ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ಸಾಮಾನ್ಯವಾಗಿ ವರ್ಷದ ಕೊನೆಯಲ್ಲಿ, ಗಣ್ಯವ್ಯಕ್ತಿಗಳಿಂದ ಆ ವರ್ಷ ಓದಿದ ಪುಸ್ತಕಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸುವುದು ಪತ್ರಿಕೆಗಳ ವಾಡಿಕೆ. ನಮ್ಮ ಮೇಲೆ ಪ್ರಭಾವ ಬೀರುವವರು ಯಾವ ಪುಸ್ತಕ ಓದಿದ್ದಾರೆ ಎಂಬುದನ್ನು ಓದುಗರಿಗೆ ತಿಳಿಸುವ ಪ್ರಯತ್ನವಿದು.
ಓದುಗರೂ ಸಹ ಇಂಥ ಲೇಖನಗಳಿಗೆ ಎದುರು ನೋಡುತ್ತಿರುತ್ತಾರೆ. ಅಮೆರಿಕದ ಪತ್ರಿಕೆಗಳಂತೂ ಪ್ರತಿ ಮೂರು ತಿಂಗಳಿಗೊಮ್ಮೆ ಗಣ್ಯರ ಓದಿನ ಪುಸ್ತಕಗಳ ಪಟ್ಟಿಯನ್ನು ಪ್ರಕಟಿಸುತ್ತವೆ. ಅದರಲ್ಲೂ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕಾಲಕಾಲಕ್ಕೆ ತಮ್ಮ ಓದಿನ ಪಟ್ಟಿ ಮತ್ತು ವಿವರಗಳನ್ನು ಬಿಡುಗಡೆ ಮಾಡುತ್ತಾರೆ. ಅವರು ಶಿಫಾರಸು
ಮಾಡುವ ಪುಸ್ತಕಗಳು ಸಹಜವಾಗಿ ಭಾರಿ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ.
ಬಿಲ್ ಗೇಟ್ಸ್ ಅವರಂತೂ ಆರು ತಿಂಗಳಿಗೊಮ್ಮೆ ತಾವು ಓದಿದ ಇಪ್ಪತ್ತು ಪುಸ್ತಕಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಈ ರೀತಿ ಪುಸ್ತಕಗಳನ್ನು ಶಿಫಾರಸು ಮಾಡಲು ಅವರು ಹಣ ಪಡೆಯುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ ಅವರು ಯಾವ ಪುಸ್ತಕ ಓದಬೇಕು ಎಂಬ ಬಗ್ಗೆ ಓದುಗರ ಮೇಲೆ ಪ್ರಭಾವ ಬೀರುವುದಂತೂ ನಿಜ. ಅವರ ಪಟ್ಟಿಯನ್ನು ನೋಡಿ ಕೋಟ್ಯಂತರ ಜನ ಆ ಪುಸ್ತಕಗಳನ್ನು ಖರೀದಿಸುತ್ತಾರೆ.
ನಾನೂ ಇವರಿಬ್ಬರ ಪುಸ್ತಕಗಳ ಪಟ್ಟಿಯನ್ನು ಎದುರು ನೋಡುತ್ತೇನೆ ಮತ್ತು ತಪ್ಪದೇ ಆ ಪುಸ್ತಕಗಳನ್ನು ಖರೀದಿಸಿ ಓದುತ್ತೇನೆ.
ಕಳೆದ ಹತ್ತು – ಹನ್ನೆರಡು ವರ್ಷಗಳಿಂದ ಕನ್ನಡ ಪತ್ರಿಕೆಗಳೂ ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿವೆ. ಕೆಲವು
ಪತ್ರಿಕೆಗಳು ವರ್ಷದ ಕೊನೆಯಲ್ಲಿ ಎಲ್ಲಾ ಕ್ಷೇತ್ರಗಳ ಗಣ್ಯರು ಆ ವರ್ಷದಲ್ಲಿ ಓದಿದ ಪುಸ್ತಕಗಳ ಹೆಸರು, ಆ ಪುಸ್ತಕದ ಕಿರು ವಿವರ,
ಯಾವ ಕಾರಣಕ್ಕೆ ಆ ಕೃತಿ ಮಹತ್ವದ್ದು ಎಂಬೆ ಮಾಹಿತಿ ಕಲೆ ಹಾಕಿ ಒಂದಿಡೀ ಪುಟ ಪ್ರಕಟಿಸುತ್ತವೆ.
ಇಂಗ್ಲಿಷ್ ಪತ್ರಿಕೆಯ ಪುರವಣಿ ವಿಭಾಗದಲ್ಲಿ ಕೆಲಸ ಮಾಡುವ ವರದಿಗಾರರೊಬ್ಬರು, ಕೆಲ ದಿನಗಳ ಹಿಂದೆ , ನಾನು ಈ ವರ್ಷ
ಓದಿದ ಕೃತಿಗಳು ಮತ್ತು ಅವುಗಳ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ ಬರೆದುಕೊಡುವಂತೆ ಹೇಳಿದ್ದರು. ನಾನು ಅದನ್ನು ಅವರಿಗೆ ಬರೆದು ಕೊಟ್ಟೆ. ನಾವೂ ಸಹ ಪ್ರತಿ ವರ್ಷ ಈ ಪ್ರಯೋಗ ಮಾಡುತ್ತೇವೆ. ನಮ್ಮ ರಾಜಕಾರಣಿಗಳಲ್ಲಿ ಪುಸ್ತಕಪ್ರೇಮಿಗಳ ಸಂಖ್ಯೆ ಬಹಳ
ಕಮ್ಮಿ. ಅವರೆಲ್ಲರ ಓದು ಪತ್ರಿಕೆಗೆ ಸೀಮಿತವಾಗಿದೆ. ಬೆಳಗ್ಗೆ ಪತ್ರಿಕೆ ಓದಿದರೆ ಅಲ್ಲಿಗೆ ಮುಗಿಯಿತು.
ಯಡಿಯೂರಪ್ಪ, ಸಿದ್ದರಾಮಯ್ಯ, ದೇವೇಗೌಡ, ಕುಮಾರಸ್ವಾಮಿ ಮುಂತಾದವರು ಏಳೆಂಟು ಪತ್ರಿಕೆಗಳನ್ನು ಕೂಲಂಕಷವಾಗಿ ಓದುತ್ತಾರೆ. ಯಡಿಯೂರಪ್ಪನವರಿಗೆ ಬೆಳಗ್ಗೆ ಐದೂವರೆಗೆ ಟೇಬಲ್ ಮೇಲೆ ಎಲ್ಲಾ ಪತ್ರಿಕೆಗಳಿರಬೇಕು. ಸಿದ್ದರಾಮಯ್ಯ ನವರು ಪತ್ರಿಕೆಗಳನ್ನು ಓದದೇ ಸಾರ್ವಜನಿಕರನ್ನು ಭೇಟಿ ಮಾಡುವುದಿಲ್ಲ. ಅನೇಕ ರಾಜಕಾರಣಿಗಳು ಬೆಳಗ್ಗೆ ಪತ್ರಿಕೆ ಓದದೇ ಮನೆಯಿಂದ
ಹೊರಬೀಳುವುದಿಲ್ಲ. ಕೆಲವರು ತಮ್ಮ ಸುದ್ದಿ ಬಂದಿದೆಯೋ ಇಲ್ಲವೋ ಎಂಬುದನ್ನು ನೋಡಲಷ್ಟೇ ಪತ್ರಿಕೆಗಳನ್ನು ತಿರುವಿ
ಹಾಕುತ್ತಾರೆ.
ಅವರು ಸಂಪಾದಕೀಯ ಪುಟದಲ್ಲಿ ಪ್ರಕಟವಾಗುವ ಲೇಖನಗಳನ್ನು ಓದಲು ಹೋಗುವುದಿಲ್ಲ. ಆದರೆ ನಮ್ಮ ನಾಯಕರು ತಾವು ಓದಿದ ಪುಸ್ತಕಗಳ ಬಗ್ಗೆ ಮಾತಾಡಿದ್ದನ್ನು, ಚರ್ಚಿಸಿದ್ದನ್ನು, ಸಭೆ – ಸಮಾರಂಭಗಳಲ್ಲಿ ಪ್ರಸ್ತಾಪಿಸಿದ್ದನ್ನು ನಾನಂತೂ ಕೇಳಿಲ್ಲ. ಲಾಕ್ ಡೌನ್ ಮತ್ತು ಕೋವಿಡ್ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಗಾಂಧಿ ಸಾಹಿತ್ಯ ಕೃತಿಗಳನ್ನು ಓದಿzಗಿ ಹೇಳಿದ್ದರು. ಅದರ ಜತೆಗೆ ತಾವು ಓದಿದ ಇನ್ನೆರಡು ಕೃತಿಗಳ ಬಗ್ಗೆಯೂ ವಿವರಿಸಿದ್ದರು.
ಮುಖ್ಯಮಂತ್ರಿಗಳಿಗೆ, ಮಾಜಿ ಮುಖ್ಯಮಂತ್ರಿಗಳಿಗೆ, ಹಾಲಿ ಮಂತ್ರಿಗಳಿಗೆ, ಶಾಸಕರಿಗೆ ಸಮಯ ಸಿಗುವುದಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ಸದಾ ಅವರ ಮನೆಗಳಲ್ಲಿ ಜನ ನೆರೆದಿರುತ್ತಾರೆ. ಜನರನ್ನು ಭೇಟಿ ಮಾಡುವುದು, ಕಾರ್ಯಕ್ರಮಗಳಲ್ಲಿ ಭಾಗವಹಿಸುವು ದರ ಸಮಯ ಸೋರಿ ಹೋಗುತ್ತದೆ. ನಿಜಕ್ಕೂ ಅವರಿಗೆ ಓದಲು ಪುರುಸೊತ್ತು ಸಿಗುವುದಿಲ್ಲ. ಆದರೆ ಇದು ನೆಪವೂ, ಅಪವಾದವೂ ಆಗಬಾರದು. ಇದೇ ಕಾರಣವಾದರೆ, ಅವರಿಗೆ ಜೀವನವಿಡೀ ಓದಲು, ಬರೆಯಲು ಆಗುವುದೇ ಇಲ್ಲ.
ಕಾರಣ ಜನರು ಸದಾ ಅವರನ್ನು ಸುತ್ತುವರಿದೇ ಇರುತ್ತಾರೆ. ಹಾಗಾದರೆ ಬಿಲ್ ಗೇಟ್ಸ್, ಒಬಾಮ, ವಾರೆನ್ ಬಫೆಟ್ ಹೇಗೆ
ಸಮಯ ಹೊಂದಿಸಿಕೊಳ್ಳುತ್ತಾರೆ? ಓದಲು ಸಮಯ ಇಲ್ಲ ಎಂದು ಹೇಳುವ ಜನಪ್ರತಿನಿಧಿಗಳಿಗೆ ಓದಲು ಮನಸ್ಸಿಲ್ಲ, ತುಡಿತವಿಲ್ಲ ಎಂದರ್ಥ. ಇಂಥವರು ಶಶಿ ತರೂರ್ ನೋಡಿ ಕಲಿತುಕೊಳ್ಳಬೇಕು. ಬಿಡುಗಡೆಯಾದ ಪುಸ್ತಕಗಳೆಲ್ಲ ಅವರ ಟೇಬಲ್ಲಿನ ಮೇಲಿರುತ್ತವೆ. ಮುನ್ನುಡಿ ಬರೆದು ಕೊಡಿ ಎಂದು ಹೇಳಿದರೆ ಯಾರಿಗೂ ಇಲ್ಲವೆನ್ನುವುದಿಲ್ಲ. ಸಾಹಿತ್ಯ, ಪುಸ್ತಕಕ್ಕೆ ಸಂಬಂಽಸಿದ ಕಾರ್ಯಕ್ರಮಕ್ಕೆ ಕರೆದರೆ, ಸಿದ್ಧತೆ ಮಾಡಿಕೊಂಡು ಬಂದು, ಮಾತಾಡಿ ಹೋಗುತ್ತಾರೆ.
ಪ್ರಮುಖ ಪತ್ರಿಕೆಗಳಿಗೆ ಅಂಕಣ ಬರೆಯುತ್ತಾರೆ. ಜತೆಗೆ ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಲ್ಲೂ ಕ್ರಿಯಾಶೀಲರಾಗಿ ಭಾಗ ವಹಿಸುತ್ತಾರೆ. ಹಾಗಂತ ತಮ್ಮ ಕ್ಷೇತ್ರವನ್ನು ಅಲಕ್ಷಿಸಿಲ್ಲ. 2009ರಿಂದ ತರೂರ್ ತಿರುವನಂತಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸೂರು – ಕೊಡಗು ಕ್ಷೇತ್ರದ ಸಂಸದರಾದ ಪ್ರತಾಪ ಸಿಂಹ, ಲೋಕ ಸಭಾ ಸದಸ್ಯರಾದ ನಂತರ ಸುಮಾರು ಒಂದು ವರ್ಷ ಕಾಲ ಬರೆದರು. ಅವರು ಪತ್ರಕರ್ತರಾಗಿ, ಅಂಕಣಕಾರರಾಗಿ ರಾಜಕೀಯ ಪ್ರವೇಶಿಸಿದವರು.
ಅವರ ಗೆಲುವಿಗೆ ಈ ಸಂಗತಿಯೂ ಪ್ರಮುಖ ಕಾರಣವಾಗಿತ್ತು. ಅಷ್ಟಕ್ಕೂ ಅವರಿಗೆ ಐಡೆಂಟಿಟಿ ಬಂದಿದ್ದೇ ಅವರೊಬ್ಬ ಪ್ರಖರ ಮತ್ತು ಖಡಾಖಡಿ ಅಂಕಣಕಾರ ಎಂದು. ಅವರಿಗೆ ಬಹುದೊಡ್ಡ ಓದುಗವರ್ಗ, ಅಭಿಮಾನಿ ಸಮೂಹವಿತ್ತು. ರಾಜಕೀಯ ಪ್ರವೇಶಿಸಿದ ನಂತರವೂ ವರು ಬರೆಯುವುದನ್ನು ನಿಲ್ಲಿಸಲಕ್ಕಿಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆನಂತರ ಅವರು ಎಲ್ಲಾ ರಾಜಕಾರಣಿಗಳಂತೆ ರಾಜಕಾರಣಿಯಾಗಿಬಿಟ್ಟರು. ಪತ್ರಕರ್ತ ರಾಜಕಾರಣಿಯಾಗುವ ಒಂದು ಅನೂಹ್ಯ ಅವಕಾಶವನ್ನು
ಕಳೆದುಕೊಂಡು ಬಿಟ್ಟರು. ಈಗೇನಿದ್ದರೂ ಪ್ರತಾಪ ಸಿಂಹ 280 ಕ್ಯಾರೆಕ್ಟರುಗಳಿಗೆ ಸೀಮಿತರಾಗಿದ್ದಾರೆ.
ಅವರಿಗೆ ಬರೆಯುವಷ್ಟು, ಓದುವಷ್ಟು ಸವುಡು ಇಲ್ಲ. ಅವರು ತಮ್ಮ ಓದು, ಅಧ್ಯಯನ, ಬರವಣಿಗೆಯನ್ನು ಕಾಪಾಡಿಕೊಂಡಿ ದ್ದರೆ, ರಾಜಕಾರಣಿಗಳಿಗೆ ಒಂದು ಉದಾತ್ತ ಮೇಲ್ಪಂಕ್ತಿ ಹಾಕಿ ಕೊಡಬಹುದಿತ್ತು. ರಾಜಕಾರಣಿಗಳಾದವರು ಓದದಿರುವುದು, ಬರೆಯದಿರುವುದು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ. ಯಾರಿಗೆ ಓದಲು ಸಮಯ ಇಲ್ಲವೋ, ಅವರಿಗೆ ಚಿಂತಿಸುವ, ಆಲೋ ಚಿಸುವ ವ್ಯವಧಾನವಿಲ್ಲ ಎಂದರ್ಥ. ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೇ ಶ್ರೇಷ್ಠತೆಯಲ್ಲ. ಅದೇ ಮಹಾನ್ ಕೆಲಸ ವಲ್ಲ. ಮನೆಗೆ ಬರುವ ಜನರನ್ನು ಭೇಟಿ ಮಾಡಿ ಹಾರ, ಶಾಲು ಹಾಕಿಸಿಕೊಳ್ಳುವ ತೆವಲನ್ನು ಮೊದಲು ಬಿಡಬೇಕು.
ದಿನದಲ್ಲಿ ಕೆಲ ಹೊತ್ತು ಒಂದಷ್ಟು ಏಕಾಂತವನ್ನು ಸೃಷ್ಟಿಸಿಕೊಳ್ಳದಷ್ಟು ಬಿಜಿಯಾಗುವುದು ಒಳ್ಳೆಯ ಲಕ್ಷಣವಲ್ಲ. ಬಾಬೂರಾವ್
ಚಿಂಚನಸೂರನಂಥ ರಾಜಕಾರಣಿಯೂ ಹೀಗೇ ಸಮಯ ಕಳೆಯುತ್ತಾನೆ. ಅದರಲ್ಲಿ ಯಾವ ಹೆಚ್ಚುಗಾರಿಕೆಯಿದೆ? ಅಂದ ಹಾಗೆ, ನಾನು ಏಳು ಮಂದಿ ರಾಜಕಾರಣಿಗಳನ್ನು ಕೇಳಿದೆ, ಈ ವರ್ಷ ನೀವು ಯಾವ ಪುಸ್ತಕ ಓದಿದ್ದೀರಿ ಎಂದು. ಒಬ್ಬನೇ ಒಬ್ಬ ತಾನು ಈ ಪುಸ್ತಕ ಓದಿದೆ ಎಂದು ಹೇಳಲಿಲ್ಲ.
ಅವರಲ್ಲಿ ಬಹುತೇಕ ಎಲ್ಲರೂ, ‘ನಿಮಗೆ ಗೊತ್ತಲ್ಲ, ಪುಸ್ತಕ ಓದಲು ನಮಗೆ ಎಲ್ಲಿ ಸಮಯ ಸಿಗುತ್ತದೆ? ದಿನ ಬೆಳಗಾದರೆ ಸಾಕು, ಜನ
ಮನೆ ಮುಂದೆ ಜಮಾಯಿಸುತ್ತಾರೆ. ಅವರನ್ನು ನಿಭಾಯಿಸುವ ಹೊತ್ತಿಗೆ ಸಾಕು ಸಾಕಾಗಿರುತ್ತದೆ’ ಎಂದರು. ರಾಜಕಾರಣಿಗಳಾದ ವರು ಓದಬಾರದು, ಬರೆಯಬಾರದು ಎಂಬ ಅಘೋಷಿತ ಕರ್ಫ್ಯೂ ಜಾರಿಯಲ್ಲಿದೆಯಾ, ಗೊತ್ತಿಲ್ಲ. ಒಂದಂತೂ ಖರೆ. ಓದುವ ಹವ್ಯಾಸವಿರದ ರಾಜಕಾರಣಿಗಳು ಗೊಡ್ಡು ಹಸುವಿನಂತೆ !
ಲಕ್ಸೆಂಬರ್ಗ್: ಪುಟ್ಟ ದೇಶದ ಚಿಕ್ಕ ನೆನಪು
ನೀವು ಲಕ್ಸೆಂಬರ್ಗ್‌ಗೆ ಹೋದಾಗ ಸಣ್ಣ ಕಲ್ಚರ್ ಷಾಕ್ ಆಗುತ್ತದೆ. ಅದು ಯೂರೋಪಿನಲ್ಲಿಯೇ ಸಣ್ಣ ದೇಶ. ಲಕ್ಸೆಂಬರ್ಗ್ ಸಿಟಿ ಆ ದೇಶದ ರಾಜಧಾನಿ. ಜನಸಂಖ್ಯೆ ಸುಮಾರು ಆರು ಲಕ್ಷವಿದಿರಬಹುದು. ಆದರೆ ಈ ದೇಶದಲ್ಲಿ ಮೂಲವಾಸಿಗಳೇ ಅಲ್ಪಸಂಖ್ಯಾ ತರು. ಆ ದೇಶದಲ್ಲಿ ಏನಿಲ್ಲವೆಂದರೂ ಸುಮಾರು 170 ದೇಶಗಳ ಪ್ರಜೆಗಳು ವಾಸವಾಗಿದ್ದಾರೆ. ಆ ಪೈಕಿ ಶೇ.15ರಷ್ಟು ಪೋರ್ಚು ಗೀಸರೇ.
ಆ ಪುಟ್ಟ ರಾಷ್ಟ್ರದಲ್ಲಿ ಮೂರು ಅಧಿಕೃತ ಭಾಷೆಗಳು – ಜರ್ಮನ್, ಫ್ರೆಂಚ್ ಮತ್ತು ಲಕ್ಸೆಂಬರ್ಗಿಶ್. ನಮಗೆ ಅಲ್ಲಿನ ಜನ ಯಾವ ಭಾಷೆಯಲ್ಲಿ ಮಾತಾಡುತ್ತಿದ್ಧಾರೆ ಎಂಬುದೇ ಗೊತ್ತಾಗುವುದಿಲ್ಲ. ಎಲ್ಲರೂ ಇಂಗ್ಲಿಷ್ ಮಾತಾಡುವುದಿಲ್ಲ. ಇನ್ನು ಕೆಲವರು ಇಂಗ್ಲಿಷ್ ಬಲ್ಲರು. ಆದರೂ ಮಾತಾಡಲೊಲ್ಲರು. ಆ ದೇಶಕ್ಕೆ ಬಂದ ವಿದೇಶಿಯರೆಲ್ಲ ಲಕ್ಸೆಂಬರ್ಗಿಶ್ ಭಾಷೆ ಕಲಿಯುತ್ತಾರೆ. ಅಲ್ಲಲ್ಲಿ ಪೋರ್ಚುಗೀಸ್ ಭಾಷೆಯ ಬೋರ್ಡುಗಳು ಕಾಣಿಸುತ್ತವೆ. ಆ ದೇಶದಲ್ಲಿ ಹದಿನೈದು ದಿನ ಉಳಿಯುವ ಪ್ರಸಂಗ ಬಂದರೆ, ನೀವು ಹಾಗೋ ಹೀಗೋ ನಿಭಾಯಿಸುವಷ್ಟು ಆ ಭಾಷೆಯನ್ನು ಕಲಿಯುತ್ತೀರಿ.
ಎರಡು ತಾಸುಗಳ ಕೋರ್ಸ್‌ಗೆ ಹಾಜರಾದರೆ ಸಾಕು. ಅಲ್ಲಿ ನಿಮಗೆ ವ್ಯಾವಹಾರಿಕವಾಗಿ ಅನುಕೂಲವಾಗುವಷ್ಟು ಆ ಭಾಷೆಯನ್ನು
ಕಲಿಸುತ್ತಾರೆ. ಆ ಭಾಷೆ ಕಲಿಸುವ ಅನೇಕ ತರಗತಿಗಳಿವೆ. ಊರ ತುಂಬಾ ಫ್ರೆಂಚ್ ಮತ್ತು ಜರ್ಮನ್ ರೆಸ್ಟೋರೆಂಟ್‌ಗಳು. ಅಲ್ಲಿನ ಸ್ಥಳೀಯ ತಿಂಡಿ – ತಿನಿಸು ಯಾವುದೆಂಬುದು ತಿಳಿಯದಷ್ಟು ಕಲಸುಮೇಲೋಗರ. ರಸ್ತೆ ಬದಿ ಹೋಟೆಲುಗಳು ದಿನದ
ಇಪ್ಪತ್ನಾಲ್ಕು ಗಂಟೆ ತೆರೆದಿರುತ್ತವೆ. ಲಕ್ಸೆಂಬರ್ಗ್ ವೈನ್ ಬಹಳ ಪ್ರಸಿದ್ಧ. ಅಲ್ಲಿಗೆ ಹೋಗಿ ಅದರ ರುಚಿ ನೋಡದವನು ಪಾಪಿ.
ಜಗತ್ತಿನಲ್ಲಿಯೇ ಅತಿ ಹೆಚ್ಚು ಕಾರುಗಳು ಲಕ್ಸೆಂಬರ್ಗ್ ಸಿಟಿಯಲ್ಲಿದೆ.
ಪ್ರತಿ ಸಾವಿರ ಜನರಿಗೆ ಸುಮಾರು 670 ಕಾರುಗಳಿವೆ. ಲಕ್ಸೆಂಬರ್ಗ್ land locked (ಅನ್ಯ ದೇಶಗಳಿಂದ ಸುತ್ತುವರಿದ) ರಾಷ್ಟ್ರ. ಈ ದೇಶವನ್ನು ಜರ್ಮನಿ, ಫ್ರಾನ್ಸ್ ಮತ್ತು ಬೆಲ್ಜಿಯಂ ಸುತ್ತುಗಟ್ಟಿವೆ. ಪ್ರತಿ ದಿನ ಇಲ್ಲಿನ ಜನ ಬೇರೆ ದೇಶಗಳಿಗೆ ರಸ್ತೆ ಮಾರ್ಗವಾಗಿ ಕೆಲಸಕ್ಕೆ ಹೋಗಿ ವಾಪಸ್ ಬರುವುದರಿಂದ ಅಷ್ಟೊಂದು ಕಾರುಗಳಿವೆ. ಬೆಳಗ್ಗೆ ಹತ್ತು ಗಂಟೆಯ ಹೊತ್ತಿಗೆ ಅರ್ಧ ಲಕ್ಸೆಂಬರ್ಗ್ ಖಾಲಿ ಖಾಲಿ. ದೇಶದ ಅರ್ಧಕ್ಕರ್ಧ ಜನ ಜರ್ಮನಿ, ಫ್ರಾನ್ಸ್ ಅಥವಾ ಬೆಲ್ಜಿಯಮ್‌ನಲ್ಲಿರುತ್ತಾರೆ.
ಲಕ್ಸೆಂಬರ್ಗ್ ಜಗತ್ತಿನಲ್ಲಿಯೇ ಎರಡನೇ ಹೆಚ್ಚು ಜಿಡಿಪಿ ಹೊಂದಿರುವ ದೇಶ. ನಿರುದ್ಯೋಗಿಗಳು ತೀರಾ ಕಮ್ಮಿ. ನಾನು ಆ
ದೇಶಕ್ಕೆ ಹೋದಾಗ, ಒಬ್ಬನೇ ರಾತ್ರಿ ಹನ್ನೆರಡು ಗಂಟೆಯ ಹೊತ್ತಿನಲ್ಲಿ ತಿರುಗಾಡಿದ್ದುಂಟು. ಅಪರಾಧಗಳ ಸಂಖ್ಯೆ ತೀರಾ
ಕಮ್ಮಿ. ಮಹಿಳೆಯರೂ ಒಬ್ಬರೇ ರಾತ್ರಿ ತಿರುಗಾಡುತ್ತಾರೆ. ಅತ್ಯಂತ ಸುರಕ್ಷಿತ ದೇಶ. ವರ್ಷಕ್ಕೊಂದು ಮರ್ಡರ್ ಕೂಡ ಆಗುವು ದಿಲ್ಲ. ಯೂರೋಪಿನ ಲಕ್ಸೆಂಬರ್ಗ್ ಸಾಂಸ್ಕೃತಿಕವಾಗಿ ಶ್ರೀಮಂತ ದೇಶ. ನಾನು ಅಲ್ಲಿಗೆ ಹೋದಾಗ ನೋಡಿದ ಹಾಪಿಂಗ್ ಡಾನ್ಸ್ (ಕುಪ್ಪಳಿಸುವ ನೃತ್ಯ) ಮರೆಯುವಂತೆಯೇ ಇಲ್ಲ. ಬಿಳಿ ಅಂಗಿ ಮತ್ತು ಕಪ್ಪು ಪ್ಯಾಂಟ್ ಧರಿಸಿದ ಸುಮಾರು ಐದು ಸಾವಿರ
ಗಂಡಸರು, ಹೆಂಗಸರು ಪೋಲ್ಕಾ ಸಂಗೀತಕ್ಕೆ ಒಂದೇ ಕಾಲಲ್ಲಿ ಕುಣಿಯುತ್ತಾರೆ.
ಸುಮಾರು ಎರಡು ಮೂರು ಕಿಮಿ ದೂರದವರೆಗೆ ಮೆರವಣಿಗೆಯಲ್ಲಿ ಈ ನೃತ್ಯ ಸಾಗುತ್ತದೆ. ಈ ನೃತ್ಯ ಪ್ರಕಾರವನ್ನು ಯುನೆಸ್ಕೊ ಸಂರಕ್ಷಿತ ಪಟ್ಟಿಗೆ ಸೇರಿಸಿದೆ. ಈ ನೃತ್ಯಕ್ಕೆ ಲಕ್ಸೆಂಬರ್ಗಿಶ್ ಭಾಷೆಯಲ್ಲಿ Sprangpressessioun ಎಂದು ಕರೆಯುತ್ತಾರೆ. 2015ರಲ್ಲಿ ನಾನು ಆ ದೇಶಕ್ಕೆ ಹೋದಾಗ, ಆ ದೇಶದ ಪ್ರಧಾನಿ ಕ್ಸೇವಿಯರ್ ಬೆಟ್ಟೆಲ್ ಸುದ್ದಿಯಲ್ಲಿದ್ದರು. ಅವರು ಸಲಿಂಗಿ ಗೌರ್ತಿ ಡೆಸ್ಟನೈ ಎಂಬುವರನ್ನು ಮದುವೆಯಾಗುವ ಮೂಲಕ ಯೂರೋಪಿಯನ್ ಯೂನಿಯನ್‌ನಲ್ಲಿ ಅಂಥ ಮದುವೆಯಾದ ಮೊದಲ
ನಾಯಕ ಎಂದು ಕರೆಯಿಸಿ ಕೊಂಡಿದ್ದರು. ಅದಕ್ಕೂ ಒಂದು ವರ್ಷ ಮೊದಲು, ಆ ದೇಶದ ಸರಕಾರ ಸಲಿಂಗಿಗಳ ಮದುವೆಗೆ
ಅನುಮತಿ ನೀಡುವ ಕಾನೂನು ಜಾರಿಗೊಳಿಸಿತ್ತು.
ಅಲ್ಲಿಗೆ ಹೋದಾಗ ತಿಳಿದು ಬಂದ ಮತ್ತೊಂದು ಸಂಗತಿಯೆಂದರೆ, ಆ ದೇಶದಲ್ಲಿ ಚುನಾವಣೆ ನಡೆದರೆ ಶೇ.ತೊಂಬತ್ತೈದರಷ್ಟು ಮತದಾನವಾಗುತ್ತದೆ. ಮತದಾನದಲ್ಲಿ ಪಾಲ್ಗೊಳ್ಳದವರು ಸರಕಾರಕ್ಕೆ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಬೇಕಾಗುತ್ತದೆ. ಮೊನ್ನೆ ಅದ್ಯಾಕೋ ಗೊತ್ತಿಲ್ಲ, ಅಲ್ಲಿ ಏನನ್ನು ಬಿಟ್ಟು ಬಂದಿದ್ದೆನೋ ಗೊತ್ತಿಲ್ಲ, ಲಕ್ಸೆಂಬರ್ಗ್‌ಗೆ ಹೋದ ಕನಸು ಬಿದ್ದಿತ್ತು. ಐದು ವರ್ಷಗಳ ಹಿಂದೆ ಹೋದ ದೇಶದ ಬಗ್ಗೆ ನಿಮಗೆ ಕೆಲವು ಸಂಗತಿಗಳನ್ನು ಹೇಳೋಣವೆನಿಸಿತು. ಲಕ್ಸೆಂಬರ್ಗ್ ಕುರಿತು ಕೆಲ ತಮಾಷೆ !
ಲಕ್ಸೆಂಬರ್ಗ್‌ನಲ್ಲಿ ಫುಟ್ಬಾಲ್ ಬಹಳ ಜನಪ್ರಿಯ ಕ್ರೀಡೆ.
ಫುಟ್ಬಾಲ್ ಪಂದ್ಯಗಳು ನಡೆಯುವಾಗ ಇಡೀ ದೇಶ ಮಲಗುವುದೇ ಇಲ್ಲ. ಅಂಥ ಹುಚ್ಚು. ನಾನು ಲಕ್ಸೆಂಬರ್ಗ್‌ಗೆ ಹೋದಾಗ ಕೇಳಿದ ಎರಡು ತಮಾಷೆಯ ಪ್ರಸಂಗಗಳನ್ನು ಹೇಳಬೇಕು. ಲಕ್ಸೆಂಬರ್ಗ್ ಫುಟ್ಬಾಲ್ ಟೀಮಿಗೂ, ಟೀ ಬ್ಯಾಗ್‌ಗೂ ಏನು ವ್ಯತ್ಯಾಸ?
– ಸಾಮಾನ್ಯವಾಗಿ ಟೀ ಬ್ಯಾಗ್ ಕಪ್‌ನಲ್ಲಿಯೇ ಇರುತ್ತದೆ ! ಲಕ್ಸೆಂಬರ್ಗ್ ಫುಟ್ಬಾಲ್ ಆಟಗಾರನ ದೃಷ್ಟಿ ಮಂದವಾದರೆ
ಏನಾಗುತ್ತದೆ? – ಆತ ಒಂದೋ ಕೋಚ್ ಆಗುತ್ತಾನೆ, ಇಲ್ಲವೇ ರೆಫರಿ ಆಗುತ್ತಾನೆ! ಲಕ್ಸೆಂಬರ್ಗ್ ಫುಟ್ಬಾಲ್ ಅಭಿಮಾನಿಗೂ, ಬಿಯರ್
ಬಾಟಲಿಗೂ ಏನು ಸಾಮ್ಯತೆ?
– ಎರಡರ ಮೇಲ್ಭಾಗ ಖಾಲಿಯಾಗಿರುತ್ತದೆ!
ಪಾದ್ರಿಯ ಪ್ರವಚನ
ಮುಂದಿನ ಭಾನುವಾರ ನನ್ನ ಉಪನ್ಯಾಸದ ವಿಷಯ – ‘ಸುಳ್ಳುಬುರುಕರು.’ ನಾನು ನಿಮಗೆ ಒಂದು ಸಣ್ಣ ಹೋಮ್ ವರ್ಕ್ ಕೊಡುತ್ತೇನೆ. ನೀವು ಉಪನ್ಯಾಸ ಕೇಳಲು ಬರುವಾಗ ಬೈಬಲ್‌ನಲ್ಲಿರುವ ಮಾರ್ಕನ ಹದಿನೇಳನೇ ಅಧ್ಯಾಯವನ್ನು ತಪ್ಪದೇ ಓದಿಕೊಂಡು ಬರಬೇಕು’ ಎಂದು ಪಾದ್ರಿ ಚರ್ಚಿನ ಪ್ರಾರ್ಥನೆ ಮುಗಿದ ಬಳಿಕ ಘೋಷಿಸಿದರು.
ಎಲ್ಲರೂ ಆಗಬಹುದು ಎಂಬಂತೆ ತಲೆ ಅಡಿಸಿದರು. ಭಾನುವಾರ ಬಂದಿತು. ಪಾದ್ರಿ ತಮ್ಮ ಉಪನ್ಯಾಸ ಆರಂಭಿಸುವ ಮುನ್ನ, ನಿಮ್ಮಲ್ಲಿ ಎಷ್ಟು ಜನ ಬೈಬಲ್‌ನಲ್ಲಿರುವ ಮಾರ್ಕನ ಹದಿನೇಳನೇ ಅಧ್ಯಾಯವನ್ನು ಓದಿಕೊಂಡು ಬಂದಿದ್ದೀರಿ?’ ಎಂದು ಕೇಳಿದರು. ಒಬ್ಬೊಬ್ಬರಾಗಿ ಕೈಯೆತ್ತಲಾರಂಭಿಸಿದರು.
ನೋಡನೋಡುತ್ತಿರುವಂತೆ ಅಲ್ಲಿ ನೆರೆದಿದ್ದ ಎಲ್ಲರೂ ಕೈಯೆತ್ತಿದರು. ಕೆಲವರಂತೂ ಎರಡೂ ಕೈಗಳನ್ನು ಎತ್ತಿದ್ದರು. ಅವರೆಲ್ಲ ರನ್ನೂ ನೋಡಿದ ಪಾದ್ರಿ, ‘ನನಗೆ ನಿಮ್ಮಂಥ ಸಭಿಕರು ಬೇಕು. ನಿಮ್ಮನ್ನೇ ಉದ್ದೇಶಿಸಿ ಮಾತಾಡಬೇಕು ಎಂಬುದು ನನ್ನ ಉದ್ದೇಶ ವಾಗಿತ್ತು. ಅದು ಇಂದು ಈಡೇರುತ್ತಿದೆ’ ಎಂದು ಹೇಳಿದಾಗ ಸಭಿಕರೆಲ್ಲ ಮುಖಮುಖ ನೋಡಿಕೊಂಡರು.
ಪಾದ್ರಿ ಮುಂದುವರಿಸಿದರು – ‘ಬೈಬಲ್‌ನಲ್ಲಿರುವ ಮಾರ್ಕನ ಹದಿನೇಳನೇ ಅಧ್ಯಾಯವನ್ನು ತಪ್ಪದೇ ಓದಿಕೊಂಡು ಬರಬೇಕು
ಎಂದು ನಿಮಗೆ ಹೇಳಿದ್ದೆ. ನೀವೆ ಓದಿಕೊಂಡು ಬಂದಿದ್ದೇನೆ ಎಂದು ಹೇಳಿದ್ದೀರಾ. ಆದರೆ ಆ ಕೃತಿಯಲ್ಲಿ ಇರುವುದೇ ಹದಿನಾರು ಅಧ್ಯಾಯಗಳು. ನೀವೆಲ್ಲರೂ ಸುಳ್ಳುಬುರುಕರು ಎಂಬುದನ್ನು ಒಪ್ಪಿಕೊಂಡಿದ್ದೀರಾ. ನಿಮ್ಮನ್ನು ಉದ್ದೇಶಿಸಿ ಮಾತಾಡಲು ಬಹಳ ಸಂತಸವಾಗುತ್ತಿದೆ.’
ಎಲ್ಲರೂ ಮುಖ ಕೆಳಕ್ಕೆ ಹಾಕಿ ಕುಳಿತುಕೊಂಡಿದ್ದರು. ಪಾದ್ರಿ ಹೇಳಿದರು – ‘ಇವತ್ತಿನ ಪ್ರವಚನ ಮುಗಿಯಿತು.’ ಉಪಯೋಗಕ್ಕೆ ಬಾರದ್ದು ರೀಡರ್ಸ್ ಡೈಜೆಸ್ಟ್ ಪತ್ರಿಕೆಯಲ್ಲಿ ಓದಿದ್ದು – 2020ರಲ್ಲಿ ನಾನು ಖರೀದಿಸಿಯೂ ಸ್ವಲ್ಪವೂ ಪ್ರಯೋಜನಕ್ಕೆ ಬಾರದ
ವಸ್ತುವೆಂದರೆ ಪ್ಲಾನರ್!’