Wednesday, 18th September 2024

ಖಾಸಗಿ ಸಾರಿಗೆ ವ್ಯವಸ್ಥೆಗೆ ಕೊಳ್ಳಿಯಿಟ್ಟಿತಾ ಸರಕಾರ ?

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ರಾಜ್ಯದ ಶೇ.೪೨ರಷ್ಟು ಮಹಿಳಾ ಪ್ರಯಾಣಿಕರು ಸಕಾಲದಲ್ಲಿ ದೊರಕುವ ಖಾಸಗಿ ಬಸ್ಸುಗಳನ್ನೇ ನಂಬಿಕೊಂಡಿzರೆ. ಸರಕಾರದ ವ್ಯವಸ್ಥೆ ತಲುಪದ ಕಡೆಗೆ ನಾವು ತಲುಪಿ, ಜನಸೇವೆಗೆ ಕಟಿಬದ್ಧರಾಗಿ ನಿಂತಿದ್ದೇವೆ. ಶಕ್ತಿ ಯೋಜನೆಯಲ್ಲಿ ನಮ್ಮನ್ನೂ ಒಳಗೊಂಡು ರಾಜ್ಯಾದ್ಯಂತ ಜಾರಿಯಾಗಬೇಕು ಎನ್ನುತ್ತಿದ್ದಾರೆ.

ಶತಮಾನಗಳಿಂದಲೂ ಖಾಸಗಿ ಬಸ್ಸುಗಳು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜನಸಾಮಾನ್ಯರಿಗಾಗಿ ಓಡಾಡುತ್ತಿವೆ. ಈ ಭಾಗದಲ್ಲಿ ಸಾರಿಗೆ ವಾಹನಗಳಿದ್ದರೂ ಬೆರಳೆಣಿಕೆಯಷ್ಟು ಮಾತ್ರ ಮತ್ತು ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರು ಸರಕಾರಿ ಬಸ್ಸುಗಳನ್ನು ನಂಬಿ ಕುಳಿತರೆ ಮರುಜನ್ಮ ಎತ್ತಿಬರಬೇಕಾದೀತು ಎಂಬಂಥ ಪರಿಸ್ಥಿತಿಯಿದೆ. ಹಾಗಾಗಿ, ಮೂಲದಿಂದಲೂ ಖಾಸಗಿ ಬಸ್ಸುಗಳನ್ನೇ ನಂಬಿಕೊಂಡು ಇಲ್ಲಿನ ಜನರು ಪ್ರಯಾಣಿಸು ತ್ತಿದ್ದಾರೆ.

ಮಂಗಳೂರು ನಗರ ಪ್ರದೇಶವೊಂದರ ಸುಮಾರು ೩೦೦ರಷ್ಟು ಖಾಸಗಿ ಬಸ್ಸುಗಳಿವೆ. ಈ ಭಾಗದಲ್ಲಿ ಹಳ್ಳಿ ಪ್ರದೇಶಕ್ಕೆ ಹೋಗುವ ಸರಕಾರಿ ಬಸ್ಸುಗಳನ್ನು ವಿಚಾರಿಸಿದರೆ, ಒಂದಂಕಿಯನ್ನೂ ದಾಟುವು ದಿಲ್ಲ. ಹಾಗಾಗಿ, ಜಿಯಲ್ಲಿ ಖಾಸಗಿ ಬಸ್ಸುಗಳಿಂದ ಒಪ್ಪಂದ ಸಾರಿಗೆ (Contract carriage) ಸೇವೆ
ನಡೆಯುತ್ತಿದೆ. ಜತೆಗೆ, ಸರಕಾರಿ ನೌಕರಿಗಳಿಗೆ ಜೋತು ಬೀಳದೆ ಖಾಸಗಿ ಬಸ್ಸು, ವಾಹನಗಳಲ್ಲಿ ಚಾಲಕರಾಗಿ, ನಿರ್ವಾಹಕರಾಗಿ ಮತ್ತು ದಶಕಗಳಿಂದ ದುಡಿಯುತ್ತ ಬಸ್ಸಿನ ಮಾಲೀಕರಾದ ಅನೇಕ ಉದ್ಯೋಗಿಗಳು, ಉದ್ಯಮಿಗಳು ಈ ಮೂಲಕ ನೂರಾರು ಜನರಿಗೆ ಮತ್ತು ಅವರ ಮೇಲೆ ಅವಲಂಬಿತ ರಾಗಿರುವ ಕುಟುಂಬ ಸದಸ್ಯರ ಜೀವನಕ್ಕೂ ಆಸರೆಯಾಗುತ್ತಿದ್ದಾರೆ. ಈ ಮೂಲಕ ಬದುಕನ್ನೂ ನಾವು ಸಮಾಜ ವಾದ ಮತ್ತು ಸಾಮಾಜಿಕ ಭದ್ರತೆಯಡಿ ನೋಡುವ ಅಗತ್ಯವಿದೆ.

ಇದೇ ಸಂದರ್ಭದಲ್ಲಿ ಜಾರಿಯಾದ ಶಕ್ತಿ ಯೋಜನೆಯ ಕುರಿತು ಖಾಸಗಿ ಬಸ್ಸುಗಳ ಮಾಲೀಕರು, ಕರೋನಾ ಸಂಕಷ್ಟದಲ್ಲಿ ಪ್ರಯಾಣ ಸೇವೆಯನ್ನು ನಿಲ್ಲಿಸಿ ನಮಗೆ ನಷ್ಟವುಂಟಾಗಿದೆ, ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಈಗ, ಶಕ್ತಿ ಯೋಜನೆಯಿಂದ ನಮಗೆ ಮತ್ತು ನಮ್ಮ ಮೂಲ ಪ್ರಯಾಣಿಕರಿಗೆ ಉಚಿತ ಪ್ರಯಾಣ ಯೋಜನೆಯ ಪ್ರಯೋಜನ ಸಿಗುವುದಿಲ್ಲ. ಆದ್ದರಿಂದ ಸರಕಾರವು, ನಮಗೆ ಸ್ಪಂದಿಸಿದರೆ ನಾವು ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು ಸಿದ್ಧರಿದ್ದೇವೆ. ಆದರೆ, ರಾಜ್ಯ ಸರಕಾರವು ಪ್ರತೀ ೩ ತಿಂಗಳಿ ಗೊಮ್ಮೆ ಕಟ್ಟಿಸಿಕೊಳ್ಳುವ ರಸ್ತೆ ತೆರಿಗೆಯನ್ನು ಮತ್ತು
ಮೀನುಗಾರರ ದೋಣಿಗಳಿಗೆ ನೀಡುವಂತೆ ನಮಗೂ ಸಬ್ಸಿಡಿ ದರದಲ್ಲಿ ಡೀಸೆಲ್ ನೀಡಬೇಕು ಎಂದು ಮಾಧ್ಯಮಗಳ ಮೂಲಕ ಸಹ ಸರಕಾರವನ್ನು
ಕೇಳಿಕೊಂಡಿದ್ದಾರೆ.

ಖಾಸಗಿ ಬಸ್ಸುಗಳ ಕುರಿತಂತೆ ಗಮನಿಸುವುದಾದರೆ, ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಖಾಸಗಿ ಬಸ್ಸುಗಳ ಸಂಚಾರ ದಟ್ಟಣೆಯು ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಿವೆ. ಸುಮಾರು ೯೦೦ಕ್ಕೂ ಅಧಿಕ ಗ್ರಾಮಗಳಿಗೆ ಸರಕಾರಿ ಬಸ್ಸುಗಳ ಸೇವೆ ಇಲ್ಲದಿರುವ ಜಿಗಳಾಗಿ ಶಿವಮೊಗ್ಗ, ದಾವಣಗೆರೆ ಮತ್ತು ತುಮಕೂರು ಜಿಗಳು ದಾಖಲೆ ಮಾಡಿವೆ ಎನ್ನಬಹುದು. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿನ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿಯೇನು ಇಲ್ಲ.

ಇನ್ನು, ಮೈಸೂರು ಜಿಯ ಸುಮಾರು ೧೦, ಬೆಳಗಾವಿ ಗ್ರಾಮೀಣ ಪ್ರದೇಶದ ೩೦ಕ್ಕೂ ಅಧಿಕ ಮತ್ತು ಕೊಡಗಿನ ಕೆಲ ಹಳ್ಳಿಭಾಗಗಳಿಗೆ ಸಹ ಸರಕಾರಿ ಬಸ್ಸಿನ ಸಂಪರ್ಕ ಇಲ್ಲಿಯವರೆಗೂ ಇಲ್ಲದಿರುವುದು ಕಂಡುಬಂದಿದೆ. ಒಂದು ಅಂದಾಜಿನ ಪ್ರಕಾರ, ಚಿತ್ರದುರ್ಗ ಜಿಲ್ಲೆಯಲ್ಲಿ ೪೦೦ರಷ್ಟು ಖಾಸಗಿ ಬಸ್ಸುಗಳ ಸಂಚಾರವನ್ನೇ ಅಲ್ಲಿನ ಜನರು ನಂಬಿಕೊಂಡಿದ್ದಾರೆ, ಸರಕಾರಿ ಬಸ್ಸುಗಳ ಸೇವೆಯೇ ಲಭ್ಯವಿಲ್ಲ. ಕರೋನಾ ನಂತರದಲ್ಲಿ ಇದ್ದ ಕೆಲ ಬಸ್ಸುಗಳು ಸಂಚಾರ ವನ್ನು ನಿಲ್ಲಿಸಿವೆ. ಇನ್ನು, ಚಿಕ್ಕಮಗಳೂರಿನ ರಿಮೋಟ್ ಪ್ರದೇಶದ ಹಳ್ಳಿಗಳಿಗೆ ಖಾಸಗಿ ಬಸ್ಸುಗಳೇ ಜೀವನಾಡಿ. ಸರಕಾರಿ ಬಸ್ಸುಗಳು ಇತ್ತ ಮುಖ ಮಾಡಿಯೂ ಇಲ್ಲವೆಂದು ಜನರು ನಿಟ್ಟುಸಿರು ಬಿಡುತ್ತಾರೆ.

ಸುಮಾರು ೨೦೦ರಷ್ಟು ಖಾಸಗಿ ಬಸ್ಸುಗಳಲ್ಲಿ ಓಡಾಡುವ ಬಹುತೇಕ ಮಹಿಳೆಯರು ಶಕ್ತಿ ಯೋಜನೆಯಿಂದ ಬಹುದೂರವೇ ಉಳಿದಿದ್ದಾರೆ.  ಬೆಂಗಳೂರಿ ನಂತಹ ನಗರ ಪ್ರದೇಶಗಳಲ್ಲಿನ ಉಳ್ಳವರು ಈ ಯೋಜನೆ ಪಡೆದರೆ ಸಾಕೆ? ನಾವು ಮತ ಹಾಕಿಲ್ಲವೆ? ನಾವು ಮಹಿಳೆಯರು ಅಲ್ಲವೇ? ಎಂದು ಪ್ರಶ್ನಿಸುವ ಮಹಿಳೆಯರನ್ನು ಸರಕಾರ ಗಮನಿಸುವುದೇ? ಎಂಬುದನ್ನು ಬಲ್ಲವರಾರು! ಶಿವಮೊಗ್ಗ ಜಿಯಿಂದ ಪಕ್ಕದ ದಾವಣಗೆರೆ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾವೇರಿ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಖಾಸಗಿ ಬಸ್ಸುಗಳೇ ಆಧಾರ.

ಇನ್ನು ಕುಂದಾಪುರ-ಬೈಂದೂರು ವಿಭಾಗದಲ್ಲಿ ಸರಕಾರಿ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಬೇಡಿಕೆಯಿದ್ದರೂ, ಸಂಚರಿಸಲು ಪರವಾನಿಗೆ ಇದ್ದರೂ ಸರಕಾರಿ ಬಸ್ಸುಗಳ ಓಡಾಟ ನಿಲ್ಲಿಸಿರುವುದು ಯಾಕೆ ಎಂದು ಅಲ್ಲಿನ ವಿದ್ಯಾರ್ಥಿಗಳು, ಮಹಿಳೆಯರು ಪ್ರಶ್ನಿಸುತ್ತಿದ್ದಾರೆ. ಸುಮಾರು ೧೦ ಸಾವಿರಕ್ಕೂ ಅಧಿಕ ಶಿಕ್ಷಣಾರ್ಥಿಗಳು ಈ ಮಾರ್ಗವನ್ನು ಬಳಸುತ್ತಿದ್ದು, ಈ ಪೈಕಿ ಬಹುತೇಕ ಮಂದಿ ಕುಂದಾಪುರ ಹಾಗೂ ಬೈಂದೂರಿನ ಗ್ರಾಮೀಣ ಭಾಗದವರಾಗಿದ್ದು, ಬಸ್ರೂರು, ಹಾಲಾಡಿ, ಕೊಕ್ಕರ್ಣೆ, ಸಿದ್ದಾಪುರ, ಶಂಕರ ನಾರಾಯಣ, ಗೋಳಿಯಂಗಡಿ, ಹೆಬ್ರಿ, ತಲ್ಲೂರು ಮೂಲಕ ಕೊಲ್ಲೂರು, ಹೆಮ್ಮಾಡಿ ಮೂಲಕ
ಕೊಲ್ಲೂರು, ನೂಜಡಿ, ಆಲೂರು, ಕೆರಾಡಿ, ಹಳ್ಳಿಹೊಳೆ, ಕಮಲಶಿಲೆ, ಶೇಡಿಮನೆ, ಉಳ್ಳುರು ೭೪, ನಾಡಾ, ವಕ್ವಾಡಿ, ಗುಲ್ವಾಡಿ, ಉಪ್ಪಿನ ಕುದ್ರು,
ಯಡಮೊಗೆ ಅಮಾಸೆಬೈಲು, ಬೈಂದೂರು, ಯೆರುಕೋಣೆ ಹೀಗೆ ನಾನಾ ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ.

ಹೀಗೆ ಜನಪ್ರಿಯ ಐದು ಘೋಷಣೆಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಸರಕಾರ, ಯಾವುದೇ ವಿಷಯದಲ್ಲಿ ಪ್ರಾದೇಶಿಕ ತಾರತಮ್ಯ, ಭೇದ ಭಾವ
ತೋರಬಾರದು ಮತ್ತು ಸ್ಥಳೀಯರ ಬೇಡಿಕೆಗಳನ್ನು ಅಲಕ್ಷಿಸಬಾರದು. ಕರಾವಳಿಯ ಮಕ್ಕಳು, ಮಲೆನಾಡಿನ ಜನರು, ಉತ್ತರ ಕರ್ನಾಟಕದ ಜನಸಾಮಾ ನ್ಯರು ಸರಕಾರಿ ಘೋಷಣೆಗಳನ್ನು, ವಿವಿಧ ಯೋಜನೆಗಳನ್ನು ಪಡೆಯದಂತಹ ತಪ್ಪೇನು ಮಾಡಿzರೆ? ಎಂಬುದನ್ನಾದರೂ ಅಧಿಕಾರಿಗಳು, ಇಲಾಖೆ ಯವರು ಸ್ಪಷ್ಟಪಡಿಸಬೇಕು.

ನಾನು ಇಲ್ಲಿಯವರೆಗೆ ಸರಕಾರಿ ಬಸ್ಸುಗಳನ್ನೇ ನೋಡಿಲ್ಲ ಸ್ವಾಮಿ. ನಮ್ಮೂರ್ಗೆ ಖಾಸಗಿ ಬಸ್ಸು ಮಾತ್ರವೇ ಬರೋದು. ನಾವೂ ಸಾಲಿನಲ್ಲಿ ನಿಂತ್ಕಂಡೇ
ಓಟು ಹಾಕಿ ಬಂದಿರೋದು, ಆದ್ರೆ ನಮ್ಗೆ ಕೊಡಾಕಿಲ್ಲ ಅಂತಾರೆ ಫ್ರೀ ಬಸ್ಸು ಎನ್ನುವ ಮಹಿಳೆಯರಿಗೆ ಶಕ್ತಿಯೋಜನೆಯನ್ನು ಸರಕಾರ ಹೇಗೆ ಒದಗಿಸ ಬಲ್ಲದು? ಶಿವಮೊಗ್ಗ, ದಾವಣಗೆರೆ, ತುಮಕೂರು, ಕೋಲಾರ, ಬಳ್ಳಾರಿ, ಬೆಳಗಾವಿ, ಕಲ್ಯಾಣ ಕರ್ನಾಟಕ (ಇದರ ೮ ಜಿಲ್ಲೆಗಳ ವ್ಯಾಪ್ತಿಗಳಲ್ಲಿನ ೧೨೦ಕ್ಕೂ ಹೆಚ್ಚು ಗ್ರಾಮಗಳಿಗೆ ಇನ್ನೂ ಸಾರಿಗೆ ವ್ಯವಸ್ಥೆಯೇ ತಲುಪಿಲ್ಲದಿರುವ ವರದಿಗಳು ಪ್ರಕಟವಾಗಿವೆ.)

ಜಿಗಳಲ್ಲಿ ಪ್ರಯಾಣಿಸುವ ಇವರಿಗೆಲ್ಲ ಯಾವ ಸೇವೆಯ ಮೂಲಕ ಶಕ್ತಿ ಯೋಜನೆಯನ್ನು ಆಳುವ ಸರಕಾರ ಕೊಟ್ಟ ಮಾತಿನಂತೆ ತಲುಪಿಸಬಲ್ಲದು?
ಜನಸಾಮಾನ್ಯರ ನಿತ್ಯದ ಬದುಕಿನಲ್ಲಿ ಪ್ರಯಾಣವೆಂಬುದು ಒಂದು ಪ್ರಮುಖ ಭಾಗವಾಗಿ ಹೋಗಿದೆ. ಅದು ಹಳ್ಳಿಗಳಲ್ಲಿ ಸಂತೆಪೇಟೆಗೆ ಹೋಗುವುದಿರ
ಬಹುದು, ನಗರಪಟ್ಟಣಗಳಿಗೆ ಆರೋಗ್ಯ ತಪಾಸಣೆ, ಹೆಚ್ಚಿನ ಚಿಕಿತ್ಸೆಗೆ ಹೋಗುವುದಿರಬಹುದು ಮತ್ತು ಪ್ರಮುಖವಾಗಿ ನಮ್ಮ ಮಕ್ಕಳು ತಮ್ಮ ಶಾಲಾ ಕಲಿಕೆ ಗಾಗಿ ಪಕ್ಕದಲ್ಲಿನ ನಗರಕ್ಕೆ ಹೋಗುವುದಿರಬಹುದು,

ಇದಕ್ಕೆಲ್ಲ ಪ್ರಮುಖ ಆಧಾರವಾಗಿ ನಿಲ್ಲುವುದು ಸಾರಿಗೆ ವ್ಯವಸ್ಥೆ ಮಾತ್ರ. ಅಂತಾರಾಜ್ಯ ಪ್ರಯಾಣ, ವೋಲ್ವೋ, ಹವಾ ನಿಯಂತ್ರಿತ ಬಸ್‌ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಅನ್ವಯಿಸುವುದಿಲ್ಲ. ಕೇವಲ ಸರಕಾರಿ ಕೆಂಪು ಬಣ್ಣದ ಸಾರಿಗೆ ವಾಹನಗಳಿಗೆ ಮಾತ್ರ ಎಂಬ ನಿಬಂಧನೆಗಳು ವಿಧಿಸಲ್ಪಟ್ಟವು. ಸರಿಸುಮಾರು ೨೭ ಸಾವಿರದಷ್ಟು ನಿಗಮದ ವಾಹನಗಳು ೨೫ ಲಕ್ಷ ಕಿ.ಮೀ.ಗಳ ನಿತ್ಯದ ಸೇವೆ ಕೊಡುತ್ತಿವೆ ಎಂದು ಅಂದಾಜಿಸಲಾಗಿದೆ. ಇವುಗಳನ್ನು ಮಾತ್ರವೇ ನಂಬಿ ರಾಜ್ಯದ ಗ್ರಾಮೀಣ ಭಾಗದ ಜನರು ತಮ್ಮ ನಿತ್ಯ ಪ್ರಯಾಣಗಳನ್ನು ಹಮ್ಮಿಕೊಳ್ಳುವುದಾದರೆ ಅವರ ಗತಿಯೇನು ಎಂಬುದನ್ನು ಸಾರಿಗೆ ಇಲಾಖೆಯವರು ಗಂಭೀರವಾಗಿ ಯೋಚಿಸಬೇಕು. ಯಾಕೆಂದರೆ, ರಾಜ್ಯದಲ್ಲಿ ಸುಮಾರು ೮ ಸಾವಿರಕ್ಕೂ ಅದಿಕ ಖಾಸಗಿ ಬಸ್‌ಗಳಿದ್ದು, ಸರಕಾರಿ ಬಸ್ಸುಗಳು ಹೋಗದ, ಸೇವೆ ನೀಡದ, ಅತ್ಯಂತ ದುರ್ಗಮ ಮಾರ್ಗಗಳಿರುವ ಹಳ್ಳಿಗಳಿಗೆ ತಮ್ಮ ಸಾರಿಗೆ ಸೇವೆ ನೀಡುತ್ತಿವೆ.

ಇದರಲ್ಲಿ ಮಹಿಳೆಯರು ಮತ್ತು ಶಾಲಾಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವುದು ಕೂಡ ಸರಕಾರಿ ಸಾರಿಗೆ ವ್ಯವಸ್ಥೆಯ ವಿಫಲತೆಗೆ ಹಿಡಿದ
ಕೈಗನ್ನಡಿಯಾಗಿದೆ. ಕಾನೂನಾತ್ಮಕವಾಗಿ ಇದನ್ನು ಗಮನಿಸಿದರೆ, ಈ ಸಮಸ್ಯೆ ಬಹಳ ಹಿಂದಕ್ಕೆ ಹೋಗುತ್ತದೆ. ರಾಜ್ಯವನ್ನು ಮರುವಿಂಗಡಣೆ ಮಾಡುವ ಹಂತದ ಈ ಖಾಸಗಿ-ಸರಕಾರಿ ಸಾರಿಗೆ ಎಂಬ ದ್ವಂದ್ವಗಳು ಹುಟ್ಟಿಕೊಂಡವು. ಈ ಹಂತದಲ್ಲಿ ಹುಬ್ಬಳ್ಳಿ-ಧಾರವಾಡ ಸಾರಿಗೆ ವ್ಯವಸ್ಥೆಯನ್ನು ರಾಷ್ಟ್ರೀಕರಣ ಮಾಡಿ ೧೯೫೭ ರಲ್ಲಿ ರಾಜ್ಯ ಸಾರಿಗೆ ವ್ಯವಸ್ಥೆ ಎಂದು ಘೊಷಿಸ ಲಾಯಿತು.

೧೯೫೯ರಲ್ಲಿ ಆನೇಕಲ್ ನ್ಯಾಷನಲ್ ಸ್ಕೀಮ್ ಅಂತ ಮಾಡಲಾಯಿತು. ೧೯೬೦ರಲ್ಲಿ ಬೆಂಗಳೂರು ಸ್ಕೀಮ್ ಜಾರಿಗೊಳಿಸಲಾಯಿತು. ಈ ಹಂತದ ಬಿಟಿಎಸ್
ಯೋಜನೆಯನ್ನು ಮಹಾನಗರ ಪಾಲಿಕೆ ಅಡಿಯಲ್ಲಿ ಜಾರಿಗೊಳಿಸಲಾಯಿತು ಮತ್ತು ೨೫ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸುವಂತೆ ೨೦೧೪ರಲ್ಲಿ ನಿಯಮ ಗಳಲ್ಲಿ ಬದಲಾವಣೆ ತರಲಾಯಿತು. ಹೀಗೆ ಒಂದರ ಹಿಂದೆ ಒಂದರಂತೆ ಜಾರಿಯಾಗುತ್ತ ಬಂದ ರಾಷ್ಟ್ರೀಕೃತ ಯೋಜನೆಗಳು ೨೦ಕ್ಕೂ ಹೆಚ್ಚು ಎಂಬುದನ್ನು ಇಲ್ಲಿ ಗಮನಿಸಬೇಕು. ಇದರಲ್ಲಿ ಮಂಗಳೂರು ಯೋಜನೆಯೂ ಸೇರಿದ್ದು, ೧೯೬೮ರಲ್ಲಿ ರಾಷ್ಟ್ರೀಕೃತವಾಯಿತು. ೧೯೬೮ಕ್ಕೂ ಮೊದಲು ಸ್ಥಳೀಯ ಖಾಸಗಿ ವಾಹನಗಳಲ್ಲಿ ಜನರಿಗೆ ಸಾರಿಗೆ ಸೇವೆ ನೀಡುತ್ತಿದ್ದುದನ್ನು, ಮೋಟಾರು ಕಾಯ್ದೆ-೧೯೮೮ ಜಾರಿಗೊಳಿಸಿ ಇದರಲ್ಲಿಯೂ ಹಿಂದಿನದನ್ನು ಮುಂದುವರಿಸಲಾಯಿತು.

ಹೀಗೆ ರಾಷ್ಟ್ರೀಕೃತ ಯೋಜನೆಯಿಂದ ಖಾಸಗಿ ಸಾರಿಗೆಯವರಿಗೆ ಬಹುದೊಡ್ಡ ಹೊಡೆತ ಬಿದ್ದಿದ್ದಂತೂ ಸತ್ಯ. ಲೋಕಲ್ ಪ್ರಯಾಣಗಳನ್ನು ಮಾಡಬ ಹುದು. ಆದರೆ, ರಾಷ್ಟ್ರೀಕೃತಗೊಂಡ ಪ್ರಯಾಣದ ದಾರಿ (Route)ಗಳಲ್ಲಿ ಸಂಚರಿಸುವಂತಿಲ್ಲ ಎಂಬ ನಿಯಮದಿಂದ ಖಾಸಗಿಯವರ ಎಲ್ಲ ಪರವಾನಿಗೆ ಗಳು ರದ್ದಾದವು. ಇವರನ್ನು ಉಳಿಸಲಿಕ್ಕೆ ಸರ್ವೋಚ್ಚ ನ್ಯಾಯಾಲಯ ನೀಡಿದ ಸಲಹೆಯಂತೆ ೨೦೦೨ರಲ್ಲಿ ಸರಕಾರವು ಸಮನ್ವಯ ಮಾರ್ಗಸೂಚಿ ಮೂಲಕ ಪರಿಹರಿಸಲು ಯತ್ನಿಸಿ, ೧೪-೦೧- ೨೦೦೨ ಕಟ್ ಆಫ್ ಪರ್ಮಿಟ್ ಡೇಟ್ ನಿಗದಿಪಡಿಸಿತು. ಇದಾದ ನಂತರವೂ ಹೆಚ್ಚುಕಡಿಮೆ ೩ ಸಾವಿರದಷ್ಟು ಖಾಸಗಿ ಪರವಾನಿಗೆ ಪಡೆದ ವಾಹನಗಳ ಪರಿಸ್ಥಿತಿ ಅತಂತ್ರ ಗೊಂಡಿದ್ದರಿಂದ, ರಾಜ್ಯ ಸರಕಾರವು ೦೭-೦೩-೨೦೧೯ಕ್ಕೆ ಅಧಿಸೂಚನೆ ಹೊರಡಿಸಿ, ಇಡೀ ಕರ್ನಾಟಕ ರಾಜ್ಯವನ್ನು ರಾಷ್ಟ್ರೀಕೃತವನ್ನಾಗಿ (stage carriage) ಘೋಷಿಸಲಾಯಿತು.

ಉಳಿದಂತೆ ಖಾಸಗಿಯವರಿಗೆ ಒಪ್ಪಂದ ಸಾರಿಗೆ ಸಂಚಾರ (Contract Carriage) ಮಾಡಲು ಅವಕಾಶ ನೀಡಲಾಯಿತು. ಹಾಗಾಗಿ, ಈ ನಿಗಮ ಸಾರಿಗೆ
ಮತ್ತು ಖಾಸಗಿ ಬಸ್ಸುಗಳ ನಡುವೆ ಹೊಂದಾಣಿಕೆಯ ತಿಕ್ಕಾಟ ನಡೆದೇ ಇದೆ. ಇದು ಹೇಗಿದೆಯೆಂದರೆ, ನಾವು ಜನರಿಗೆ ಸಾರಿಗೆ ಸೇವೆ ನೀಡುವುದಿಲ್ಲ ಮತ್ತು
ನೀಡುವವರನ್ನು ಕೆಲಸ ಮಾಡಲು ಬಿಡುವುದಿಲ್ಲ ಎಂಬಂತಹ ಧೋರಣೆಯು, ಕತ್ತು ಹಿಸುಕಿಸುವ ಕೆಲಸವಲ್ಲವೇ? ಕೇಂದ್ರವೇ ಇರಲಿ, ರಾಜ್ಯ ಸರಕಾರವೇ ಇರಲಿ, ತನ್ನ ಯಾವುದೇ ಒಂದು ಬೃಹತ್ ಯೋಜನೆಗಳಿಗೆ ಸರಕಾರ-ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿಯಲ್ಲಿ ಚಾಲನೆ ನೀಡುವುದನ್ನು ನಾವೆಲ್ಲ ನೋಡುತ್ತಲೇ ಇದ್ದೇವೆ.

ಆದರೆ, ರಾಜ್ಯದ ಖಾಸಗಿ ವಾಹನಗಳ ಮಾಲೀಕರ ಅಥವಾ ನಡೆಸುವವರ ವಿಚಾರದಲ್ಲಿ ಮಾತ್ರ ತಾರತಮ್ಯ ಧೋರಣೆ ಯಾಕೆ ಎಂಬುದೇ ಇಲ್ಲಿನ ನೈತಿಕ ಪ್ರಶ್ನೆ. ಈ ಖಾಸಗಿ ಬಸ್ಸುಗಳನ್ನು ಓಡಿಸುವವರು ನಮ್ಮದೇ ನಾಗರಿಕರು ಮತ್ತು ಅವುಗಳಲ್ಲಿ ಸಂಚರಿಸುವವರು ನಮ್ಮದೇ ಮತದಾರರು ಎಂಬುದನ್ನು ಇಲಾಖೆ ಮತ್ತು ಸರಕಾರ ಸರಿಯಾಗಿ ಅರಿತುಕೊಂಡಲ್ಲಿ ಉಂಟಾಗಿರುವ ಸಂಚಾರ ವ್ಯತ್ಯಯದ ಬಿಕ್ಕಟ್ಟುಗಳು ಪರಿಹಾರ ಕಾಣಬಲ್ಲವು. ಸಮಸ್ಯೆ ಎಲ್ಲಿದೆ? ಯಾವ ಸ್ವರೂಪದ್ದು? ಪರಿಹರಿಸಲು ಸಾಧ್ಯವೇ? ಹೊಂದಾಣಿಕೆ ಮಾರ್ಗದಿಂದ ಪರಿಹರಿಸಬಹುದೇ? ಇತ್ಯಾದಿ ಅಂಶಗಳನ್ನು ಪರಿಶೀಲಿಸಿ, ಸಂಬಂಧಿ  ಸಿದವರ ಬಳಿ ಕುಳಿತು ಚರ್ಚಿಸಿ ಸರಿಪಡಿಸಿಕೊಂಡರೆ, ಸಂಚಾರ ವ್ಯವಸ್ಥೆಯ ಸವಾಲುಗಳಿಗೆ ಪರಿಹಾರ ಖಂಡಿತ ಸಾಧ್ಯವಿದೆ. ಇದರಿಂದ ಮಕ್ಕಳ ಶಿಕ್ಷಣ, ನಾಗರಿಕರ ಪ್ರಯಾಣ ಎಲ್ಲವೂ ಸುಗಮವಾಗುವುದೆಂಬ ಕಳಕಳಿ ನಮ್ಮದು. ಇದೇ ಕಾಳಜಿಯನ್ನು ಸರಕಾರ ಮತ್ತು ಸಾರಿಗೆ ಇಲಾಖೆ ಹೊಂದುವಂತಾಗಲಿ ಎಂಬುದು ನಮ್ಮೆಲ್ಲರ ಅಪೇಕ್ಷೆ.

Leave a Reply

Your email address will not be published. Required fields are marked *