Friday, 13th December 2024

ಸ್ಥೂಲಕಾಯ – ತಪ್ಪು ಕಲ್ಪನೆಗಳು

ವೈದ್ಯವೈವಿಧ್ಯ

ಡಾ.ಎಚ್‌.ಎಸ್‌.ಮೋಹನ್‌

drhsmohan@gmail.com

ಆಧುನಿಕ ಜೀವನದಲ್ಲಿ ಸ್ಥೂಲಕಾಯದ ವ್ಯಕ್ತಿಗಳನ್ನು ನಾವು ಎಂದರಲ್ಲಿ ಕಾಣುತ್ತೇವೆ. ಅದರಲ್ಲಿಯೂ ಈ ಕಂಪ್ಯೂಟರ್ ಮತ್ತು
ಸಾಫ್ಟ್‌ವೇರ್‌ ಯುಗಗಳು ತೊಡಗಿದ ಮೇಲೆ ಸ್ಥೂಲಕಾಯದ ಸಮಸ್ಯೆಗಳು ಮುಂದುವರಿದ ದೇಶಗಳಲ್ಲಿ ಮಾತ್ರವಲ್ಲದೇ, ಭಾರತ ದಂಥ ದೇಶಗಳಲ್ಲಿಯೂ ಬಹಳಷ್ಟು ಜಾಸ್ತಿಯಾಗಿದೆ.

ಕಳೆದ ವರ್ಷ ಈ ಕೋವಿಡ್ ಕಾಯಿಲೆ ಬಂದ ನಂತರ ಸ್ಥೂಲಕಾಯದ ವ್ಯಕ್ತಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ಎಂದು ಇತ್ತೀಚಿನ ಒಂದು ಸಮೀಕ್ಷೆ ತಿಳಿಸುತ್ತದೆ. ಅದರಲ್ಲೂ ಈಗೀಗ ಚಿಕ್ಕ ಮಕ್ಕಳಿಗೂ ಆನ್‌ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಮಕ್ಕಳ ಆಟ, ದೈಹಿಕ ವ್ಯಾಯಾಮ ಸಂಪೂರ್ಣವಾಗಿ ಇಲ್ಲದೆ ಆ ವಯಸ್ಸಿನಲ್ಲಿಯೂ ಬೊಜ್ಜು ಬರುತ್ತಿದೆ ಎಂಬುದು ಚಿಂತಿಸುವ ವಿಚಾರ.

ಬೊಜ್ಜು ಅಥವಾ ಸ್ಥೂಲಕಾಯದ ಬಗ್ಗೆ ಜನಸಾಮಾನ್ಯರಲ್ಲಿ ಬಹಳಷ್ಟು ತಪ್ಪು ತಿಳುವಳಿಕೆಗಳಿವೆ. ಅದರ ಬಗ್ಗೆ ಒಂದು ನೋಟ ಹರಿಸೋಣ. ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಪ್ರಕಾರ ಅಮೆರಿಕದಂತಹ ಮುಂದುವರಿದ ದೇಶದಲ್ಲಿ ವಯಸ್ಕರಲ್ಲಿ ಶೇ43ರಷ್ಟು ಜನರು ಸ್ಥೂಲಕಾಯದವರಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ 650 ಮಿಲಿಯನ್ (65 ಕೋಟಿ) ಜನರು ಸ್ಥೂಲಕಾಯದವರಿದ್ದಾರೆ.

ಸ್ಥೂಲಕಾಯದಿಂದ ಬರುವ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚಿನವರಿಗೆ ಸಾಮಾನ್ಯವಾಗಿ ಅರಿವಿದೆ. ಆದರೆ ಹಾಗೆಯೇ ಹಲವಾರು ತಪ್ಪು ಕಲ್ಪನೆಗಳೂ ಇವೆ. ಜತೆಗೆ ಅವರಿಗೆ ಅದು ಸಾಮಾಜಿಕವಾಗಿ ತೊಂದರೆ ಮಾಡುವುದಲ್ಲದೆ ಹಲವಾರು ಮಾನಸಿಕ ಸಮಸ್ಯೆಗಳೂ ಉಂಟಾಗಬಹುದು. ಒಂದು ಉದಾಹರಣೆ ಕೊಡುವುದಾದರೆ 2020ರಲ್ಲಿ ಕೈಗೊಂಡ ಒಂದು ಮೆಗಾ ಸಮೀಕ್ಷೆ ತೂಕ ಜಾಸ್ತಿಯಾಗುವುದು ಮತ್ತು ಮಾನಸಿಕ ಆರೋಗ್ಯ ಕುಂಠಿತಗೊಳ್ಳುವುದು ಇವುಗಳ ಖಚಿತ ಸಂಬಂಧವನ್ನು ದೃಢೀಕರಿಸು ತ್ತದೆ.

ತಪ್ಪು ಕಲ್ಪನೆ 1
ಸ್ಥೂಲಕಾಯ ಆಗದಿರಲು ಕಡಿಮೆ ಆಹಾರ ಸೇವಿಸಿ, ಹೆಚ್ಚಾಗಿ ಓಡಾಡಿ: ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೋರಿಯ ಆಹಾರವನ್ನು ಬಹಳ ದೀರ್ಘಕಾಲದವರೆಗೆ ಸೇವಿಸುವುದು ಸ್ಥೂಲಕಾಯವಾಗಲು ನೇರ ಕಾರಣವಾಗುವುದು ಹೌದು. ಸ್ಥೂಲ ಕಾಯವನ್ನು ಆಗದಂತೆ ತಡೆಯಲು ಇರುವ ಉಪಾಯಗಳಲ್ಲಿ ಕಡಿಮೆ ಕ್ಯಾಲೋರಿಯ ಆಹಾರ ಸೇವನೆ ಮತ್ತು ಹೆಚ್ಚಿನ ದೈಹಿಕ ಚಟುವಟಿಕೆ ಅಥವಾ ಶ್ರಮ ಹಾಕುವುದು – ಈ ಕ್ರಿಯೆಗಳು ಅವಶ್ಯಕ ಹೌದು.

ಆಹಾರ ಕ್ರಮ ಮತ್ತು ದೈಹಿಕ ವ್ಯಾಯಾಮ ಮತ್ತು ಚಟುವಟಿಕೆ ಮುಖ್ಯವಾದ ಅಂಶಗಳು ಹೌದಾದರೂ ಅವುಗಳಿಗೆ ಸಂಬಂಧ ವಿಲ್ಲದ ಬೇರೆಯ ಅಂಶಗಳು ಸಹಿತ ಸ್ಥೂಲಕಾಯದ ಮೇಲೆ ಪ್ರಭಾವ ಹೊಂದಿವೆ. ಅವುಗಳೆಂದರೆ – ನಿದ್ರೆ ಅಗತ್ಯಕ್ಕಿಂತ ಕಡಿಮೆ ಮಾಡುವುದು, ಮಾನಸಿಕ ಒತ್ತಡ, ದೀರ್ಘಕಾಲೀನ ದೈಹಿಕ ನೋವು, ಹಾರ್ಮೋನಿನ ವ್ಯತ್ಯಾಸಗಳು ಹಾಗೂ ಕೆಲವು ಔಷಧ ಗಳನ್ನು ದೀರ್ಘಕಾಲ ಬಳಸುವುದರಿಂದ. ಹೀಗೆ ಮೇಲಿನ ಇತರ ಕಾರಣಗಳಿರುವಾಗ ಜಾಸ್ತಿ ಆಹಾರ ಸೇವನೆಯು ಕಾಯಿಲೆಯ ಲಕ್ಷಣವಾಗಿರಬಹುದು. ಅಲ್ಲದೆ ಮೇಲಿನ ಹಲವು ಕಾರಣಗಳು ಒಟ್ಟಾಗಿ ಕೆಲಸ ಮಾಡಿ ಸ್ಥೂಲಕಾಯ ಜಾಸ್ತಿಯಾಗಲು ಕಾರಣ ವಾಗಬಹುದು.

ಉದಾಹರಣೆಗೆ, ಮಾನಸಿಕ ಒತ್ತಡದಿಂದ ಸ್ಥೂಲಕಾಯ ಬರುವ ಸಾಧ್ಯತೆಯನ್ನು ಹೆಚ್ಚಿಸಬಹುದು. ವಿಪರೀತ ತೂಕವಾದಾಗ ಅಂತಹ ವ್ಯಕ್ತಿಯನ್ನು ಉಳಿದ ಸಾಮಾನ್ಯ ಜನರು ಒಂದು ಕುಹಕ ದೃಷ್ಟಿಯಿಂದ ನೋಡುತ್ತಾರೆ. ಆಗ ಈಗಾಗಲೇ ಸ್ಥೂಲಕಾಯ
ಹೊಂದಿರುವ ವ್ಯಕ್ತಿಗಳಿಗೆ ಮೇಲಿನ ಕುಹಕ ನೋಟ ಮತ್ತಷ್ಟು ಮಾನಸಿಕ ಒತ್ತಡ ಹೆಚ್ಚಿಸಿ ಸ್ಥೂಲಕಾಯ ಮತ್ತಷ್ಟು ಜಾಸ್ತಿಯಾಗಲು ಕಾರಣವಾಗಬಹುದು.

ಅಲ್ಲದೆ ಮಾನಸಿಕ ಒತ್ತಡವು ವ್ಯಕ್ತಿಯ ನಿದ್ರೆಯ ಗುಣಮಟ್ಟವನ್ನು ಕುಂಠಿತಗೊಳಿಸಿ ಆತನಿಗೆ ಸರಿಯಾಗಿ ನಿದ್ರೆ ಬರದಂತೆ ಮಾಡ ಬಹುದು. ಇದು ಸ್ಥೂಲಕಾಯ ಹೆಚ್ಚಾಗಲು ಮತ್ತೊಂದು ಕಾರಣವಾಗಬಹುದು. ಇದರೊಂದಿಗೆ ಕಡಿಮೆ ನಿದ್ರೆಯೂ ವ್ಯಕ್ತಿಯ ಮಾನಸಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಿದ್ರೆಯಲ್ಲಿ ಉಸಿರು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ತೋರುವ ಸ್ಲೀಪ್ ಏಪ್ನಿಯಾ ಎಂಬ ಲಕ್ಷಣ ಸ್ಥೂಲಕಾಯದವರ ಜಾಸ್ತಿ ಕಂಡುಬರುತ್ತದೆ.

ಹಾಗಾಗಿ ಇದೊಂದು ವಿಷವರ್ತುಲವಾಗಿ ಪರಿಣಮಿಸಬಹುದು. ವ್ಯಕ್ತಿಯ ತೂಕ ಜಾಸ್ತಿಯಾದಂತೆ ನಿದ್ರೆಯಲ್ಲಿ ಉಸಿರು ಕಟ್ಟುವ ಲಕ್ಷಣ ಜಾಸ್ತಿಯಾಗಬಹುದು. ಇದರಿಂದ ನಿದ್ರೆ ಕಡಿಮೆ ಆಗಬಹುದು. ಇವೆಲ್ಲವೂ ಸೇರಿ ಮಾನಸಿಕ ಒತ್ತಡ ಜಾಸ್ತಿಯಾಗಿ ವ್ಯಕ್ತಿಯ ತೂಕ ಮತ್ತಷ್ಟು ಜಾಸ್ತಿಯಾಗಬಹುದು.

ದೀರ್ಘಕಾಲೀನ ದೈಹಿಕ ನೋವಿಗೂ ಸ್ಥೂಲಕಾಯಕ್ಕೂ ಸಂಬಂಧವಿದೆ ಎನ್ನಲಾಗಿದೆ. ಇದಕ್ಕೆ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಹಾಗೂ ಕೆಲವೊಮ್ಮೆ ಇದರ ಕಾರಣಗಳು ಬಹಳ ಸಂಕೀರ್ಣ (Complex) ಎನಿಸುವುದೂ ಇದೆ. ಇದರಲ್ಲಿ ಹಲವಾರು ರಾಸಾಯನಿಕ ಅಂಶಗಳೂ ಸೇರಿರುವ ಸಾಧ್ಯತೆಯಿದೆ. ಹಾಗೆಯೇ ನಿದ್ರೆಯ ಪ್ರಮಾಣ, ಮಾನಸಿಕ ಖಿನ್ನತೆ ಹಾಗೂ ಜೀವನ ಕ್ರಮ ಅಥವಾ ಶೈಲಿ- ಇವೆ ಸೇರಿವೆ. ದೀರ್ಘಕಾಲದ ನೋವು ಎಲ್ಲರಿಗೂ ಗೊತ್ತಿರುವ ಹಾಗೆ ವ್ಯಕ್ತಿಯ ಮಾನಸಿಕ ಒತ್ತಡ ವನ್ನು ಹೆಚ್ಚಿಸುತ್ತದೆ, ಹಾಗೆಯೇ ನಿದ್ರೆಯನ್ನು ಕಡಿಮೆ ಮಾಡುತ್ತದೆ.

ಇವೆಲ್ಲವುಗಳೂ ಒಟ್ಟಾಗಿ ಸೇರಿ ವ್ಯಕ್ತಿಯ ತೂಕ ಜಾಸ್ತಿಯಾಗುತ್ತದೆ. ಹಾಗಾಗಿ ಸ್ಥೂಲಕಾಯದವರಲ್ಲಿ ಮಾನಸಿಕ ಒತ್ತಡ, ನಿದ್ರೆ ಮತ್ತು ನೋವು ಇವು ಮೂರು ಒಂದಕ್ಕೊಂದು ಸಂಬಂಧಪಟ್ಟ ವಿಚಾರಗಳು. ಮೊದಲೇ ತಿಳಿಸಿದಂತೆ ಒಂದು ವ್ಯಕ್ತಿಗಿಂತ ಮತ್ತೊಂದು ವ್ಯಕ್ತಿಯಲ್ಲಿ ಕಾರಣಗಳು ಭಿನ್ನವಾಗಿರುತ್ತವೆ. ಹಾಗಾಗಿ ಕಡಿಮೆ ಆಹಾರ ಸೇವಿಸಿ, ಹೆಚ್ಚು ಓಡಾಡಿ ಎಂದರೆ
ಸ್ಥೂಲಕಾಯವನ್ನು ತಡೆದಂತಾಗುವುದಿಲ್ಲ.

ತಪ್ಪು ಕಲ್ಪನೆ 2
ಸ್ಥೂಲಕಾಯ ಡಯಾಬಿಟಿಸ್ ಕಾಯಿಲೆಯನ್ನು ಉಂಟುಮಾಡುತ್ತದೆ: ಸ್ಥೂಲಕಾಯ ನೇರವಾಗಿ ಡಯಾಬಿಟಿಸ್ ಕಾಯಿಲೆ ಯನ್ನು ಉಂಟುಮಾಡುವುದಿಲ್ಲ. ಸ್ಥೂಲಕಾಯದ ಎಲ್ಲಾ ವ್ಯಕ್ತಿಗಳೂ ಡಯಾಬಿಟಿಸ್ ಕಾಯಿಲೆಗೆ ಒಳಗಾಗುವುದಿಲ್ಲ. ಆದರೆ ಆ ಕಾಯಿಲೆ ಬರಲು ಒಂದು ರಿ ಫ್ಯಾಕ್ಟರ್ ಹೌದು.

ತಪ್ಪು ಕಲ್ಪನೆ 3
ಸ್ಥೂಲಕಾಯದ ವ್ಯಕ್ತಿಗಳೆ ಸೋಮಾರಿಗಳು: ಸ್ಥೂಲಕಾಯದ ವ್ಯಕ್ತಿಗಳಲ್ಲಿ ಹೆಚ್ಚಿನವರ ಜೀವನ ಶೈಲಿ ಎಂದರೆ ಹೆಚ್ಚು ಚಟುವಟಿಕೆಯಲ್ಲಿ ತೊಡಗಿಕೊಳ್ಳದೆ ಇರುವುದು. ಹೌದು ಅಂತಹವರು ಹೆಚ್ಚು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಅವರ ತೂಕ ಕಡಿಮೆಯಾಗುವುದು ನಿಜ. ಆದರೆ ಅವಷ್ಟೇ ಅಲ್ಲ. 2011 ರಲ್ಲಿ ಈ ಬಗ್ಗೆ ಒಂದು ಬೃಹತ್ ಅಧ್ಯಯನ ಕೈಗೊಳ್ಳ ಲಾಯಿತು. 20-79 ವರ್ಷಗಳ 2832 ವಯಸ್ಕ ವ್ಯಕ್ತಿಗಳ 4 ದಿನಗಳ ದೈಹಿಕ ಚಟುವಟಿಕೆಯನ್ನು ಎಕ್ಸಲೋಮೀಟರ್ ಉಪಕರಣ ಉಪಯೋಗಿಸಿ ಅಳೆಯಲಾಯಿತು. ಅವರ ತೂಕ ಹೆಚ್ಚಿದಂತೆ ಅವರ ಹೆಜ್ಜೆಯ ಎಣಿಕೆ ಕಡಿಮೆಯಾಗತೊಡಗಿತು. ಆದರೆ ಇದರಲ್ಲಿನ ವ್ಯತ್ಯಾಸ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಅದರಲ್ಲಿಯೂ ಮಹಿಳೆಯರಲ್ಲಿ ಈ ವ್ಯತ್ಯಾಸ ಬಹಳಷ್ಟು ಇರಬೇಕಿತ್ತು, ಆದರೆ ಅಷ್ಟಿರಲಿಲ್ಲ. ಈ ಅಧ್ಯಯನ ಕೈಗೊಂಡಾಗ ದಿನದಲ್ಲಿ ಈ ಮಹಿಳೆಯರು ಎಷ್ಟು ಹೆಜ್ಜೆ ಹಾಕುತ್ತಿದ್ದರು ಎಂಬುದು ಈ ಕೆಳಗಿನ ಪಟ್ಟಿಯಲ್ಲಿದೆ.

*ಆರೋಗ್ಯವಂತ ತೂಕವಿರುವ ಮಹಿಳೆಯರು – 8819 ಹೆಜ್ಜೆಗಳು
*ತೂಕ ಹೆಚ್ಚಿದ್ದ ಮಹಿಳೆಯರು – 8506 ಹೆಜ್ಜೆಗಳು.
*ವಿಪರೀತ ಸ್ಥೂಲಕಾಯದ ಮಹಿಳೆಯರು – 7546 ಹೆಜ್ಜೆಗಳು.

ತೂಕ ಹೆಚ್ಚಿರುವ ಮೇಲಿನ ಮಹಿಳೆಯರಲ್ಲಿ ಪ್ರತಿಯೊಂದು ಹೆಜ್ಜೆಗೂ ಹೆಚ್ಚು ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂಬ ಲೆಕ್ಕಾಚಾರದ ಮೇಲೆ ಒಟ್ಟಾರೆ ಶಕ್ತಿ ಕಳೆದುಕೊಳ್ಳುವ ಪ್ರಮಾಣ ಮೇಲಿನ ಮೂರೂ ಗುಂಪುಗಳಲ್ಲಿ ಬಹಳಷ್ಟು ವ್ಯತ್ಯಾಸವಿಲ್ಲ ಎನ್ನಬಹುದು.

ಹಾಗೆಂದು ಆರೋಗ್ಯವಂತ ಜೀವನ ಶೈಲಿಗೆ ದೈಹಿಕ ಚಟುವಟಿಕೆ ಅಥವಾ ಶ್ರಮ ಬೇಡ ಅಂತಲ್ಲ. ಆದರೆ ಒಟ್ಟು ಕಾರಣಗಳು ತುಂಬಾ ಸಂಕೀರ್ಣವಾಗಿವೆ. ಮತ್ತೊಂದು ಅಂಶ ಎಂದರೆ ಎಲ್ಲಾ ವ್ಯಕ್ತಿಗಳಿಗೂ ದೈಹಿಕ ಶ್ರಮ ಅಥವಾ ಚಟುವಟಿಕೆ ಕೈಗೊಳ್ಳಲು
ಸಾಧ್ಯವಾಗದಿರಬಹುದು. ಕೆಲವೊಂದು ದೈಹಿಕ ಊನವಿರುವ ವ್ಯಕ್ತಿಗಳಲ್ಲಿ ಈ ರೀತಿ ದೈಹಿಕ ಶ್ರಮ ಸಾಧ್ಯವಾಗುವುದೇ ಇಲ್ಲ. ಅಲ್ಲದೆ ಮಾನಸಿಕವಾಗಿ ಸಮಸ್ಯೆ ಇರುವ ವ್ಯಕ್ತಿಗಳಲ್ಲಿಯೂ ದೈಹಿಕ ಶ್ರಮ ಕೈಗೊಳ್ಳಲು ಸಾಧ್ಯವಾಗದಿರಬಹುದು. ಹಾಗಾಗಿ
ಮಾನಸಿಕ ಖಿನ್ನತೆಗೂ ಸ್ಥೂಲಕಾಯಕ್ಕೂ ನೇರವಾದ ಸಂಬಂಧವಿದೆ ಎಂದು ಹೇಳಲಾಗುತ್ತದೆ.

ಇನ್ನು ಕೆಲವು ವ್ಯಕ್ತಿಗಳಲ್ಲಿ ಮಾನಸಿಕ ಸಮಸ್ಯೆ ಇಲ್ಲದಿದ್ದರೂ ತಮ್ಮ ಸ್ಥೂಲಕಾಯದ ದೇಹವನ್ನು ಹೊತ್ತು ಮನೆಯಿಂದ ಹೊರ ಬಂದರೆ ಜನರು, ಪರಿಚಿತರು ತಮಗೆ ತಮಾಷೆ ಮಾಡಬಹುದೆಂದು ತಿಳಿದುಕೊಂಡು ದೈಹಿಕ ಶ್ರಮ ಮಾಡದೇ ಮನೆಯ ಒಳಗಡೆಯೇ ಇದ್ದು ಸ್ಥೂಲಕಾಯ ಮತ್ತಷ್ಟು ಜಾಸ್ತಿಯಾಗುವಂತೆ ಮಾಡಿಕೊಳ್ಳುತ್ತಾರೆ.

ತಪ್ಪು ಕಲ್ಪನೆ 4
ಹತ್ತಿರದ ಸಂಬಂಧಿಗಳಲ್ಲಿ ಸ್ಥೂಲಕಾಯ ಇದ್ದರೆ ನಿಮಗೂ ಬರುತ್ತದೆ: ಸ್ಥೂಲಕಾಯಕ್ಕೂ ಮತ್ತು ಜೆನೆಟಿಕ್ಸ್ಗೂ ಇರುವ ಸಂಬಂಧ ತುಂಬಾ ಸಂಕೀರ್ಣವಾದದ್ದು (Complex). ಹತ್ತಿರದ ಸಂಬಂಧಿಗಳಲ್ಲಿ ಸ್ಥೂಲಕಾಯ ಇದ್ದರೆ ನಿಮಗೂ ಬರಬೇಕು ಅಂತೇನಿಲ್ಲ. ಆದರೆ ತಂದೆ ತಾಯಿಯರಲ್ಲಿ ಇದ್ದರೆ ಮಕ್ಕಳಲ್ಲಿ ಬರುವ ಸಾಧ್ಯತೆ ಜಾಸ್ತಿ ಇದೆ. ಹಾಗೆಂದು ಬರಬೇಕೆಂದೇನೂ ಇಲ್ಲ. ಜೀನ್‌ಗಳ ಪ್ರಭಾವ ಮತ್ತು ವಾತಾವರಣದ ಪ್ರಭಾವ ಇವುಗಳು ಸ್ಥೂಲಕಾಯದ ಮೇಲೆ ಯಾವ ಪರಿಣಾಮ ಹೊಂದಿವೆ ಎಂಬುದು ಸ್ವಲ್ಪ ಕ್ಲಿಷ್ಟಕರವಾದ ವಿಚಾರ.

ಒಂದೇ ಕುಟುಂಬದ ಸದಸ್ಯರು ಒಂದೇ ಜೀನ್‌ಗಳನ್ನು ಹೊಂದಿರುತ್ತಾರೆ, ಒಟ್ಟಿಗೇ ಜೀವಿಸುತ್ತಾರೆ. ಅವರುಗಳ ಆಹಾರ ಕ್ರಮ ಮತ್ತು ಜೀವನ ರೀತಿ ಒಂದೇ ರೀತಿಯದ್ದಾಗಿರುತ್ತದೆ. 1990ರಲ್ಲಿ ಸಂಶೋಧಕರು ಜೀ ಮತ್ತು ವಾತಾವರಣ – ಇವುಗಳ ಮೇಲೆ ಒಂದು ಅಧ್ಯಯನ ಕೈಗೊಂಡರು. ಇದರ ಫಲಿತಾಂಶ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿದೆ.

ವಿeನಿಗಳು ಎರಡು ರೀತಿಯ ಅವಳಿ ಜವಳಿ ಮಕ್ಕಳಲ್ಲಿ ಅಧ್ಯಯನ ಕೈಗೊಂಡರು. ಒಂದು ಗುಂಪಿನಲ್ಲಿ ಅವಳಿ ಜವಳಿ ಮಕ್ಕಳನ್ನು ಬೇರೆ ಬೇರೆಯ ವಾತಾವರಣದಲ್ಲಿ ಬೆಳೆಸಲಾಗಿತ್ತು. ಇನ್ನೊಂದು ಗುಂಪಿನಲ್ಲಿ ಒಂದೇ ವಾತಾವರಣದಲ್ಲಿ ಬೆಳೆಸಲಾಗಿತ್ತು. ಹಾಗೆ ಮಾಡುವುದರಿಂದ ಜೆನೆಟಿಕ್ಸ್ ಮತ್ತು ವಾತಾವರಣದ ಭಿನ್ನತೆಯನ್ನು ಹೋಗಲಾಡಿಸಿದರು. ಅವರ ಅಧ್ಯಯನದ ಅಂತಿಮ
ತೀರ್ಮಾನ ಎಂದರೆ ದೇಹದ ಸ್ಥೂಲಕಾಯದ ಮೇಲೆ ಜೆನೆಟಿಕ್ಸ್ನ ಪ್ರಭಾವ ಗಮನಾರ್ಹವಾಗಿದೆ ಇರುವುದು ಹೌದು.

ಆದರೆ ಮಕ್ಕಳು ಬೆಳೆಯುವ ವಾತಾವರಣ ಯಾವ ಪ್ರಭಾವವನ್ನೂ ಹೊಂದಿಲ್ಲ. 1986ರಲ್ಲಿ ಕೈಗೊಂಡ ಇನ್ನೊಂದು ಅಧ್ಯಯನ ದಲ್ಲಿ ಇದೇ ರೀತಿಯ ಫಲಿತಾಂಶ ಬಂದಿತು. ದತ್ತಕ್ಕೆ ತೆಗೆದುಕೊಂಡ ಮಕ್ಕಳ ತೂಕ ಅವರ ಸ್ವಂತ ತಾಯಿ ತಂದೆಗಳ ತೂಕಕ್ಕೆ ಅನುಗುಣವಾಗಿರುತ್ತದೆಯೇ ಹೊರತು ದತ್ತಕ್ಕೆ ತೆಗೆದುಕೊಂಡ ಪಾಲಕರ ತೂಕಕ್ಕೆ ಅನುಗುಣವಾಗಿರುವುದಿಲ್ಲ. ಇತ್ತೀಚಿನ ಕೆಲವು ಅಧ್ಯಯನಗಳು ವಾತಾವರಣದ್ದೂ ಇದರಲ್ಲಿ ಪಾತ್ರವಿದೆ ಎಂದು ಹೇಳುವುದಾದರೂ ಸ್ಥೂಲಕಾಯ ಉಂಟಾಗಲು ಜೆನೆಟಿಕ್ಸ್ ನ ಹಿನ್ನೆಲೆ ಹೆಚ್ಚು ಪಾತ್ರ ವಹಿಸುತ್ತವೆ ಎಂದು ತಿಳಿಸುತ್ತವೆ. ಈ ಬಗ್ಗೆ ಅಮೆರಿಕದ ಸಿ.ಡಿ.ಸಿಯಲ್ಲಿ ಹಲವಾರು ಅಧ್ಯಯನಗಳು ನಡೆದಿವೆ. ಅದರ ಆಧಾರದ ಮೇಲೆ ಅಲ್ಲಿನ ವಿeನಿಗಳು ಯಾವುದೇ ಒಂದು ಏಕೈಕ ಜೆನೆಟಿಕ್ ಕಾರಣವನ್ನು ಈ ಬಗೆಗೆ ಹುಡುಕಲು ಸಾಧ್ಯವಾಗಿಲ್ಲ.

2006 ರಿಂದ ಈ ಬಗೆಗೆ ಕೈಗೊಳ್ಳಲಾದ ವಿವಿಧ ಅಧ್ಯಯನಗಳು – ಸ್ಥೂಲಕಾಯಕ್ಕೆ ಸಂಬಂಧಿಸಿದ 50ಕ್ಕೂ ಹೆಚ್ಚು ಜೀನ್ ಗಳನ್ನು ಹುಡುಕಲಾಗಿದೆ. ಹೆಚ್ಚಿನವು ತುಂಬಾ ಕಡಿಮೆ ಪ್ರಭಾವ ಹೊಂದಿವೆ. ಸ್ಥೂಲಕಾಯಕ್ಕೆ ಸಂಬಂಧಿಸಿದ ಪ್ರಮುಖ ಜೀನ್ ಎಂದರೆ FTO ಜೀನ್‌ನಲ್ಲಿ ಬದಲಿ ಹೊಂದಿದ ಜೀನ್. ಈ ಬದಲಿ ಹೊಂದಿದ ಜೀನ್ ಸ್ಥೂಲಕಾಯಕ್ಕೆ ಶೇ.20-30 ಕಾರಣವಾಗುತ್ತದೆ ಎಂದು 2011 ರ ಅಧ್ಯಯನ ತಿಳಿಸುತ್ತದೆ.

ಮೇಲೆ ತಿಳಿಸಿದಂತೆ ಜೆನೆಟಿಕ್ಸ್ ನ ಪ್ರಭಾವ ಸ್ಥೂಲಕಾಯದ ಮೇಲಿದ್ದರೂ ಸಂಬಂಧಿಕರಲ್ಲಿ ಸ್ಥೂಲಕಾಯ ಇದ್ದರೆ ನಿಮಗೂ ಬರಬೇಕೆಂದೇನೂ ಇಲ್ಲ. ಈ ಮೇಲಿನ ಅಧ್ಯಯನದಲ್ಲಿ ಸಂಶೋಧಕರು FTO ಜೀನ್‌ನ ಬದಲಾದ ಜೀನ್‌ನಲ್ಲಿ ವ್ಯಾಯಾಮ ಅಥವಾ ಪರಿಶ್ರಮವನ್ನು ಕೇಂದ್ರವಾಗಿಟ್ಟುಕೊಂಡು ನೋಡಿದಾಗ ಅವರಿಗೆ ಆಶ್ಚರ್ಯಕರವಾದ ಮಾಹಿತಿ ದೊರಕಿತು.

218000 ಜನರಲ್ಲಿ ಕೈಗೊಂಡ ಈ ಬೃಹತ್ ಅಧ್ಯಯನದಲ್ಲಿ ಆ FTO ಜೀನ್ ನ ಬದಲಿ ಜೀನ್ ಇದ್ದಾಗಲೂ ದೈಹಿಕ ವ್ಯಾಯಾಮ ಅಥವಾ ಪರಿಶ್ರಮ ಮಾಡಿದವರಲ್ಲಿ ಸ್ಥೂಲಕಾಯ ಬರುವ ಸಾಧ್ಯತೆ 27 % ಕಡಿಮೆ ಎಂದು ಗೊತ್ತಾಯಿತು. ತಪ್ಪು ಕಲ್ಪನೆ 5 ಸ್ಥೂಲಕಾಯ ಆರೋಗ್ಯದ ಮೇಲೆ ಪ್ರಭಾವ ಹೊಂದಿಲ್ಲ: ಇದು ಸಂಪೂರ್ಣ ತಪ್ಪು ಕಲ್ಪನೆ. ಎಲ್ಲರಿಗೂ ಗೊತ್ತಿರುವ ಹಾಗೆ ಸ್ಥೂಲ ಕಾಯದವರಲ್ಲಿ ಈ ಕೆಳಗಿನ ಕಾಯಿಲೆಗಳು ಬರುವ ಸಾಧ್ಯತೆ ಜಾಸ್ತಿ.

ಅವೆಂದರೆ – ಡಯಾಬಿಟಿಸ್, ಏರು ರಕ್ತದೊತ್ತಡ, ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು, ಸಂಧಿವಾತ ಕಾಯಿಲೆ, ನಿದ್ರೆಯಲ್ಲಿ ಉಸಿರು ಕಟ್ಟುವುದು ಹಾಗೂ ಹಲವು ಮಾನಸಿಕ ಕಾಯಿಲೆಗಳು. ಹಾಗಾಗಿ ಶೇ.5-10ರಷ್ಟು ಕಡಿಮೆ ಪ್ರಮಾಣದ ತೂಕ ಕಡಿಮೆ ಮಾಡುವುದರಿಂದಲೂ ಆರೋಗ್ಯ ಉತ್ತಮವಾಗುತ್ತದೆ. ಅಂದರೆ ರಕ್ತದೊತ್ತಡ, ರಕ್ತದಲ್ಲಿನ ಕೊಲೆಸ್ಟರಾಲ, ಸಕ್ಕರೆಯ ಪ್ರಮಾಣ ಇವೆ ಸಾಮಾನ್ಯದ ಹತ್ತಿರ ಬರುತ್ತವೆ. ಹಾಗಾಗಿ ಸ್ಥೂಲಕಾಯದವರು ತೂಕ ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ಆದಷ್ಟು ಬೇಗ
ಕೈಗೊಳ್ಳಬೇಕು.