Wednesday, 18th September 2024

ಬೇಕಿದೆ ಸಹಕಾರಾತ್ಮಕ ಪ್ರೇರಣೆ

ಪರ್ವಕಾಲ

ಅಮಿರ್‌ ಆಶ್‌ ಅರೀ

ನಾಳೆ (ಆಗಸ್ಟ್ ೧೫) ಒಂದಿಡೀ ದೇಶವೇ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಮಿಂದೇಳಲಿದೆ. ಇದು, ಭಾರತೀಯ ಜನಸಾಮಾನ್ಯರ ಬದುಕನ್ನು ಬ್ರಿಟಿಷ್ ಚಕ್ರಾಧಿಪತ್ಯದಿಂದ ನಿರಾಳತೆಯತ್ತ ದಾಟಿಸಲು ಘಟಿಸಿದ ಸಂಗ್ರಾಮಕ್ಕೆ, ತನ್ಮೂಲಕ ದಕ್ಕಿದ ಸ್ವಾತಂತ್ರ್ಯಕ್ಕೆ ಎಪ್ಪತ್ತೇಳು ವರ್ಷ ತುಂಬಿದ್ದರ ಸಂಭ್ರಮ.

೧೮೫೭ರಲ್ಲಿ ಬ್ರಿಟಿಷರ ವಿರುದ್ಧ ದೇಶಪ್ರೇಮದ ಎದೆಯುಬ್ಬಿಸಿ ನಿಂತ ಭಾರತೀಯ ಸೇನಾನಿಗಳಿಂದ ಹಿಡಿದು, ೧೯೪೭ರ ಆಗಸ್ಟ್ ೧೫ರ ಮಧ್ಯರಾತ್ರಿ ದೆಹಲಿಯ ಕೆಂಪುಕೋಟೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸುವವರೆಗೆ ಸ್ವಾತಂತ್ರ್ಯ ಸಮರದ ಕ್ರಾಂತಿಕಹಳೆ ಮೊಳಗಿತು. ಇದರ ಇತಿಹಾಸವು, ತಮ್ಮ ಸಂಪತ್ತುಗಳನ್ನು ಒತ್ತೆಯಿಟ್ಟ, ಕುಟುಂಬವನ್ನು ಕಳೆದುಕೊಂಡ, ಜಾತಿ-ಧರ್ಮಗಳ ಸೀಮೆಯನ್ನು ಮೀರಿ ಹತ್ತು ಹಲವು ತ್ಯಾಗ ಮಾಡಿ ಹೋರಾಡಿದ ಅಗಣಿತ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುತ್ತದೆ. ಇವರೆಲ್ಲರನ್ನೂ ಈಗಿನ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಸ್ಮರಿಸಲೇಬೇಕಾದ
ದಿನವಿದು.

ಪ್ರಜಾಪ್ರಭುತ್ವದ ಕಗ್ಗೊಲೆ, ನಿರುದ್ಯೋಗ, ಬೆಲೆಯೇರಿಕೆ, ಕೋಮುವಾದ, ಭ್ರಷ್ಟಾಚಾರ, ಎಲ್ಲೆ ಮೀರಿದ ಹಸಿವು ಮತ್ತು ಭಯ ಮೊದಲಾದ ತಲ್ಲಣಗಳು ತಾಂಡವವಾಡುತ್ತಿರುವ ವರ್ತಮಾನದ ವಾತಾವರಣದಲ್ಲಿ ಸ್ವಾತಂತ್ರ್ಯ ದಿನದ ಆಚರಣೆಗೆ ವೇದಿಕೆ ಒದಗಿಸಬೇಕಾಗಿ ಬಂದಿರುವುದು ಕಾಲದ ಅನಿವಾರ್ಯತೆ. ಬ್ರಿಟಿಷ್ ಆಡಳಿತದ ಪರಿಣಾಮ ದೇಶವು ಎರಡು ಶತಮಾನಗಳ ಕಾಲ ಧನಾತ್ಮಕ ಶಕ್ತಿಯನ್ನು ಕಳೆದುಕೊಂಡು ದಣಿದುಹೋಯಿತು. ಪ್ರಜೆಗಳ ಬದುಕು ದಾರುಣವಾಗಿಬಿಟ್ಟಿತು. ದಾರಿ ತೋಚದೆ ಕಂಗಾಲಾದ ಭಾರತೀಯರಿಗೆ ಬಿಳಿಯರ ಗುಲಾಮರಾಗಬೇಕಾದ ಪರಿಸ್ಥಿತಿ ಎದುರಾಯಿತು. ಮನುಷ್ಯ ಜೀವನದ ಅವಿಭಾಜ್ಯ ಅಂಗವಾದ ಸ್ವಾತಂತ್ರ್ಯ ಅಥವಾ ಇನ್ನಿತರ ಯಾವುದೇ ಅವಕಾಶಗಳು ಸಿಗಲಿಲ್ಲ.

ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಧ್ವನಿಯಾದವರನ್ನು ಸೆರೆಮನೆಗೆ ಹಾಕಿ ಹಿಂಸಾತ್ಮಕ ಶಿಕ್ಷೆಗಳಿಗೆ ಗುರಿಪಡಿಸಲಾಯಿತು. ಇಂಥವರ ಪಟ್ಟಿ ತಯಾರಿಸುವಾಗ, ನಮ್ಮ ನೆನಪಿನ ಚಾವಡಿಯಲ್ಲಿ ಕಾಣಿಸಿಕೊಳ್ಳುವವರ ಸಂಖ್ಯೆಗಿಂತ ದೊಡ್ಡದಿದೆ ನಮ್ಮ ಇತಿಹಾಸಕ್ಕೆ ದಕ್ಕದೆ ಹೋದ ಹೋರಾಟಗಾರರ ಯಾದಿ. ಅವರದ್ದು ಎಲ್ಲವನ್ನೂ ಕಳೆದುಕೊಂಡ ಹೋರಾಟ, ಕೊನೆಯದಾಗಿ ಉಳಿದಿದ್ದ ಪ್ರಾಣ ಕೂಡ. ಆ ಭಾರತೀಯರು ಕಳೆದುಕೊಂಡಿದ್ದೇ ಹೆಚ್ಚು, ಇದನ್ನು ಎದೆತಟ್ಟಿ ಒಪ್ಪಬೇಕು.

ಬ್ರಿಟಿಷರನ್ನು ಹಣಿಯಲು ಸಂಘಟಿತರಾದ ಭಾರತೀಯರ ಸಾಕಷ್ಟು ಸಶಕ್ತ ಹೋರಾಟಗಳು ಹಲವು ತಿರುವುಗಳನ್ನು ಪಡೆದವು. ಏಳು- ಬೀಳುಗಳು ಕಾಣಬರುತ್ತಿದ್ದರೂ ಬ್ರಿಟಿಷರ ವಿರುದ್ಧದ ಕಿಚ್ಚು ಆರುತ್ತಿರಲಿಲ್ಲ. ಇವೆಲ್ಲದರ ಫಲವಾಗಿ ನಂತರದ ದಿನಗಳಲ್ಲಿ ಹೋರಾಟವು ತೀವ್ರವಾಗತೊಡಗಿದಂತೆ, ಭಾರತದಿಂದ ಸಂಪೂರ್ಣವಾಗಿ ಕಾಲುಕೀಳುವ ಬಗ್ಗೆ ಬ್ರಿಟಿಷರು ಯೋಚಿಸಬೇಕಾಗಿ ಬಂತು. ಇಂದು ಜಗತ್ತಿನ ಅತಿದೊಡ್ಡ ಸ್ವತಂತ್ರ ಮತ್ತು ಪ್ರಜಾಪ್ರಭುತ್ವ
ರಾಷ್ಟ್ರವಾಗಿರುವ ಭಾರತವು ತನ್ನದೇ ನೆಲೆಗಟ್ಟಿನಲ್ಲಿ ನೆಲೆಸಿದೆ. ಜತೆಗೆ, ಮಹತ್ವವಾದ ಕಟ್ಟುಪಾಡನ್ನೂ ಇಟ್ಟುಕೊಂಡಿದೆ. ಅದುವೇ ಭಾರತೀಯ ಸಂವಿಧಾನ.

ಅದರಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಹೋರಾಡುವ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಆಸ್ತಿಯ ಹಕ್ಕು ಇತ್ಯಾದಿಗಳನ್ನು ಒದಗಿಸಲಾಗಿದೆ. ನಾಗರಿಕರ ಅಸಹಾಯಕತೆಗಳನ್ನು ಹೋಗಲಾಡಿಸುವ ಉದ್ದೇಶದಿಂದ ಇಂಥ ಹಲವು ಬಗೆಯ ಸ್ವಾತಂತ್ರ್ಯವನ್ನು ನೀಡಲಾಗಿದೆ. ಇದನ್ನು ಆಡಳಿತ ವ್ಯವಸ್ಥೆಯು ಜನರಿಗೆ ನ್ಯಾಯಯುತವಾಗಿ ನೀಡಿದಾಗ ಮಾತ್ರವೇ ಅವರು ನಿಜಾರ್ಥದಲ್ಲಿ ಸ್ವತಂತ್ರರಾಗುವರು. ಸ್ವಾತಂತ್ರ್ಯವಿದೆ ಎಂದ ಮಾತ್ರಕ್ಕೆ ಪ್ರಜೆಗಳು ತಾವು ಏನನ್ನು ಬೇಕಿದ್ದರೂ ಮಾಡಬಹುದು ಎಂಬ ಗ್ರಹಿಕೆಯಲ್ಲಿ ಕಟ್ಟುಪಾಡುಗಳನ್ನು ಮೆಟ್ಟಿನಿಂತು, ಸಮಾಜಘಾತುಕ ಕೃತ್ಯಗಳಲ್ಲಿ ಪಾಲ್ಗೊಳ್ಳುವುದು, ಸರಕಾರ ಅಥವಾ ಸಂವಿಧಾನದ ಕಟ್ಟುಪಾಡುಗಳನ್ನು ಗಾಳಿಗೆ ತೂರಿ ನಡೆದುಕೊಳ್ಳುವುದು ದೇಶ ದ್ರೋಹವೇ ಸರಿ. ದೇಶದ ವಿಭಿನ್ನ ಸ್ತರದ ಆಳುಗರು ಮತ್ತು ಪ್ರಜೆಗಳು ನಿಗದಿತ ಕಾನೂನುಗಳನ್ನು ಪರಸ್ಪರ ಅನುಸರಿಸಿ
ಪಾಲಿಸಿದರೆ ಮಾತ್ರವೇ, ನಮ್ಮ ಽಮಂತ-ದಿಗ್ಗಜರು ತಂದುಕೊಟ್ಟಿರುವ ಸ್ವಾತಂತ್ರ್ಯದ ಮೌಲ್ಯಗಳನ್ನು ನಾವು ಉಳಿಸಿಕೊಳ್ಳಲು ಸಾಧ್ಯ.

ಸ್ವಾತಂತ್ರ್ಯೋತ್ಸವವು ಪ್ರಜೆಗಳ ಪಾಲಿಗೆ ಚಾರಿತ್ರಿಕ ನೆನಪುಗಳನ್ನು ಹಂಚಿ ಸಂಭ್ರಮಿಸುವ ಒಂದು ನಿರ್ದಿಷ್ಟ ಸಮಯ ಅಥವಾ ದಿನವಾಗಬಾರದು; ಮೌಢ್ಯಗಳು, ಜಾತಿ-ಮತಗಳ ಬಂಧನವನ್ನು ಭೇದಿಸಿ ಬದುಕುವ ಪ್ರಜೆಗೆ ಸ್ವಾತಂತ್ರ್ಯವೆಂಬುದು ನಿರಂತರ ಶ್ರೀರಕ್ಷೆಯಾಗಿ ಒದಗಬೇಕು. ಅಂಥ ವರ್ತಮಾನಕ್ಕೆ ನಾವೆಲ್ಲರೂ ಸಾಕ್ಷಿಯಾಗಬೇಕಿದೆ. ಪ್ರಸಕ್ತ ವಿದ್ಯಮಾನದ ಪ್ರಕಾರ, ಯಾವುದೇ ರಾಷ್ಟ್ರದ ರಕ್ಷಣೆಯು ಅಲ್ಲಿನ ವಿದ್ಯಾವಂತ ಸಮೂಹದ ಮೇಲೆ ಅವಲಂಬಿತವಾಗಿದೆ. ಆಡಳಿತ ಪಕ್ಷದ ಲೋಪದೋಷಗಳ ಬಗ್ಗೆ ಪ್ರಶ್ನಿಸುವ ಪ್ರಜ್ಞಾವಂತಿಕೆ ವಿದ್ಯಾವಂತರದ್ದು. ಆಡಳಿತ ವ್ಯವಸ್ಥೆಯಲ್ಲಿ ಆಳುಗರು ಮತ್ತು ಅಧಿಕಾರಿಗಳಿಗೆ ಅವರದ್ದೇ ಆದ ಅಧಿಕಾರ ಇರುತ್ತದೆಯಾದರೂ, ಜನಸಾಮಾನ್ಯರೇ ಇಲ್ಲಿ ಮುಖ್ಯವಾದ ಪಾತ್ರಧಾರಿಗಳಾಗಿರುತ್ತಾರೆ ಮತ್ತು ನಿರ್ಣಾಯಕ ಶಕ್ತಿಗಳಾಗಿರುತ್ತಾರೆ ಎಂಬುದನ್ನು ಮರೆಯಬಾರದು.

ಭಾರತದ ಭವಿಷ್ಯದ ಬಗ್ಗೆ ಆಲೋಚಿಸುವಾಗ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವರ್ತಮಾನದ ಹೋರಾಟಗಾರರಾಗಿದ್ದಾರೆ. ಬಂದೂಕು, ಫಿರಂಗಿಗಳು ಸೇರಿದಂತೆ ಬ್ರಿಟಿಷರ ಮಾರಕಾಸ್ತ್ರಗಳು ಎದೆ ಸೀಳಿದರೂ, ತರಹೇವಾರಿ ಸಮಸ್ಯೆ-ಸಂಕಷ್ಟಗಳು ಎದುರಾ ದರೂ, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂಕಲ್ಪದಿಂದ ಹಿಂದಡಿಯಿಡದ ಅಂದಿನ ಸೇನಾನಿಗಳು ದೇಶವನ್ನು ಉಳಿಸಲು ಮಾಡಿದ ಪ್ರತಿಜ್ಞೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದಿಂದ ಮತ್ತೊಮ್ಮೆ ಮೊಳಗಬೇಕು. ಇದು ಪ್ರಸಕ್ತ ಕಾಲಘಟ್ಟದ ಅವಶ್ಯಕತೆ ಯಾಗಿದೆ. ಒಂದೊಮ್ಮೆ ಆಳುಗರು ಲಂಗು-ಲಗಾಮಿಲ್ಲದಂತೆ ವರ್ತಿಸುತ್ತಿದ್ದು, ಅವರನ್ನು ಪ್ರಜೆಗಳು ತರಾಟೆಗೆ ತೆಗೆದುಕೊಳ್ಳದೆ ಹೋದರೆ ದೇಶದ ಅವನತಿ ಕಟ್ಟಿಟ್ಟಬುತ್ತಿ.

ಭಾರತವು ಅಪರಾಧ, ಭ್ರಷ್ಟಾಚಾರ, ಹಿಂಸೆ, ನಕ್ಸಲ್‌ವಾದ, ಭಯೋತ್ಪಾದನೆ, ಬಡತನ, ನಿರುದ್ಯೋಗ, ಅನಕ್ಷರತೆಯಂಥ ರೋಗಗಳಿಗೆ ಬಲಿಯಾಗದಿರಲಿ ಮತ್ತು ವಿಜ್ಞಾನ, ತಂತ್ರಜ್ಞಾನ, ಕೃಷಿ, ಶಿಕ್ಷಣ, ಸಾಹಿತ್ಯ, ಕ್ರೀಡೆ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಲಿ ಎಂದು
ಸ್ವಾತಂತ್ರ್ಯೋತ್ಸವದ ಈ ಸಂದರ್ಭದಲ್ಲಿ ಆಶಿಸೋಣ. ದೇಶದ ಪ್ರತಿಯೊಬ್ಬರಿಗೂ ಸಕಾರಾತ್ಮಕ ಮತ್ತು ಸಹಕಾರಾತ್ಮಕ ಪ್ರೇರಣೆ ಸಿಕ್ಕರೆ, ಭಾರತವು ‘ವಿಶ್ವಗುರು’ ಆಗುವ ದಿನಗಳು ದೂರವೇನಿಲ್ಲ. ನಮ್ಮ ಆಳುಗರಲ್ಲಿ, ಈ ಭವ್ಯಭಾರತವನ್ನು ಮತ್ತೊಮ್ಮೆ ಸುಂದರ ಹೂದೋಟವಾಗಿಸುವ, ಮಧುರವಾದ ಮತ್ತು ವಿಶಾಲ ಮನೋಭಾವದ ಚಿಂತನೆಗಳಿರಲಿ.

ಜಾಗತಿಕ ಮಟ್ಟದಲ್ಲಿ ಭಾರತದ ಪತಾಕೆಯನ್ನು ಹಾರಿಸಬೇಕಾದ ಯುವಪೀಳಿಗೆಗೆ ಅವರಿಂದ ಮಹತ್ವವಾದ ಸಂದೇಶಗಳು ದಕ್ಕುವಂತಾಗಲಿ. ಬನ್ನಿ, ನಾವೆಲ್ಲರೂ ಒಂದಾಗೋಣ. ಈ ದೇಶದ ಪ್ರಗತಿಯ ಬಗ್ಗೆ ಜಾಗೃತಿಯನ್ನು ಮೂಡಿಸೋಣ.

(ಲೇಖಕರು ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *