Tuesday, 10th September 2024

ರಾಜಕಾರಣಿಗಳ ಜಿದ್ದು, ಕಾರ್ಯಾಂಗಕ್ಕೆ ಗುದ್ದು !

ವಿದ್ಯಮಾನ

ಮೋಹನದಾಸ ಕಿಣಿ, ಕಾಪು

kini.mohandas@gmail.com

ಸುದ್ದಿಗಳು ಬೇರೆ ಬೇರೆಯಾದರೂ ಎರಡನ್ನೂ ಜೋಡಿಸಿ ಜಾಲತಾಣಗಳಲ್ಲಿ ಹರಿಬಿಟ್ಟ ಸುದ್ದಿ ಹೀಗಿತ್ತು; ಏನಪ್ಪಾ ಅಂದರೆ; ಒಂದು: ೨೦೦೦ ರು. ಲಂಚ ಪಡೆದ ಲೈನ್ ಮ್ಯಾನ್ ದಸ್ತಗಿರಿ, ಎರಡು: ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದು ೫೦೦ ರು. ಕೋಟಿಗೂ ಹೆಚ್ಚಿನ ಆಸ್ತಿ ಪತ್ತೆಯಾದ ತಹಶೀಲ್ದಾರ್ ವರ್ಗಾವಣೆ. ಇದರಲ್ಲಿ ವಿಶೇಷವೇನು ಅಂದಿರಾ? ಚಿಕ್ಕ ಮೊತ್ತದ ಲಂಚ ಪಡೆದವರನ್ನು ದಸ್ತಗಿರಿ ಮಾಡಿ, ಭಾರೀ ಮೊತ್ತದ ಅವ್ಯವಹಾರ ಮಾಡಿದವರ ಅಮಾನತು ತೆರವುಗೊಳಿಸಿ ವರ್ಗಾವಣೆ ಮೇಲೆ ಬೇರೆಡೆ ಕೆಲಸ ಮಾಡಲು ಅವಕಾಶ ನೀಡಿದ್ದು. ಇದು ಪ್ರಶ್ನಾರ್ಹ ವಿಷಯವೇ ಅಲ್ಲ, ಇದೇ ಸರಿ. ಏಕೆಂದರೆ
ಇಷ್ಟೊಂದು ಅಗಾಧ ಮೊತ್ತದ ಅವ್ಯವಹಾರ ಒಂದೆರಡು ದಿನಗಳಲ್ಲಿ ನಡೆದಿದ್ದೇನಲ್ಲ, ಆಡಳಿತ ನಡೆಸಿದ ಸರಕಾರಗಳ ಮೊದಲು ಬರುವುದೆಲ್ಲ ಬಂದಿ ದ್ದರೂ, ಹೀಗೆಲ್ಲ ಆಗಿರುವುದಕ್ಕೆ ಕಾರಣ, ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳದಂತೆ ತಡೆದವರೇ ಇಂತಹ ರಕ್ಷಣೆ ನೀಡಿದವರೂ ಆಗಿರುವುದು.
ಆಡಳಿತ ಪಕ್ಷ ಮತ್ತು ವಿಪಕ್ಷಗಳು ರಾಜಕೀಯ ಬದಲಾದಂತೆ ರಾಜಕಾರಣಿಗಳ ಪಾತ್ರ ಬದಲಾಗುತ್ತದೆ.

ಆಡಳಿತ ಪಕ್ಷದಲ್ಲಿದ್ದವರು ಸೋತರೆ, ಅವರ ಸ್ಥಾನಕ್ಕೆ ಬೇರೆಯವರು ಆಯ್ಕೆಯಾಗುತ್ತಾರೆ. ಆದರೆ ಅಽಕಾರಿಗಳು ಮಾತ್ರ ನಿವೃತ್ತಿ ಹೊಂದುವವರೆಗೆ ಕರ್ತವ್ಯದಲ್ಲಿರುತ್ತಾರೆ. ಗೆದ್ದವರು ಅಧಿಕಾರಿಗಳನ್ನು, ವಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡರು ಎಂದೆಲ್ಲ ಮಾಧ್ಯಮಗಳು ಬರೆಯುತ್ತವೆ ಇದು ಮೇಲ್ನೋಟಕ್ಕೆ ಮಾತ್ರ. ವಾಸ್ತವ ಬೇರೆಯೇ ಇರುತ್ತದೆ. ಮೊದಲಿಗೆ, ಕಾನೂನು ನಿರ್ಮಾತೃಗಳೇ ಕಾನೂನು ಮುರಿಯುವುದರಲ್ಲಿ ಅಗ್ರಗಣ್ಯರು. ಕಾನೂನಿನಂತೆ ಕಾರ್ಯ ನಿರ್ವಹಿಸುವ ಉತ್ತರದಾಯಿತ್ವವೇನಿದ್ದರೂ ಅಽಕಾರಿಗಳದ್ದು. ಆದ್ದರಿಂದ ಏನೇ ತಪ್ಪಾದರೂ ಶಿಕ್ಷೆ ಅಧಿಕಾರಿಗಳಿಗೆ/ನೌಕರರಿಗೆ
ಹೊರತು ರಾಜಕಾರಣಿಗಳಿಗಲ್ಲ. ವಿಚಿತ್ರವೆಂದರೆ ಪರಸ್ಪರ ವೈರಿಯಂತೆ ವರ್ತಿಸುವ ರಾಜಕಾರಣಿಗಳು ಅದೆಷ್ಟೋ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಯನ್ನು ಒಂದೇ ಊಟದ ಮೇಜನ್ನು ಹಂಚಿಕೊಳ್ಳುತ್ತಾರೆ, ಚುನಾವಣಾ ಪ್ರಚಾರ ಸಭೆಗಳಲ್ಲಿ, ಪತ್ರಿಕಾಗೋಷ್ಠಿ, ವಿಧಾನಸಭಾ ಚರ್ಚೆಯಲ್ಲಿ ಮಾಡುವ ಆರೋಪ ಪ್ರತ್ಯಾರೋಪಗಳ ತೀಕ್ಷ್ಣತೆ ನೋಡಿದರೆ ಆಶ್ಚರ್ಯವಾಗುತ್ತದೆ.

ಆದರೆ ತಮ್ಮ ಕೆಲಸ ಸಾಧನೆಗೆ ದಾಳವಾಗಿ ಉಪಯೋಗಿಸುವುದು ಮಾತ್ರ ಸರಕಾರಿ ಅಧಿಕಾರಿಗಳನ್ನೇ! ಈ ಉದಾಹರಣೆಗಳನ್ನು ನೋಡಿ: ಆಡಳಿತ ಪಕ್ಷದ ಲ್ಲಿರುವ ಪುಡಾರಿ, ಅದು ಆಡಳಿತದಲ್ಲಿರುವ ಪಕ್ಷದ ಪರಾಜಿತ ಅಭ್ಯರ್ಥಿಯಿರಬಹುದು, ಗೆದ್ದರೂ ವಿಪಕ್ಷ ದಲ್ಲಿರುವ ಶಾಸಕರಾಗಿರಬಹುದು, ಒಟ್ಟಿನಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಭಾವಶಾಲಿ ರಾಜಕಾರಣಿ ಅಥವಾ ರಾಜಕಾರಣಿಗಳ ಸಮೀಪವರ್ತಿಯಾದರೂ ಸಾಕು ಅವರೆಲ್ಲರ ವರಸೆ ಹೇಗಿರುತ್ತದೆಂದರೆ ಕಾನೂನು ಏನೇ ಇರಲಿ, ಅವರು ಹೇಳಿದಂತೆ ಕೇಳಬೇಕು. ಇಲ್ಲ, ನಿಮ್ಮನ್ನು ನೋಡಿಕೊಳ್ಳುತ್ತೇನೆ!

ನಾಳೆ ಸಮಸ್ಯೆಯೇನಾದರೂ ಆದರೆ, ತಲೆ ಕೊಡಬೇಕಾದವರು ಹಾಗೆ ಮಾಡಲು ಹೇಳಿದವರಲ್ಲ, ಮಾಡಿದವರು -ಅಂದರೆ ಅಧಿಕಾರಿಗಳು. ಹಿಂದೊಮ್ಮೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿ ನ್ಯಾಯಾಲಯದ ಆದೇಶ ಪಾಲಿಸದಿರುವ ಕಾರಣಕ್ಕೆ ನ್ಯಾಯಾಂಗ ನಿಂದನೆ ಪ್ರಕರಣವು ದಾಖಲಾಗಿತ್ತು.
ನ್ಯಾಯಾಲಯ ಸೂಚಿಸಿದ ಅವಧಿಯೊಳಗೆ ಕಾರ್ಯಗತಗೊಳಿಸುವುದಾಗಿ ಇಲಾಖೆಯ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದರೂ ಸಂಬಂಧಿಸಿದ ಸಚಿವರು ಕಡತದಲ್ಲಿ ಅನುಮೋದನೆ ನೀಡಲು ತಡಮಾಡಿದ ಕಾರಣಕ್ಕೆ ಆದೇಶವನ್ನು ಕ್ಲಪ್ತಕಾಲದಲ್ಲಿ ಪಾಲಿಸಲು ಸಾಧ್ಯವಾಗಿರಲಿಲ್ಲ.

ತಪ್ಪು ಸಚಿವರzದರೂ ಅಫಿಡವಿಟ್ ಸಲ್ಲಿಸಿದ ತಪ್ಪಿಗೆ ಅಧಿಕಾರಿ ಒಂದು ತಿಂಗಳ ಜೈಲು ವಾಸ ಅನುಭವಿಸಬೇಕಾಯಿತು. ಪದೇ ಪದೇ ಸಮ ನೀಡಿದರೂ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಳ್ಳುವುದು ಒಬ್ಬರಾದರೆ ನ್ಯಾಯಾಲಯ ಛೀಮಾರಿ ಹಾಕುವುದು ಪೋಲೀಸರಿಗೆ. ಅವ್ಯವಹಾರ ನಡೆಸುವಾಗ ಮೌಖಿಕ ಆದೇಶ ನೀಡಿ ರಾಜಕಾರಣಿಗಳು ತಾವು ಸಂಭಾವಿತರೆಂಬ ಮುಖವಾಡ ಧರಿಸಿ ತಪ್ಪೆಲ್ಲ ಅಧಿಕಾರಿಗಳ ತಲೆಗೆ ಕಟ್ಟುವುದು. ಅಂದಿನ ನಗರ್ವಾಲ್ ಪ್ರಕರಣದಿಂದ ಇಂದಿನ ವಾಲ್ಮೀಕಿ ನಿಗಮದ ಹಗರಣದವರೆಗೆ ನಡೆಯುತ್ತಿರುವುದು ಒಂದೇ!

ಶಾಸಕರು ಒಂದು ಪಕ್ಷ, ಸರಕಾರ ಬೇರೊಂದು ಪಕ್ಷದ್ದಾದರೆ ಇನ್ನೂ ಜಿದ್ದಾಜಿದ್ದಿ. ಸರಕಾರಿ ಕಚೇರಿಗಳಿಗೆ ಭೇಟಿ ನೀಡಿದರೆ ಜನರ ಅಹವಾಲು ಆಲಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರೆ, ಅಧಿಕಾರಿಗಳು ಯಾರ ಮಾತನ್ನು ಕೇಳಿದರೂ ಇನ್ನೊಬ್ಬರು ಕೆರಳುತ್ತಾರೆ! ಚುನಾವಣೆ ವೇಳೆಯಲ್ಲಂತೂ ಇದು
ಇನ್ನೂ ಹೆಚ್ಚು. ಚುನಾವಣೆ ಮುಗಿಯಲಿ, ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂಬ ಧಮ್ಕಿ ಬೇರೆ. ಗೆದ್ದವರು ಮತ್ತು ಸರಕಾರ ಎರಡೂ ಒಂದೇ ಪಕ್ಷವಾದರೆ ಸ್ವಲ್ಪ ಪರವಾಗಿಲ್ಲ, ಇಲ್ಲದಿದ್ದರೆ ಅಧಿಕಾರಿಗಳ ಪಾಡು ದೇವರಿಗೇ ಪ್ರೀತಿ. ಇತ್ತೀಚೆಗಂತೂ ವಿಪಕ್ಷ ಶಾಸಕರಿರುವ ಕ್ಷೇತ್ರಗಳಲ್ಲಿ ಇಂತಹ ಪರಿಪಾಟಲು
ವಿಪರೀತ. ಅಧಿಕಾರಿಗಳು ಯಾರ ಮಾತು ಕೇಳಿದರೂ ತಪ್ಪೇ. ನಾಳೆ ನೆಮ್ಮದಿಯಿಂದ ನಿವೃತ್ತಿ ಸಿಕ್ಕಿದರೆ ಸಾಕೆಂಬ ಪರಿಸ್ಥಿತಿ.

ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ನಿಗಮಮಂಡಳಿಗಳ ಸದಸ್ಯತ್ವಕ್ಕೆ ಶಾಸಕರ ಶಿ-ರಸಿನ ಮೇರೆಗೆ ನೇಮಕ ಮಾಡಲಾಗುವುದೆಂದು ನೀಡಿದ ಹೇಳಿಕೆಯಲ್ಲಿ ಶಾಸಕರು (ಅಂದರೆ ಆಡಳಿತ ಪಕ್ಷದವರು) ಅಥವಾ ಪರಾಜಿತ ಅಭ್ಯರ್ಥಿಗಳೂ ಶಿಫಾರಸು ಮಾಡಬಹುದು ಎಂದು ಸೇರಿಸಿದ್ದರು. ಅಂದರೆ ಒಟ್ಟಿನಲ್ಲಿ ಆಡಳಿತ ಪಕ್ಷದವರ ಶಿಫಾರಸು ಪರಿಗಣನೆಗೆ ಬರುತ್ತದೆ. ಮತ್ತದೇ ಜಟಾಪಟಿ. ಶಾಸಕರೊಂದು ಪಕ್ಷ, ನೇಮಕಾತಿ ಯಾದವರದೊಂದು ಪಕ್ಷ. ಒಟ್ಟಿನಲ್ಲಿ ಅಧಿಕಾರಿಗಳು ಸುಸ್ತು.

ಶಾಸಕರು ಮುಖ್ಯಮಂತ್ರಿ ಪರಿಹಾರ ನಿಧಿ ಮುಂತಾದ ಮೂಲಗಳಿಂದ ಧನಸಹಾಯಕ್ಕೆ ಶಿಫಾರಸು ಮಾಡುತ್ತಾರೆ. ಮಂಜೂರಾತಿ ಆದೇಶ ಬರುವಾಗ ಶಾಸಕರು ಬದಲಾದರೆ ಅದು ತನ್ನ ಶಿಫಾರಸಿನಂತೆ ಮಂಜೂರಾಗಿದ್ದು ವಿತರಣೆ ಮಾಡುವ ಸಮಾರಂಭದಲ್ಲಿ ತಾನೂ ಇರಬೇಕೆಂದು ಮಾಜಿಯವರ ಒತ್ತಡ ಒಂದೆಡೆಯಾದರೆ, ಅವರು ಮಾಜಿ, ನಾನೇ ವಿತರಣೆ ಮಾಡುತ್ತೇನೆ ಎಂದು ಹಾಲಿಯವರ ಒತ್ತಡ! ಇತ್ತೀಚೆಗೆ ಇನ್ನೊಂದು ಹೊಸ ರೀತಿಯ ನಾಟಕ
ಆರಂಭವಾಗಿದೆ. ಹೊಸ ಸರಕಾರ ಬಂದೊಡನೆ ಹಿಂದಿನ ಸರಕಾರ ನೀಡಿದ ಗುತ್ತಿಗೆ, ತೆಗೆದುಕೊಂಡ ನಿರ್ಧಾರಗಳನ್ನು ಅಮಾನತ್ತಿನಲ್ಲಿಟ್ಟು ತನಿಖೆ ನಡೆಸುವುದು. ಅಂತಹ ತನಿಖಾ ತಂಡದಲ್ಲಿ ಇರುವವರ ನೇಮಕಾತಿಯಿಂದ ಆರಂಭಿಸಿ, ತನಿಖಾ ವರದಿ ಬರುವಲ್ಲಿನ ಪ್ರತಿಯೊಂದೂ ತಮ್ಮ ಅನುಕೂಲಕ್ಕೆ ತಕ್ಕಂತೆ ಇರಬೇಕೆಂದು ನಿರೀಕ್ಷಿಸುವುದು. ಇದರಲ್ಲಿ ಹಾಲಿ ಮತ್ತು ಮಾಜಿ ಇಬ್ಬರನ್ನೂ ತೂಗಿಸಿಕೊಂಡು ಹೋಗುವಷ್ಟರಲ್ಲಿ ಅಧಿಕಾರಿಗಳು ಸುಸ್ತು!

ಸಾಲದ್ದಕ್ಕೆ ಯಾವುದೇ ಹಗರಣದ ತನಿಖಾ ವರದಿ ಎಂದಿಗೂ ಅಧಿಕಾರಿಗಳ ವಿರುದ್ಧ ಇರುವುದೇ ಹೊರತು, ರಾಜಕಾರಣಿಗಳ ವಿರುದ್ಧ ಅಲ್ಲ. ಇತ್ತೀಚಿನ
ಹಲವಾರು ಹಗರಣಗಳಲ್ಲಿ(?)ಮೊತ್ತ ಮೊದಲಿಗೆ ಮಾಡುವುದು ಅಧಿಕಾರಿಗಳ ವರ್ಗಾವಣೆ ಅಥವಾ ಅಮಾನತು. ಮೇಲ್ನೋಟಕ್ಕೆ ಕ್ರಮ ಕೈಗೊಂಡಂತೆ ಕಂಡರೂ, ಅಮಾನತು ಮಾಡಿ ಕೆಲವೇ ದಿನಗಳಲ್ಲಿ ಬೇರೊಂದೆಡೆ ನಿಯುಕ್ತಿ ಮಾಡಿರುವುದು ಸುದ್ದಿಯಾಗುವುದಿಲ್ಲ! ಕಾಟಾಚಾರಕ್ಕೆ ಎಂಬಂತೆ ತನಿ
ಖೆಯೂ ನಡೆಯುತ್ತದೆ, ಕ್ರಮೇಣ ಮರೆತೂ ಹೋಗುತ್ತದೆ. ಏಕೆಂದರೆ ಅಂಥವರಿಗೆ ರಾಜಕಾರಣಿಗಳ ಕೃಪಾಕಟಾಕ್ಷ ಇರುತ್ತದೆ. ಇಲ್ಲದವರ ಗತಿ; ಅಧೋಗತಿ!
ರಾಜ್ಯದ ಮಂತ್ರಿಗಳು ಅದರಲ್ಲೂ ಯಾವುದಾದರೂ ಜಿಲ್ಲೆಯ  ಉಸ್ತುವಾರಿ ಸಚಿವರು, ಮತ್ತು ಕೇಂದ್ರ ಸರಕಾರದ ಸಚಿವರು ಏಕಕಾಲದಲ್ಲಿ ಜಿಲ್ಲೆಯಲ್ಲಿ ಕಾರ್ಯಕ್ರಮ ಹಾಕಿಕೊಂಡರೆ ಅಧಿಕಾರಿಗಳು ಯಾರ ಸಭೆಗೆ ಹಾಜರಾಗಬೇಕು ಎಂಬ ಗೊಂದಲ.

ಇವರ ಸಭೆಗೆ ಹೋದರೆ ಅವರು, ಅವರ ಸಭೆಗೆ ಹೋದರೆ ಇವರು ಗುಟುರು ಹಾಕುತ್ತಾರೆ. ಅಷ್ಟೇಕೆ ಹಿಂದೆ ದಕ್ಷಿಣ ಕನ್ನಡ ಜಿಯಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರದೇ ಪಕ್ಷದ ಸಚಿವರೊಬ್ಬರು ಉಸ್ತುವಾರಿ ಸಚಿವರ ನೆಲೆಯಲ್ಲಿ ಸಭೆ ಕರೆದಿದ್ದರು. ಅದೇ ವೇಳೆ ಮುಖ್ಯಮಂತ್ರಿಯವರೂ ಕಾರ್ಯಕ್ರಮ ಹಾಕಿಕೊಂಡಿದ್ದರು. ಅಧಿಕಾರಿಗಳಿಗೆ ಉಭಯ ಸಂಕಟ. ಶಿಷ್ಟಾಚಾರದಂತೆ ಯಾರಿಗೆ ಹೇಗೆ ಆದ್ಯತೆ ನೀಡಬೇಕು ಎಂಬ ಬಗ್ಗೆ ನಿಯಮಾವಳಿ ಇದೆ; ನಿಜ ಆದರೆ ನಡೆಯುವುದೇ ಬೇರೆ.

ಹಾಗಂತ ಎಲ್ಲರೂ ಸಂಭಾವಿತರೇನಲ್ಲ. ಪದೇಪದೇ ಲೋಕಾಯುಕ್ತ ದಾಳಿಯಾಗಿ ಅಪಾರವಾದ ಆಸ್ತಿ, ನಗದು ಚಿನ್ನ, ಇನ್ನೂ ಬಹಳಷ್ಟು ವಶಪಡಿಸಿ ಕೊಂಡ ವರದಿಯಾಗುತ್ತದೆ. ಅವರೆಲ್ಲರ ವ್ಯವಹಾರಗಳು ರಾಜಕಾರಣಿಗಳ ಗಮನಕ್ಕೆ ಬಾರದೆ ಇರುವುದಿಲ್ಲ. ಆದರೂ ಅಷ್ಟೊಂದು ಬೆಳೆಯಲು ಕಾರಣ: ಅವರು ನೀರು ಯಾವುದೇ ಗಾತ್ರದ ಪಾತ್ರೆಗೆ ಹೊಂದಾಣಿಕೆಯಾಗುವಂತೆ ಯಾವ ಪಕ್ಷದವರು ಅಧಿಕಾರಕ್ಕೆ ಬಂದರೂ ಹೊಂದಾಣಿಕೆ ಮಾಡಿಕೊಂಡು ತಮ್ಮ ವ್ಯವಹಾರ ವನ್ನು ಮುಂದುವರಿಸುವ ಚಾಕಚಕ್ಯತೆ ಉಳ್ಳವರು. ಕೆಲವೊಮ್ಮೆ ಇಂತವರೂ ಬದಲಾದ ವ್ಯವಸ್ಥೆಗೆ ಹೊಂದಿಕೊಳ್ಳಲಾಗದೆ ಸಿಕ್ಕಿ ಬೀಳುತ್ತಾರೆ. ಕಾರಣವಿಷ್ಟೇ; ಬಾಚಿಕೊಂಡದ್ದರಲ್ಲಿ ಹಾಲಿ ಮತ್ತು ಮಾಜಿಗಳು ಇಬ್ಬರೂ ಪಾಲು ಕೇಳಿದರೆ? ಒಟ್ಟಿನಲ್ಲಿ ರಾಜಕಾರಣಿಗಳ ಜಿದ್ದು -ಅಧಿಕಾರ ಶಾಹಿಗೆ ಸದಾಕಾಲ ಗುದ್ದು!

(ಲೇಖಕರು: ಹವ್ಯಾಸಿ ಬರಹಗಾರರು)

 

Leave a Reply

Your email address will not be published. Required fields are marked *