ಸಂಸ್ಮರಣೆ
ರಾಸುಮ ಭಟ್
‘ನಿಮ್ಮ ಜೀವನದಿಂದ ಸೂರ್ಯನು ಹೊರಟುಹೋದನೆಂದು ನೀವು ಅಳುತ್ತಿದ್ದರೆ, ನಕ್ಷತ್ರಗಳನ್ನು ನೋಡದಂತೆ ನಿಮ್ಮ ಕಣ್ಣೀರು ತಡೆಯುತ್ತದೆ’ ಎಂಬುದು ಒಂದು ಸುಪ್ರಸಿದ್ಧ ಹಿತವಚನ. ಇರುವ ಜೀವನವನ್ನು ಅನುಭವಿಸಬೇಕೇ ಹೊರತು ಇಲ್ಲದ್ದನ್ನು ನೆನೆಯುತ್ತಾ ಕಣ್ಣೀರು ಹಾಕಬಾರದು ಎಂಬ ಸಾರ್ವಕಾಲಿಕ ಸತ್ಯವನ್ನು ಸಾರುವ ಈ ಹಿತ ವಚನವು, ಮಾನವಕುಲಕ್ಕೆ ದಾರಿದೀಪವಾಗಿದೆ, ಕತ್ತಲಲ್ಲಿ ಕಂಡ ಬೆಳಕಾಗಿದೆ. ಈ ಹಿತವಚನವನ್ನು ನೀಡಿದವರು ಸಂತಕವಿ, ವಿಶ್ವಕವಿ ಎಂದೆಲ್ಲಾ ಖ್ಯಾತರಾಗಿದ್ದ ರವೀಂದ್ರನಾಥ ಟ್ಯಾಗೋರರು.
ದೇವೇಂದ್ರನಾಥ ಟ್ಯಾಗೋರ್ ಮತ್ತು ಶಾರದಾ ದೇವಿಯವರ ೧೩ನೇ ಮಗನಾಗಿ, ೧೮೬೧ರ ಮೇ ೭ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾ ನಗರದಲ್ಲಿ ರವೀಂದ್ರನಾಥ ಟ್ಯಾಗೋರರು ಜನಿಸಿದರು. ಟ್ಯಾಗೋರರಿಗೆ ಅದೇಕೋ ಏನೋ ಸಾಂಪ್ರದಾಯಿಕ ಶಿಕ್ಷಣದಲ್ಲಿ ಆಸಕ್ತಿ ಇರಲಿಲ್ಲ. ಪ್ರತಿಷ್ಠಿತ ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಟ್ಯಾಗೋರರು, ಕಾನೂನು ಪದವಿಯ ಅಧ್ಯಯನಕ್ಕೆಂದು ಲಂಡನ್ ಯುನಿವರ್ಸಿಟಿಗೆ ತೆರಳಿದರು; ಆದರೆ ಪದವಿ ಪಡೆಯದೆಯೇ ಎರಡೇ ವರ್ಷಗಳಲ್ಲಿ ತವರಿಗೆ ಹಿಂದಿರುಗಿದರು.
ಹಾಗಂತ, ಶಿಕ್ಷಣದಲ್ಲಿನ ನಿರಾಸಕ್ತಿಯು ಟ್ಯಾಗೋರರ ಸಾಧನೆಗೆ ಅಡ್ಡಿಯನ್ನೇನೂ ಉಂಟುಮಾಡಲಿಲ್ಲ. ಅಸೀಮ ಆಸಕ್ತಿ ಹಾಗೂ ಶ್ರದ್ಧೆಯೊಂದಿಗೆ ಸ್ವಯಂ ಅಧ್ಯಯನದಲ್ಲಿ ತೊಡಗಿಸಿಕೊಂಡ ಟ್ಯಾಗೋರರು ಕವಿ, ಕಾದಂಬರಿಕಾರ, ನಾಟಕಕಾರ, ಕಥೆಗಾರ, ವರ್ಣಚಿತ್ರಕಾರ, ತತ್ವಜ್ಞಾನಿ, ಶಿಕ್ಷಣ ತಜ್ಞ ಹೀಗೆ ಬಹುಮುಖ ಪ್ರತಿಭೆಯ ಗಣಿಯೇ ಆಗಿಬಿಟ್ಟಿದ್ದು ವಿಶೇಷ. ಹೀಗಾಗಿ, ಇವರನ್ನು ಬಂಗಾಳದ ಸಾಂಸ್ಕೃತಿಕ ಪುನರುಜ್ಜೀವನ ಕಾಲದ ಪ್ರಸಿದ್ಧ ವ್ಯಕ್ತಿ ಎಂದೇ ಗುರುತಿಸಲಾಗಿದೆ.
ಎಂಟನೆಯ ವಯಸ್ಸಿಗೇ ಮೊದಲ ಕವಿತೆಯನ್ನು ರಚಿಸಿದ ಹೆಗ್ಗಳಿಕೆ ಟ್ಯಾಗೋರರದ್ದು. ತರುವಾಯದ ವಿವಿಧ ಕಾಲಘಟ್ಟಗಳಲ್ಲಿ, ಅನುಪಮ ಹಾಡುಗಳ ಸಂಗ್ರಹವೆನಿಸಿರುವ ‘ಗೀತಾಂಜಲಿ’, ‘ಗೋರಾ’ ‘ಘರೆ ಬೈರೆ’ ಮುಂತಾದ ಕೃತಿಗಳು ಟ್ಯಾಗೋರರಿಂದ ಹೊಮ್ಮಿದವು. ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯರು ರವೀಂದ್ರನಾಥ ಟ್ಯಾಗೋರ್. ಅವರ ‘ಗೀತಾಂಜಲಿ’ ಕೃತಿಗೆ ೧೯೧೩ರಲ್ಲಿ ಈ ಪುರಸ್ಕಾರ ಲಭಿಸಿತು. ಭಕ್ತಿಗೀತೆಗಳನ್ನು ಮಾತ್ರವಲ್ಲದೆ, ದೇಶಭಕ್ತಿ, ರಾಷ್ಟ್ರೀಯತೆ, ಸ್ವದೇಶಿ ಚಳವಳಿ ಹೀಗೆ ಮನುಕುಲಕ್ಕೆ ಸಂಬಂಧಿಸಿದ ಹತ್ತು ಹಲವು ವಿಷಯಗಳನ್ನು ಗೀತೆಗಳ ರೂಪದಲ್ಲಿ
ಪ್ರಸ್ತುತಪಡಿಸಿರುವ ಕೃತಿಯಿದು.
‘ಗೀತಾಂಜಲಿ’ ಕೃತಿಯು ಪ್ರಪಂಚದ ಸುಮಾರು ೩೫ಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡಿದ್ದು, ಆಂಗ್ಲಭಾಷೆಯಲ್ಲಿ ಇದರ ಲಕ್ಷಾಂತರ ಪ್ರತಿಗಳು
ಮಾರಾಟವಾಗಿವೆ ಹಾಗೂ ೫೦ಕ್ಕೂ ಹೆಚ್ಚು ಬಾರಿ ಮರುಮುದ್ರಣಗೊಂಡಿದೆ ಎಂಬುದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ. ಟ್ಯಾಗೋರರು ರಚಿಸಿದ ‘ಜನಗಣಮನ ಅಧಿನಾಯಕ ಜಯ ಹೇ’ ಗೀತೆಯು ಭಾರತದ ರಾಷ್ಟ್ರಗೀತೆಯಾಗಿದೆ. ಅವರ ‘ಅಮರ್ ಸೋನಾರ್ ಬಾಂಗ್ಲಾ’ ಎಂಬ ಗೀತೆಯು ಬಾಂಗ್ಲಾದೇಶದ ರಾಷ್ಟ್ರಗೀತೆ ಯಾದರೆ, ಮತ್ತೊಂದು ಗೀತೆಯು ಶ್ರೀಲಂಕಾದ ರಾಷ್ಟ್ರಗೀತೆಗೆ ಸ್ಪೂರ್ತಿಯಾಯಿತು.
‘ದೇಶ ಸುತ್ತು, ಕೋಶ ಓದು’ ಎನ್ನುವ ಮಾತಿನಂತೆ ೧೮೭೮ರಿಂದ ೧೯೩೨ರ ನಡುವಿನ ಅವಧಿಯಲ್ಲಿ ಟ್ಯಾಗೋರರು ೩೦ ದೇಶಗಳಿಗೆ ಭೇಟಿಯಿತ್ತರು. ಇಟಲಿಯ ಸರ್ವಾಧಿಕಾರಿ ಬೆನಿಟೋ ಮುಸಲೋನಿ, ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಮುಂತಾದವರೊಂದಿಗೆ ಟ್ಯಾಗೋರರು ವಿಚಾರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗಿದ್ದು ಈ ಅವಧಿಯಲ್ಲೇ. ಜಪಾನ್ ದೇಶದ ‘ಡಾರ್ಟಿಂಗ್ಟನ್ ಹಾಲ್ ಸ್ಕೂಲ್’ ಎಂಬ ಶಾಲೆಯ ಸಹಸಂಸ್ಥಾಪಕರಲ್ಲಿ
ಟ್ಯಾಗೋರ್ ಕೂಡ ಒಬ್ಬರು ಎಂಬುದು ಗಮನಾರ್ಹ ಸಂಗತಿ. ೧೯೧೫ರಲ್ಲಿ ಟ್ಯಾಗೋರರಿಗೆ ಬ್ರಿಟಿಷ್ ಸರಕಾರದ ವತಿಯಿಂದ ‘ನೈಟ್ ಹುಡ್’ ಪದವಿ ಪ್ರಾಪ್ತವಾಯಿತು; ಆದರೆ ೧೯೧೯ರ ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಘಟನೆಯಿಂದ ಮನನೊಂದ ಅವರು ಸದರಿ ಪದವಿಯನ್ನು ಬ್ರಿಟಿಷ್ ಸರಕಾರಕ್ಕೆ ಹಿಂದಿರುಗಿಸಿದರು.
೧೯೩೦ರಲ್ಲಿ ರವೀಂದ್ರನಾಥ ಟ್ಯಾಗೋರರ ವರ್ಣಚಿತ್ರಗಳ ಪ್ರದರ್ಶನವು ಪ್ಯಾರಿಸ್ ಮತ್ತು ಲಂಡನ್ ನಗರಗಳಲ್ಲಿ ನಡೆಯಿತು; ಇದರಿಂದಾಗಿ, ಗುಲಾಮಗಿರಿಗೆ ಒಳಗಾಗಿದ್ದ ಭಾರತದಂಥ ದೇಶದ ಪ್ರಸಿದ್ಧ ವ್ಯಕ್ತಿಯ ಪ್ರತಿಭೆಯ ಮತ್ತೊಂದು ಮುಖವು ಜಗತ್ತಿಗೆ ತಿಳಿಯುವಂತಾಯಿತು. ರವೀಂದ್ರನಾಥ ಟ್ಯಾಗೋರರ ಬೋಧನೆಗಳು, ಹಿತವಚನಗಳು ಇಂದಿಗೂ ಪ್ರಸ್ತುತ. ಭಾರತದ ಮತ್ತು ಜಗತ್ತಿನ ಯುವಜನಾಂಗದ ಪಾಲಿಗೆ ಅವರು ಸದಾ ಪ್ರಾತಃಸ್ಮರಣೀ ಯರು.
(ಲೇಖಕರು ಸಂಶೋಧನಾ ವಿದ್ಯಾರ್ಥಿ)