Friday, 13th December 2024

ರಾಜಕಾರಣ ಮಾಡಲಿಕ್ಕೆ ಎಲ್ಲರಿಗೂ ಬರುವುದಿಲ್ಲ !

ವಿಶ್ಲೇಷಣೆ

ಡಾ.ಜಗದೀಶ್ ಮಾನೆ

ಭಾರತದಂಥ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜಕೀಯದಂಥ ಕಠಿಣವಾದ ಕ್ಷೇತ್ರ ಬೇರೆ ಯಾವುದೂ ಇಲ್ಲ. ರಾಜಕಾರಣಿ ಗಳಂಥ ಉದಾರ ಮನೋಭಾವದ ವ್ಯಕ್ತಿಗಳು ಬೇರೆ ಯಾವ ಕ್ಷೇತ್ರದಲ್ಲಿಯೂ ಸಿಗಲಿಕ್ಕಿಲ್ಲ. ಮುಖ್ಯವಾಗಿ ಹೇಳಬೇಕೆಂದರೆ ರಾಜಕಾರಣ ಮಾಡಲಿಕ್ಕೆ ಎಲ್ಲರಿಗೂ ಬರುವುದಿಲ್ಲ.

ಸಾಕಷ್ಟು ತಂದೆ-ತಾಯಿಗಳಿಗೆ ತಮ್ಮ ಮಕ್ಕಳ ಬಗ್ಗೆ ಇರುವಂಥ ಅವರ ಆಶಾಭಾವನೆಯನ್ನ ನಾನು ಗಮನಿಸಿದ್ದೇನೆ. ತಮ್ಮ ಮಕ್ಕಳ ಬಗ್ಗೆ ಬಹಳ ದೊಡ್ಡ ಕನಸುಗಳನ್ನು ಹೊತ್ತ ಅವರು ಅದರ ಪ್ರತಿಫಲಕ್ಕಾಗಿ ದಿನ ಕಳೆಯುತ್ತಿರುತ್ತಾರೆ. ತಮ್ಮ ಮಕ್ಕಳು ಚೆನ್ನಾಗಿ ಓದಿ ಫಸ್ಟ್ ರ‍್ಯಾಂಕ್‌ನೊಂದಿಗೆ ಡಾಕ್ಟರ್, ಇಂಜಿನಿಯರ್, ಐಎಎಸ್, ಐಪಿಎಸ್ ಅಧಿಕಾರಿಗಳಾಗ ಬೇಕೆಂದು ಬಯಸುತ್ತಾರೆ. ಬೆರಳೆಣಿಕೆಯಷ್ಟು ತಂದೆ- ತಾಯಿಗಳು ಮಾತ್ರ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಈ ದೇಶ ಸೇವೆ ಮಾಡುವ ಕನಸು ಕಂಡಿರುತ್ತಾರೆ. ಆದರೆ ಯಾವುದೇ ಒಬ್ಬೆ ಒಬ್ಬ ತಂದೆ ತಾಯಿಗಳು ತನ್ನ ಮಗ ಒಬ್ಬ ಶ್ರೇಷ್ಠ ರಾಜಕಾರಣಿಯಾಗಲಿ ಅಂತ ಯಾವತ್ತೂ ಬಯಸುವು ದಿಲ್ಲ!

ಯಾಕೆಂದರೆ, ಅನೇಕರಲ್ಲಿ ಪ್ರಸ್ತುತ ರಾಜಕಾರಣಿಗಳ ಬಗ್ಗೆ ಇರುವಂಥ ಭಾವನೆಗಳೆ ಬೇರೆ. ರಾಜಕಾರಣಿಗಳೆಂದರೆ ಅವರು ಕೇವಲ ಒಬ್ಬರ ಮೇಲೊಬ್ಬ ಆರೋಪ ಪ್ರತ್ಯಾರೋಪ ಗಳನ್ನು ಮಾಡುತ್ತಲೇ ಇರುತ್ತಾರೆ. ಬರಿ ಸುಳ್ಳು ಭರವಸೆಯನ್ನು ಕೊಡುತ್ತ ಜನರ ಹಣ ವನ್ನು ಲಪಡಾಯಿಸುವಂಥವರು. ಉತ್ತಮ ಸಂಸ್ಕಾರವಿಲ್ಲದ ದುಷ್ಟತನದ ವ್ಯಕ್ತಿತ್ವದವರು-ಹೀಗೆ ಇನ್ನೂ ಹಲವಾರು ತಪ್ಪು ಅರ್ಥದಿಂದ ಅವರನ್ನು ಅತ್ಯಂತ ಕೀಳು ಭಾವನೆಯಿಂದ ಕಾಣುತ್ತಾರೆ. ಇನ್ನು, ರಾಜಕಾರಣವೆಂದರೆ ಉತ್ತಮ ವ್ಯಕ್ತಿಗಳಿಗೆ, ಪ್ರಾಮಾಣಿಕರಿಗೆ ಅದು ಯೋಗ್ಯವಲ್ಲ ಎಂಬುದು ಕೆಲವರ ಅನಿಸಿಕೆ.

ರಾಜಕಾರಣಿಗಳ ಬಗ್ಗೆ ಆ ರೀತಿ ತಪ್ಪು ಭಾವನೆ ಇರುವ ಅದೆಷ್ಟೋ ಜನರ ಅಭಿಪ್ರಾಯವನ್ನು ಹುಸಿಯಾಗಿಸಿ, ರಾಜಕಾರಣವೆಂದರೆ ಅದೊಂದು ಪ್ರಾಮಾಣಿಕ, ನಿಸ್ವಾರ್ಥ ಸೇವೆ ಎಂದು ತಿಳಿದು, ನೈಜ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದ ಲಾಲ್ ಬಹದ್ದೂರ್ ಶಾಸ್ತ್ರೀ, ಅಟಲ್ ಬಿಹಾರಿ ವಾಜಪೇಯಿಯಂಥ ಶ್ರೇಷ್ಠರು ರಾಜಕಾರಣದ ನೈಜ ಮುಖದ ಅನಾವರಣ ಮಾಡಿದ್ದನ್ನು ಯಾರೂ ಮರೆತಿಲ್ಲ.

ಅದೇನೇ ಇರಲಿ, ಭಾರತದಂಥ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ರಾಜಕೀಯದಂಥ ಕಠಿಣವಾದ ಕ್ಷೇತ್ರ ಬೇರೆ ಯಾವುದೂ ಇಲ್ಲ. ರಾಜಕಾರಣಿಗಳಂಥ ಉದಾರ ಮನೋಭಾವದ ವ್ಯಕ್ತಿಗಳು ಬೇರೆ ಯಾವ ಕ್ಷೇತ್ರದಲ್ಲಿಯೂ ಸಿಗಲಿಕ್ಕಿಲ್ಲ. ಮುಖ್ಯವಾಗಿ ಹೇಳ
ಬೇಕೆಂದರೆ ರಾಜಕಾರಣ ಮಾಡಲಿಕ್ಕೆ ಎಲ್ಲರಿಗೂ ಬರುವುದಿಲ್ಲ. ರಾಜಕಾರಣಿಗಳಾದವರು ಆಯಾ ಸಂದರ್ಭ, ಸನ್ನಿವೇಶ – ಸಮಯಕ್ಕನುಗುಣವಾಗಿ ಮಾತನಾಡಬಲ್ಲ ಕೆಲ ವಿಶೇಷತೆಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ರಾಜಕಾರಣದಲ್ಲಿ ಎಂಥದ್ದೇ
ಸಮಸ್ಯೆಗಳಿದ್ದರೂ ಅದನ್ನು ನಯವಾಗಿ ಬಗೆಹರಿಸುತ್ತಾರೆ. ಮನಸ್ಸಿನೊಳಗೆ ಅದೆಂಥದ್ದೇ ಜ್ವಾಲಾಮುಖಿ ಸಿಡಿಯುತ್ತಿದ್ದರೂ ಮುಖದಲ್ಲಿ ಮಾತ್ರ ಹೂವಿನಂಥ ಕೋಮಲವಾದ ನಗೆ ಬಿರುತ್ತಾರೆ.

ಬಹಳ ಮಜಬೂತಿನ ಸಂಗತಿ ಅಂದ್ರೆ, ಅವರದ್ದೇ ಪಕ್ಷದ ಕಾರ್ಯಕ್ರಮವೊಂದರ ವೇದಿಕೆಯ ಮೇಲೆ ತನ್ನ ಪಕ್ಕದಲ್ಲಿ ಕುಳಿತಂತ ವ್ಯಕ್ತಿ ತನ್ನದೇ ಪರಮ ವೈರಿ, ತನ್ನ ರಾಜಕೀಯ ಜೀವನವನ್ನು ಅಂತ್ಯಗೊಳಿಸಲೆಂದೇ ಶಪಥ ಗೈದಿರುವ ವಿಚಾರ ಚೆನ್ನಾಗಿ ಅರಿತಿರುತ್ತಾನೆ. ಆದರೂ ಕೂಡ ತನಗೇನೂ ಗೊತ್ತಿಲ್ಲದವರಂತೆ ನಗುನಗುತ್ತಲಿರುತ್ತಾನೆ. ಇಬ್ಬರ ಸಂಬಂಧ ಏಳೇಳು ಜನ್ಮದ ಅನುಬಂಧದಂತೆ ಇದ್ದರೀತಿಯಲ್ಲಿ ಭಾಷಣ ಮಾಡುತ್ತಿರುತ್ತಾರೆ! ಒಳಗೊಳಗೆ ಅದೆಷ್ಟೇ ರೋಷ ದ್ವೇಷಗಳಿದ್ದರೂ ಅದನ್ನು
ಮಾತಿನಲ್ಲಾಗಲಿ, ಅವರ ನಡೆ ಸ್ವಭಾವದಲ್ಲಾಗಲಿ ಅದನ್ನು ತೋರಿಸಿಕೊಳ್ಳುವುದಿಲ್ಲ. ಈ ರೀತಿಯ ಸ್ವಭಾವ ಕೇವಲ ರಾಜಕಾರಣಿಗಳಲ್ಲಿರಲು ಮಾತ್ರ ಸಾಧ್ಯ.

ನಾವು ನೀವೆಲ್ಲ ಹೇಗೆ ಗೊತ್ತಾ? ನಮ್ಮ ಬಗ್ಗೆ ಯಾರೋ ಒಂದು ಸಣ್ಣ ಕೊಂಕು ಮಾತನಾಡಿದ್ದು ನಮ್ಮ ಕಿವಿಗೆ ಬಿದ್ದರೆ ಸಾಕು, ಅವರನ್ನು ಹುಡುಕಿಕೊಂಡು ಹೋಗಿ ಹೊಡೆಯುತ್ತೇವೆ! ಮನಸ್ಸು ಸಮಾಧಾನಗೊಳ್ಳುವವರೆಗೂ ಅವರೊಂದಿಗೆ ಜಗಳ
ಆಡುತ್ತೇವೆ. ಆದರೆ ರಾಜಕಾರಣದಲ್ಲಿ ಹಾಗಲ್ಲ. ಅವರನ್ನು ತಮ್ಮವರೇ ಮೂಲೆಗುಂಪು ಮಾಡಲು ಪ್ರಯತ್ನ ಪಟ್ಟ ಹಲವಾರು ಸಂಗತಿಗಳು ಗೊತ್ತಿದ್ದರೂ ಅಪ್ಪಿ ತಪ್ಪಿಯೂ ಕೂಡ ಒಳಗಿರುವ ಅಸಮಾಧಾನದ ಆಕ್ರೋಶವನ್ನು ತೋರಿಸುವುದಿಲ್ಲ.

ಎಲ್ಲವನ್ನು ಮನಸೊಳಗೇ ಇಟ್ಟುಕೊಂಡು ಅನ್ಯಥಾ ಭಾವಿಸದೆ ಏನೂ ಆಗಿಯೇ ಇಲ್ಲವೆಂಬಂತೆ ಇರುತ್ತಾರೆ. ಸಮಯ ಸಂದರ್ಭಕ್ಕೆ ತಕ್ಕಂತೆ ಮಾಡಬೇಕಾದುದ್ದನ್ನು ಮಾತ್ರ ಮಾಡುತ್ತಲೇ ಇರುತ್ತಾರೆ. ಇವೆಲ್ಲವೂ ಒಬ್ಬ ಸಾಮಾನ್ಯನಿಂದ ಅಸಾಧ್ಯ. ಬದಲಾಗಿ ಅದು ರಾಜಕಾರಣಿಗಳಿಂದ ಮಾತ್ರ ಸಾಧ್ಯ. ಕಳೆದ ೨೦೧೮ರ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭವನ್ನು ನಾನು ಬಹಳ
ಸೂಕ್ಷ್ಮವಾಗಿ ಗಮನಿಸಿದ್ದೇನೆ. ಚುನಾವಣೆಗಳಿಗಿಂತ ಮೊದಲು ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯನವರು ಕಡುಬದ್ಧ ದೊಡ್ಡ ವೈರಿಗಳಾಗಿದ್ದರು.

ಚುನಾವಣೆಯ ಭಾಷಣವೊಂದರಲ್ಲಿ ಸಿದ್ದರಾಮಯ್ಯನವರು ಈ ಕುಮಾರಸ್ವಾಮಿ ಅವರಪ್ಪರಾನೆಗೂ ಮುಖ್ಯಮಂತ್ರಿ ಆಗೋದಿಲ್ಲ ಅಂತ ಬಹಿರಂಗ ಸವಾಲೆಸೆದಿದ್ದರು. ಇತ್ತ ಅದೇ ಕುಮಾರಸ್ವಾಮಿ ತಮ್ಮ ಅಪ್ಪನ ಸೇಡಿನ ರಾಜಕಾರಣದ ಅನ್ವಯ ಸಿದ್ದರಾಮಯ್ಯನವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಲು ರಣತಂತ್ರ ರೂಪಿಸಿ ಚಾಮುಂಡಿ ಕ್ಷೇತ್ರದಲ್ಲಿ
ಸಿದ್ದರಾಮಯ್ಯನನ್ನು ಹೀನಾಯವಾಗಿ ಸೋಲಿಸಿ ಸೇಡು ತೀರಿಸಿಕೊಂಡಿದ್ದರು. ಚುನಾವಣೆಗೂ ಮುನ್ನ ಅತ್ಯಂತ ಕಡುವೈರಿಗಳಾದ್ದಂತವರು ಚುನಾವಣೆಯ ಫಲಿತಾಂಶದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವಂಥ ಲಕ್ಷಣಗಳು ಕಾಣುತ್ತಿದ್ದು
ದ್ದಷ್ಟೇ ತಡ ಆಗ ತಾವಿಬ್ಬರೂ ಬದ್ಧ ವೈರಿಗಳೆಂಬುದನ್ನೇ ಮರೆತು ಆ ಕ್ಷಣದಲ್ಲಿ ಒಂದಾದರು. ಆವರೆಗೂ ಇವರ ಆಂತರಿಕ ಕಚ್ಚಾಟಗಳನ್ನು ಗಮನಿಸಿದ್ದ ಮತದಾರ ಮಾತ್ರ ಒಂದು ಕ್ಷಣ ದಂಗಾಗಿದ್ದ.

ಅದಕ್ಕೆ ಅಲ್ಲವೇ ರಾಜಕೀಯ ಅನ್ನೋದು! ಅದಕ್ಕಿಂತ ಮುಂಚೆ ಎಚ್.ಡಿ. ರೇವಣ್ಣ ಮತ್ತು ಡಿ.ಕೆ. ಶಿವಕುಮಾರ್ ಈರ್ವರಂತೂ ಹೆಂಡ ಕುಡಿದ ಮಂಗನಂತೆ ಮುಸುಕಿನ ಗುದ್ದಾಟ ನಡೆಸಿದ್ದರು. ೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪನವರಂತೂ ಹಾವು ಮುಂಗುಸಿಯಂತೆ ಕಿತ್ತಾಡುತ್ತ ಒಬ್ಬರಿಗೊಬ್ಬರು ತೊಡೆ ತಟ್ಟಿದರು. ಯಡಿಯೂರಪ್ಪನವರ ವಿರುದ್ಧ ತೊಡೆ ತಟ್ಟಿದ ಈಶ್ವರಪ್ಪನವರು ಆ ಪರಿಣಾಮವಾಗಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದರು.

ಆದರೆ ಎದುರಿಗೆ ಸಿಕ್ಕಾಗ ಇಬ್ಬರೂ ಏಳೇಳು ಜನುಮದ ಸಂಬಂಧವೇ ನಮ್ಮದು ಎನ್ನೋ ರೀತಿ ಇರುತ್ತಿದ್ದರು. ನಮ್ಮ ಪ್ರೀತಿಯ ಅಪ್ಪುಗೆಯನ್ನು ಯಾರಿಂದಲೂ ಬೇರ್ಪಡಿಸಲಾಗದು, ನಮ್ಮಿಬ್ಬರ ಜಗಳ ಮನೆ ಸದಸ್ಯರ ಮುನಿಸು ಅಂತ ಈಶ್ವರಪ್ಪನವರು ಹೇಳಿದರೆ, ನಾವಿಬ್ಬರೂ ರಾಮ ಲಕ್ಷ್ಮಣ, ಕೃಷ್ಣ-ಅರ್ಜುನರಿದ್ದಂತೆ ಎಂಬುದು ಯಡಿಯೂರಪ್ಪನವರ ಹೇಳಿಕೆ ಆಗಿತ್ತು. ಮೇಲ್ನೋಟಕ್ಕೆ ಹೀಗೆ ಕಂಡರೂ ಒಳ ಹೊಡೆತ ಮಾತ್ರ ಬೇರೆಯೇ ಇತ್ತು. ಒಬ್ಬರನ್ನೊಬ್ಬರು ಕಾಲು ಎಳೆಯುವ ಪ್ರಯತ್ನದಲ್ಲಿ ತೊಡಗಿದ್ದಂತೂ ಸತ್ಯ!

ಯಡಿಯೂರಪ್ಪ ಹಾಗೂ ದಿವಂಗತ ಅನಂತಕುಮಾರ್ ಅವರ ಸಂಬಂಧ ಹೇಗಿತ್ತೆಂಬುದು ಬಹುತೇಕರಿಗೆ ಗೊತ್ತಿದೆ. ಅವರಿಬ್ಬರೂ ಯಾವತ್ತಿಗೂ ಸಾರ್ವಜನಿಕವಾಗಿ ಒಬ್ಬರನ್ನೊಬ್ಬರು ಬೈದುಕೊಂಡು ತಿರುಗಾಡಿದಂತಹ ಒಂದೇ ಒಂದು ಸಣ್ಣ ಉದಾಹರಣೆ ಇಲ್ಲ. ಆದರೆ ಇಬ್ಬರೊಳಗಿನ ಮುಸುಕಿನ ಗುದ್ದಾಟ ಮಾತ್ರ ನಿಂತಿರಲೇ ಇಲ್ಲ. ಅತ್ತ ಕಡೆಯಿಂದ ಬಂದ ಬಾಣ ಚುಚ್ಚಿದ್ದು ಮಾತ್ರ ಗೊತ್ತಾಗುತ್ತಿತ್ತು.

ಆದರೆ ಬಾಣ ಬಿಟ್ಟವರು ಯಾರೆಂಬುದು ತಿಳಿಯುತ್ತಿರಲಿಲ್ಲ. ಮರುದಿನ ಬೆಳಗ್ಗೆ ಇಬ್ಬರು ಅಕ್ಕಪಕ್ಕ ಕುಳಿತುಕೊಂಡು ನಗುನಗುತ್ತ ಮಾತನಾಡುತ್ತಿದ್ದರು. ಇದು ರಾಜಕಾರಣಿಗಳಿಂದ ಮಾತ್ರ ಸಾಧ್ಯ. ಆತನ ಜಾಗದಲ್ಲಿ ರಾಜಕಾರಣಿಗಳಲ್ಲದೆ ಮತ್ಯಾರೋ ಆಗಿದ್ದರೆ ಅವಮಾನಿತರಾಗಿ ಒಂದು ಕ್ಷಣ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದರು. ಪರಿವಾರದ ಯಾವುದೇ ಕ್ಷೇತ್ರ ಆಗಿರಲಿ ಅಂತಹ ಸಂದರ್ಭದಲ್ಲಿ ಸೋಲಿನ ಸಿಹಿ ಮರೆತು ಎದುರಾಳಿಗೆ ಸ್ವೀಟ್ ತಿನ್ನಿಸುವುದಿದೆಯಲ್ಲ ಅದಕ್ಕೆ ಬಹಳ ವಿಶೇಷ ಕ್ವಾಲಿಟಿಯೇ ಬೇಕಾಗುತ್ತದೆ. ಇಂಥ ಉದಾರ ಮನೋಭಾವನೆಯನ್ನು ಕೇವಲ ರಾಜಕಾರಣಿಗಳಲ್ಲಿ ಅಲ್ಲದೇ ಬೇರೆ ಯಾರಲ್ಲೂ ಕಾಣಲಿಕ್ಕೆ ಸಾಧ್ಯವಿಲ್ಲ.

ಒಮ್ಮೊಮ್ಮೆ ಎಂಥ ಸಂದರ್ಭಗಳು ಬಂದು ಬಿಡುತ್ತವೆ ಅಂದ್ರೆ ಸುಡುವ ತುಪ್ಪದಂತಹ ಸಂದರ್ಭಗಳು. ನನ್ನನ್ನು ಒಬ್ಬ ಸನ್ನ ಹುಡುಗನಂತೆ ನಡೆಸಿಕೊಳ್ಳುತ್ತಿದ್ದಾರೆ, ಪಕ್ಷದಲ್ಲಿ ನನಗೆ ಅಪಮಾನಿಸುತ್ತಿದ್ದಾರೆಂಬ ಆರೋಪದೊಂದಿಗೆ ಮೊನ್ನೆ ಮೊನ್ನೆ
ಕಾಂಗ್ರೆಸ್ ಸೇರಿದ ಬಿಜೆಪಿಯ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಸಾಹೇಬರಿಗೆ ಇದೀಗ ಎಂಥ ಪರಿಸ್ಥಿತಿ ಬಂದಿದೆ ಅಂದ್ರೆ, ತಾವೇ ಬೆಳೆಸಿದಂತಹ ಒಬ್ಬ ಅತೀ ಸಾಮಾನ್ಯ ಕಾರ್ಯಕರ್ತ ಮಹೇಶ ತೆಂಗಿನಕಾಯಿ ಅವರ ಎದುರಾಳಿಯಾಗಿ ಕಣಕ್ಕಿಳಿದ ಸಂದರ್ಭ ನಮ್ಮ ಕಣ್ಮುಂದೇ ಇದೆ. ಶಿಷ್ಯ, ಮಹೇಶ್ ತೆಂಗಿನಕಾಯಿ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಿ ಕಚೇರಿಯಿಂದ ಹೊರಬರುತ್ತಿದ್ದಂತೆಯೇ ಎದುರಿಗೆ ಬಂದ ತನ್ನ ರಾಜಕೀಯ ಗುರು ಜಗದೀಶ್ ಶೆಟ್ಟರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಅವರೂ ನಗುನಗುತ್ತಲೇ ಆಶೀರ್ವಾದ ಮಾಡುತ್ತಾರೆ.

ಶೆಟ್ಟರ್ ಅವರು ತನ್ನ ರಾಜಕೀಯ ಗುರು, ಆದರೆ ಅವರೀಗ ಚುನಾವಣೆಯಲ್ಲಿ ಮಾತ್ರ ತನ್ನ ಎದುರಾಳಿಯೇ ಆಗಿದ್ದಾರೆ. ಆ ಎದು ರಾಳಿಯನ್ನು ಸೋಲಿಸಲು ತನ್ನ ಗುರು ಅದೇ ಎದುರಾಳಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಇಂಥ ಸಂಗತಿಗಳು ರಾಜಕಾರಣದಲ್ಲಿ ಬಿಟ್ಟರೆ ಬೇರೆಲ್ಲೂ ನಡೆಯಲಿಕ್ಕೆ ಸಾಧ್ಯವಿಲ್ಲ! ರಾಜಕಾರಣಿಗಳಂಥ ನಡವಳಿಕೆಯನ್ನು ಯಾವ ಸಾಮಾನ್ಯರಿಂದಾಗಲಿ, ಯಾವುದೇ ಮಠಾಧೀಶರಿಂದಾಗಲಿ, ಯಾವುದೇ ಅಧಿಕಾರಿಗಳಿಂದಾಗಲೀ ಮತ್ತು ಬೇರೆ ಯಾವ ಕ್ಷೇತ್ರದಿಂದ ನಿರೀಕ್ಷಿಸಲು ಸಾಧ್ಯವಿದೆ ನೀವೇ ಹೇಳಿ? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿ. ಪರಮೇಶ್ವರ್, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಪ್ರಸ್ತುತ ಸಂಬಂಧ ಏನು ಎಂಬುದು ಬಹುತೇಕರಿಗೆ ಗೊತ್ತೇ ಇದೆ. ಒಳಗೆ ಎಷ್ಟೋ ಪೈಪೋಟಿಗಳಿದ್ದರೂ ಒಟ್ಟಿಗೆ ಕೂಡುತ್ತಾರೆ.

ಹೊರ ಜಗತ್ತಿಗೆ ತಾವು ಆತ್ಮೀಯರಂತೆ ಕಾಣಿಸಿಕೊಳ್ಳುತ್ತಾರೆ. ಮಾಧ್ಯಮಗಳ ಮುಂದೆ ಸಿದ್ದರಾಮಯ್ಯನವರ ನಾಯಕತ್ವದಲ್ಲಿ ನಮಗೆ ಅಚಲವಾದ ನಂಬಿಕೆ ವಿಶ್ವಾಸವಿದೆ ಎಂದು ಹೇಳುತ್ತಾರೆ. ಮುಂದಿನ ಮುಖ್ಯಮಂತ್ರಿ ಯಾರೆಂದು ಪ್ರಶ್ನಿಸಿದ್ದರೆ ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂಬಂತೆ ಬಾಣ ಬಿಡುತ್ತಾರೆ. ಪರಮೇಶ್ವರರಿಗೆ ಸಿದ್ದರಾಮಯ್ಯನವರ ಮೇಲಿರುವ ಕೋಪ ಅಸೂಯೆಗಳೆಲ್ಲ ಅವರ ಮೌನದ ಚಿಪ್ಪಿನೊಳಗೆ ಅಡಗಿವೆ. ಸಿದ್ದರಾಮಯ್ಯನವರ ಬಗ್ಗೆ ತಮಗಿದ್ದ ಅಸಮಾಧಾನವನ್ನು ಮನಸ್ಸಿ
ನಲ್ಲಿ ಇಟ್ಟುಕೊಂಡರೆ ವಿನಹ ಅದನ್ನು ಸಾರ್ವಜನಿಕವಾಗಿ ಎಲ್ಲಿಯೂ ಹೊರಹಾಕುವ ಗೊಜಿಗೆ ಹೋಗಿಲ್ಲ. ಒಳಗೊಳಗೆ ಅದಷ್ಟೇ ಸೇಡಿನ ಮನೋ ಭಾವನೆಗಳಿದ್ದರೂ, ಮೇಲ್ನೋಟಕ್ಕೆ ಮಾತ್ರ ಹೃದಯವಂತ ಮನಸ್ಸುಗಳು ಈ ರಾಜಕಾರಣಿಗಳದ್ದು.

ಸಿದ್ದರಾಮಯ್ಯನವರೊಮ್ಮೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗ ಯಡಿಯೂರಪ್ಪ, ಈಶ್ವರಪ್ಪ, ಎನ್. ರವಿಕುಮಾರ್ ಅವರಂಥ ನಾಯಕರು ಅವರ ಆರೋಗ್ಯದ ಸ್ಥಿತಿಯನ್ನು ವಿಚಾರಿಸಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದರು.
ವಿಧಾನಸಭೆಯಲ್ಲಿ ಮಾಧ್ಯಮ ಸ್ಟುಡಿಯೋಗಳಲ್ಲಿ ರಾಜಕಾರಣಿಗಳು ಕಿತ್ತಾಡಿಕೊಂಡು ಅಲ್ಲಿಂದ ಹೊರ ಹೋದ ನಂತರ ಅವರು ಒಟ್ಟಾಗಿ ಕುಳಿತು ತಿಂಡಿ ತಿನ್ನುವ ವಿಶಾಲ ಹೃದಯವನ್ನು ಹೊಂದಿರುತ್ತಾರೆ.

ಸಂಸತ್ತಿನಲ್ಲಿ ಒಟ್ಟಿಗೆ ಚಹಾ ಕುಡಿಯುತ್ತಾರೆ. ಡಿ.ಕೆ ಶಿವಕುಮಾರರ ಮಗಳ ಮದುವೆಗೆ ಯಡಿಯೂರಪ್ಪ ಪರಿವಾರದವರು ಹೋಗುತ್ತಾರೆ. ಪ್ರಹ್ಲಾದ್ ಜೋಶಿ ಅವರ ಮಗಳ ಅಕ್ಷತೆಗೆ ಕುಮಾರಸ್ವಾಮಿ, ಸಿದ್ದರಾಮಯ್ಯನವರು ಆಗಮಿಸುತ್ತಾರೆ. ಕುಮಾರ ಸ್ವಾಮಿಯ ಮಗನ ಮದುವೆಗೆ ರಾಜ್ಯದ ಎಲ್ಲಾ ಪಕ್ಷದ ನಾಯಕರು ಆಗಮಿಸಿ ಆಶೀರ್ವದಿಸುತ್ತಾರೆ. ಸಿದ್ದರಾಮಯ್ಯನವರ ಪುತ್ರ ಶೋಕ ದಲ್ಲಿ ಯಡಿಯೂರಪ್ಪನವರು ಬಿಕ್ಕಳಿಸಿ ಅಳುತ್ತಿದ್ದರು. ಕುಮಾರಸ್ವಾಮಿ ಹಾಗೂ ಈಶ್ವರಪ್ಪನವರು ಧೈರ್ಯ ತುಂಬಿದ್ದರು. ಈ ರೀತಿ ನಡೆಗಳನ್ನು ನಾವು ನೀವೆಲ್ಲ ಸಮಾಜದ ಉದ್ದಾರಕ್ಕಾಗಿ ಸಂಸಾರಿಕ ಜೀವನವನ್ನು ತ್ಯಜಿಸಿದ ಸ್ವಾಮೀಜಿ ಗಳಿಂದ ನಿರೀಕ್ಷಿಸಬಹುದೇ? ಯೋಚಿಸಿ! ತಾವು ಎಲ್ಲಾ ಸ್ವಾರ್ಥ ಆಸೆ-ಆಕಾಂಕ್ಷೆ, ಭೌತಿಕ ಸುಖಗಳನ್ನೆಲ್ಲ ತ್ಯಾಗ ಮಾಡಿದರೆಂದು ಹೇಳಿಕೊಳ್ಳುವ ಸ್ವಾಮೀಜಿಗಳಿಂದ ಇದು ಸಾಧ್ಯವಾಗುವುದಿಲ್ಲ.

ಒಂದೇ ಮಠದ ಸ್ವಾಮೀಜಿಗಳು ತಮಗೆ ಆಗದ ಸ್ವಾಮೀಜಿ ಮುಖಾಮುಖಿ ಆದರೆ ತಮ್ಮ ಮುಖ ಅಡ್ಡ ಮಾಡಿಕೊಂಡು ಹೋಗು ತ್ತಾರೆ. ನಮಗ್ಯಾರಿಗೂ ಒಂದು ಕ್ಷಣ ಒಬ್ಬ ರಾಜಕಾರಣಿ ಆಗಲಂತೂ ಸಾಧ್ಯವೇ ಇಲ್ಲ. ಕಾರಣ, ಕೆಲವರಿಂದ ದಿನವಿಡೀ ಬಾಯಿಗೆ ಬಂದಂತೆ ಬೈಸಿಕೊಳ್ಳಬೇಕಲ್ಲ! ಎಲ್ಲರಿಂದಲೂ ಬೈಸಿಕೊಂಡು ಅವಮಾನಿಸಿಕೊಂಡರೂ ಮುಖ್ಯವಾಗಿ ಮರು ಪ್ರತಿಕ್ರಿಯೆ ನೀಡದೆ ಸುಮ್ಮನೇ ಇರೋದಿದೆಯಲ್ಲ, ಈ ಸಂದರ್ಭಗಳು ಸಾಮಾನ್ಯರಿಗಾದರೆ ಹುಚ್ಚು ಹಿಡಿದು ಹೋಗುತ್ತದೆ. ಕೆಲ ರಾಜಕಾರಣಿಗಳ ತ್ಯಾಗ ಕೂಡ ಊಹಿಸಲಾರದಂಥದ್ದು.

ತಮ್ಮ ಜೀವನದ ಉದ್ದಕ್ಕೂ ಹೋರಾಟಗಳನ್ನೇ ಮಾಡುತ್ತ ಜೈಲು ಅನುಭವಿಸಿ, ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ, ಒಂದೊಮ್ಮೆ ಆ ಪಕ್ಷ ಅಧಿಕಾರ ಹಿಡಿಯುವ ಹಂತಕ್ಕೆ ಬಂದು ಪ್ರಧಾನಿ ಪಟ್ಟ ತಪ್ಪಿದಾಗಲೂ ಕಿಂಚಿತ್ತೂ ಮರು ಯೋಚಿಸದೆ ಪಕ್ಷದ ನಾಯಕರ ಆದೇಶಕ್ಕೆ ವಿನಮ್ರತೆಯಿಂದ ತಲೆಬಾಗಿದ ಲಾಲ್ ಕೃಷ್ಣ ಅಡ್ವಾಣಿಯಂತಾಗಲು ಯಾರಿಂದ ಸಾಧ್ಯವಿದೆ ಹೇಳಿ? ಈ ಭಾರತದಂತ ದೇಶದಲ್ಲಿ ರಾಜಕಾರಣಿಯಾಗುವುದೆಂದರೆ ಅದೊಂದು ದೊಡ್ಡ ಸವಾಲೇ ಸರಿ. ರಾಜಕಾರಣಿಗಳನ್ನು ಬೈಯ್ಯು ವುದಕ್ಕಿಂತ ಮೊದಲು ಅವರ ಅಂತರಂಗವನ್ನು ಅರಿತುಕೊಳ್ಳಬೇಕು.