ಅವಲೋಕನ
ವಿಕ್ರಮ ಜೋಶಿ
ಮಾರ್ಚ್, ಏಪ್ರಿಲ್, ಮೇ ತಿಂಗಳ ಬೇಸಗೆಯ ಉರಿಬಿಸಿಲು. ಬೀದಿಯೆಲ್ಲ ಭಣ ಗುಡುತ್ತಿದೆ.
ಓಡಾಡುವ ವಾಹನಗಳಿಲ್ಲ, ನಡೆದಾಡುವ ಮನುಷ್ಯರಿಲ್ಲ, ಕೂಗಿ ಕರೆಯುವ ರಸ್ತೆ ಬದಿಯ ಅಂಗಡಿಯವರಿಲ್ಲ. ಕಣ್ಣಿನ ದೃಷ್ಟಿ ಮುಟ್ಟುವ ತನಕ ಖಾಲಿ ಖಾಲಿಯಾದ ರಸ್ತೆ. ಅಲ್ಲಲ್ಲಿ ಬೀದಿ ನಾಯಿಗಳು ಅಡ್ಡಾಡುತ್ತಿವೆ. ದನಕರುಗಳು ನಿಂತು ಮೇಯುತ್ತಿವೆ. ಇದು ಕರೋನಾ ಮಹಾಮಾರಿಗೆ ಹೆದರಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದ ಸಮಯ. ದೂರದಿಂದ ನಿಂತು ಮಾತನಾಡಲೂ ಜನರಿಗೆ ಹೆದರಿಕೆ. ಚಹಾ, ತಿಂಡಿ ಬಿಡಿ ಬಾಯಾರಿಕೆ ಯಾದರೆ ಕುಡಿಯಲು ನೀರು ಬೇಕು ಅಂದರೆ ಕೊಡುವವರಿಲ್ಲ. ಇಂತಹ ಅತ್ಯಂತ ಪ್ರತಿಕೂಲ ಪರಿಸರದಲ್ಲೂ ಮನೆ ಮನೆಯ ಬಾಗಿಲು ತಟ್ಟಿ ಪಾರ್ಸಲ್ ಮುಟ್ಟಿಸಿದವರು ಅಂಚೆಯ ಸಿಬ್ಬಂದಿ.
ಬಿಬಿಸಿಯು ಒಂದು ಕಡೆ ಹೇಳುತ್ತದೆ World’s largest postal service turns lifesaver.- ಕಾಮರ್ಸ್ ಕಂಪನಿ, ಖಾಸಗಿ ಕೋರಿಯರ್ ಸೇವೆಗಳು ಇಲ್ಲದೇ ಹೋದಾಗ ಜನರಿಗೆ ಅಗತ್ಯವಾದ ಔಷಧ, ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ತಲುಪಿಸಿದ್ದು ಅಂಚೆ ಇಲಾಖೆ.
ವಾಹನಗಳು ಹೋಗಲಾಗದ ಜಾಗಕ್ಕೂ ಹೋಗಿ ಅಲ್ಲಿ ತರಕಾರಿ, ದಿನಸಿಗಳನ್ನು ತಲುಪಿಸಿ ಬಂದವರು ಅಂಚೆ ಕಚೇರಿ ಸಿಬ್ಬಂದಿ. ತಮ್ಮ ಜೀವವನ್ನು ಒತ್ತೆಇಟ್ಟು ದೇಶ ಸೇವೆ ಮಾಡಿದ ಈ ಅಂಚೆ ಇಲಾಖೆ ಸಿಬ್ಬಂದಿ ಗಡಿಯಲ್ಲಿ ದಿನ, ರಾತ್ರಿ ನಮ್ಮ ನೆಲವನ್ನು ಕಾಯುವ ಯೋಧರಿಗಿಂತ ಕಡಿಮೆಯಲ್ಲ. ಖಾಸಗಿ ಕೋರಿಯರ್ ಸೇವೆ ಸಂಸ್ಥೆಗಳು ಬಾಗಿಲು ಜಡಿದು ಮುಚ್ಚಿ ಮನೆಯಲ್ಲಿ ಕೂತಿದ್ದವು. ನಂತರ ತೆರೆದು ಕೆಲಸ ಶುರು ಮಾಡಿದಾಗ ಸೇವೆಯ ಶುಲ್ಕಕ್ಕೆ ಲೆಕ್ಕವೇ ಇರಲಿಲ್ಲ.
ನೂರು ಕಿಮೀ ದೂರಕ್ಕೆ ಒಂದು ಕೇಜಿ ಪಾರ್ಸಲ್ ಕಳಿಸಬೇಕು ಅಂದರೆ ಐನೂರು, ಸಾವಿರ ಕೊಟ್ಟಿದ್ದೂ ಇದೆ. ಆದರೆ ಸಾಧಾರಣ
ಅಂಚೆಯಿರಲಿ, ಸ್ಪೀಡ್ ಪೋಸ್ಟ್ ಇರಲಿ ಅವರದ್ದು ಮೊದಲಿನ ಶುಲ್ಕವೇ ಇತ್ತು. ದೇಶ ಸೇವೆ, ಮಾನವೀಯತೆ ಅಂತ ಭಾವಿಸಿಯೇ ಇವರು ಕೆಲಸ ಮಾಡಿದರು ಅಲ್ಲವೇ. ಅವರಿಗೆ ಸಿಗುವ ಸಂಬಳಕ್ಕೆೆ ಇಲ್ಲದೇ ಇನ್ನೇನು ಪ್ರೇರಣೆ ಇವರಿಗೆ? ಒಂದು ದಿನ ಸೂರ್ಯ ನೆತ್ತಿಗೆ ಬಂದ ಸಮಯ. ನಮ್ಮ ಸೊಸೈಟಿಯ ಮುಂದಿರುವ ಮನೆಗೆ ಮನಿ ಆರ್ಡರ್ ತಂದಿದ್ದಾಳೆ ಅಂಚೆ ಇಲಾಖೆಯ ಮಹಿಳೆ. ಅವಳ ಹತ್ತಿರ ಐಷಾರಾಮಿ ಹವಾನಿಯಂತ್ರಿತ ಕಾರಿಲ್ಲ, ಆ ಬಿಸಿಲಿನಲ್ಲಿ ಸ್ಕೂಟರ್ ಓಡಿಸಿಕೊಂಡು ಬಂದಿದ್ದಾಳೆ. ಅವಳಿಗೂ
ಮಕ್ಕಳಿದ್ದಾರೆ, ಮನೆಯಲ್ಲಿ ಕಾಯುತ್ತಿದ್ದಾರೆ.
ಯಾವಾಗ ಊಟ ಮಾಡಿದಳೋ, ಮನೆಗೆ ಹೇಗೆ ಹೋದಳೋ? ಇಡೀ ದಿನ ಊರೆಲ್ಲ ತಿರುಗಾಡಿ ಮತ್ತೆ ಮನೆಗೆ ಹೋಗಿ ಅಡುಗೆ
ಮಾಡಿ, ಮಕ್ಕಳಿಗೆ ಉಣ್ಣಿಸಿ ಮಲಗಿಸಬೇಕು. ಕರೋನಾ ಎಂಬ ಭ್ರಮೆಯ ಭಯಕ್ಕೆ ಅವಳ ಕರ್ತವ್ಯ ನಿಲ್ಲಲಿಲ್ಲ. ಅವಳ ನೋಡಿ
ನಮ್ಮ ಅಂಚೆ ಇಲಾಖೆ ಮೇಲೆ ಗೌರವ ಹತ್ತು ಪಟ್ಟು ಹೆಚ್ಚಾಯಿತು, ನಿಂತಲ್ಲೇ ಅವಳಿಗೊಂದು ಸಲಾಮ್ ಮಾಡಿದೆ.
ಇನ್ನೊಂದು ಘಟನೆ – ಒಂದು ಮನೆಯಲ್ಲಿ ಮುದುಕರೇ ಇರುತ್ತಿದ್ದರು. ಅವರಿಗೆ ಹೊರಗೆ ಹೋಗಲು ಸಾಧ್ಯವೇ ಇಲ್ಲ, ಮನೆ ಕೆಲಸಕ್ಕೂ ಯಾರೂ ಇಲ್ಲ. ಎಂತಹ ಫಜೀತಿ. ಅಲ್ಲಿಯ ಹತ್ತಿರದ ಪೋಸ್ಟ್ ಮ್ಯಾನ್ ಅವರ ಮನೆಗೆ ದಿನವೂ ಹೋಗಿ ಅಗತ್ಯ ವಸ್ತುಗಳನ್ನು ಕೊಟ್ಟು ಬರುತ್ತಿದ್ದನಂತೆ. ವರ್ಷಗಳಿಂದ ಟಪಾಲು ಮುಟ್ಟಿಸುತ್ತಿರುವ ಅವನಿಗೆ ಇವರ ಪರಿಸ್ಥಿತಿ ಗೊತ್ತಿತ್ತು. ಮನೆ ಯವರೇ ಎಂದುಕೊಂಡು ಸೇವೆ ಮಾಡಿದ.
ಖಾಸಗಿ ಕಂಪನಿಗಳ ಕರ್ಮಚಾರಿಗಳು ಹೀಗೆ ಮಾಡುವರೇ? ಅದೇ ಸಮಯ ದಲ್ಲಿ ಮನೆ ಮನೆಗೆ ಟಪಾಲು ಮುಟ್ಟಿಸುತ್ತಿದ್ದ ಅಂಚೆಯ ಅಕ್ಕ, ಅಜ್ಜಿಯೊಬ್ಬಳಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಸಂಗತಿಯನ್ನು ಮಾತು ಮಾತಿನಲ್ಲಿ ಗೆಳೆಯನೊಬ್ಬ
ಹಂಚಿಕೊಂಡಿದ್ದರು. ಎಷ್ಟೋ ಕಡೆ ಮನೆ ಮಕ್ಕಳಂತೆ ಆಗಾಗ ಬಂದು ಅಗತ್ಯ ವಸ್ತುಗಳನ್ನು ಕೊಟ್ಟು ಹೋದ ಘಟನೆಗಳಿವೆ.
ಸಂದರ್ಭ ಬಳಸಿಕೊಂಡು ಸುಲಿಗೆ ಮಾಡಿದ ಘಟನೆ ಇದ್ದರೂ ಅದು ಬಹಳ ವಿರಳ. ಆದರೆ ಖಾಸಗಿ ಕೊರಿಯರ್‌ಗಳು ಎಷ್ಟೊಂದು ದುಬಾರಿ ಆಗಿದ್ದವು. ನಿಮ್ಮ ಅನುಭವಕ್ಕೆ ಬಂದೇ ಇದೆ. ದುಬಾರಿ ಬಿಡಿ, ಅವರ ಟ್ರ್ಯಾಕಿಂಗ್ ಕೂಡ ಇರಲಿಲ್ಲ.
ಆದರೆ ಭಾರತೀಯ ಅಂಚೆ ಇಲಾಖೆ ಮಾತ್ರ ಹಾಗೆ ಮಾಡಲಿಲ್ಲ, ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿತ್ತು. ತಡವಾದರೂ ಬಂದು ಮುಟ್ಟಿದೆ, ಒಂದೂ ಪಾರ್ಸಲ್ ಮಿಸ್ ಆಗಿಲ್ಲ. ಮೆಸೇಜ್ ಮೇಲೆ ಮೆಸೇಜ್ – ಪಾರ್ಸಲ್ ಕೊಟ್ಟಾಗಿನಿಂದ ಮುಟ್ಟಿಸುವ ತನಕ ಪ್ರತಿಯೊಂದು ಹಂತದಲ್ಲೂ ಮೆಸೇಜ್ ಮೂಲಕ ಅಪ್ಡೇಟ್ ಬರುತ್ತಿತ್ತು. ಅಂಚೆ ಕಚೇರಿಯಿಂದ ಕರೆ ಮಾಡಿದ್ದೂ ಇದೆ. ಎಷ್ಟು
ಅನುಕೂಲಕರ, ಅಷ್ಟೇ ಅತ್ಯಾಧುನಿಕ ನಮ್ಮ ಅಂಚೆ ವ್ಯವಸ್ಥೆ ಎನ್ನುವುದು ಗೊತ್ತೇ ಇರಲಿಲ್ಲ!
ಜನರ ಕಣ್‌ಗಳಲ್ಲಿ ಕೆಲವು ವರ್ಷಗಳಿಂದ ಕಡೆಗಣಿಸಲ್ಪಟ್ಟ ಅಂಚೆ ಮತ್ತೆ ಸಮಾಜದ ನೆರವಿಗೆ ಮುಂದಾಗಿದೆ. ಇನ್ನಾದರೂ
ನಾವು ಅದಕ್ಕೆ ಮತ್ತೆ ಜೀವ ತುಂಬಬೇಕು. ಒಬ್ಬರಲ್ಲ, ಇಬ್ಬರಲ್ಲ ನಾಲ್ಕು ಲಕ್ಷ ಅಂಚೆ ಇಲಾಖೆಯ ಸಿಬ್ಬಂದಿಗಳು ಹಗಲು ರಾತ್ರಿ
ಎನ್ನದೆ, ಕರೋನಾದ ಭಯದ ನಡುವೆಯೂ, ಕೆಲಸ ಮಾಡಿದರು. ಪಿಂಚಣಿಯ ಮೇಲೆ ಅವಲಂಬಿಸಿರುವ ಅದೆಷ್ಟೋ ವಯೋ ವೃದ್ಧರಿದ್ದಾರೆ. ಪೋಸ್ಟ್ ಮ್ಯಾನ್ ಅವರ ಮನೆಗೆ ಹೋಗದೆ ಮುದುಕರನ್ನೇ ಅಂಚೆ ಕಚೇರಿಗೆ ಬರಲು ಹೇಳಿದ್ದರೆ ವಯಸ್ಸಾದವರ ಗತಿ ಏನಾಗುತ್ತಿತ್ತು? ವಿಚಾರ ಮಾಡಿ. ಹಾಗೆ ಮಾಡಲಿಲ್ಲ, ಅಂಚೆ ಸಿಬ್ಬಂದಿ ಮನೆ ಮನೆಗೆ ಹೋದರು.
ಕೆಲವೊಮ್ಮೆ ಇವರು ಬಂದಾಗ ಜನರು ಬಾಗಿಲು ತೆಗೆಯುವುದಕ್ಕೂ ಹೆದರಿದರು, ದೂರದಿಂದ ಸಂಶಯಾಸ್ಪದವಾಗಿ ನೋಡಿದರು. ಆದರೆ ಇವರ ಕರ್ತವ್ಯದಲ್ಲಿ ವ್ಯತ್ಯಾಸ ಕಾಣಲಿಲ್ಲ. ಹಾಗಿದ್ದರೆ ಇವರಿಗೆ ಜೀವದ ಹೆದರಿಕೆ ಇರಲಿಲ್ಲವೇ? ಕರ್ತವ್ಯ ಪ್ರಜ್ಞೆಯೇ ಮಹಾ ಪ್ರಜ್ಞೆ. ಸರಕಾರ ನೇರವಾಗಿ ವರ್ಗಾವಣೆ ಮಾಡಿದ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್) ಹಣವನ್ನು ಎಟಿಎಂಗೆ ಹೋಗಿ ತರಲು ಆಗದ ಕಾಲ. ಆಗ ಅದನ್ನು ಜನರಿಗೆ ತಲುಪಿಸಿದವರು ಯಾರು – ಅಂಚೆ ಇಲಾಖೆ. ಪೋಸ್ಟ್ ಎನ್ನುವುದು ನಮ್ಮ ದೇಶದ ಒಂದು
ಬೃಹತ್ ಹಣಕಾಸು ಸಂಸ್ಥೆ ಎನ್ನುವುದನ್ನೇ ನಾವು ಮರೆತಿದ್ದೇವೆ.
8.8 ಕೋಟಿ ಅಂಚೆ ಕಚೇರಿ ಉಳಿತಾಯ ಖಾತೆಯ ಸುಮಾರು ಒಂದೂವರೆ ಲಕ್ಷ ಕೋಟಿ ರುಪಾಯಿಗಳು ಕೋವಿಡ್ ಸಮಯದಲ್ಲಿ ಜನರ ಕೈ ಸೇರಿವೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನಲ್ಲಿ 4 ಕೋಟಿ ಖಾತೆಗಳಿವೆ, ಅಲ್ಲಿಂದ ಹತ್ತು ಸಾವಿರ ಕೋಟಿ ವ್ಯವಹಾರ ಆಗಿದೆ. ಆಧಾರ್ ಆಧಾರಿತ ಒಂದು ಕೋಟಿ ಖಾತೆಗಳಿವೆ, ಅದರದ್ದು ಎರಡು ಸಾವಿರ ಕೋಟಿ. ಅಂಚೆ ಕಚೇರಿ ನೆರವಿನಿಂದ ಭಾರತದ ಎರಡು ಕೋಟಿ ಜನರಿಗೆ ಹಣದ ನೇರ ವರ್ಗಾವಣೆ ಆಗಿದೆ. ಒಂದು ಲಕ್ಷ ಮನಿ ಆರ್ಡರ್‌ಗಳು ಯಶಸ್ವಿಯಾಗಿ ಅಂಚೆ ಇಲಾಖೆಯು ನಿರ್ವಹಣೆ ಮಾಡಿದೆ. ಇದನ್ನು ಹೇಳುವವ ರಾರು? ಶ್ಲಾಘಿಸುವವರಾರು? ಇಷ್ಟೊಂದು ಹಣಕಾಸಿನ
ವ್ಯವಹಾರವನ್ನು ಆನ್‌ಲೈನ್, ಆಫ್‌ಲೈನ್ ಎರಡೂ ಮಾದರಿಯಲ್ಲಿ ನಿಭಾಯಿಸುವುದೇನು ಸಣ್ಣಪುಟ್ಟ ವಿಷಯವೇ? ಇವರ
ಕಾರ್ಯವೈಖರಿಯ ಸುತ್ತ ಒಂದು ಅಧ್ಯಯನವೇ ನಡೆಯಬೇಕು.
ತೆಲಂಗಾಣದಲ್ಲಿ 56 ಲಕ್ಷ ಜನರಿಗೆ ಆಸಾರಾ ಪಿಂಚಣಿ ವೇತನ ಮುಟ್ಟಿಸಿದರು, ಕರ್ನಾಟಕದಲ್ಲಿ ಎಪ್ಪತ್ತು ಲಕ್ಷ ದಿವ್ಯಾಂಗ, ವೃದ್ಧ ಹಾಗೂ ವಿಧವಾ ವೇತನವನ್ನು ಮನೆ ಮನೆಗೆ ಹೋಗಿ ಕೊಟ್ಟರು. ಅಂಚೆಯ ಅಣ್ಣ, ಅಕ್ಕಂದಿರ ಮೂಲಕ ಗುಜರಾತಿನಲ್ಲಿ ನಾಲ್ಕು ಲಕ್ಷ ವಿಧವೆಯರಿಗೆ ಗಂಗಾ ಸ್ವರೂಪ ಯೋಜನೆಯ ಪಿಂಚಣಿ ಮುಟ್ಟಿತು. ಪೋಸ್ಟ್ ಎಟಿಎಂ ಬಗ್ಗೆ ಗೊತ್ತಿದೆ ಅಲ್ಲವೇ? ಲಾಕ್ ಡೌನ್ ಸಮಯದಲ್ಲಿ ಪೋಸ್ಟ್ ಎಟಿಎಂ ಮೂಲಕ ಎರಡು ಲಕ್ಷಕ್ಕೂ ಹೆಚ್ಚು ಜನ ನಗದನ್ನು ಪಡೆದರು. ಇಷ್ಟೇ ಅಲ್ಲ, ವಾಹನ ಸಂಚಾರ ಇಲ್ಲದ ಕಡೆ ಮೊಬೈಲ್ ಪೋಸ್ಟ್ ಆಫೀಸ್ ಶುರುಮಾಡಿದರು. ಗುಡ್ಡಗಾಡು ಪ್ರದೇಶದಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್
ಪೋಸ್ಟ್ ಆಫೀಸ್ ಕೆಲಸ ಮಾಡಿ ಜನರಿಗೆ ಬೇಕಾದ ಹಣಕಾಸಿನ ನೆರವು ನೀಡಿತು. ಇದನ್ನು ಜನರು ಮರೆಯಲು ಸಾಧ್ಯವೇ?
ಭಾರತೀಯ ಅಂಚೆಯನ್ನು ಒಂದು ಸಂಪೂರ್ಣ ಹಣಕಾಸು ಸಂಸ್ಥೆಯಾಗಿ ಮಾಡುವತ್ತ ಸರಕಾರ ಯೋಚಿಸಬೇಕಿದೆ.
ಈಗ ಅಂಚೆಯ ಮೂಲ ಸೇವೆಗೆ ಬರೋಣ. Amid Coronavirus Lockdown, India Post Still Delivers – Because Nobody Else Can ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತು. ಜಗತ್ತೇ ನಿಂತಿರುವಾಗ ಐದು ಸಾವಿರ ಟನ್‌ಗಳಷ್ಟು ಕಾಗದ ಪತ್ರಗಳನ್ನು ಭಾರತದ ಅಂಚೆ ಮನೆ ದೇಶದ ಮನೆ ಮನೆಗೆ ತಲುಪಿಸಿದೆ. ಆ ಸಂದರ್ಭದಲ್ಲಿ ದಿನಸಿ ತಲುಪಿಸುವುದು ಸರಕಾರಕ್ಕೆ ಹಾಗೂ ಇತರ ಸಂಘ ಸಂಸ್ಥೆಗಳಿಗೆ ಅತಿ ಕಷ್ಟದ ಕೆಲಸವಾಗಿತ್ತು. ಹೊರಗೆ ಹೋಗುವುದೇ ಹೆದರಿಕೆಯ ವಿಷಯ ಅಂತಹುದರಲ್ಲಿ ನಮ್ಮ ದೇಶದ ಒಂದು ವರೆ ಲಕ್ಷ ಪೋಸ್ಟ್ ಆಫೀಸ್‌ಗಳು ಒಟ್ಟಾಗಿ ನಾಡು, ಕಾಡು, ಗುಡ್ಡ, ಬೆಟ್ಟ, ಪೇಟೆ, ಹಳ್ಳಿ, ಹೊಲ, ಗದ್ದೆ, ದೂರ, ಹತ್ತಿರ, ನೆಲ, ಜಲ ಎನ್ನದೆ ದೇಶದ ಮೂಲೆ ಮೂಲೆಗೆ ದಿನಸಿ ತಲುಪಿಸುವ ಕೆಲಸ ಮಾಡಿದವು ಎಂಬುದನ್ನು ಕೇಳಲು ನಮಗೆ ಹೆಮ್ಮೆ ಅಲ್ಲವೆ? ದೇಶದ ಇಂಚು ಇಂಚನ್ನೂ ಬಿಡಲಿಲ್ಲ ಭಾರತದ ಅಂಚೆ. ಸಾಮಾನ್ಯರಿಗೂ ಉಡಾನ್ ಸೇವೆಯ ಮಹತ್ವ ಗೊತ್ತಾಗಿದ್ದು ಇದೇ ಮೊದಲ ಸಲ. ಸಣ್ಣ ಸಣ್ಣ ಶಹರವನ್ನೂ ವಾಯು ಮಾರ್ಗದ ಮೂಲಕ ಜೋಡಿಸುವುದೇ ಉಡಾನ್ ಯೋಜನೆಯ ಉದ್ದೇಶ ವಾಗಿತ್ತು. ಇದನ್ನು ಬಳಸಿಕೊಂಡಾಗ ದೇಶದ ಉದ್ದಗಲಕ್ಕೂ ಸಂಪರ್ಕ ಬೆಳೆಯಲು ಅನುಕೂಲವಾಯಿತು.
ವಿಮಾನದ ಮೂಲಕ ಬರುವ ಪಿಪಿಇ ಕಿಟ್, ವೆಂಟಿಲೇಟರ್, ಟೆಸ್ಟ್ ಕಿಟ್, ಮಾಸ್ಕ್, ಸೆನಿಟೈಸರ್ ಹಾಗೂ ಇತರೆ ಮೆಡಿಕಲ್ ಸಾಮಗ್ರಿಗಳನ್ನು ಅಗತ್ಯವಿರುವ ಕಡೆ ಸರಬರಾಜು ಮಾಡುವ ಕೆಲಸ ಹೊತ್ತಿತು ಅಂಚೆ ಕಾರ್ಯಾಲಯ. ಖಾಸಗಿ ಕಂಪಗಳು ನಿಷ್ಕ್ರಿಯವಾಗಿದ್ದ ಕಾರಣ ಕೋಟ್ಯಂತರ ಹಿರಿಯರು ಪೋಸ್ಟ್ ಮೂಲಕ ಜೀವನಾವಶ್ಯಕ ಔಷಧಿಯನ್ನು ತರಿಸಿಕೊಂಡರು. ಅತ್ಯಂತ ಜಾಗ್ರತೆಯಿಂದ ಅವರೆಲ್ಲರಿಗೂ ತಲುಪಿಸಿದ್ದು ಪೋಸ್ಟ್ ಮ್ಯಾನ್ ಆ್ಯಂಡ್ ವುಮನ್!
ವಾರಗಟ್ಟಲೆ ರೈಲ್ವೆ ಹಾಗೂ ವಿಮಾನ ಎರಡೂ ಮಾರ್ಗಗಳು ನಿಶ್ಚಲವಾಗಿರುವಾಗ ಅಂಚೆ ಇಲಾಖೆ ಏನು ಮಾಡೀತು? ನಿಮಗೆ ಆಶ್ಚರ್ಯ ಆಗಬಹುದು. ನಮ್ಮ ಅಂಚೆ ಇಲಾಖೆ ನ್ಯಾಷನಲ್ ರೋಡ್ ಟ್ರಾನ್ಸ್’ಪೋರ್ಟ್ ನೆಟ್ವರ್ಕ್ ಮೂಲಕ ದೇಶದ ಎಪ್ಪತ್ತೈದು
ಶಹರಗಳನ್ನು ಜೋಡಿಸಿತು. ರೈಲ್ವೆ ಇಲ್ಲ, ವಿಮಾನವಿಲ್ಲ ಆದರೂ ನಮಗೆ ಅತ್ಯವಶ್ಯಕ ವಸ್ತುಗಳು ಲಾಕ್ ಡೌನ್ ಸಮಯದಲ್ಲೂ ಸಿಕ್ಕಿತು. ಯಾಕೆ ಎನ್ನುವುದಕ್ಕೆ ಉತ್ತರ ಇಲ್ಲಿದೆ.
ಅಷ್ಟೇ ಅಲ್ಲ ರಸ್ತೆಯ ಮೂಲಕ ದೇಶದಾದ್ಯಂತ ಎರಡು ಸಾವಿರ ಟನ್‌ಗಳಷ್ಟು ಜೀವ ಉಳಿಸಲು ಬೇಕಾದ ಎಮರ್ಜೆನ್ಸಿ ಮೆಡಿಕಲ್ ಪ್ರಾಡಕ್ಟ್‌ಗಳನ್ನು ಸಣ್ಣ ಸಣ್ಣ ಶಹರಕ್ಕೂ ಸರಬರಾಜು ಮಾಡಿದರು. ಪಿಪಿಇ, ವೆಂಟಿಲೇಟರ್, ಸ್ಯಾನಿಟೈಸರ್ ಇವೆಲ್ಲ ಅಷ್ಟು ಬೇಗ ಇಷ್ಟು ದೊಡ್ಡ ದೇಶದಾದ್ಯಂತ ತಲುಪಿದ್ದು ಹೀಗೆ. ದೇಶದಲ್ಲಿ ತಯಾರಾದ 200ಕ್ಕೂ ಹೆಚ್ಚು ಹೊಸ ಕರೋನಾ ಟೆಸ್ಟ್ ಕೇಂದ್ರಕ್ಕೆ ಟೆಸ್ಟ್ ಕಿಟ್ ಕಳುಹಿಸುವುದು ಸವಾಲಾಗಿತ್ತು. ಕೇಂದ್ರ ಆರೋಗ್ಯ ಇಲಾಖೆ ಮೋರೆ ಹೋಗಿದ್ದು ಅಂಚೆ ಇಲಾಖೆಯ ಹತ್ತಿರ. ಅಂಚೆ
ಬಾಂಧವರು ಅದನ್ನು ಸ್ವೀಕರಿಸಿ ಯಶಸ್ವಿಯಾಗಿ ನಿರ್ವಹಿಸಿದರು.
ಹಣಕಾಸು, ಕಾಗದ ಪತ್ರ, ಸಣ್ಣ ಪುಟ್ಟ ಪಾರ್ಸಲ್ ಇಷ್ಟಕ್ಕೇ ಇವರ ಸೇವೆ ಮುಗಿಯಲಿಲ್ಲ. ರೈತರು ಬೆಳೆದ ಹಣ್ಣು ಹಂಪಲು
ಹಾಳಾಗಬಾರದೆಂಬ ಕಾರಣಕ್ಕೆ ರಾಜ್ಯ ತೋಟಗಾರಿಕಾ ಇಲಾಖೆಯ ಜೊತೆಗೊಡಿ ಹಣ್ಣು ಹಂಪಲುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಿದರು. ಬಿಹಾರದಲ್ಲಿ ಹತ್ತು ಸಾವಿರ ಕೇಜಿ ಲೀಚಿ, ನಮ್ಮ ಬೆಂಗಳೂರಿನಲ್ಲಿ ಸುಮಾರು ಒಂದು ಲಕ್ಷ ಕೇಜಿ ಮಾವಿನ ಹಣ್ಣಿನ ಸಾಗಾಣಿಕೆ ಇದಕ್ಕೆ ಒಂದು ಸಣ್ಣ ಉದಾಹರಣೆ. ಇಂಡಿಯಾ ಪೋಸ್ಟ್ ಕಿಸಾನ್ ರಥ್ ಎನ್ನುವ ಒಂದು ಯೋಜನೆ ಇದೆ. ಇದರ ಬಗ್ಗೆ ನಮಗೆ ಗೊತ್ತಿರಲಿಕ್ಕಿಲ್ಲ. ಇದರ ಮುಖಾಂತರ ಪ್ರಸಿದ್ಧ ರತ್ನಗಿರಿ ಆಪೂಸ್ ಮಾವಿನಹಣ್ಣನ್ನು ಮಹಾರಾಷ್ಟ್ರದ ಎಲ್ಲೆಡೆ ಕಳುಹಿಸಲಾಯಿತು. ಇನ್ನು ವಲಸೆ ಕಾರ್ಮಿಕರ ನೆರವಿಗೂ ಮುಂದಾಗಿದ್ದು ಪೋಸ್ಟ್.
ಇದನ್ನೆಲ್ಲಾ ನೋಡಿದಾಗ ಅಂಚೆ ತಂಡದ ಹತ್ತಿರ ಇರಬಲ್ಲ ಆಡಳಿತದ ಚಾಕಚಕ್ಯತೆಯನ್ನು ಕಲ್ಪಿಸಿಕೊಳ್ಳಿ. ಹೇಗೆ ಒಂದು ‘ಸರಕಾರಿ’ ಇಲಾಖೆ ಬೇರೆ ಬೇರೆ ಇಲಾಖೆಗಳೊಂದಿಗೆ ಜಂಟಿಯಾಗಿ ಕಾರ್ಯ ನಿರ್ವಹಿಸಿತು ಎನ್ನುವುದೇ ಒಂದು ಅಧ್ಯಯನದ ವಿಷಯ. ಅದ್ಯಾವ ಅಂತಾರಾಷ್ಟ್ರೀಯ ಕಂಪನಿ ಸಮಾಜದಲ್ಲಿ ಇಷ್ಟೊಂದು ವೈವಿಧ್ಯಮಯ ಪಾತ್ರಗಳನ್ನು ವಹಿಸಬಲ್ಲದು. ಅಂಚೆ ಇಲಾಖೆಯ ಈ ಸಾಧನೆಯನ್ನು ಗಮನಿಸಿ ಇಂಗ್ಲೆಂಡಿನ ಪ್ರಸಿದ್ಧ ವಿಶ್ವವಿದ್ಯಾಲಯದ ಪ್ರೊಫೆಸರ್ ಏನು ಹೇಳುತ್ತಾರೆ
ಗೊತ್ತಾ? Call them unsung heroes or by any other superlatives, the fact is, it is the working class – the invisible masses & working without pomp and show, amidst danger lurking in corners, sparks the hope that humanism is not dead. ನಿಜ, ನಮ್ಮಲ್ಲಿ ಏನೇ ಅವಗಡ ಸಂಭವಿಸಿದಾಗ ಪೋಸ್ಟ್ ಮಾತ್ರ ನಿಲ್ಲುವುದಿಲ್ಲ.
ಪ್ರವಾಹ, ಅತಿವೃಷ್ಟಿ, ಭೂಕಂಪ ಏನೇ ಆದರೂ ಅಂಚೆ ಇಲಾಖೆಯ ಕೆಲಸ ನಿರಂತರ. ಈ ವರ್ಷ ನೊಬೆಲ್ ಪುರಸ್ಕಾರ ಕರೋನಾ ಯೋಧರಿಗೆ ಸಿಗಬೇಕು. ಅವರಲ್ಲಿ ಭಾರತೀಯ ಅಂಚೆ ಇಲಾಖೆಯ ಪ್ರತಿಯೊಬ್ಬ ವ್ಯಕ್ತಿಯೂ ಆ ನೊಬೆಲ್ ಪ್ರಶಸ್ತಿಗೆ ಪಾತ್ರ.
ಇನ್ನೊಂದು ವಿಷಯ ಗೊತ್ತಾ? ಇಷ್ಟೆಲ್ಲ ಸೇವೆ ಮಾಡುವುದರ ಜೊತೆಗೆ ಭಾರತೀಯ ಅಂಚೆ ಇಲಾಖೆಯವರು, ಆರು ಲಕ್ಷ
ಆಹಾರದ ಪೊಟ್ಟಣವನ್ನು ಹಂಚಿದ್ದಾರೆ, ಅದಕ್ಕೂ ಸಾಲದು ಎನ್ನುವಂತೆ ಕೊನೆಗೆ 42 ಕೋಟಿ ಸಹಾಯಧನವನ್ನು ಪಿಎಂ ಕೇರ್ ನಿಧಿಗೆ ಕೊಟ್ಟಿದ್ದಾರೆ. ಇವರು ಸಿಕ್ಕಾಗ ನಿಂತು ಕೈಮುಗಿದು ಗೌರವ ಸೂಚಿಸಲು ಮರೆಯದರಿ.