Wednesday, 11th December 2024

ಜಾರಿದ ಗರ್ಭಾಶಯವನ್ನು ಕೊಯ್ದೇಬಿಟ್ಟಳು !

ಹಿಂದಿರುಗಿ ನೋಡಿದಾಗ

ನಮ್ಮ ದೇಶದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನಡೆಯುವ ಶಸ್ತ್ರಚಿಕಿತ್ಸೆಯೆಂದರೆ ಸಿಸೇರಿಯನ್ ಶಸ್ತ್ರಚಿಕಿತ್ಸೆ. ಮಹಿಳೆಯರಲ್ಲಿ ಸರ್ವಸಾಮಾನ್ಯವಾಗಿ ನಡೆಯುವ ಎರಡನೆಯ ಶಸಚಿಕಿತ್ಸೆಯೆಂದರೆ ಗರ್ಭಾಶಯ ಛೇದನ! ಗರ್ಭಾಶಯ ಛೇದನ ನಡೆದು ಬಂದ ದಾರಿಯು ಅತ್ಯಂತ ಕುತೂಹಲಕರವಾಗಿಯೂ, ಭೀಭತ್ಸವಾಗಿಯೂ ಇದೆ.

ಮಹಿಳೆಯರ ಜನನಾಂಗಗಳನ್ನು ನಿಖರವಾಗಿ ಅರ್ಥ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ, ಬಾಹ್ಯ ಜನನಾಂಗಗಳು ಹಾಗೂ ಆಂತರಿಕ ಜನನಾಂಗಗಳು ಎಂದು ವಿಭಜಿಸುವುದುಂಟು. ಆಂತರಿಕ ಜನನಾಂಗಗಳಲ್ಲಿ ಯೋನಿ, ಗರ್ಭಾಶಯ, ಗರ್ಭನಾಳ ಅಥವಾ ಅಂಡನಾಳ ಹಾಗೂ ಅಂಡಾಶಯಗಳು ಮುಖ್ಯವಾದವು. ಅಂಡಾಶಯಗಳು ಸರಿಸುಮಾರು ತಿಂಗಳಿಗೊಮ್ಮೆ ಅಂಡವನ್ನು ಉತ್ಪಾದಿಸುತ್ತವೆ. ಆ ಅಂಡವು ಅಂಡನಾಳ ಅಥವಾ ಗರ್ಭನಾಳದ ಮೂಲಕ ಗರ್ಭಾಶಯವನ್ನು ಪ್ರವೇಶಿಸುತ್ತದೆ. ಗರ್ಭಾಶಯದಲ್ಲಿ ಪೂರ್ಣ ಬೆಳೆದ ಶಿಶುವು ಯೋನಿಯ ಮುಖಾಂತರ ಪ್ರಸವವಾಗುತ್ತದೆ.

ಮಹಿಳೆಯರಿಗೆ ತಾಯ್ತನದ ಭಾಗ್ಯವನ್ನು ನೀಡುವ ಗರ್ಭಾಶಯವನ್ನು ಕೆಲವು ಸಲ ಛೇದಿಸುವುದು ಅನಿವಾರ್ಯವಾಗುತ್ತದೆ. ಅವುಗಳಲ್ಲಿ ಬಹಳ ಮುಖ್ಯ
ವಾದದ್ದು ಗರ್ಭಾಶಯ ನಾರುಗಡ್ಡೆಗಳು (ಫೈಬ್ರಾ ಯ್ಡ್ಸ್). ಸಣ್ಣಪುಟ್ಟ ನಾರುಗಡ್ಡೆಗಳನ್ನು ಹಾಗೆಯೇ ಬಿಡಬಹುದು. ರಜೋನಿವೃತ್ತಿಯಾದ ಮೇಲೆ ಆ
ನಾರುಗಡ್ಡೆಗಳು ಸಹಜವಾಗಿ ಕರಗುತ್ತವೆ. ಕೆಲವು ಸಲ ನಾರುಗಡ್ಡೆಗಳು ಅಸಹಜ ಪ್ರಮಾಣದಲ್ಲಿ ಬೆಳೆದು, ಋತುವನ್ನು ಏರುಪೇರು ಮಾಡಿ, ಸಹಜ ಬದುಕನ್ನು ಅಸಹನೀಯವಾಗಿಸಿದಾಗ, ನಾರುಗಡ್ಡೆಯೊಡನೆ ಇಡೀ ಗರ್ಭಾಶಯವನ್ನು ಛೇದಿಸುವುದುಂಟು.

ಎಡೆಗೆಟ್ಟ ಗರ್ಭ ಒಳಪದರವು (ಎಂಡೋಮೆಟ್ರಿ ಯೋಸಿಸ್) ಎರಡನೆಯ ಪ್ರಮುಖ ಕಾರಣ. ಗರ್ಭಾಶಯದ ಒಳಪದರವು ಗರ್ಭಾಶಯದ ಒಳಗೇ
ಬೆಳೆಯಬೇಕಾದದ್ದು ನಿಯಮ. ಆದರೆ ಕೆಲವರಲ್ಲಿ ಕೆಲವು ಸಲ ಗರ್ಭಾಶಯದ ಹೊರಗೂ ಬೆಳೆಯಬಹುದು. ಇದು ಅನಿಯಮಿತ ರಕ್ತಸ್ರಾವ, ವಿಪರೀತ
ನೋವು ಹಾಗೂ ಸಂತಾನಹೀನತೆಗೆ (ಇನರ್ಟಿಲಿಟಿ) ಕಾರಣವಾಗಬಹುದು. ಇಂಥ ಸಂದರ್ಭದಲ್ಲಿ ಗರ್ಭಾಶಯ ಛೇದನ ಅನಿವಾರ್ಯ. ಕೆಲವು ಸಲ
ಗರ್ಭಕೋಶವು ತನ್ನ ಸ್ವಸ್ಥಾನದಿಂದ ಚ್ಯುತವಾಗಿ ಜಾರಿ ಬೀಳುತ್ತದೆ (ಪ್ರೊಲಾಪ್ಸ್ ಆಫ್ ಯೂಟೆರಸ್).

ಹಾಗೆಯೇ ಬಿಟ್ಟರೆ ಜಾರಿದ ಗರ್ಭಕೋಶದಲ್ಲಿ ಕ್ಯಾನ್ಸರ್ ಬೆಳೆಯಬಹುದು. ಹಾಗಾಗಿ ಗರ್ಭಾಶಯವನ್ನು ಛೇದಿಸುವುದೊಂದೇ ದಾರಿ. ಕೆಳಹೊಟ್ಟೆಯ ನೋವಿಗೆ ಅನೇಕ ಸಂದರ್ಭಗಳಲ್ಲಿ ನಿಖರ ಕಾರಣವನ್ನು ಪತ್ತೆಹಚ್ಚುವುದು ಅಸಾಧ್ಯವಾಗಬಹುದು. ಅಂಥ ಸಂದರ್ಭದಲ್ಲಿ ಗರ್ಭಾಶಯ ಛೇದನದಿಂದ ಉಪ ಶಮನವು ದೊರೆಯಬಹುದು. ಅಸಹಜ ಪ್ರಮಾಣದ ಋತುಸ್ರಾವ ಹಾಗೂ ಋತುಮಧ್ಯದ ಸ್ರಾವವು ವಿಪರೀತವಾದಾಗ ಮತ್ತು ಸಾಂಪ್ರದಾಯಿಕ ಚಿಕಿತ್ಸೆಗಳು ನಿರೀಕ್ಷಿತ ಉಪಶಮನವನ್ನು ನೀಡದಿದ್ದಾಗ ಗರ್ಭಾಶಯ ಛೇದನವನ್ನು ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸುವುದುಂಟು. ಇನ್ನು ಗರ್ಭಾಶಯ ಕ್ಯಾನ್ಸರಿಗಂತೂ ಗರ್ಭಾಶಯ ಛೇದನವೇ ಪ್ರಮುಖ ಚಿಕಿತ್ಸೆಯಾಗಿದೆ.

ವೈದ್ಯಕೀಯವಾಗಿ ಗರ್ಭಾಶಯ ಛೇದನವನ್ನು ಯೋನಿಯ ಮೂಲಕ (ಯೋನಿದ್ವಾರ ಗರ್ಭಾಶಯ ಛೇದನ) ಹಾಗೂ ಉದರ ಛೇದನದ (ಉದರದ್ವಾರ
ಗರ್ಭಾಶಯ ಛೇದನ) ಮೂಲಕ ಮಾಡುವರು. ಇತ್ತೀಚಿನ ದಿನಗಳಲ್ಲಿ ಉದರದರ್ಶಕಗಳ ಮೂಲಕವೂ ಚಿಕಿತ್ಸೆಯನ್ನು ಮಾಡುವುದು ಸಾಮಾನ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ರೋಬೋ ನೆರವಿನ ಚಿಕಿತ್ಸೆಯು ನಗರಪ್ರದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ವೈದ್ಯಕೀಯವಾಗಿ ಗರ್ಭಾಶಯ ಛೇದನಗಳಲ್ಲಿ ಒಳಪ್ರಭೇದ ಗಳುಂಟು. ಕೇವಲ ಗರ್ಭಾಶಯ ಛೇದನ, ಗರ್ಭ ಕೊರಳಿನ ಜತೆಯಲ್ಲಿ ಗರ್ಭಾಶಯ ಛೇದನ, ಇವೆರಡರ ಜತೆಯಲ್ಲಿ ಎರಡೂ ಗರ್ಭನಾಳಗಳ
ಛೇದನ ಅಥವಾ ಇವೆಲ್ಲದರ ಜತೆಯಲ್ಲಿ ಎರಡೂ ಅಂಡಾಶಯಗಳನ್ನು, ಅಂದರೆ ಯೋನಿಯನ್ನು ಬಿಟ್ಟು ಸಮಸ್ತ ಆಂತರಿಕ ಜನನಾಂಗಗಳನ್ನೂ  ಛೇದಿಸುವುದುಂಟು. ಯಾರಿಗೆ ಯಾವ ರೀತಿಯ ಶಸಚಿಕಿತ್ಸೆ ಸೂಕ್ತ ಎನ್ನುವುದನ್ನು ತಜ್ಞವೈದ್ಯರೇ ನಿರ್ಧರಿಸಬೇಕಾಗುತ್ತದೆ.

ಯೋನಿನಾಳಕ್ಕೆ ಅತ್ಯಂತ ನಿಕಟವಾಗಿ, ಅದರ ಮುಂಭಾಗದಲ್ಲಿ ಮೂತ್ರನಾಳ ಹಾಗೂ ಮೂತ್ರಾಶಯ ವಿರುತ್ತದೆ, ಹಾಗೆಯೇ ಹಿಂಭಾಗದಲ್ಲಿ ಮಲನಾಳ
ವಿರುತ್ತದೆ. ಇವುಗಳಿಗೆ ಸ್ವಲ್ಪವೂ ಹಾನಿಯಾಗದ ಹಾಗೆ ಶಸ್ತ್ರಚಿಕಿತ್ಸೆಯನ್ನು ಮಾಡುವುದು ಬಹಳ ಬಹಳ ಮುಖ್ಯವಾಗಿರುತ್ತದೆ. ಯೋನಿದ್ವಾರ ಗರ್ಭಾಶಯ ಛೇದನದ ಮೊದಲ ಉದಾಹರಣೆಯು ಕ್ರಿ.ಪೂ.೫೦ರ ಗ್ರೀಸ್ ದೇಶದ ವೈದ್ಯಕೀಯ ಇತಿಹಾಸದಲ್ಲಿ ದೊರೆಯುತ್ತದೆ. ಇದನ್ನು ಅಥೆನ್ಸ್ ನಗರದ ಥೆಮಿಸನ್ ನಡೆಸಿದ. ಈಫಿಸಸ್ ನಗರದ (ಇಂದಿನ ಟರ್ಕಿ) ಸೋರನಸ್ (ಕ್ರಿ.ಶ. ೧ರಿಂದ ೨ ನೆಯ ಶತಮಾನದ ನಡುವೆ) ಕ್ರಿ.ಶ.೧೨೦ರಲ್ಲಿ ಅಧಿಕೃತ ಗರ್ಭಾಶಯ ಛೇದನವನ್ನು ನಡೆಸಿದ. ಕೆಲವು ಸಲ ಪ್ರಸವವು ನಡೆಯುತ್ತಿರುವಾಗ, ಶಿಶುವಿನೊಡನೆ ಇಡೀ ಗರ್ಭಾಶಯವೇ ಮಗುಚಿಕೊಂಡು ಹೊರಗೆ ಬಂದುಬಿಡಬಹುದು. ಇದೊಂದು ಆಘಾತಕಾರಿ ಸನ್ನಿವೇಶ. ಹೀಗೆ ಹೊರಬಂದ ಗರ್ಭಾಶಯವನ್ನು ಅನೇಕ ಸಲ ಎಚ್ಚರಿಕೆಯಿಂದ ಒಳತಳ್ಳಬಹುದು. ಆದರೆ ಕೆಲವು ಸಲ ಒಳಗೆ ತಳ್ಳಲು ಅಸಾಧ್ಯವಾಗಬಹುದು.

ಅಂಥ ಸಮಯದಲ್ಲಿ ಗರ್ಭಾಶಯವನ್ನು ಛೇದಿಸಬೇಕಾಗುತ್ತದೆ. ಓರ್ವ ಮಹಿಳೆಯ ಗರ್ಭಾಶಯವು ಮಗುಚಿಬಿದ್ದು ಕೊಳೆಯುವುದಕ್ಕೆ ಆರಂಭವಾಗಿತ್ತು.
ಇದನ್ನು ಸೋರನಸ್ ಛೇದಿಸಿದ. ೧೧ನೆಯ ಶತಮಾನ ದಲ್ಲಿದ್ದ ಅರಬ್ ವೈದ್ಯ ಅಲ್-ಸಹಾರಾವಿಯಾಸ್, ಜಾರಿದ ಗರ್ಭಕೋಶವನ್ನು ಸ್ವಸ್ಥಾನದಲ್ಲಿ ಇರಿಸಲಾಗದಿದ್ದರೆ, ಅದನ್ನು ಛೇದಿಸಲೇಬೇಕು ಎಂದು ತನ್ನ ಅಭಿಪ್ರಾಯವನ್ನು ದಾಖಲಿಸಿದ. ಮಧ್ಯಯುಗದಲ್ಲಿ ಅಪರೂಪಕ್ಕೆ ಗರ್ಭಾಶಯ ಛೇದನದ ಶಸಚಿಕಿತ್ಸೆಗಳು ನಡೆಯುತ್ತಿದ್ದವು. ಆದರೆ ಈ ಶಸ್ತ್ರಚಿಕಿತ್ಸೆಗಳಲ್ಲಿ ಸಾಮಾನ್ಯವಾಗಿ ಮೂತ್ರವಾಹಕ ನಾಳಕ್ಕೋ ಅಥವಾ ಮೂತ್ರಾಶಯಕ್ಕೋ ಹಾನಿ ಯಾಗುತ್ತಿತ್ತು. ಆಗ ಯೋನಿ ಮತ್ತು ಮೂತ್ರವ್ಯವಸ್ಥೆಯ ನಡುವೆ ಒಂದು ಕಂಡಿ ಏರ್ಪಟ್ಟು ಮೂತ್ರವು ಯೋನಿಯ ಮೂಲಕವೂ ಹೊರ ಹರಿಯುತ್ತಿತ್ತು. ಇಂಥ ಮಹಿಳೆಯರು ಹೆಚ್ಚು ಕಾಲ ಬದುಕುತ್ತಿರಲಿಲ್ಲ.

ಮಧ್ಯಯುಗದಲ್ಲಿ ನಡೆದ ಮೂರು ಗರ್ಭಾಶಯ ಛೇದನದ ಉದಾಹರಣೆಗಳು ಇತಿಹಾಸದಲ್ಲಿ ದಾಖಲಾಗಿವೆ. ಮೊದಲನೆಯದು ೧೫೦೭ರಲ್ಲಿ ಇಟಲಿಯ
ಜಾಕೋಪೋ ಬೆರೆಂಗಾರಿಯೊ ದ ಕಾಪ್ರಿ ಒಂದು ಗರ್ಭಾಶಯ ಛೇದನವನ್ನು ನಡೆಸಿದ. ನಂತರ ೧೫೬೦ರಲ್ಲಿ ಆಂದೇರಿಯಾಸ್ ದ ಕ್ರೂಸೆ ಹಾಗೂ ೧೬೭೫ ರಲ್ಲಿ ನ್ಯೂರೆಂಬರ್ಗ್ ನಗರದ ವಾಕನರ್ ನಡೆಸಿದ. ಆದರೆ ಫಲಿತಾಂಶ ಮಾತ್ರ ಆಶಾದಾಯ ಕವಿರಲಿಲ್ಲ. ೧೭ನೆಯ ಶತಮಾನದ ಯುರೋಪಿನಲ್ಲಿ
ಒಂದು ಅಪರೂಪದ, ಕುತೂಹಲಕರವಾದ ಹಾಗೂ ಅಪಾಯಕಾರಿಯಾದ ಆದರೆ ಯಶಸ್ವೀ ಗರ್ಭಾಶಯ ಛೇದನವನ್ನು -ತ್ ಹೋವರ್ಥ್ ಎಂಬ
ಮಹಿಳೆಯು ಸ್ವಯಂ ಮಾಡಿಕೊಂಡಳು.

ಈಕೆಯು ರೈತಾಪಿ ಹೆಣ್ಣು ಮಗಳಾಗಿದ್ದಳು. ಹಾಗಾಗಿ ಈಕೆಯು ಆಗಾಗ್ಗೆ ತಲೆಯಮೇಲೆ ಹೊರೆಯನ್ನು ಹೊತ್ತುಕೊಳ್ಳಬೇಕಾಗಿತ್ತು. ಭಾರದ ಹೊರೆಯನ್ನು ಎತ್ತಿ ತಲೆಯ ಮೇಲೆ ಇಟ್ಟುಕೊಳ್ಳುತ್ತಿರುವಂತೆಯೇ ಆಕೆಯ ಗರ್ಭಾಶಯವು ಪುಸಕ್ಕನೆ ಜಾರಿ ಹೊರಬೀಳುತ್ತಿತ್ತು. ಆಗ ಆಕೆಗೆ ವಿಪರೀತ ಮುಜುಗರವಾಗಿ ನಡೆಯುವುದೂ ಕಷ್ಟವಾಗುತ್ತಿತ್ತು. ಜಾರಿದ ಗರ್ಭಾಶಯವನ್ನು ಒಳತಳ್ಳಿ ಕೆಲಸವನ್ನು ಮುಂದುವರಿಸಬೇಕಾಗುತ್ತಿತ್ತು. ಹೀಗೆ ಪದೇ ಪದೆ ಆಗುತ್ತಿದ್ದಾಗ ಒಂದು ದಿನ ಆಕೆಗೆ ವಿಪರೀತ ಬೇಸರ ಬಂದಿತು. ಜಾರಿದ ಗರ್ಭಾಶಯವನ್ನು ಎಡಗೈಯಲ್ಲಿ ಹಿಡಿದುಕೊಂಡು ಬಲವಾಗಿ ಎಳೆದಳು.

ಒಂದು ಕಿರುಗತ್ತಿಯಿಂದ ಚರಕ್ಕನೇ ಗರ್ಭಾಶಯವನ್ನು ಕೊಯ್ದೇ ಬಿಟ್ಟಳು! ಹಾಗೆ ಕೊಯ್ದುಕೊಂಡಾಗ ವಿಪರೀತ ರಕ್ತಸ್ರಾವವಾಯಿತು. ಆದರೆ ಅದೃಷ್ಟ
ವಶಾತ್ ರಕ್ತಸ್ರಾವವು ತನಗೆ ತಾನೇ ನಿಂತಿತು. ಕೊಯ್ಯುವ ಭರದಲ್ಲಿ ಮೂತ್ರಾಶಯಕ್ಕೆ ತುಸು ಪೆಟ್ಟಾಯಿತು. ಮೂತ್ರಾಶಯ ಹಾಗೂ ಯೋನಿ ದ್ವಾರದ ನಡುವೆ ರಂಧ್ರವೇರ್ಪಟ್ಟು ಮೂತ್ರವೂ ಎರಡೂ ಕಡೆ ಹರಿಯುತ್ತಿತ್ತು. ಈ ಸಮಸ್ಯೆಯನ್ನು ಹೇಗೋ ಸಹಿಸಿಕೊಂಡು ಆಕೆಯು ಮುಂದೆ ಸಾಕಷ್ಟು
ವರ್ಷಗಳ ಕಾಲ ಬದುಕಿದಳು. ಈ ಪ್ರಕರಣವನ್ನು ೧೬೭೦ರಲ್ಲಿ ಪೆರ್ಸಿವಾಲ್ ವಿಲ್ಲಭಿ ಎಂಬ ನರ್ಸ್ (ವೈದ್ಯ?) ದಾಖಲಿಸಿದ್ದಾರೆ.

೧೮ನೆಯ ಶತಮಾನದಲ್ಲಿ ಗರ್ಭಾಶಯ ಜಾರಿಕೆ ಹಾಗೂ ಗರ್ಭಾಶಯ ಕ್ಯಾನ್ಸರಿಗಾಗಿ, ಗರ್ಭಾಶಯ ಛೇದನಗಳು ನಡೆಯುತ್ತಿದ್ದವು. -ಡ್ರಿಕ್ ಬೆಂಜ಼ಮಿನ್
ಓಸಿಯಾಂಡರ್ ಎಂಟು ಛೇದನಗಳನ್ನು ನಡೆಸಿದ. ಆದರೆ ರೋಗಿಗಳು ಬದುಕುಳಿಯಲಿಲ್ಲ. ೧೮೧೨ರಲ್ಲಿ ಮಿಲನ್ ನಗರದ ಪಲ್ಲೇಟ್ಟ ಗರ್ಭಕೊರಳ ಕ್ಯಾನ್ಸರಿಗಾಗಿ, ಕೇವಲ ಗರ್ಭಕೊರಳನ್ನು ಛೇದಿಸಹೊರಟ. ಆದರೆ ಛೇದಿಸುವಾಗ ಇಡೀ ಗರ್ಭಾಶಯವೇ ಛೇದನವಾಯಿತು. ಆಕೆ ನಂಜಿನ ಕಾರಣ ಮೂರು
ದಿನಗಳಲ್ಲಿ ಮರಣಿಸಿದಳು.

೧೮ನೆಯ ಶತಮಾನದಲ್ಲಿ ನಡೆದ ಎಲ್ಲ ರೀತಿಯ ಗರ್ಭಾಶಯ ಛೇದನಗಳಲ್ಲಿ, ಚಿಕಿತ್ಸೆಯನ್ನು ಪಡೆದ ಶೇ.೯೦ರಷ್ಟು ಮಹಿಳೆಯರು ಜೀವವನ್ನು ಕಳೆದುಕೊಳ್ಳುತ್ತಿದ್ದರು. ಫ್ರಾನ್ಸ್ ದೇಶದ ಜೀನ್ ಲೂಯಿ ಬೋದಿಲಾಕ್ ಕೃತಕವಾಗಿ ಗರ್ಭಾಶಯವು ಜಾರುವಂತೆ ಮಾಡುತ್ತಿದ್ದ. ಆನಂತರ ಅದನ್ನು ಛೇದಿಸುತ್ತಿದ್ದ. ಹೀಗೆ ೧೬ ವರ್ಷಗಳಲ್ಲಿ ೨೩ ಯೋನಿದ್ವಾರ ಗರ್ಭಾಶಯ ಛೇದನವನ್ನು ನಡೆಸಿದ. ೧೮೧೩ರಲ್ಲಿ ಜರ್ಮನಿಯ ಗೊಟಿಂಜೆನ್ ನಗರದ
ಕಾನ್ರಾಡ್ ಲೇಗೆನ್ಬೆಕ್ ಮೊದಲ ಬಾರಿಗೆ ಯೋಜಿತ ಗರ್ಭಾಶಯ ಛೇದನವನ್ನು ನಡೆಸಿದ. ಆದರೆ ಈ ಬಗ್ಗೆ ಯಾರಿಗೂ ಹೇಳಲಿಲ್ಲ. ಇದನ್ನು ೧೮೧೭ರಲ್ಲಿ
ವರದಿಮಾಡಿದ. ಅವನ ವರದಿಯನ್ನು ವೈದ್ಯರು ನಂಬಲಿಲ್ಲ. ಗರ್ಭಾಶಯ ಛೇದನಕ್ಕೊಳಗಾದವರೂ ಇನ್ನೂ ಬದುಕಿದ್ದಾರೆ ಎಂದರೆ ಹೇಗೆ ತಾನೆ ನಂಬಲು ಸಾಧ್ಯ? ಯಾರೂ ನಂಬಲೇ ಇಲ್ಲ.

ಕೊನೆಗೆ ೨೬ ವರ್ಷಗಳ ನಂತರ, ಆಕೆಯು ವೃದ್ಧಾಪ್ಯದ ಕಾರಣ ಸಹಜ ಸಾವನ್ನಪ್ಪಿದಳು. ಆಕೆಯ ಶವವಿಚ್ಛೇದನವನ್ನು ಮಾಡಿ, ಒಡಲಿನಲ್ಲಿ ಗರ್ಭಾಶಯವಿಲ್ಲದಿರುವುದನ್ನು ಸಾರಿದರು. ಆಗ ಅವರಿಗೆ ಕಾನ್ರಾಡ್ ಮಾತಿನ ಮೇಲೆ ನಂಬಿಕೆ ಬಂದಿತು. ೧೯ ಮತ್ತು ೨೦ನೆಯ ಶತಮಾನಗಳಲ್ಲಿ ಉತ್ತಮ
ಅರಿವಳಿಕೆ, ಉತ್ತಮ ನಂಜುರಾಹಿತ್ಯ ಪರಿಸರ ಹಾಗೂ ಅತ್ಯುತ್ತಮ ಶಸಚಿಕಿತ್ಸಾ ಉಪಕರಣಗಳು ಲಭ್ಯವಾದವು. ಇವುಗಳ ಲಾಭವು ಗರ್ಭಾಶಯ  ಛೇದನಕ್ಕೂ ಲಭಿಸಿ ಸಾವುನೋವಿನ ಪ್ರಮಾಣವು ಶೇ.೨-೩ಕ್ಕೆ ಇಳಿಯಿತು. ೧೯೩೪ರಲ್ಲಿ ಷಿಕಾಗೋ ನಗರದ ನೊಬೆಲ್ ಸ್ಪ್ರೋಟ್ ಹೀನೆ ೬೨೭ ಯೋನಿದ್ವಾರ ಗರ್ಭಾಶಯ ಛೇದನವನ್ನು ನಡೆಸಿದ. ಅವರಲ್ಲಿ ಮೂವರು ಮಾತ್ರ ಅನಿವಾರ್ಯ ಕಾರಣಗಳಿಂದ ಮರಣಿಸಿದರು.

ಉದರದ್ವಾರ ಗರ್ಭಾಶಯ ಛೇದನದ ಮೊದಲ ಪ್ರಕರಣವು ೧೮೦೯ರಲ್ಲಿ ನಡೆಯಿತು. ಜೇನ್ ಟಾಡ್ ಕ್ರಾ-ರ್ಡ್ ಎಂಬ ಮಹಿಳೆ. ಈಕೆಯ ಒಡಲಿನಲ್ಲಿ
೧೦.೨ ಕೆ.ಜಿ. ತೂಕದ ಅಂಡಾಶಯ ಗಡ್ಡೆಯಿತ್ತು. ೪೬ ವರ್ಷದ ೫ ಮಕ್ಕಳ ತಾಯಿಯಾದವಳು ಪ್ರಸವಕ್ಕೆಂದು ಬಂದಿದ್ದಳು. ಆದರೆ ಪ್ರಸವವು ಸರಾಗವಾಗಿ ಆಗಲಿಲ್ಲ. ಪರೀಕ್ಷೆ ಮಾಡಿದರೆ ಉದರದಲ್ಲಿ ಗಡ್ಡೆ ಇರುವುದು ಗೊತ್ತಾಯಿತು. ಆಕೆ ವೈದ್ಯರ ಪ್ರಯೋಗಕ್ಕೆ ಪಶುವಾಗಲು ಒಪ್ಪಿದಳು. ಕೆಂಟುಕಿಯ ಶಸವೈದ್ಯ ಇ-ಮ್ ಮ್ಯಾಕ್‌ಡೊವೆಲ್, ಯಾವುದೇ ರೀತಿಯ ಅರಿವಳಿಕೆಯನ್ನು ನೀಡದೆ, ಉದರವನ್ನು ಛೇದಿಸಿ ಈ ಗಡ್ಡೆಯನ್ನು ಹಾಗೂ ಮಗುವನ್ನು ತೆಗೆದ. ಎಲ್ಲ ೨೫ ನಿಮಿಷಗಳಲ್ಲಿ ಮುಗಿದುಹೋಯಿತು.

ಈ ಶಸ್ತ್ರಚಿಕಿತ್ಸೆಯ ನಂತರ ಆಕೆಯು ೩೦ ವರ್ಷಗಳ ಕಾಲ ಬದುಕಿದ್ದಳು. ಮ್ಯಾಕ್‌ಡೊವೆಲ್, ತನ್ನ ಜೀವಮಾನದಲ್ಲಿ ಇಂಥ ೧೩ ಶಸಚಿಕಿತ್ಸೆಗಳನ್ನು ನಡೆಸಿದ. ಇಂಗ್ಲೆಂಡಿನ ಮ್ಯಾಂಚೆಸ್ಟರ್ ನಗರದಲ್ಲಿ ಚಾರ್ಲ್ಸ್ ಕ್ಲೇ ಬ್ರಿಟನ್ನಿನ ಮೊದಲ ಉದರದ್ವಾರ ಗರ್ಭಾಶಯ ಛೇದನವನ್ನು ನಡೆಸಿದ. ದೊಡ್ಡ ನಾರುಗಡ್ಡೆಯನ್ನು ಹೊರತೆಗೆದ. ಆದರೆ ವಿಪರೀತ ರಕ್ತಸ್ರಾವದ ಕಾರಣ ಆಕೆ ಮರಣಿಸಿದಳು. ಈತ ಇನ್ನೊಂದು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ. ಆದರೆ ದಾದಿಯರು ರೋಗಿಯನ್ನು ಹಾಸಿಗೆಯ ಮೇಲೆ ವರ್ಗಾಯಿಸುವಾಗ ಕೆಳಕ್ಕೆ ಬೀಳಿಸಿದರು. ಪೆಟ್ಟಿನ ಕಾರಣ ಆಕೆ ಮರಣಿಸಿದಳು. ಕೊನೆಗೆ ಪ್ಯಾರಿಸ್ ನಗರದ ವೈದ್ಯಕೀಯ ಅಕಾಡೆಮಿಯು, ಶೇ.೭೦-೯೦ ರೋಗಿಗಳು ಸಾಯುತ್ತಿದ್ದ ಕಾರಣ, ಈ ಉದರದ್ವಾರ ಗರ್ಭಾಶಯ ಛೇದನ ಶಸ್ತ್ರಚಿಕಿತ್ಸೆ ಯನ್ನು ನಿಷೇಧಿಸಿತು.

೧೯೪೦ರ ದಶಕದಲ್ಲಿ ಅರಿವಳಿಕೆ, ರಕ್ತಪೂರಣ, ಪ್ರತಿಜೈವಿಕ ಔಷಧಗಳು ಹಾಗೂ ನಂಜುರಾಹಿತ್ಯ ಪರಿಸರವು ಎಲ್ಲ ಕಡೆ ದೊರೆತ ಮೇಲೆಯೇ ಉದರದ್ವಾರ ಗರ್ಭಾಶಯ ಛೇದನಗಳು ಸುರಕ್ಷಿತವಾಗಿ ನಡೆಯಲಾರಂಭಿಸಿದವು. ಈಗ ಉದರದ್ವಾರ ಗರ್ಭಾಶಯ ಛೇದನವನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ ಹಾಗೂ ರೋಬೋ ಟಿಕ್ ಸರ್ಜರಿಯೂ ಜನಪ್ರಿಯವಾಗುತ್ತಿದೆ. ಇಂದು ಗರ್ಭಾಶಯ ಛೇದನದ ಕಾರಣ ತಾಯಂದಿರು ಸಾಯುವ ಪ್ರಮಾಣ ೦.೬-೧.೬ರಷ್ಟು ಕಡಿಮೆಯಾಗಿದೆ. ಇಂಥ ಸಾವುಗಳು ಸಾಮಾನ್ಯವಾಗಿ ಇತರ ಕಾರಣಗಳಿಂದ ಸಂಭವಿಸುತ್ತವೆ.