Wednesday, 11th December 2024

ಪಕ್ಷಗಳ ಭರವಸೆಗಳು ಎಷ್ಟು ಉಚಿತ ?

ಅಶ್ವತ್ಥಕಟ್ಟೆ

ranjith.hoskere@gmail.com

ಯಾವುದೇ ಸಹಾಯಧನ, ಸಬ್ಸಿಡಿ, ಉಚಿತ ಘೋಷಣೆಗಳು ಕೇವಲ ಒಂದು ವರ್ಷಕ್ಕೆ ಸೀಮಿತವಾಗಿರುವುದಿಲ್ಲ. ನಿರಂತರ ವಾಗಿ ನೀಡುವ ಪ್ರಕ್ರಿಯೆಯಾಗಿ ಉಳಿಯುತ್ತದೆ. ಆದ್ದರಿಂದ ಬಿಜೆಪಿ ಅಥವಾ ಕಾಂಗ್ರೆಸ್ ಎನ್ನುವುದಕ್ಕಿಂತ ಯಾವುದೇ ಪಕ್ಷಗಳು ಘೋಷಣೆ ಮಾಡುವ ಮೊದಲು ಎಚ್ಚರಿಕೆಯ ಹೆಜ್ಜೆಯಿಡಬೇಕಾಗುತ್ತದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಸರಿಯಾಗಿ ಎಂಟು ದಿನ ಬಾಕಿಯಿದೆ. ಈ ಸಮಯದಲ್ಲಿ ಮೂರೂ ಪಕ್ಷಗಳು ಸಾಲು ಸಾಲು ಭರವಸೆ, ಯೋಜನೆಗಳ ಘೋಷಣೆ ಹಾಗೂ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷದಲ್ಲಿ ಜಾರಿಗೊಳಿಸಲಿರುವ ಯೋಜನೆಗಳನ್ನು ಪ್ರಣಾಳಿಕೆಯ ರೂಪದಲ್ಲಿ ಘೋಷಿಸುತ್ತಿವೆ. ಈಗಾಗಲೇ ಜೆಡಿಎಸ್ ತನ್ನ ಪ್ರಣಾಳಿಕೆ ಘೋಷಿಸಿದ್ದು, ರೈತರ ಮಕ್ಕಳನ್ನು ಮದುವೆಯಾ ದರೆ ಎರಡು ಲಕ್ಷ ರು. ಸಹಾಯಧನ, ಐದು ಸಿಲಿಂಡರ್ ಉಚಿತ ಸೇರಿದಂತೆ ಹಲವು ಭರವಸೆಗಳನ್ನು ಜನರಿಗೆ ನೀಡಿದೆ.

ಸೋಮವಾರವಷ್ಟೇ, ಏಕರೂಪ ನಾಗರಿಕ ಕಾಯಿದೆ ಜಾರಿ ಭರವಸೆಯೊಂದಿಗೆ ಸಾಲು ಸಾಲು ‘ಉಚಿತ’ ಘೋಷಣೆಗಳನ್ನು ಬಿಜೆಪಿಯೂ ಮಾಡಿದೆ. ಕಾಂಗ್ರೆಸ್, ಜೆಡಿಎಸ್‌ನ ಯಾವ ಘೋಷಣೆಗಳನ್ನು ವಿರೋಧಿಸುತ್ತ ಬಂದಿತ್ತೋ ಅದೇ ರೀತಿಯ ಅಥವಾ ಆ ಘೋಷಣೆಗಳ ‘ಶೇಡ್’ ಕಾಣುವಂತಹ ಘೋಷಣೆಗಳು ಬಿಜೆಪಿಯಿಂದಲೂ ಹೊರ ಬಿದ್ದಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ.

ಆದರೆ ಈ ರೀತಿ ‘ಎಲ್ಲವೂ ಉಚಿತ’ವಾಗಿ ನೀಡುವುದು ಉಚಿತವೇ ಎನ್ನುವುದು ಈಗಿರುವ ಬಹುದೊಡ್ಡ ಪ್ರಶ್ನೆ. ಕಾಂಗ್ರೆಸ್ ಈಗಾಗಲೇ ೨೦೦ ಯುನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಎರಡು ಸಾವಿರ ಸಹಾಯಧನ, ೧೦ ಕೆ.ಜಿ. ಉಚಿತ ಅಕ್ಕಿ, ನಿರುದ್ಯೋಗಿ ಯುವಕರಿಗೆ ೩೫೦೦ದವರೆಗೆ ಸಹಾಯಧನ, ಆರು ಉಚಿತ ಸಿಲೆಂಡರ್‌ಗಳನ್ನು ಘೋಷಿಸಿತ್ತು. ಈ ರೀತಿ ಕಾಂಗ್ರೆಸ್ ಘೋಷಿಸಿರುವ ಉಚಿತ ಯೋಜನೆಗಳು ದೇಶಕ್ಕೆ ಮಾರಕವೆಂದೇ ಪ್ರತಿಪಾದಿಸುತ್ತ ಬಂದಿದ್ದ ಬಿಜೆಪಿಯೂ, ಉಚಿತ ಹಾಲು, ಮಹಿಳೆಯರಿಗೆ ಉಚಿತ ಬಸ್ ಪಾಸ್ (ಪ್ರಣಾಳಿಕೆಯಲ್ಲಿಲ್ಲ. ಆದರೆ ಯಡಿಯೂರಪ್ಪ ಘೋಷಿಸಿದ್ದಾರೆ), ಐದು ಕೆ.ಜಿ. ಅಕ್ಕಿಯೊಂದಿಗೆ ಐದು ಕೆ.ಜಿ ಸಿರಿಧಾನ್ಯ, ಇಂದಿರಾ ಕ್ಯಾಂಟೀನ್ ಬದಲಿಗೆ ಅಟಲ್ ಕ್ಯಾಂಟೀನ್ ಸೇರಿದಂತೆ ಹಲವು
ಗಳನ್ನು ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ.

ಕಾಂಗ್ರೆಸ್ ಘೋಷಿಸಿದ್ದ ಉಚಿತ ಯೋಜನೆಗಳಿಗೆ ಕೊಂಚ ಸುಣ್ಣ-ಬಣ್ಣ ಹಚ್ಚಿದ ರೀತಿಯಲ್ಲಿ ಬದಲಾಯಿಸಿ ತಾನು ಅಽಕಾರಕ್ಕೆ ಬಂದರೆ ಹೊಸ ಹೆಸರಿನೊಂದಿಗೆ ಜಾರಿಗೊಳಿಸುವುದಾಗಿ ಬಿಜೆಪಿ ಹೇಳಿಕೊಂಡಿದೆ. ಹಾಗಾದರೆ, ಕಾಂಗ್ರೆಸ್, ಜೆಡಿಎಸ್ ಹಲವು
ಉಚಿತಗಳನ್ನು ಘೋಷಣೆ ಮಾಡಿದ ಸಮಯದಲ್ಲಿ, ವಿರೋಧಿಸಿದ್ದ ಬಿಜೆಪಿಗರಿಂದಲೂ ಅದೇ ರೀತಿಯ ಯೋಜನೆ ಜಾರಿ ಗೊಳಿಸಲು ಸಾಧ್ಯವೇ ಎನ್ನುವ ಪ್ರಶ್ನೆಗಳು ಪ್ರಣಾಳಿಕಾ ಸಮಿತಿಯಲ್ಲಿ ಕೇಳಿಬರಲಿಲ್ಲವೇ? ಅಥವಾ ಗೆಲ್ಲುವ ತನಕ ಮಾತ್ರ ಈ ಪ್ರಣಾಳಿಕೆಗೆ ‘ವ್ಯಾಲಿಡಿಟಿ’ಯೇ ಎನ್ನುವುದು ಹಲವರ ಪ್ರಶ್ನೆಯಾಗಿದೆ.

ಹಾಗೇ ನೋಡಿದರೆ, ಪ್ರತಿ ಚುನಾವಣೆಯಲ್ಲಿಯೂ ಪಕ್ಷೇತರ ಅಭ್ಯರ್ಥಿಯಿಂದ ಹಿಡಿದು ರಾಷ್ಟ್ರೀಯ ಪಕ್ಷಗಳ ತನಕ ತಮ್ಮದೇ ಆದ ಪ್ರಣಾಳಿಕೆಯನ್ನು ಸಿದ್ಧಪಡಿಸಿ ಜನರ ಮುಂದಿಡುವುದು ಸಂಪ್ರದಾಯ. ಪ್ರಣಾಳಿಕೆಯನ್ನು ನೋಡಿಕೊಂಡೇ ಜನರು ಮತ ಹಾಕುವರೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಮತದಾನದ ಸಮಯದಲ್ಲಿ ಪ್ರಣಾಳಿಕೆಯೂ ಒಂದಿಷ್ಟು ಕೆಲಸ ಮಾಡುತ್ತದೆ ಎನ್ನುವುದು ರಾಜಕೀಯ ನಾಯಕರ ವಿಶ್ವಾಸ.

ಪ್ರಣಾಳಿಕೆಯನ್ನು ಇನ್ನುಷ್ಟು ಸರಳೀಕರಣಗೊಳಿಸಿ ಹೇಳಬೇಕಾದರೆ, ಅಧಿಕಾರಕ್ಕೆ ಬಂದರೆ, ಮುಂದಿನ ಐದು ವರ್ಷದಲ್ಲಿ ಯಾವೆಲ್ಲ ಕೆಲಸವನ್ನು ಮಾಡಲಾಗುತ್ತದೆ? ಯಾವ ಕ್ಷೇತ್ರಗಳು ತಮ್ಮ ಆದ್ಯತಾ ವಲಯಗಳಾಗಿರುತ್ತವೆ ಎನ್ನುವ ಬ್ಲೂ ಪ್ರಿಂಟ್ ಅನ್ನು ಜನರ ಮುಂದಿಡುವುದಷ್ಟೇ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಘೋಷಿಸುವ ಅವೆಷ್ಟೋ ಘೋಷಣೆ ಗಳು ‘ನೈಜವಾಗಿ’ ಜಾರಿಗೊಳಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿಯಿದೆ.

೨೦೧೩ರ ಚುನಾವಣೆ ವೇಳೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿವರ್ಷ ಐವತ್ತು ಸಾವಿರ ಕೋಟಿ ರು. ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ೨೦೧೩-೧೮ರ ಅವಽಯಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ಪ್ರತಿವರ್ಷ ಐವತ್ತು ಸಾವಿರ ಕೋಟಿ ರು. ಗಳನ್ನು ನೀಡಿತ್ತು. ಇನ್ನು ಬಿಜೆಪಿಯೂ ಇದಕ್ಕೆ ಹೊರತಲ್ಲ, ೨೦೧೮ರ ಚುನಾವಣೆಯಲ್ಲಿ ನೀಡಿದ್ದ ನೂರಾರು ಭರವಸೆಯಲ್ಲಿ ಶೇ.೪೦ಕ್ಕಿಂತ ಹೆಚ್ಚು ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ ಎನ್ನುವುದು ಕಾಂಗ್ರೆಸ್
ಆರೋಪ ಹಾಗೂ ನಿಜವೂ ಸಹ. ಪಕ್ಷಗಳು ಪ್ರಣಾಳಿಕೆಯಲ್ಲಿ ಸೇರಿಸುವ ಹಲವು ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಲು ಆಗುವುದಿಲ್ಲ ಎನ್ನುವುದು ಸ್ವತಃ ಸಮಿತಿಯಲ್ಲಿರುವ ಸದಸ್ಯರಿಗೆ ಗೊತ್ತಿರುತ್ತದೆ.

ಆದರೆ ಪ್ರಣಾಳಿಕೆಯಲ್ಲಿ ‘ವಾವ್’ ಎನ್ನುವ ಅಂಶವಿರಬೇಕು. ಜನರನ್ನು ಸೆಳೆಯಬೇಕು ಎನ್ನುವ ಏಕೈಕ ಕಾರಣಕ್ಕಾಗಿ ಕೆಲವು ಘೋಷಣೆಗಳನ್ನು ಮಾಡಲಾಗುತ್ತದೆ. ‘ಸರ್ವರಿಗೂ ಸೂರು’ ಎನ್ನುವುದು ಸ್ವಾತಂತ್ರ್ಯ ಭಾರತದ ಮೊದಲ ಚುನಾವಣೆ ಯಿಂದ ಕೇಳಿಬಂದಿರುವ ಸಾಮಾನ್ಯ ಘೋಷಣೆ. ಇದೇ ರೀತಿ ಬಡತನ ಮುಕ್ತ, ಉದ್ಯೋಗ ಸೃಷ್ಟಿಯೂ ಸರ್ವೇಸಾಮಾನ್ಯ ವಾಗಿರುವ ಘೋಷಣೆಗಳಾಗಿರುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ ಘೋಷಣೆ ಮಾಡಿರುವ ಭರವಸೆ ಈಡೇರಿಸಲು ರಾಜ್ಯ ಸರಕಾರದ ಬೊಕ್ಕಸದ ಮೇಲೆ ಹೆಚ್ಚುವರಿಯಾಗಿ ಎಷ್ಟು ಪ್ರಮಾಣದಲ್ಲಿ ಹೊರೆಯಾಗಲಿದೆ ಎನ್ನುವುದನ್ನು ಇನ್ನಷ್ಟೇ ನೋಡಬೇಕಿದೆ. ಆದರೆ ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರಂಟಿಗಳಿಗೆ ಎಷ್ಟು ಮೊತ್ತ ಬೇಕಾಗಬಹುದು ಎನ್ನುವ ಅಂದಾಜು ಈಗಾಗಲೇ ಸಿಕ್ಕಿದೆ.

ಅಧಿಕಾರಕ್ಕೆ ಬಂದ ಮೊದಲ ದಿನವೇ ಐದು ಗ್ಯಾರಂಟಿಗಳನ್ನು ಪೂರ್ಣಗೊಳಿಸುವುದಾಗಿ ಹೇಳಿರುವ ಕಾಂಗ್ರೆಸ್, ತನ್ನ ಐದು
ಗ್ಯಾರಂಟಿಗಳಿಗೆ ವಾರ್ಷಿಕವಾಗಿ ಸರಿಸುಮಾರು ೮೦ ಸಾವಿರ ಕೋಟಿ ರು.ಗೂ ಹೆಚ್ಚು ಅನುದಾನವನ್ನು ಎತ್ತಿಡಬೇಕಾಗುತ್ತದೆ
ಎನ್ನುವುದು ವಿಶ್ಲೇಷಕರ ಮಾತಾಗಿದೆ. ಇದರೊಂದಿಗೆ ನೀರಾವರಿ, ಮೂಲಸೌಕರ್ಯ, ನಗರಾಭಿವೃದ್ಧಿ, ವಸತಿ ಸೇರಿದಂತೆ
ಇನ್ನು ಹಲವು ಯೋಜನೆಗಳು ಸೇರುವ ಸಾಧ್ಯತೆಯಿದೆ. ಆದ್ದರಿಂದ ಈ ಎಲ್ಲ ಯೋಜನೆ ಜಾರಿಗೆ ಹಣದ ಮೂಲ ಯಾವುದು ಎನ್ನುವುದು ಅನೇಕರ ಪ್ರಶ್ನೆಯಾಗಿದೆ.

ಕಾಂಗ್ರೆಸಿಗರು ಸಾಲ ಮಾಡಿಯಾದರೂ ಯೋಜನೆ ಈಡೇರಿಸುವ ಮಾತನ್ನು ಹೇಳುತ್ತಿದ್ದಾರೆ. ಆದರೆ ಈಗಾಗಲೇ ಬೆಟ್ಟದಷ್ಟಿ ರುವ ಸಾಲಕ್ಕೆ ಇದೊಂದು ಸೇರ್ಪಡೆಯಾದರೆ ಆರ್ಥಿಕ ಪರಿಸ್ಥಿತಿಯೇನಾಗಲಿದೆ ಎನ್ನುವುದಕ್ಕೆ ಕಾಂಗ್ರೆಸಿಗರ ಬಳಿ ಉತ್ತರವಿಲ್ಲ. ಕಾಂಗ್ರೆಸ್, ಜೆಡಿಎಸ್ ಹಲವು ಉಚಿತ ಯೋಜನೆಗಳನ್ನು ಘೋಷಣೆ ಮಾಡಿದ್ದಕ್ಕೆ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಉಚಿತಯ ಯೋಜನೆಗಳ ಘೋಷಣೆ ದೇಶದ ಆರ್ಥಿಕತೆಗೆ ಮಾರಕ’ ಎನ್ನುವ ಮಾತನ್ನು
ಹೇಳಿದ್ದರು. ಕೆಲ ತಿಂಗಳ ಹಿಂದೆ ಇದೇ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಸಹ ಹೊರಹಾಕಿತ್ತು.

ಆದರೀಗ ಬಿಜೆಪಿಯೇ ತನ್ನ ಪ್ರಣಾಳಿಕೆಯಲ್ಲಿ ಈ ಎಲ್ಲ ಉಚಿತಗಳ ಘೋಷಣೆ ಮಾಡಿದೆ. ಕಾಂಗ್ರೆಸ್ ಆರು ಸಿಲಿಂಡರ್ ಕೊಡುವ
ಜಾಗದಲ್ಲಿ ಬಿಜೆಪಿ ಮೂರು ಸಿಲಿಂಡರ್ ನೀಡಿದರೆ, ಕಾಂಗ್ರೆಸ್ ೧೦ ಕೆ.ಜಿ ಅಕ್ಕಿ ಕೊಡುವ ಜಾಗದಲ್ಲಿ ಬಿಜೆಪಿ ಐದು ಕೆ.ಜಿ. ಅಕ್ಕಿ,
ಐದು ಕೆ.ಜಿ. ಸಿರಿಧಾನ್ಯ ನೀಡುವುದಾಗಿ ಹೇಳಿದೆ. ಕಾಂಗ್ರೆಸ್‌ನ ಇಂದಿರಾ ಕ್ಯಾಂಟೀನ್ ಬದಲಿಗೆ ಅಟಲ್ ಕ್ಯಾಂಟೀನ್ ಎನ್ನುವ
ಘೋಷಣೆ ಮಾಡಿದೆ. ಈ ಎಲ್ಲದರೊಂದಿಗೆ ಬಿಪಿಎಲ್ ಕುಟುಂಬಕ್ಕೆ, ಪ್ರತಿನಿತ್ಯ ಅರ್ಧ ಲೀಟರ್ ಹಾಲನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಈ ಯೋಜನೆಗಳಿಗೆ ಅಗತ್ಯವಿರುವ ಅನುದಾನವೇನು? ಪ್ರಾಯೋಗಿಕವಾಗಿ ಈ ಎಲ್ಲ ಯೋಜನೆ ಜಾರಿ ಸಾಧ್ಯವೇ? ಎನ್ನುವುದು ಈಗಿರುವ ಅನೇಕರ ಪ್ರಶ್ನೆಯಾಗಿದೆ.

ಕಾಂಗ್ರೆಸ್ ಘೋಷಣೆ ಮಾಡಿದ್ದ ಉಚಿತಗಳಿಂದ ದೇಶಕ್ಕೆ ಮಾರಕ ಎನ್ನುವುದಾದರೆ, ಬಿಜೆಪಿಯ ಘೋಷಣೆಗಳಿಂದಲೂ
ಆರ್ಥಿಕತೆಗೆ ಪರಿಣಾಮ ಬೀರುತ್ತದೆ ಅಲ್ಲವೇ? ಈ ಬಗ್ಗೆ ಸ್ಪಷ್ಟವಾಗಿ ಗೊತ್ತಿದ್ದರೂ, ಉಚಿತ ಘೋಷಣೆಗಳನ್ನು ಮಾಡಿರುವುದು ಏಕೆ? ಉಚಿತ ಘೋಷಣೆಗಳಿಂದ ಮಾತ್ರವೇ ಜನರನ್ನು ಸೆಳೆಯಲು ಸಾಧ್ಯವೇ ಎನ್ನುವುದು ಅನೇಕರಲ್ಲಿರುವ ಪ್ರಶ್ನೆ. ಯಾವುದೇ ಘೋಷಣೆಗಳನ್ನು ಮಾಡುವ ಮೊದಲು ಭವಿಷ್ಯದ ಬಗ್ಗೆ ಯೋಚಿಸಬೇಕು ಎನ್ನುವುದು ಹಲವು ತಜ್ಞರ ಅಭಿಪ್ರಾಯ. ಇದೀಗ ರಸ್ತೆ, ಡ್ಯಾಂಗಳ, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಒಮ್ಮೆಗೆ ಅನುದಾನವನ್ನು ಬಿಡುಗಡೆ
ಮಾಡಿದರೆ ನಡೆಯುತ್ತದೆ.

ಆದರೆ ಯಾವುದೇ ಸಹಾಯಧನ ಸಬ್ಸಿಡಿ, ಉಚಿತ ಘೋಷಣೆಗಳು ಕೇವಲ ಒಂದು ವರ್ಷಕ್ಕೆ ಸೀಮಿತವಾಗಿರುವುದಿಲ್ಲ. ನಿರಂತರವಾಗಿ ನೀಡುವ ಪ್ರಕ್ರಿಯೆಯಾಗಿ ಉಳಿಯುತ್ತದೆ. ಆದ್ದರಿಂದ ಬಿಜೆಪಿ ಅಥವಾ ಕಾಂಗ್ರೆಸ್ ಎನ್ನುವುದಕ್ಕಿಂತ ಯಾವುದೇ ಪಕ್ಷಗಳು ಘೋಷಣೆ ಮಾಡುವ ಮೊದಲು ಎಚ್ಚರಿಕೆಯ ಹೆಜ್ಜೆಯಿಡಬೇಕಾಗುತ್ತದೆ. ಹಲವರ ಪ್ರಕಾರ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೆ ಮಾಡಬೇಕಿರುವುದು, ರಾಜ್ಯದ ಜನರು ಉತ್ತಮ ರೀತಿಯಲ್ಲಿ ಬದುಕಲು ಬೇಕಿರುವ ವಾತಾವರಣ, ಮೂಲಸೌಕರ್ಯ ಒದಗಿಸುವುದು, ಜನರು ಸ್ವಂತದ ಬಲದಲ್ಲಿ ನಿಲ್ಲುವುದಕ್ಕೆ ಅಗತ್ಯವಿರುವಷ್ಟು ಹಣ ಸಂಪಾದಿಸುವುದಕ್ಕೆ ಬೇಕಿರುವಷ್ಟು ಉದ್ಯೋಗ ಸೃಷ್ಟಿ ಅಥವಾ ಸ್ವಯಂ ಉದ್ಯೋಗಕ್ಕೆ ಅವಕಾಶ ನೀಡಲು ಏನೆಲ್ಲ ಮಾಡಬೇಕೋ ಅದನ್ನು ಸರಕಾರಗಳು ಸೃಜಿಸಬೇಕೇ ಹೊರತು, ಮನೆಯಲ್ಲಿಯೇ ಕೂತಿದ್ದರೂ ‘ಬಿಪಿಎಲ್’ ಎನ್ನುವ ಕಾರ್ಡೊಂದಿದ್ದರೆ ಎಲ್ಲವೂ ಉಚಿತ
ಹಾಗೂ ಪಾಕೆಟ್ ಮನಿಯೆಂದು ತಿಂಗಳ ಇಂತಿಷ್ಟು ಹಣ ನೀಡುವುದಲ್ಲ.

ಈ ರೀತಿಯ ‘ಉಚಿತ’ಗಳ ಭರವಸೆಯಿಂದ ರಾಜ್ಯದ ಅಭಿವೃದ್ಧಿಯಾಗುವ ಬದಲು, ಭವಿಷ್ಯದಲ್ಲಿ ದಿವಾಳಿಯಾಗುವುದಕ್ಕೆ ವೇದಿಕೆ ಸಿದ್ಧವಾಗುತ್ತದೆ ಎನ್ನುವುದು ಸ್ಪಷ್ಟ.