Saturday, 23rd November 2024

ವೃತ್ತಿ ಬದುಕಿನ ಸಾರ್ಥಕ್ಯ ಗುರುತಿಸುವುದು ಹೇಗೆ ?

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ರೈತರಿದ್ದರೆ ಕೂಳು. ನಮ್ಮ ಜೀವನ ಸಾಗಬೇಕಾದರೆ ಇವರ ಕಾರ್ಯಕ್ಕೆ ತಕ್ಕುದಾದ -ಲವೂ ಸಿಗಬೇಕು, ಬೆಲೆಯೂ ಸಿಗ ಬೇಕು. ಗೌರವಾದರಗಳೂ ಸಿಗಬೇಕು. ಭೂಮಿಯನ್ನು ತಾಯಿಯೆಂದು ಪೂಜಿಸಿ ಗೌರವಿಸುವ ನಮ್ಮ ದೇಶದ ಪರಂಪರೆ ಯಲ್ಲಿ ರೈತರನ್ನು ಅವಳ ಮಕ್ಕಳೆಂದು ಭಾವಿಸುತ್ತಾರೆ.

ಜಗತ್ತಿನಲ್ಲಿ ಹಲವು ವೃತ್ತಿಯಲ್ಲಿ ದುಡಿಯುವ ವಿಭಿನ್ನ ಸ್ವಭಾವದ ಹಲವು ಜನರನ್ನು ನೋಡುತ್ತೇವೆ. ಪ್ರತಿಯೊಬ್ಬರೂ ಹೊಟ್ಟೆ ಗಾಗಿ ಬಟ್ಟೆಗಾಗಿ ಗೇಣಗಲದ ನೆಲದಲ್ಲಿ ವಾಸ ಕ್ಕಾಗಿ ಯಾವುದಾದರೊಂದು ವೃತ್ತಿಯನ್ನು ಅವಲಂಬಿಸುತ್ತಾರೆ.

ವೃತ್ತಿಯನ್ನು ಅವಲಂಬಿಸುವುದು ಮಾತ್ರವಲ್ಲದೆ ಬದುಕಿನಲ್ಲಿ ಅಂದರೆ ತಾನು ಬದುಕುವ ಈ ಸಮಾಜದಲ್ಲಿ ಗೌರವ, ಪ್ರತಿಷ್ಠೆ, ಸ್ಥಾನಮಾನ, ಅಂತಸ್ತಿನ ಹಂಬಲವನ್ನೂ ಇಟ್ಟು ಕೊಂಡು ಬದುಕುವ ಆಶೆ ಕೆಲವರಿಗಿರುತ್ತದೆ. ಮರಹುಟ್ಟಿ ಮರಸತ್ತ ಹಾಗೆ ಬದುಕಾಗ ಬಾರದು ಎಂಬ ಅರಿವಿರುತ್ತದೆ. ಆದ್ದರಿಂದ ಯಾವ ಬದುಕೂ, ವೃತ್ತಿಯೂ ಶ್ರೇಷ್ಠ ವೆಂದಾಗಲೀ ಕನಿಷ್ಟವೆಂದಾಗಲೀ ಹೇಳಲು ಸಾಧ್ಯವಿಲ್ಲ. ಅದರಲ್ಲೂ ಬದುಕಿನ ಪಾಡು ವಿಧಿಯಾಟದಂತೆ! ಆಫ್ ಕೋರ್ಸ್ ಹೇಳಲೂ ಬಾರದು.

ಕೂಲಿ ಕಾರ್ಮಿಕನು ಮಾಡುವ ಕಾರ್ಯದಿಂದ ಹಿಡಿದು ರಾಷ್ಟ್ರಪತಿಯವರೆಗಿನ ಕಾರ್ಯ ದವರೆಗೂ ಈ ಸಮಾಜದಲ್ಲಿ ಗೌರವ ವಿದೆ. ಆದರವಿದೆ. ಮರ್ಯಾದೆಯಿದೆ. ಪ್ರತಿ ಯೊಂದಕ್ಕೂ ತನ್ನದೇ ಆದ ಅಸ್ತಿತ್ವ, ಅಸ್ಮಿತೆಯಿದೆ. ಅದದೇ ಪ್ರತಿಫಲವನ್ನೂ ಹೊಂದಿ ದ್ದರೂ ಪ್ರತಿ ವೃತ್ತಿಯೂ ಪರೋಪಕಾರವನ್ನು ತಕ್ಕಮಟ್ಟಿಗೆ ಹೊಂದಿರುತ್ತದೆ. ಈ ಪರೋಪಕಾರದ ಗುಣಸ್ವಭಾವವನ್ನು ಎತ್ತರಿಸಿ ಕೊಳ್ಳುವುದು ವ್ಯಕ್ತಿಗೆ ಬಿಟ್ಟದ್ದು. ಬದುಕನ್ನೂ ವೃತ್ತಿಯನ್ನೂ ಪ್ರೀತಿಸುವ, ಗೌರವಿಸುವ ಮನಸು ಇರುವುದರಿಂದ! ಸ್ವಾರ್ಥದ, ಸಂಕುಚಿತದ ಬುದ್ಧಿಯಿಲ್ಲದೇ ಇರುವುದರಿಂದ ಈ ಕಾಲದಲ್ಲೂ ಪರೋಪಕಾರದ ಎಳೆಯನ್ನು ಹಿಡಿದು ಬದುಕನ್ನೂ ವೃತ್ತಿ ಯನ್ನೂ ಸಾಗಿಸುವ ಮಹನೀಯರಿದ್ದಾರೆ.

ಅಂಥವರ ಬದುಕಲ್ಲಿ ಭುಂಜತೇ ತೇತು ಅಘಂ ಪಾಪಾಃ, ಯೇ ಪಚಂತಿ ಆತ್ಮಕಾರಣಾತ್, ಕೇವಲಾಘೋ ಭವತಿ ಕೇವಲಾದೀ ಎಂಬ ವೇದೋಪನಿಷತ್ತಿನ ಸಾರದ ತಿರುಳಿದೆ. ವೃತ್ತಿ ಪ್ರವೃತ್ತಿ ಒಂದಕ್ಕೊಂದು ಹೊಂದಿಕೊಂಡು ಸಮತೂಕದಲ್ಲಿ ಸಾಗುವ ಬದುಕು
ಸಾರ್ಥಕ್ಯ ಭಾವವನ್ನು ಹೊಂದುತ್ತದೆ. ವೃತ್ತಿಯನ್ನು ಸ್ವಾರ್ಥಕ್ಕೆ ಬಳಸಿಕೊಂಡವನ ಪ್ರವೃತ್ತಿ ಸಮಾಜದಲ್ಲಿ ಕಣ್ಣಲ್ಲಿ ಅಪರಾಧಿ ಯಾಗುತ್ತದೆ. ರಾಜಕಾರಣಿಗಳನ್ನು ನೋಡಿ. ಈ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಅವಲೋಕಿಸಿದಾಗ, ಭವಿಷ್ಯದ ಜನಾಂಗ ವನ್ನು ರೂಪಿಸುವ ಕಾರ್ಯ ತರಗತಿಗಳಲ್ಲಿ ನಿರಂತರವಾಗಿ ನಡೆಸುವ ಶಿಕ್ಷಕ ವೃತ್ತಿಯಿಂದ ದೇಶಕ್ಕೆ ಬಹುದೊಡ್ಡ ಕೊಡುಗೆಯಿದೆ. ಒಬ್ಬ ಶಿಕ್ಷಕ ಕೆಟ್ಟರೆ ಅದು ಇಡಿಯ ಸಮಾಜಕ್ಕೇ ಮಾರಕವಾಗಿ ಪರಿಣಮಿಸುತ್ತದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.

ಇಂಜಿನಿಯರುಗಳಿಂದ ದೇಶಕ್ಕಾಗುವ ಪ್ರಯೋಜನವನ್ನು ವಿವರಿಸುವುದು ತುಸು ದೀರ್ಘವಾದೀತು. ಜ್ಞಾನ ಮತ್ತು ತಂತ್ರಜ್ಞಾನದ
ಬೆಳವಣಿಗೆಯನ್ನಾಧರಿಸಿ ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಪ್ರಗತಿಯನ್ನು ಅಳೆಯುವ ಮಾನದಂಡವೇ ಇದಾಗಿರುವುದರಿಂದ ಇವರ ಕಾರ್ಯಕ್ಕೆ ಘನತೆಯಿದ್ದೇ ಇದೆ. ವಕೀಲರು ಮಾಡುವ ಕಾರ್ಯವನ್ನು ನ್ಯಾಯಾಂಗ ವ್ಯವಸ್ಥೆಯಡಿಯಲ್ಲಿ ಈ ದೇಶ ಗೌರವಿ ಸುತ್ತದೆ. ಜನಸಾಮಾನ್ಯರೂ ಅವರನ್ನು ಗೌರವಿಸುತ್ತಾರೆ. ನ್ಯಾಯವನ್ನು ಎತ್ತಿಹಿಡಿಯುವ ಕಾರ್ಯದಲ್ಲಿ ಇವರದು ಅವಿರತ ಶ್ರಮ ವಿರುತ್ತದೆಂಬ ನಂಬಿಕೆ ಜನರದ್ದು. ರೈತರನ್ನು ಅನ್ನದಾತರೆಂದು ತಿಳಿಯುವ ದೇಶವಿದು. ರೈತರಿದ್ದರೆ ಕೂಳು.

ನಮ್ಮ ಜೀವನ ಸಾಗ ಬೇಕಾದರೆ ಇವರ ಕಾರ್ಯಕ್ಕೆ ತಕ್ಕುದಾದ ಫಲವೂ ಸಿಗಬೇಕು, ಬೆಲೆಯೂ ಸಿಗಬೇಕು. ಗೌರವಾದರಗಳೂ ಸಿಗ ಬೇಕು. ಭೂಮಿಯನ್ನು ತಾಯಿಯೆಂದು ಪೂಜಿಸಿ ಗೌರ ವಿಸುವ ನಮ್ಮ ದೇಶದ ಪರಂಪರೆಯಲ್ಲಿ ರೈತರನ್ನು ಅವಳ ಮಕ್ಕಳೆಂದು
ಭಾವಿಸುತ್ತಾರೆ. ಅವರ ಶ್ರಮವನ್ನು ಅಪಾರ ಪ್ರೀತಿ ಮತ್ತು ಕಾಳಜಿಯಿಂದ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ರೈತ ದೇಶದ ಬೆನ್ನೆಲುಬು ಎಂಬರಿವು ನಮಗೆ ಯಾವತ್ತೂ ಇರಬೇಕು.

ಇದೇ ರೀತಿ ಸೈನಿಕರನ್ನು ರೈತರ ಸಾಲಿಗೇ ಸೇರಿಸಬೇಕಾಗುತ್ತದೆ. ನಾವು ದೇಶದೊಳಗೆ ನಿಶ್ಚಿಂತೆಯಿಂದ, ನೆಮ್ಮದಿಯಿಂದ ಬದುಕು ತ್ತಿದ್ದೇವೆ ಅಂದರೆ ಅದು ಸೈನಿಕರ ಶ್ರಮದ ಪ್ರತಿಫಲ. ಅವರು ನಿದ್ದೆ ಬಿಟ್ಟರೆ ನಾವು ನಿದ್ದಿಸಬಹುದು. ಅವರು ಹಗಲು ರಾತ್ರೆ ದೇಶ ವನ್ನು ಕಾಯುತ್ತಾರೆ. ಸ್ವಂತ ಬದುಕನ್ನು ತ್ಯಾಗ ಮಾಡಿ, ಮನೆ, ಸಂಸಾರ, ಕುಟುಂಬದ ಸಂಬಂಧವನ್ನು ತ್ಯಜಿಸಿ ದೇಶವನ್ನು
ಅಂದರೆ ನಮ್ಮನ್ನು ಕಾಯುತ್ತಾರೆಂದರೆ ಆ ತ್ಯಾಗದ ಔನ್ನತ್ಯವನ್ನು ಗುರುತಿಸುವುದು ಅಷ್ಟು ಸುಲಭವಲ್ಲ! ಇವರೀರ್ವರೂ
ಪ್ರಾತಃಸ್ಮರಣೀಯರು.

ದೇಶದ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಕಾಪಾಡುವವರು ವೈದ್ಯರು. ವೈದ್ಯೋ ನಾರಾಯಣೋ ಹರಿಃ ಎಂದರು ನಮ್ಮ ಪೂರ್ವಜರು. ವೈದ್ಯರನ್ನು ಹರಿಗೆ ಹೋಲಿಸಲಾಗುತ್ತದೆ. ಜೀವ ಉಳಿಸಿದವನೂ ಜೀವದಾತನಲ್ಲವೆ? ದೇವರೇ ಅಲ್ಲವೇ? ಅವರ ಕಾರ್ಯಕ್ಕೂ ಅಪಾರ ಪ್ರೀತಿ, ಮನ್ನಣೆ ಇದೆ. ವೈದ್ಯರು ಬಂದಾಗ ಎದ್ದು ನಿಂತು ಗೌರವಿಸುವ ಪರಂಪರೆ ನಮ್ಮದು. ವೈದ್ಯರು ಬರುವ ದಾರಿಯಲ್ಲಿ ಉದ್ದಂಡ ನಮಸ್ಕಾರ ಹಾಕಿದ್ದನ್ನು ನೋಡಿದ್ದೇನೆ. ಇನ್ನು ಪತ್ರಿಕೋದ್ಯೋಗವೂ ಘನತೆಯನ್ನು ಹೊಂದಿ ರುವ ವೃತ್ತಿಯೇ ಆಗಿದೆ.

ಇದು ಸಮೂಹದ ನಡುವಿನ ವ್ಯವಹಾರಗಳ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತದೆ. ಸಮಾಜದ ಸ್ವಾಸ್ಥ್ಯವನ್ನು ಬೌದ್ಧಿಕ ವಾಗಿ ಮಾನಸಿಕವಾಗಿ ಕಾಪಾಡುವ ಕಾರ್ಯ ಇವರದ್ದು. ಜಗತ್ತಿನ ಮೂಲೆಮೂಲೆಗಳಲ್ಲಿ ಆಗುಹೋಗುವ ವಿಚಾರಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಇದು ಮಾಡುತ್ತದೆ. ನಮ್ಮ ನಮ್ಮ ನಡುವಿನ ಸಂಬಂಧವನ್ನು ಜೀವಂತವಾಗಿಡುವ ಈ ವೃತ್ತಿಯನ್ನು ನಾಲ್ಕನೇ ಅಂಗವೆಂದು ಪರಿಗಣಿಸಲಾಗಿದೆ. ಸಮೂಹ ಮಾಧ್ಯಮಗಳನ್ನು ಈ ವೃತ್ತಿಯಲ್ಲಿ ಕಾಣಬಹುದು.

ಆರಕ್ಷಕ ವೃತ್ತಿ, ಡ್ರೈವರ್, ಕಂಡಕ್ಟರ್, ದೇವಸ್ಥಾನದ ಅರ್ಚಕರು, ಕ್ಷೌರಿಕರು, ಅಡುಗೆ ಮಾಡುವವರು, ಮರಗೆಲಸ ಮಾಡುವವರು, ಕಮ್ಮಾರರು, ಕುಂಬಾರರು, ಚಮ್ಮಾರರು, ಬಡಿಗರು, ನೇಕಾರರು, ಚಪ್ಪಲಿ ಕೆಲಸ ಮಾಡುವವರು, ಜ್ಯೋತಿಷ್ಯ ಹೇಳುವವರು, ಮೀನುಗಾರರು, ಅಕ್ಕಸಾಲಿಗರು, ಐಟಿ ಬಿಟಿಯಲ್ಲಿ ಕೆಲಸ ಮಾಡುವವರು, ಕಾರಕೂನರು, ಗುಮಾಸ್ತರು, ಗುಜರಿಯವರು, ಹೊಟೇಲಿನಲ್ಲಿ ದುಡಿಯುವವರು, ಉದ್ಯಮಿಗಳು, ದಳಿಗಳು, ಚಾಲಕರು, ಗುತ್ತಿಗೆದಾರರು, ಹಮಾಲಿಗಳು- ಹೀಗೆ ವಿವಿಧ ಬಗೆಯ ವೃತ್ತಿಗಳನ್ನು ಅದರದರ ಬೌದ್ಧಿಕ, ಭೌತಿಕ ಮತ್ತು ಮಾನಸಿಕ ಶ್ರಮವನ್ನಾಧರಿಸಿ ಮಾನ್ಯತೆಯನ್ನೂ, ಗೌರವವನ್ನೂ, ಪ್ರತಿಫಲ ವನ್ನೂ ಈ ಸಮಾಜ ನೀಡುತ್ತದೆ. ಕೊಡುವ ಸಂಭಾವನೆಯನ್ನಾಧರಿಸಿ ಯಾವ ವೃತ್ತಿಯನ್ನೂ ಮೇಲು ಕೀಳೆಂದು ಯಾರೂ ಅಗೌರವ ತೋರಲಾರರು, ತೋರಬಾರದು ಕೂಡ.

ಅಮೆರಿಕದಂಥ ರಾಷ್ಟ್ರಗಳಲ್ಲಿ ಹದಿನಾರು ವೃತ್ತಿಗಳು ಗೌರವಿಸಲ್ಪಡುತ್ತದಂತೆ. ಅದರಲ್ಲಿ ಮೊದಲನೆಯ ವೃತ್ತಿಯೇ ಅಧ್ಯಾಪನ ಅಥವಾ ಬೋಧಕ ವೃತ್ತಿ. ಟೀಚರ್ಸ್‌ಗಳಿಗೆ ಅವರು ಅಪಾರ ಗೌರವವನ್ನು ಕೊಡುತ್ತಾರೆ. ಗೌರವಕ್ಕೊಳಗಾದ ಹದಿನಾರನೆಯ ವೃತ್ತಿಯೇ ರಾಜಕಾರಣ. ರಾಜಕಾರಣಕ್ಕೆ ಅವರು ಅಷ್ಟಾಗಿ ಮಹತ್ತ್ವವನ್ನು ಪ್ರಾಧಾನ್ಯವನ್ನು ನೀಡುವುದಿಲ್ಲ ಎಂಬುದು ಸ್ಪಷ್ಟ. ರಾಷ್ಟ್ರದ ಭವ್ಯ ಭವಿತವ್ಯದ ಪ್ರಜೆಗಳನ್ನು ರೂಪಿಸುವ ಶಿಕ್ಷಕರೇ ಅವರಿಗೆ ಅತ್ಯಂತ ಪ್ರಧಾನರು ಮತ್ತು ಪ್ರಮುಖರು ಎಂಬುದೂ ಸ್ಪಷ್ಟ.

ಎಲ್ಲ ಕ್ಷೇತ್ರಗಳಲ್ಲೂ ಶಿಕ್ಷಕರಿಗೇ ಮೊದಲ ಪ್ರಾಶಸ್ತ್ಯ ನೀಡುವುದು ಅಮೆರಿಕವಾದರೆ, ಭಾರತದಲ್ಲಿ ಇದಕ್ಕೆ ತೀರಾ ತದ್ವಿರುದ್ಧವಾದ
ಪರಿಸ್ಥಿತಿಯಿದೆ. ಇಲ್ಲಿ ಶಿಕ್ಷಕರಿಗೆ ಕೊನೆಯ ಸ್ಥಾನವೆಂಬಂಥ ಪರಿಸ್ಥಿತಿಯಿದೆ. ಇಲ್ಲಿ ವರ್ಷಕ್ಕೊಮ್ಮೆ ಬರುವ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯೆಂಬುದು ನಾಮಕಾವಸ್ಥೆಯ ಅದ್ಧೂರಿ ಆಚರಣೆಯಾಗಿದೆ. (ವೈಯಕ್ತಿಕವಾದ ಅಭಿಪ್ರಾಯವೇನೆಂದರೆ, ಈ ಟೀಚರ್ಸ್ ಡೇಯನ್ನು ಮೊದಲು ರದ್ದುಮಾಡಬೇಕು. ಅದು ರಾಧಾಕೃಷ್ಣನ್ ಹೆಸರಲ್ಲಿ ಆಚರಿಸುವ ನಾಟಕವಾಗಿ ಬಿಟ್ಟಿದೆ.

ಜತೆಯಲ್ಲಿ ಪರಿಸರ ದಿನಾಚರಣೆಯೂ ಅದೇ ಗತಿಯನ್ನು ಕಾಣುತ್ತಿದೆ) ಟಿಪ್ಪುಜಯಂತಿಗೆ ಸಿಗುವ ಸಂಭ್ರಮ ಮತ್ತು ಮನ್ನಣೆಯ ಮಣೆ ಶಿಕ್ಷಕ ದಿನಾಚರಣೆಗಿಲ್ಲ, ಶಿಕ್ಷಕರಿಗಿಲ್ಲ. ಶಿಕ್ಷಣ ಸಂಸ್ಥೆಗಳ ಮ್ಯಾನೇಜ್‌ಮೆಂಟಿನವರು ಆ ದಿನವಾದರೂ ತಮ್ಮ ತಮ್ಮ ಕಾಲೇಜು, ವಿದ್ಯಾಲಯಗಳ ಶಿಕ್ಷಕರನ್ನು ಗೌರವಾದರದಿಂದ ಕಂಡು ಸಮ್ಮಾನಿಸಬೇಕೆಂಬ ಸಾಮಾನ್ಯ ಜ್ಞಾನವನ್ನೂ ಪ್ರದರ್ಶಿಸ ಲಾರರು. ತಮ್ಮ ವಿದ್ಯಾಸಂಸ್ಥೆಯಲ್ಲಿರುವ ಶಿಕ್ಷಕರನ್ನು ಏಕವಚನದಲ್ಲಿ ಸಂಬೋಧಿಸುವ ಮ್ಯಾನೇಜ್ ಮೆಂಟಿನವರಿಗೆ ಶಿಕ್ಷಕ ರೆಂದರೆ ತಮ್ಮ ಅಧೀನದಲ್ಲಿರುವ ಕೆಲಸದವರು ಎನ್ನುವ ಒಣಧಾರ್ಷ್ಟ್ರ್ಯ. ಉದಾಸೀನ ಭಾವ.

ಕೇವಲ ಹತ್ತು ತಿಂಗಳ ದಿನಗೂಲಿಯವರು ಮಾತ್ರವೆಂಬ ಭಾವನೆ. ಈ ಮನೋಭಾವವೇ ಶಿಕ್ಷಕರನ್ನು ಗೌರವದಿಂದ ಕಾಣದಂತೆ
ಈಗಿನ ಮಕ್ಕಳಲ್ಲೂ ಅಂಥದ್ದೇ ಮನಸ್ಥಿತಿ ಬೆಳೆಯುವಂಥ ವಾತಾವರಣ ಬೆಳೆದಿದೆ. ಪೋಷಕರಂತೆ ಮಕ್ಕಳೂ ತಮಗೆ ಕಲಿಸುವ ಶಿಕ್ಷಕರನ್ನು ಏಕವಚನದ ಹಂಗಿಸುವ ಹೀಯಾಳಿಸುವ ಬೈಯ್ದಾಡುವ ಪರಿಹಾಸ್ಯ ಮಾಡುವ, ಅಣಕಿಸುವ ಪರಿಪಾಠ ಬೆಳೆದಿ ರುವುದರಿಂದ ಅಪರೋಕ್ಷವಾಗಿ ಇಡೀ ಶಿಕ್ಷಕ ಸಮುದಾಯವನ್ನೇ ಕೀಳು ಅಂದಾಜಿಸುವ ಪ್ರವೃತ್ತಿ ಎಲ್ಲೂ ಬೆಳೆದು ಆ ವೃತ್ತಿ ಗೌರವ ಕುಸಿದಿದೆ. ಶಿಕ್ಷಕರ ವರ್ತನೆಯೂ ಇದಕ್ಕೆ ಕಾರಣವಾಗಿದೆಯೆಂಬುದು ಬೇರೆ ಮಾತು!

ಭಾರತದಂಥ ದೇಶಗಳಲ್ಲಿ ಅಧ್ಯಾಪನ ಅಥವಾ ಬೋಧನೆಯಲ್ಲಿರುವವರಿಗೆ, ಅಂಥ ಬಗೆಯ ವೃತ್ತಿಯವರಲ್ಲಿ ಎಲ್ಲಾ ಆದರ್ಶ ಗಳನ್ನು ಹೊರಿಸಿ ಅವರನ್ನು ಎತ್ತರದ ಸ್ಥಾನದ ಕೂರಿಸಿ ಹುಸಿ ಗೌರವವನ್ನು ತೋರುವ ವಿಚಿತ್ರ ವಾತಾವರಣ ಬೆಳೆದುಬಿಟ್ಟಿದೆ. ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಂದಾಗ ಅಥವಾ ಕಲಿಕೆಯಲ್ಲಿ ವ್ಯತ್ಯಾಸ ಕಂಡುಬಂದಾಗ, ‘ಅದ್ಯಾವನವ ಮೇಷ್ಟ್ರು ನಿಂಗೆ ಕಲಿಸಿದವ?’ ಅಂತಲೇ ಮಕ್ಕಳ ಮುಂದೆ ಶಿಕ್ಷಕರನ್ನು ಏಕವಚನದಲ್ಲಿ ಬೈಯುವವರಿಗೇನೂ ಈ ಸಮಾಜದಲ್ಲಿ ಕಡಿಮೆಯಿಲ್ಲ.

ಈ ರೀತಿಯ ಮಾತುಗಳು ಹುಟ್ಟುವುದು ಶಿಕ್ಷಕ ವೃತ್ತಿಯ ಮೇಲಿರುವ ತಿರಸ್ಕಾರ, ಅಗೌರವ, ಅಸಡ್ಡೆ, ಮಿಥ್ಯಾರೂಪದ ಆದರವನ್ನು ಅವಲಂಬಿಸಿಯೇ ಹೊರತು ಅನ್ಯಥಾ ಅಲ್ಲ. ಯಾರನ್ನು ಈ ಸಮಾಜ ಗೌರವಾದರಗಳಿಂದ ಕಾಣಬೇಕಿತ್ತೋ ಅವರನ್ನೇ ಅಗೌರವ ದಿಂದ ನಡೆಸಿಕೊಂಡರೆ ದೇಶೋದ್ಧಾರವೆಂಬುದು ಕನಸಿನ ಮಾತು.