ಅಭಿಮತ
ಗಣೇಶ್ ಭಟ್, ವಾರಣಾಸಿ
ಕೆಲವು ದಶಕಗಳ ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ಇರುವ ಬಡತನವು ಏನೇನೂ ಅಲ್ಲ. ಇಂದಿನ ಬಹಳಷ್ಟು ಮಕ್ಕಳಿಗೆ ನಿಜವಾದ ಬಡತನದ ಕಷ್ಟ ಏನೆಂದೂ ಗೊತ್ತಿರಲಿಕ್ಕಿಲ್ಲ. ಇಂದು ದುಡಿಯುವ ಸದಸ್ಯನ ಅನಾರೋಗ್ಯ ಅಥವಾ ಸಾವು, ಕುಡಿತ ಮೊದಲಾದ ಕಾರಣ ಗಳಿಂದ ಮಾತ್ರ ಜನರಲ್ಲಿ ಬಡತನ ಉಂಟಾಗಬಹುದಷ್ಟೇ ವಿನಃ ದುಡಿಯುವ ಮನಸು ಇರುವ ಜನರಿಗೆ ದುಡಿಯಲು ಕೆಲಸ ಇಲ್ಲ ಎನ್ನುವ ಸ್ಥಿತಿ ಇಂದಿಲ್ಲ.
ಒಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತನ್ನ ಭಾಷಣದಲ್ಲಿ ಬಡತನವು ಒಂದು ಮಾನಸಿಕ ಸ್ಥಿತಿಗತಿಯಾಗಿದೆ ಎಂದು ಹೇಳಿದುದು ಭಾರೀ ದೊಡ್ಡ ವಿವಾದವಾಗಿತ್ತು. ಹುಟ್ಟುವಾಗ ಬಾಯಿಯಲ್ಲಿ ಚಿನ್ನದ ಚಮಚವನ್ನಿಟ್ಟುಕೊಂಡೇ ಭೂಮಿಗೆ ಬಂದಿರುವ ರಾಜಕೀಯ ನಾಯಕರಿಗೆ ಬಡತನ
ಎನ್ನುವುದು ಅರ್ಥವಾಗುವ ವಿಷಯವೇ ಅಲ್ಲ ಬಿಡಿ. ರಾಜಕೀಯ ನಾಯಕರಿಗೆ ಬಡತನ ನಿವಾರಣೆ ಎನ್ನುವುದು ಜನರನ್ನು ಮಂಕುಗೊಳಿಸುವ ಒಂದು ಗಿಮಿಕ್ ಆಗಿದೆ. ಚುನಾವಣಾ ಸಂದರ್ಭಗಳಲ್ಲಿ ರಾಜಕೀಯ ನಾಯಕರು ಬಡವರ ಉದ್ಧಾರದ ಬಗ್ಗೆ ಭಾಷಣ ಬಿಗಿಯುವುದು, ಬಡವರ ಗುಡಿಸಲಿಗೆ ಭೇಟಿ
ನೀಡುವುದು ಸರ್ವೇ ಸಾಮಾನ್ಯವಾದ ವಿಷಯ. ಇಂದಿರಾ ಗಾಂಧಿಯವರ ಕಾಲದದಿಂದಲೂ ‘ಗರೀಬೀ ಹಠಾವೋ’(ಬಡತನವನ್ನು ತೊಲಗಿಸಿ) ಎನ್ನುವುದು ಪ್ರಮುಖ ಘೋಷಣೆಯಾಗಿತ್ತು.
ಎಂಭತ್ತರ ದಶಕದಲ್ಲಿ ನಾನು ಕೇರಳದ ಕಾಸರಗೋಡಿನಲ್ಲಿ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ನನ್ನ ತರಗತಿಯ ಬಹಳಷ್ಟು ಮಕ್ಕಳು ಶಾಲೆಗೆ ಅರೆಹೊಟ್ಟೆಯ ಬರುತ್ತಿದ್ದರು. ಅವರಿಗೆ ಎಷ್ಟೇ ಹಸಿವಾಗುತ್ತಿದ್ದರೂ ಮನೆಯಲ್ಲಿ ಅವರಿಗೆ ಬೆಳಗ್ಗೆ ಒಂದು ದೋಸೆ ಮತ್ತು ರಾತ್ರೆ ಒಂದು ಸೌಟು ಅನ್ನ ಮಾತ್ರ ಸಿಗುತ್ತಿತ್ತು. ರೇಶನ್ನಲ್ಲಿ ಸಿಗುತ್ತಿದ್ದ ದವಸ ಧಾನ್ಯಗಳನ್ನೇ ನಂಬಿ ಬದುಕುತ್ತಿದ್ದ ಜನರಿಗೆ ಇದಕ್ಕಿಂತ ಹೆಚ್ಚು ಆಹಾರವನ್ನು ಒದಗಿಸುವ
ಚೈತನ್ಯ ಇರಲಿಲ್ಲ. ಮಕ್ಕಳಿಗೆ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನಕ್ಕೆ ಗೋಧಿ ಕಡಿಯಿಂದ ಮಾಡಿದ ಉಪ್ಪಿಟ್ಟು ಸಿಗುತ್ತಿತ್ತು. ಅಮೆರಿಕವು ಭಾರತದ ಶಾಲೆಗಳಿಗೆ ಗೋಧಿ ಕಡಿ ಹಾಗೂ ಅಡುಗೆ ಎಣ್ಣೆಯನ್ನು ಪೂರೈಸುತ್ತಿತ್ತು.
ಇದರಿಂದಾಗಿ ಮಕ್ಕಳಿಗೆ ಒಂದು ಹೊತ್ತಾದರೂ ಹೊಟ್ಟೆ ತುಂಬಾ ಆಹಾರ ದೊರಕುತ್ತಿತ್ತು. ೨೦೦೨-೦೩ ನೇ ಇಸವಿಯಲ್ಲಿ ಕರ್ನಾಟಕ ಸರಕಾರವು ಶಾಲೆಗಳಲ್ಲಿ ಬಿಸಿಯೂಟವನ್ನು ಆರಂಭಿಸಿದಾಗ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಪ್ರಮಾಣ ಹೆಚ್ಚಾಯಿತು. ಮಧ್ಯಾಹ್ನದ ಊಟದ ಆಕರ್ಷಣೆ ಮಕ್ಕಳನ್ನು ಶಾಲೆಯೆಡೆಗೆ ಸೆಳೆದಿತ್ತು ಎಂದರೆ, ಅವರು ತಮ್ಮ ಮನೆಗಳಲ್ಲಿಯಾವ ಪ್ರಮಾಣದಲ್ಲಿ ಆಹಾರದ ಅಭಾವವನ್ನು ಎದುರಿಸುತ್ತಿದ್ದಿರಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ೬೦ ರ ದಶಕದ ಬಡತನದ ಕಥೆಗಳನ್ನು ನನ್ನ ಅಮ್ಮ ಹೇಳುತ್ತಿರುತ್ತಾರೆ. ನಮ್ಮ ತಾತನ (ತಾಯಿಯ ತಂದೆ ಮನೆ) ಮನೆಯ ಹತ್ತಿರ ಒಂದು ಮುಸ್ಲಿಂ ಕುಟುಂಬ ಇತ್ತು. ಕುಟುಂಬದ ಯಜಮಾನನಿಗೆ ಯಾವುದೋ ಖಾಯಿಲೆಯಿಂದಾಗಿ ಕೆಲಸಕ್ಕೆ ಹೋಗಲು ಸಾಧ್ಯವಾಗು ತ್ತಿರಲಿಲ್ಲವಂತೆ.
ಮನೆತುಂಬಾ ಸಣ್ಣ ಸಣ್ಣ ಮಕ್ಕಳು. ಹಿರಿ ಮಗ ಪೋಲಿಯೋ ಪೀಡಿತನಾಗಿ ವಿಕಲಚೇತನನಾಗಿದ್ದ. ದೇಶದಲ್ಲಿ ಬರಗಾಲ ಬಂದು ಆಹಾರ ಧಾನ್ಯಗಳು ಮಾರುಕಟ್ಟೆಯಲ್ಲಿ ಸಿಗುತ್ತಿರಲಿಲ್ಲವಂತೆ. ಸರಕಾರವು ಕೊಡುತ್ತಿದ್ದ ಅಲ್ಪ ಸ್ವಲ್ಪ ರೇಶನ್ ಅಕ್ಕಿ ಹಾಗೂ ಗೋದಿ ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಏನಕ್ಕೂ ಸಾಲದೆ ಇಡೀ ಕುಟುಂಬ ಆಹಾರಕ್ಕಾಗಿ ಪರಿತಪಿಸುತ್ತಿತ್ತು. ಆ ಮಕ್ಕಳ ತಾಯಿ ಪ್ರತಿನಿತ್ಯ ಮಧ್ಯಾಹ್ನ ನಮ್ಮ ತಾತನ ಮನೆಗೆ ಬರುತ್ತಿದ್ದಳಂತೆ. ನಮ್ಮ ಅಜ್ಜಿ ಒಂದು ಪಾತ್ರೆಯಲ್ಲಿ ಅನ್ನ, ಗಂಜಿ ತಿಳಿ, ಮಜ್ಜಿಗೆ ಹಾಗೂ ಸಾಂಬಾರನ್ನು ಸೇರಿಸಿ ಕೊಡುತ್ತಿದ್ದರಂತೆ. ಆ ಕುಟುಂಬವು ಹಲವು
ತಿಂಗಳುಗಳ ಕಾಲ ನಮ್ಮ ತಾತನ ಮನೆಯಿಂದ ಸಿಗುತ್ತಿದ್ದ ಈ ಆಹಾರವನ್ನು ಸೇವಿಸಿಯೇ ಜೀವ ಉಳಿಸಿಕೊಂಡಿತ್ತು. ಈ ಕುಟುಂಬದ ವಿಕಲಚೇತನ ಮಗ ಮುಂದೆ ಕೊಲ್ಲಿ ದೇಶಕ್ಕೆ ತೆರಳಿ ಕೈತುಂಬಾ ಸಂಪಾದನೆ ಮಾಡಿ ಆ ಊರಿಗೇ ಅತೀ ದೊಡ್ಡ ಶ್ರೀಮಂತನಾದ ಎನ್ನುವುದು ಬೇರೆ ಮಾತು.
ನಮ್ಮ ಊರಿನ ಹಿರಿಯರನ್ನು ಮಾತನಾಡಿಸಿದಾಗ ಅವರಲ್ಲಿ ತುಂಬಾ ಜನರು ತಮ್ಮ ಬಾಲ್ಯಕಾಲ ಹಾಗೂ ಯೌವನ ಕಾಲದಲ್ಲಿ ಅನುಭವಿಸಿದ್ದ ಬಡತನದ ಕಷ್ಟಗಳ ಕುರಿತು ಹೇಳುತ್ತಾರೆ. ಬಹಳಷ್ಟು ಜನರು ಅಕ್ಕಿಯ ತೀವ್ರ ಕೊರತೆಯನ್ನು ಎದುರಿಸುತ್ತಿದ್ದ ಸಂದರ್ಭದಲ್ಲಿ ಮಳೆಗಾಲವಿಡೀ ಹಲಸಿನಕಾಯಿ ಹಾಗೂ ಹಲಸಿನ ಹಣ್ಣಿನಿಂದ ಮಾಡಿದ ಆಹಾರವಸ್ತುಗಳು,ಬೇಯಿಸಿದ ಹಲಸಿನ ಬೀಜ ಮೊದಲಾದವುಗಳನ್ನು ತಿಂದೇ ಹೊಟ್ಟೆ ಹೊರೆಯುತ್ತಿದ್ದರಂತೆ. ನಮ್ಮ ಪಕ್ಕದ ಮನೆಯ ಹಿರಿಯರು ಅವರ ಬಾಲ್ಯದಲ್ಲಿ ಮನೆಯಂಗಳದಲ್ಲಿದ್ದ ಹಲಸಿನಕಾಯೊಂದರ ಕಳ್ಳತನದ ಪ್ರಕರಣವನ್ನು ಹೇಳಿದ್ದರು. ಅವರ ಮನೆಯಂಗಳದಲ್ಲಿ ನೆಟ್ಟಿದ್ದ ಹಲಸಿನ ಗಿಡವೊಂದು ಮರವಾಗಿ ಮೊದಲ ಬಾರಿಗೆ ಹಲಸಿನ ಕಾಯಿಯನ್ನು ಬಿಟ್ಟಿತ್ತು.
ಹೊಸಫಲದ ರುಚಿ ಹೇಗಿರಬಹುದೆಂಬ ಕುತೂಹಲವೂ ಮನೆಯವರ ಇತ್ತು. ಬಲಿತ ಕಾಯಿಯನ್ನು ಕೊಯ್ಯಲು ಇನ್ನೇನು ಎರಡು ದಿವಸಗಳಿವೆ ಎಂದಿರುವಾಗ ಒಂದು ದಿನ ಬೆಳಗೆದ್ದು ನೋಡುವಾಗ ಮರದಲ್ಲಿದ್ದ ಹೊಸಫಲ ಕಾಣೆಯಾಗಿತ್ತು. ಯಾರೋ ಕದ್ದು ಹೊತ್ತೊಯ್ದಿದ್ದರು. ಹಲಸಿನ
ಕಾಯಿಯನ್ನು ಕದ್ದವರು ಇಂಥವರೇ ಎಂಬುದು ಮನೆಯವರಿಗೆ ಗೊತ್ತಾದರೂ, ಕದ್ದವರು ಉಣ್ಣಲು ಅನ್ನವಿಲ್ಲದೇ, ಹಸಿವು ತಡೆಯಲಾಗದೇ ಕದ್ದದ್ದು ಎಂದು ತಿಳಿದಾಗ ಸುಮ್ಮನಾದರಂತೆ. ಕನ್ನಡದ ಖ್ಯಾತ ಕಾದಂಬರಿಕಾರರಾದ ಡಾ.ಎಸ್.ಎಲ್.ಭೈರಪ್ಪ ಅವರು ತಮ್ಮ ಆತ್ಮಕಥೆ ಭಿತ್ತಿಯಲ್ಲಿ ತಾವು ಬಾಲ್ಯಕಾಲ ಹಾಗೂ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದ ಸಂದರ್ಭಗಳಲ್ಲಿ ಅನುಭವಿಸಿದ ಬಡತನದ ಭೀಕರತೆಯ ಪ್ರಕರಣಗಳನ್ನು ವಿವರಿಸಿದ್ದಾರೆ.
೧೫ ವರ್ಷದ ಭೈರಪ್ಪ ಚೆನ್ನರಾಯಪಟ್ಟಣದ ಟಾಕೀಸ್ ಒಂದರಲ್ಲಿ ಗೇಟ್ ಕೀಪರ್ ಕೆಲಸ ಮಾಡುತ್ತಾ ಹೈಸ್ಕೂಲ್ ಓದುತ್ತಿದ್ದರು. ಆ ಸಂದರ್ಭದಲ್ಲಿ ಊರಿನಲ್ಲಿ ಅಜ್ಜಿ ಜೊತೆಗಿದ್ದ ಅವರ ೫ ವರ್ಷ ವಯಸ್ಸಿನ ತಮ್ಮ ಯಾವುದೋ ಖಾಯಿಲೆಯಿಂದಾಗಿ ಸಾವಿಗೀಡಾಗುತ್ತಾನೆ. ವಿಷಯ ತಿಳಿದ ಭೈರಪ್ಪ ಬಾಡಿಗೆ ಸೈಕಲಿನಲ್ಲಿ ಊರಿಗೆ ಬರುತ್ತಾರೆ. ಮನೆಯಲ್ಲಿ ಅಜ್ಜಿ ಒಬ್ಬರೇ ತಮ್ಮನ ಶವದ ಮುಂದೆ ಕೂತಿರುತ್ತಾರೆ. ತಮ್ಮನ ಶವ ಸಂಸ್ಕಾರವನ್ನು ಮಾಡಿದ
ನಂತರ ಉಣ್ಣಲು ಯಾವುದೇ ಆಹಾರ ಧಾನ್ಯ ಮನೆಯಲ್ಲಿರುವುದಿಲ್ಲ. ಅಜ್ಜಿಯ ಸೂಚನೆಯಂತೆ ಎದುರು ಮನೆಯಲ್ಲಿರುವ ದೇವರಾಯನವರ ಮನೆಯಿಂದ ಜೋಳದ ಹಿಟ್ಟೋ, ರಾಗಿ ಹಿಟ್ಟನ್ನೋ ಇಸ್ಕೊಂಡು ಬರಲು ಭೈರಪ್ಪ ಹೋದರಾದರೂ ದೇವರಾಯನವರ ಪತ್ನಿ ಹಿಟ್ಟುಕೊಡಲು ಬಿಡದ ಕಾರಣ ಭೈರಪ್ಪ ಹಸಿದ ಹೊಟ್ಟೆಯ ಚೆನ್ನರಾಯ ಪಟ್ಟಣಕ್ಕೆ ಸೈಕಲ್ ತುಳಿಯಬೇಕಾಗುತ್ತದೆ.
ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ಕಲಾವಿದರಾದ ಸೂರಿಕುಮೇರಿ ಗೋವಿಂದ ಭಟ್ಟರು ತಮ್ಮ ಆತ್ಮಕಥೆಯಾದ ಯಕ್ಷೋಪಾಸನೆಯಲ್ಲೂ ತಾವು ಬಾಲ್ಯಕಾಲದಲ್ಲಿ ಅನುಭವಿಸಿದ ಭೀಕರ ಬಡತನದ ಘಟನೆಗಳನ್ನು ವಿವರಿಸಿದ್ದಾರೆ. ಆರ್ಥಿಕವಾಗಿ ಮುಂದುವರಿದಿರುವ ಕೇರಳದ ಕಾಸರಗೋಡು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೆಳೆದು ಬಂದ ನನಗೆ ಕರ್ನಾಟಕದ ಇತರೆಡೆಗಳಲ್ಲಿ ಬಡತನವು ಇಷ್ಟು ತೀವ್ರವಾಗಿ ಇರಬಹುದೆಂಬ ಕಲ್ಪನೆಯಿರಲಿಲ್ಲ. ೨೦೦೩ ರಲ್ಲಿ ನಾನು ಬಾಗೇಪಲ್ಲಿಯ ಸರಕಾರೇತರ ಸಂಸ್ಥೆಯೊಂದರಲ್ಲಿ ಕೆಲಸವನ್ನು ಮಾಡುತ್ತಿzಗ ಬಾಗೇಪಲ್ಲಿ, ಗುಡಿಬಂಡೆ, ಶಿಡ್ಲಘಟ್ಟ ತಾಲೂಕುಗಳಲ್ಲಿ ಬಡತನದ ಭೀಕರತೆಯ ದರ್ಶನವಾಗುತ್ತಿತ್ತು. ಈ ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದವು. ಮಳೆ ಕಡಿಮೆಯಿದ್ದ ಕಾರಣ ಅಂತರ್ಜಲಮಟ್ಟವು ತುಂಬಾ ಆಳದಲ್ಲಿತ್ತು.
ಸಿಗುವ ಅಂತರ್ಜಲದಲ್ಲಿ ಫ್ಲೋರೈಡ್ ಅಂಶ ಬಹಳ ಹೆಚ್ಚಾಗಿತ್ತು. ಬಹುತೇಕ ಜನರಿಗೆ ಸರಿಯಾದ ಮನೆಗಳಿರಲಿಲ್ಲ. ನಮ್ಮ ಸಂಸ್ಥೆಯು ಈ ಭಾಗದ ಒಣಭೂಮಿಯ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿತ್ತು. ಹಳ್ಳಿಗಳಲ್ಲಿರುವ ಜನರು ಗುಂಪುಗೂಡಿ ತಮ್ಮ ತಮ್ಮ ಬರಡು ಭೂಮಿಯಲ್ಲಿರುವ ಕಲ್ಲುಗಳನ್ನು ಹೆಕ್ಕಿ ಜಾಗದ ಅಂಚಿನಲ್ಲಿ ಆ ಕಲ್ಲುಗಳನ್ನು ಪೇರಿಸಿ ಮಳೆನೀರನ್ನು ಭೂಮಿಗೆ ಇಂಗಿಸುವ ಕೆಲಸಗಳನ್ನು ಮಾಡಿದರೆ ಈ ಕೆಲಸದಲ್ಲಿ ಭಾಗವಹಿಸಿದ ಪ್ರತೀ
ವ್ಯಕ್ತಿಗೆ ದಿನವೊಂದಕ್ಕೆ ಹದಿನೈದೋ ಇಪ್ಪತ್ತೋ ರುಪಾಯಿಗಳ ಕೂಲಿಯನ್ನು ಕೊಡುತ್ತಿತ್ತು. ಪ್ರತೀ ತಿಂಗಳು ಸಂಸ್ಥೆಯ ಸಿಬ್ಬಂದಿಗಳು ಹಳ್ಳಿಗಳಿಗೆ ತೆರಳಿ ೨೫ ದಿವಸಗಳ ಕೂಲಿಯನ್ನು ವಿತರಣೆ ಮಾಡುತ್ತಿದ್ದರು. ಅಪರೂಪಕ್ಕೆ ಒಂದೊಂದುಬಾರಿ ಕೂಲಿ ವಿತರಣೆಗೆ ತೆರಳುವಾಗ ಒಂದುವಾರ ಅಥವಾ ಹತ್ತು ದಿವಸಗಳಷ್ಟು ತಡವಾಗುತ್ತಿತ್ತು. ಕೂಲಿ ವಿತರಣೆ ತಡವಾದ ಸಂದರ್ಭಗಳಲ್ಲಿ ನಮಗೆ ಊಟಕ್ಕೇ ಗತಿಯಿಲ್ಲ, ಆದಷ್ಟು ಬೇಗ ಕೂಲಿ ವಿತರಣೆ ಮಾಡಿ ಎಂದು ಹಳ್ಳಿಗರು ಗೋಗರೆದು ಕಣ್ಣೀರು ಹಾಕುವುದನ್ನು ನಾನು ನೋಡಿz. ಪ್ರತೀ ತಿಂಗಳ ಕೊನೆಗೆ ಈ ಹಳ್ಳಿಗರಿಗೆ ಸಭೆಯನ್ನು ನಡೆಸಲಾಗುತ್ತಿತ್ತು.
ತುಂಬಾ ಸಂಖ್ಯೆಯಲ್ಲಿ ಹಳ್ಳಿಗರು ಈ ಸಭೆಗೆ ಬರುತ್ತಿದ್ದರು. ಸಭೆಗೆ ಬಂದರೆ ಹೊಟ್ಟೆತುಂಬಾ ಅನ್ನ ಸಿಗುತ್ತದೆ ಎನ್ನುವುದೇ ಭಾಗವಹಿಸುತ್ತಿದ್ದ ಜನರಿಗೆ ಆಕರ್ಷಣೆಯ ವಿಚಾರವಾಗಿತ್ತು ಎಂದರೆ ಅಂದಿನ ದಿವಸಗಳ ಆ ಜನರ ಬಡತನದ ಮಟ್ಟವನ್ನು ಅರ್ಥೈಸಿಕೊಳ್ಳಬಹುದು. ಬಡತನ ಎನ್ನುವುದು ಭಾರತ ದಂತಹ ರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕವಾಗಿ ಮುಂದುವರಿದಿರುವ ಅಮೆರಿಕದಲ್ಲಿಯೂ ಭಿಕ್ಷೆ ಬೇಡುವವರನ್ನು ನಾನು ಕಂಡಿದ್ದೇನೆ. ಕಳೆದ ವರ್ಷ ಅಮೆರಿಕವಾಸಿಗಳಾದ ನನ್ನ ಸಹೋದರರ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಸಾಗುತ್ತಿದ್ದಾಗ ಓರ್ವ ಮಹಿಳೆ ಭಿಕ್ಷೆ ಬೇಡುತ್ತಿದ್ದುದನ್ನು ಕಂಡು ಅಮೆರಿಕದಲ್ಲೂ ಭಿಕ್ಷೆ ಬೇಡುವವರಿದ್ದಾರ ಎಂದು ಅಚ್ಚರಿಯಿಂದ ನನ್ನ ಮೊಬೈಲಿನಲ್ಲಿ ಆಕೆಯ ಫೋಟೋ ತೆಗೆದೆ.
ಆದರೆ ನಾನು ಫೋಟೋ ತೆಗೆದು ಆ ಮಹಿಳೆಗೆ ಇಷ್ಟವಾಗಲಿಲ್ಲ. ನನ್ನ ಅಣ್ಣ ಆ ಮಹಿಳೆಗೆ ಐದು ಡಾಲರ್ಗಳ ಸಹಾಯ ನೀಡಿದಾಗ ನಾನು ತೆಗೆದ ಫೋಟೋವನ್ನು ಡಿಲೀಟ್ ಮಾಡಿದರೆ ಮಾತ್ರ ಡಾಲರ್ ಅನ್ನು ಸ್ವೀಕರಿಸುವೆ ಎಂದು ಆ ಮಹಿಳೆ ಹೇಳಿದಾಗ ಫೋಟೋ ತೆಗೆದದ್ದು ತಪ್ಪು ಎಂದು ಎನಿಸಿ ಫೋಟೋವನ್ನು ಆಕೆಯ ಕಣ್ಣಮುಂದೆಯೇ ಡಿಲೀಟ್ ಮಾಡಿದೆ. ಆಕೆ ಹಣ ಸ್ವೀಕರಿಸಿದಳು. ಲಾಸ್ ಏಂಜಲೀಸ್ ನಗರದ ಬೀದಿ ಬೀದಿಗಳಲ್ಲಿ ಬಹಳ ಮಂದಿ ನಿರ್ಗತಿಗರು ಭಿಕ್ಷೆ ಬೇಡುವುದನ್ನು ನಾನು ನೋಡಿದ್ದೇನೆ. ಇವರಲ್ಲಿ ಹೆಚ್ಚಿನವರು ನಿವೃತ್ತ ಸೈನಿಕರು ಎಂಬುದು ತಿಳಿದಾಗ ಮನಸ್ಸಿಗೆ ಆಘಾತ ವಾಯಿತು.
ಅಮೆರಿಕದಲ್ಲಿ ಅಲ್ಲಿನ ನಿವೃತ್ತ ಸೈನಿಕರಿಗೆ ಭಾರತದಲ್ಲಿ ಸೈನಿಕರಿಗೆ ಕೊಡುವಷ್ಟು ಆರ್ಥಿಕ ಭದ್ರತಾ ವ್ಯವಸ್ಥೆ ಇಲ್ಲ. ವಿವಿಧ ದೇಶಗಳಲ್ಲಿ ಯುದ್ಧಗಳಿಗೆ
ನಿಯೋಜನೆಗೊಂಡ ಸೈನಿಕರು ನಿವೃತ್ತರಾಗಿ ತಾಯ್ನಾಡಿಗೆ ಮರಳಿದರೂ ಅವರಲ್ಲಿ ಒಂದಿಷ್ಟು ಮಂದಿ ಯುದ್ಧದ ಆಘಾತದಿಂದ ಹೊರಬರಲಾರದೆ ಖಿನ್ನತೆಗೊಳಗಾಗುತ್ತಾರೆ, ದುಶ್ಚಟಗಳಿಗೆ ಬಲಿಯಾಗಿ ಮನೆಯವರಿಂದ ತಿರಸ್ಕರಿಸಲ್ಪಟ್ಟು ಬೀದಿಪಾಲಾಗುತ್ತಾರೆ. ಅಮೆರಿಕದಲ್ಲಿ ೩೫೦೦೦ ಕ್ಕೂ ಹೆಚ್ಚು ಮಂದಿ ನಿವೃತ್ತ ಯೋಧರು ನಿರ್ಗತಿಕರಾಗಿ ಬೀದಿಗಳಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ.
ಕೆಲವು ದಶಕಗಳ ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ಇರುವ ಬಡತನವು ಏನೇನೂ ಅಲ್ಲ. ಇಂದಿನ ಬಹಳಷ್ಟು ಮಕ್ಕಳಿಗೆ ನಿಜವಾದ ಬಡತನದ ಕಷ್ಟ ಏನೆಂದೂ ಗೊತ್ತಿರಲಿಕ್ಕಿಲ್ಲ. ಇಂದು ದುಡಿಯುವ ಸದಸ್ಯನ ಅನಾರೋಗ್ಯ ಅಥವಾ ಸಾವು, ಕುಡಿತ ಮೊದಲಾದ ಕಾರಣಗಳಿಂದ ಮಾತ್ರ ಜನರಲ್ಲಿ ಬಡತನ ಉಂಟಾಗಬಹುದಷ್ಟೇ ವಿನಃ ದುಡಿಯುವ ಮನಸು ಇರುವ ಜನರಿಗೆ ದುಡಿಯಲು ಕೆಲಸ ಇಲ್ಲ ಎನ್ನುವ ಸ್ಥಿತಿ ಇಂದಿಲ್ಲ. ಉಡುವುದಕ್ಕೆ, ಉಣ್ಣುವುದಕ್ಕೆ ಗತಿಯಿಲ್ಲ ಎನ್ನುವ ಸ್ಥಿತಿ ಇಂದಿಲ್ಲ. ಮೂವತ್ತೈದು ವರ್ಷಗಳ ಹಿಂದೆ ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ಅರೆಹೊಟ್ಟೆಯಲ್ಲಿ ಶಾಲೆಗೆ ಬರುತ್ತಿದ್ದ ಮಕ್ಕಳಾರೂ ಇಂದು ಬಡವರಾಗಿ ಉಳಿದಿಲ್ಲ.
ಇವರಲ್ಲಿ ಅಧ್ಯಾಪಕರಿದ್ದಾರೆ, ಕೃಷಿ ಅಥವಾ ಸ್ವ ಉದ್ಯೋಗಗಳನ್ನು ಮಾಡುವವರಿದ್ದಾರೆ, ಎಂಜಿನಿಯರ್ಗಳಿದ್ದಾರೆ, ಗಲ್ಫ್ ದೇಶಗಳಿಗೆ ತೆರಳಿ ಕೈತುಂಬಾ ಸಂಪಾದಿಸುವವರೂ ಇದ್ದಾರೆ. ವಿದ್ಯಾಭ್ಯಾಸ ತಲೆಗೆ ಹತ್ತದವರೂ ಕಟ್ಟಡ ಕಾರ್ಮಿಕ ಕೆಲಸ, ಕೂಲಿ ಕೆಲಸ ಮೊದಲಾದ ವೃತ್ತಿಗಳನ್ನು ಮಾಡಿ ಉತ್ತಮ ವಾಗಿ ಜೀವನ ನಡೆಸುವಷ್ಟು ಸಂಪಾದನೆ ಮಾಡುತ್ತಿzರೆ. ೨೦೦೬ ಹಾಗೂ ೨೦೨೧ ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ೪೧.೫ ಕೋಟಿ ಮಂದಿ ಬಡತನದ ರೇಖೆಯಿಂದ ಹೊರಬಂದಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯು ಹೇಳುತ್ತದೆ. ಇವರಲ್ಲಿ ೨೫ ಕೋಟಿ ಮಂದಿ ಕಳೆದ ಆರೇಳು ವರ್ಷಗಳಲ್ಲಿ ಬಡತನದಿಂದ ಹೊರಬಂದಿದ್ದಾರೆ. ಬಡತನ ನಿವಾರಣೆಗಾಗಿ ಸರಕಾರವು ಹಮ್ಮಿಕೊಂಡ ಯೋಜನೆಗಳು ಸೋರಿಕೆಯಾಗದೆ ಜನರಿಗೆ ನೇರವಾಗಿ ತಲುಪುತ್ತಿ ರುವ ಪರಿಣಾಮವಾಗಿ ಜನರು ಬಡತನದಿಂದ ಹೊರಬರುತ್ತಿದ್ದಾರೆ.
ಪ್ರತೀಮನೆಗೆ ವಿದ್ಯುತ್, ಕುಡಿಯುವ ನೀರು, ಅಡುಗೆ ಅನಿಲದ ಪೂರೈಕೆ, ಸಬ್ಸಿಡಿಗಳು ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಸೇರುತ್ತಿರುವುದು,
ಉತ್ತಮಗೊಂಡ ರಸ್ತೆಗಳು, ಮುದ್ರಾ ಲೋನ್, ದೇಶದ ೮೦ ಕೋಟಿ ಮನೆಗಳಿಗೆ ಉಚಿತ ಆಹಾರ ಧಾನ್ಯ ಪೂರೈಕೆ, ಸಾರ್ವತ್ರಿಕ ವಿದ್ಯಾಭ್ಯಾಸ ಮೊದಲಾದ ಉಪಕ್ರಮಗಳಿಂದಾಗಿ ಭಾರತದ ಜನರ ಬಡತನದ ತೀವ್ರತೆ ಕಡಿಮೆಯಾಗುತ್ತಿದೆ. ನಿಜವಾದ ಅವಶ್ಯಕತೆಗಳು ಬಹುತೇಕ ಪೂರೈಸಲ್ಪಡುತ್ತಿದ್ದು, ಇದೀಗ ನಿರೀಕ್ಷಿತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗದುದನ್ನೇ ಬಡತನ ಎಂದು ತಿಳಿಯುವ ಮಟ್ಟಕ್ಕೆ ಬೆಳೆಯುತ್ತಿದ್ದೇವೆ.