವ ಕಟ್ಟ ಕಡೆಯ ವ್ಯಕ್ತಿಯೇ ಗಂಡ! ಇಲ್ಲಿ ಮುಖ್ಯವಾಗುವ ಅಂಶವೇನೆಂದರೆ, ಯಾಕೆ ನೀನು ಅವಳನ್ನೇ ಇಷ್ಟಪಡುತ್ತೀಯಾ ಎಂಬುದು. ಅವಳನ್ನು ಇಷ್ಟಪಟ್ಟಿದ್ದೇಕೆ? ಪದೇ ಪದೆ ಒಂದೇ ತರಹದ ಹೆಂಗಸನ್ನು ಆಯ್ಕೆ ಮಾಡಿದ್ದೇಕೆ? ನೀನು ಆಯ್ಕೆ ಮಾಡಿದವ ರೆಲ್ಲ ಒಂದೇ ರೀತಿಯವರು ಏಕೆ? ನೀನು ಪ್ರತಿಸಲ ಹೆಂಗಸರನ್ನು ಬದಲಿಸಿದರೂ, ನಿನಗೆ ಬೇಕಾದ ಹೆಂಗಸು ಸಿಗುತ್ತಾರೆಂಬುದಕ್ಕೆ ಗ್ಯಾರಂಟಿ ಇಲ್ಲ. ಆಯ್ಕೆ ಮಾಡುವಾಗ ಸರಿ ಕಂಡಿದ್ದು ಕೆಲವು ದಿನಗಳಲ್ಲಿ ಸರಿ ಕಾಣದೇ ಹೋಗಬಹುದು. ಹೆಂಗಸರು ಹೇಗೇ ಇರಲಿ, ನೀನು ಬದಲಾಗುವುದಿಲ್ಲ. ನಿನ್ನಲ್ಲಿ ಪರಿವರ್ತನೆ ಯಿಲ್ಲದೇ ಎಷ್ಟು ಸಲ ಆರಿಸಿದರೂ ಅಷ್ಟೇ. ನಿನಗೆ ಒಂಥರಾ ಧೃತರಾಷ್ಟ್ರನ ಪಿಡುಗು’.

ಆಮೆ ಪರ್ಸ್ ಕಳೆದುಕೊಂಡಾಗ…

ಆಮೆ ಅದರ ಪಾಡಿಗೆ ರಸ್ತೆ ದಾಟುತ್ತಿತ್ತು. ಅದನ್ನು ಹಿಂಬಾಲಿಸಿದ ಎರಡು ಬಸವನಹುಳುಗಳು (snail) ಆಮೆಯ ಪರ್ಸನ್ನು  ಎಗರಿಸಿ ಪರಾರಿಯಾದವು. ಆಮೆ ‘ಕಳ್ಳ..ಕಳ್ಳ..’ ಎಂದು ಜೋರಾಗಿ ಕಿರುಚಿಕೊಂಡಿತು.

ಇದನ್ನು ಕೇಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ‘ಏನಾಯಿತು? ಯಾಕೆ ಕಿರುಚಿಕೊಂಡೆ?’ ಎಂದು ಪೊಲೀಸರು ಆಮೆಯನ್ನು ಕೇಳಿದರು. ಆಗ ಆಮೆ, ‘ಒಟ್ಟಾರೆ ಏನಾಯಿತು ಎಂಬುದೇ ಗೊತ್ತಾಗುತ್ತಿಲ್ಲ. ಜೋರಾಗಿ ಓಡುತ್ತಾ ಬಂದ ಎರಡು ಬಸವನಹುಳುಗಳು ನನ್ನ ಪರ್ಸನ್ನು ಎಗರಿಸಿಕೊಂಡು ಓಡಿ ಹೋದವು. ಎಲ್ಲವೂ ಅರೆಕ್ಷಣದಲ್ಲಿ ನಡೆದುಹೋಯಿತು’ ಎಂದು ನಡುಗುತ್ತಾ ಹೇಳಿತು.

ಆದರೆ ಪೊಲೀಸರು ಆಮೆಯನ್ನು ಬಂಧಿಸಿದರು. ಮರುದಿನ ಪತ್ರಿಕೆಯನ್ನು ನೋಡಿದಾಗಲೇ ಆಮೆಗೆ ತನ್ನನ್ನು ಬಂಧಿಸಿದ ಕಾರಣ ಗೊತ್ತಾಗಿದ್ದು. ಪತ್ರಿಕೆಯಲ್ಲಿ ‘ಪೊಲೀಸರ ದಾರಿ ತಪ್ಪಿಸಿದ ಆಮೆ’ ಎಂಬ ಈ ಸುದ್ದಿ ಪ್ರಕಟವಾಗಿತ್ತು.