Wednesday, 11th December 2024

ಮರೆಯಾದ ಕರಾವಳಿ ರಾಜಕೀಯ ಭೀಷ್ಮ

ನಮನ
ಜಿ.ಪ್ರತಾಪ್ ಕೊಡಂಚ

pratap.kodancha@gmail.com

ಕಾರ್ಯಕರ್ತರನ್ನು ಸಂಘಟಿಸಿ ಸೋಲಿಲ್ಲದ ಸರದಾರರೆನಿಸಕೊಂಡಿದ್ದವರನ್ನೂ ಮಣಿಸಿದ್ದರು. ಉಡುಪಿಯ ಮಟ್ಟಿಗೆ ಐ.ಎಂ.ಜಯರಾಮ್ ಶೆಟ್ಟಿ, ಮನೋರಮಾ ಮಧ್ವರಾಜ, ಶ್ರೀನಿವಾಸ್ ಪೂಜಾರಿ, ಶ್ರೀನಿವಾಸ್ ಶೆಟ್ಟರಂತಹ ಹೊಸ ತಲೆಮಾರಿನ ನಾಯಕರನ್ನು ಬೆಳೆಸಿದರು.

ಅಮಾಸೆಬೈಲು ಗೋಪಾಲ ಕೃಷ್ಣ ಕೊಡ್ಗಿ (93) ಇನ್ನಿಲ್ಲವೆಂಬ ಸುದ್ದಿ ಕೇಳಿ ಮನಸ್ಸೊಮ್ಮೆ ತಳಮಳಗೊಂಡು, ಕಣ್ಣಾಲಿಗಳು ತೇವಗೊಂಡವು. ಮಾಜಿ ಶಾಸಕ, ಮೂರನೇ ಕರ್ನಾಟಕ ಹಣಕಾಸು ಆಯೋಗದ ಅಧ್ಯಕ್ಷರೂ ಆಗಿದ್ದ ಶ್ರೀ ಎ.ಜಿ.ಕೊಡ್ಗಿಯವರ ಕಂಡು, ಕೇಳಿದ್ದ ಚಿತ್ರಣ ಕಣ್ಣ ಮುಂದೊಮ್ಮೆ ಬಂದು ಮರೆಯಾಯಿತು.

ಅವರ ಪರಿಚಯದ ನೆನಪು ಮೂಡಿಬರುತ್ತಿರುವುದು, ಸುಮಾರು ನಾನು ಎಂಟೊಂಭತ್ತು ವರ್ಷದವನಾಗಿದ್ದ ಸಮಯದ್ದು. ಅಚ್ಚ ಬಿಳಿಯ ಖಾದಿ ಜುಬ್ಬಾ, ಪಂಚೆ ತೊಟ್ಟ, ಕನ್ನಡಕ ದಾರಿ, ಬೆಳ್ಳಿ ಕೂದಲಿನ ಗಂಭೀರಚರ್ಯದ ಎ.ಜಿ.ಕೊಡ್ಗಿಯವರು. ಅವರು ಅಂದಿನಿಂದ ಮೊನ್ನೆಯ ತನಕವೂ ಬಹುತೇಕ ಹಾಗೆಯೇ ಇದ್ದರು. ಅವರ ಆತ್ಮೀಯ ಒಡನಾಡಿಗಳೂ, ಆಗಿನ ಬೈಂದೂರು ಶಾಸಕ ದಿವಂಗತ ಜಿ.ಎಸ್.ಆಚಾರ್ ಭೇಟಿಯಾಗಲು ನಮ್ಮ ತಂದೆ ದಿ.ಡಾ||ಜಿ.ಪ್ರಕಾಶ್ ಕೊಡಂಚರ ಜತೆ ಹೋದ ಹಲವು ಸಂಧರ್ಭಗಳು
ಇವಾಗಿದ್ದವು.

ಒಮ್ಮೊಮ್ಮೆ ಅವರಿಬ್ಬರೂ ಖಂಬದಕೋಣೆ ನಮ್ಮನೆಯಲ್ಲೂ, ನಮ್ಮ ನೆರೆಮನೆ ಆರ್.ಕೆ ಸಂಜೀವ ರಾಯರ ಮನೆಯಲ್ಲೂ ಸೇರುತ್ತಿದ್ದರು. ಕುಂದಾಪುರದಲ್ಲಿ ಅನಂತಕೃಷ್ಣ ಕೊಡ್ಗಿಯವರ ಅಜಂತಾ ಪ್ರೆಸ್, ಕೊಡ್ಗಿ ಕಂಪೌಂಡಿನ ಮನೆ, ಹಿರಿಯ ವಕೀಲ ದಿ.ಜಿ.ವಿ. ಐತಾಳರ ಮನೆಯಲ್ಲಿ ಭೇಟಿ ಮಾಡುತ್ತಿದ್ದ ನೆನಪುಗಳು ಅಲೆ ಅಲೆಯಾಗಿ ಬಂದವು.

ಈಗಿನಂತೆ ಶಾಸಕ, ಮಾಜಿ ಶಾಸಕರಿಗೆ ಎಸ್ಕಾರ್ಟ್, ಗನ್ ಮ್ಯಾನ್, ಡ್ರೈವರ್, ಬಾಗಿಲು ತೆಗೆದು ಬನ್ನಿ ಸಾರ್ ಅನ್ನೋರು ಯಾರೂ ಇರಲಿಲ್ಲ ಆಗ. ಅವರಿಗ್ಯಾರು ಪಿಎ, ಆಪ್ತ ಸಾಹಾಯಕರೂ ಇರಲಿಲ್ಲ. ಬಂದ ಕರೆಯೋಲೆಗಳ ದಿನ, ಸ್ಥಳಗಳನ್ನು ತಮ್ಮ ಡೈರಿ ಯಲ್ಲಿ ಸ್ವತಃ ಬರೆದಿಟ್ಟುಕೊಳ್ಳುತಿದ್ದರು. ಕೊಡ್ಗಿಯವರು ಟ್ರಕ್ಕರ್ ವಾಹನವನ್ನೂ, ಆಚಾರ್ ಮಹಿಂದ್ರಾ ಜೀಪ್ ಅನ್ನು ಸ್ವತಃ ಚಲಾಯಿಸಿಕೊಂಡು ಕ್ಷೇತ್ರ ತಿರುಗಿ ತಡ ರಾತ್ರಿಯ ಹೊತ್ತಿಗೆ ಗೂಡು ಸೇರುತ್ತಿದ್ದರು. ಅಂತಹ ಸರಳತೆ, ಜನಾನುರಾಗಿ, ಎಲ್ಲರಿಗೂ ಎಟುಕಬಲ್ಲ ನಾಯಕರು ಮುಂದಿನ ಪೀಳಿಗೆ ನೋಡುವುದು ಅಸಾಧ್ಯವೆನಿಸುತ್ತದೆ.

ಕೊಡ್ಗಿಯವರದ್ದು, ಪೆಟ್ಟೊಂದು ತುಂಡೆರಡು ರೀತಿಯ ಖಡಕ್ ಮಾತು. ಆಚಾರರದ್ದು ಸೌಮ್ಯ, ಶಾಂತ ಸ್ವಭಾವ! ಆಗ ಈಗಿನ ತರ ಫೇಸ್ಬುಕ್, ವಾಟ್ಸಾಪ್ ಇರಲಿಲ್ಲವಲ್ಲ! ಒಮ್ಮೊಮ್ಮೆ ವಿರೋಧಿಗಳು ತುಂಬಿದ ಸಭೆಯ, ಅಥವಾ ಯಾವುದೋ ಕಾರ್ಯಕ್ರಮ ಮುಗಿಸಿ ತೆರಳುವ ಸಮಯದಲ್ಲಿ ಎದುರುಗೊಂಡು ಗಡಂಗಿನೇಟಿನ ಪವರಿನಲ್ಲಿ ವಾಚಾಮಗೋಚರ ಕಿರಿಚಾಡುವ ಪ್ರಹಸನಗಳೂ ನಡೆಯುತ್ತಿತ್ತು. ಅಂತಹ ಸಂದರ್ಭಗಳಲ್ಲಿ, ಆಚಾರ್ ಸುಮ್ಮನೇ ಕೂತು ಕೊನೆ ತನಕ ಬೈಗುಳ ಕೇಳಿ, ಆಯ್ತಾ ನಿಂದು? ಪೂರ್ತಿ ಮುಗಿತಾ?, ಈ ಎಲ್ಲ ಕಾರಣಕ್ಕಾಗಿ ನಿನ್ನ ಕೆಲಸ ಆಗಿರಲಿಲ್ಲ, ಪ್ರಯತ್ನ ಮಾಡಿ ನಿನ್ನ ಕೆಲಸ ಮಾಡಿಸುತ್ತೇನೆ, ಅಂತ ಹೇಳಿ, ಕೋಪ
ಇಳಿಸಿ, ಕೆಲಸ ಮಾಡಿಸಿ, ವಿರೋಧಿಗಳನ್ನು ತನ್ನೆಡೆಗೆ ಸೆಳೆಯುತ್ತಿದ್ದರು.

ಕೊಡ್ಗಿಯವರು ವಿನಾಕಾರಣ ಕಿರುಚತೊಡಗಿದವರ ಎದುರು ನಿಂತು ಸದ್ದಡಗಿಸಿ, ಅಂತಹ ಪ್ರಸಂಗಕ್ಕೆ ಕಾರಣೀಭೂತರಾದ ವಿರೋಧಿಗಳನ್ನು ಹುಡುಕಿ ಎಚ್ಚರಿಕೆ ನೀಡಿ ಮುನ್ನುಗ್ಗುವಂತ ಧೈರ್ಯಶಾಲಿಗಳಾಗಿದ್ದರು. ಚುನಾವಣಾ ಸಂದರ್ಭದಲ್ಲಿ ನಾಗೂರು ಬಳಿ ರಸ್ತೆಯಲ್ಲಿ ಸಾಗುತ್ತಿದ್ದ ಅವರ ಟ್ರಕ್ಕರ್‌ಗೆ ಕಂದು ತೂರಿ ಗಾಜೊಡೆದಿತ್ತಂತೆ. ಬೇರೆ ಯಾರಾದರೂ ಒಬ್ಬನೇ ಇದ್ದೇನೆ, ಮತ್ತೆ ನೋಡುವ ಎಂದು ಮುಂದೆ ಹೋಗುತ್ತಿದ್ದರನ್ನಿ.

ಗಾಜೊಡೆದ ಟ್ರಕ್ಕರ್ ತಿರುಗಿಸಿ, ನಿಲ್ಲಿಸಿ ಕೆಳಗಿಳಿದ ಕೊಡ್ಗಿಯವರು, ಪಂಚೆ ಮೇಲೆ ಕಟ್ಟಿ ಯಾರೋ ಅದು? ಈಗ ಹೊಡೀರಿ ನೋಡೋಣ ಅಂದಿದ್ದರಂತೆ. ಇದು ಚಿಕ್ಕಂದಿನಲ್ಲಿ ನಾನು ಕೇಳಿದ್ದ ಕೊಡ್ಗಿಯವರ ಧೈರ್ಯದ ಒಂದು ತುಣುಕು. ಒಮ್ಮೆ ಜಿ.ವಿ ಐತಾಳರ ಮನೆಯಲ್ಲಿ ಆಚಾರ್ ಮತ್ತೆ ಕೊಡ್ಗಿಯವರ ನಡುವಿನ ಮಾತುಕತೆಯಲ್ಲಿ, ಆಚಾರರೇ ನಿಮ್ಮ ತಾಳ್ಮೆ ನನಗಿಲ್ಲ, ಅದೆಲ್ಲ
ಆಗಲಿಕ್ಕಿಲ್ಲ ಎಂದು ಬಿಸಿ ಬಿಸಿ ಚರ್ಚೆಯಾದ ಅಸ್ಪಷ್ಟ ನೆನಪು.

ಸುಮಾರು ೧೦-೧೧ ವರ್ಷದವನಾಗಿದ್ದ ನಾನು, ಈಗ ಗಲಾಟೆಯೇ ಆಗಿ ಬಿಡುತ್ತೆ ಅಂದು ಹೆದರಿ ಹೋಗಿದ್ದೆ. ಪ್ರಾಯಶಃ ಕಾಂಗ್ರೆಸ್ಸಿ
ನಿಂದ ದೂರ ಹೊರಟಿದ್ದ ಕೊಡ್ಗಿಯವರನ್ನು ಆಚಾರ್ ತಡೆಯುವ ಪ್ರಯತ್ನದಲ್ಲಿದ್ದರೆ, ಆಚಾರ್ ಅವರನ್ನು ಸೆಳೆದುಕೊಳ್ಳುವ ಪ್ರಯತ್ನದಲ್ಲಿ ಕೊಡ್ಗಿಯವರಿದ್ದ ಸಮಯವದು ಅನಿಸುತ್ತದೆ. ಅಷ್ಟು ಬಿಸಿ ಚರ್ಚೆಯೇ ನಂತರ ಎಸ್.ಎಸ್.ಕೊಳ್ಕೆಬೈಲ್ ಮನೆಗೆ ಹೊರಟಿದ್ದ ಆಚಾರ್ ಅವರಿಗೆ, ಅದೆಲ್ಲ ಸಾಯ್ಲಿ ಬಿಡಿ, ಟಾಟಾಮೊಬೈಲ್ ಅಂತ ಹೊಸಗಾಡಿ ಬಂದಿದೆ, ನಾನೊಂದು ತಗೋತಿ ದ್ದೇನೆ. ನೀವೂ ಒಂದು ತಗೊಳ್ಳಿ. ಅದರ ಬಾಡಿ ಬದಲಾಯಿಸಿ ಒಳ್ಳೆ ಬೆಂಜ್ ಕಾರಿನಂತ ಡಿಸೈನ್ ಮಾಡಿಸುವ ಡಿಸೈನರ್ ಮೆಕ್ಯಾನಿಕ್ ಒಬ್ಬ ಗೊತ್ತುಂಟು.

ಜೀಪ್, ಟ್ರಕ್ಕರ್‌ನಲ್ಲಿ ಧೂಳು ತಿನ್ನುವುದು ಬಿಟ್ಟು, ಎಸಿ ಹಾಕ್ಕೊಂಡು ಓಡಾಡುವ ಮಾರಾಯರೇ ಅಂದಿದ್ದರು. ಈಗಷ್ಟೇ ಇವರಿ ಬ್ಬರು ಜಗಳ ಮಾಡಿಕೊಂಡು ಮಾತು ಬಿಡುತ್ತಾರೇನೋ ಎಂಬಷ್ಟು ಹುರುಪಿನಲ್ಲಿದ್ದವರು, ಪುನಃ ಸ್ನೇಹಿತರಂತೆ ಮಾತಾಡುತ್ತಿದ್ದಾ ರಲ್ಲ ಎನಿಸಿತ್ತು. ಕೊಡ್ಗಿಯವರ ವ್ಯಕ್ತಿತ್ವವೇ ಅಂತಹದು, ಆನೆ ತುಳಿದದ್ದೇ ದಾರಿ! ವಿರೋಧ ವಿಷಯಕ್ಕೆ, ಸ್ನೇಹ ವ್ಯಕ್ತಿತ್ತ್ವಕ್ಕೆ ಎಂಬಂತಹ ಆಪ್ತ ಸಂಬಂಧ. ಅನಂತರದ ಕಾಲ ಘಟ್ಟದಲ್ಲಿಜಿ.ಎಸ್.ಆಚಾರ್ ಗತಿಸಿದರು, ಕೊಡ್ಗಿಯವರು ರಾಜಕೀಯ
ತಟಸ್ಥತೆ, ಮತ್ತೆ ಬಿಜೆಪಿಯತ್ತ ತೆರಳಿದರು.

ಕುಂದಾಪುರ, ಬೈಂದೂರಿನಲ್ಲಂತೂ ಬಿಜೆಪಿ ಗೆದ್ದು ನಿಲ್ಲುವ ಅಡಿಪಾಯ ಹಾಕಿದ್ದೇ ಎ.ಜಿ.ಕೊಡ್ಗಿಯವರು. ಅನಂತರದ ಚುನಾವಣೆ
ಯಲ್ಲಿ ಅವರು ಗೆಲ್ಲದಿದ್ದರೂ, ರಾಜಗುರುವಿನಂತೆ ಮಾರ್ಗದರ್ಶಕರಾಗಿ, ಕಾರ್ಯಕರ್ತರನ್ನು ಸಂಘಟಿಸಿ ಸೋಲಿಲ್ಲದ ಸರದಾರ ರೆನಿಸಕೊಂಡಿದ್ದವರನ್ನೂ ಮಣಿಸಿದ್ದರು. ಉಡುಪಿಯ ಮಟ್ಟಿಗೆ ಐ.ಎಂ.ಜಯರಾಮ್ ಶೆಟ್ಟಿ, ಮನೋರಮಾ ಮಧ್ವರಾಜ, ಶ್ರೀನಿವಾಸ್ ಪೂಜಾರಿ, ಶ್ರೀನಿವಾಸ್ ಶೆಟ್ಟರಂತಹ ಹೊಸ ತಲೆಮಾರಿನ ನಾಯಕರನ್ನು ಬೆಳೆಸಿದರು. ಅದಕ್ಕೆ, ಸೋತು ಸುಣ್ಣ ವಾದರೂ ತನಗೇ, ತಪ್ಪಿದರೇ ತನ್ನ ಮನೆಯವರಿಗೇ ಸ್ಥಾನ ಕಲ್ಪಿಸಿ ಎಂದು ಬೊಬ್ಬಿಡುವ ಸವಕಲು ರಾಜಕಾರಣಿಗಳ ನಡುವೆ ಎ.ಜಿ. ಕೊಡ್ಗಿಯವರಂತಹ ಧೀಮಂತ ಜನನಾಯಕರು ವಿಭಿನ್ನವಾಗಿ ಸ್ಮರಣೀಯರೆನಿಸುವುದು.

ಕೃಷಿ, ಹೈನುಗಾರಿಕೆ, ಬ್ಯಾಂಕಿಂಗ್, ಸಹಕಾರ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಸಾರ್ಥಕತೆ ಕಂಡು ಕೊಂಡರು. ಅಧಿಕಾರ ಮುಖ್ಯವಲ್ಲ, ಕನಸುಗಳು ಮತ್ತು ಆ ನಿಟ್ಟಿನಲ್ಲಿ ಕಾರ್ಯತತ್ಪರರಾಗುವುದು ಮುಖ್ಯ ಎಂಬುದನ್ನು ಮಾಡಿ ತೋರಿಸಿದ ಪ್ರಯೋಗಶೀಲರು. ಕೊಡ್ಗಿಯವರ ಆತಿಥ್ಯ, ಗ್ರಾಮೀಣ ಸೊಗಡಿನ ಆತ್ಮೀಯತೆ, ಅವರ ಮನೆಯ ಸಮಾರಂಭಗಳ ವಿಭಿನ್ನತೆ, ಪಾರಂಪರಿಕ ವಿಜೃಂಭಣೆ ಅವರ ಜೀವನ್ಮುಖಿ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಅವರ ಕಲ್ಪನೆಯ ಕೃಷಿ ಸಂಸ್ಕರಿತ ಉತ್ಪನ್ನ ಗಳು, ಕಾರ್ಖಾನೆಗಳು, ಆದರ್ಶ ಗ್ರಾಮದ ಕಲ್ಪನೆ, ತನ್ನೂರನ್ನು ಸಂಪೂರ್ಣ ಸೋಲಾರ್ ದೀಪದ ಮೂಲಕ ಬೆಳೆಗಿಸಿದ ಸಾಧನೆ, ಕೊಡ್ಗಿಯವರನ್ನು ನಮ್ಮೂರಿನ ಹಸಿರು ಶಕ್ತಿಯ ಹರಿಕಾರ – ಇಲಾನ್ ಮಸ್ಕ್ ಎನಿಸಿಬಿಡುತ್ತವೆ.

ಕರ್ನಾಟಕದ ಮೊಟ್ಟ ಮೊದಲ ಸೋಲಾರ್ ಗ್ರಾಮವಾಗಿ ಅಮಾಸೆಬೈಲನ್ನು ಅಭಿವೃದ್ಧಿ ಪಡಿಸಿದ ಹಿರಿಯರು ಎ.ಜಿ.ಕೊಡ್ಗಿ. ಅವರೇ ಯೋಜಿಸಿ ಕಟ್ಟಿಸಿದ, ನೀರ ಮಧ್ಯದ ಮನೆ, ಅಲ್ಲಿನ ಅದರಲ್ಲಿನ ವಿಶಿಷ್ಟ ಸೌಕರ್ಯಗಳನ್ನು ನೋಡಿದರೆ ಆಧುನಿಕ ಎಂಜಿನಿಯರ್ ಗಳು ಬೆರಗಾಗುವಂತ ದೂರದೃಷ್ಟಿ, ಯೋಚನೆ ಮತ್ತದನ್ನು ಸಾಧಿಸಿಯೇ ತೀರುವ ಪ್ರಯತ್ನಶೀಲತೆ ಅವರದ್ದು. ಅವರ ಪರ್ಣ ಕುಟೀರ ಸ್ವರ್ಗದಿಂದ ಭಗವಂತ ನಿರ್ಮಿಸಿಕೊಟ್ಟ ಸ್ವರ್ಗ ತಲಿಪಿರುವುದು ನಿಶ್ಚಯ.

ಅವರ ಕಾರ್ಯತತ್ಪರತೆ, ದೂರಗಾಮಿತ್ವ ಮತ್ತು ಧೀಮಂತಿಕೆ ಇಂದಿನ ಪೀಳಿಗೆಗೆ ಆದರ್ಶವಾಗಿಸಿಕೊಂಡು ಸಮಾಜಮುಖಿಯಾಗಿ ನಿಂತರೆ ಕೊಡ್ಗಿಯವರ ಸ್ಮರಣೆ ಸಾರ್ಥಕವೆನಿಸಿತು.