Wednesday, 11th December 2024

90ಕ್ಕೂ ಹೆಚ್ಚು ಬಾರಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದ್ದು ಮರೆತರೆ ?

ಅಭಿಮತ

ಡಾ.ಜಗದೀಶ ಮಾನೆ

ನೂತನ ಸರಕಾರದ ಮೊದಲ ಕಲಾಪ ನಡೆಯುತ್ತಿರುವ ವೇಳೆ ರಾಹುಲ್ ಗಾಂಧಿ ತಮ್ಮ ಹಳೆ ವರಸೆಯನ್ನ ಮತ್ತೆ ಶುರು ಹಚ್ಚಿಕೊಂಡಿದ್ದಾರೆ. ಲೋಕಸಭೆ ಯಲ್ಲಿ ಸಂವಿಧಾನದ ಪ್ರತಿಗಳನ್ನು ಹಿಡಿದು ಕೋಲಾಹಲ ಸೃಷ್ಟಿಸುತ್ತ ತಾವೇ ಸಂವಿಧಾನದ ರಕ್ಷಕರಂತೆ ಪ್ರತಿಭಟನೆ ಮಾಡುತ್ತಿದ್ದರು.

ರಾಹುಲ್ ಗಾಂಧಿಗೆ ಅದೆಷ್ಟು ಆವೇಶ ಆಕ್ರೋಶ ಅಬ್ಬಬ್ಬಾ…! ರಾಹುಲ್ ಗಾಂಧಿ ಎದೆಯುಬ್ಬಿಸಿ, ‘ಯಾವುದೇ ದುಷ್ಟ ಶಕ್ತಿಯಿಂದ ಈ ದೇಶದ ಸಂವಿಧಾನ
ವನ್ನು ಹಾಳು ಮಾಡುವುದಕ್ಕೆ ಸಾಧ್ಯವಿಲ್ಲ’ ಅಂತ ಹೇಳಿದರು. ಇಷ್ಟೊಂದು ಆತ್ಮವಿಶ್ವಾಸವಿರುವ ರಾಹುಲ್‌ಗೆ ಈ ಹೋರಾಟದ ಅಗತ್ಯವಾದರೂ ಏನಿತ್ತು? ಅಷ್ಟಕ್ಕೂ ರಾಹುಲ್ ಗಾಂಧಿ ಸಂವಿಧಾನಕ್ಕೆ ಅಪಾಯವಿದೆ ಅಂತ ಪದೇಪದೇ ಗುಲ್ಲೆಬ್ಬಿಸುತ್ತಿದ್ದಾರಲ್ಲ!

ಇಷ್ಟು ವರ್ಷಗಳ ಕಾಲ ಸಂವಿಧಾನದ ಮೇಲೆ ಗಧಾ ಪ್ರಹಾರ ಮಾಡಿದವರು ಯಾರು? ಆ ದಿನವನ್ನೊಮ್ಮೆ ಹಾಗೆ ನೆನಪಿಸಿಕೊಳ್ಳಿ, ೧೯೭೫ ರಿಂದ
೧೯೭೭ರವರೆಗೆ ಹೇರಿದ್ದ ತುರ್ತು ಪರಿಸ್ಥಿತಿಯ ಬಗೆಗಿನ ಅರಿವು ನಮಗೆಲ್ಲರಿಗೂ ಆಗಲೇ ಇದೆ; ಆ ಸಂದರ್ಭದಲ್ಲಿ ಮಾಡಿದ ತಿದ್ದುಪಡಿಗಳು ಒಂದಾ ಎರಡಾ ಅಬ್ಬಬ್ಬಾ! ೧೯೭೬ ನವೆಂಬರ್ ೨ ರಲ್ಲಿ ಬಂದ ತಿದ್ದುಪಡಿಯ ಸಂಖ್ಯೆ ೪೨. ಅದು ಇಂದಿರಾಗಾಂಧಿಯವರು ರಾಯ್‌ಬರೇಲಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ತನ್ನ ಗೆಲುವಿಗಾಗಿ ಸರಕಾರದ ಯಂತ್ರವನ್ನೇ ದುರುಪಯೋಗ ಪಡಿಸಿಕೊಂಡಿರುವ ಆರೋಪ ಅವರ ಮೇಲಿತ್ತು. ಇದರ ಅನ್ವಯ ಅಲಹಾ
ಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರು ಮುಂದಿನ ಆರು ವರ್ಷಗಳ ಕಾಲ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರಿಯದಂತೆ ತೀರ್ಪು ನೀಡಿತ್ತು.

ಇಂದಿರಾ ಗಾಂಧಿ ತಾನು ಪ್ರಧಾನಿ ಎಂಬ ದುರಹಂಕಾರದಲ್ಲಿ ಇದನ್ನು ಪ್ರಶ್ನಿಸಿ ಜೂನ್ ೨೩ ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಾರೆ. ಸುಪ್ರೀಂ ಕೋರ್ಟ್ ಕೂಡಾ ಅದೇ ತೀರ್ಪನ್ನು ಎತ್ತಿ ಹಿಡಿಯುತ್ತದೆ. ಆಗ ದುರಹಂಕಾರಿ ಇಂದಿರಾಗಾಂಧಿ ‘ದೇಶದಲ್ಲಿ ನನ್ನನ್ನ ಬಿಟ್ಟರೆ ಆಡಳಿತ ಮಾಡುವುದಕ್ಕೆ
ಯಾರಿಂದಲೂ ಸಾಧ್ಯವಿಲ್ಲ’ ಎಂಬ ಮನಸ್ಥಿತಿಯಲ್ಲಿ ಅಂದು ರಾತ್ರಿ ೧೧ ಗಂಟೆಗೆ ಏಕಪಕ್ಷಿಯ ನಿರ್ಧಾರದೊಂದಿಗೆ ರಾಷ್ಟ್ರಪತಿಗಳಿಗೆ ತುರ್ತು ಪರಿಸ್ಥಿತಿಯ ಪ್ರಸ್ತಾವ ಕಳಿಸುತ್ತಾರೆ.

ಪ್ರಸ್ತಾವನೆಗೆ ರಾಷ್ಟ್ರಪತಿಗಳು ಕೂಡಾ ಹಿಂದೆ ಮುಂದೆ ಏನನ್ನೂ ಯೋಚಿಸದೆ ಸಹಿ ಹಾಕುತ್ತಾರೆ. ಮರುದಿನ ಬೆಳಿಗ್ಗೆ ೬ ಗಂಟೆಯ ವೇಳೆಗೆ ಇಂದಿರಾ ಗಾಂಧಿಯ ಆಪ್ತ ಸಹಾಯಕ ಆರ್.ಕೆ.ಧವನ್ ಕ್ಯಾಬಿನೆಟ್ ಮಂತ್ರಿಗಳಿಗೆಲ್ಲ ಕರೆಮಾಡಿ ಕೂಡಲೇ ಕ್ಯಾಬಿನೆಟ್ ಮೀಟಿಂಗ್‌ಗೆ ಕಡ್ಡಾಯವಾಗಿ ಹಾಜರಾಗು ವಂತೆ ತಿಳಿಸುತ್ತಾನೆ. ಆ ಸಭೆಯ ವಿಷಯ ಯಾರೊಬ್ಬರಿಗೂ ಗೊತ್ತಿರಲಿಲ್ಲವಾದರೂ ಆತಂಕದಲ್ಲಿಯೇ ಎಲ್ಲರೂ ಹಾಜರಾಗಿದ್ದರು. ಆಗ ಇಂದಿರಾರವರು ನಿನ್ನೆ ರಾತ್ರಿಯಿಂದ ತುರ್ತು ಪರಿಸ್ಥಿತಿ ಜಾರಿಯಾಗಿದೆ, ಮತ್ತು ಎಲ್ಲರೂ ಎಚ್ಚರಿಕೆಯಿಂದಿರಲು ತಿಳಿಸಿ ಸಭೆ ಮುಗಿಸುತ್ತಾರೆ.

ರೇಡಿಯೋದ ಮುಂದೆ ಕುಳಿತು ‘ಇನ್ನು ಮುಂದೆ ಎಲ್ಲವೂ ಸರಕಾರದ ಕಂಟ್ರೋಲ್ ನಲ್ಲಿರುತ್ತದೆ, ಯಾವುದೇ ಹಕ್ಕುಗಳಿರುವುದಿಲ್ಲ ಎಂದು ಘೋಷಿಸು ತ್ತಾರೆ’ ಆ ಘೋಷಣೆಯ ಕೆಲವೇ ಗಂಟೆಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ, ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ಲಾಲಕೃಷ್ಣ ಅಡ್ವಾಣಿ, ಮುರುಳಿ ಮನೋಹರ ಜೋಷಿ, ಜಾರ್ಜ್ ಫೆರ್ನಾಂಡಿಸ್ ಹೀಗೆ ಎಲ್ಲ ದೊಡ್ಡ ದೊಡ್ಡ ನಾಯಕರನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು.

ಸರಕಾರದ ವಿರುದ್ಧ ಯಾರೊಬ್ಬರೂ ಕೆಮ್ಮುವಂತಿರಲಿಲ್ಲ. ಪ್ರತಿಭಟನೆ ಮಾಡಲು ಮುಂದಾದವರನ್ನು ಮುಲಾಜಿಲ್ಲದೇ ಜೈಲಿಗೆದಬ್ಬಿದರು. ಅದೆಷ್ಟೋ ಪತ್ರಕರ್ತರು ಜೈಲು ಪಾಲಾದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನು ಆಗಬಾರದಿತ್ತೋ ಅದೇ ನಡೆದಿತ್ತು. ಆ ಸಂದರ್ಭದಲ್ಲಿ ಇಂದಿರಾಗಾಂಧಿ
ಸಂವಿಧಾನಕ್ಕೊಂದು ಹೊಸ ತಿದ್ದುಪಡಿ ಮಾಡಿದ್ದರು. ಒಂದು ರಾಜ್ಯಕ್ಕೆ ರಾಷ್ಟ್ರಪತಿ ಆಳ್ವಿಕೆಯ ಆರು ತಿಂಗಳಿದ್ದ ಆ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿ ಆದೇಶ ಹೊರಡಿಸಿದ್ದರು.

ನಮಗೆಲ್ಲ ಗೊತ್ತಿದ್ದಂತೆ ಈ ದೇಶದ ಸಂವಿಧಾನವು ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು, ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಪ್ರತಿಭಟನ ಹಕ್ಕು, ಪತ್ರಿಕಾ ಸ್ವಾತಂತ್ರ್ಯ ವನ್ನು ನೀಡಿದೆ. ತುರ್ತು ಪರಿಸ್ಥಿತಿಯ ಸಂದರ್ಭವಾಗಿ ತಿದ್ದುಪಡಿ ಮಾಡಲಾಗಿತ್ತು. ವಾಸ್ತವವಾಗಿ ಎಂತಹ ಪರಿಸ್ಥಿತಿಯಲ್ಲಿ ತುರ್ತು ಪರಿಸ್ಥಿತಿಯನ್ನು ಹೇರೋದಕ್ಕೆ ನಮ್ಮ ಸಂವಿಧಾನ ಅವಕಾಶ ಕೊಟ್ಟಿದೆ ಗೊತ್ತಾ? ದೇಶದಲ್ಲಿ ಏನಾದರೂ ದೊಡ್ಡಮಟ್ಟದ ಗಲಾಟೆಗಳಾಗಿ ಕಾನೂನು ವ್ಯವಸ್ಥೆ ಹದಗೆಟ್ಟಿದ್ದರೆ ಅಥವಾ ಬಾಹ್ಯ ಯುದ್ಧದ ಸಂದರ್ಭಗಳಾಗಿರ ಬಹುದು ಆ ಹೊತ್ತಿನಲ್ಲಿ ತುರ್ತು ಪರಿಸ್ಥಿತಿ ಹೇರುವ ಅಧಿಕಾರವಿದೆ. ಆದರೆ ಈ ಹೈಡ್ರಾಮಾ ಎಲ್ಲ ಕೇವಲ ಒಂದು ಪದವಿಯನ್ನು ಉಳಿಸಿಕೊಳ್ಳುವುದಕ್ಕೆ. ವೈಯಕ್ತಿಕ ಸ್ವಾರ್ಥದ ಅಧಿಕಾರಕ್ಕೋಸ್ಕರ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ವಾಗಿ ಕೈಗೊಂಡ ಈ ಕ್ರಮ ಇದು ಹಾಡು ಹಗಲ ಮಾಡಿರುವ ಸಂವಿಧಾನದ ಕಗ್ಗೊಲೆ ಅಲ್ಲವೇ!

ಇಂದಿರಾ ಗಾಂಧಿಯವರ ಅಧಿಕಾರ ದಾಹದ ಎಷ್ಟಿತ್ತೆಂದರೆ, ಭಾರತೀಯ ಸಂವಿಧಾನವು ರಾಜ್ಯ ಹಾಗೂ ಕೇಂದ್ರ ಸರಕಾರಗಳ ನಡುವೆ ಪ್ರತಿಯೊಂದು ವಿಚಾರದಲ್ಲಿ ಹೇಗೆ ಅಧಿಕಾರ ಹಂಚಿಕೊಳ್ಳಬೇಕೆಂಬುದನ್ನು ಕರಾರುವಕ್ಕಾಗಿ ಹೇಳಿದೆ. ಇಲ್ಲಿ ತಿದ್ದುಪಡಿ ತರಬೇಕಾದರೆ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಒಮ್ಮತದ ಒಪ್ಪಿಗೆ ಬೇಕಾಗುತ್ತದೆ. ಆದರೆ ಇಂದಿರಾ ಗಾಂಧಿಯವರು ರಾಜ್ಯಗಳ ಮೇಲೂ ಬೇಕಾಬಿಟ್ಟಿಯಾಗಿ ತುರ್ತು ಪರಿಸ್ಥಿತಿ ಹೇರಿದ್ದರು. ಇದುವ ರೆಗೂ ಒಟ್ಟು ೧೩೨ ಬಾರಿ ವಿವಿಧ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಡಳಿತವನ್ನು ಹೇರಲಾಗಿತ್ತು. ಇದರಲ್ಲಿ ೯೦ಕ್ಕಿಂತ ಹೆಚ್ಚು ಸಲ ತುರ್ತುಸ್ಥಿತಿ ಯನ್ನು ಕಾಂಗ್ರೆಸ್ ಸರಕಾರದ ಅವಧಿಯ ಹೇರಲಾಗಿದೆ.

ಅದನ್ನು ರಾಹುಲ್ ಗಾಂಧಿ ಮರೆತರೇ? ಅದರಲ್ಲೂ ಇಂದಿರಾಗಾಂಧಿ ಒಬ್ಬರೇ ಸುಮಾರು ೫೦ ಬಾರಿ ರಾಷ್ಟ್ರಪತಿ ಆಡಳಿತ ಹೇರಿದ್ದರು. ಇದಕ್ಕಿಂತಲೂ ಕರಾಳ ಅಂದ್ರೆ, ೧೯೮೦ರ ಸಂದರ್ಭ ದಲ್ಲಿ ಏಕಾಏಕಿ ೯ ರಾಜ್ಯಗಳ ಮೇಲೆ ರಾಷ್ಟ್ರಪತಿ ಆಳ್ವಿಕೆಯನ್ನು ಘೋಷಿಸುತ್ತಾರೆ. ಮಧ್ಯಪ್ರದೇಶ ಬಿಹಾರ ರಾಜಸ್ಥಾನಗಳಲ್ಲಿ ಬಹುಮತದ ಸರಕಾರವಿತ್ತು ಮತ್ತು ಆ ಸರಕಾರಗಳ ಮೇಲೆ ಯಾವುದೇ ಆರೋಪಗಳಿರಲಿಲ್ಲ ಆದರೂ ಇಂದಿರಾಗಾಂಧಿ ಟಕಾಟಕ್, ಟಕಾಟಕ್ ಅಂತ ಸರಕಾರಗಳನ್ನು ಉರುಳಿಸಿ ರಾಷ್ಟ್ರಪತಿ ಆಡಳಿತ ಹೇರುತ್ತಾರೆ. ಹಾಗೆ ನೆಹರೂ ಕೂಡಾ ಕಮ್ಯುನಿಸ್ಟ್ ಸರಕಾರ ಇದ್ದ ಪಂಜಾಬ್ ಮತ್ತು ಕೇರಳದಲ್ಲಿ ಯಾವ ಮುಲಾಜಿಲ್ಲದೆ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದ್ದು ನೆನಪಿದೆ.

ಇಂದಿರಾ ಗಾಂಧಿಯ ಹತ್ಯೆಯ ನಂತರ ರಾಜೀವ್ ಗಾಂಧಿ ಪ್ರಧಾನಿಯಾಗಿ ಸಂವಿಧಾನದ ವಿರುದ್ಧವಾಗಿ ಕೈಗೊಂಡ ಆ ಒಂದೇ ಒಂದು ನಿರ್ಧಾರಕ್ಕೆ ಇಡೀ ದೇಶವೇ ತಲೆತಗ್ಗಿಸಿತ್ತು. ಮಧ್ಯ ಪ್ರದೇಶದಲ್ಲಿ ೬೨ ವರ್ಷದ ಶಹಬಾನು ಅನ್ನೋ ಮಹಿಳೆಗೆ ಆಕೆಯ ಗಂಡ ತ್ರಿವಳಿ ತಲಾಖ್ ನೀಡಿ ಎರಡನೇ ಪತ್ನಿ ಯೊಂದಿಗೆ ಬದುಕು ನಡೆಸಲು ನಿರ್ಧರಿಸಿದ್ದ. ೫ ಮಕ್ಕಳಿರುವ ಶಹಬಾನು ಜೀವನಾಂಶವನ್ನು ಕೇಳುತ್ತಾಳೆ. ಇಸ್ಲಾಂ ಕಾನೂನಿನ ಪ್ರಕಾರ ಜೀವನಾಂಶ ವನ್ನು ಕೊಡುವಂತಿಲ್ಲ. ಆದರೆ ಶಹಬಾನು ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಾಳೆ. ಸುಪ್ರೀಂ ಕೋರ್ಟ್‌ನಲ್ಲಿ ಆಕೆಗೆ ಜೀವನಾಂಶವನ್ನು ಕೊಡುವ ಆದೇಶ ಪ್ರಕಟವಾಗುತ್ತದೆ.

ಆಗ ಕಟ್ಟರ್ ಇಸ್ಲಾಂ ಶರೀಯಾ ಕಾನೂನಿನ ಪರಿಪಾಲಕ ಮನಸ್ಥಿತಿಯವರು ಆ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಒಪ್ಪಿಕೊಳ್ಳುವುದಿಲ್ಲ. ಇದರಿಂದ ರಾಜೀವ್ ಗಾಂಧಿಗೆ ಆತಂಕ ಶುರುವಾಗುತ್ತದೆ. ಮುಸ್ಲಿಮರು ತನ್ನ ಸರಕಾರದ ವಿರುದ್ಧ ಮುನಿಸಿಕೊಳ್ಳುತ್ತಾರೋ, ತನ್ನ ಮತ ಬ್ಯಾಂಕಿಗೆ ಹೊಡೆತ ಬೀಳಬಹುದೆಂಬ ಭಯದಲ್ಲಿ ರಾಜೀವ್ ಗಾಂಧಿ ಸುಗ್ರೀವಾಜ್ಞೆಯನ್ನು ಹೊರಡಿಸುವ ಮೂಲಕ ಸುಪ್ರೀಂಕೋರ್ಟಿನ ಆ ತೀರ್ಪನ್ನೇ ರದ್ದುಗೊಳಿಸುತ್ತಾರೆ. ಒಬ್ಬ ವೃದ್ಧ ಮಹಿಳೆಗೆ ಅನ್ಯಾಯ ವಾದಾಗ ಸುಪ್ರೀಂಕೋರ್ಟ್ ನೀಡಿದ ನ್ಯಾಯ ಸಮ್ಮತವಾದ ತೀರ್ಪನ್ನು ಕೇವಲ ತನ್ನ ಮತಬ್ಯಾಂಕ್ ಆಸೆಗೋಸ್ಕರ
ಮೋಟಕುಗೊಳಿಸುವುದು ಸಂವಿಧಾನಕ್ಕೆ ಮಾಡಿದ ದ್ರೋಹ ಅಲ್ಲವೇ!

ನರೇಂದ್ರ ಮೋದಿಯವರ ಈ ೧೦ ವರ್ಷಗಳ ಆಡಳಿತದ ಅವಧಿಯಲ್ಲಿ ಸಂವಿಧಾನದ ಮೂಲ ಸ್ವರೂಪಕ್ಕೆ ಒಂದೇ ಒಂದು ಸಣ್ಣ ಬದಲಾವಣೆಯನ್ನು ತಂದಿಲ್ಲ. ಆದರೆ ಕೇವಲ ಏಳು ಬಾರಿ ರಾಷ್ಟ್ರಪತಿ ಆಳ್ವಿಕೆ ಹೇರಿzರೆ. ಅದರಲ್ಲಿ ನಾಲ್ಕು ಬಾರಿ ಜಮ್ಮು-ಕಾಶ್ಮೀರಕ್ಕೆ. ಅದು ೨೦೧೫ ರಲ್ಲಿ ಜಮ್ಮು ಕಾಶ್ಮೀರ ದಲ್ಲಿ ಸರಕಾರ ಬಿದ್ದು ಹೋದ ಸಂದರ್ಭದಲ್ಲಿ, ೨೦೧೬ರಲ್ಲಿ ಸರಕಾರ ರಚಿಸಲು ಬಹುಮತ ಇಲ್ಲದಿರುವಾಗ, ಒಮ್ಮೆ ಮುಫ್ತಿಯ ನಿಧನದ ಸಂದರ್ಭದಲ್ಲಿ, ಬಳಿಕ ೨೦೧೯ ರಲ್ಲಿ ೩೭೦ನೇ ವಿಧಿಯ ರದ್ದತಿಯ ಸಂದರ್ಭದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿತ್ತು. ದೆಹಲಿಯಲ್ಲಿ ಕೇಜ್ರಿವಾಲ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು ಬಳಿಕ ಬಹುಮತ ಸಾಬೀತಿಗೆ ಸಾಧ್ಯವಾಗದಿದ್ದಾಗ, ೨೦೧೬ರಲ್ಲಿ ಉತ್ತರಾಖಂಡದಲ್ಲಿ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರಕಾರ ಬಹುಮತ ಕಳೆದುಕೊಂಡ ಬೆನ್ನಲ್ಲೇ ರಾಜ್ಯಪಾಲರ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಗಿತ್ತು.

೨೦೧೯ರಲ್ಲಿ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿತ್ತು. ಸರಕಾರ ರಚನೆಗೆ ಯಾರ ಬಳಿಯೂ ನಂಬರ್ ಇಲ್ಲದ ಕಾರಣ ಸರಕಾರ ರಚನೆಗೆ ಯಾರೊಬ್ಬರೂ ಹಕ್ಕು ಮಂಡಿಸದಿzಗ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿತ್ತು. ಹೀಗೆ ನರೇಂದ್ರ ಮೋದಿಯವರು ವ್ಯಾಲಿಡ್ ಕಾರಣ ಇದ್ದಲ್ಲಿ ಮಾತ್ರ ರಾಷ್ಟ್ರಪತಿ ಆಳ್ವಿಕೆ ಹೇರಿದ್ದಾರೆ. ಮೋದಿ ದೇಶದ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನವನ್ನು ನೀಡಿzರೆ ಮೋದಿ. ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ.೧೦ ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಮಹಿಳೆಯರಿಗಾಗಿ ವಿಧಾನ ಹಾಗೂ ಲೋಕ ಸಭೆಯಲ್ಲಿ ಮೀಸಲಾತಿ ಬಿಲ್ಲನ್ನು ಪಾಸ್ ಮಾಡಲಾಗಿತ್ತು.

ತ್ರಿಪಲ್ ತಲಾಖ್ ರದ್ದತಿಯ ಮೂಲಕ ಈ ದೇಶದ ಮುಸ್ಲಿಂ ಮಹಿಳೆಯರ ಗೌರವವನ್ನು ಎತ್ತಿ ಹಿಡಿದಿದ್ದರು. ಅಂಬೇಡ್ಕರ್ ಆಶಯದಂತೆ ಪಾಕಿಸ್ತಾನ ದಲ್ಲಿರುವ ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಸಿಎಎ ಮೂಲಕ ಹಕ್ಕು ಕೊಟ್ಟಿದ್ದಾರೆ. ಕಾಶ್ಮೀರಕ್ಕಿದ್ದ ೩೭೦ನೆಯ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಈ ದೇಶದಲ್ಲಿ ಏಕತೆಯನ್ನು ಸಾರಲಾಯಿತು, ಆ ಮೂಲಕ ಕಾಶ್ಮೀರದಲ್ಲಿನ ಹಿಂದುಳಿದ ವರ್ಗ ಮತ್ತು ದಲಿತರಿಗೆ ಮೀಸಲಾತಿ ಕೊಟ್ಟರು ಮೋದಿ.

ಹಾಗೆ ನೋಡಿದರೆ, ಇಂದು ಪಶ್ಚಿಮ ಬಂಗಾಳದಲ್ಲಿ ಕೋಮು ಘರ್ಷಣೆ, ಹತ್ಯೆ, ಅರಾಜಕತೆ ತಾಂಡವವಾಡುತ್ತಿದೆ. ಹೀಗಿರುವಾಗಲೂ ನರೇಂದ್ರ ಮೋದಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಿಲ್ಲ. ಆದರೆ ಇದೀಗ ಇಂದಿರಾ ಗಾಂಧಿ ಇದ್ದಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು. ವಾಸ್ತವದಲ್ಲಿ ಸಂವಿಧಾನ ಬದಲಾಯಿಸುವ ದೊಡ್ಡ ಕೆಲಸ ಇಂದಿರಾ ಗಾಂಧಿ ಕಾಲದಲ್ಲಿಯೇ ನಡೆದಿತ್ತು. ಇಂದಿರಾಗಾಂಧಿಯು ಸಂವಿಧಾನದ ಮೂಲಸ್ವರೂಪಕ್ಕೆ ಧಕ್ಕೆ ತಂದಿದ್ದರು.
ಸಂವಿಧಾನದಲ್ಲಿ ಸೆಕ್ಯುಲರ್ ಅನ್ನೋ ಪದ ಸೇರಿಸಿ ಮುಸ್ಲಿಂಮತಬ್ಯಾಂಕ್ ಗಟ್ಟಿಗೊಳಿಸುವ ಮೂಲಕ ತುಷ್ಟಿಕರಣದ ರಾಜಕೀಯಕ್ಕೆ ಪುಷ್ಠಿ ನೀಡಿದ್ದರು. ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ರಾಮನ ದರ್ಬಾರ್ ಚಿತ್ರವಿತ್ತು,

ಬಳಿಕ ಇಂದಿರಾಗಾಂಧಿ ‘ಜಾತ್ಯತೀತ’ ಅನ್ನುವ ಪದ ಸೇರಿಸಿ ‘ರಾಮ ದರ್ಬಾರ್’ ಚಿತ್ರ ತೆಗೆದು ಹಾಕಿದರು. ಇದು ಸಂವಿಧಾನದ ಮೂಲ ಪ್ರತಿಗೆ ತೋರಿದ ಅಗೌರವವಲ್ಲದೆ ಮತ್ತಿನ್ನೇನು! ಹಿಟ್ಲರ್, ಮುಸುಲೋನಿ, ಸ್ಟಾಲಿನ್ ಮಾದರಿಯ ಆಡಳಿತ ನಡೆಸಿದ ಇಂದಿರಾಗಾಂಧಿಯನ್ನು ಯಾರೂ ಮರೆತಿಲ್ಲ. ಹೀಗಿರುವಾಗ ರಾಹುಲ್ ಗಾಂಧಿ ಏನೋ ಅರಿಯದಂತೆ ನಾಟಕ ಶುರು ಮಾಡಿzರೆ. ಕಾರಣ ಇಷ್ಟೇ ನರೇಂದ್ರ ಮೋದಿ, ನರೇಂದ್ರ ‘ಇಂದಿರಾ ಗಾಂಧಿ ಅಲ್ಲ’ ಹಾಗೇನಾದರೂ ಆಗಿದ್ದರೆ ಲೋಕಸಭೆಯ ಒಳಗೆ ಮತ್ತು ಹೊರಗೆ ಯಾರೊಬ್ಬರೂ ದೊಂಬರಾಟ ಮಾಡುತ್ತಿರಲಿಲ್ಲ.

(ಲೇಖಕರು: ರಾಜ್ಯಶಾಸ್ತ್ರ ಅಧ್ಯಾಪಕರು ಹಾಗೂ ವಿಶ್ಲೇಷಕರು)