Wednesday, 18th September 2024

ಜನಸಂಖ್ಯಾ ಸ್ಫೋಟದ ಸುತ್ತ ಮುತ್ತ !

ಅಭಿಮತ

ಕರವೀರ ಪ್ರಭು ಕ್ಯಾಲಕೊಂಡ

‘ಭಾರತ ಪ್ರಗತಿಯ ಹಾದಿಯಲ್ಲಿದೆ .ಶಿಕ್ಷಣ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ, ಆರ್ಥಿಕ ಪ್ರಗತಿ ಮತ್ತು ತಂತ್ರಜ್ಞಾನ ಮುನ್ನಡೆಗಳಲ್ಲಿ ಬಲವಾದ ಪ್ರಗತಿ ಸಾಧಿಸುತ್ತಿದೆ . ೧೫ – ೨೪ ವರ್ಷ ವಯಸ್ಸಿನವರೇ ೨೫.೪ ಕೋಟಿ ಇದ್ದಾರೆ. ಹೀಗಾಗಿ ಹೊಸ ಚಿಂತನೆ ಮತ್ತು ಸಂಶೋಧನೆಗೆ ಬಹುದೊಡ್ಡ ಮೂಲ ಎನಿಸಿ ಕೊಂಡಿದೆ. ಮಹಿಳೆಯರು ಮತ್ತು ಬಾಲಕಿಯರಿಗೆ ಸಮಾನ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಅವಕಾಶ ದೊರೆತಲ್ಲಿ ಇನ್ನಷ್ಟು ವೇಗವಾಗಿ ಮುನ್ನಡೆ ಯಲಿದೆ.’ ಎಂದು ಯುಎನ್‌ಎಫ್ ಸಿಎಯ ಭಾರತದ ಪ್ರತಿನಿಧಿ ಆಂಡ್ರಿಯಾ ವೊಜ್ನಾರ್ ಹೇಳಿದ್ದಾರೆ.

ಜುಲೈ ೧೧,೧೯೮೭ರಂದು ವಿಶ್ವದ ಜನಸಂಖ್ಯೆಯು ೫೦೦ ಕೋಟಿಯ ಗಡಿ ದಾಟಿ ಆತಂಕದ ಅಂಚಿಗೆ ತಲುಪಿದ ದಿನ. ಇದರಿಂದ ಜುಲೈ ೧೧ರಂದು ಪ್ರತೀ ವರ್ಷವೂ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ನಿರಂತರವಾಗಿ ಬೆಳೆಯುವ ಜನಸಂಖ್ಯೆಗೆ ಬೇಕಾಗುವ ಆಹಾರ, ಬಟ್ಟೆ-ಬರೆ, ವಸತಿ,
ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗ ಇವುಗ ಳನ್ನು ಒದಗಿಸುವಷ್ಟು ಸಂಪನ್ಮೂಲಗಳು ಇಲ್ಲದೆ ಹೋದಾಗ ಜನಸಂಖ್ಯಾ ಬೆಳವಣಿಗೆಯು ಒಂದು
ಸಮಸ್ಯೆಯಾಗುತ್ತದೆ.

ವೈದ್ಯ ವಿಜ್ಞಾನ ಬೆಳೆದಂತೆ, ಆರೋಗ್ಯ ಸ್ಥಿತಿ ಉತ್ತಮಗೊಂಡಂತೆ ಮನುಷ್ಯನ ಅಕಾಲ ಮರಣವನ್ನು ನಿವಾರಿಸಿಕೊಂಡಿದ್ದಾನೆ. ಹಿಂದುಳಿದ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೂ ಮಕ್ಕಳ ಸಾವಿನ ಸಂಖ್ಯೆ ಕಡಿಮೆ ಮಾಡಲು ಬಳಸಿಕೊಳ್ಳುತ್ತಿರುವ ವೈದ್ಯ ವಿಜ್ಞಾನವನ್ನು ಜನನ ಸಂಖ್ಯೆಯನ್ನು
ಮಿತಿಯಲ್ಲಿಡುವುದಕ್ಕಾಗಿ ಬಳಸುವಲ್ಲಿ ಹಿಂದೆ ಉಳಿದಿದ್ದೇವೆ. ಹಿಂಜರಿಯುತ್ತಿದ್ದೇವೆ. ಮಿಕ್ಕೆಲ್ಲ ವಿಷಯಗಳಲ್ಲಿ ಪಾಶ್ಚಾತ್ಯರ ಅನುಕರಣೆ ಮಾಡುವ
ಜನ ಕುಟುಂಬ ನಿಯಂತ್ರಣದಲ್ಲಿ ಮಾತ್ರ ಅನಾಸಕ್ತಿ ತೋರುತ್ತಿರುವುದು ವಿಚಿತ್ರ. ಈ ವರ್ಷದ ಘೋಷ ವಾಕ್ಯ Our earth is in danger of over population, control the population and save the earth.

ವಿಶ್ವಸಂಸ್ಥೆಯ ವರದಿ: ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಜನಸಂಖ್ಯಾ ಅಂದಾಜು ವರದಿಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ. ವರದಿಯ ಪ್ರಕಾರ ಭಾರತದ ಜನಸಂಖ್ಯೆ ೧೪೨,೮೬ ಕೋಟಿ. ಚೀನಾದ್ದು ೧೪೨.೫೭ ಕೋಟಿ. ಚೀನಾದ ಜನಸಂಖ್ಯೆ ಈಗಾಗಲೇ ಕಡಿಮೆಯಾಗತೊಡಗಿದೆ. ಭಾರತದಲ್ಲಿ ಇನ್ನೂ
ಮೂರು ದಶಕಗಳ ಕಾಲ ಜನಸಂಖ್ಯೆ ಹೆಚ್ಚುತ್ತಲೇ ಇರುತ್ತದೆ ಎಂದು ವಿಶ್ವಸಂಸ್ಥೆ ವರದಿ ವಿಶ್ಲೇಷಿಸಿದೆ.

ಜನಸಂಖ್ಯೆ ಸುಸ್ಥಿರತೆ ಸಾಧಿಸುವ ೨.೧ ಫರ್ಟಿಲಿಟಿ ರೇಟ್‌ನ್ನು ಭಾರತ ಸಾಧಿಸಿದೆಯಾದರೂ, ಹಲವಾರು ಕಾರಣಗಳಿಂದ ಜನಸಂಖ್ಯೆ ಹೆಚ್ಚಳ ಇನ್ನೂ ಮೂರು ದಶಕ ಮುಂದುವರಿಯುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ೨೦೫೦ ರ ಹೊತ್ತಿಗೆ ಚೀನಾ ಜನಸಂಖ್ಯೆ ೧೩೧.೭ ಕೋಟಿಗೆ ಇಳಿದರೆ, ಭಾರತದ ಜನಸಂಖ್ಯೆ ೧೬೬.೮ ಕೋಟಿಗೆ ಏರುತ್ತದೆ. ಚೀನಾದಲ್ಲಿ ವೃದ್ಧರ ಸಂಖ್ಯೆ ೨೦೩೦ ರ ಹೊತ್ತಿಗೆ ೧೯.೨ ಕೋಟಿಗೆ ಏರಿ, ಈಗಿರುವ ಪ್ರಮಾಣದ ದುಪ್ಪಟ್ಟಾಗುತ್ತದೆ. ಭಾರತದಲ್ಲಿ ೨೦೫೦ ರ ಹೊತ್ತಿಗೆ ಐದನೇ ಒಂದು ಭಾಗದಷ್ಟು ಜನ ವೃದ್ಧರಾಗುತ್ತಾರೆ ಎಂದು ವರದಿ ವಿಶ್ಲೇಷಿಸಿದೆ.

ತಾಗುವ ಮುನ್ನ ಬಾಗುವುದು ಲೇಸು: ನಮ್ಮ ದೇಶದಲ್ಲಿ ತೀವ್ರವಾಗಿ ಜನಸಂಖ್ಯೆ ಬೆಳೆದಂತೆ ಪ್ರತಿ ವರ್ಷ ಭೂಮಿ ಏನಾದರೂ ಬೆಳೆಯುತ್ತಾ ಹೋಗು ವುದೇ? ಇಲ್ಲ. ಹಾಗಾದರೆ ಈ ಜನಸಂಖ್ಯಾ ಬೆಳವಣಿಗೆ ಮಾರಕವಲ್ಲದೆ ಮತ್ತೇನು? ಜನಸಂಖ್ಯೆಯು ಬಡತನ, ನಿರುದ್ಯೋಗ, ಅನಕ್ಷರತೆ, ಭಿಕ್ಷಾಟನೆ, ಅಪರಾಧ, ಬಾಲಾಪರಾಧ, ವೇಶ್ಯಾವೃತ್ತಿ, ಭ್ರಷ್ಟಾಚಾರ ಮುಂತಾದ ಜ್ವಲಂತ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ. ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ ಇಂದು ನಮ್ಮ ದೇಶದ ಅಭಿವೃದ್ಧಿಯ ಹೊಣೆಹೊತ್ತ ನಾಯಕರನ್ನು ದಂಗುಗೊಳಿಸಿ ದಿಕ್ಕು ತಪ್ಪಿಸುತ್ತಿದೆ. ಆದ್ದರಿಂದ ತಾಗುವ ಮುನ್ನ ಬಾಗುವುದು ಲೇಸಲ್ಲವೇ? ಮಕ್ಕಳಿಲ್ಲದವರಿಗೆ ಸದ್ಗತಿಯಿಲ್ಲ ಎಂಬ ಒಂದು ಮಾತಿದೆ.

ಗತಿ ದೊರಕುವುದೋ ಇಲ್ಲವೋ  ಹೇಳುವವರಾರು? ಅದನ್ನು ಖಚಿತ ಪಡಿಸುವುದು ಹೇಗೆ? ಆದರೆ ಅತಿ ಮಕ್ಕಳನ್ನು ಹೊಂದಿದ ಮನುಷ್ಯನು ಇಂದು ಇಲ್ಲಿಯೇ ಗತಿಕಾಣದಂತಾಗಿದ್ದಾನೆ. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವವರೆಂದು ಬಸವಣ್ಣನವರು ಹೇಳಿದ್ದಾರೆ. ಮೊದಲು ಇಲ್ಲಿ ಸಲ್ಲುವಂತೆ
ಜೀವಿಸುವುದನ್ನು ಕಲಿಯಬೇಕಾಗಿದೆ. ಮನೆ ತುಂಬ ಮಕ್ಕಳಿರಲೆಂದು ಹೇಳುವ ಕಾಲವೊಂದಿತ್ತು. ಆದರೆ ಇಂದು ತುಂಬಮಕ್ಕಳಿದ್ದವರ ಗತಿ ಏನಾಗಿದೆ ಎಂಬುದನ್ನು ಕಣ್ಣಿಟ್ಟುನೋಡುತ್ತಿದ್ದೇವೆ. ದೇಶದಲ್ಲಿ ಅರೆಹೊಟ್ಟೆ ಉಣ್ಣುವ ಕುಟುಂಬಗಳೆಷ್ಟೋ ಇವೆ. ಜನ ಸಾಮಾನ್ಯರಲ್ಲಿ ಬೇರೂರಿರುವ ಇಂಥ ಭಾವನೆಗಳನ್ನು ತೊಲಗಿಸಲು ಶಿಕ್ಷಣವು ಪ್ರಬಲ ಸಾಧನವಾಗಿದೆ. ಮಕ್ಕಳು ಬೇಡವೇ ಬೇಡವೆಂದಲ್ಲ- ಮಕ್ಕಳ ಸಂಖ್ಯೆ ಮಿತಿಯಲ್ಲಿದ್ದರೆ ಹಿತವಾಗುವು ದೆಂಬುದನ್ನು ತಿಳಿಸಿಕೊಡಬೇಕು.

ಫಲವಂತಿಕೆ ದರ: ಸಾಮಾನ್ಯವಾಗಿ ಒಂದು ದೇಶದ ಜನಸಂಖ್ಯೆಯ ಏರಿಕೆಯ ಗತಿಯನ್ನು ಅರಿಯಲು ಒಟ್ಟಾರೆ ಫಲವಂತಿಕೆ ದರ (Total Fertility
Rate) ಎಂಬ ಮಾನದಂಡವನ್ನು ಬಳಸುತ್ತಾರೆ. ಅಂದರೆ ಒಂದು ದೇಶ/ ಪ್ರದೇಶದಲ್ಲಿ ಒಬ್ಬ ಮಹಿಳೆ ೧೮ -೪೯ ವಯಸ್ಸಿನ ತನ್ನ ಗರ್ಭಧಾರಣಾ ಅವಧಿಯಲ್ಲಿ ಸರಾಸರಿ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತಿದ್ದಾಳೆ ಎನ್ನುವ ಸರಾಸರಿ ಸಂಖ್ಯೆಯಿದು.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ, ಭಾರತದ ಒಟ್ಟಾರೆ ಫಲವಂತಿಕೆ ದರ (TFR)೫.೯ ಅಂದರೆ ೧೯೫೧ರ ವೇಳೆಗೆ ಭಾರತದ ಮಹಿಳೆ ಸರಾಸರಿ ೬ ಮಕ್ಕಳಿಗೆ
ಜನ್ಮ ನೀಡುತ್ತಿದ್ದರು ಎಂದರ್ಥ. ಒಟ್ಟಾರೆ ಫಲವಂತಿಕೆ ದರ ಅದೇ ರೀತಿ ಮುಂದುವರೆದಿದ್ದರೆ ಈಗ ಭಾರತದ ಜನಸಂಖ್ಯೆ ೨೫೦ – ೩೦೦ ಕೋಟಿಗೆ ತಲುಪಬೇಕಿತ್ತು. ಆದರೆ, ಭಾರತವು ಪ್ರಾರಂಭದಿಂದಲೇ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಹಾಗೂ ಕುಟುಂಬ ನಿಯಂತ್ರಣ ಸಾಧನಗಳ ಲಭ್ಯತೆಯ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ಎಲ್ಲಿ ಅರೆವು, ಲಭ್ಯತೆ ಹಾಗೂ ಮಹಿಳೆಯರ ಶಿಕ್ಷಣ ಹಾಗೂ ಸಬಲೀಕರಣ ಸಾಪೇಕ್ಷವಾಗಿ ಸಾಧ್ಯ ವಾಯಿತೋ ಅ ಬಹಳ ಬೇಗನೆ ಟಿಎಫ್ ಆರ್ ದರ ಕುಸಿಯುತ್ತಾ ಬಂತು. ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೇ (NFHS)ಯ ಅಂಕಿ ಅಂಶಗಳ ಪ್ರಕಾರ ಈಗ ಭಾರತದ ಸರಾಸರಿ ಟಿಎಫ್ ಆರ್ ದರ ೨.೧ಗೆ ಕುಸಿದಿದೆ.

ಅಂದರೆ ೧೯೫೧ ಕ್ಕೆ ಹೋಲಿಸಿದರೆ ಜನಸಂಖ್ಯಾ ಏರಿಕೆಯ ದರ ಅರ್ಧಕ್ಕಿಂತಲೂ ಹೆಚ್ಚು ಕಡಿಮೆಯಾಗಿದೆ. ಸಂತಾನ ಶಕ್ತಿ ಫಲವತ್ತತೆ ೨.೧ ಇದ್ದಲ್ಲಿ ಜನಸಂಖ್ಯೆ ಹೆಚ್ಚುವುದೂ ಇಲ್ಲ. ಕಡಿಮೆಯೂ ಆಗುವುದಿಲ್ಲ ಎನ್ನುವುದು ತಜ್ಞರ ಲೆಕ್ಕಾಚಾರ. ಕುಸಿತಕ್ಕೆ ಕಾರಣಗಳೇನು? ಭಾರತದ ಜನಸಂಖ್ಯಾ ನಿಯಂತ್ರಣ ಯೋಜನೆಯು ಪ್ರಧಾನವಾಗಿ ಮನವರಿಕೆ, ಸೌಲಭ್ಯಗಳ ಒದಗಿಸುವಿಕೆ ಹಾಗೂ ಮಹಿಳಾ ಸಬಲೀಕರಣಗಳನ್ನು ಆಧರಿಸಿಯೇ ನಡೆಯುತ್ತಿದೆ. ಜಗತ್ತಿನಾದ್ಯಂತ ಎಲ್ಲಾ ಯಶಸ್ವಿ ಕುಟುಂಬ ನಿಯಂತ್ರಣಗಳ ಕಥನವೂ ಇದೇ ಮಾರ್ಗವನ್ನು ಅನುಸರಿಸಿದೆ.

೧೯೯೪ರಲ್ಲಿ ಕೈರೋದಲ್ಲಿ ನಡೆದ ಜನಸಂಖ್ಯಾ ನಿಯಂತ್ರಣ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲೂ ಭಾರತ ಇದೇ ಮಾರ್ಗಕ್ಕೆ ಬದ್ಧವಾಗಿರುವುದಾಗಿ
ಘೋಷಿಸಿದೆ. ಭಾರತವು ಜನಸಂಖ್ಯಾ ಸ್ಪೋಟದ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲವೆಂದೂ, ವಾಸ್ತವವಾಗಿ ಜನಸಂಖ್ಯಾ ಏರಿಕೆಯು ಭಾರತದ ಬಡತನಕ್ಕೆ
ಕಾರಣವಲ್ಲವೆಂದೂ ಹಾಗೂ ಈಗ ಭಾರತದಲ್ಲಿ ಯುವಜನಸಂಖ್ಯೆ ಹೆಚ್ಚಿರುವ ಕಾರಣದಿಂದ ಅದ್ಭುತ ಆರ್ಥಿಕ ಪ್ರಗತಿಯ ಅವಕಾಶವಿದೆಯಂಬುದೂ ಸ್ಪಟಿಕದಷ್ಟೇ ಸ್ಪಷ್ಟ. ಈ ಎಲ್ಲ ಅಂಶಗಳನ್ನು ಭಾರತ ಸರಕಾರದ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆಯ ಭಾಗವಾಗಿರುವ ರಾಷ್ಟೀಯ ಕುಟುಂಬ ಆರೋಗ್ಯ ಸರ್ವೇನ ೩,೪ ಮತ್ತು ೫ನೇ ಸುತ್ತಿನ ಸರ್ವೇಗಳು ಹಾಗೂ ಭಾರತದ ೧೯೯೧, ೨೦೦೧ ಮತ್ತು೨೦೧೧ರ ಜನಸಂಖ್ಯಾ ಸೆನ್ಸಸ್ ವರದಿಗಳು ಸ್ಪಷ್ಟ ಪಡಿಸುತ್ತವೆ.

ಭಾರತದ ಬಡತನ ಮತ್ತು ಜನಸಂಖ್ಯೆ: ೧೯೫೧ರಲ್ಲಿ ಭಾರತದ ಜನಸಂಖ್ಯೆ ೩೬ಕೋಟಿ ಇದ್ದರೆ ಈಗ ೧೪೦ ಕೋಟಿಯಾಗಿದೆ. ಅಂದರೆ ಹೆಚ್ಚೂಕಡಿಮೆ ೪ ಪೆಟ್ಟು ಹೆಚ್ಚಿದೆ. ಆಗ ಭಾರತದ ಜಿಡಿಪಿ ೨.೫೨ ಲಕ್ಷ ಕೋಟಿ. ಈಗ ಭಾರತದ ಜಿಡಿಪಿ ೨೦೦ ಲಕ್ಷ ಕೋಟಿ. ಅಂದರೆ ಭಾರತದ ಸಂಪತ್ತು ಸ್ವಾತಂತ್ರ್ಯಾ ನಂತರದಲ್ಲಿ ೮೩ ಪಟ್ಟು ಹೆಚ್ಚಾಗಿದೆ. ಅಂದರೆ, ಸ್ವಾತಂತ್ರ್ಯಾನಂತರದಲ್ಲಿ ಜನಸಂಖ್ಯೆ ೪ ಪಟ್ಟು ಹೆಚ್ಚಾದರೂ, ಸಂಪತ್ತು ೮೩ ಪಟ್ಟು ಹೆಚ್ಚಿಗೆಯಾಗಿದೆ. ಈ ಸಂಪತ್ತನ್ನು ಸೃಷ್ಟಿಸಿರುವವರು ಈ ದೇಶದ ಕಾರ್ಮಿಕರು, ರೈತರು, ಉದ್ಯೋಗಿಗಳೇ. ಆದರೂ ಅವರು ಬಡವರಾಗಿಯೇ ಉಳಿದಿರಲು ಸಂಪತ್ತಿನ ವಿತರಣೆ ಯಲ್ಲಿ ಬಂಡವಾಳ ಶಾಹಿ ನೀತಿಗಳನ್ನು ಅನುಸರಿಸುತ್ತಿರುವುದು ಕಾರಣವೇ ಹೊರತು ಜನಸಂಖ್ಯೆ ಏರಿಕೆಯಲ್ಲ.

ಬಡತನದಿಂದ ತುಂಬಿದ ಶ್ರೀಮಂತ ದೇಶ ನಮ್ಮದು ಎಂದು ಪಂಡಿತ ಜವಾಹರಲಾಲ್ ನೆಹರೂರವರು ಒಮ್ಮೆ ಹೇಳಿದ್ದರು. ನೆಲ, ಜಲ, ಉತ್ತುಂಗ ಶಿಖರಗಳು, ದೇಶವನ್ನು ಸುತ್ತುವರಿದ ಮೂರು ಸಮುದ್ರಗಳು, ಪ್ರಕೃತಿಯ ಸೌಂದರ್ಯ, ಭೂ- ಜಲ ಸಂಪತ್ತು, ವಿಫಲ ಖನಿಜ ದ್ರವ್ಯಗಳು ಭಾರತದಲ್ಲಿ ಸಮೃದ್ಧವಾಗಿವೆ. ನಮ್ಮ ದೇಶ ಸುಜಲಾಂ ಸುಫಲಾಂ ಸಸ್ಯ ಶಾಮಲಾಂ ಎಂದೆನಿಸಿತು. ಆದರೆ, ಇಂದು ಎಲ್ಲರಿಗೂ ಅವಶ್ಯವಾದ ಆಶ್ರಯಗಳು ಸಾಕಷ್ಟು
ಸಿಗದಂತಾಗಿದೆ. ಬಡತನ ರೇಖೆಯ ಕೆಳಗೆ ಅನೇಕ ಕುಟುಂಬಗಳಿವೆ. ಸಮೃದ್ಧಿಯ ಗಂಗೆ ಇನ್ನೂ ಬಂದಿಲ್ಲ. ಇದಕ್ಕೆ ಮುಖ್ಯ ಕಾರಣ ಬಂಡವಾಳಶಾಹಿ ನೀತಿ.

ಅವರ ಕಪಿ ಮುಷ್ಟಿಯಲ್ಲಿ ದೇಶ ಇರುವುದರಿಂದ ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಹಾಗೆ ನೋಡಿದರೆ, ಎನ್‌ಎ- ಚ್‌ಎಸ್ ವರದಿಗಳು ಹಾಗೂ ಜಗತ್ತಿನಾದ್ಯಂತ ನಡೆಯುತ್ತಿರುವ ಅಧ್ಯಯನಗಳು ಮುಂದಿಡುತ್ತಿರುವ ಅಪಾಯ ಜನಸಂಖ್ಯೆ ಹೆಚ್ಚಳದ್ದಲ್ಲ, ಜನಸಂಖ್ಯೆ ಕಡಿಮೆ ಆಗುತ್ತಿರುವುದು! ಜಗತ್ತಿನ ಅತ್ಯಂತ ಪ್ರತಿಷ್ಠಿತ ವೈಜ್ಞಾನಿಕ ಪತ್ರಿಕೆ ಲ್ಯಾನ್ಸೆಟ್ ಅಧ್ಯಯನದ ಪ್ರಕಾರ ಈಗ ಭಾರತದ
ಜನಸಂಖ್ಯೆ ೧೪೨.೮೬ ಕೋಟಿಯಿದ್ದು, ೨೦೫೦ರ ವೇಳೆಗೆ ೧೬೬.೮ ಕೋಟಿ ತಲುಪಬಹುದೆಂದು ಊಹಿಸಿದ್ದರೂ, ಜನಸಂಖ್ಯೆಯ ವೇಗ ಈಗ ಕುಸಿಯು ತ್ತಿರುವುದರಿಂದ ವಾಸ್ತವದಲ್ಲಿ ೨೦೫೦ರಿಂದ ಭಾರತದ ಜನಸಂಖ್ಯೆ ೧೦೯ ಕೋಟಿಗೆ ಇಳಿಯುತ್ತದೆ.

ಅದಕ್ಕಿಂತ ಗಂಭೀರವಾದ ಸಂಗತಿಯೆಂದರೆ, ಆ ಸಂದರ್ಭದಲ್ಲಿ ಕೆಲಸ ಮಾಡಬಲ್ಲ ಯುವಕರ ಸಂಖ್ಯೆಗಿಂತ ಹಿರಿಯರ, ವಯೋವೃದ್ಧರ ಸಂಖ್ಯೆ ಎರಡು ಪಟ್ಟು ಹೆಚ್ಚುತ್ತದೆ. ಇದು ಆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಈಗಾಗಲೇ ಚೀನಾದಲ್ಲಿ ಈ ಪರಿಸ್ಥಿತಿ ಎದುರಾಗಿದೆ. ಆದ್ದರಿಂದಲೇ ಅಲ್ಲಿ ಒಂದು ಮಕ್ಕಳ ನೀತಿಯನ್ನು ಸಡಿಲಿಸಿ ಮೂರು ಮಕ್ಕಳನ್ನು ಪಡೆಯಲು ಉತ್ತೇಜನ ನೀಡಲಾಗುತ್ತಿದೆ.

ಮುಗಿಸುವ ಮುನ್ನ

On the occasion of Azadi Ka Amrit Mahotsav, let us take a pledge to adopt family planning as a choice for happiness and prosperity ಇದು ಭಾರತ ಸರಕಾರದ ಈ ವರ್ಷದ ಜನಸಂಖ್ಯಾ ದಿನಾಚರಣೆ ಉದ್ದೇಶವಾಗಿದೆ. ಈ ಎಲ್ಲ ವಿಷಯಗಳನ್ನು ಸಾರಾ ಸಾರಾ ವಿಚಾರಿಸಿ, ಸರಕಾರ ಕುಟುಂಬ ಕಲ್ಯಾಣ ನೀತಿ ಬದಲಿಸಲು ಚಿಂತಿಸಬೇಕಿದೆ. ಒಂದೆಡೆ ಜನಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳುತ್ತಾ, ಇನ್ನೊಂದೆಡೆ ಒಟ್ಟಾರೆ ಫಲವಂತಿಕೆ ದರ ಕುಸಿಯುತ್ತಿದೆ ಎಂದು ವರದಿ ಬಿಡುಗಡೆ ಮಾಡಿ, ನಾಡವರಲ್ಲಿ ಗೊಂದಲ ಉಂಟು ಮಾಡುವುದನ್ನು ಬಿಡಬೇಕಿದೆ.

ಬಂಡವಾಳ ಶಾಹಿ ಧೋರಣೆಗೆ ವಿದಾಯ ಹೇಳಬೇಕಿದೆ. ಯುವಶಕ್ತಿಗೆ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ವಯೋವೃದ್ಧರು ಉಂಟು ಮಾಡುವ ಸಮಸ್ಯೆ ಗಳನ್ನು ಬಗೆ ಹರಿಸಲು ಸಕಾರಾತ್ಮಕವಾಗಿ ಯೋಚಿಸಬೇಕಿದೆ. ಅಂಗೈಯಲ್ಲಿ ಅರಮನೆ ತೋರಿಸುವ ಚಂಡಾಲ ಕೆಲಸ ಕೈ ಬಿಟ್ಟು, ವಾಸ್ತವದ ಮೂಸೆಯಲ್ಲಿ ರಚನಾತ್ಮಕ ಕೆಲಸಗಳತ್ತ ದೇಶದ ಹೊಸ ನೀತಿ ನಿಯಮಗಳು ರೂಪಿತಗೊಳ್ಳಬೇಕಿದೆ! ಅಂದಾಗ ದೇಶಕ್ಕೆ ಭವ್ಯ ಭವಿಷ್ಯವಿದೆ!

(ಲೇಖಕರು: ವಿಶ್ರಾಂತ ಜಿಲ್ಲಾ ಶಸ್ತ್ರ ಚಿಕಿತ್ಸಕರು)

Leave a Reply

Your email address will not be published. Required fields are marked *