Saturday, 14th December 2024

ಒತ್ತಡ- ಆತಂಕ- ಖಿನ್ನತೆ: ಒಂದು ಅರಿವು

ಶ್ವೇತಪತ್ರ

shwethabc@gmail.com

ಒತ್ತಡ ಇಲ್ಲದೆ ಬದುಕುತ್ತೇವೆ ಅನ್ನುವುದು ಭ್ರಮೆಯೇ ಹೊರತು ವಾಸ್ತವವಾಗಿ ಅದು ಸಾಧ್ಯವಿಲ್ಲ. ನಾವೆಲ್ಲೋ ದೂರದ ಊರಿಗೆ ಹೊರಟು ಹೋಗುತ್ತೇವೆ, ಪ್ರಕೃತಿಯ ಸಾನಿಧ್ಯದಲ್ಲಿ ನೆಮ್ಮದಿಯಾಗಿ ಇದ್ದುಬಿಡುತ್ತೇವೆ ಅನ್ನೋದು ಕೂಡ ಸಮಸ್ಯೆ-ಸವಾಲುಗಳಿಂದ ನಾವು ತಾತ್ಕಾಲಿಕ ವಾಗಿ ಕಂಡುಕೊಳ್ಳುವ ಪಲಾಯನ ವಾದವಷ್ಟೇ.

ಕೋವಿಡ್ ತರುವಾಯದ ಕಾಲಘಟ್ಟದಲ್ಲಿ ನಾವಿದ್ದೇವೆ. ಜೀವನ ಮತ್ತು ಜೀವನೋಪಾಯಗಳು ವ್ಯತ್ಯಾಸಗೊಂಡಿವೆ. ಇದಕ್ಕೆ ಪೂರಕವೆನ್ನುವಂತೆ ೨೦೨೦ರ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎನ್‌ಸಿಆರ್‌ಪಿ) ನೀಡಿರುವ ವರದಿಯ ಪ್ರಕಾರ, ನಮ್ಮ ದೇಶದಲ್ಲಿ ೨೦೨೦ರಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ ೧.೪೯ ಲಕ್ಷವಾದರೆ, ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಇದೇ ವರ್ಷದಲ್ಲಿ ಭಾರತದಲ್ಲಿ ಆತ್ಮಹತ್ಯೆಗಳಿಂದ ಮೃತಪಟ್ಟವರ ಸಂಖ್ಯೆ ೧.೫೩ ಲಕ್ಷವಾಗಿರುತ್ತದೆ.

ಕಳೆದ ೧೦ ವರ್ಷಗಳಿಗೆ ಹೋಲಿಸಿ ನೋಡಿದಾಗ, ಆ ವರ್ಷದಲ್ಲಿ ದಾಖಲೆ ಪ್ರಮಾಣದ ಆತ್ಮಹತ್ಯೆಗಳು ವರದಿಯಾಗಿರುವುದನ್ನು ಈ ಒಂದು ವರದಿ
ನಮ್ಮ ಮುಂದೆ ಸ್ಪಷ್ಟಪಡಿಸುತ್ತದೆ. ಕೋವಿಡ್‌ನಿಂದ ಮೃತ ಪಟ್ಟವರ ಸಂಖ್ಯೆಗಿಂತಲೂ ೪೦,೦೦೦ ಅಧಿಕ ಮಂದಿ ಆತ್ಮಹತ್ಯೆಯಿಂದ ಅಸುನೀಗಿದ್ದಾರೆ ಎನ್ನುವುದು ಅತ್ಯಂತ ಕಳವಳಕಾರಿ ಅಂಶ. ಅಂದರೆ ಈ ಕಾಲಘಟ್ಟದಲ್ಲಿ ಮಾನಸಿಕ ಆರೋಗ್ಯವು ನಮ್ಮ ಆದ್ಯತೆಯಾಗಬೇಕು ಎಂಬುದನ್ನು ಈ ವರದಿ ಯು ಸ್ಪಷ್ಟಪಡಿಸುತ್ತದೆ.

ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಅನ್ನು ಮಂಡಿಸುವಾಗ, ಕೋವಿಡ್ ಸಾಂಕ್ರಾಮಿಕದಿಂದಾಗಿ ಉಂಟಾದ ಆರೋಗ್ಯದ ಅಡ್ಡ ಪರಿಣಾಮ ಗಳನ್ನು ಮನಗಂಡು ದೇಶದ ಜನರ ಮಾನಸಿಕ ಆರೋಗ್ಯಕ್ಕಾಗಿ ‘ನ್ಯಾಷನಲ್ ಟೆಲಿಮೆಂಟಲ್ ಹೆಲ್ತ್ ಪ್ರೋಗ್ರಾಮ್’ ಅನ್ನು ಪ್ರಸ್ತುತಪಡಿಸುವುದಾಗಿ ತಮ್ಮ ಬಜೆಟ್ ಭಾಷಣದಲ್ಲಿ ಪ್ರಕಟಿಸಿದರು. ಇದಕ್ಕೆ ನಮ್ಮ ಬೆಂಗಳೂರಿನ ‘ನಿಮ್ಹಾನ್ಸ್’ ಅನ್ನು ನೋಡಲ್ ಕೇಂದ್ರವಾಗಿಸಿಕೊಳ್ಳಲಾಗುತ್ತದೆ. ಜತೆಗೆ ಇಲ್ಲಿನದೇ ಆದ ‘ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನರ್ಮೇಷನ್ ಟೆಕ್ನಾಲಜಿ’ಯು (ಐಐಐಟಿ) ತಾಂತ್ರಿಕ ಸಹಾಯವನ್ನು ಒದಗಿಸಿಕೊಡುತ್ತದೆ.

ದೇಶದ ಮೂಲೆಮೂಲೆಗೂ, ಗ್ರಾಮೀಣ ಭಾಗಗಳಿಗೂ ಮಾನಸಿಕ ಆರೋಗ್ಯ ಸೇವೆ ಹಾಗೂ ಕೌನ್ಸಿಲಿಂಗ್ ಅನ್ನು ಒದಗಿಸಿಕೊಡುವುದು ‘ನ್ಯಾಷನಲ್ ಟೆಲಿ
ಮೆಂಟಲ್ ಹೆಲ್ತ್ ಪ್ರೋಗ್ರಾಮ್’ನ ಪ್ರಮುಖ ಉದ್ದೇಶ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಭಾರತದಲ್ಲಿ ಶೇ.೭.೫ರಷ್ಟು ಜನ ಮಾನಸಿಕ ಆರೋಗ್ಯ ಸಮಸ್ಯೆ ಗಳಿಂದ ಬಳಲುತ್ತಿದ್ದಾರೆ. ಅಂಕಿ-ಅಂಶಗಳ ಪ್ರಕಾರ, ೫೬ ಮಿಲಿಯನ್, ಅಂದರೆ ಐದೂವರೆ ಕೋಟಿಗಿಂತಲೂ ಅಧಿಕ ಭಾರತೀಯರು ಖಿನ್ನತೆಯಿಂದ ಬಳಲುತ್ತಿದ್ದಾರೆ ಮತ್ತು ಮೂರೂವರೆ ಕೋಟಿಗಿಂತ ಅಧಿಕ ಜನರು ಆತಂಕ ಅಥವಾ ಉದ್ವಿಗ್ನತೆಯ ಬಲಿಪಶುಗಳಾಗಿದ್ದಾರೆ.

ಮಾನಸಿಕ ಆರೋಗ್ಯವು ನಮ್ಮೆಲ್ಲರ ಬದುಕಿನ ಆದ್ಯತೆಯಾಗಬೇಕು ಎಂಬುದನ್ನು ಮನವರಿಕೆ ಮಾಡಿ ಕೊಡುವ ಉದ್ದೇಶದಿಂದ ಈ ಎಲ್ಲಾ ಅಂಕಿ-ಅಂಶಗಳನ್ನು ನಿಮ್ಮ ಮುಂದೆ ಇಟ್ಟಿರುವೆ. ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ವ್ಯಾಖ್ಯಾನದ ಪ್ರಕಾರ, ಮಾನಸಿಕ ಆರೋಗ್ಯ ಎಂಬುದು ವ್ಯಕ್ತಿಯು ತನ್ನಲ್ಲಿರುವ ಸಾಮರ್ಥ್ಯವನ್ನು ಗುರುತಿಸಿಕೊಂಡು, ಜೀವನದ ಸಹಜ ಒತ್ತಡಗಳೊಂದಿಗೆ ಸಮರ್ಥವಾಗಿ ನಿಭಾಯಿಸಿಕೊಂಡು, ಉತ್ಪಾದನಾತ್ಮಕವಾಗಿ ಮತ್ತು ಪ್ರಯೋಜನಕಾರಿಯಾಗಿ ಕಾರ್ಯನಿರ್ವಹಿಸಬಲ್ಲ ಮತ್ತು ತನ್ನ ಸಮುದಾಯಕ್ಕೆ ಕೊಡುಗೆಯನ್ನು ಕೊಡಬಲ್ಲ ಆರೋಗ್ಯಕರವಾದ ಸ್ಥಿತಿ
ಯಾಗಿದೆ. ಮಾನವರ ಮನೋವಿಜ್ಞಾನದ ಇಬ್ಬರು ಪ್ರಮುಖ ಮನೋವಿಜ್ಞಾನಿಗಳಾದ ಅಬ್ರಹಾಂ ಮ್ಯಾಸ್ಲೋ ಮತ್ತು ಕಾರ್ಲ್ ರೋಜಸ್ ಮನಸ್ಸನ್ನು ಕುರಿತು ಬಹಳ ಅದ್ಭುತವಾಗಿ ವಿವರಿಸುತ್ತಾರೆ. ಅವರ ಪ್ರಕಾರ, ಮನುಷ್ಯ ಮುಕ್ತ ಮನಸ್ಸನ್ನು (Free will) ಉಳ್ಳವನಾಗಿರುತ್ತಾನೆ. ತನ್ನ ಆಯ್ಕೆ ಅಥವಾ ಆದ್ಯತೆಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ.

ಆದ್ದರಿಂದ ಅವನ ವರ್ತನೆಗೆ ಅವನೇ ಕಾರಣನಾಗುತ್ತಾನೆ. ತನ್ನ ಆಂತರಿಕ ಪ್ರಚೋದನೆಯ (Internal Motivation) ಪರಿಣಾಮವಾಗಿ ಮನುಷ್ಯ ತನ್ನ ಸಾಮರ್ಥ್ಯಗಳನ್ನು ಅರ್ಥಮಾಡಿಕೊಂಡು ತನ್ನ ಸೃಜನಾತ್ಮಕತೆ ಮತ್ತು ಸ್ವಾತಂತ್ರ್ಯದ ಮೂಲಕ ಅತ್ಯುತ್ತಮನಾಗಲು ಯತ್ನಿಸುತ್ತಾನೆ. ಒಂದು ವೇಳೆ ತನ್ನ ಪ್ರಯತ್ನದಲ್ಲಿ ವ್ಯಕ್ತಿ ಏನಾದರೂ ಸೋತುಹೋದರೆ ದುಃಖಿತನಾಗುತ್ತಾನೆ, ಆತನ ಮಾನಸಿಕ ಸ್ಥಿತಿಗತಿಯಲ್ಲಿ ವ್ಯತ್ಯಯಗಳಾಗುತ್ತವೆ.

ನಾವೆಲ್ಲ ಇವತ್ತು ಜಗತ್ತಿನ ಮೂಲೆಮೂಲೆಗಳಲ್ಲಿ ಕುಳಿತು, ನಮ್ಮ ನಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇವೆ. ನಮ್ಮೆಲ್ಲರಿಗೂ ನಮ್ಮ ನಮ್ಮ ಬದುಕಿ ನಲ್ಲಿ, ವೃತ್ತಿಗಳಲ್ಲಿ, ಊರುಗಳಲ್ಲಿ ನಮ್ಮದೇ ಆದ ಸಮಸ್ಯೆಗಳಿವೆ ಮತ್ತು ಸವಾಲುಗಳಿವೆ. ಯಾವುದಾದರೂ ಒಂದು ಸಮಸ್ಯೆ ಅಥವಾ ಸವಾಲು ನಮ್ಮೆ ದುರು ಬಂದು ನಿಂತಾಗ, ಸಹಜವಾಗಿಯೇ ನಾವೆಲ್ಲ ಒತ್ತಡಕ್ಕೊಳಗಾಗುತ್ತೇವೆ, ಕೋಪಗೊಳ್ಳುತ್ತೇವೆ, ಆತಂಕಕ್ಕೆ ಒಳಗಾಗುತ್ತೇವೆ. ಇದರ ತೀವ್ರತೆ ಜಾಸ್ತಿ ಯಾದರೆ ಖಿನ್ನತೆ ಅಥವಾ ಡಿಪ್ರೆಷನ್ ಕೂಡ ನಮ್ಮನ್ನು ಕಾಡುತ್ತದೆ.

ಒತ್ತಡ, ಆತಂಕ, ಖಿನ್ನತೆ ಇವ್ಯಾವುದೂ ಇಲ್ಲದೆ ಬದುಕುತ್ತೇವೆ ಅನ್ನುವುದು ನಮ್ಮೆಲ್ಲರ ಭ್ರಮೆಯೇ ಹೊರತು ವಾಸ್ತವ ವಾಗಿ ಅದು ಸಾಧ್ಯವಿಲ್ಲ. ನಾವೆಲ್ಲೋ ದೂರದ ಊರಿಗೆ ಹೊರಟುಹೋಗುತ್ತೇವೆ, ಗಿಡ-ಮರ, ತೋಟ, ಪ್ರಕೃತಿಯ ಸಾನಿಧ್ಯದಲ್ಲಿ ನೆಮ್ಮದಿಯಾಗಿ ಇದ್ದುಬಿಡುತ್ತೇವೆ ಅನ್ನೋದು
ಕೂಡ ಸಮಸ್ಯೆಗಳು ಮತ್ತು ಸವಾಲುಗಳಿಂದ ನಾವು ತಾತ್ಕಾಲಿಕವಾಗಿ ಕಂಡುಕೊಳ್ಳುವ ಪಲಾಯನ ವಾದವಷ್ಟೇ. ಆ ಊರಿನಲ್ಲಿ ಆ ತೋಟದ ನಡುವೆ ಮೂರು ದಿನ ಕಳೆದ ಮೇಲೆ ಹೊಸ ಸವಾಲೊಂದು ನಮ್ಮೆದುರಿಗೆ ಧುತ್ತೆಂದು ನಿಂತಿರುತ್ತದೆ.

ಒತ್ತಡ, ಆತಂಕ, ಖಿನ್ನತೆ ಇವುಗಳ ತೀವ್ರತೆ ಮತ್ತು ಪುನರಾವರ್ತನೆಯನ್ನು ನಿಯತವಾಗಿ ಕಡಿಮೆ ಅಂತರದಲ್ಲಿ ಮ್ಯಾನೇಜ್ ಮಾಡಬಹುದೇ ಹೊರತು ಸಂಪೂರ್ಣವಾಗಿ ಹತೋಟಿಯಲ್ಲಿಡಲು ಸಾಧ್ಯವಿಲ್ಲ. ಹಾಗಿದ್ದರೆ ಏನು ಮಾಡಬೇಕು? ಬದುಕಿನ ಒತ್ತಡಗಳ ಜತೆ, ಆತಂಕಗಳ ಜತೆ, ಇನ್ನೂ ತೀವ್ರ ಸ್ವರೂಪದಲ್ಲಿ ಕಾಡುವ ಖಿನ್ನತೆಯ ಜತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗಿರುವುದು ನಾವೆಲ್ಲರೂ ನಮ್ಮ ಮನಸ್ಸಿನ ಆರೋಗ್ಯಕ್ಕಾಗಿ ಪ್ರಜ್ಞಾಪೂರ್ವಕ ವಾಗಿ ಮಾಡಿಕೊಳ್ಳಬಹುದಾದ ಜೀವನದ ಬಹುಮುಖ್ಯ ಕಲಿಕೆ.