ವಿಶ್ಲೇಷಣೆ
ಹೃತಿಕ್ ಕುಲಕರ್ಣಿ
ರಾಜಕಾರಣಿಗಳಿಗೆ ಒಂದು ರೋಗವಿದೆ. ಆ ರೋಗಕ್ಕೆ ಔಷಧ ಮದ್ದುಗಳಿಲ್ಲ. ಎಂದ ಮಾತ್ರಕ್ಕೆ ಅದು ಸಾಂಕ್ರಾಮಿಕವೂ ಅಲ್ಲ. ಒಂದರ್ಥ ದಲ್ಲಿ ಆ ರೋಗವನ್ನು ವಂಶವಾಹಿ ಎನ್ನಬಹುದು. ಅದೇ ಓಲೈಕೆ ರಾಜಕಾರಣ. ಪ್ರಕೃತ ರಾಜಕೀಯದ ಸ್ಥಿತಿಗತಿಗಳ ಸ್ಥೂಲಾವಲೋಕನ ದಿಂದ ಬಹಳ ಸ್ಪಷ್ಟವಾಗಿ ಒಂದಂಶವಂತೂ ತಿಳಿಯುತ್ತದೆ. ಅದು: ಭಾಜಪಾದವರು ಹಿಂದೂಗಳನ್ನು ಓಲೈಸುವುದರಲ್ಲಿ ಮಗ್ನರಾಗಿರು ವುದು ಮತ್ತು ಕಾಂಗೈಗಳು ಮುಸಲ್ಮಾನರ ಹಿಂದೆ ಓಡುತ್ತಿರುವುದು.
ಬೆಕ್ಕು ತಾನು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರ ಕಣ್ಣಿಗೂ ಅದರ ಕಳ್ಳಾಟ ಕಾಣದೆಂದು ತಿಳಿದಿರುತ್ತದಂತೆ. ಹಾಗೇನೇ ಈ ರಾಜಕೀಯ ಪಕ್ಷಗಳು. ಆಯಾಯಾ ಜನಾಂಗವನ್ನು ಓಲೈಸುವ ಭರದಲ್ಲಿ ನಮ್ಮ ರಾಜಕೀಯ ನಾಯಕರುಗಳು ಬೆಕ್ಕಿನಂತೆ ಭ್ರಮಿತರಾಗಿದ್ದಾರೆ. ಮಹಾಜನರು ಅವರ ಕಳ್ಳಾಟವನ್ನೆಲ್ಲ ನೋಡುತ್ತಿದ್ದಾರೆನ್ನುವ ಪರಿವೆಯೂ ಅವರಿಗಿ ದ್ದಂತಿಲ್ಲ.
ಭಾರತದಲ್ಲಿ ಓಲೈಕೆ ರಾಜಕಾರಣ, ರಾಜಕೀಯ ಪಕ್ಷಗಳ ಹೃದಯದಲ್ಲಿ ಸ್ಥಾನ ಪಡೆದು ಕೊಂಡು 75 ವರ್ಷಗಳೇ ಆಗಿವೆ. ಓಲೈಕೆ ಅವರಿಗೇನು ಹೊಸತಲ್ಲ. ಅದೆಂದೂ ಅವರಿಗೆ ಅಸಹ್ಯವನ್ನೂ ಹುಟ್ಟಿಸಿಲ್ಲ. ಅವರವರ ರಾಜಕೀಯ ಲಾಭಕ್ಕೊಸ್ಕರ, ಅಧಿಕಾರ ಹಂಬಲ ಕ್ಕೊಸ್ಕರ, ಆಡಳಿತ ಶಕ್ತಿಯ ಸ್ಥಾಪನೆ ಗೊಸ್ಕರ ಅವರು ಹಾಗೆ ಮಾಡಬೇಕಾದ್ದು ಅನಿವಾರ್ಯವೇ.
ಆದರೆ ಈ ಓಲೈಕೆ ರಾಜಕಾರಣ ಪ್ರಜಾಜನರ ಹಿತದ ದೃಷ್ಟಿಯಿಂದ ಎಷ್ಟು ಸರಿ? ಓಲೈಕೆ ರಾಜಕಾರಣದಿಂದ ರಾಷ್ಟ್ರಪ್ರಯೋಜನ ವೇನಾದರೂ ಉಂಟೇ? ಹೋಗಲಿ, ಅದರ ಅನಿವಾರ್ಯವಾದರೂ ಏಕೆ ಬಂದು ಬಿದ್ದಿದೆ? ಎನ್ನುವುದೇ ಈ ಲೇಖನ ವಿಷಯ. ಒಂದಂತೂ ಸ್ಪಷ್ಟ. ಪ್ರಜಾಪ್ರಭುತ್ವದಲ್ಲಿ ಪ್ರಜಾ ಓಲೈಕೆಗೆ ಮನ್ನಣೆಯೇ ಹೊರತು ಹಿಂದೂ ಜನ ಮುಸಲ್ಮಾನ ಜನ ಎನ್ನುವ ಆದ್ಯತಾನುಸಾರದ ಓಲೈಕೆಗೆ ಇಲ್ಲಿ ಆಸ್ಪದವೂ ಇಲ್ಲ ಮನ್ನಣೆಯೂ ಇಲ್ಲ. ಇರಲೂಬಾರದು. ಇದೇ ಪ್ರಜಾ ಪ್ರಭುತ್ವದ ಆದರ್ಶ.
ಆದರೆ ವಾಸ್ತವ ಎನ್ನುವುದೊಂದಿದೆ. ಅದು ಈ ಆದರ್ಶದಿಂದ ಬಹಳ ದೂರವಿದೆ ಅಥವಾ ಕೆಳಗಿದೆ. ಈ ವಾಸ್ತವ ಸ್ಥಿತಿಯನ್ನು ಉಚ್ಚ ಸ್ಥಿತಿಗೆತ್ತಲು ಎರಡು ಮಾರ್ಗೋಪಾಯಗಳುಂಟು. ಒಂದು, ‘ರಾಜಕೀಯ ಪಕ್ಷಗಳು ಹೃದಯಪೂರ್ವಕವಾಗಿ- ತಮ್ಮ ನೀತಿನಿಯಾಮಕ ಗಳಲ್ಲಿ ಪ್ರಜಾಪ್ರಭುತ್ವ ತತ್ವಗಳ ಅಡಕ ಮಾಡಿಕೊಳ್ಳುವುದು ಮತ್ತು ಅದರನುಸಾರ ರಾಜ್ಯಕ್ಷೇತ್ರದಲ್ಲಿ ಕಾರ್ಯಮಗ್ನರಾಗುವುದು.’ ಎರಡನೇಯದು ಬಹಳ ಮುಖ್ಯವಾzಂದು ಪರಿಗಣಿಸಲ್ಪಡಲು ಅರ್ಹವಾದ್ದು. ಅದೇ ‘ಪ್ರಜಾ ಜಾಗೃತಿ.’ ನಾಡಿನ ಪ್ರಜೆಗಳು ಜಾಗೃತರಾಗಿ ತಮ್ಮ ಹಿತೋಭಿವೃದ್ಧಿಗಳಿಗೆ ಒತ್ತು ಕೊಡುವ ಪಕ್ಷಗಳನ್ನು, ನಾಯಕರನ್ನು ಆರಿಸಿದ್ದೇ ಆದರೆ ಆಗ ತಕ್ಕ ಮಟ್ಟಿಗೆ ಓಲೈಕೆ ರಾಜಕಾರಣ ತಲೆಮರೆಸಿಕೊಂಡೀತು.
ಆದರೆ ಪ್ರಜಾಜನದ ನಿರ್ಲಕ್ಷ್ಯ ಮತ್ತು ಔದಾಸಿನ್ಯ ಉಳಿದೆಲ್ಲ ಪ್ರಜಾದೇಶಗಳಿಗಿಂತಲೂ ಭಾರತ ದೇಶದಲ್ಲಿ ಸ್ವಲ್ಪ ಹೆಚ್ಚೇ ಇದೆ. ಇದನ್ನು ದೇಶದ ಒಟ್ಟು ಪ್ರಜೆಗಳ ಮಾನಸಿಕ ಅವಸ್ಥೆ ಎಂದರೆ ತಪ್ಪಾಗಲಾರದು. ಈ ಅವಸ್ಥೆ ಬದಲಾಯಿಸಬೇಕಾದರೆ ಪ್ರಜೆಗಳಿಗೆ ಹೊಟ್ಟೆ ತುಂಬ
ಊಟ, ತಲೆ ತುಂಬ ಬುದ್ಧಿ(ಶಿಕ್ಷಣ) ಇರಲೇಬೇಕಾದ್ದು ಅನಿವಾರ್ಯ. ರಾಜಕೀಯ ನಾಯಕರುಗಳು ಈ ಎರಡನ್ನೂ ಮಾಡಲೊಲ್ಲರು. ಏಕೆಂದರೆ- ಒಂದೊಮ್ಮೆ ಜನ ಶಿಕ್ಷಿತರಾಗಿ, ಹಸಿವು ನೀಗಿದವರಾಗಿ ಇವರ ಕಳ್ಳಾಟಗಳನ್ನೆಲ್ಲ ಎದುರಿಸಿ ನಿಲ್ಲಲು ಶಕ್ತರಾಗಿಬಿಟ್ಟರೆ ಈ ರಾಜಕಾರಣಿಗಳು ಪ್ರಜಾಭಿಕ್ಷೆಗೆ ಕೈಯೊಡ್ಡಿ ನಿಲ್ಲಬೇಕಾದ ಪರಿಸ್ಥಿತಿ ಬರುತ್ತದೆ.
ಧರ್ಮ, ಜಾತಿ, ಉಪಜಾತಿ, ಹೆಂಡ, ಹಣಗಳ ಮೂಲಕ ಪ್ರಜೆಗಳನ್ನು ಓಲೈಸುತ್ತ ಬಂದ ರಾಜಕೀಯಜನರು ಒಮ್ಮೆಲೆ ಪ್ರಜೆಗಳ ಮುಂದೆ ಮತಭಿಕ್ಷೆಗೆ ಹೇಗೆ ತಾನೆ ಕೈ ಚಾಚಿಯಾರು? ಈ ಕಾರಣದಿಂದಲೇ ರಾಜಕಾರಣಿಗಳು ಪ್ರಜಾ ನಿರ್ಲಕ್ಷ್ಯವನ್ನು, ಔದಾಸಿನ್ಯವನ್ನು ಅತ್ಯಂತ ಚಾಣಾಕ್ಷತನದಿಂದಲೇ ಜೀವಂತವಾಗಿಡುವ ಪ್ರಯತ್ನ ಮಾಡುತ್ತಾರೆ. ಪ್ರಜೆಗಳು ಪ್ರಜಾ ಧರ್ಮ ಪರಿಪಾಲನೆಯನ್ನರಿಯದ ಕಾರಣ ಅವರ ಈ ಪ್ರಯತ್ನ ಸಾಫಲ್ಯವಾಗುತ್ತದೆ.
ಓಲೈಕೆಯ ರಾಜಕಾರಣದ ಅನಿವಾರ್ಯತೆಯಾದರೂ ಏಕೆ? ರಾಜಕಾರಣಿಗಳು ಅಧಿಕಾರವನ್ನು ಹಿಡಿಯಲು ಓಲೈಕೆಯೇ ಏಕೆ ಬೇಕು? ಮತರಾಜಕಾರಣದ ಮೇಲೆ ಅದೆಷ್ಟು ಪ್ರಭಾವ ಬೀರೀತು? ಈ ಹಲವು ಪ್ರಶ್ನೆಗಳೇಳಬೇಕಾದ್ದು ಸಹಜವಲ್ಲವೆ. ಸಾವಿರ ಲಕ್ಷ ಜನರ ವಿರೋಧದ ಮಧ್ಯೆಯೂ ಭಾರತ 47ರಲ್ಲಿ ವಿಭಜನೆ ಆಯಿತು. ಅಖಂಡ ಭಾರತದಲ್ಲಿ ನೆಲೆಸಿದ್ದ ಮುಸಲ್ಮಾನ ಧರ್ಮಾಶ್ರಿತರಿಗಾಗಿ ಹಿಂದೂಸ್ತಾನ ಖಂಡತುಂಡಾಯಿತು. ಅಷ್ಟಾದಾಗ್ಯೂ ಈ ನೆಲವನ್ನು ಬಿಟ್ಟು ಅನೇಕ ಲಕ್ಷ ಮುಸಲ್ಮಾನರು ಪಾಕಿಸ್ತಾನಕ್ಕೆ ತೆರಳಲಿಲ್ಲ. ಅವರು ಇಲ್ಲೇ ಉಳಿದರು. ಭಾರತ ಸ್ವತಂತ್ರವಾಯಿತು.
ಸಂವಿಧಾನ ರಚಿತವಾಯಿತು. ಚುನಾವಣೆಗಳ ಹಬ್ಬ ಶುರು ಹತ್ತಿತು. ಅಲ್ಲಿಂದ ಈ ಓಲೈಕೆ ರಾಜಕಾರಣ ಎಲ್ಲೇ ಮೀರಿ ನಡೆಯುತ್ತ
ಬಂದಿದೆ. ಅಂದಿನ ಆಡಳಿತ ಚುಕ್ಕಾಣಿಯಲ್ಲಿದ್ದ ಕಾಂಗ್ರೆಸ್ ಪಕ್ಷ ಹಿಂದುಮುಂದು ನೋಡದೆ ಹಿಂದೂಗಳನ್ನು, ಅವರ ಭಾವನೆ, ಭವಿಷ್ಯವನ್ನು ಕಡೆಗಣನೆ ಮಾಡಿತು. ಮುಸಲ್ಮಾನರ ಬಾಲ ಹಿಡಿದು ಬೆನ್ನು ಹತ್ತಿತು. ಹಾಗಂತ ಮುಸಲ್ಮಾನ ಸಮಾಜವೇನು ದೊಡ್ಡ ಉಚ್ಛ್ರಾಯ ಸ್ಥಿತಿಗೇರಲಿಲ್ಲ. ಅವರು ಈ ಪಕ್ಷದ ಮತ ಬ್ಯಾಂಕ್ ಆಗಿಯಷ್ಟೇ ಉಳಿದುಕೊಂಡರು.
ಇನ್ನೂ ಹಾಗೇ ಇದ್ದಾರೆ. ಕಾರಣ ಅವರಲ್ಲಿ ಅನೇಕರು ಅವಿದ್ಯಾವಂತರು, ಬಡವರು. ಇನ್ನು ಹಿಂದೂಗಳನ್ನು ಓಲೈಸಲು ಹಿಂದೂ ಮಹಾ ಸಭಾದಿಂದ ಶುರು ಮಾಡಿ ಇಂದಿನ ಭಾಜಪದವರೆಗೆ ಹಲವು ಪಕ್ಷಗಳು ಪ್ರಯತ್ನ ಪಟ್ಟಿವೆ. ಪಡುತ್ತಲಿವೆ. ಅದರಲ್ಲಿ ಭಾಜಪಾ ಯಶಸ್ವಿಯಾಗಿ ಇಂದು ದೇಶದಲ್ಲಿ ಮತ್ತು ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಪಟ್ಟ ಏರಿ ಕುಳಿತಿದೆ.
ಹಿಂದೆ ಒಂದು ಕಾಲದಲ್ಲಿ ಹಿಂದೂಮತಗಳೆಲ್ಲ ಬೇಡವೆಂದರೂ ಕಾಂಗ್ರೆಸ್ಸಿಗೇ ಬೀಳುತ್ತಿದ್ದವು. ಅದರ ಜೊತೆ ಮುಸಲ್ಮಾನರ ಓಲೈಕೆ ಅವರಿಗೆ ಮುಸಲ್ಮಾನ ಮತಗಳನ್ನೂ ಭದ್ರ ಮಾಡಿಕೊಟ್ಟಿತ್ತು. ಕಾಲಾನಂತರ ಅಡ್ವಾಣಿ- ವಾಜಪೇಯಿ ಜೋಡಿ ಹಿಂದೂಗಳನ್ನು ತಮ್ಮತ್ತ ಸೆಳೆದುಕೊಳ್ಳುವುದರಲ್ಲಿ ಯಶಸ್ವಿಯಾಯಿತು. ಆ ಕಾರಣದಿಂದಲೇ ಕಾಂಗ್ರೆಸ್ಸಿಗೆ ರಾಜೀವ್ ಗಾಂಧಿ ನಂತರ ಪೂರ್ಣಬಹುಮತದ
ಸರಕಾರ ನಡೆಸಲು ಸಾಧ್ಯವಾಗಲಿಲ್ಲ. ಹಿಂದೂಗಳಿಗೆ ಪರ್ಯಾಯ ಪಕ್ಷವೊಂದು ಬೇಕಿತ್ತು. ಭಾಜಪಾ ಸಿಕ್ಕಿತು.
ಒಮ್ಮೆ ಹಿಂದೂಮತಗಳ ರುಚಿ ನೋಡಿದ ಭಾಜಪಾ ತನ್ನ ಓಲೈಕೆ ರಾಜಕಾರಣವನ್ನು ಸ್ವಲ್ಪ ಉಗ್ರ ಮಾಡಿತು. ಅದರಲ್ಲಿ ಸಫಲವೂ ಆಯಿತೆನ್ನಿ. 2014 ಮತ್ತು 2019 ಚುನಾವಣೆಗಳಂತೂ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಕಡಬಾಗಿಬಿಟ್ಟವು. ಅಲ್ಲಿಂದ ಕಾಂಗ್ರೆಸ್ ಮೃದು ಹಿಂದುತ್ವ (soft Hindutwa) ಸಿದ್ಧಾಂತವನ್ನು ಅಳವಡಿಸಿಕೊಳ್ಳಲು ಪ್ರಯತ್ನ ಪಡುತ್ತಲೇ ಇದೆ. ಆದರೆ ಸಾಧ್ಯವಾಗುತ್ತಿಲ್ಲ. ಮೇಲೆಯೇ ಹೇಳಿದೆನಲ್ಲ ಈ ಓಲೈಕೆ ರೋಗ ವಂಶವಾಹಿ ಎಂದು. ಅಡಕತ್ತರಿಗೆ ಸಿಕ್ಕ ಕಾಂಗ್ರೆಸ್ ಈಗ ಮುಸಲ್ಮಾನರನ್ನೂ ಬಿಡುವಂತಿಲ್ಲ ಹಿಂದೂ ಗಳನ್ನೂ ಉಪೇಕ್ಷಿಸುವಂತಿಲ್ಲ. ಈ ಎಲ್ಲದರ ನಡುವೆ ಅನೇಕ ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡು ಹಿಂದೂ ಮುಸಲ್ಮಾನರಿಬ್ಬರ ಮತ ಗಳನ್ನು ಪಡೆಯುವುದರಲ್ಲೂ ಯಶಸ್ವಿಯಾಗಿದ್ದಾರೆ.
ಹಾಗಾಗಿ ಕಾಂಗ್ರೆಸ್ ಆಗಲಿ, ಭಾಜಪಾ ಆಗಲಿ, ಇನ್ಯಾವುದೇ ಪಕ್ಷವಾಗಲಿ ಒಂದು ಜನಾಂಗವನ್ನು ಪೂರ್ಣವಾಗಿ ಓಲೈಸದ ಹೊರತು ಅವರಿಗೆ ಅಧಿಕಾರ ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಅವರೂ ತಿಳಿದಾಗಿದೆ. ಹಾಗಾಗಿ ಜಾತಿ,ಮತ, ಪಂಥ, ಧರ್ಮ ಇವುಗಳೆಲ್ಲ ಚುನಾವಣೆ ಗಳು ಬಂದಂತೆ ಮೇಲೆದ್ದು ಬರುತ್ತವೆ. ರಾಜಕೀಯ ಪಕ್ಷಗಳ ಓಲೈಕಾ ಸಾಧನಗಳು ಇವೇ ಅಲ್ಲವೆ. ಈ ಎಲ್ಲ ಕಾರಣಗಳಿಂದ ಓಲೈಕೆ ಅನಿವಾರ್ಯ. ಈ ಓಲೈಕೆ ರಾಜಕಾರಣ ತಪ್ಪಬೇಕಾದರೆ ಪ್ರಜಾ ಜಾಗೃತಿ ಒಂದೇ ಉಪಾಯ. ರಾಜಕೀಯ ಪಕ್ಷಗಳಿಂದಂತೂ ಪ್ರಜಾ ಜಾಗೃತಿ ಆಗುತ್ತದೆನ್ನುವುದು ಸುಳ್ಳು ಮಾತು. ಯಾರೊಬ್ಬರಿಗೂ ಈ ಅಪೇಕ್ಷೆ ಇದ್ದರೆ ಅದು ತಪ್ಪು ಕೂಡ.
ಪ್ರಜಾ ಜಾಗೃತಿ ಎನ್ನುವುದು ಪ್ರಜೆಗಳ ಆಂತರ್ಯದಗಬೇಕಾದ್ದು. ಹಾಗಾಗಬೇಕೆಂದರೆ ಮಾಡಬೇಕಾದ್ದೇನು? ಈ ಜವಾಬ್ದಾರಿಯನ್ನು ಡಿ.ವಿ.ಜಿ. ನಾಡಿನ ವಿದ್ಯಾವಂತರಿಗೆ ವಹಿಸುತ್ತಾ ಹೀಗೆ ಹೇಳುತ್ತಾರೆ:‘…ವಿದ್ಯಾವಂತರು ಈಗ ಮಾಡಬೇಕಾದ ಕೆಲಸವೇನು? ಅವರು ತಮ್ಮ ತಮ್ಮ ಪ್ರಜಾಧರ್ಮದ ಭಾರದ ಜೊತೆಗೆ ಅವಿದ್ಯಾವಂತರ ಮೇಲಣ ಹೊರೆಯನ್ನು ಹೊತ್ತುಕೊಳ್ಳಬೇಕು. ಎಂದರೆ, ತಾವು ರಾಜಕೀಯ ವಿವೇಕವನ್ನು ಸಂಪಾದಿಸಿಕೊಂಡು ವಿದ್ಯಾವಂತರಲ್ಲದವರಲ್ಲಿ ಆ ವಿವೇಕವನ್ನು ಹರಡಬೇಕು.
ಹೀಗೆ ವಿದ್ಯಾವಂತರ ಜವಾಬ್ದಾರಿ ಈಗ ಇಮ್ಮಡಿಯಾಗಿದೆ.’ ನಾವೆಷ್ಟೇ ಆದರ್ಶತಮ ಸಿದ್ಧಾಂತಗಳ ವಿಚಾರವಿಮರ್ಶೆ ಮಾಡಿದರೂ ಅದು ಕಾರ್ಯರೂಪಕ್ಕೆ ಬೀಳದ ಹೊರತು ಸಿದ್ಧಿ ಸಾಧ್ಯವಿಲ್ಲ. ರಾಜಕೀಯ ನಮಗೇಕೆ ಬೇಕು ಎನ್ನುವವರಿಗೆ ಪ್ರಜಾಪ್ರಭುತ್ವದಲ್ಲಿ ಜಾಗವಿಲ್ಲ. ಅಂತಹವರಿಗೆ ಚೀನಾ, ರಷ್ಯಾಗಳು ಸೂಕ್ತ ಸ್ಥಳವಾದಾವೇನೋ. ಪ್ರಜಾಪ್ರಭುತ್ವದಲ್ಲಿ ವಾಸಿಸುವ ಎಲ್ಲರೂ ರಾಜಕೀಯಾಸಕ್ತರಾದಾಗಲೇ ರಾಜ್ಯವ್ಯವಸ್ಥೆಗೊಂದು ಮೆರಗು ಬರುತ್ತದೆ, ಸೊಬಗು ಇರುತ್ತದೆ.
ಪ್ರಜಾಧರ್ಮ ಪಾಲನೆ ಮಾಡುವುದು- ಇದೇ ರಾಜಕೀಯ ಆಸಕ್ತನ ಗುಣ. ಅವರೇನು ಚುನಾವಣೆಗೆ ಸ್ಪರ್ಧಿಸಬೇಕಾದ್ದಿಲ್ಲ. ಆದರೆ ಚುನಾವಣಾ ರಾಜಕೀಯದ ಮೇಲೆ ಮತ್ತು ಚುನಾವಣಾ ನಂತರದ ಆಡಳಿತದ ಮೇಲೆ ವಿಚಕ್ಷಣಾ ಕಣ್ಣನ್ನಿಟ್ಟಿರಬೇಕು. ಮತ್ತು ಚುನಾಯಿತ ಪ್ರತಿನಿಧಿಗಳನ್ನು ಪ್ರಶ್ನಿಸಿ, ಪ್ರಶಂಶಿಸಿ, ತಿದ್ದಿ, ತೀಡಿ ಒಂದು ಹತೋಟಿಯಲ್ಲಿಟ್ಟಿರಬೇಕು. ಇದೆಲ್ಲ ಸಾಧ್ಯವಾಗುವುದು ಪ್ರಜೆಗಳೆಲ್ಲ ಧರ್ಮ, ಜಾತಿ, ಭಾಷೆ, ಹಣ, ಹೆಂಡದ ಅಮಲನ್ನು ಬದಿಗೊತ್ತಿ ಬರೀ ಪ್ರಜಾಪ್ರಭುತ್ವದ ತತ್ವಾಶ್ರಯವನ್ನು ಬಯಸಿ ಬಂದಾಗ. ಪ್ರಜಾಪ್ರಭುತ್ವದ ಒಂದು ನಿಯಮವಿದೆ, ಅದು- ’ಯಥಾ ಪ್ರಜಾ ತಥಾ ರಾಜಾ.’