ವಿಶ್ವ ವಿಹಾರ
ಗಣೇಶ್ ಪ್ರಸಾದ್
ganeshshsf@gmail.com
ಉಕ್ರೈನ್ ಸರಕಾರದ ನೆರವಿಲ್ಲದೆ ಈ ದಾಳಿಗಳು ನಡೆದಿರಬಹುದೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಉಕ್ರೇನ್‌ನ ರಕ್ಷಣಾ ಸಚಿವ, ಸರಕಾರವು ಭಾಗಿಯಾಗಿರುವುದನ್ನು ನಿರಾಕರಿಸಿದ್ದಾರೆ. ಜರ್ಮನಿಯ ರಕ್ಷಣಾ ಸಚಿವ, ಈ ವಿಷಯದಲ್ಲಿ ಆತುರದ ತೀರ್ಮಾನಗಳನ್ನು ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ನಾರ್ಡ್ ಸ್ಟ್ರೀಮ್ ಪೈಪ್ ಲೈನ್ ಎಂಬುವುದು ರಷ್ಯಾದಿಂದ ಜುರ್ಮನಿಗೆ ಇಂಧನ ಸರಬರಾಜು ಮಾಡಲು ಸಮುದ್ರದ ಅಡಿಯಲ್ಲಿ ಹಾಕಿದ ಗ್ಯಾಸ್ ಪೈಪ್ ಲೈನ್. ಕಳೆದ ಸೆಪ್ಟೆಂಬರ್‌ನಲ್ಲಿ, ನಾರ್ಡ್ ಸ್ಟ್ರೀಮ್ ೧ ಮತ್ತು ೨ ನ್ನು ಸ್ಫೋಟಿಸಲಾಯಿತು. ಸಾಗರದಡಿಯ ಅನಿಲ ಪೈಪ್ ಲೈನ್‌ಗಳನ್ನು ಯಾರು ಹಾಳು ಮಾಡಿದ್ದು ಎಂಬುದು ತಿಳಿಯಲಿಲ್ಲ. ಕೆಲವು ಯುರೋಪಿಯನ್ ಸರಕಾರಗಳು ರಷ್ಯಾವನ್ನು ಅನುಮಾನಿಸಿದವು.
ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ನಂತರ ಯುರೋಪಿಯನ್ ಸರಕಾರಗಳು ವಿಧಿಸಿದ ನಿರ್ಬಂಧಗಳಿಗೆ ಪ್ರತೀಕಾರವಾಗಿ ಯುರೋಪ್‌ಗೆ ಇಂಧನ ಪೂರೈಕೆಯನ್ನು ಕಡಿತಗೊಳಿಸುವುದಾಗಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬೆದರಿಕೆ ಹಾಕಿದ್ದರು. ಮತ್ತೊಂದೆಡೆ ರಷ್ಯಾವು, ಅಮೆರಿಕ ಮತ್ತು
ಬ್ರಿಟನ್‌ಗಳನ್ನು ದೂಷಿಸಿತು. ಇದೀಗ ಅಮೆರಿಕನ್ ಗುಪ್ತಚರ ಅಧಿಕಾರಿಗಳು, ಹಾಗೆಯೇ ಜರ್ಮನ್ ಮತ್ತು ಬ್ರಿಟಿಷ್ ಸುದ್ದಿ ಸಂಸ್ಥೆಗಳ ತನಿಖೆಯಲ್ಲಿ ತಿಳಿದು ಬಂದಿದ್ದೇನೆಂದರೆ, ಉಕ್ರೈನ್ ಸರಕಾರಕ್ಕೆ ಸಂಬಂಧಿಸದ, ಆದರೆ ಉಕ್ರೇನಿಯನ್ ಪರವಾಗಿ ಕೆಲಸ ಮಾಡುವ ಒಂದು ಗುಂಪು ಸ್ಫೋಟಕ್ಕೆ ಕಾರಾಣವಾಗಿತ್ತು.
ಆದರೆ ಪ್ರಶ್ನೆ ಏನೆಂದರೆ, ಇದನ್ನು ಯಾಕಾಗಿ ಮಾಡಿದ್ದಾರೆ? ಸೆಪ್ಟೆಂಬರ್ ೨೬ ರ ಬೆಳಗ್ಗೆ ಡ್ಯಾನಿಶ್ ಮಾನಿಟರಿಂಗ್ ಉಪಕರಣಗಳು ಬೋರ್ನ್ಹೋಮ್ ದ್ವೀಪದ ಆಗ್ನೇಯಕ್ಕೆ 500kg tnt (ಸರಿಸುಮಾರು ಕಾರ್ ಬಾಂಬ್‌ನಂತೆಯೇ) ಸಮನಾದ ಭೂಕಂಪನ ಘಟನೆಯನ್ನು ಪತ್ತೆ ಮಾಡಿತು. ಅದೇ
ಸಮಯದಲ್ಲಿ, ಬಾಲ್ಟಿಕ್ ಸಮುದ್ರದ ಅಡಿಯಲ್ಲಿ ರಷ್ಯಾದ ಅನಿಲವನ್ನು ಸಾಗಿಸಲು ವಿನ್ಯಾಸಗೊಳಿಸಲಾದ ಎರಡು ಸಮಾನಾಂತರ ಪೈಪ್‌ಲೈನ್‌ಗಳ ದಕ್ಷಿಣಕ್ಕೆ ನಾರ್ಡ್ ಸ್ಟ್ರೀಮ್ ೨ರಲ್ಲಿ ಒತ್ತಡದ ಕುಸಿತವೂ ಕಂಡು ಬಂತು ನಂತರ ಸಮುದ್ರದ ಮೇಲ್ಮೈಯಲ್ಲಿ ಮೀಥೇನ್ ಗುಳ್ಳೆಗಳ ಹೊಗೆಯು ಕಾಣಿಸಿಕೊಂಡಿತು.
ಹದಿನೇಳು ಗಂಟೆಗಳ ನಂತರ, ಈಶಾನ್ಯಕ್ಕೆ ಮತ್ತೊಂದು ಸೋರಿಕೆ ಪತ್ತೆಯಾಯಿತು. ಈ ಸ್ಫೋಟಗಳು ನಾರ್ಡ್ ಸ್ಟ್ರೀಮ್ ೧ ಮತ್ತು ನಾರ್ಡ್ ಸ್ಟ್ರೀಮ್ ೨ ಪೈಪ್ ಲೈನ್ ಗಳ ಉಕ್ಕು ಮತ್ತು ಕಾಂಕ್ರೀಟ್ ಕೇಸಿಂಗ್‌ಗಳಲ್ಲಿ ಹಲವಾರು ರಂಧ್ರಗಳನ್ನು ಮಾಡಿತು. ಬಾಲ್ಟಿಕ್ ಸಮುದ್ರದ ಮೂಲಕ ರಷ್ಯಾದಿಂದ ಜರ್ಮನಿಗೆ ನೈಸರ್ಗಿಕ ಅನಿಲವನ್ನು ಸಾಗಿಸಲು ಎರಡೂ ಪೈಪ್‌ಲೈನ್ ಗಳನ್ನು ನಿರ್ಮಿಸಲಾಗಿದೆ. ಇದರ ನಿರ್ವಹಣೆಯನ್ನು ರಷ್ಯಾದ ಸರಕಾರಿ ಸ್ವಾಮ್ಯದ ಅನಿಲ ಕಂಪನಿ ಗಾಜ್ಪ್ರೊಮ್ (Gazprom) ಮಾಡುತಿತ್ತು. ನಾರ್ಡ್ ಸ್ಟ್ರೀಮ್ ೨ ೨೦೨೧ರಲ್ಲಿ ಪೂರ್ಣಗೊಂಡಿತು. ಆದರೆ ರಷ್ಯಾ ಉಕ್ರೇನ್ ಆಕ್ರಮಣದ ಮುನ್ನಾದಿನದಂದು ಜರ್ಮನಿಯು ಯೋಜನೆಯನ್ನು ಸ್ಥಗಿತಗೊಳಿಸಿದಾಗ ಅನಿಲದ ಸರಬರಾಜನ್ನು ಪ್ರಾರಂಭಿಸಿರಲಿಲ್ಲ.
ತಾಂತ್ರಿಕ ಕಾರಣಗಳ ನೆಪವೊಡ್ಡಿ ರಷ್ಯಾವು ಸ್ಫೋಟಗಳಿಗೆ ಒಂದು ತಿಂಗಳ ಮೊದಲು ನಾರ್ಡ್ ಸ್ಟ್ರೀಮ್ ೧ ಮೂಲಕ ಅನಿಲ ಸರಬರಾಜು ಮಾಡುವು ದನ್ನು ನಿಲ್ಲಿಸಿತು. ನಾರ್ಡ್ ಸ್ಟ್ರೀಮ್ ೧ ಮತ್ತು ೨ ರಲ್ಲಿ ಅನಿಲವು ಸರಬರಾಜು ಆಗದಿದ್ದರೂ, ಕೊಳವೆಗಳ ಒಳಗೆಲ್ಲ ಅನಿಲವು ತುಂಬಿಕೊಂಡಿತ್ತು. ಪ್ರಾರಂಭದಲ್ಲಿ ಈ ಸೋಟವನ್ನು ರಷ್ಯಾವೇ ಮಾಡಿರಬಹುದು ಎಂದು ಯುರೋಪಿನ ಸರಕಾರಗಳು ಅನುಮಾನಿಸಿದ್ದವು. ಕಾರಣ ಅದೇ ಸಮಯದಲ್ಲಿ ರಷ್ಯಾವು ಉಕ್ರೈನ್‌ನ ಮೇಲೆ ದಾಳಿ ಪ್ರಾರಂಭ ಮಾಡಿ ತಿಂಗಳುಗಳೇ ಕೆಳೆದಿದ್ದವು.
ಅಷ್ಟೇ ಅಲ್ಲದೆ ಯುರೋಪ್‌ಗೆ ಇಂಧನ ಪೂರೈಕೆಯನ್ನು ಕಡಿತಗೊಳಿಸುವುದಾಗಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬೆದರಿಕೆ ಹಾಕಿದ್ದರು. ರಷ್ಯಾದ ಡೈವರ್ಸ್ ಅಥವಾ ಮಿನಿ ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಬಹುದಾದ ಬಾಲ್ಟಿಕ್ ಫ್ಲೀಟ್, ಈ ಪೈಪ್ ಲೈನ್‌ಗಳಿಂದ ೩೦೦ ಕಿಮೀ ದೂರದಲ್ಲಿರುವ ಕಲಿನಿನ್‌ಗ್ರಾಡ್‌ನಲ್ಲಿ ನೆಲೆಗೊಂಡಿತ್ತು. ಪೋಲೆಂಡ್ ಡೆನ್ಮಾರ್ಕ್ ಮೂಲಕ ನಾರ್ವೇಯನ್ ಅನಿಲವನ್ನು ಆಮದು ಮಾಡಿಕೊಳ್ಳಲು ಹೊಸ ಪೈಪ್‌ಲೈನ್
ಅನ್ನು ಪೂರ್ಣಗೊಳಿಸುವ ಒಂದು ದಿನದ ಮೊದಲು ಈ ದಾಳಿ ನಡೆಯಿತು. ಇದು ರಷ್ಯಾದ ಮೇಲಿನ ತನ್ನ ದೀರ್ಘಕಾಲದ ಅವಲಂಬನೆಯನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಿದ ಮಾರ್ಗವಾಗಿತ್ತು. ಅಕ್ಟೋಬರ್ ೧೨ ರಂದು, ದಾಳಿಯ ಎರಡು ವಾರಗಳ ನಂತರ, ವಿಶ್ವದ ಇಂಧನ ಮೂಲ ಸೌಕರ್ಯವು ಅಪಾಯದಲ್ಲಿದೆ ಎಂದು ಪುಟಿನ್ ಎಚ್ಚರಿಸಿದ್ದರು.
ಇದೇ ವೇಳೆ ರಷ್ಯಾ ಅಮೆರಿಕದತ್ತ ಆಪಾದನೆಯನ್ನು ಮಾಡಿತು. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವು ನಾರ್ಡ್ ಸ್ಟ್ರೀಮ್ ೨ ಗೆ ಅಂತ್ಯವನ್ನು ತರುತ್ತದೆ ಎಂದು ಅಧ್ಯಕ್ಷ ಜೋ ಬೈಡೆನ್ ಪದೇ ಪದೇ ಎಚ್ಚರಿಸಿದ್ದರು, ಇದನ್ನು ಅಮೆರಿಕವು ದೀರ್ಘಕಾಲ ವಿರೋಧಿಸಿತ್ತು. ಈ ವರ್ಷದ ಫೆಬ್ರುವರಿ ಯಲ್ಲಿ ಅಮೆರಿಕನ್ ತನಿಖಾ ಪತ್ರಕರ್ತರಾದ ಸೆಮೌರ್ ಹರ್ಷ್ ಅವರು ಒಂದೇ, ಅನಾಮಧೇಯ ಮೂಲದ ಆಧಾರದ ಮೇಲೆ ಅಮೆರಿಕನ್ ನೌಕಾ ಪಡೆಯ ಡೈವರ್‌ಗಳು ಪೈಪ್‌ಲೈನ್‌ಗಳಲ್ಲಿ ಸ್ಫೋಟಕಗಳನ್ನು ಹಾಕಿದ್ದಾರೆ ಎಂದು ಹೇಳಿದ್ದರು.
ಅಮೆರಿಕನ್ ಸರಕಾರಿ ಅಧಿಕಾರಿಗಳು ಇದನ್ನು ನಿರಾಕರಿಸಿದ್ದು, ಸೆಮೌರ್ ಅವರ ವರದಿಯು ಸತ್ಯಕ್ಕೆ ದೂರವಾಗಿದೆ ಎಂದು ಆರೋಪಿಸಿದ್ದರು.
ಅಮೆರಿಕ ಹಾಗೂ ರಷ್ಯಾ, ದೇಶಗಳು ಪೈಪ್ ಲೈನ್ ಮೇಲೆ ದಾಳಿ ಮಾಡಿರುವ ಸಂಭವನೀಯತೆ ಅತೀ ಕಡಿಮೆ. ಯಾಕೆಂದರೆ ಯಾವ ದೇಶವು ತನ್ನದೇ ಮೂಲಸೌಕರ್ಯವನ್ನು ಹಾಳು ಮಾಡಲು ಬಯಸುವುದಿಲ್ಲ. ರಷ್ಯಾದ ಕಂಪನಿಯೇ ಅನಿಲವನ್ನು ಪೂರೈಸುವ ಕಾರಣ ರಷ್ಯಾ ಈ ದಾಳಿಯ
ಹಿಂದಿರಲು ಸಾಧ್ಯವಿಲ್ಲ. ಅಮೆರಿಕವು ಒಂದು ವೇಳೆ ದಾಳಿಯನ್ನು ಮಾಡಿದ್ದರೆ ಅದು ತನ್ನ ಯುರೋಪಿಯನ್ ಮಿತ್ರರಾಷ್ಟ್ರಗಳನ್ನು, ವಿಶೇಷವಾಗಿ ಜರ್ಮನಿಯ ವಿರೋಧಿ ಎಂದು ತೋರಿಸಿಕೊಟ್ಟಂತಾಗುತ್ತದೆ. ಅಮೆರಿಕಾದ ಅಧ್ಯಕ್ಷರಾದ ಜೋ ಬೈಡೆನ್ ಅವರು ಈ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರುವಂತೆ ಕಾಣುತ್ತಾರೆ.
ಇತ್ತೀಚಿನ ಊಹಾಪೋಹಗಳ ಪ್ರಕಾರ , ಉಕ್ರೈನ್‌ಗೆ ಸೇರಿದ ಸಂಘಟನೆ ಒಂದರ ಕೈವಾಡ ಇರುವಂತೆ ಕಾಣುತ್ತದೆ ಎಂದು ಕೆಲವು ಮಾಧ್ಯಮಗಳ ವರದಿಗಳು ಹೇಳುತ್ತವೆ. ಮಾರ್ಚ್ ೭ ರಂದು, ಜರ್ಮನ್ ಮಾಧ್ಯಮ ಸಂಸ್ಥೆಗಳಾದ swr ಮತ್ತು Die Zeit, ವರದಿಗಳ ಪ್ರಕಾರ ಜರ್ಮನ್
ಪೊಲೀಸರು ಸೈಟ್‌ಗೆ ಸ್ಫೋಟಕಗಳನ್ನು ಸಾಗಿಸಲು ಬಳಸಲಾಗಿದೆ ಎಂದು ಭಾವಿಸಲಾದ ವಿಹಾರ ನೌಕೆಯನ್ನು ಗುರುತಿಸಿದ್ದಾರೆ. ಇಬ್ಬರು ಉಕ್ರೇನಿ ಯನ್ನರ ಮಾಲೀಕತ್ವದ ಕಂಪನಿಯಿಂದ ದೋಣಿಯನ್ನು ಪೋಲೆಂಡ್‌ನಲ್ಲಿ ಬಾಡಿಗೆಗೆ ಪಡೆಯಲಾಗಿದೆ. ವರದಿಗಳ ಪ್ರಕಾರ, ಸ್ಫೋಟಕ್ಕೆ ಸುಮಾರು ಮೂರು ವಾರಗಳ ಮೊದಲು ಸೆಪ್ಟೆಂಬರ್ ೬ ರಂದು ಜರ್ಮನಿಯ ಬಾಲ್ಟಿಕ್ ಬಂದರಿನ ರೋಸ್ಟಾಕ್‌ನಿಂದ ನೌಕಾಯಾನ ಮಾಡಲು ಆರು ಜನರು ನಕಲಿ ಪಾಸ್ಪೋಟ್‌ಗಳನ್ನು ಬಳಸಿದ್ದಾರೆ ಎಂದು ಹೇಳಿವೆ.
ಜರ್ಮನಿಯ ಈ ವರದಿಗಳು ಅಮೆರಿಕಾದ ನ್ಯೂಯಾರ್ಕ್ ಟೈಮ್ಸ್‌ನ ವರದಿಯೊಂದಿಗೆ ಹೊಂದಾಣಿಕೆ ಆಗಿವೆ. ಅಮೆರಿಕನ್ ಗುಪ್ತಚರ ಅಧಿಕಾರಿಗಳ ಪ್ರಕಾರ ದಾಳಿಯನ್ನು ಉಕ್ರೇನಿಯನ್ ಪರ ಇರುವ ಗುಂಪೊಂದು ಮಾಡಿರಬಹುದು ಎಂದು ಶಂಕಿಸಿದ್ದಾರೆ. (ಅಮೆರಿಕನ್ನರು ಉಕ್ರೇನ್ ಅಧ್ಯಕ್ಷ
ವೊಲೊದಿಮಿರ್ ಝೆಲೆನ್ಸ್ಕಿಯ ಸರಕಾರ ಅಥವಾ ಉಕ್ರೇನಿಯನ್ ಮಿಲಿಟರಿಯು ದಾಳಿ ಮಾಡಿವೆ ಎಂದು ಆರೋಪಿಸಲಿಲ್ಲ.) ಉಕ್ರೇನ್ ದಾಳಿ ಮಾಡಿರುವ ಸಾಧ್ಯತೆಯೇ ಹೆಚ್ಚು ಎಂದು ಹಲವಾರು ನಂಬಿದ್ದಾರೆ (ಆದರೆ ಈ ಬಗ್ಗೆ ದೃಢವಾದ ಸಾಕ್ಷ್ಯಗಳು ಸಿಕ್ಕಿಲ್ಲ). ಕಾರಣ , ನಾರ್ಡ್ ಪೈಪ್‌ಲೈನ್ ತನ್ನ ರಾಷ್ಟ್ರದ ಭದ್ರತೆಗೆ ಅಪಾಯ ಎಂದು ಉಕ್ರೇನ್ ಭಾವಿಸಿತ್ತು.
ಅಲ್ಲದೇ ಈ ಅನಿಲ ಮಾರ್ಗವು, ಯುರೋಪ್ ರಷ್ಯಾದ ಮೇಲಿನ ಅವಲಂಬನೆಯನ್ನು ಹೆಚ್ಚುವಂತೆ ಮಾಡಿತ್ತು. ಒಂದು ವೇಳೆ ಅನಿಲ ಮಾರ್ಗವು ಸಾಗರ ಮಾರ್ಗದ ಬದಲು, ಭೂಮಿಯ ಮೇಲೆ ಬರುವುದಿದ್ದರೆ ಅದು ಉಕ್ರೇನ್ ದೇಶದ ಮೂಲಕವಾಗಿಯೇ ಬರಬೇಕಿತ್ತು. ಉಕ್ರೈನ್ ಭೂ ಪ್ರದೇಶದಲ್ಲಿ ಬಂದಿದ್ದಲ್ಲಿ ಅದು ಈ ಪೈಪ್ ಲೈನಿಗೆ ಸಾರಿಗೆ ಶುಲ್ಕವನ್ನು ವಿಧಿಸಬಹುದಿತ್ತು. ಆದರೆ ಅದು ಯಾವುದು ಆಗಲಿಲ್ಲ. ಈ ಎಲ್ಲಾ ಬೆಳೆವಣಿಗೆಯಿಂದಾಗಿ ಉಕ್ರೈನ್ ಅಸಮಾಧಾನಗೊಂಡಿತ್ತು.
ಉಕ್ರೈನ್ ಸರಕಾರದ ನೆರವಿಲ್ಲದೆ ಈ ದಾಳಿಗಳು ನಡೆದಿರಬಹುದೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಉಕ್ರೇನ್‌ನ ರಕ್ಷಣಾ ಸಚಿವ ಓಲೆಕ್ಸಿ ರೆಜ್ನಿಕೋವ್, ಸರಕಾರವು ಭಾಗಿಯಾಗಿರುವುದನ್ನು ನಿರಾಕರಿಸಿದ್ದಾರೆ. ಜರ್ಮನಿಯ ರಕ್ಷಣಾ ಸಚಿವ ಬೋರಿಸ್ ಪಿಸ್ಟೋರಿಯಸ್, ಈ ವಿಷಯದಲ್ಲಿ ಆತುರದ ತೀರ್ಮಾನಗಳನ್ನು ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಪುರಾವೆಗಳಿಲ್ಲದೆ ಉಕ್ರೇನಿಯನ್ ಗುಂಪುಗಳನ್ನು ದೂಷಿಸುವುದು ತಪ್ಪು ಎಂದಿದ್ದಾರೆ. ಡ್ಯಾನಿಶ್, ಜರ್ಮನ್ ಮತ್ತು ಸ್ವೀಡಿಷ್ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ. ಆದರೆ ಸದ್ಯಕ್ಕೆ, ಬಾಲ್ಟಿಕ್‌ನ ಆಳದ
ನೋಟವು ಅಸ್ಪಷ್ಟವಾಗಿ ಉಳಿದಿದೆ. ನಾರ್ಡ್ ಪೈಪ್‌ಲೈನ್ ಅನ್ನು ಒಡೆದದ್ದು ಯಾರು ಮತ್ತು ಏಕೆ ಎನ್ನುವ ಪ್ರಶ್ನೆಗಳಿಗೆ ಮುಂಬರುವ ದಿನಗಳಲ್ಲಿ ಸೂಕ್ತವಾದ ತನಿಖೆಯೊಂದಿಗೆ ಉತ್ತರವು ದೊರಕಬಹುದು ಎಂದು ಜಗತ್ತು ಭಾವಿಸಿದೆ.