ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ಇತ್ತೀಚೆಗೆ ಉದ್ಯಮಿ ಮತ್ತು ಅಂಕಣಕಾರ ಸುಹೇಲ್ ಸೇಥ್ ಅವರ ಸಂದರ್ಶನದ ಸಣ್ಣ ತುಣುಕೊಂದನ್ನು ನೋಡುತ್ತಿದ್ದೆ. ಅವರು ಈ ದೇಶದ ಗಣ್ಯ ಉದ್ಯಮಿ ಗಳಬ್ಬರಾದ ರತನ್ ಟಾಟಾ ಬಗ್ಗೆ ಮಾತಾಡುತ್ತಿದ್ದರು. ನಾಲ್ಕು ವರ್ಷ (2018)ಗಳ ಹಿಂದೆ, ಲಂಡನ್ನ ಬಕಿಂಗ್ ಹ್ಯಾಮ್ ಅರಮನೆಯಲ್ಲಿ, ರಾಜಕುಮಾರ ಚಾಲ್ಸ ಅವರು ರತನ್ ಟಾಟಾ ಅವರಿಗೆ ಜೀವಮಾನದ ಸಾಧನೆಗಾಗಿ ಒಂದು ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಆ ಕಾರ್ಯಕ್ರಮಕ್ಕಾಗಿ ಸಕಲ ಏರ್ಪಾಟುಗಳಾಗಿದ್ದವು. ಚಾರ್ಲ್ಸ್ ಅವರು ಗಣ್ಯರನ್ನೆಲ್ಲ ಆಹ್ವಾನಿಸಿದ್ದರು. ಕಾರ್ಯ ಕ್ರಮಕ್ಕಿಂತ ನಾಲ್ಕು ದಿನಗಳ ಮೊದಲು, ಸುಹೇಲ್ ಸೇಥ್ ಸಹ ಲಂಡನ್ ತಲುಪಿದ್ದರು. ಚಾರ್ಲ್ಸ್ ಅವರಿಗೆ ಸಹಕರಿಸುವುದಕ್ಕಾಗಿ ಸೇಥ್ ಅವರನ್ನು ಕರೆಯಿಸಿಕೊಂಡಿದ್ದರು. ಲಂಡನ್ ವಿಮಾನ ನಿಲ್ದಾಣದಲ್ಲಿಳಿದು ಲಗೇಜ್ನ್ನು ಕಲೆಕ್ಟ್ ಮಾಡಿಕೊಳ್ಳುವ ಸಂದರ್ಭದಲ್ಲಿ, ಸೇಥ್ ಅವರ ಮೊಬೈಲ್ ಒಂದೇ ಸಮನೆ ರಿಂಗ್ ಆಗುತ್ತಿತ್ತು. ಆದರೆ ಕೋಟಿನ ಜೇಬಿನಲ್ಲಿದ್ದ ಮೊಬೈಲ್ ಅನ್ನು ನೋಡಲು ಅವರಿಗೆ ಸಾಧ್ಯವಾಗಿರಲಿಲ್ಲ. ನಂತರ ಮೊಬೈಲ್ ತೆರೆದು ನೋಡಿದರೆ, ರತನ್ ಟಾಟಾ ಅವರು ಹನ್ನೊಂದ್ ಮಿಸ್ಡ್ ಕಾಲ್ ಕೊಟ್ಟಿದ್ದರು. ಸೇಥ್ಗೆ ಆಶ್ಚರ್ಯ!
ಇದೇಕೆ ರತನ್ ಒಂದೇ ಸಮನೆ ಫೋನ್ ಮಾಡುತ್ತಿದ್ದಾರೆ ಎಂದು ತುಸು ಗಾಬರಿಯಾಯಿತು. ತಕ್ಷಣ ಅಲ್ಲಿಂದಲೇ ರತನ್ ಟಾಟಾ ಅವರಿಗೆ ಫೋನ್ ಮಾಡಿದರು. ಆಗ ಇನ್ನೊಂದು ತುದಿಯಲ್ಲಿ ರತನ್ ಟಾಟಾ ಮಾತಾಡುತ್ತಿದ್ದರು – ‘ಸುಹೇಲ್, ನಿಮಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಎರಡು ನಾಯಿಗಳಾದ ಟ್ಯಾಂಗೋ ಮತ್ತು ಟಿಟೋ ಪೈಕಿ ಒಂದು ತೀವ್ರ ಅಸ್ವಸ್ಥವಾಗಿದೆ. ನಿಮಗೆ ಗೊತ್ತು, ನಾನು ಈ ಎರಡು ನಾಯಿ ಗಳನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು. ಇಂಥ ಸನ್ನಿವೇಶದಲ್ಲಿ ನಾನು ಈ ನಾಯಿಗಳನ್ನು ಬಿಟ್ಟು ಲಂಡನ್ ಕಾರ್ಯಕ್ರಮಕ್ಕೆ ಬರಲಾರೆ. ನೀವು ನನ್ನನ್ನು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸಿದ್ದೇನೆ. ಈ ವಿಷಯ ವನ್ನು ನಿಮಗೆ ತುರ್ತಾಗಿ ತಿಳಿಸಬೇಕು ಎಂಬ ಕಾರಣಕ್ಕೆ ನಾನು ನಿಮಗೆ ನಿರಂತರವಾಗಿ ಫೋನ್ ಮಾಡಿದೆ. ಈ ವಿಷಯವನ್ನು ಪ್ರಿನ್ಸ್ ಚಾರ್ಲ್ಸ್ ಅವರಿಗೆ ತಿಳಿಸಿಬಿಡಿ.’
ಸೇಥ್ಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ‘ರತನ್, ನಿಮ್ಮ ಜೀವಮಾನದ ಸಾಧನೆಯನ್ನು ಪರಿಗಣಿಸಿ ಈ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಅದನ್ನು ಏರ್ಪಡಿಸಿದವರು ಮತ್ಯಾರೂ ಅಲ್ಲ, ರಾಜಕುಮಾರ ಚಾರ್ಲ್ಸ್. ಇದು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ನೂರಾರು ಆಯ್ದ ಗಣ್ಯ, ಅತಿ ಗಣ್ಯ ವ್ಯಕ್ತಿಗಳೆಲ್ಲ
ಈ ಸಮಾರಂಭಕ್ಕೆ ಆಗಮಿಸಲಿದ್ದಾರೆ. ಇನ್ನು ನಾಲ್ಕು ದಿನಗಳಿವೆಯಷ್ಟೇ. ಅದೂ ಈ ಕಾರ್ಯಕ್ರಮ ನೆರವೇರುವುದು ಬಕಿಂಗ್ ಹ್ಯಾಮ್ ಅರಮನೆಯಲ್ಲಿ. ನಿಶ್ಚಿತ ವಾಗಿಯೂ ರಾಣಿ ಕೂಡ ಪಾಲ್ಗೊಳ್ಳಲಿzರೆ. ಇಂಥ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ಆಗಿದೆ.
ಹೀಗಿರುವಾಗ, ಕೊನೆ ಕ್ಷಣದಲ್ಲಿ ನೀವು ಹೀಗೆ ಹೇಳಿದರೆ ಹೇಗೆ?’ ಎಂದು ಸೇಥ್ ಕೇಳಿದರು. ಆಗ ರತನ್ ಟಾಟಾ ಖಡಾಖಡಿ ದನಿಯಲ್ಲಿ ಹೇಳಿದರು – ‘ಸುಹೇಲ್, ಇಲ್ಲ… ನಾನು ಇಂಥ ಸ್ಥಿತಿಯಲ್ಲಿ ನನ್ನ ನಾಯಿ ಯನ್ನು ಬಿಟ್ಟು ಬರಲಾರೆ. ಈ ಕುರಿತು ಸಾಕಷ್ಟು ಯೋಚಿಸಿಯೇ ಈ ತೀರ್ಮಾನಕ್ಕೆ ಬಂದಿದ್ದೇನೆ. ಈ ಕಾರಣದಿಂದ ನಾನು ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಬರಲು ಆಗುತ್ತಿಲ್ಲ ಎಂಬುದನ್ನು ರಾಜಕುಮಾರ ಚಾಲ್ಸ ಅವರನ್ನು ಖುದ್ದಾಗಿ ಭೇಟಿ ಮಾಡಿ ಹೇಳಿ.’ ಟಾಟಾ ಜತೆ ಮಾತಾಡಿ ಪ್ರಯೋಜನ ಇಲ್ಲ ಎಂದು ಸುಹೇಲ್ ಸೇಥ್ಗೆ ಮನವರಿಕೆಯಾಯಿತು. ಕಾರಣ ರತನ್ ಟಾಟಾ ತಮ್ಮ ನಾಯಿಗಳನ್ನು ಎಷ್ಟು ಪ್ರೀತಿಸುತ್ತಾರೆ ಮತ್ತು ಅವುಗಳನ್ನು ಎಷ್ಟು ಹಚ್ಚಿಕೊಂಡಿದ್ದಾರೆ ಎಂಬುದು ಅವರಿಗೆ ಗೊತ್ತಿತ್ತು. ಆದರೆ ಈ ಸುದ್ದಿಯನ್ನು ಚಾರ್ಲ್ಸ್ ಅವರಿಗೆ ಹೇಗೆ ಹೇಳುವುದು? ಅವರು ಏನು ಭಾವಿಸ ಬಹುದು? ಕೊನೆ ಕ್ಷಣದಲ್ಲಿ ಕಾರ್ಯಕ್ರಮ ಅಡಸಲು-ಬಡಸಲು ಆಗುವುದನ್ನು ಅವರು ಹೇಗೆ ಸ್ವೀಕರಿಸಬಹುದು? ಹೆಜ್ಜೆ ಹೆಜ್ಜೆಗೆ ಶಿಷ್ಟಾಚಾರ ಪಾಲಿಸುವ ಅರಮನೆಯ ಅಧಿಕಾರಿಗಳು ಸೇರಿದಂತೆ ಚಾರ್ಲ್ಸ್, ಕೊನೆ ಕ್ಷಣದ ಈ ಯಡವಟ್ಟಿನ ಬಗ್ಗೆ ತಪ್ಪಾಗಿ ಭಾವಿಸದೇ ಇರ್ತಾರಾ?… ಈ ಎಲ್ಲ ಪ್ರಶ್ನೆಗಳು ಸುಹೇಲ್ ಸೇಥ್ ಮನಸ್ಸಿನಲ್ಲಿ ಹಾದು ಹೋದವು.
ಆದರೆ, ರತನ್ ಹೇಳಿದ ಸಂದೇಶವನ್ನು ಚಾರ್ಲ್ಸ್ ಅವರಿಗೆ ತಿಳಿಸಲೇ ಬೇಕಿತ್ತು. ಮರುದಿನ ಸುಹೇಲ್ ಸೇಥ್ ಬಕಿಂಗ್ ಹ್ಯಾಮ್ ಅರಮನೆಗೆ ಹೋಗಿ, ಚಾರ್ಲ್ಸ್ ಅವರನ್ನು ಭೇಟಿ ಮಾಡಿ, ತೀರಾ ಸಂಕೋಚದಿಂದ ರತನ್ ಟಾಟಾ ಬರಲಾಗುತ್ತಿಲ್ಲ ಎಂದು ಹೇಳಿದರಲ್ಲದೇ, ಅದಕ್ಕೆ ಕಾರಣವನ್ನೂ ತಿಳಿಸಿದರು. ಅದನ್ನು ಕೇಳಿದ ಚಾರ್ಲ್ಸ್ ಅವರ ಮೊದಲ ಉದ್ಗಾರ – ’That’s the man.’ ನಂತರ ಚಾರ್ಲ್ಸ್ ಹೇಳಿದರು – ‘ರತನ್ಗೆ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ ಎಂಬುದನ್ನು ಕೇಳಿ ಒಂದು ಕ್ಷಣ ನನಗೆ ಅತೀವ ನಿರಾಸೆಯಾಯಿತು. ಆದರೆ ಅದಕ್ಕೆ ಅವರು ನೀಡಿದ ಕಾರಣ ಕೇಳಿ ಅವರ ಬಗ್ಗೆ ನನಗೆ ಇನ್ನಷ್ಟು ಗೌರವ, ಪ್ರೀತಿ ಮತ್ತು ಅಭಿಮಾನ
ಹೆಚ್ಚಿತು. ಈ ಕಾರಣದಿಂದಲೇ ರತನ್ ಉಳಿದೆಲ್ಲರಿಗಿಂತ ಭಿನ್ನ. ನನ್ನ ಕಣ್ಣಲ್ಲಿ ಅವರು ಇನ್ನಷ್ಟು ದೊಡ್ಡವರಾಗಿದ್ದಾರೆ.
ನೋ ಪ್ರಾಬ್ಲಮ್, ಕಾರ್ಯಕ್ರಮವನ್ನು ಮುಂದೂಡೋಣ.’ ಕೊನೆಗೂ, ರತನ್ ಆ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಆ ಕಾರ್ಯಕ್ರಮ ನಡೆಯಲಿಲ್ಲ. ರತನ್ ಬಗ್ಗೆ ಸುಹೇಲ್ ಆ ಸಂದರ್ಶನದಲ್ಲಿ ಹೇಳಿದ್ದು – ‘ಟಾಟಾ ಸಂಸ್ಥೆ ಉಳಿದೆಲ್ಲ ಕಂಪನಿಗಳಿಗಿಂತ ಮಾನವೀಯವಾಗಿದೆ ಹಾಗೂ ಭಿನ್ನವಾಗಿದೆ ಎಂಬುದಕ್ಕೆ ಇಂಥ ಅಂತಃ ಕರಣದ ವ್ಯಕ್ತಿಗಳ ನಾಯಕತ್ವ ಅದಕ್ಕಿದೆ ಎಂಬುದೇ ಕಾರಣ. ನಾಯಕತ್ವ ಅಂದ್ರೆ ನಾಯಕನಾದವನು ಏನು ಮಾಡುತ್ತಾನೆ ಎಂಬುದಲ್ಲ. ಆತ ಯಾವುದರಲ್ಲಿ ನಂಬಿಕೆ ಇಟ್ಟುಕೊಂಡಿದ್ದಾನೆ ಎಂಬುದು.
ನಾಯಕ ನಾದವನು ಯಾವುದರಲ್ಲಿ ನಂಬಿಕೆ ಇಟ್ಟುಕೊಂಡಿದ್ದಾನೆ ಮತ್ತು ಯಾವುದನ್ನು ಮಾಡುತ್ತಾನೆ ಎಂಬ ಈ ಎರಡು ಸಂಗತಿಗಳು ಕಂಪನಿಯ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಹೌಸ್ ಆಫ್ ಟಾಟಾವನ್ನು ಇಂಥ ಉದಾತ್ತ ಆಶಯಗಳಿಂದ ಕಟ್ಟಲಾಗಿದೆ.’ ಹತ್ತು ವರ್ಷಗಳ ಹಿಂದೆ, ರತನ್ ಟಾಟಾ ಅವರ ಒಂದು ಟ್ವೀಟ್’ನ ಸ್ಕ್ರೀನ್ ಶಾಟ್ ತೆಗೆದುಕೊಂಡು, ನಾನು ಸೇವ್ ಮಾಡಿ ಇಟ್ಟುಕೊಂಡಿದ್ದೇನೆ. ಜನೆವರಿ 18, 2012 ರಂದು ರತನ್ ಟ್ವೀಟ್ ಮಾಡಿದ್ದರು – ‘”Tito and Tango seek nothing in return for their affection other than love and attention. I miss them terribly when I am away.’ ರತನ್ ಜಾಗದಲ್ಲಿ ಬೇರೆ ಯಾರೇ ಇದ್ದರೂ ಚಾರ್ಲ್ಸ್ ಏರ್ಪಪಡಿಸಿದ ಆ ಕಾರ್ಯಕ್ರಮಕ್ಕೆ ನಿಶ್ಚಿತವಾಗಿ ಹೋಗುತ್ತಿದ್ದರು.
ಆದರೆ ತಮ್ಮ ಸಾಕು ನಾಯಿ ಅನಾರೋಗ್ಯಕ್ಕೆ ತುತ್ತಾಗಿದೆಯೆಂದು, ಇಂಗ್ಲೆಂಡಿನ ರಾಜಕುಮಾರ ಸಂಘಟಿಸಿದ ಸನ್ಮಾನ ಸಮಾರಂಭಕ್ಕೆ ಹೋಗದೇ, ನಾಯಿಯ ಜತೆಯ ಇದ್ದು ಅದರ ಆರೈಕೆ ಮಾಡಲು ನಿರ್ಧರಿಸಿದ ರತನ್ ಅದೆಂಥ ಮಾನವಂತರಿದ್ದಿರಬಹುದು?! ಯಾರೂ ಸುಖಾಸುಮ್ಮನೆ ದೊಡ್ಡವರು ಎಂದು ಎನಿಸಿ ಕೊಳ್ಳುವುದಿಲ್ಲ.
ರತನ್ ಮತ್ತು ಗೋವಾ
ಒಂದು ವಾರದ ಹಿಂದೆಯಷ್ಟೇ, Humans of Bombay ಫೋಟೋ ಬ್ಲಾಗ್ ಸಂಸ್ಥಾಪಕ ಮತ್ತು ಮುಖ್ಯಸ್ಥ ಕರಿಷ್ಮಾ ಮೆಹ್ರಾ ಎಂಬುವವರು ರತನ್ ಟಾಟಾರನ್ನು ಅವರ ಆಫೀಸಿನಲ್ಲಿ ಭೇಟಿಯಾದ ಅನುಭವವನ್ನು ಹಂಚಿಕೊಂಡಿದ್ದರು. ನಾನು ಅದನ್ನು ಓದಿದ್ದೆ.
ನಿಮಗೆ ಗೊತ್ತಿರಬಹುದು, ರತನ್ ಟಾಟಾ ಅಪ್ಪಟ ಶ್ವಾನಪ್ರಿಯರು, ಮುಂಬಯಿಯಲ್ಲಿರುವ ಟಾಟಾ ಗ್ರೂಪ್ ಜಾಗತಿಕ ಪ್ರಧಾನ ಕಚೇರಿಯಲ್ಲಿ ಅವರು ನಾಯಿಗಳಿ ಗಾಗಿಯೇ ವಿಶೇಷ ಮನೆ (Kennel)ಯನ್ನು ಕಟ್ಟಿಸಿದ್ದಾರೆ. ಅಲ್ಲಿ ಬಿಡಾಡಿ ನಾಯಿಗಳಿಗೂ ಆಶ್ರಯ ನೀಡಿzರೆ. ಅಲ್ಲಿರುವ ನಾಯಿಗಳ ಪೈಕಿ ‘ಗೋವಾ’ ಎಂಬ ಹೆಸರಿನ ನಾಯಿ, ಕಚೇರಿಯಲ್ಲಿ ರತನ್ ಜತೆಯ ಇರುತ್ತದೆ. ರತನ್ ಮೀಟಿಂಗ್ನಲ್ಲಿದ್ದರೆ ಅದು ಸಹ ಅಲ್ಲಿಗೆ ಆಗಮಿಸುತ್ತದೆ. ಅದಕ್ಕಾಗಿಯೇ ಆಸನ ವ್ಯವಸ್ಥೆಯನ್ನೂ
ಮಾಡಲಾಗಿದೆ.
ಒಮ್ಮೆ ಕರಿಷ್ಮಾ ಮೆಹ್ರಾ, ರತನ್ ಟಾಟಾರನ್ನು ಭೇಟಿ ಮಾಡಿ, ಸಂದರ್ಶಿಸಲು ಅಲ್ಲಿಗೆ ಹೋಗಿದ್ದರು. ಕರಿಷ್ಮಾ ಅವರಿಗೆ ನಾಯಿ ಅಂದ್ರೆ ಭಯ. ಹೀಗಾಗಿ ಅವುಗಳನ್ನು ಕಂಡರಾಗದು, ಅವರು ಟಾಟಾಗಾಗಿ ಕಾಯುತ್ತಿದ್ದಾಗ, ರತನ್ ಪಕ್ಕದಲ್ಲಿಯೇ ನಾಯಿಯೂ ಕುರ್ಚಿಯ ಮೇಲೆ ಕುಳಿತಿರುವುದು ಕಾಣಿಸಿತು. ತಕ್ಷಣ ಆಕೆ, ರತನ್ ಅವರ ಆಪ್ತ ಸಹಾಯಕ ಶಂತನು ನಾಯ್ಡು ಅವರಿಗೆ ಮೆಲ್ಲಗೆ, ‘ಇನ್ನೇನು ನಾನು ರತನ್ ಅವರನ್ನು ಭೇಟಿ ಮಾಡಲಿದ್ದೇನೆ. ಆದರೆ ಅವರ ಪಕ್ಕದಲ್ಲಿ ಒಂದು ನಾಯಿ ಕುಳಿತಿದೆ. ನನಗೆ ನಾಯಿಗಳೆಂದರೆ ಆಗೊಲ್ಲ. ಅವನ್ನು ನೋಡಿದರೆ ಭಯ ಆಗುತ್ತದೆ’ ಎಂದು ಉಸುರಿದಳು.
ಇದನ್ನು ರತನ್ ಕೇಳಿಸಿಕೊಂಡರು. ‘ಕರಿಷ್ಮಾ ದಯವಿಟ್ಟು ಬನ್ನಿ’ ಎಂದು ಆಮಂತ್ರಿಸಿದ ರತನ್, ಅವರು ಕುಳಿತುಕೊಳ್ಳುತ್ತಿದ್ದಂತೆ, ತಮ್ಮ ನಾಯಿ ‘ಗೋವಾ’ ಕಡೆ
ತಿರುಗಿ, ‘ಗೋವಾ, ನಿನ್ನನ್ನು ಕಂಡರೆ ಅವರಿಗೆ ಭಯವಂತೆ. Goa, she’s scared of you, please be a good boy and sit!!’ ಎಂದು ಹೇಳಿದರು. ಆಗ ಗೋವಾ ಸುಮ್ಮನೆ ಕುಳಿತುಕೊಂಡಿತು.
ಮುಂದಿನ 30-40 ನಿಮಿಷಗಳ ಕಾಲ ಟಾಟಾ ಕರಿಷ್ಮಾ ಸಂದರ್ಶನದಲ್ಲಿ ಮಗ್ನರಾಗಿದ್ದರು. ಅಷ್ಟೂ ಹೊತ್ತು ‘ಗೋವಾ’ ಸುಮ್ಮನೆ ಕುರ್ಚಿ ಮೇಲೆ ಕುಳಿತಿತ್ತು. ಕರಿಷ್ಮಾ ಕಡೆ ನೋಡಲೂ ಇಲ್ಲ. ಎರಡು ವರ್ಷಗಳ ಹಿಂದೆ (2020) ತಮಗೆ 84 ವರ್ಷಗಳಾದಾಗ, ಸಾಮಾಜಿಕ ಜಾಲತಾಣಗಳಲ್ಲಿ ‘ಗೋವಾ’ ಜತೆಗಿನ -ಟೋವನ್ನು ರತನ್ ಟಾಟಾ ಹಂಚಿಕೊಂಡಿದ್ದರು. ಮೂರ್ನಾಲ್ಕು ವರ್ಷಗಳ ಹಿಂದೆ, ರತನ್ ಟಾಟಾ ಅವರ ಸ್ನೇಹಿತರೊಬ್ಬರು ಗೋವಾಕ್ಕೆ ಹೋಗಿದ್ದರು. ಅವರ ಕಾರಿನಲ್ಲಿ ಆ ಬೀಡಾಡಿ (Stray dog) ನಾಯಿ ಮುಂಬಯಿಗೆ ಬಂದು, ನೇರವಾಗಿ ಟಾಟಾ ಕಚೇರಿಯಿರುವ ಬಾಂಬೆ ಹೌಸ್ಗೆ ಆಗಮಿಸಿತು. ಅದನ್ನು ರತನ್ ಟಾಟಾ ತಮ್ಮ ಕಚೇರಿಯ ಸಂಗಾತಿ (office companion) ಯನ್ನಾಗಿ ಇಟ್ಟುಕೊಂಡರು.
ಗೋವಾದಿಂದ ಬಂದ ಆ ನಾಯಿಗೆ ‘ಗೋವಾ’ ಎಂದೇ ಹೆಸರಿಟ್ಟರು. ದಿನವಿಡೀ ಗೋವಾ, ರತನ್ ಜತೆ ಕಚೇರಿಯ ಕಳೆಯುತ್ತದೆ. ರತನ್ ಪಕ್ಕದಲ್ಲಿಯೇ ಇರುವ ಕುರ್ಚಿಯ ಮೇಲೆ ಕುಳಿತು, ಅದೂ ಸಹ ಮೀಟಿಂಗ್ನಲ್ಲಿ ಭಾಗವಹಿಸುತ್ತದೆ. ಕಳೆದ ಹಲವು ವರ್ಷಗಳಿಂದ ರತನ್ ಟಾಟಾ ದೀಪಾವಳಿ ಸೇರಿದಂತೆ ಪ್ರಮುಖ ಹಬ್ಬ-ಹರಿದಿನ ಸೇರಿದಂತೆ, ರಜಾ ದಿನಗಳನ್ನು ತಮ್ಮ ಸಾಕುಪ್ರಾಣಿಗಳ ಜತೆಯೇ ಕಳೆಯುತ್ತಿರುವುದು ಗಮನಾರ್ಹ.
ಡಾ.ಕಲಾಂ ಮತ್ತು ಕಲಾವಿದರು
2006ರ ನವೆಂಬರ್ನಲ್ಲಿ ‘ಇಂದ್ರ ಧನುಷ್’ ಕಾರ್ಯಕ್ರಮದಡಿ ಬಯಲು ರಂಗಮಂಟಪದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಶಂಕರ್ ಮಹದೇವನ್, ಯು. ಶ್ರೀನಿವಾಸ, ಶಿವಮಣಿ ಹಾಗೂ ಲಾಯ್ ಮೆಂಡೊನ್ಸ್ ಪಾಲ್ಗೊಂಡಿದ್ದರು. ಈ ಪ್ರದರ್ಶನಗಳಿಗೆ ಅಪಾರ ಸಂಖ್ಯೆಯಲ್ಲಿ ಕಲಾರಸಿಕರು ಆಗಮಿಸಿದ್ದರು. ಇನ್ನೇನು ಕಾರ್ಯಕ್ರಮ ಮುಗಿಯಿತು, ನೆನಪಿನ ಕಾಣಿಕೆಗಳನ್ನು ನೀಡಲಾಯಿತು, ವಂದನಾರ್ಪಣೆ ಮಾತ್ರ ಬಾಕಿ ಉಳಿದಿತ್ತು. ಆಗ ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ
ವೇದಿಕೆಗೆ ಆಗಮಿಸಿದರು!
ಡ್ರಮ್ಮರ್ ಶಿವಮಣಿ ಜತೆ ಒಂದೆರಡು ಮಾತುಗಳನ್ನಾಡಿದರು. ಸೇರಿದ ಕಲಾರಸಿಕರು ಅಚ್ಚರಿಪಡುವಂತೆ ಕಲಾಂ ಡ್ರಮ್ ಬಾರಿಸಿದರು. ಶಿವಮಣಿ ಪಕ್ಕದಲ್ಲಿ ನಿಂತಿ
ದ್ದರು. ಕಲಾಮ್ ಬಹಳ ಸೊಗಸಾಗಿ ಡ್ರಮ್ ಬಾರಿಸಿದರು. ಅನನುಭವಿಯಾಗಿಯೂ ಅವರು ಚೆನ್ನಾಗಿಯೇ ತಮ್ಮ ಕೆಲಸ ನಿರ್ವಹಿಸಿದರು. ಅಂದು ಪ್ರೇಕ್ಷಕರು ಕಲಾಂ ಅವರ ಪ್ರದರ್ಶನವನ್ನು ತುಂಬಾ ಚೆನ್ನಾಗಿ ಮೆಚ್ಚಿಕೊಂಡರು.
ರಾಷ್ಟ್ರಪತಿಭವನದಲ್ಲಿ ಗಣ್ಯ ಕಲಾವಿದರು ಪ್ರದರ್ಶನ ನೀಡಿದರೂ, ಕಲಾಂ ಯುವಕರಿಗೆ, ಅರಳುವ ಪ್ರತಿಭೆಗಳಿಗೂ ಅವಕಾಶ ಮಾಡಿಕೊಡುತ್ತಿದ್ದರು. ಸಂಗೀತ ಹಾಗೂ ನೃತ್ಯಕ್ಕೆ ಮಾತ್ರ ಅಲ್ಲ ಚಿತ್ರಕಲೆ, ಶಿಲ್ಪಕಲೆ ವಿಷಯದಲ್ಲೂ ಕಲಾಂ ಅನೇಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು. ಆ ಎಲ್ಲ ಕಲಾವಿದರೊಂದಿಗೆ
ಕಲಾಂ ಅವರು ಸಾಕಷ್ಟು ಸಮಯ ಕಳೆಯುತ್ತಿದ್ದರು. ಇದು ಆ ಅರಳುವ ಪ್ರತಿಭೆಗಳ ನೈತಿಕತೆ ಎತ್ತರಿಸಿ ಅವರಲ್ಲಿ ಪ್ರೇರಣೆ ತುಂಬಲು ಸಹಾಯಕವಾಯಿತೆಂಬು ದನ್ನು ಹೇಳಬೇಕಿಲ್ಲ. ಪ್ರತಿಭೆ ಹಾಗೂ ಸೃಜನಶೀಲತೆ ಕಂಡಾಗ ಅದನ್ನು ಗುರುತಿಸಿ, ಹುರಿದುಂಬಿಸಲು ಕಲಾಂ ಅವರಿಗೆ ಯಾವುದೂ ಅಡ್ಡಿಯಾಗುತ್ತಿರಲಿಲ್ಲ. ಅವರು ಈ ವಿಷಯದಲ್ಲಿ ಎಲ್ಲ ಶಿಷ್ಟಾಚಾರ ಮತ್ತು ರಗಳೆಗಳನ್ನು ಬದಿಗೊತ್ತಿ ಪ್ರೋತ್ಸಾಹಿಸುತ್ತಿದ್ದರು.
ಕಲಾಂ ಅವರು ಕೊಯಮತ್ತೂರಿಗೆ ಹೋದಾಗ, ಪ್ರಸಿದ್ಧ ಸಂಗೀತಗಾರ ಕೃಷ್ಣಮೂರ್ತಿಯವರನ್ನು ಭೇಟಿ ಮಾಡಿದ್ದರು. ಅವರಿಗೆ ಕೈಕಾಲುಗಳಿರಲಿಲ್ಲ. ಈ ಅಂಗವೈಕಲ್ಯ ಅವರನ್ನು ಅಧೀರಗೊಳಿಸಲಿಲ್ಲ. ಕೃಷ್ಣಮೂರ್ತಿಯವರನ್ನು ಕಂಡು ಪ್ರಭಾವಿತರಾದ ಕಲಾಂ, ಅವರನ್ನು 2007ರ ಜುಲೈ ತಿಂಗಳಲ್ಲಿ ರಾಷ್ಟ್ರಪತಿ ಭವನಕ್ಕೆ ಆಮಂತ್ರಿಸಿದ್ದರು. ಕೃಷ್ಣಮೂರ್ತಿ ಹಾಗೂ ಪಕ್ಕವಾದ್ಯ ಕಲಾವಿದರ ಪ್ರಯಾಣ ಹಾಗೂ ಇನ್ನಿತರ ಖರ್ಚುಗಳನ್ನು ಕಲಾಂ ರಾಷ್ಟ್ರಪತಿ ಭವನವೇ ಭರಿಸುವ ಏರ್ಪಾಟನ್ನು ಮಾಡಿದ್ದರು. ಈ ವಿಷಯಗಳನ್ನು ಡಾ.ಕಲಾಂ ರಾಷ್ಟ್ರಪತಿಯಾಗಿದ್ದಾಗ ಅವರ ಕಾರ್ಯದರ್ಶಿಯಾಗಿದ್ದ ಪಿ.ಎಂ.ನಾಯರ್ ಬರೆದಿದ್ದಾರೆ.
ವೈಯಕ್ತಿಕ ಗ್ರಹಿಕೆ – ತೀರ್ಮಾನ
ವ್ಯಕ್ತಿತ್ವ ವಿಕಸನ ಗುರು ಸೈಮನ್ ಸಿನೆಕ್ ಹೇಳಿದ ಒಂದು ಮಾತು ನೆನಪಾಗುತ್ತಿದೆ. ನಮ್ಮ ಪ್ರತಿಯೊಂದು ಕೆಲಸ ಮತ್ತು ಅದರಿಂದಾಗುವ ಪರಿಣಾಮದ ಮೇಲೆ ನೇರ ಪ್ರಭಾವ ಬೀರುವ ಪ್ರಮುಖ ಸಂಗತಿಯೆಂದರೆ, ಅದು ನಮ್ಮ ವೈಯ್ಯಕ್ತಿಕ ತೀರ್ಮಾನ. ನಿರ್ಧಾರವನ್ನು ನಾವೇ ತೆಗೆದುಕೊಳ್ಳಬೇಕು. ಆದರೆ ನಮ್ಮಲ್ಲಿರುವ ಸಮಸ್ಯೆ ಎಂದರೆ, ಪ್ರತಿಯೊಂದು ವಿಚಾರದ ಮೇಲೂ ನಾವೊಂದು ಪೂರ್ವನಿರ್ಣಯ ಮಾಡಿಕೊಂಡಿರುತ್ತೇವೆ.
ಅದರಿಂದಾಗಿ ಉದ್ದೇಶಿತ ಕಾರ್ಯದ ಮೇಲೆ ನಮ್ಮ ಪೂರ್ವಗ್ರಹಿತ ಮನಸ್ಥಿತಿ ಪ್ರಭಾವ ಬೀರುತ್ತದೆ. ವಾಸ್ತವವಾಗಿ ನಾವು ಅಪಕ್ವ ಮತ್ತು ಅಪೂರ್ಣ ಮಾಹಿತಿ ಗಳನ್ನೇ ನೆಚ್ಚಿಕೊಂಡು ನಿರ್ಣಯಕ್ಕೆ ಬಂದಿರುತ್ತೇವೆ. ನಾವೇನು ಅಂದುಕೊಂಡಿರುತ್ತೇವೋ ಅದರ ಮೇಲೆ ನಾವು ಮಾಡುವ ಕೆಲಸದ -ಲಿತಾಂಶ ನಿರ್ಧಾರ ವಾಗಿರುತ್ತದೆ. ಇದು ಬಹಳ ಹಿಂದಿನ ಸಂಗತಿಯೇನಲ್ಲ. ಭೂಮಿ ಚಪ್ಪಟೆಯಾಗಿದೆ ಎಂದೇ ಭಾವಿಸಿದ್ದ ಜನರ ವ್ಯವಹಾರಗಳು ಕೂಡ ಅದೇ ರೀತಿಯದಾಗಿದ್ದವು. ದೂರಪ್ರಯಾಣ ಮಾಡುವುದಕ್ಕೆ ಜನ ಹೆದರುವ ಕಾಲ ಒಂದಿತ್ತು. ದೂರ ಪ್ರಯಾಣ ಮಾಡಿ ಕೊನೆ ಮುಟ್ಟಿದರೆ ಅಲ್ಲಿಂದ ಪ್ರಪಾತಕ್ಕೆ ಬೀಳುತ್ತೇವೇನೋ ಎಂಬ ಭಯಗ್ರಸ್ತ ವಾತಾವರಣವಿತ್ತು. ಭೂಮಿ ಗೋಲಾಕಾರವಾಗಿದೆ ಎಂದು ತಿಳಿದ ನಂತರದಲ್ಲಿ ಆ ಭಯ ದೂರವಾಯಿತು.
ಜನ ದೂರದೇಶಗಳಿಗೆ ಹೋಗತೊಡಗಿದರು, ವ್ಯಾಪಾರ ವ್ಯವಹಾರದಲ್ಲೂ ತೊಡಗಿಕೊಂಡರು. ಒಂದು ತಪ್ಪು ನಿರ್ಣಯದಿಂದ ಏನಾಗಬಹುದು ಎಂಬುದಕ್ಕೆ
ಇದೊಂದು ಪುಟ್ಟ ಉದಾಹರಣೆ ಅಷ್ಟೆ. ವಿಚಾರ ಯಾವುದೇ ಇರಲಿ, ಅದನ್ನು ಸಮಗ್ರವಾಗಿ ಅಧ್ಯಯನ ಮಾಡಿದ ನಂತರ ಮಾತ್ರ ನಾವು ತೀರ್ಮಾನಕ್ಕೆ ಬರಬೇಕು. ಹಾಗೆ ಮಾಡುವ ಮೂಲಕ ನಾವು ನಿರ್ವಹಿಸುವ ಕೆಲಸ, ಅದು ಯಾವುದೇ ಇರಲಿ ದೊಡ್ಡ ಸಫಲತೆಯನ್ನು ಕಾಣುತ್ತದೆ.
ಕೆಲಸದ ಅಂತಿಮ -ಲಶ್ರುತಿ
ಖ್ಯಾತ ಲೇಖಕ ಚಾರ್ಲ್ಸ್ ಜೋನ್ಸ್ ಹೇಳಿದ ಒಂದು ಸಂಗತಿ ಬಗ್ಗೆ ನಿಮ್ಮ ಗಮನ ಸೆಳೆಯಬೇಕು. ಕೆಲವು ಮಂದಿ ತುಂಬಾ ಕೆಲಸ ಮಾಡುತ್ತಾರೆ, ಮಾಡುತ್ತಲೇ
ಇರುತ್ತಾರೆ, ಆದರೆ ಅವರ ಬಳಿ ಪ್ರದರ್ಶಿಸುವುದಕ್ಕೆ ಏನೇನೂ ಇರುವುದಿಲ್ಲ. ಇನ್ನು ಕೆಲವರು ಕೆಲಸ ಮಾಡುವುದು ನಮ್ಮ ಗಮನಕ್ಕೇ ಬರುವುದಿಲ್ಲ, ಆದರೆ ಅವರಲ್ಲಿ ಅದ್ಭುತವಾದದ್ದು ಗೋಚರವಾಗುತ್ತದೆ. ಇದ್ಯಾಕೆ ಹೀಗೆ? ನಾಯಕತ್ವದ ಮೊದಲ ನಿಯಮವೆಂದರೆ, ನೀವು ಕಷ್ಟಪಟ್ಟು ಕೆಲಸ ಮಾಡುವುದಕ್ಕಿಂತ ಮುಖ್ಯವಾಗಿ ಇಷ್ಟಪಟ್ಟು ಕೆಲಸ ಮಾಡಬೇಕು.
ಕೆಲಸ ಮಾಡುವುದು ಮುಖ್ಯವೇ ಹೌದು, ಆದರೆ ಅದಕ್ಕಿಂತ ಹೆಚ್ಚಾಗಿ ನೀವು ಮಾಡುವ ಕೆಲಸದ ಬಗ್ಗೆ ರೋಮಾಂಚಿತರಾಗಿ ಅದರಲ್ಲಿ ತಲ್ಲೀನರಾಗುವುದನ್ನು ನೀವು ಕಲಿತಿರಬೇಕು. ಕೆಲಸ ಯಾವುದೇ ಇರಲಿ, ಇದು ಎಲ್ಲರಿಗೂ ಅನ್ವಯವಾಗುತ್ತದೆ. ಕೆಲಸದ ವಿವರಣೆಯಲ್ಲಿ ಗೊಂದಲ, ನೀರಸ ಮನಸ್ಥಿತಿ, ತಯ್ಯಾರಿ ಯಲ್ಲಿ ಚ್ಯುತಿ, ಪ್ರಯಾಸ, ಸುಸ್ತು ಇವೆಲ್ಲವೂ ಆಗೇ ಆಗುತ್ತದೆ. ನಾವು ಇವೆಲ್ಲವನ್ನೂ ಮೀರಬೇಕಾಗುತ್ತದೆ. ನಾವು ಏನೇ ಕೆಲಸ ಮಾಡುತ್ತಿದ್ದರೂ ಅಲ್ಲಿ ತಲ್ಲೀನರಾಗದೇ, ಪಕ್ಕದಲ್ಲಿರುವವನ ಕೆಲಸದ ಪರಿಯನ್ನು ಕಂಡು ರೋಮಾಂಚಿತರಾಗುತ್ತೇವೆ ಮತ್ತು ಅದರ ಕಾಲಹರಣ ಮಾಡುತ್ತೇವೆ.
ಅದರ ಬದಲಾಗಿ ನೀವೇ ಆ ಕೆಲಸವನ್ನು ಮಾಡಬೇಕಾದರೆ, ಕಲಿಯಬೇಕಾದರೆ, ಅಭಿವೃದ್ಧಿ ಮಾಡಬೇಕಾದರೆ, ಯೋಜನೆ ತಯಾರಿಸಬೇಕಾದರೆ ಮತ್ತು ಗಮನ ವಿಟ್ಟು ತಲ್ಲೀನತೆಯಿಂದ ಮಾಡಬೇಕಾದರೆ ಸಿಗದ ಮಜಾ ಪಕ್ಕದಲ್ಲಿರುವವನ ಕೆಲಸ ನೋಡುವಾಗ ನಿಮಗೆ ಆಗುತ್ತದೆ. ಯಾಕೆ ಹೀಗೆ? ಅದು ಮಾನವ ಸಹಜ ಗುಣ. ನಾಯಕತ್ವದ ಮೊದಲ ಲಕ್ಷಣವೆಂದರೆ ಬೇರೊಬ್ಬನ ಕೆಲಸವನ್ನು ನೋಡಿ ನಾವು ರೋಮಾಂಚಿತರಾಗಬಾರದು.
ಕೆಲಸ ಯಾವುದೇ ಇರಲಿ, ಎಲ್ಲ ಕಾಲಕ್ಕೂ ಇದು ಅನ್ವಯವಾಗುವ ಸಂಗತಿ. ನಾಯಕತ್ವದ ನಿಯಮವೆಂದರೆ, ನಿಮ್ಮ ಮುಂದಿರುವ ಅತ್ಯಂತ ಕಷ್ಟದಾಯಕ ಕೆಲಸ ದಲ್ಲಿ ನೀವು ಮೊದಲು ತಲ್ಲೀನ ರಾಗಬೇಕು. ಆ ಕೆಲಸವನ್ನು ಸುಖದಾಯಕವಾಗಿ ಬದಲಿಸುವಲ್ಲಿ ನಿಮ್ಮ ಪರಿಶ್ರಮ ಹಾಕಬೇಕು. ಆಗ ಕೆಲಸ ಕೊನೆಗೊಂಡಾಗ ಸಿಗುವ ಖುಷಿ ಮತ್ತು ರೋಮಾಂಚನದ ಅನುಭವವಿದೆಯಲ್ಲ, ಅದು ಪಾರವಿಲ್ಲದ್ದು.