Friday, 13th December 2024

ಖಾಸಗಿ ಸಹಭಾಗಿತ್ವದ ಚಿಕಿತ್ಸೆ ಅತ್ಯವಶ್ಯಕ

ಸ್ವಾಸ್ಥ್ಯ ಸಂಪದ

Yoganna55@gmail.com

ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿಕೊಂಡ ನಂತರ ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿ, ಅಲ್ಲಿರುವ ಅವ್ಯವಸ್ಥೆಗಳಿಗೆ ಸಮಂಜಸವಾದ ಪರಿಹಾರೋಪಾಯಗಳನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗಿರುವುದು ಅಭಿನಂದನೀಯ.

ಆಹಾರ, ಆರೋಗ್ಯ ಮತ್ತು ಅಕ್ಷರಗಳು ಮನುಷ್ಯನು ಸುಸಂಸ್ಕೃತವಾದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ‘ಘಟ ಇದ್ದರೆ ಮಠ ಕಟ್ಟೇನು’ ಎಂಬ ನಾಣ್ಣುಡಿ ಆಹಾರ ಮತ್ತು ಆರೋಗ್ಯಗಳ ಪ್ರಾಮುಖ್ಯವನ್ನು ಎತ್ತಿ ತೋರಿಸುತ್ತದೆ. ಇವೆರಡರ ಬಗ್ಗೆ ಕಳಕಳಿ ಹೊಂದಿ ಸೂಕ್ತ ಚಿಕಿತ್ಸೆ ನೀಡಿ ಈ ಎರಡೂ ಕ್ಷೇತ್ರಗಳನ್ನು ಸದೃಢಗೊಳಿಸಲು ಸರಕಾರ ಬಹು ಬೇಗ ಜಾಗೃತವಾಗಿರುವ ಹಿನ್ನೆಲೆಯಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆಯನ್ನು ಸಾರ್ವಜನಿಕರ ವಿಶ್ವಾಸಾರ್ಹತೆ ಗನುಗುಣವಾಗಿ ನೀಡಲು ಸರಕಾರ ಕೈಗೊಳ್ಳಬಹುದಾದ ಚಿಕಿತ್ಸಾ ವಿಧಾನಗಳ ಬಗ್ಗೆ ಬೆಳಕು ಚೆಲ್ಲುವ ಲೇಖನವನ್ನು ಇಲ್ಲಿ
ಸಾದರಪಡಿಸಲಾಗಿದೆ.

ಆರೋಗ್ಯ ಸವಲತ್ತುಗಳು ಮಾನವ ಕುಲದ ಹುಟ್ಟಿನಿಂದಲೂ ಆಯಾಯ ಕಾಲಘಟ್ಟಕ್ಕನುಗುಣವಾಗಿ ರೂಪಿತವಾಗಿದ್ದು, ಅವೆಲ್ಲವುಗಳ ಪರಿಣಾಮಕಾರಿ ಪ್ರಭಾವದಿಂದಲೇ ಮಾನವ ಸಂತತಿ ಕಾಲಾನುಕಾಲಕ್ಕೆ ಸಕಾರಾತ್ಮಕವಾಗಿ ವಿಕಾಸಗೊಂಡು ವೃದ್ಧಿಯಾಗಿರುತ್ತದೆ. ಇಲ್ಲದಿದ್ದಲ್ಲಿ ಮಾನವಕುಲದ ಬೆಳವಣಿಗೆ ಹಿಮ್ಮುಖವಾಗಿ ವಿನಾಶವಾಗಬೇಕಿತ್ತು. ಗೆಡ್ಡೆ ಗೆಣಸು ತಿಂದು ಬದುಕುತ್ತಿದ್ದ ಮಾನವ ಪರಿಸರದಲ್ಲಿಯೇ ಲಭಿಸುವ ಗಿಡಮೂಲಿಕೆಗಳನ್ನು ಔಷಧಗಳನ್ನಾಗಿ ಬಳಸಿಕೊಂಡು ತನಗೆ ತಗಲುತ್ತಿದ್ದ
ರೋಗಗಳನ್ನು ವಾಸಿಮಾಡಿಕೊಳ್ಳುತ್ತಿದ್ದ. ದೇಹಾರೋಗ್ಯವನ್ನು ವೃದ್ಧಿಸುತ್ತಿದ್ದ ಆಯುರ್ವೇದ, ಯೋಗ ಮತ್ತು ಪ್ರಕೃತಿ ವೈದ್ಯ ವಿಜ್ಞಾನಗಳು ಅಂದು ಪರಿಣಾಮಕಾರಿಯಾಗಿದ್ದವು.

ಮನುಷ್ಯ ಪರಿಸರಕ್ಕೆ ಹೊಂದಿಕೊಂಡು ಅದರ ಸಮೀಪದಲ್ಲೇ ಬದುಕುತ್ತಿದ್ದ ಕಾರಣ ಮತ್ತು ಪರಿಸರಕ್ಕೆ ಅನುಗುಣವಾದ
ಜೀವನಶೈಲಿಯಿಂದಾಗಿ ಅವನ ರೋಗನಿರೋಧಕ ಶಕ್ತಿ ವೃದ್ಧಿಸಿ, ಇಂದು ಗಂಭೀರ ಸ್ವರೂಪದಲ್ಲಿರುವ ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೃದಯಾಘಾತ ಇತ್ಯಾದಿ ಕಾಯಿಲೆಗಳು ಅಂದು ಇರಲಿಲ್ಲ. ಬುದ್ಧಿ ಬೆಳೆದಂತೆಲ್ಲ ಮನುಷ್ಯ ಪರಿಸರದಿಂದ ದೂರವಾಗುತ್ತ ಆಧುನಿಕತೆಯ ಹೆಸರಿನಲ್ಲಿ ಪರಿಸರ-ವಿರೋಧಿ ಜೀವನಶೈಲಿಯನ್ನು ಅಳವಡಿಸಿಕೊಂಡ ಪರಿಣಾಮ ಮಾರಣಾಂತಿಕ ಕಾಯಿಲೆಗಳು ಹುಟ್ಟಿ, ದುಂದು ವೆಚ್ಚದ ಆಧುನಿಕ ವೈದ್ಯವಿಜ್ಞಾನದ ಸೇವೆ ಇಂದು ಅನಿವಾರ್ಯವಾಗಿದೆ.

ಆಂಗ್ಲರ ಆಡಳಿತದಲ್ಲಿ ಭಾರತೀಯ ಪ್ರಾಚೀನ ವೈದ್ಯಪದ್ಧತಿಗಳಿಗೆ ಕೊಂಚ ಹಿನ್ನಡೆಯಾಗಿ ಆಧುನಿಕ ವೈದ್ಯವಿಜ್ಞಾನದ ಅಲೋಪತಿ ಮುಂಚೂಣಿಗೆ ಬಂದಿದ್ದನ್ನು ಗಮನಿಸಬಹುದಾಗಿದೆ.

ರಾಜ್ಯದಲ್ಲಿಂದು ಅಲೋಪತಿ, ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯಪದ್ಧತಿಗಳು ರೂಢಿಯಲ್ಲಿದ್ದು, ಇವುಗಳಲ್ಲಿ ಅಲೋಪತಿ ಮುಂಚೂಣಿಯಲ್ಲಿದೆ. ಈ ವೈದ್ಯಪದ್ಧತಿಗಳ ಮೂಲಭೂತ ರೀತಿನೀತಿಗಳು ವಿಭಿನ್ನವಾಗಿವೆ. ತನಗೊಪ್ಪುವ ಪದ್ಧತಿ
ಯನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯ ರೋಗಿಗಿದ್ದು, ಯಾವ ಕಾಯಿಲೆಗೆ ಯಾವ ಪದ್ಧತಿ ಸೂಕ್ತ ಎಂಬ ವೈಜ್ಞಾನಿಕ ಜ್ಞಾನ ರೋಗಿಗಿಲ್ಲದ ಪರಿಣಾಮ ಹಲವಾರು ಗಂಭೀರ ಸ್ವರೂಪದ ಅನಾಹುತಗಳುಂಟಾಗುತ್ತಿವೆ.

ಕೆಲವೊಮ್ಮೆ ಮಿಶ್ರಿತ ವೈದ್ಯಪದ್ಧತಿಯ ಪಾಲನೆಯಿಂದಾಗಿ ಹಲವಾರು ಅವಘಡಗಳು ಸಂಭವಿಸುತ್ತಿದ್ದು, ಸರಕಾರ ತಜ್ಞರ ಸಲಹೆ ಮೇರೆಗೆ ಈ ಬಗ್ಗೆ ಸೂಕ್ತ ನೀತಿಯನ್ನು ಜಾರಿಗೆ ತರುವ ಅವಶ್ಯಕತೆಯಿದೆ. ವಿಶ್ವಾಸಾರ್ಹತೆ ಪಡೆದ ಖಾಸಗಿ ಆರೋಗ್ಯಸೇವೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆರೋಗ್ಯ ಕ್ಷೇತ್ರದ ಬೆಳವಣಿಗೆಯನ್ನು ಗಮನಿಸಿದಾಗ ಸರಕಾರದ ದಿವ್ಯನಿರ್ಲಕ್ಷ್ಯದಿಂದಾಗಿ ಇಂದು ಶೇ. ೮೫ಕ್ಕೂ ಹೆಚ್ಚು ಪ್ರಮಾಣದ ಆರೋಗ್ಯಸೇವೆಯನ್ನು ಖಾಸಗಿ ಕ್ಷೇತ್ರದವರು ನೀಡುತ್ತಿದ್ದು, ಜನರ ವಿಶ್ವಾಸ ಗಳಿಸುವಲ್ಲಿಯೂ ಅವರು ಯಶಸ್ವಿಯಾಗಿರುವುದು ನಿರ್ವಿವಾದ.

ಶೇ.೧೦ರಿಂದ ೧೫ರಷ್ಟು ವೈದ್ಯಕೀಯ ಸೇವೆ ನೀಡುತ್ತಿರುವ ಸರಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿವೆ; ಸರಕಾರವನ್ನು ನಡೆಸುವ ಮಂತ್ರಿಗಳು ಮತ್ತು ಉನ್ನತಾಧಿಕಾರಿಗಳು ತಮ್ಮ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಖಾಸಗಿ ಆಸ್ಪತ್ರೆಗಳಿಗೆ ದೌಡಾಯಿಸುತ್ತಿರುವುದು ಇದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸರಕಾರವನ್ನು ನಡೆಸುವ
ನೇತಾರರಿಗೇ ಸರಕಾರಿ ಆಸ್ಪತ್ರೆಗಳ ಮೇಲೆ ವಿಶ್ವಾಸವಿಲ್ಲದಿರುವಾಗ ಶ್ರೀಸಾಮಾನ್ಯರು ಅವುಗಳ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಸರಕಾರ ಆಶಿಸುವುದು ಎಷ್ಟು ಸರಿ? ಇದಕ್ಕೆ ಕಾರಣಗಳು ಇಲ್ಲದಿಲ್ಲ.

ಜಾಗತಿಕ ಮಟ್ಟದಲ್ಲಿ ಆಧುನಿಕ ವೈದ್ಯವಿಜ್ಞಾನ ಶರವೇಗದಲ್ಲಿ ಬೆಳೆಯುತ್ತಿದ್ದು, ರೋಗಪತ್ತೆ ಮತ್ತು ಚಿಕಿತ್ಸಾ ವಿಧಾನಗಳಿಗೆ ಹೊಸ
ಆಯಾಮಗಳು ಹೊರ ಹೊಮ್ಮುತ್ತಿವೆ. ಜೀವದ ಜತೆ ತೊಡಗಿಸಿಕೊಳ್ಳುವ ಆರೋಗ್ಯ ಕ್ಷೇತ್ರದ ಜ್ಞಾನ ಮತ್ತು ಅನುಕರಣೆ ನಿಖರ ವಾಗಿರಬೇಕು. ಇಲ್ಲದಿದ್ದಲ್ಲಿ ಆರೋಗ್ಯಸೇವೆಯು ಜೀವವನ್ನು ಉಳಿಸುವ ಬದಲು ಅಳಿಸುತ್ತದೆ. ಈ ಕಾರಣದಿಂದಾಗಿ ಆರೋಗ್ಯಸೇವೆಯ ಗುಣಮಟ್ಟವನ್ನು ಹೆಚ್ಚಿಸುವ ನಿಖರ ತಂತ್ರಜ್ಞಾನದ ಬಳಕೆ ಜರೂರಾಗಿ ಅಳವಡಿಕೆಯಾಗಬೇಕಿದೆ. ಇದಕ್ಕೆ ಸಂಬಂಧಿಸಿದ ಪರಿಣಿತ ವೈದ್ಯ ಮತ್ತು ವೈದ್ಯೇತರ ಸಿಬ್ಬಂದಿಯೂ ಅತ್ಯವಶ್ಯಕ.

ಖಾಸಗಿ ಆರೋಗ್ಯ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ಕಂಡುಕೊಂಡ ಆಧುನಿಕ ತಂತ್ರಜ್ಞಾನದ ಸೇವೆಯನ್ನು ಬಹುಬೇಗ ಅಳವಡಿಸಿ ಕೊಂಡು ಸೇವಾಗುಣಮಟ್ಟದ ನಿಖರತೆ ಕಾಪಾಡಿಕೊಳ್ಳುತ್ತಿರುವುದರಿಂದ ಅವರೆಡೆಗೆ ಜನರು ಮುಗಿಬೀಳುತ್ತಿದ್ದಾರೆ.
ನಿರ್ಲಕ್ಷ್ಯ ಕ್ಕೊಳಗಾದ ಸರಕಾರಿ ಆರೋಗ್ಯಸೇವೆ ಸರಕಾರದ ಆರೋಗ್ಯ ಕ್ಷೇತ್ರದ ನಿರ್ಲಕ್ಷ್ಯಕ್ಕೆ ಕಾರಣಗಳು ಹಲವಾರು. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಮೂಲಭೂತ ಸೌಕರ್ಯಗಳ ಕೊರತೆ, ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಲ್ಲದೆ ಸೇವಾ ಸಾಮರ್ಥ್ಯ ಕುಗ್ಗಿರುವಿಕೆ, ವೈದ್ಯರುಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಆಗುತ್ತಿರುವ ಕಿರುಕುಳ ಮತ್ತು ಅವರ ಸಂಸಾರಗಳಿಗೆ ಸೂಕ್ತ
ಸೌಲಭ್ಯ-ಸಂಬಳ ಇಲ್ಲದಿರುವಿಕೆ, ರಾಜಕೀಯ ಕಾರಣಗಳಿಗಾಗಿ ವರ್ಗಾವಣೆ ಇತ್ಯಾದಿಗಳಿಂದ ಅನುಭವಿಸುವ ಹಿಂಸೆಗಳಿಂದಾಗಿ ನುರಿತ ವೈದ್ಯರೂ ಸರಕಾರಿ ಸೇವೆಯೆಡೆಗೆ ಆಕರ್ಷಿತರಾಗುತ್ತಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ಸಾವಿರ ಜನಸಂಖ್ಯೆಗೆ ಒಬ್ಬ ವೈದ್ಯನಿರಬೇಕು. ಇಂದು ಕರ್ನಾಟಕದಲ್ಲಿ ಸುಮಾರು ೬೦ ಸಾವಿರ ನೋಂದಾಯಿತ ಎಂಬಿಬಿಎಸ್ ವೈದ್ಯರು, ೫೦ ಸಾವಿರ ನೋಂದಾಯಿತ ಬಿಎಎಂಎಸ್ ಆಯುರ್ವೇದ ವೈದ್ಯರುಗಳಿದ್ದು, ೬ ಕೋಟಿ ಜನಸಂಖ್ಯೆಗೆ ಅಲೋಪತಿ ಮತ್ತು ಆಯುರ್ವೇದ ವೈದ್ಯರಿಬ್ಬರನ್ನೂ ಸೇರಿಸಿ ಒಟ್ಟು ೧ಲಕ್ಷಕ್ಕೂ ಮೀರಿ ವೈದ್ಯರ
ಕೊರತೆ ಎದ್ದುಕಾಣುತ್ತಿದೆ. ಇವರುಗಳಲ್ಲಿ ಸರಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಆರೋಗ್ಯ ಇಲಾಖೆ ಮತ್ತು ಸರಕಾರಿ ವೈದ್ಯಕೀಯ ಕಾಲೇಜುಗಳನ್ನೂ ಒಳಗೊಂಡಂತೆ ಆಯುರ್ವೇದ ಮತ್ತು ಅಲೋಪತಿ ಎರಡನ್ನೂ ಸೇರಿಸಿ ಸುಮಾರು ಗರಿಷ್ಠ ೧೦ ಸಾವಿರ
ವೈದ್ಯರಿದ್ದು, ಇನ್ನುಳಿದ ೧ ಲಕ್ಷ ವೈದ್ಯರು ಖಾಸಗಿ ಆರೋಗ್ಯಸೇವೆಯಲ್ಲಿ ತೊಡಗಿಕೊಂಡಿರುವುದು ಖಾಸಗಿ ಕ್ಷೇತ್ರದ ಬಲಿಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ.

ಕರ್ನಾಟಕದಲ್ಲಿ ಸುಮಾರು ೨೬೦೦ ಸರಕಾರಿ ಆಸ್ಪತ್ರೆಗಳು ಮತ್ತು ೬೦೦ ನೋಂದಾಯಿತ ಖಾಸಗಿ ಆಸ್ಪತ್ರೆಗಳಿವೆ. ಬಹುಪಾಲು ಸರಕಾರಿ ಆಸ್ಪತ್ರೆಗಳು ಪ್ರಾಥಮಿಕ ಆರೋಗ್ಯ ಘಟಕ ಮತ್ತು ಕೇಂದ್ರಗಳಾಗಿದ್ದು, ಆಧುನಿಕ ತಂತ್ರಜ್ಞಾನ ಮತ್ತು ವಿಶೇಷ ತಜ್ಞವೈದ್ಯರ ಕೊರತೆಯಿಂದ ಬಳಲುತ್ತಿವೆ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಅಗಾಧ ಕೊರತೆ ಮತ್ತು ಗುಣಮಟ್ಟದ ಚಿಕಿತ್ಸೆ ಇಲ್ಲದಿರುವಿಕೆಗೆ ಸರಕಾರದ ದಿವ್ಯನಿರ್ಲಕ್ಷ್ಯ, ಸಂಪನ್ಮೂಲದ ಕೊರತೆ ಮತ್ತು ಮಾನವೀಯ ಅನುಕಂಪದ ಸೇವೆಯ ಪರಿಸರ ನಿರ್ಮಾಣ ಮಾಡದಿರುವಿಕೆಯೇ ಪ್ರಮಖ ಕಾರಣಗಳಾಗಿವೆ.

ಗಣನೀಯ ಮಟ್ಟದಲ್ಲಿ ಇಷ್ಟೊಂದು ದುರ್ಬಲವಾಗಿರುವ ಸರಕಾರಿ ಆರೋಗ್ಯ ವ್ಯವಸ್ಥೆಯನ್ನು(ಶೇ ೧೫), ಸದೃಢವಾಗಿ ವ್ಯಾಪಕ
ವಾಗಿ ಬೆಳೆದಿರುವ (ಶೇ. ೮೫) ಖಾಸಗಿ ಆರೋಗ್ಯ ವ್ಯವಸ್ಥೆಯ ಮಟ್ಟಕ್ಕೆ ಏರಿಸಲು ಬೇಕಾಗುವ ಆರ್ಥಿಕ ಸಂಪನ್ಮೂಲ, ಮೂಲಭೂತ ಸೌಕರ್ಯಗಳು ಮತ್ತು ಅವನ್ನು ಬೇಕಾಗುವ ಸಮಯವನ್ನು ಪರಿಗಣಿಸಿದಾಗ ಸರಕಾರಿ ಆರೋಗ್ಯ ವ್ಯವಸ್ಥೆಯನ್ನು ವಿಶ್ವಾಸಾರ್ಹತೆ ಗಳಿಸಿರುವ ಖಾಸಗಿ ಕ್ಷೇತ್ರದ ಮಟ್ಟಕ್ಕೆ ತರುವ ಆಲೋಚನೆ ಮರೀಚಿಕೆ ಎನಿಸುತ್ತದೆ. ಒಂದು ಪಕ್ಷ ಒದಗಿಸಿದರೂ ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳ ಸಮಯೋಚಿತ ನಿರ್ವಹಣೆ ಇಂದಿನ ಸರಕಾರಿ ವ್ಯವಸ್ಥೆಯಲ್ಲಿ ಸಾಧ್ಯವೇ ಎಂಬುದನ್ನು
ಪರಿಶೀಲಿಸಬೇಕು.

ಸರಕಾರಿ ಸ್ವಾಮ್ಯದ ದೊಡ್ಡ ದೊಡ್ಡ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿಯೇ ಎಂಆರ್‌ಐ, ಸಿ.ಟಿ, ಡಯಾಲಿಸಿಸ್ ಸಲ
ಕರಣೆಗಳನ್ನು ಸಮಯಕ್ಕೆ ಸರಿಯಾಗಿ ದುರಸ್ತಿ, ನಿರ್ವಹಣೆ ಮಾಡಲಾಗದ ಸರಕಾರಕ್ಕೆ ತಾಲೂಕು ಕೇಂದ್ರಗಳಲ್ಲಿ ಈ ಸಲಕರಣೆ ಗಳನ್ನು ಜೋಡಿಸುವುದು ಸಾಧ್ಯವೇ? ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ಅಳವಡಿಸುವುದು ಮುಖ್ಯವಲ್ಲ.
ಸಕಾಲದಲ್ಲಿ ಅವಶ್ಯಕ ಸರ್ವೀಸ್ ಮಾಡಿಸಿ ಅವುಗಳ ಸಾಮರ್ಥ್ಯವನ್ನು ಕುಗ್ಗದಂತೆ ನಿರಂತರವಾಗಿ ನಿರ್ವಹಣೆ ಮಾಡುವುದು ಅತಿಮುಖ್ಯ. ಇಂದಿನ ಸರಕಾರಿ ವ್ಯವಸ್ಥೆಯಲ್ಲಿ ಇದು ಸಾಧ್ಯವೇ?

ಸರಕಾರಿ-ಖಾಸಗಿ ಸಹಭಾಗಿತ್ವ: ಈಗಾಗಲೆ ಸದೃಢವಾಗಿ ಬೆಳೆದು ಸಾರ್ವಜನಿಕರ ವಿಶ್ವಾಸ ಗಳಿಸಿರುವ ಖಾಸಗಿ ಆರೋಗ್ಯಕ್ಷೇತ್ರದ ಜತೆ ಸರಕಾರ ಕೈಜೋಡಿಸಿ ಸರಕಾರಿ ಆಸ್ಪತ್ರೆಗಳಲ್ಲಿರುವ ಅವ್ಯವಸ್ಥೆಗಳನ್ನು ನಿಯಂತ್ರಿಸಿ, ದುಬಾರಿಯಾಗಿರುವ ಖಾಸಗಿ ವೈದ್ಯಕೀಯ ಸೇವೆ ಜನಸಾಮಾನ್ಯರಿಗೂ ಸುಲಭ ದರದಲ್ಲಿ ಲಭಿಸುವಂತಾಗುವ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದ ವಿಶಿಷ್ಟ
ಯೋಜನೆಯನ್ನು ರೂಪಿಸಬೇಕು. ಆಗ ಮಾತ್ರವೇ ಸಾಮಾನ್ಯರಿಗೂ ಸಕಾಲದಲ್ಲಿ ಸಮರ್ಥ ಆರೋಗ್ಯ ಸೇವೆ ಲಭಿಸಲು ಸಾಧ್ಯ. ಈ ಸೇವೆಯ ಗುಣಮಟ್ಟವನ್ನು ನಿಯಂತ್ರಿಸುವ ಎನ್‌ಎಬಿಎಚ್ ಮತ್ತಿತರ ಸಂಸ್ಥೆಗಳಿಗನುಗುಣವಾಗಿ ಆರೋಗ್ಯಸೇವೆ ನೀಡುವುದು ಕಾನೂನಿನ ಅನ್ವಯ ಅವಶ್ಯಕ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ನಿರ್ಮಾಣದ ವೆಚ್ಚ ದುಬಾರಿಯಾಗಿದೆ. ಕಾನೂನಿನ ಅನ್ವಯದ ಗುಣಮಟ್ಟದ ಆಸ್ಪತ್ರೆಗಳನ್ನು ಕಟ್ಟಲು ಇಂದು ಹಾಸಿಗೆಯೊಂದಕ್ಕೆ ಕನಿಷ್ಠ ೪೦-೫೦ ಲಕ್ಷ ರು. ಖರ್ಚಾಗುತ್ತಿದ್ದು, ೧೦೦ ಹಾಸಿಗೆಯ ಆಸ್ಪತ್ರೆಗೆ ಜಾಗವಲ್ಲದೆ ಕನಿಷ್ಠ ೪೦-೫೦ ಕೋಟಿ ರು. ಬಂಡವಾಳ ಹೂಡಬೇಕಾಗುತ್ತದೆ.

ಇದಲ್ಲದೆ ತಜ್ಞ ವೈದ್ಯರ ಸಂಬಳ ಮಾಹೆಯಾನ ಕನಿಷ್ಠ ೨ರಿಂದ ೭ ಲಕ್ಷ ರುಪಾಯಿ. ಇದಲ್ಲದೆ ಕನಿಷ್ಠ ವೇತನ ಕಾಯ್ದೆ ಅನ್ವಯ ನೀಡಬೇಕಾದ ನೌಕರರ ಸಂಬಳ, ಉಪಕರಣಗಳ ವಾರ್ಷಿಕ ನಿರ್ವಹಣಾ ವೆಚ್ಚ (ಮೂಲಬೆಲೆಯ ಶೇ.೧೦ರಷ್ಟು), ಬಂಡವಾಳ
ಹೂಡಿಕೆಯ ಮೇಲಿನ ಬಡ್ಡಿ ಇವೆಲ್ಲವನ್ನೂ ಸೇರಿಸಿದಲ್ಲಿ ೧೦೦ ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ವಹಣೆಗೆ ಮಾಹೆಯಾನ ಕನಿಷ್ಠ ೫ ಕೋಟಿ ರು. ಬೇಕಾಗುತ್ತದೆ. ಇದಲ್ಲದೆ ಬ್ಯಾಂಕುಗಳು ಆಸ್ಪತ್ರೆಗಳಿಗೆ ನೀಡುವ ಸಾಲವನ್ನು ವಾಣಿಜ್ಯಸಾಲ ಎಂದು ಪರಿಗಣಿಸಿ ಹೆಚ್ಚು ಬಡ್ಡಿ ಹಾಕುವುದಲ್ಲದೆ ಬ್ಯಾಂಕುಗಳು ಆಸ್ಪತ್ರೆಗಳಿಗೆ ಸಾಲ ನೀಡುವುದನ್ನು ಪ್ರಥಮ ಆದ್ಯತೆಯಲ್ಲಿ ಪರಿಗಣಿಸುತ್ತಿಲ್ಲ.

ಇವೆಲ್ಲ ಕಾರಣಗಳಿಂದಾಗಿ ಜನ ಸಾಮಾನ್ಯರಿಗೆ ಭಾರತೀಯ ಖಾಸಗಿ ಆಸ್ಪತ್ರೆಗಳ ದರ ಹೊರದೇಶದ ಆಸ್ಪತ್ರೆಗಳ ದರಕ್ಕಿಂತ ಬಹಳ ಕಡಿಮೆ ಇದ್ದರೂ ಭರಿಸಲಾಗುತ್ತಿಲ್ಲ. ಸರಕಾರ ಈ ಎಲ್ಲ ಅಂಶಗಳನ್ನು ಪರಿಗಣಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ಕೈಗಾರಿಕೆಗಳಿಗೆ
ಸಹಾಯಧನ, ಅನುದಾನ, ರಿಯಾಯತಿಗಳನ್ನು ನೀಡುವಂತೆ ಖಾಸಗಿ ಆರೋಗ್ಯ ವ್ಯವಸ್ಥೆಗೂ ಖಾಸಗಿಯವರೊಡನೆ ಬಂಡವಾಳ ಹೂಡಿ, ನಿರ್ವಹಣೆಯನ್ನು ಮಾತ್ರ ಖಾಸಗಿಯವರಿಗೆ ವಹಿಸಿ, ಮೇಲ್ವಿಚಾರಣೆ ಮತ್ತು ದರ ನಿಯಂತ್ರಣವನ್ನು ತಾನಿಟ್ಟುಕೊಳ್ಳುವ ದಿಕ್ಕಿನ ಆರೋಗ್ಯ ನೀತಿಯನ್ನು ರೂಪಿಸಬೇಕು.

ಹೀಗಾದಾಗ ಮಾತ್ರ ಶ್ರೀಸಾಮಾನ್ಯನೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಪಡೆಯಲು ಸಾಧ್ಯ ಎಂಬ ಅಂಶವನ್ನು ಸರಕಾರ ಮನಗಾಣಬೇಕಿದೆ. ಈ ಯೋಜನೆಯಿಂದ ಯುವ ತಜ್ಞವೈದ್ಯರು ತಾಲೂಕು ಕೇಂದ್ರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ವಯಂ ಪ್ರೇರಿತ ರಾಗಿ ತೆರೆಯಲು ಆಕರ್ಷಿತರಾಗಿ ಗ್ರಾಮೀಣ ಜನರಿಗೂ ಸುಸಜ್ಜಿತ ಆರೋಗ್ಯಸೇವೆ ಸಮೀಪದಲ್ಲಿಯೇ ಬಹುಬೇಗ ಲಭಿಸಲು ಅನುವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಸರಕಾರ ಈ ನಿಟ್ಟಿನಲ್ಲಿ ಆಲೋಚಿಸುತ್ತದೆ ಎಂದು ಆಶಿಸೋಣವೇ?