ಅಭಿಮತ
ಎ.ಎಸ್.ಬಾಲಸುಬ್ರಹ್ಮಣ್ಯ
(ಇಂದು ಪತ್ರಿಕಾ ದಿನ)
ಪ್ರಜಾಸತ್ತೆಯನ್ನು ಬೆಳೆಸಲು ಮತ್ತು ರಕ್ಷಿಸುವಲ್ಲಿ ಪತ್ರಿಕೆಗಳು ಮಹತ್ತರ ಪಾತ್ರ ನಿರ್ವಹಿಸುತ್ತ ಬಂದಿವೆ. ಅನೇಕ ಕಾಲಘಟ್ಟಗಳಲ್ಲಿ ಅವು ಅಧಿಕಾರದ ದುರುಪಯೋಗವನ್ನು ವಿರೋಧಿಸುತ್ತಲೇ ಬಂದಿವೆ. ಅಷ್ಟೇ ಅಲ್ಲ, ಅನೇಕ ಕಷ್ಟ ಕೋಟಲೆಗಳನ್ನು ಲೆಕ್ಕಿಸದೆ ಅವು ಜನಪರ ಹೋರಾಟ ನಡೆಸಿ, ಪ್ರಜಾ ಸತ್ತೆಯ ಮೌಲ್ಯಗಳನ್ನು ರಕ್ಷಿಸಿವೆ.
ಸರ್ವಾಧಿಕಾರಿಗಳ ವಿರುದ್ಧ ಯುದ್ಧವನ್ನೇ ಸಾರಿವೆ. ಅಧಿಕಾರ ದುರುಪಯೋಗ ಮಾಡಿದವರನ್ನು ಪದಚ್ಯುತಗೊಳಿಸಿವೆ. ಪತ್ರಿಕೆಗಳು ಅನಧಿಕೃತ ವಿರೋಧ ಪಕ್ಷವಿದ್ದಂತೆ ಎಂದು ಬಣ್ಣಿಸಲಾಗಿದೆ. ಜಗತ್ತಿನ ಪ್ರಬಲ ದೇಶವೆನಿಸಿದ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಅಧಿಕಾರ ಕಳೆದುಕೊಳ್ಳಲು
ವಾಷಿಂಗ್ಟನ್ ಪೋ ಪತ್ರಿಕೆ ಕಾರಣವಾಯಿತು ಎನ್ನುವುದು ಎಲ್ಲರಿಗೂ ತಿಳಿದ ವಿಷಯ.
ಆಧುನಿಕ ಸಂವಹನ ತಂತ್ರಜ್ಞಾನಗಳ ಪ್ರಭಾವದಿಂದಾಗಿ ಇಂತಹ ಶಕ್ತಿಯುತ ಪತ್ರಿಕಾ ಮಾಧ್ಯಮ ಮುಂದುವರಿದ ಅಮೆರಿಕ ಮತ್ತು ಯುರೋಪಿನಲ್ಲಿ ನಲುಗುತ್ತಿವೆ. ಜಾಹಿರಾತು ಹಣ ಡಿಜಿಟಲ್ ಮಾಧ್ಯಮಗಳ ಪಾಲಾಗುತ್ತಿದೆ. ಪತ್ರಿಕೆಗಳ ಸಂಖ್ಯೆ ಕುಸಿದಿದೆ. ಪತ್ರಕರ್ತರ ಸಂಖ್ಯೆಯು ಕಡಿಮೆಯಾಗುತ್ತಿದೆ. ವಿಶೇಷವಾಗಿ ನಿಯತಕಾಲಿಕೆಗಳು ಮತ್ತು ಸಮುದಾಯ ಪ್ರಕಟಣೆಗಳು ಮರೆಯಾಗುತ್ತಿವೆ. ೨೦೦೫ ರಿಂದ ಅಮೆರಿಕದ ವೃತ್ತಪತ್ರಿಕೆ ಉದ್ಯಮವು ಅದರ ಮೂರನೇ ಎರಡರಷ್ಟು ಪತ್ರಕರ್ತರನ್ನು ಮತ್ತು ಸುಮಾರು ಮೂರನೇ ಒಂದು ಭಾಗದಷ್ಟು ಪತ್ರಿಕೆಗಳನ್ನು ಕಳೆದುಕೊಂಡಿದೆ.
೨೦೨೩ ರಲ್ಲಿ ಸುದ್ದಿ ಉದ್ದಿಮೆಯ ೨೫೦೦ ಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಂಡರು. ಈ ವರ್ಷದ ಜನವರಿ ತಿಂಗಳಿನಲ್ಲಿ ೫೦೦ ಕ್ಕೂ
ಹೆಚ್ಚು ಉದ್ಯೋಗಿಗಳನ್ನು ವಿವಿಧ ಮಾಧ್ಯಮಗಳಲ್ಲಿ ವಜಾಗೊಳಿಸಲಾಗಿದೆ. ಇದನ್ನು Journalism Bloodbath (ಪತ್ರಿಕೋದ್ಯಮ ರಕ್ತಪಾತ) ಎಂದು ಮಾಧ್ಯಮ ತಜ್ಞರು ಬಣ್ಣಿಸಿದ್ದಾರೆ. ಇಂತಹ ಸಂಕಷ್ಟ ಸಮಯದಲ್ಲಿ ಸ್ಥಳೀಯ ಪ್ರಕಟಣೆಗಳು ಅನಿವಾರ್ಯವಾಗಿ ಚುನಾಯಿತ ಸರಕಾರಗಳ ಸಹಾಯಕ್ಕೆ ಮೊರೆ ಹೋಗಬೇಕಿದೆ. ಕಳೆದ ಕೆಲ ವರ್ಷಗಳಿಂದ ಕೆನಡಾ, – ಮುಂತಾದ ದೇಶಗಳು ಪರೋಕ್ಷವಾಗಿ ಪತ್ರಿಕೆಗಳಿಗೆ ಹಣಕಾಸು ನೆರವು ನೀಡಲು ಆರಂಭಿಸಿವೆ.
ಇತ್ತೀಚೆಗಷ್ಟೇ ಅಮೆರಿಕದ ನ್ಯೂಯಾರ್ಕ್ ರಾಜ್ಯ ಹೊಸ ಕಾನೂನನ್ನು ಜಾರಿ ಗೊಳಿಸಿ ತನ್ನ ರಾಜ್ಯದಲ್ಲಿರುವ ನಿಯತಕಾಲಿಕೆಗಳು ಮತ್ತು ಪತ್ರಿಕೆಗಳೂ
ಸೇರಿದಂತೆ ಇತರೆ ಪ್ರಸಾರ ಮಾಧ್ಯಮಗಳಿಗೆ ಹಲವು ಷರತ್ತುಗಳನ್ನು ವಿಧಿಸಿ ಧನ ಸಹಾಯ ನೀಡಲು ಮುಂದಾಗಿದೆ. ನ್ಯೂಯಾರ್ಕ್ ರಾಜ್ಯದ ೨೦೨೫ ರ ಬಜೆಟ್ಟಿನಲ್ಲಿ ಸುದ್ದಿಪತ್ರಿಕೆ ಮತ್ತು ಪ್ರಸಾರ ಮಾಧ್ಯಮ ಉದ್ಯೋಗ ಕಾರ್ಯಕ್ರಮ ಉತ್ತೇಜಿಸುವ ಕಾರ್ಯಕ್ರಮದನ್ವಯ ಸ್ಥಳೀಯ ಸುದ್ದಿ ಮಾಧ್ಯಮಗಳಿಗೆ ೯೦ ಮಿಲಿಯನ್(೭೪೧ ಕೋಟಿ ರೂಗಳ) ತೆರಿಗೆ ವಿನಾಯಿತಿಗಳನ್ನು ನೀಡುವುದರ ಮೂಲಕ ಸ್ಥಳೀಯ ಪತ್ರಿಕೋದ್ಯಮ ಉಳಿವಿಗೆ ಮಹತ್ತರ ಕ್ರಮವನ್ನು ಜಾರಿಗೊಳಿಸಲಾಗಿದೆ.
ನ್ಯೂಯಾರ್ಕ್ ರಾಜ್ಯದ ಸ್ಥಳೀಯ ಪತ್ರಿಕೋದ್ಯಮ ಸಂರಕ್ಷಣಾ ಕಾಯಿದೆಯನ್ನು ಜಾರಿಗೊಳಿಸಲು ಸುಮಾರು ೧೦೦ ಸುದ್ದಿ ಪ್ರಕಾಶಕರು ಒಟ್ಟಾಗಿ ಸೇರಿ ಈ ಮಸೂದೆ ಪಾಸು ಮಾಡಿ ಸಲು ಪ್ರಯತ್ನಿಸಿ ಯಶಸ್ಸನ್ನು ಸಾಧಿಸಿದ್ದಾರೆ. ಈ ಒಕ್ಕೂಟಕ್ಕೆ ಈಗ ೨೦೦ ಸುದ್ದಿ ಪ್ರಕಾಶಕರು ಸೇರಿದ್ದಾರೆ. ಅಮೆರಿಕದಲ್ಲಿ ಸಮುದಾಯ ಸುದ್ದಿ ಸಂಸ್ಥೆಗಳಿಗೆ ನೆರವಾಗಲು ಮೀಸಲಿಟ್ಟ ಬಹು ದೊಡ್ಡ ಮೊತ್ತ ಇದಾಗಿದೆ. ಸುದ್ದಿವಾಹಿನಿಗಳು ತಮ್ಮ ಸಿಬ್ಬಂದಿಯನ್ನು ನಿರ್ವಹಿಸಲು ಮತ್ತು ಬೆಳೆಸಲು ಸಹಾಯ ಮಾಡುವ ಬೃಹತ್ ಪ್ರಯತ್ನವಾಗಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಸುದ್ದಿಮನೆಗಳ ಬೇಡಿಕೆಗಳನ್ನು ಈ ನೆರವು ನ್ಯಾಯ ಯುತವಾಗಿ ಪರಿಗಣಿಸಲಾಗಿದೆ ಎಂದು ಬಣ್ಣಿಸಲಾಗುತ್ತಿದೆ.
ಹೊಸ ಕಾನೂನಿನ ಅನ್ವಯ ಮೂರು ವರ್ಷಗಳವರೆಗೆ ೩೦ ಮಿಲಿಯನ್ ಗ್ಯಾರಂಟಿ ತೆರಿಗೆ ಸಾಲವನ್ನು ನೀಡಲಾಗುತ್ತದೆ. ಪ್ರತಿ ವರ್ಷ ೧೩ ಮಿಲಿಯನ್ ಡಾಲರ್ಗಳನ್ನು ೧೦೦ ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಹಾಗೂ ೧೩ ಮಿಲಿಯನ್ ಡಾಲರ್ಗಳನ್ನು ದೊಡ್ಡ ಸುದ್ದಿ ಸಂಸ್ಥೆಗಳಿಗೆ ಮತ್ತು
ನಾಲ್ಕು ಮಿಲಿಯನ್ ಡಾಲರ್ಗಳನ್ನು ಹೊಸದಾಗಿ ನೇಮಕ ಗೊಳ್ಳುವ ಪತ್ರಕರ್ತರಿಗೆ ಬೆಂಬಲಿಸಲು ನೀಡಲಾಗುವುದು. ನೂತನ ಕಾನೂನಿನ ಷರತ್ತುಗಳ ಪ್ರಕಾರ ಯಾವುದೇ ಒಂದು ಸುದ್ದಿಮನೆ ಪ್ರತಿ ವರ್ಷ ೩.೨೦ ಲಕ್ಷ ಡಾಲರ್ಗಿಂತ ಹೆಚ್ಚಿನ ಹಣ ಪಡೆಯುವಂತಿಲ್ಲ. ಇದು ಸುದ್ದಿಮನೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಗಳ ಸಂಖ್ಯೆಯನ್ನು ಆಧರಿಸಿರುತ್ತದೆ. ಮರು ಪಾವತಿಸಬಹುದಾದ ತೆರಿಗೆ ಸಾಲ (tax credit)ಯಾವುದೇ ಉದ್ಯೋಗಿಯ ವೇತನದ ಶೇ.೫೦ ವೇತನದವರೆಗೆ ಇರುತ್ತದೆ. ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಮತ್ತು ನಿಗಮಗಳು ಈ ಸೌಲಭ್ಯಗಳಿಗೆ ಒಳಪಡುವುದಿಲ್ಲ.
ಸಣ್ಣ ಮತ್ತು ಮಧ್ಯಮ ಗಾತ್ರದ ಪತ್ರಿಕೆಗಳ ಒಕ್ಕೂಟದ ಯಶಸ್ಸು ಸ್ಥಳೀಯ ಪತ್ರಿಕೋದ್ಯಮವನ್ನು ಬೆಂಬಲಿಸುವ ಮತ್ತು ಸಮರ್ಥ ನೀತಿಗಳನ್ನು ರೂಪಿಸುವಲ್ಲಿ ಈ ಕಾನೂನು ಮಾದರಿಯಾಗಿದೆ ಎಂದು ಪ್ರಕಾಶಕರು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ನ್ಯೂಯಾರ್ಕ್ ರಾಜ್ಯದ ಈ ಕ್ರಮ, ಸ್ಥಳೀಯ ಪತ್ರಕರ್ತರನ್ನು ನೇಮಿಸಿಕೊಳ್ಳಲು ಮತ್ತು ಉದ್ಯೋಗದಲ್ಲಿ ಉಳಿಸಿಕೊಳ್ಳಲು ಪ್ರೋತ್ಸಾಹಿಸುವ ದೇಶದ ಮೊದಲ ರಾಜ್ಯ ವಾಗಿದೆ. ನೂರಾರು ಪತ್ರಿಕೆಗಳಿಗೆ ಇದು ನಿರ್ಣಾಯಕ ಹೂಡಿಕೆ ಯಾಗಿದೆ. ರಾಜ್ಯದ ಪ್ರಮುಖ ಸಮುದಾಯಗಳು ಸ್ಥಳೀಯ ಮಾಹಿತಿ ಪಡೆಯಲು ಇದು ನೆರವಾಗಲಿದೆ ಎಂದು ಅರ್ಥೈಸ ಲಾಗುತ್ತಿದೆ.
ವಿಭಿನ್ನ ಭಾಷೆ, ಸಂಸ್ಕೃತಿ ಮತ್ತು ಜನಾಂಗಗಳ ತವರೂರು ಎನಿಸಿರುವ ಅಮೆರಿಕದಲ್ಲಿ ಸಣ್ಣ ಮತ್ತು ಸಮುದಾಯ ಪ್ರಕಟಣೆ ಗಳು ಮಹತ್ತರ ಪಾತ್ರ ನಿರ್ವಹಿಸುತ್ತವೆ. ಅಂತರ್ಜಾಲ ಆಧಾರಿತ ಡಿಜಿಟಲ್ ಮಾಧ್ಯಮಗಳ ತೀವ್ರ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮುದ್ರಿತ ಪ್ರಕಟಣೆಗಳು ಕಳೆದ ಮೂರು
ದಶಕಗಳಲ್ಲಿ ಹಿನ್ನಡೆ ಅನುಭವಿಸಿದವು. ಇದರಿಂದಾಗಿ ಅನೇಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಸುತ್ತಮುತ್ತಲಿನ ಬೆಳವಣಿಗೆ ಗಳ ಅರಿವೇ ಇಲ್ಲ ದಂತಾಯ್ತು. ಇದನ್ನು ಮನಗಂಡ ಹಲವಾರು ಸೇವಾ ಸಂಸ್ಥೆಗಳು ಮತ್ತು ದಾನಿಗಳು ಸ್ಥಳೀಯ ಪತ್ರಿಕೋದ್ಯಮದ ಬೆಂಬಲಕ್ಕೆ ನಿಂತರು.
ಸಾರ್ವಜನಿಕರು ಮತ್ತು ದೇಣಿಗೆ ಸಂಸ್ಥೆಗಳಿಂದ ಹಣ ಸಂಗ್ರಹಿಸಿ ಪತ್ರಿಕೆಗಳಿಗೆ ನೆರವಾದರು. ಫೇಸ್ಬುಕ್ ಮತ್ತು ಗೂಗಲ್ ಸಂಸ್ಥೆಗಳು ಪತ್ರಕರ್ತರಿಗೆ ತರಬೇತಿ ಹಾಗು ತಾಂತ್ರಿಕ ನೆರವುಗಳನ್ನು ನೀಡುವುದರ ಮೂಲಕ ತಮ್ಮ ಸಹಾಯ ಹಸ್ತವನ್ನು ಚಾಚಿದರು. ತೆರಿಗೆ ಉಳಿಸಲು ಅನೇಕ ಪತ್ರಿಕಾ ಸಂಸ್ಥೆಗಳು ಲಾಭ-ರಹಿತ ಸಂಸ್ಥೆಗಳಾಗಿ ಮಾರ್ಪಟ್ಟವು. ಇದರ ಜತೆಗೆ ಅನೇಕ ಚುನಾಯಿತ ಪ್ರತಿನಿಽಗಳು ಸರಕಾರದ ಮೂಲಕ ನೆರವು ಕೊಡಿಸಲು ಪ್ರಯತ್ನಿಸಿ ಸಫಲ ರಾಗಿದ್ದಾರೆ.
ನ್ಯೂಯಾರ್ಕ್ ರಾಜ್ಯದ ಮಾದರಿಯಲ್ಲಿ ಅಮೆರಿಕದ ಹಲವು ರಾಜ್ಯಗಳು ಕಾನೂನು ಜಾರಿಗೊಳಿಸಿ ಪತ್ರಿಕೆಗಳು ಮತ್ತು ಪತ್ರಕರ್ತರಿಗೆ ನೆರವಾಗಲು ಕ್ರಮಕೈಗೊಳ್ಳುತ್ತಿವೆ. ಪತ್ರಿಕೆಗಳು ಮತ್ತು ಪತ್ರಕರ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯನ್ನು ಗಮನಿಸಿ, ಅನೇಕ ದಾನಿಗಳು ಮತ್ತು ದತ್ತಿ ಸಂಸ್ಥೆಗಳು ಪತ್ರಿಕೆಗಳಿಗೆ ನೆರವು ನೀಡುತ್ತಿದ್ದಾರೆ. ದಾನಿಗಳಿಂದ ಹಣ ಸಂಗ್ರಹಿಸುವ ಸಂಸ್ಥೆಗಳು ಪತ್ರಿಕೆಗಳಿಗೆ ನೆರವಾಗುತ್ತಿವೆ. ಪತ್ರಕರ್ತರನ್ನು ನಿರ್ದಿಷ್ಟ ಅವಧಿಗೆ ನೇಮಿಸಿಕೊಳ್ಳಲು ಸಣ್ಣ ಪತ್ರಿಕೆಗಳಿಗೆ ಇದು ಸಹಾಯ ಮಾಡುತ್ತದೆ. ನೇಮಿಸಿಕೊಂಡ ಪತ್ರಕರ್ತರ ಪೂರ್ಣ ವೇತನವನ್ನು ಇಲ್ಲವೇ ಅರ್ಧ ವೇತನ
ವನ್ನು ದಾನಿಗಳು ನೀಡಿದರೆ ಉಳಿದರ್ಧ ವೇತನವನ್ನು ಪತ್ರಿಕಾ ಸಂಸ್ಥೆ ನೀಡಬೇಕಾಗುತ್ತದೆ. ಯಾವುದಾದರೊಂದು ಪ್ರಮುಖ ಸಮಸ್ಯೆ ಪತ್ರಿಕೆಗಳ ಗಮನಕ್ಕೆ ಬಂದರೆ, ಅಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ತನಿಖಾ ವರದಿಗಳನ್ನು ಪ್ರಕಟಿಸಲು ಸಾರ್ವಜನಿಕರು, ದಾನಿಗಳು ಮತ್ತು ದತ್ತಿ ಸಂಸ್ಥೆಗಳು ಅಮೆರಿಕದಲ್ಲಿ ಮುಂದೆ ಬರುತ್ತಿದ್ದಾರೆ.
ವಿಶೇಷವಾಗಿ, ಸಣ್ಣ ಮತ್ತು ಸಮುದಾಯ ಪತ್ರಿಕಾ ಪ್ರಕಟಣೆಯಲ್ಲಿ ಒಂದು ರೀತಿಯ ಸಮುದಾಯ ಸಹಭಾಗಿತ್ವ ಪ್ರಚಲಿತವಾಗುತ್ತಿದೆ. ಕೆನಡಾ ಸರಕಾರದ ನೆರವು ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳಲು ಮತ್ತು ಪ್ರಜಾಸತ್ತೆಯಲ್ಲಿ ಸ್ವತಂತ್ರ ಸುದ್ದಿ ಮಾಧ್ಯಮಗಳು ನಿರ್ವಹಿಸುವ ಜವಾಬ್ದಾರಿಯುತ ಪಾತ್ರವನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಕೆನಡಾ ದೇಶದ ಸರಕಾರ ಸುದ್ದಿ ಪ್ರಕಾಶನ ಸಂಸ್ಥೆಗಳಿಗೆ ನೆರವು ನೀಡಲು ಕ್ರಮಕೈಗೊಂಡಿದೆ. ಲಾಭೋದ್ದೇಶವಿಲ್ಲದ ಪ್ರಕಾಶನ ಸಂಸ್ಥೆಗಳಿಗೆ ದೇಣಿಗೆಗಳನ್ನು ಸ್ವೀಕರಿಸಲು ಮತ್ತು ದಾನಿಗಳಿಗೆ ತೆರಿಗೆ ರಸೀದಿಗಳನ್ನು ನೀಡಲು ಅನುಮತಿಸುತ್ತದೆ. ಈ ರೀತಿಯ ನೆರವು ಪಡೆದು ಸುದ್ದಿ/ಲೇಖನಗಳನ್ನು ಪ್ರಕಟಿಸುವ ಸಂಸ್ಥೆಅವುಗಳನ್ನು ಉಚಿತವಾಗಿ ಬಿಡುಗಡೆ ಮಾಡಬೇಕಾಗುತ್ತದೆ.
ಇದರಿಂದ ಸ್ಥಳೀಯ ಸುದ್ದಿ/ಲೇಖನಗಳು ಅಧಿಕ ಜನರನ್ನು ತಲಪುತ್ತವೆ ಎನ್ನುವುದು ಈ ಯೋಜನೆಯ ಮಹತ್ತರ ಉದ್ದೇಶ. ಈ ಯೋಜನೆಯಲ್ಲಿ ಲಾಭಕ್ಕಾಗಿ ಇರುವ ಮತ್ತು ಲಾಭರಹಿತ ಸುದ್ದಿ ಸಂಸ್ಥೆಗಳಲ್ಲಿ ಕಾರ್ಮಿಕ ವೆಚ್ಚಗಳಿಗಾಗಿ ಹೊಸದಾಗಿ ಮರುಪಾವತಿಸಬಹುದಾದ ತೆರಿಗೆ ಕ್ರೆಡಿಟ್ ಅನ್ನು ಸಹ ಸೇರಿಸಲಾಗಿದೆ. ನೆರವಿನ ಪ್ರಮಾಣವನ್ನು ನಿರ್ಧರಿಸಲು, ಹಿರಿಯ ಪತ್ರಕರ್ತನ್ನು ಒಳಗೊಂಡ ಸಮಿತಿ ಇರುತ್ತದೆ.
ಸರಕಾರದ ನೆರವು ಪಡೆಯಲು, ಪತ್ರಿಕೆಗಳು ಬಹುಪಾಲು ಕೆನಡಿಯನ್ನರ ಮಾಲೀಕತ್ವ ಮತ್ತು ನಿಯಂತ್ರಣದಲ್ಲಿರಬೇಕು. ಮುದ್ರಣ ಅಥವಾ ಡಿಜಿಟಲ್ ಸ್ವರೂಪದಲ್ಲಿ ನಿಯತಕಾಲಿಕೆ ಅಥವಾ ಸಮುದಾಯ ಪತ್ರಿಕೆಯಾಗಿರಬೇಕು. ಒಂದು ವರ್ಷದಲ್ಲಿ ಪ್ರಕಟವಾದ ಸಂಚಿಕೆಗಳಲ್ಲಿ ಕನಿಷ್ಠ ಶೇ.೮೦ ರಷ್ಟು ವಸ್ತು ವಿಷಯಗಳು ಸ್ವದೇಶಕ್ಕೆ ಸಂಬಂಧಿಸಿರಬೇಕು. ಈ ಪ್ರಕಟಣೆಗಳ ಬಹುಪಾಲು ಸುದ್ದಿ-ಲೇಖನಗಳು ಮೂಲ ರಚನೆಯಾಗಿರಬೇಕು, ಭಾಷಾಂತರ ವಾಗಿರಬಾರದು. ಕೆನಡಾದಲ್ಲಿಯೇ ಸಂಪಾದಿಸಿ, ವಿನ್ಯಾಸಗೊಳಿಸಿ, ಮುದ್ರಿತವಾಗಿರಬೇಕು. ಈ ಷರತ್ತುಗಳ ಉದ್ದೇಶ ದೇಶದ ಸ್ಥಳೀಯ ಸಮುದಾಯದ
ಸುದ್ದಿಗಳ ಪ್ರಕಟಣೆಗೆ ಉತ್ತೇಜಿಸುವುದೇ ಆಗಿದೆ.
ಪತ್ರಿಕೆಗಳಿಗೆ ಚಂದಾದಾರರಾಗುವ ಓದುಗರು ತಾವು ನೀಡುವ ಚಂದಾ ಹಣಕ್ಕೆ ಅಲ್ಪ ಪ್ರಮಾಣದ ತೆರಿಗೆ ವಿನಾಯಿತಿ ಸಹ ಕೆನಡಾದಲ್ಲಿ ಪಡೆಯಬಹು ದಾಗಿದೆ. ಫ್ರೆಂಚ್ ಪತ್ರಿಕೋದ್ಯಮ ವಿಶ್ವದ ಅತಿ ಹೆಚ್ಚು ಸರಕಾರದ ನೆರವು ಪಡೆಯುವ ಖ್ಯಾತಿಗೆ ಫ್ರೆಂಚ್ ಪತ್ರಿಕೋದ್ಯಮ ಹೆಸರಾಗಿದೆ. ಫ್ರೆಂಚ್ ಪತ್ರಿಕೆಗಳು ಸಹ ಪ್ರತ್ಯಕ್ಷ ಹಾಗೂ ಪರೋಕ್ಷ ವಾಗಿ ಸರಕಾರದಿಂದ ಹಣಕಾಸು ನೆರವು ಪಡೆಯುತ್ತವೆ. ಪ್ರಜಾಸತ್ತೆಯ ಮತ್ತು ಬಹುತ್ವ ಸಂಸ್ಕೃತಿಯ ಮೌಲ್ಯಗಳ ರಕ್ಷಣೆಯ ಉದ್ದೇಶದಿಂದ ಫ್ರೆಂಚ್ ಸರಕಾರ ಈ ನೆರವು ನೀಡುತ್ತಿದೆ. ರಾಷ್ಟ್ರೀಯ ಮತ್ತು ಸ್ಥಳೀಯ ಪತ್ರಿಕೆಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪಡೆದ ಆರ್ಥಿಕ ಸಹಾಯ ಒಂದು ಬಿಲಿಯನ್ ಯುರೋ (೯೦೦ ಕೋಟಿ ರು.ಗಳು) ಎಂದು ಅಂದಾಜಿಸಲಾಗಿದೆ. ಈ ಮೊತ್ತವನ್ನು ಪ್ರತಿ ವರ್ಷ ಕಡಿತಗೊಳಿಸಲಾಗು ತ್ತಿದೆ. ಯುರೋಪಿನ ಇತರ ದೇಶಗಳು ಮಾಧ್ಯಮ ಉದ್ಯಮಕ್ಕೆ ಬೆಂಬಲವನ್ನು ನೀಡುತ್ತವೆ. ಆದರೆ ಫ್ರಾನ್ಸ್ನಲ್ಲಿ ಅದು ಅತ್ಯಧಿಕ ಎಂದು ವಿಶ್ಲೇಷಿಸಲಾಗು ತ್ತಿದೆ.
ಫ್ರೆಂಚ್ ಸರಕಾರದ ನೆರವು ಕೆಲವೊಮ್ಮೆ ನೇರವಾಗಿರುತ್ತದೆ. ಪ್ರಕಾಶಕರು ಹೊಸ ಮುದ್ರಣ ಘಟಕವನ್ನು ಸ್ಥಾಪಿಸಲು ಬಯಸಿದರೆ, ಸರಕಾರವು ಅದರ ವೆಚ್ಚದ ಶೇ.೧೫ ರವರೆಗೆ ಹಣ ಪಾವತಿಸುತ್ತದೆ. ಪತ್ರಿಕಾ ಮುದ್ರಣ ಕಾಗದದ ಬೆಲೆಯ ರಕ್ಷಣೆಗೆ ಸಹ ನೆರವಾಗುತ್ತದೆ. ವಿದೇಶಿ ಮತ್ತು ದೇಸಿ ಮುದ್ರಣ ಕಾಗದದ ಬೆಲೆಗಳಲ್ಲಿನ ವ್ಯತ್ಯಾಸಗಳನ್ನು ಸರಿದೂಗಿಸುತ್ತದೆ. ಅಲ್ಲದೆ ಫ್ರೆಂಚ್ ಪತ್ರಿಕೆಗಳ ಸಾಗರೋತ್ತರ ಮಾರಾಟಕ್ಕೆ ರಾಜ್ಯವು ಸಬ್ಸಿಡಿ ನೀಡುತ್ತದೆ. ಪ್ರಕಾಶಕರು ಖರೀದಿ ತೆರಿಗೆ ಯನ್ನು ಪಾವತಿಸುವ ಅಗತ್ಯವಿಲ್ಲ ಮತ್ತು ಐದು ವರ್ಷಗಳೊ ಳಗೆ ಹಣವನ್ನು ಮರುಹೂಡಿಕೆ ಮಾಡಿದರೆ ಲಾಭದ ಮೇಲಿನ ತೆರಿಗೆಯಿಂದ ವಿನಾಯಿತಿ ನೀಡುತ್ತದೆ. ಕಾರ್ಯನಿರತ ಪತ್ರಕರ್ತರು ತಮ್ಮ ಆದಾಯ ತೆರಿಗೆಯಲ್ಲಿ ಶೇ.೩೦ ರಷ್ಟು ಕಡಿತವನ್ನು ಖರ್ಚು ಭತ್ಯೆಯಾಗಿ ಪಡೆಯುತ್ತಾರೆ.
ಪತ್ರಿಕೆಗಳ ವಿತರಣೆ ವಿದೇಶಗಳಲ್ಲಿ ಸುಲಭವಲ್ಲ. ಇದಕ್ಕಾಗಿಯೇ ಬೃಹತ್ ಸಂಘಟನೆಗಳಿವೆ. ಅವುಗಳ ಮೂಲಕ ಪತ್ರಿಕೆಗಳನ್ನು ವಿತರಿಸಬೇಕಾಗುತ್ತದೆ. ಇವುಗಳಿಗೆ ಅಧಿಕ ಹಣ ನೀಡಬೇಕಾಗುತ್ತದೆ. ಸರಕಾರ ಇದಕ್ಕೂ ನೆರವಾಗುತ್ತದೆ ಮತ್ತು ಸಂಪಾದಕೀಯ ವಿಭಾಗದಲ್ಲಿ ಬಹುತ್ವವನ್ನು ರಕ್ಷಿಸಲು ಸಹ
ಪತ್ರಿಕೆಗಳು ಸಹಾಯಧನ ಪಡೆಯುತ್ತವೆ. ಮುದ್ರಣಾಲಯ ಗಳನ್ನು ಆಧುನೀಕರಣಗೊಳಿಸಲು ಸಹ ಪತ್ರಿಕಾಲಯಗಳು ನೆರವು ಪಡೆಯುತ್ತವೆ. ಇದಲ್ಲದೆ, ಅನೇಕ ಸೇವಾ ತೆರಿಗೆಗಳಲ್ಲಿ ಅಪರೋಕ್ಷವಾಗಿ ವಿನಾಯಿತಿಗಳನ್ನು ಪತ್ರಿಕೆಗಳು ಪಡೆಯುತ್ತವೆ. ಈ ಎಲ್ಲ ನೆರವುಗಳು ಇತರೆ ಡಿಜಿಟಲ್ ಮಾಧ್ಯಮಗಳಿಗೆ
ಸಹ ಅನ್ವಯವಾಗುತ್ತವೆ.
ಮಾಧ್ಯಮ ಸ್ವಾತಂತ್ರ್ಯವು ಆರೋಗ್ಯಕರ ಪ್ರಜಾಪ್ರಭುತ್ವದ ನಿರ್ಣಾಯಕ ಅಂಶವಾಗಿದೆ ಎಂಬುದು ನಿಜ. ಆದರೆ ಸರ್ಕಾರದ ಹಣಕಾಸಿನ ಸಹಾಯ ಮಾಧ್ಯಮಗಳ ಸಂಪಾದಕೀಯ ಸ್ವಾತಂತ್ರ್ಯದ ಮೇಲೆ ಯಾವರೀತಿಯ ಪ್ರಭಾವ ಬೀರಬಲ್ಲವು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಾಗಿದೆ. ಸಾರ್ವ
ಜನಿಕ ನೆರವನ್ನು ಸ್ವೀಕರಿಸುವ ಮಾಧ್ಯಮ ಸಂಸ್ಥೆಗಳು ಹಣಕಾಸಿನ ಮಾಹಿತಿಯನ್ನು ಬಹಿರಂಗಪಡಿಸಲು ಹಾಗು ನೈತಿಕ ಮಾನದಂಡಗಳಿಗೆ ಬದ್ಧವಾಗಿರ ಬೇಕಾಗುತ್ತದೆ.
ಸರಕಾರದ ನೆರವು ಎರಡು ಅಲುಗಿನ ಕತ್ತಿಯೇ? ಹಣಕಾಸಿನ ಬೆಂಬಲವನ್ನು ಪಡೆದ ಪತ್ರಿಕೆಗಳು ಅನಗತ್ಯ ಸರಕಾರಿ ಪ್ರಭಾವವನ್ನು ತಡೆಗಟ್ಟಲು ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೇ? ಪಾರದರ್ಶ ಕತೆ, ಸ್ಪಷ್ಟ ಮಾನದಂಡಗಳು ಮತ್ತು ದೃಢವಾದ ಸಂಪಾದಕೀಯ ನೀತಿಗಳ
ಸಮತೋಲನ ಸಾಧ್ಯವೇ ಎಂಬುದು ನಿರ್ಣಾಯಕ ಅಂಶಗಳಾ ಗಿವೆ. ಸರಕಾರದ ನೆರವು ಇಲ್ಲದಿದ್ದರೆ ಪತ್ರಿಕೆಗಳ ಉಳಿವು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಮುಂದುವರಿದ ದೇಶಗಳಲ್ಲಿ ತಲೆದೋರಿರುವುದರಿಂದ, ಸರಕಾರದ ನೆರವು ಅನಿವಾರ್ಯವಾಗಿದೆ.
ಬೃಹತ್ ಪ್ರಮಾಣದ ಆರ್ಥಿಕ ನೆರವು ಪಡೆಯುವ ಪತ್ರಿಕಾ ರಂಗವನ್ನು ‘ಶಾಶ್ವತ ಕೃತಕ ಉಸಿರಾಟದ’ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ಅನೇಕ ಮಾಧ್ಯಮ ತಜ್ಞರು ಬಣ್ಣಿಸುತ್ತಾರೆ. ಬಹುಪಾಲು ಸರಕಾರಿ ಅನುದಾನ ಪತ್ರಿಕೆಗಳ ನಿರ್ವಹಣಾ ವೆಚ್ಚವನ್ನು ಭರಿಸಲು ಮಾತ್ರವೇ ಬಳಸಲಾಗುತ್ತಿದೆ. ಸುಸ್ಥಿರ ಆರ್ಥಿಕ ಕಾರ್ಯತಂತ್ರಗಳನ್ನು ಗುರುತಿಸುವಲ್ಲಿ ಪತ್ರಿಕೆಗಳು ವಿಫಲವಾಗಿವೆ ಎಂಬ ಆರೋಪಗಳಿವೆ. ಸರಕಾರದ ನೆರವು ಪಡೆಯುವ ಪತ್ರಿಕೆಗಳ ಕಾರ್ಯ ನಿರ್ವಹಣೆಯ ಬಗ್ಗೆ ಓದುಗರು ಮುಕ್ತವಾಗಿ ಚರ್ಚಿಸಬಹುದಾಗಿದೆ ಎಂಬುದು ಒಂದು ಆಯಾಮವೆನಿಸಿದರೆ, ಸಹಾಯಧನ ಪಡೆಯುವ ಪತ್ರಿಕೆಗಳು, ಆಡಳಿತಗಾರರ ಒತ್ತಡಗಳನ್ನು ಹೇಗೆ ಮೆಟ್ಟಿ ನಿಲ್ಲಬಲ್ಲವು ಎಂಬುದು ಇನ್ನೊಂದು ಆಯಾಮ.
ಈ ದ್ವಂದ್ವಗಳ ನಡುವೆ ಪತ್ರಕರ್ತನ ಪಾತ್ರ ನಿಜಕ್ಕೂ ಸವಾಲಿನದೇ ಸರಿ. ಪತ್ರಿಕೋದ್ಯಮ, ಮಾರುಕಟ್ಟೆಯಲ್ಲಿ ಲಾಭದಾಯಕತೆಯ ಮೌಲ್ಯವನ್ನು ನಿರ್ಧರಿಸುವ ಸರಕಲ್ಲ. ಅದೊಂದು ಸಾರ್ವಜನಿಕ ಸೇವೆ ಎಂಬುದು ಸಾರ್ವಕಾಲಿಕ ಸತ್ಯ. ಆದರೆ ವಾಸ್ತವ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ವಿಪರ್ಯಾಸ.
(ಲೇಖಕರು ವಿಶ್ರಾಂತ ಪತ್ರಿಕೋದ್ಯಮ
ಪ್ರಾಧ್ಯಾಪಕರು ಮತ್ತು ಮಾಧ್ಯಮ ತಜ್ಞರು)