Wednesday, 11th December 2024

ಹೊಸ ವರ್ಷದ ಪ್ರತಿಜ್ಞೆಗಳ ಪ್ರಸವ

ಅಭಿವ್ಯಕ್ತಿ

ಸುಜಯಾ ಆರ್‌.ಕೊಣ್ಣೂರ್‌

ನಾನು ತೀರ್ಮಾನ ಮಾಡಿಯೇ ಬಿಟ್ಟಿದೀನಿ… ಈ ವರ್ಷದಿಂದ ನಾನು ಕುಡಿಯುವುದನ್ನು ಬಿಟ್ಟು ಬಿಡ್ತೇನೆ… ಹೀಗಂತ ಅದೆಷ್ಟು ಜನರ ಬಾಯಲ್ಲಿ ಕೇಳಿದ್ದೇನೋ? ಎಲ್ಲವೂ ಒಂದೆರಡು ದಿನ, ಹೆಚ್ಚೆಂದರೆ ಒಂದು ವಾರ ಅಷ್ಟೇ.

ಮತ್ತೆ ಬಹಳ ವರ್ಷದ ನಂತರ ಗೆಳೆಯಾ ಸಿಕ್ಕಿಬಿಟ್ಟ ಅವಾಗ ಪಾರ್ಟಿ ಮಾಡದೇ ಇರೋಕ್ಕಾಗುತ್ಯೆ? ಅಂತ ಮತ್ತೆ ಶುರು. ಅಲ್ಲಿಗೆ ಈ ಪ್ರತಿಜ್ಞೆಯ ಪ್ರಸವವಾದಂತೆ. ನಾನು ದಿನಾ ಬೆಳಿಗ್ಗೆ ಬೇಗ ಎದ್ದು ಯೋಗಾಭ್ಯಾಸ ಮಾಡ್ತೀನಿ ಅಂತ ಹೊಸವರ್ಷದ ಮೊದಲಲ್ಲಿ ತೀರ್ಮಾನ ಮಾಡೋದು. ಒಂದೆರಡು ದಿನ ಮಾಡಿ, ಎಲ್ಲರಿಗೂ ಹೇಳಿದ್ದೇ ಹೇಳಿದ್ದು.

ಒಂದು ನಾಲ್ಕು ದಿನ ಆದ ಮೇಲೆ, ಚಳಿ ಅನ್ನಿಸಿ ಮಲಗಿಬಿಟ್ಟೆ, ಅಲಾರಾಂ ಹೊಡೆದಿದ್ದೇ ಗೊತ್ತಾಗಲಿಲ್ಲ. ನೆಂಟರು ಬಂದಿದ್ದರು, ಹಾಗಾಗಿ ಮಲಗಿದ್ದು ತಡ ಆಯ್ತು, ಇವೆ ಸಾಬೂಬುಗಳನ್ನು ಮನಸ್ಸು ಹುಡುಕುತ್ತೆ. ಅದನ್ನೂ ದಾಟಿ, ಛಲ ಇಟ್ಟುಕೊಂಡು 21 ದಿನ ಎಡೆಬಿಡದೇ ಮಾಡಿದಲ್ಲಿ, ಆಮೇಲೆ ಅದು ನಿಮ್ಮನ್ನು ಬಿಡುವುದಿಲ್ಲ. ನೀವು ಗಮನಿಸಿ ನೋಡಿ, ಒಳ್ಳೆಯ ಅಭ್ಯಾಸಗಳು ಕೈ ಹಿಡಿಯಲು ಕನಿಷ್ಠ 21 ದಿನಗಳಾದರೂ ಬೇಕು. ಅದೇ ಕೆಟ್ಟ ಅಭ್ಯಾಸಕ್ಕೆ 2 ದಿನ ಸಾಕು. ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳ ಬಹುದಾದ, ಸುಲಭ ಹಾಗೂ ಉತ್ತಮ ಜೀವನದ ಮುನ್ನಡೆಗೆ ಕೆಲವು ಪ್ರತಿಜ್ಞೆಗಳನ್ನು ಇಲ್ಲಿ ನಮೂದಿಸುವೆ.

ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ, ಕರಾಗ್ರೆ ವಸತೇ ಲಕ್ಷ್ಮೀ… ಎನ್ನುವ ಮೂಲಕ ಈ ದಿನ ನನ್ನದು. ಇದನ್ನು ಸಂತೋಷ ಹಾಗೂ ಸುಖಮಯವಾಗಿ ಕಳೆಯಬೇಕು ಎಂದುಕೊಳ್ಳಿ. ನೆಲಕ್ಕೆ ಕಾಲಿಡುವಾಗ, ಈ ಭೂಮಿ ನಮ್ಮೆಲ್ಲರ ಭಾರ ಹೊತ್ತಿದೆ. ಅದಕ್ಕೊಮ್ಮೆ ಸಮುದ್ರ ವಸನೇ ದೇವಿ ಎಂಬ ಶ್ಲೋಕದೊಂದಿಗೆ ನಮಿಸಿ, ಕಾಲಿಟ್ಟು ದೃಢ ಹೆಜ್ಜೆಯೊಂದಿಗೆ ದಿನದ ಆರಂಭ ಮಾಡಿ.

ನಿಯಮಿತ ಯೋಗಾಭ್ಯಾಸದೊಂದಿಗೆ ದಿನದ ಆರಂಭವಾಗಲಿ. ದೇಹವನ್ನು ಶುಚಿಗೊಳಿಸಿ, ನಿಯಮಿತ ಆಹಾರ ಸೇವಿಸಿ ದಿನವನ್ನು ಮುನ್ನಡೆಸಿ. ಇಡೀ ದಿನದಲ್ಲಿ ಮೋಸ, ವಂಚನೆ ಮಾಡದೇ, ನಾಲ್ಕು ಜನ ಮೆಚ್ಚುವಂತೆ ನಡೆಯಿರಿ. ನಾಲ್ಕು ಮಂದಿಗೆ ಪ್ರತಿಫಲಾ ಪೇಕ್ಷೆ ಬಯಸದೇ, ಕೈಲಾದ ಸಹಾಯ ಮಾಡಿ, ಅವರ ಮುಖದಲ್ಲಿ ಕಾಣುವ ಆ ಖುಷಿಯನ್ನು ನೋಡಿ ನಾವು ಖುಷಿ ಪಡಬೇಕು.
ರಾತ್ರಿ ಊಟವಾದ ಮೇಲೆ, 108 ಹೆಜ್ಜೆ ನಡೆಯಬೇಕು.

ಆ ದಿನ ನಡೆದ ಎಲ್ಲಾ ಘಟನೆಗಳು, ಮಾತನಾಡಿದ್ದು ಎಲ್ಲವನ್ನೂ ಒಮ್ಮೆ ಸಿಂಹಾವಲೋಕನ ಮಾಡಿ, ಅದರಲ್ಲಿ ನಾವು ಎಷ್ಟು ಕೆಲಸ ಸರಿ ಮಾಡಿದ್ದೇವೆ? ಅದರಲ್ಲಿ ಇನ್ನೂ ಏನೇನು ಬದಲಾವಣೆ ಮಾಡಬೇಕು, ಅದರಲ್ಲಿ ಏನೇನು ಹೊಸತನ, ಕ್ರಿಯಾಶೀಲತೆ ಮೂಡಿಸಬಹುದು ಎಂಬುದನ್ನು ನಿಶ್ಚಯಿಸಬೇಕು. ಅದರಂತೆ ಮುಂದಿನ ನಡೆ ಇರಬೇಕು. ಈಗಿನ ಕಾಲದಲ್ಲಿ ಎಲ್ಲರೂ ಮೊಬೈಲ್ ಬಳಸುತ್ತಾರೆ.

ಒಂದು ದಿನ ಮೊಬೈಲ್ ಬಳಸದೇ ಇರಲು ತೀರ್ಮಾನಿಸಿ ಹಿರಿಯರು, ಗುರುಗಳಿಗೆ ಗೌರವ ನೀಡಿ. ನೆರೆ – ಹೊರೆಯವರೊಂದಿಗೆ ಸೌಹಾರ್ದಯುತ ನಡೆ ಇರಲಿ. ಬೇರೆಯವರ ಮನಸ್ಸಿಗೆ ನೋವಾಗುವಂತೆ ಮಾತನಾಡಬೇಡಿ. ಆದಷ್ಟು ಕರುಣೆ, ಅನುಕಂಪವಿರಲಿ.
ನಡೆ – ನುಡಿಯಲ್ಲಿ ವಿನೀತಭಾವ ಇರಲಿ. ನೆಂಟರಿಷ್ಟರು ಬಂದಾಗ, ಜತೆಯಲ್ಲಿ ಕುಳಿತು ಮಾತನಾಡಿ.

ಮನೆಯವರೆಲ್ಲರ ಜತೆ ಕುಳಿತು ಊಟ ಮಾಡಿ. ಮಕ್ಕಳೊಂದಿಗೆ ಅಂಗಳದಲ್ಲಿ, ಇಲ್ಲವೇ ಬಯಲಿನಲ್ಲಿ ಆಟವಾಡಿ. ಮನಸ್ಸನ್ನು ಯಾವಾಗಲೂ ಖುಷಿಯಾಗಿಟ್ಟುಕೊಳ್ಳಿ. ಜೀವನದ ಪ್ರತಿಕ್ಷಣದಲ್ಲೂ ಹೊಸ ಹುರುಪು ತುಂಬಿರಲಿ. ಬೇಸರ, ಸುಸ್ತು ಪದಗಳನ್ನು ನಿಮ್ಮ ಡಿಕ್ಷನರಿಯಿಂದ ತೆಗೆದುಬಿಡಿ. ಯಾರಲ್ಲೂ ಕೆಟ್ಟಪದಗಳನ್ನು ಉಪಯೋಗಿಸಿ ಜಗಳವಾಡಬೇಡಿ. ನಿಮಗಿಂತ ಕಷ್ಟದಲ್ಲಿರು ವವರ ಜತೆ ನಿಮ್ಮನ್ನು ಹೋಲಿಸಿಕೊಂಡಲ್ಲಿ ನಿಮ್ಮ ಕಷ್ಟ ಹೊರೆ ಎನಿಸದು. ಕೊನೆಯದಾಗಿ, ಎಲ್ಲಕ್ಕೂ ಮನಸ್ಸು ಕಾರಣ. ಅದು ನಿಮ್ಮ ಮಾತು ಕೇಳುವಂತಿರಲಿ.