Thursday, 19th September 2024

ಹೀಗೊಂದು ರಾಜಕೀಯ ಟೂರು

ವಿದ್ಯಮಾನ

ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ

ಕರ್ನಾಟಕದ ರಾಜಕಾರಣಿಗಳು ಪಾದಯಾತ್ರೆ ನಡೆಸಿ ತಮ್ಮ ಉದ್ದೇಶ ಸಾರ್ಥಕ ಪಡಿಸಿಕೊಂಡ ಉದಾಹರಣೆಗಳು ಬೇಕಾದಷ್ಟಿವೆ. ಅವುಗಳ ಪೈಕಿ ಸಿದ್ದರಾಮಯ್ಯನವರ ‘ಬಳ್ಳಾರಿ ಪಾದಯಾತ್ರೆ’ ಬಹಳ ಪ್ರಸಿದ್ಧವಾದುದು ಎನ್ನಬಹುದು. ಕಾರಣ, ಯಡಿಯೂರಪ್ಪ ನೇತೃತ್ವದ ಬಲಿಷ್ಠ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಗುವಲ್ಲಿ ಮತ್ತು ಆಗತಾನೆ ಕಾಂಗ್ರೆಸ್ ಸೇರಿದ್ದ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗುವಲ್ಲಿ ಈ ಪಾದಯಾತ್ರೆ ದೊಡ್ಡಮಟ್ಟದ ಪಾತ್ರ ವಹಿಸಿತು.

ಈಗಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ೨೦೨೨ರಲ್ಲಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆಯನ್ನು ಕೈಗೊಂಡಿದ್ದರು ಮತ್ತು ಅದರಿಂದ ಕಾಂಗ್ರೆಸ್ ಪರವಾದ ಜನಾಭಿಪ್ರಾಯವನ್ನು ಹೊಮ್ಮಿಸಲು ಬಹುಮಟ್ಟಿಗೆ ಯಶಸ್ವಿಯಾಗಿದ್ದರು. ಕಾವೇರಿ ಜಲವಿವಾದಕ್ಕೆ ಸಂಬಂಧಿಸಿ ರಾಮಕೃಷ್ಣ ಹೆಗಡೆಯವರ ಸಲಹೆಯಂತೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಕೂಡ ರೈತರ ಪರ ಪಾದಯಾತ್ರೆ ನಡೆಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹು ದಾಗಿದೆ.

ಇನ್ನು ನಾಯಕ ರಾಹುಲ್ ಗಾಂಧಿಯವರ ಇತ್ತೀಚಿನ ‘ಭಾರತ್ ಜೋಡೋ’ ಪಾದಯಾತ್ರೆಯಂತೂ ತನಗೆ ಮರುಜೀವ ತಂದುಕೊಟ್ಟಿತು ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತದೆ. ಹಾಗಾಗಿ, ರಾಜಕೀಯ ನೆಲೆಯಲ್ಲಿ ಪಾದಯಾತ್ರೆಗಳ ತಂತ್ರ ಇನ್ನೂ ಹಳಸಿಲ್ಲ, ಪ್ರಸ್ತುತವಾಗೇ ಇದೆ ಎನ್ನಬಹುದು. ಸರಕಾರದ ವಿರುದ್ಧವಾಗಿ ಸಾರ್ವಜನಿಕರ ಗಮನ ಸೆಳೆಯಲು ವಿಪಕ್ಷಗಳು ಈ ತರಹದ ಹೋರಾಟಗಳನ್ನು ಸಂಘಟಿಸುವುದು ಹೊಸದೇನಲ್ಲ. ಅದು ಸಾಮಾನ್ಯವಾಗಿ ಚುನಾವಣೆಯ ಆಜುಬಾಜಿನಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಸರಕಾರ ಈಗತಾನೇ ವಾರ್ಷಿಕೋತ್ಸವ ಆಚರಿಸಿಕೊಂಡ ಹೊತ್ತಿನಲ್ಲೇ ವಿರೋಧಿಗಳು ಎದ್ದುನಿಂತಿರುವುದು ಆಶ್ಚರ್ಯವೆನಿಸುವಂತಿದೆ.

ಅಂತೂ, ಸದ್ಯದ ಮಟ್ಟಿಗೆ ಬಿಜೆಪಿ- ಜೆಡಿಎಸ್‌ನ ಪಾದಯಾತ್ರೆ, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನ ಜನಾಂದೋಲನ ಯಾತ್ರೆ ಬೆಂಗಳೂರು-ಮೈಸೂರು
ಹೆದ್ದಾರಿಯ ಮೇಲೆ ಧೂಳೆಬ್ಬಿಸುತ್ತಿರುವುದಂತೂ ಸತ್ಯ. ಒಂದು ದೃಷ್ಟಿಯಿಂದ, ಬಿಜೆಪಿ ನೇತೃತ್ವದ ಮೈತ್ರಿಕೂಟವು ಹೋರಾಟ ಮಾಡುತ್ತಿರುವುದರಲ್ಲಿ ತಪ್ಪೇನಿಲ್ಲ; ಆಡಳಿತಾರೂಢ ಕಾಂಗ್ರೆಸ್ ಸರಕಾರದ ಆರೋಪ ಕೇಳಿಬಂದಾಗ ಅದನ್ನು ಖಂಡಿಸಿ ದಾಖಲೆಗಳ ಮೂಲಕ ಹೊರಗೆಳೆದು, ಜನರ ಮುಂದಿಟ್ಟು ಜನಾಭಿಪ್ರಾಯ ಮೂಡಿಸುವುದು ಒಂದು ವಿಪಕ್ಷವಾಗಿ ಅದರ ಕರ್ತವ್ಯ ಕೂಡ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗಿ ಯಾಗಿದ್ದಾರೆ ಎನ್ನಲಾಗುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸಾವಿರಾರು ಕೋಟಿ ರು. ಹಗರಣ ಮತ್ತು ಕರ್ನಾಟಕ ಸರಕಾರದ ಕೆಲ ಮಂತ್ರಿಗಳು ಹಾಗೂ ಶಾಸಕರು ಭಾಗಿಯಾಗಿದ್ದ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು ೧೮೭ ಕೋಟಿ ರು. ಹಣವನ್ನು
ಸಾರಾಸಗಟಾಗಿ ನೂರಾರು ಜನರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂಬುದು ಇಲ್ಲಿನ ಆರೋಪ.

ಎಸ್‌ಸಿ/ ಎಸ್‌ಟಿ ಕಲ್ಯಾಣ ಕಾರ್ಯಗಳಿಗಾಗಿ ಮೀಸಲಿರಿಸಿದ್ದ ಈ ಹಣವನ್ನು ಕಾಂಗ್ರೆಸ್ ಪಕ್ಷವು ಲೋಕಸಭಾ ಚುನಾವಣೆಗೆ ಬಳಸಿಕೊಂಡು ಹಗರಣ ವೆಸಗಿದೆ ಎನ್ನುವ ಸಂಗತಿ ಮುಂದುಮಾಡಿಕೊಂಡು ಸಿದ್ದರಾಮಯ್ಯರನ್ನು ಕೆಳಕ್ಕಿಳಿಸುವುದು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಸ್ಪಷ್ಟ ಉದ್ದೇಶವಾಗಿದೆ. ಈ ಕಾರ್ಯತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಮತ್ತು ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿತೆನ್ನಲಾದ ಹಗರಣಗಳನ್ನು ಜನರ ಮುಂದಿಡಲು ಇದೇ ಮಾರ್ಗದಲ್ಲಿ ಸಾಗಿ ಅವರಿಗಿಂತ ಒಂದು ದಿನ ಮುಂಚೆ ಜನಾಂದೋಲನ ಸಭೆ ಏರ್ಪಡಿಸಿತು.

ಪ್ರತಿಪಕ್ಷದ ಪಾದಯಾತ್ರೆಯ ದಾರಿ ತಪ್ಪಿಸುವ ಈ ಪ್ರಯತ್ನವು ‘ಉಲ್ಟಾ ಚೋರ್, ಕೊತ್ವಾಲ್ ಕೊ ಡಾಂಟಾ’ ಎಂಬಂತಾಗಿದೆ ಎನ್ನುವುದು ಮೈತ್ರಿಕೂಟದ ಅಂಬೋಣ. ಯಾರ ಹತ್ತಿರ ಎಷ್ಟು ದುಡ್ಡಿದೆ, ಎಲ್ಲೆಲ್ಲಿ ಬೇನಾಮಿ ಆಸ್ತಿಯಿದೆ, ಕಡಿಮೆ ಸಮಯದಲ್ಲಿ ದುಡ್ಡು ದ್ವಿಗುಣವಾಗಲು ಯಾವ ಬೆಳೆ ತೆಗೆಯ ಬೇಕು? ಮಾಜಿ ಪ್ರಧಾನಿ ದೇವೇಗೌಡರು ರಾಜಕೀಯಕ್ಕೆ ಬರುವಾಗ ಎಷ್ಟು ಸಂಪನ್ಮೂಲಗಳ ಜತೆಗೆ ಬಂದಿದ್ದರು? ಅವರ ಮಕ್ಕಳ ಈಗಿನ ಆಸ್ತಿಯ ಲೆಕ್ಕಾಚಾರವೆಷ್ಟು? ಡಿ.ಕೆ.ಶಿವಕುಮಾರ್ ಅವರ ತಂದೆ ಚಿನ್ನ ಅಳೆಯುತ್ತಿದ್ದರಾ? ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ಇವರಿಂದಲೇ ನಗ-ನಾಣ್ಯಗಳನ್ನು ಒಯ್ಯುತ್ತಿದ್ದನಾ? ಎಂಬೆಲ್ಲಾ ವಿಚಾರಗಳ ಕುರಿತಾದ ಚರ್ಚೆ ಮತ್ತು ಲೆಕ್ಕಾಚಾರಗಳು ಈಗ ಬೆಂಗಳೂರು-ಮೈಸೂರು ರಸ್ತೆಯ ಮೇಲೆ ನಡೆಯುತ್ತಿವೆ. ರಸ್ತೆಯಲ್ಲಿ ನಿಂತು ಎಲ್ಲರೂ ಮತ್ತೊಬ್ಬರ ಬಂಡವಾಳವನ್ನು ಬಿಚ್ಚಿಡುವ ಮಾತನಾಡುತ್ತಿದ್ದಾರೆ.

ರಾಜ್ಯಾದ್ಯಂತ ಸುರಿದ ಭಾರಿ ಮಳೆ, ಅದರಿಂದಾದ ನೆರೆ, ಗುಡ್ಡ ಕುಸಿತದಂಥ ಅನಾಹುತಗಳು ಮತ್ತು ಮನೆ-ಮಠ ಕಳೆದುಕೊಂಡವರ ಗೋಳು, ವರ್ಗಾ ವರ್ಗಿ ದಂಧೆಯಿಂದಾದ ಅಧಿಕಾರಿಯ ಬಲಿ ಮುಂತಾದ ಸಮಸ್ಯೆಗಳನ್ನೆಲ್ಲಾ ಉಪೇಕ್ಷಿಸಿ, ರಾಜ್ಯ ರಾಜಕಾರಣವು ಒಂದು ವಾರದಿಂದ ಬೆಂಗಳೂರು-
ಮೈಸೂರು ಹೆದ್ದಾರಿಯ ಮೇಲೆ ಬಂದು ನಿಂತು, ಪರಸ್ಪರ ಕೆಸರೆರಚಾಟದಲ್ಲಿ ನಿರತವಾಗಿದೆ. ಸರಕಾರದ ಮಂತ್ರಿಗಳಿಗೆ ನೆರೆಪೀಡಿತ ಪ್ರದೇಶಗಳಿಗೆ
ಹೋಗಲು ವ್ಯವಧಾನವಿಲ್ಲ ಮತ್ತು ನೀತಿ ಆಯೋಗದ ಸಭೆಗೆ ಹೋಗಿ ರಾಜ್ಯದ ಅಭಿವೃದ್ಧಿಯ ಕುರಿತು ಕೇಂದ್ರ ಸರಕಾರದ ಜತೆ ಚರ್ಚಿಸಲಂತೂ ಪುರುಸೊತ್ತೇ ಇಲ್ಲ.

ವಿರೋಧ ಪಕ್ಷಗಳನ್ನು ಬಿಡಿ, ಒಂದು ಜಾಗದಲ್ಲಿ ಕುಳಿತು ಆಡಳಿತ ನಡೆಸಬೇಕಾದ ಮತ್ತು ಸರಕಾರದಲ್ಲಿ ನಿರ್ಧಾರ ಕೈಗೊಳ್ಳಬೇಕಾದ ಸ್ಥಾನದಲ್ಲಿರುವ ಎಲ್ಲಾ ಪ್ರಮುಖ ಮಂತ್ರಿ ಮಹೋದಯರೂ ಕಳೆದೊಂದು ವಾರದಿಂದ ರಸ್ತೆಯ ಮೇಲೆಯೇ ಇದ್ದಾರೆ. ‘ವಾಲ್ಮೀಕಿ ನಿಗಮದಲ್ಲಿ ಹಗರಣವಾಗಿರುವುದು ನಿಜ; ಆದರೆ ಬಿಜೆಪಿಯವರು ಹೇಳುತ್ತಿರುವಂತೆ ಅದು ೧೮೭ ಕೋಟಿ ಅಲ್ಲ, ಬರೀ ೮೮ ಕೋಟಿ ರು. ಅಷ್ಟೇ’ ಎಂದು ಸ್ವತಃ ಮುಖ್ಯಮಂತ್ರಿಗಳು ಸದನದಲ್ಲಿ ಸ್ಪಷ್ಟೀಕರಣ ನೀಡುತ್ತಾರೆ.

ಅಲ್ಲದೆ, ಸೋರಿಹೋಗಿದ್ದ ಹಣವನ್ನು ಸಂಪೂರ್ಣವಾಗಿ ವಾಪಸ್ಸು ಪಡೆಯಲಾಗಿದೆ ಎನ್ನುವ ಮೂಲಕ ಉಪಮುಖ್ಯಮಂತ್ರಿಗಳು ತಮಗೆ ತಾವೇ ‘ಶಹಬ್ಬಾಸ್’ ಕೊಟ್ಟುಕೊಂಡಿದ್ದಾರೆ. ‘ಇದು ಅಧಿಕಾರಿಗಳ ಯಡವಟ್ಟಿನಿಂದ ಆದ ಹಗರಣವೇ ವಿನಾ, ಇದರಲ್ಲಿ ಯಾವ ಶಾಸಕರು ಮತ್ತು ಮಂತ್ರಿಗಳೂ ಭಾಗಿಯಾಗಿಲ್ಲ. ನಾವು ಎಸ್‌ಐಟಿ ತನಿಖೆ ನಡೆಸುತ್ತಿದ್ದೇವೆ’ ಎಂದು ಶಿವಕುಮಾರ್ ಅವರು ಹೇಳುತ್ತಿರುವಾಗಲೇ, ಇದ್ದಕ್ಕಿದ್ದಂತೆ ‘ಇ.ಡಿ’ ಪ್ರತ್ಯಕ್ಷವಾಗಿ ಒಬ್ಬ ಮಂತ್ರಿಯನ್ನು ಸಹ ಬಂಧಿಸಿ ವಿಚಾರಣೆಗೆ ಶುರುವಿಟ್ಟುಕೊಂಡಿದೆ.

ನಿಗಮದ ಅಧಿಕಾರಿಯೊಬ್ಬ ಆತ್ಮಹತ್ಯೆ ಮಾಡಿಕೊಂಡು ಅದು ಸುದ್ದಿಯಾಗದಿದ್ದಿದ್ದರೆ, ಇಷ್ಟೊತ್ತಿಗೆ ೧೮೭ ಕೋಟಿಯೂ ಹರಿದು ಹಂಚಿಹೋಗುತ್ತಿತ್ತು. ಈ ನಿಗಮದ ಫಲಾನುಭವಿ ಸಮುದಾಯದ ನಾಯಕರು ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೇಕೋ ಹಾಗಾಗಲಿಲ್ಲ. ಅವರುಗಳು ತುಟಿಬಿಚ್ಚದಂತೆ ನೋಡಿಕೊಂಡಿರುವುದು ನಿಜಕ್ಕೂ ಸರಕಾರದ ದೊಡ್ಡ ಸಾಧನೆಯೇ ಸರಿ. ಪಾದಯಾತ್ರೆಯಲ್ಲಿ ಸರಕಾರದ ಹಗರಣಗಳನ್ನು ಜನಮಾನಸದಲ್ಲಿ ಬಿಂಬಿಸಿ ಒತ್ತಡ ಹೇರುವ ಉದ್ದೇಶದ ಜತೆಜತೆಗೆ ಕುಟುಂಬ ಹಿತಾಸಕ್ತಿಯುಳ್ಳ ಬಿಜೆಪಿ ಮತ್ತು ಜೆಡಿಎಸ್‌ನ ಅಗ್ರಗಣ್ಯ ನಾಯಕರುಗಳು ತಮ್ಮ ಮುಂದಿನ ತಲೆಮಾರನ್ನು ಮುಂಚೂಣಿಗೆ ತರುವ ತಂತ್ರಗಾರಿಕೆಯೂ ಈ ಪಾದಯಾತ್ರೆಯ ಸಡಗರದಲ್ಲಿ ಅಡಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ಮಕ್ಕಳನ್ನು ತಮ್ಮ ರಾಜಕೀಯ ಉತ್ತರಾಧಿಕಾರಿಗಳು ಎಂದು ಬಿಂಬಿಸಲು ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಈ ಪಾದಯಾತ್ರೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಹಾಗೆ ಜನರಿಗೆ ಗೋಚರಿಸಿದ್ದರೆ ತಪ್ಪಿಲ್ಲ.  ಮೈತ್ರಿಕೂಟದಲ್ಲಿ ದೊಡ್ಡ ಪಕ್ಷವೆನಿಸಿರುವ ಬಿಜೆಪಿಯ ಭವಿಷ್ಯದ ಮುಖ್ಯಮಂತ್ರಿ ಎಂದು ಬಿಂಬಿತವಾಗುತ್ತಿರುವ ಬಿ.ವೈ. ವಿಜಯೇಂದ್ರ ಅವರು ಯಾತ್ರೆಯನ್ನು ಉತ್ಸಾಹ ದಿಂದ ಮುನ್ನಡೆಸುತ್ತಿದ್ದಾರೆ ಎಂದು  ಕಂಡುಬರುತ್ತಿದ್ದರೂ, ಕೇಂದ್ರ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಈ ಯಾತ್ರೆಯಲ್ಲಿ ಹೆಚ್ಚು ಮಿಂಚುತ್ತಿರುವುದು ಸುಳ್ಳಲ್ಲ.

ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ೬೬ ಕ್ಷೇತ್ರಗಳಲ್ಲಿ ಮತ್ತು ಲೋಕಸಭಾ ಚುನಾವಣೆಯಲ್ಲಿ ೧೭ ಕ್ಷೇತ್ರಗಳಲ್ಲಿ ಗೆದ್ದಿರುವ ಮೈತ್ರಿಕೂಟದ ಪ್ರಮುಖ ಪಕ್ಷವಾದ ಬಿಜೆಪಿ, ಲೋಕಸಭೆಯಲ್ಲಿ ೨ ಮತ್ತು ವಿಧಾನಸಭೆಯಲ್ಲಿ ೧೯ ಸ್ಥಾನಗಳನ್ನು ಮಾತ್ರ ಗೆದ್ದಿರುವ ಜೆಡಿಎಸ್‌ಗೆ ರಾಜ್ಯ ರಾಜಕಾರಣದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯವನ್ನು ಕೊಡು ತ್ತಿದೆ ಮತ್ತು ಕುಮಾರಸ್ವಾಮಿಯವರ ಮುಂದೆ ಬಿಜೆಪಿ ರಾಜ್ಯಘಟಕ ಮಂಡಿಯೂರಿದಂತೆ ಕಾಣುತ್ತಿದೆ ಎನ್ನುವ ಅಭಿಪ್ರಾಯ ಬಿಜೆಪಿಯ ಪಡಸಾಲೆಯಲ್ಲೇ ವ್ಯಕ್ತವಾಗುತ್ತಿದೆ.

ಅದಿಲ್ಲದಿದ್ದರೆ, ‘ಪ್ರೀತಮ್ ಗೌಡ ನಮ್ಮ ಪಕ್ಷದ ಯುವಮುಖಂಡರಿದ್ದಾರೆ, ಅವರನ್ನು ಪಾದಯಾತ್ರೆಯ ಪೂರ್ವಭಾವಿ ಸಭೆಗೆ ಕರೆಯುವುದು ಬಿಡುವುದು ನಮ್ಮ ಪಕ್ಷದ ನಿರ್ಧಾರ’ ಎಂದು ಹೇಳುವ ಧೈರ್ಯವನ್ನು ವಿಜಯೇಂದ್ರ ತೋರಿಸಬೇಕಿತ್ತು. ಪಾದಯಾತ್ರೆಗೆ ಬಿಜೆಪಿಯಿಂದ ಯಾರು ಬರಬೇಕು ಅಥವಾ ಯಾರು ಬರಬಾರದು ಎಂದು ಕುಮಾರಸ್ವಾಮಿಯವರು ಹೇಳುವ ಅಗತ್ಯವಿರಲಿಲ್ಲ ತಾನೆ? ಹಾಗಾಗಿ, ಜನರ ಕಣ್ಣಿಗೆ ಕುಮಾರಸ್ವಾಮಿಯವರು
ರಾಜ್ಯದಲ್ಲಿನ ಮೈತ್ರಿಕೂಟದ ಸಂಚಾಲಕರಂತೆ ಕಾಣುತ್ತಿದ್ದಾರೆ.

ಆರ್.ಅಶೋಕ್ ಮತ್ತು ವಿಜಯೇಂದ್ರ ಸೇರಿದಂತೆ ಬಿಜೆಪಿಯ ರಾಜ್ಯ ನಾಯಕತ್ವವು ಕುಮಾರಸ್ವಾಮಿಯವರ ಗಾಯನಕ್ಕೆ ‘ಕೋರಸ್’ ಮಾತ್ರ ನೀಡುತ್ತಿರು ವಂತೆ ತೋರುತ್ತಿದೆ. ‘ನಮ್ಮ ಜನಸ್ಪಂದನ ಕಾರ್ಯಕ್ರಮದ ಸಮಾರೋಪದಲ್ಲಿ ಮೈತ್ರಿಪಕ್ಷಗಳ ಹಗರಣಗಳೆಲ್ಲವನ್ನೂ ಒಂದೊಂದಾಗಿ ಬಿಚ್ಚಿಡುತ್ತೇವೆ’ ಎಂದು ನಮ್ಮ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಮುಹೂರ್ತ ಇಡುತ್ತಲೇ ಇದ್ದಾರೆ. ಬಿಜೆಪಿಯವರು ಅಥವಾ ಜೆಡಿಎಸ್‌ನವರು ರಾಜ್ಯಕ್ಕೆ ಮೋಸಮಾಡಿದ್ದಾರೆಂಬುದು ಸರಕಾರ ನಡೆಸುತ್ತಿರುವ ಕಾಂಗ್ರೆಸ್ಸಿಗೆ ತಿಳಿದಿದೆ ಎಂದಮೇಲೆ, ಅಧಿಕಾರದಲ್ಲಿ ಇದ್ದರೂ ತನಿಖೆ ನಡೆಸದೆ ವರ್ಷಾನುಗಟ್ಟಲೆ ಸುಮ್ಮನಿರುವುದು ರಾಜ್ಯಕ್ಕೆ ಮಾಡುತ್ತಿರುವ ಪರಮ ಅನ್ಯಾಯ ಎಂದು ಜನರಿಗೆ ಅನ್ನಿಸುವುದು ಸಹಜವೇ ತಾನೆ? ಹಾಗಾಗಿ ಬರೀ ಬಿಚ್ಚಿಡುವ ಮಾತುಗಳನ್ನಾಡುವುದರಿಂದ ಪ್ರಯೋಜನವಿಲ್ಲ, ಹಗರಣಗಳನ್ನು ಬಯಲಿಗೆಳೆದು ಅವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋದರೆ ಮಾತ್ರವೇ ಅದಕ್ಕೊಂದು ಅರ್ಥ ಬರುತ್ತದೆ.

ಇಲ್ಲವಾದಲ್ಲಿ, ಅದು ಬರೀ ಬೊಗಳೆಯಾಗುತ್ತದೆ ಅಷ್ಟೇ. ಒಬ್ಬರದನ್ನು ಇನ್ನೊಬ್ಬರು ಪರಸ್ಪರ ಬಿಚ್ಚಿಟ್ಟು ಕರ್ನಾಟಕದ ಜನತೆಯ ಮುಂದೆ ಎಲ್ಲಾ
‘ಖುಲ್ಲಂ ಖುಲ್ಲಾ’ ಆಗುವುದಾದರೆ ಆಗಲಿಬಿಡಿ! ಆದರೆ, ಇವರುಗಳದ್ದು ಸುಮ್ಮನೇ ಮಾತಷ್ಟೇ! ಯಾರೂ ಯಾರದ್ದನ್ನೂ ಬಿಚ್ಚಿಡುವ ಸ್ಥಿತಿಯಲ್ಲಿಲ್ಲ ಈಗ. ಒಬ್ಬರದ್ದು ಒಂದು ಹೇಳಿದರೆ, ಇನ್ನೊಬ್ಬರದ್ದು ನಾಲ್ಕು ಆಚೆಗೆ ಬರುತ್ತದೆ. ಅದಲ್ಲದಿದ್ದರೆ, ೪೦ ಪರ್ಸೆಂಟ್ ಸರಕಾರ, ಪೇಸಿಎಂ ಸರಕಾರ ಎಂದೆಲ್ಲಾ ರಾಜ್ಯಾದ್ಯಂತ ಪುಂಗಿ ಊದಿ ಚುನಾವಣೆ ಗೆದ್ದಿದ್ದ ಕಾಂಗ್ರೆಸ್ ಪಕ್ಷ ಅಽಕಾರಕ್ಕೆ ಬಂದು ಒಂದು ವರ್ಷ ಕಳೆದರೂ, ಬಿಜೆಪಿಯವರ ಒಂದು ಕೂದಲನ್ನೂ ಇನ್ನೂ ಕೊಂಕಿಸಲು ಆಗಿಲ್ಲವೇಕೆ? ಅದರರ್ಥ ಬಿಜೆಪಿಯ ಸರಕಾರದಲ್ಲಿ ಹಗರಣಗಳೇ ಆಗಿರಲಿಲ್ಲ ಅಂತಲ್ಲ.

ಅದನ್ನು ಆಚೆಗೆ ತರಲು ಕಾಂಗ್ರೆಸ್ಸಿಗೆ ಮನಸ್ಸಿಲ್ಲ ಅಂತ ಅರ್ಥ, ಅಷ್ಟೇ. ನಾವೆಲ್ಲಾ ಪ್ರಾಥಮಿಕ ಶಾಲೆಯಲ್ಲಿದ್ದಾಗ, ಯಾರೋ ಒಬ್ಬ ಇನ್ನೊಬ್ಬನ ಪೆನ್ಸಿಲ್
ಕದ್ದು ಮೇಷ್ಟ್ರಲ್ಲಿ ಸಿಕ್ಕಿಬೀಳುತ್ತಿದ್ದ. ಹಾಗೆ ಸಿಕ್ಕಿಬಿದ್ದವನನ್ನು ವಿಚಾರಣೆ ಮಾಡುವಾಗ, ‘ಸರ್, ನಿಮಗೆ ನನ್ನ ಮೇಲೆ ದೂರು ಕೊಟ್ಟವನೂ ಹಿಂದೊಮ್ಮೆ ಕಳ್ಳತನ ಮಾಡಿದ್ದ’ ಎಂದ ಹಾಗಾಯಿತು. ಆಗಲೇ ಹೇಳಿದ್ದಿದ್ದರೆ ಈತ ಪ್ರಾಮಾಣಿಕ ಎಂದು ಹೇಳಬಹುದಿತ್ತೇನೋ! ಆದರೆ, ತಾನು ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡ ಮೇಲೆ, ದೂರು ಕೊಟ್ಟವನೂ ಮೊದಲು ಕಳ್ಳನಾಗಿದ್ದ ಎಂದರೆ ಇವನ ಪ್ರಾಮಾಣಿಕತೆ ಢೋಂಗಿಯದಲ್ಲದೆ ಇನ್ನೇನು? ಹಾಗಾಗಿದೆ
ಕಾಂಗ್ರೆಸ್ಸಿನ ಈಗಿನ ಸ್ಥಿತಿ.

ಇನ್ನು, ಬಿಜೆಪಿಯವರ ಹಾರಾಟವು ‘ಹಾವೂ ಸಾಯಬಾರದು, ಕೋಲೂ ಮುರಿಯಬಾರದು’ ಎನ್ನುವ ಹಾಗಿದೆ. ಒಂದೆಡೆ ವರಿಷ್ಠರನ್ನೂ ಮೆಚ್ಚಿಸಬೇಕು, ಮತ್ತೊಂದೆಡೆ ಇಲ್ಲಿ ಯಾರೊಂದಿಗೂ ಕೆಟ್ಟವರಾಗಬಾರದು. ಇದಕ್ಕೆ ಪೂರಕವಾಗಿ ರಾಜ್ಯ ಬಿಜೆಪಿಯ ಕೆಲವು ಪ್ರಮುಖ ನಾಯಕರು ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಾಳುಮಾಡಿದರು. ‘ಚುನಾವಣೆಯಲ್ಲಿನ ಸೋಲಿಗೆ ಬೊಮ್ಮಾಯಿ ಆಗಲೀ, ಮೋದಿಯಾಗಲೀ ಕಾರಣರಲ್ಲ, ಅಡ್ಜಸ್ಟ್‌ಮೆಂಟ್ ಗಿರಾಕಿಗಳು ಕಾರಣ’ ಎನ್ನುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ಇಂದಿನ ರಾಜಕೀಯದ ಒಳಸುಳಿಗಳನ್ನು ಬಿಚ್ಚಿಡುತ್ತದೆ. ಹಿಂದೊಂದು-ಮುಂದೊಂದು ಎನ್ನುವ ರಾಜಕಾರಣಿಗಳ ಮನಸ್ಥಿತಿಯನ್ನು ಕರ್ನಾಟಕದ ಜನರು ಅರಿತು ಬಹಳ ಕಾಲವೇ ಆಗಿಹೋಯಿತು ಬಿಡಿ!

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

Leave a Reply

Your email address will not be published. Required fields are marked *