ವಿದೇಶವಾಸಿ
dhyapaa@gmail.com
ಹೀಗೇ ಆದರೆ ಬೆಂಕಿಯ ಮಳೆ ಬರಲಿಕ್ಕಿದೆ. ಪ್ರಳಯ ಆಗುತ್ತದೆ ಎನ್ನುತ್ತಾರಲ್ಲ, ಖಂಡಿತವಾಗಿಯೂ ಆಗಲಿಕ್ಕಿದೆ. ಅಲ್ಲದೆ ಮತ್ತಿನ್ನೇನು? ಬ್ರಾಹ್ಮಣರನ್ನು ಕಂಡು ನಗುವುದೇ? ಬ್ರಾಹ್ಮಣ ನಗೆಪಾಟಲಿನ ವಸ್ತುವಲ್ಲ. ಇನ್ನು ಬ್ರಾಹ್ಮಣರಿಗೆ ಒಳ್ಳೆಯ ಕಾಲ ಇಲ್ಲ.
ಒಂದು ಕಾಲ ಇತ್ತು, ಬ್ರಾಹ್ಮನರನ್ನು ಕಂಡಾಗ ಸಿಂಹಾಸನದ ಮೇಲೆ ಕುಳಿತ ಅರಸನೂ ಎದ್ದು ನಿಂತು ಕೈಮುಗಿಯುತ್ತಿದ್ದ. ಯಾಕೆ ಗೊತ್ತಾ? ಬ್ರಾಹ್ಮಣರು ಎಂದರೆ ಗುರುವಿನ ಸ್ಥಾನದಲ್ಲಿದ್ದವರು. ಈಗ ಬ್ರಾಹ್ಮಣರನ್ನು ಕಂಡರೆ ಎಲ್ಲರಿಗೂ ಗುರುಗುರು ಶುರು. ಕಲಿ ಯುಗದಲ್ಲಿ ಬ್ರಾಹ್ಮಣನಾಗಿ ಹುಟ್ಟುವುದಕ್ಕಿಂತ ಬೇರೆ ಏನಾದರೂ ಆಗಿ ಹುಟ್ಟಬೇಕು. ಜಗತ್ತಿನ ಎಲ್ಲಾ ಅನರ್ಥವೂ ಬ್ರಾಹ್ಮಣ ನಿಂದಲೇ ಆದದ್ದು, ವಿಶ್ವದಗುವ ಎಲ್ಲಾ ಅನಾ ಹುತಗಳಿಗೂ ಬ್ರಾಹ್ಮಣನೇ ಕಾರಣ ಎನ್ನುವುದು ಎಷ್ಟು ನಿಜ? ಬ್ರಾಹ್ಮಣ ಅಂಥ ಅಪರಾಧ ಏನು ಮಾಡಿದ್ದಾನೆ? ‘ಮಳೆ ಯಾಕೆ ಬರಲಿಲ್ಲ’ ಎಂದು ಕೇಳಿದರೆ, ‘ಬ್ರಾಹ್ಮಣರು ಹೇಗೆ ಇರಬೇಕಾಗಿತ್ತು ಹಾಗೆ ಇಲ್ಲ.
ಆಚಾರ ಇಲ್ಲ, ವಿಚಾರ ಇಲ್ಲ, ಅದಕ್ಕೆ ಮಳೆ ಬರಲಿಲ್ಲ’ ಎನ್ನುತ್ತಾರೆ. ‘ಬೆಳೆ ಯಾಕೆ ಬರಲಿಲ್ಲ?’ ಎಂದು ಕೇಳಿದರೆ, ‘ಆ ಬ್ರಾಹ್ಮಣರನ್ನು ನೋಡಿ, ಅವರ ಅಪ್ಪ ಹೇಗಿದ್ದರು, ಇವರು ಹೇಗಿದ್ದಾರೆ ನೋಡಿ’ ಎನ್ನುತ್ತಾರೆ. ಬೆಳೆ ಬಂತು, ಬೆಲೆ ಬರಲಿಲ್ಲ ಅಂದರೂ
ಬ್ರಾಹ್ಮಣರನ್ನೇ ದೂರುತ್ತಾರೆ. ಎಲ್ಲದಕ್ಕೂ ಕಾರಣ ಬ್ರಾಹ್ಮಣರೇ? ಅವರ ಮನೆಯಲ್ಲಿ ಹೆಂಡತಿ ಹೆಣ್ಣು ಮಕ್ಕಳನ್ನೇ ಹಡೆಯುತ್ತಾಳೆ. ಅದಕ್ಕೂ ಕಾರಣ ಬ್ರಾಹ್ಮಣರೇ? ಬ್ರಾಹ್ಮಣರು ಎಂದರೆ ಬಟ್ಟೆ ಒಗೆಯುವ ಕಲ್ಲಿನಂತಾಗಿದ್ದಾರೆ.
ಯಾರ ಬಟ್ಟೆಯನ್ನಾದರೂ ತೊಳೆದುಕೊಂಡು ಹೋಗಬಹುದು ಎಂಬಂತಾಗಿದೆ. ಒಂದು ಪ್ರಶ್ನೆ, ಕಲಿಯುಗದಲ್ಲಿ ಬ್ರಾಹ್ಮಣರು
ಮಾತ್ರ ಆಚಾರ ಬಿಟ್ಟವರೇ? ಬ್ರಾಹ್ಮಣರಿಗೆ ಒಂದು ಆಚಾರ ಅಂತ ಇದ್ದರೆ ಉಳಿದವರಿಗೂ ಒಂದಷ್ಟು ಆಚಾರ ಇದೆಯೋ ಇಲ್ಲವೋ? ಅವರ ಸುದ್ದಿ ಯಾರೂ ಮಾತಾಡುವುದಿಲ್ಲ, ಅವರನ್ನು ಟೀಕಿಸುವುದಿಲ್ಲ. ಒಮ್ಮೆ ಅವರನ್ನೇನಾದರೂ ಟೀಕಿಸಿ ನೋಡಿ, ಎಲ್ಲರೂ ಒಟ್ಟಾಗುತ್ತಾರೆ. ಆದರೆ ಬ್ರಾಹ್ಮಣರು ಒಟ್ಟಾಗುವುದಿಲ್ಲ. ಬ್ರಾಹ್ಮಣರು ಒಟ್ಟಾಗುವುದು ಊಟಕ್ಕೆ ಮಾತ್ರ.
ಇದು ಬೇರೆ ಯಾರದ್ದೂ ಅಲ್ಲ, ಇತ್ತೀಚೆಗೆ ನಮ್ಮನ್ನು ಅಗಲಿದ ಯಕ್ಷಗಾನ-ತಾಳಮದ್ದಳೆಯ ‘ಪ್ರಾಸ ಪ್ರವೀಣ’ ಕುಂಬ್ಳೆ ಸುಂದರ ರಾವ್ ಅವರದ್ದು. ನಾನು ನೋಡಿದ ಕುಂಬ್ಳೆಯವರ ಮೊದಲ ಪಾತ್ರ ಅದು. ‘ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ’ ಯಲ್ಲಿ ಬರುವ ಗೋವಿಂದ ಭಟ್ಟರ ಪಾತ್ರ ಅದು. ಈ ಪಾತ್ರದಲ್ಲಿ ಅವರು ಹೇಗೆ ಬ್ರಾಹ್ಮಣರ ಪರವಾಗಿ ಮಾತಾಡುತ್ತಿದ್ದರೋ, ಹಾಗೆಯೇ ಅವರನ್ನು ಟೀಕಿಸುತ್ತಲೂ ಇದ್ದರು. ಆ ಪ್ರಸಂಗದಲ್ಲಿ ಅವರು ದಲು ಹಾಸ್ಯ, ವಿಡಂಬನೆಯ ಬ್ರಾಹ್ಮಣನ ಪಾತ್ರ ಮಾಡಿ ನಂತರ ಗಂಭೀರವಾದ ಎರಡನೆಯ ಪಾತ್ರ ಮಾಡುತ್ತಿದ್ದ ನೆನಪು.
ಯಾಕೋ ಏನೋ, ಅವರ ಬೋಳು ಮಂಡೆಯ, ದೊಡ್ಡ ಹೊಟ್ಟೆಯ ಬ್ರಾಹ್ಮಣನ ಪಾತ್ರ ಅಂದಿನಿಂದಲೂ ನನ್ನ ಮನಸ್ಸಿನಲ್ಲಿ
ಅಳಿಯದೇ ಉಳಿದಿದೆ. ಬ್ರಾಹ್ಮಣರ ಕುರಿತು ಇಷ್ಟೆಲ್ಲ ಮಾತಾಡುವ ಕುಂಬ್ಳೆಯವರೇನೂ ಬ್ರಾಹ್ಮಣರಲ್ಲ. ಕನ್ನಡ, ತುಳು,
ಸಂಸ್ಕೃತ, ಮಳಯಾಳಂ, ತಮಿಳು ಭಾಷೆಯಲ್ಲಿ ಪಾಂಡಿತ್ಯ ಹೊಂದಿದ ಕುಂಬ್ಳೆಯವರು ಜಾತಿಯಲ್ಲಿ ಶೆಟ್ಟಿಗಾರರು. ಅವರ ಬಾಲ್ಯದ ದಿನಗಳಲ್ಲಿ, ಆಟದ ಕರಪತ್ರದಲ್ಲಿ ಅವರ ಹೆಸರನ್ನು ಮಾಸ್ಟರ್ ಸುಂದರ್ ಎಂದು ಮುದ್ರಿಸುತ್ತಿದ್ದರು.
ಬಲಿತ ಮೇಲೂ ಮಾಸ್ಟರ್ ಎನ್ನುವುದು ಸರಿಯಲ್ಲ ಎಂಬ ಕಾರಣಕ್ಕೆ ಆ ದಿನಗಳಲ್ಲಿ ಅವರು ಪಾತ್ರ ಮಾಡುತ್ತಿದ್ದ ಮೇಳದ
ಯಜಮಾನರು ಸುಂದರ್ ರಾವ್ ಎಂದು ಮರುನಾಮಕರಣ ಮಾಡಿದರು. ಕುಂಬ್ಳೆಯವರು ಓದಿದ್ದು ಏಳನೆಯ ತರಗತಿಯವರೆಗೆ ಮಾತ್ರ. ಅಷ್ಟು ಓದಲು ಐದು ಶಾಲೆ ಬದಲಿಸಿದ್ದರು. ಯಾಕೋ ಏನೋ, ಮಗ್ಗ ನೇಯುವವನ ಮಗನಿಗೆ ಶಾಲೆ ಒಗ್ಗಿ ಬರಲಿಲ್ಲ. ಹಾಗಂತ ವಿದ್ಯೆ ಅಪಥ್ಯವಾಗಲಿಲ್ಲ. ದಿಗ್ಗಜರ ಸಂಗದಿಂದ ಗಳಿಸಿದ eನದಿಂದ ಅವರು ಎಲ್ಲಿಯೂ ಅಗ್ಗವಾಗಲಿಲ್ಲ. ಎಂಥ ವಿಚಿತ್ರವೋ ಗೊತ್ತಿಲ್ಲ, ಶಾಲೆ ಅಲರ್ಜಿಯಾದರೂ, ಓದುವ ಹುಚ್ಚು ಹೆಚ್ಚಾಗಿಯೇ ಇತ್ತು.
ವಾಚನಾಲಯದಿಂದ ಪುಸ್ತಕ ಪಡೆದು, ಶಾಲೆಗೆ ಚಕ್ಕರ್ ಹೊಡೆದು, ಬೆಟ್ಟ-ಬೇಣದಲ್ಲಿ ಕುಳಿತು ಓದುತ್ತಿದ್ದರು. ರಾತ್ರಿಯೆಲ್ಲ ಯಕ್ಷಗಾನ, ತಾಳಮದ್ದಳೆ ನೋಡುತ್ತಿದ್ದರು. ಅದರಲ್ಲಿ ಅರ್ಥ ಹೇಳಲು ಅವಕಾಶವೂ ಸಿಕ್ಕಿತು. ಅದನ್ನು ಸಮರ್ಥವಾಗಿ ಬಳಸಿ ಕೊಂಡರು. ಮುಂದೊಂದು ದಿನ ಮಾತೇ ಅವರ ಬಂಡವಾಳವಾಯಿತು. ಎಲ್ಲಿಯವರೆಗೆ ಎಂದರೆ, ಚುನಾವಣೆಯ ಪ್ರಚಾರಕ್ಕೆ ಅವರನ್ನು ಬಳಸಿಕೊಳ್ಳುತ್ತಿದ್ದರು. ಅದರಿಂದಾಗಿ ಅವರಿಗೆ ವಿಧಾನಸಭೆಗೆ ಸ್ಪರ್ಧಿಸುವ ಅವಕಾಶವೂ ಒದಗಿ ಬಂತು.
ಭಾರತೀಯ ಜನತಾ ಪಕ್ಷದ ಅಬ್ಯರ್ಥಿಗಳು ಚುನಾವಣೆಗೆ ನಿಂತಲ್ಲ ಇಡಿಗಂಟು ಜಪ್ತಾಗುತ್ತಿದ್ದ ಕಾಲದಲ್ಲಿ, ಸುರತ್ಕಲ್ ವಿಧಾನಸಭೆ ಸದಸ್ಯರಾಗಿ ಆಯ್ಕೆಯೂ ಆದರು. ನನಗೆ ತಿಳಿದಂತೆ ಯಕ್ಷಗಾನ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಮೊದಲ ಮತ್ತು ಏಕಮಾತ್ರ ವ್ಯಕ್ತಿ ಕುಂಬ್ಳೆಯವರು. ರಾಜಕೀಯ ಅವರಿಗೆ ಇಷ್ಟವಾಗಲಿಲ್ಲ. ಅವರು ಎರಡನೆಯ ಬಾರಿ ಸ್ಪರ್ಧಿಸಲಿಲ್ಲ. ಆದರೆ, ಜೆ. ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ, ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನಕ್ಕೆ ಅವಕಾಶ ಒದಗಿಸಿಕೊಡಬೇಕೆಂದು ಸದನದ ಬಾವಿಗೆ ಇಳಿದು ಧರಣಿ ಕುಳಿತು, ಯಶಸ್ವಿಯಾಗಿದ್ದು ಈಗ ಇತಿಹಾಸ.
ಕುಂಬ್ಳೆಯವರಿಗೆ ಬಾಲ್ಯದಲ್ಲಿ ಶೇಣಿ ಗೋಪಾಲಕೃಷ್ಣ ಭಟ್, ಶಂಕರನಾರಾಯಣ ಸಾಮಗ, ರಾಮದಾಸ ಸಾಮಗರಂಥವರ ಒಡನಾಟ ಮತ್ತು ಮಾರ್ಗದರ್ಶನ ದೊರೆಕಿತು. ಆರಂಭದ ದಿನಗಳಲ್ಲಿ, ‘ಅವರದ್ದು ಯಕ್ಷಗಾನದ ಮಾತಲ್ಲ, ಅವರ ಮಾತು
ಕೇಳಿದರೆ ಎನ್. ಬಸವರಾಜ್ ಅವರ ಗುಡಿಗೇರಿ ಕಂಪನಿಯವರ ನಾಟಕದ ಮಾತು ಕೇಳಿದಂತಾಗುತ್ತದೆ’ ಎಂದವರೂ ಇದ್ದಾರೆ. ಕ್ರಮೇಣ ಜನರಿಗೆ ಅದೇ ಇಷ್ಟವಾಗಿ, ಕುಂಬ್ಳೆ ಶೈಲಿಯಾಗಿಯೇ ಹೆಸರಾಯಿತು.
ಅವರ ವಿಶೇಷತೆಯೆಂದರೆ, ಪದ್ಯದ ಚೌಕಟ್ಟನ್ನು ಮೀರಿ ಉದ್ದುದ್ದ ಅರ್ಥ ಹೇಳಿದವರಲ್ಲ. ಭರತಾಗಮನದ ಭರತನ ಪಾತ್ರದ ಪೀಠಿಕೆಯಲ್ಲಿ ಅವರು ಸುಮಾರು ಅರ್ಧ ಗಂಟೆ ನಿರರ್ಗಳ ಮಾತಾಡುತ್ತಿದ್ದರಾದರೂ, ಎಲ್ಲಿಯೂ ಹಳಿತಪ್ಪಿತು ಅನಿಸುತ್ತಿರಲಿಲ್ಲ. ಎಲ್ಲಿಯೂ ಅತಿಯಾಗದೇ, ಸನ್ನಿವೇಶಕ್ಕೆ ತಕ್ಕಂತೆ ಇತಿ-ಮಿತಿಯ ಮಾತು ಅವರದ್ದು. ಜತೆಗೆ ಅವರ ಪ್ರಾಸದ ಮಾತುಗಳು
ಜನರಿಗೆ ಹಿಡಿಸಿತು. ಪ್ರಾಸ ಎಂದರೆ ಕುಂಬ್ಳೆ, ಕುಂಬ್ಳೆ ಎಂದರೆ ಪ್ರಾಸ ಎನ್ನುವಂತಾಯಿತು.
ಇತ್ತೀಚಿನ ದಿನಗಳಲ್ಲಿ ತಾಳಮದ್ದಳೆ ಎಂದರೆ ವಾದ, ವಾಗ್ಯುದ್ಧ ಎನ್ನುವಲ್ಲಿಗೆ ಬಂದು ನಿಂತಿದೆ. ಅದನ್ನು ಮಾತಿನ ಯುದ್ಧ ಎನ್ನುವವರೂ ಇದ್ದಾರೆ. ಪ್ರಸಂಗದಲ್ಲಿ ಯುದ್ಧದ ಸನ್ನಿವೇಶ ಇರಲಿ, ಸಂಧಾನದ ಸನ್ನಿವೇಶ ಇರಲಿ, ರಂಗದಲ್ಲಿ ವಾಗ್ಯುದ್ಧ
ಆಗಲೇಬೇಕು. ಹಾಸ್ಯ, ಶೃಂಗಾರದ ಸನ್ನಿವೇಶದಲ್ಲಿಯೂ ಶಬ್ದಗಳ ಪೈಪೋಟಿ ನಡೆಯಬೇಕು ಎಂಬಂತಾಗಿದೆ. ಕಲಾವಿದನಿಗೆ ರಂಗಸ್ಥಳದಲ್ಲಿ ನನ್ನನ್ನು ಬಿಟ್ಟರೆ ಬೇರೆಯವರಿಲ್ಲ ಎಂಬ ಧೋರಣೆ ಉಂಟಾದರೆ, ಆ ವ್ಯಕ್ತಿಗೆ ಸ್ವಲ್ಪ ಮಟ್ಟಿನ ಸಮಾಧಾನ
ಉಂಟಾಗಬಹುದಾದರೂ ಪ್ರಸಂಗ ಸೋಲುತ್ತದೆ.
ಉತ್ತಮ ದಾಂಡಿಗನೊಬ್ಬ ಶತಕ ಸಿಡಿಸಿಯೂ ತಂಡ ಸೋತರೆ ಹೇಗೋ ಹಾಗೆ. ಪಾತ್ರಧಾರಿ ತಾನು ಬದುಕುವ ಪ್ರಯತ್ನ ಮಾಡಿದರೆ ಪಾತ್ರ ಸಾಯುತ್ತದೆ ಎಂಬುದು ಕುಂಬ್ಳೆಯವರ ನಿಲುವಾಗಿತ್ತು. ಅದಕ್ಕೆ ಅವರು ಯಾರೊಂದಿಗೂ ಹೆಚ್ಚು ವಾದಕ್ಕೆ ಇಳಿಯುತ್ತಿರ ಲಿಲ್ಲ. ಆದರೆ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ. ಬಾಲ್ಯದಿಂದಲೇ ಈ ಗುಣ ಅಳವಡಿಸಿಕೊಂಡದ್ದಕ್ಕೋ ಏನೋ, ಮೇಳ ಸೇರಿ ಮೂರು ನಾಲ್ಕು ವರ್ಷ ದಲ್ಲಿಯೇ ಅವರು ನಾಯಕನ ಪಾತ್ರ ಮಾಡಲು
ಆರಂಭಿಸಿದ್ದರು. ಪಾತ್ರಗಳಿಗೆ ಸಂದರ್ಭಕ್ಕೆ ತಕ್ಕಂತೆ ಭಾವನು ತುಂಬುತ್ತಿದ್ದರು. ಅವರ ಕೆಲವು ಪಾತ್ರಗಳಲ್ಲಿ ನನಗಿಷ್ಟವಾದ ಒಂದೆರಡನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳುತ್ತೇನೆ.
ಕುಂಬ್ಳೆಯವರು ಇಷ್ಟಪಡುವ ಪಾತ್ರಗಳಲ್ಲಿ ಒಂದಾದ, ಅವರಿಗೆ ಕೀರ್ತಿ ತಂದುಕೊಟ್ಟ ಒಂದು ಪಾತ್ರ ಸುದರ್ಶನ ವಿಜಯ ಪ್ರಸಂಗದ ವಿಷ್ಣುವಿನ ಪಾತ್ರ. ಅದರಲ್ಲಿ ಒಂದು ಸನ್ನಿವೇಶವಿದೆ. ಮಹಾವಿಷ್ಣು ಹೆಸರುಗಳಿಸುವುದಕ್ಕೆ ತಾನೇ ಕಾರಣ ಎಂದು ಸುದರ್ಶನ ಹೇಳುತ್ತಾನೆ. ಅದನ್ನು ಕೇಳಿದ ಲಕ್ಷ್ಮೀದೇವಿ ಕಸಿವಿಸಿಗೊಂಡು ಪತಿಯಲ್ಲಿ ಇದೆಲ್ಲ ಏನು ಎಂದು ಕೇಳುತ್ತಾಳೆ. ಆಗ ನವಿರಾದ ಹಾಸ್ಯ, ಪ್ರಾಸದೊಂದಿಗೆ ಕಾಲೆಳೆಯುವ ಕುಂಬ್ಳೆಯವರ ಮಾತು ಕೇಳಬೇಕು.
ನಾನು ಮತ್ಸ್ಯಾವತಾರ ತಾಳಿದೆ. ರಾಕ್ಷಸ ಸಂಹಾರಕ್ಕೆ ರೆಕ್ಕೆ ಬಳಸಿದೆ. ಯಾವುದಕ್ಕೆ? ಏನು ರೆಕ್ಕೆ? ಅವನೇ (ಸುದರ್ಶನ) ರೆಕ್ಕೆ. ಅಲ್ಲ ಎಂದು ಹೇಳಲು ನಿನಗೇನು ಹಕ್ಕೆ? ಅವ ಹೇಳಿದ್ದು ಠಕ್ಕೆ. ನಾನು ಕೂರ್ಮನಾದಾಗ ಅವ ಚಿಪ್ಪು. ನೀನು ಅದನ್ನು ಒಪ್ಪು. ಒಪ್ಪದಿದ್ದರೆ ಅದು ನಿನ್ನ ತಪ್ಪು. ನಾನು ವರಾಹ ಅವತಾರ ತಾಳಿದಾಗ ಅವನು ದಾಡೆ. ನಿನಗೆ ಒಪ್ಪಿಕೊಳ್ಳುವುದಕ್ಕೆ ಏನು ಕೇಡೆ? ಅಯ್ಯೋ ನಿನ್ನ ಮುಖ ನೋಡೆ. ನರಸಿಂಹಾವತಾರದಲ್ಲಿ ರಾಕ್ಷಸರನ್ನು ನಖದಿಂದ ಸೀಳಿ ಕೊಂದೆ. ಇವ ನನ್ನ ಸಖ. ಇವನ ಸಖತನದಲ್ಲಿ ನನಗೆ ನಖ. ಅದರಿಂದ ಲೋಕಕ್ಕೆ ಸುಖ. ನೋಡಿ ನನ್ನ ಹೆಂಡತಿಯ ಮುಖ.
ವಾಮನಾವತಾರದಲ್ಲಿ ಪಾದದಿಂದ ಮೆಟ್ಟಿ ರಾಕ್ಷಸನನ್ನು ಪಾತಾಳಕ್ಕೆ ತಳ್ಳಿದೆ. ಇವನೇ ನನ್ನ ಪಾದ. ಆದ್ದರಿಂದ ರಾಕ್ಷಸ ಪಾತಾಳಕ್ಕೆ ಹೋದ. ನೀನು ಮಾಡ್ತೀಯಲ್ಲ ವಾದ. ಇಂತಹ ಹೆಂಡತಿಯನ್ನು ಕಟ್ಟಿಕೊಂಡಿದ್ದಕ್ಕೆ ನನಗಾಗುತ್ತಿದೆ ಖೇದ. ಈ ತಿಯ
ಪ್ರಯೋಗ ಮೊದಲು ಆಗಿರಲಿಲ್ಲ. ಈಗ ಅದೇ ಮಾದರಿ ಎನ್ನುವಷ್ಟರ ಮಟ್ಟಿಗೆ ಪ್ರಖ್ಯಾತವಾಗಿದೆ.
ಕುಂಬ್ಳೆಯವರಿಗೆ ಕರುಣಾ ಶೃಂಗಾರ ಮತ್ತು ದುಃಖದ ಪಾತ್ರಗಳು ಇಷ್ಟವಾಗಿದ್ದವು. ಪ್ರೇಕ್ಷಕರಿಗೂ ಅದು ಇಷ್ಟವಾಗಿತ್ತು. ಒಬ್ಬರ ಹೆಸರಿನೊಂದಿಗೆ ಒಂದು ಗುರುತು ಅಂಟಿಕೊಳ್ಳುವುದು ಸಾಮಾನ್ಯ. ಅದು ಒಂದು ಸಂದರ್ಭದಲ್ಲಿ, ಘಟನೆಯಲ್ಲಿ ವ್ಯಕ್ತಿ
ತೋರಿಸಿದ ಚಳಕದಿಂದ ಆಗುವಂಥದ್ದು. ಹೇಗೆ ೧೯೮೩ ರಲ್ಲಿ ಭಾರತ ಜಯಿಸಿದ ವಿಶ್ವಕಪ್ ನೆನಪಾದಾಗ ಕಪಿಲ್ ದೇವ್ ನೆನಪಾಗುತ್ತಾರೋ ಅಥವಾ ನೂರು ಶತಕ ಎಂದಾಕ್ಷಣ ಸಚಿನ್ ತೆಂಡುಲ್ಕರ್ ನೆನಪಾಗುತ್ತಾರೋ ಹಾಗೆ. ಬೇಡರ ಕಣ್ಣಪ್ಪ ಎಂದರೆ ಡಾ. ರಾಜ್ಕುಮಾರ್, ನಾಗರ ಹಾವು ಎಂದರೆ ಡಾ. ವಿಷ್ಣುವರ್ಧನ್, ಅಂತ ಎಂದರೆ ಅಂಬರೀಷ್ ಇವೆಲ್ಲ ಅವರ ಕಾರ್ಯದಿಂದ
ಅವರೊಂದಿಗೆ ಹಾಸುಹೊಕ್ಕಾದವು.
ಯಕ್ಷಗಾನದಲ್ಲಿಯೂ ಅಷ್ಟೇ, ಭೀಷ್ಮ ಎಂದರೆ ಮಹಾಬಲ ಹೆಗಡೆ, ಹರೀಶ್ಚಂದ್ರ ಎಂದರೆ ಶಂಭು ಹೆಗಡೆ, ಕೌರವ ಎಂದರೆ ಚಿಟ್ಟಾಣಿ ಹೇಗೋ ಭರತಾಗಮನದ ಭರತ ಎಂದರೆ ಕುಂಬ್ಳೆಯವರು. ಭರತಾಗಮನ ಪ್ರಸಂಗಕ್ಕೆ ಭಾರ ಬಂದದ್ದೇ ಕುಂಬ್ಳೆಯವರು ಭರತನ ಪಾತ್ರ ಮಾಡಲು ಆರಂಭಿಸಿದ ನಂತರ ಎಂದರೆ ತಪ್ಪಾಗಲಾರದೇನೋ. ನಾನು ಇಷ್ಟಪಟ್ಟದ್ದರಲ್ಲಿ ಕರ್ಣ ಪರ್ವದ ಕರ್ಣನ ಪಾತ್ರವೂ ಒಂದು.
ಕುಂತಿ ಮತ್ತು ಕರ್ಣನ ಸಂಭಾಷಣೆಯ ಸಂದರ್ಭದಲ್ಲಿ ಕುಂಬ್ಳೆಯವರು ಕರ್ಣನಾಗಿ ಆಡುತ್ತಿದ್ದ ಮಾತುಗಳು ವಿಭಿನ್ನವಾದದ್ದು. ಅಮ್ಮಾ, ನೀನು ಬಿಡು, ನನ್ನ ತಂದೆ ಲೋಕಕ್ಕೇ ಬೆಳಕು ಬೀರುವ ಭಗವಾನ್ ಭಾಸ್ಕರ. ಬುದ್ಧಿ ಬಂದಾಗಿನಿಂದ ನೋಡುತ್ತಿದ್ದೇನೆ, ನನ್ನ ಅಪ್ಪ ನಾನು ಪಡುವ ಪಾಡು ನೋಡಿದ. ಮೂಡಿದ, ಮುಳುಗಿದ, ಮಗನಿಗಾಗಿ ಏನು ಮಾಡಿದ? ನಾನು ತಾಯಿಗೆ ಮಾತ್ರ ಬೇಡದ ಮಗನಲ್ಲ, ತಂದೆಗೂ ಬೇಡದ ಮಗ. ದೇವರಿಗಂತೂ ಮೊದಲೇ ಬೇಡವಾದ ಮಗ.
ನಾನು ಬೇಕಾದದ್ದು ಕೌರವನಿಗೆ ಮಾತ್ರ. ಅಮ್ಮಾ, ಅರ್ಜುನನೇ ನನ್ನನ್ನು ಕೊಂದರೆ, ನಿನ್ನ ಹಳೆಯ ಮಕ್ಕಳ ಲೆಕ್ಕ, ಉಳಿದೀತು
ಚೊಕ್ಕ, ಮತ್ತೆ ನಿನಗೇಕೆ ದುಃಖ? ಅಲ್ಲಿಯೂ ಪ್ರಾಸಬದ್ಧವಾಗಿಯೇ ಮುಗಿಸುತ್ತಾರೆ. ನಾನು ಯಾರು ಎಂದು ತಿಳಿದುಕೊಳ್ಳುವುದಕ್ಕೆ
ಕಂಡ ಕಂಡ ದೇವರಿಗೆಲ್ಲ ಕೈಮುಗಿದೆ. ನಾನು ಚಾಂಡಾಲನಾದರೂ ಸರಿ, ನನಗೆ ಅದು ತಿಳಿಯಲಿ.ಬ್ರಾಹ್ಮಣರ ಮನೆಗೆ ಹೋಗೋಣ ವೆಂದರೆ ನಾನು ಬ್ರಾಹ್ಮನನಲ್ಲ, ಕ್ಷತ್ರಿಯರ ಮನೆಗೆ ಹೋಗೋಣವೆಂದರೆ ಕ್ಷತ್ರಿಯನೂ ಅಲ್ಲ.
ಹೋಗಲಿ, ಸೂತನ ಮನೆಗೆ ಹೋಗೋಣವೆಂದರೆ ಅವರ ಕುಲದವನೂ ಅಲ್ಲ, ನಾನು ಎಲ್ಲಿಯೋ ಸಿಕ್ಕಿದವನು. ಹಾಗಾದರೆ ಬದುಕುವುದು ಹೇಗೆ? ಬಾಯಾರಿಕೆಗೆ ನೀರು ಕೊಡಬೇಕಾದರೆ ಜನ ಜಾತಿ ಕೇಳುತ್ತಾರೆ. ಊಟಕ್ಕೆ ಎಲೆ ಹಾಕಬೇಕಾದರೂ ಜಾತಿ ಕೇಳುತ್ತಾರೆ. ಜಾತಿಯ ಭೂತ ಹಿಡಿದ ಈ ಸಮಾಜದಲ್ಲಿ ನನ್ನಂತವನು ಬದುಕಿದ್ದು ಯಾರ ಆಶೀರ್ವಾದದಿಂದ ಎಂಬುದೇ ಗೊತ್ತಿಲ್ಲ ಎಂದು ಕರ್ಣನ ಪಾತ್ರದ ಕುಂಬ್ಳೆಯವರು ಅವಿಶ್ರಾಂತ ದುಃಖದ ಮಾತಾಡುವಾಗ ಕಣ್ಣಂಚಿನಲ್ಲಿ ನೀರು ಜಿನುಗದೇ
ಇರದು.
ಯಕ್ಷಗಾನದಲ್ಲಿಯೇ ಆದರೂ ಕುಂಬ್ಳೆಯವರು ಎಂದೂ ಖಳನಾಯಕನ ಪಾತ್ರ ಮಾಡಿಲ್ಲ. ಅಥವಾ ನಾನು ಕೇಳಿಲ್ಲ, ನೋಡಿಲ್ಲ. ಒಬ್ಬ ಸಜ್ಜನ ಕಲಾವಿದರನ್ನು ಕಳೆದುಕೊಂಡ ದುಃಖ ಇದೆ. ಏನು ಮಾಡೋಣ? ಕುಂಬ್ಳೆ ಸುಂದರ ರಾಯರು ದುಃಖದ
ಮಾತುಗಳಿಂದ ಮನ ತಟ್ಟುತ್ತಿದ್ದರು. ನನ್ನಿಂದ ಅದೂ ಸಾಧ್ಯವಿಲ್ಲ. ಕುಂಬ್ಳೆಯವರು ಇಲ್ಲ ಎಂದರೆ ನಂಬಲಾಗುತ್ತಿಲ್ಲ. ಅವರು ಸದಾ ನಮ್ಮೊಂದಿಗೆ ಇರುತ್ತಾರೆ, ಪಾತ್ರದಲ್ಲಿ, ಮಾತಿನಲ್ಲಿ, ಅವರನ್ನು ಇನ್ನೂ ನೋಡದವರಿಗೆ ಯೂ-ಟ್ಯೂಬ್‌ನಲ್ಲಿ.