ಅಭಿಮತ
ರವೀ ಸಜಂಗದ್ದೆ
ಹಲವಾರು ದಂಧೆಗಳಲ್ಲಿ ಸದಾ ಬೇಯುವ, ನಂತರ ಅದರಲ್ಲಿ ಮಿಂದೇಳುವ ರೀತಿಯ ಸಾಮಾಜಿಕ ವ್ಯವಸ್ಥೆಯ ತವರೂರು ನಮ್ಮದು. ಸರಕಾರದ
ಯಾವುದೇ ಇಲಾಖೆಯಲ್ಲಿ ಬಡ್ತಿ ಮತ್ತು ವರ್ಗಾವಣೆಗಳು ಕೋಟಿಗಳ ಲೆಕ್ಕದಲ್ಲಿ ವ್ಯವಹಾರ ನಡೆಯುವ ಬಹುದೊಡ್ಡ ದಂಧೆಯಾಗಿ ಮಾರ್ಪಟ್ಟು ಕರ್ನಾಟಕ ರಾಜ್ಯ ಉದಯಿಸಿದಷ್ಟು ವರುಷಗಳೇ ಸಂದಿವೆ.
‘ಪ್ರಭಾವ, ಶಿಫಾರಸ್ಸು ಮತ್ತು ಆರ್ಥಿಕ ವ್ಯವಹಾರ ಒಂದಿಷ್ಟೂ ಇಲ್ಲದೇ ಬೇಕಾದ ಕಡೆಗೆ ವರ್ಗಾವಣೆ ಸಿಗಲು ಮತ್ತು ಬಡ್ತಿ ಸಿಗಲು ಸಾಧ್ಯವೇ ಇಲ್ಲ’ ಎನ್ನುವುದು ಸರಕಾರದ ಯಾವುದೇ ಇಲಾಖೆ, ವಿಭಾಗಗಳಲ್ಲಿ ಪ್ರಚಲಿತ ಮತ್ತು ಚಾಲ್ತಿಯಲ್ಲಿರುವ unwritten rule! ಅನಧಿಕೃತವಾಗಿ ಎಲ್ಲದಕ್ಕೂ ದರ ಶ್ರೇಣಿ ನಿಗದಿಯಾಗಿರುತ್ತದೆ ಮತ್ತು ಕಾಲಾಂತರದಲ್ಲಿ ಅದು ಪರಿಷ್ಕೃತವಾಗುತ್ತಿರುತ್ತದೆ.
ಇವೆಲ್ಲ ಅಪದ್ಧ, ಅಪಸವ್ಯ, ಅನಿಷ್ಟಗಳ ನಡುವೆ ಕಳೆದ ವಾರ ಕರ್ನಾಟಕ ಸರಕಾರದ ಅಧೀನದಲ್ಲಿ ಬರುವ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿಗಳ ವರ್ಗಾವಣೆ ಪ್ರಕ್ರಿಯೆ ನಡೆಯಿತು. ಅದು ವಿಶಿಷ್ಟ, ಪಾರದರ್ಶಕ ಮತ್ತು ಉಚಿತವಾಗಿ ಅಂದರೆ ಯಾವುದೇ ರೀತಿಯ ಹಣಕಾಸಿನ ಕೊಡು-ಕೊಳ್ಳುವ ಒಪ್ಪಂದ ಇಲ್ಲದೆ ಸಂಪನ್ನಗೊಂಡು ಇತಿಹಾಸ ಬರೆಯಿತಲ್ಲ! ಇದನ್ನು ಸಾಧ್ಯವಾಗಿಸಿದ ಹಿರಿಮೆ ಮತ್ತು ಗರಿಮೆ ಡಿಜಿಪಿ
ಕಮಲ್ ಪಂತ್ ಅವರದ್ದು.
ವರ್ಗಾವಣೆಯಲ್ಲಿ ಪರಿಪೂರ್ಣ ಪಾರದರ್ಶಕತೆ ತರುವ ಮತ್ತು ಅದನ್ನು ಪ್ರಾಯೋಗಿಕವಾಗಿ ಸಾಧ್ಯವಾಗಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿರುವ ರಾಜ್ಯ ಅಗ್ನಿಶಾಮಕ ದಳದ ಪ್ರಧಾನ ಕಛೇರಿಯ ಆವರಣದಲ್ಲಿ ಶಾಮಿಯಾನ ವ್ಯವಸ್ಥೆ ಮತ್ತು ದೊಡ್ಡ ಎಲಇಡಿ ಪರದೆಗಳನ್ನು ಅಳವಡಿಸಿ ಒಂದೇ ದಿನ ಸುಮಾರು ೪೫೦ ಸಿಬ್ಬಂದಿಗಳಿಗೆ ಮುಂಬಡ್ತಿ ಮತ್ತು ಅವರು ಬಯಸಿದ ಜಾಗಕ್ಕೆ ವರ್ಗಾವಣೆ ಆದೇಶ ನೀಡಲಾಯಿತು. ಕ್ರೀಡಾ ಕೋಟ, ಸೇವಾ ಹಿರಿತನ,
ಪತಿ/ಪತ್ನಿ ಆರೋಗ್ಯ ಸಮಸ್ಯೆ ಇನ್ನಿತರ ವಿಚಾರಗಳ ಆಧಾರದ ಮೇಲೆ ನಡೆದ ಈ ಉಚಿತ ಪ್ರಕ್ರಿಯೆಯು ಫಲಾನುಭವಿ ಸಿಬ್ಬಂದಿಗಳಲ್ಲಿ ಸಂತಸ-ಸಮಾಧಾನ ತಂದಿದೆ.
ಹಲವರು ಸಂತಸದಿಂದ ಅಳುತ್ತಾ ಪಂತ್ ಅವರಿಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸಿದರು. ಮುಖಪುಟದ ವಾರ್ತೆಯಾಗಬೇಕಿದ್ದ ಈ ವಿಷಯ ಕೆಲವೇ ಕೆಲವು ಪತ್ರಿಕೆಗಳ ಒಳಪುಟಗಳ ಜಾಗ ತುಂಬುವ ಸುದ್ದಿಯಾಗಿ ಪ್ರಕಟವಾಯಿತು. ಸಂಸದರು, ಶಾಸಕರು, ಸಚಿವರು, ಕೇಂದ್ರ-ರಾಜ್ಯದಲ್ಲಿ
ಅಧಿಕಾರದಲ್ಲಿ ಇರುವವರು ಸಹಜವಾಗಿ ತಮ್ಮ ಕಡೆಯವರಿಗೆ ಬೇಕಾದಲ್ಲಿ ಬೇಕಾದಂತೆ ವ್ಯವಸ್ಥೆ ಮಾಡಲು ಹೇರುವ ಒತ್ತಡ, ಹಲವರ ಶಿಫಾರಸು, ಪ್ರಭಾವ, ಪ್ರಲೋಭನೆ ಹೀಗೆ ಯಾವುದಕ್ಕೂ ಜಗ್ಗದೆ, ಬಗ್ಗದೆ, ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ, ಕೇವಲ ಸೇವಾವಧಿ ಮತ್ತು ಅರ್ಹತೆಗಳನ್ನು ಮಾತ್ರ
ಪರಿಗಣಿಸಿ ಮಾಡಿದ ಈ ವರ್ಗಾವಣೆ ಚಟುವಟಿಕೆ ದೇಶದ ಯಾವುದೇ ಸರಕಾರಿ ವಿಭಾಗಗಳಲ್ಲಿ ಬಹುಶಃ ಅಗ್ರವೂ, ದುಡ್ಡಿನ ವ್ಯವಹಾರವೇ ಇಲ್ಲವಾದು ದರಿಂದ ಅಗ್ಗವೂ!
ಬಂದಿರುವ ಎಲ್ಲ ಒತ್ತಡ, ಮೌಖಿಕ ಶಿಫಾರಸು, ಶಿಫಾರಸು ಪತ್ರ, ಪ್ರಭಾವ, ಫೋನು ಕರೆ ಇತ್ಯಾದಿಗಳಿಗೆ ತನ್ನ ಕಚೇರಿಯ ಕೋಣೆಯ ಕಸದ ಬುಟ್ಟಿಯಲ್ಲಿ ಸ್ಥಾನ ಕೊಟ್ಟು ಸಂಪೂರ್ಣ ವರ್ಗಾವಣಾ ಪ್ರಕ್ರಿಯೆಯನ್ನು ಇಷ್ಟು ಚೆಂದವಾಗಿ ಮತ್ತು ಚರಿತ್ರಾರ್ಹವಾಗಿ ಮಾಡಿ ಸೈ ಎನಿಸಿಕೊಂಡ ಕೀರ್ತಿ, ಬಿರುದು
ಮತ್ತು ಯಶಸ್ಸು ಅಗ್ನಿಶಾಮಕ ದಳದ ಡಿಜಿಪಿ ಕಮಲ್ ಪಂತ್ ಮತ್ತು ಅವರ ಜೊತೆ ಈ ವಿಷಯದಲ್ಲಿ ಗಟ್ಟಿಯಾಗಿ ನಿಂತ ಹಿರಿಯ ಅಧಿಕಾರಿಗಳಿಗೆ
ಸಲ್ಲಬೇಕು. ಬಿಡಿಗಾಸು ಪಡೆಯದೆ ಅಗ್ನಿಶಾಮಕ ನಿಗಮದಲ್ಲಿ ನಡೆದ ಈ ವರ್ಗಾವಣೆ ಹಲವಾರು ಮಧ್ಯವರ್ತಿಗಳ, ಅಧಿಕಾರದಲ್ಲಿ ಇರುವವರ ಹೊಟ್ಟೆ ಮತ್ತು ದೇಹದ ಹಲವು ರಂಧ್ರಗಳಲ್ಲಿ ಅಗ್ನಿ ಜ್ವಾಲೆ ಹೊತ್ತಿಸಿದ್ದು ಸುಳ್ಳಲ್ಲ!
ಸರಕಾರದ ಯಾವುದೇ ವಿಭಾಗದಲ್ಲಿ ಯಾವುದೇ ಕೆಲಸ ಆಗಬೇಕಾದರೆ ‘ಮಾಮೂಲಿ’ ಕೊಡಬೇಕಾದ ಮಾಮೂಲು ಪರಿಸ್ಥಿತಿ. ಇದಕ್ಕೆ ತದ್ವಿರುದ್ಧ ಉದಾ ಹರಣೆಗಳೂ ತೀರಾ ಕಡಿಮೆ ಎನ್ನುವಷ್ಟು ವಿರಳ. ವರ್ಗಾವಣೆ ದಂಧೆಯನ್ನು ಪ್ರಮುಖ ವೃತ್ತಿಯಾಗಿ ಮಾಡಿಕೊಂಡ ದೊಡ್ಡ ತಂಡವೇ ವಿಕಾಸ ಸೌಧದ ಕಾಂಪೌಂಡ್ ಒಳಗೆ ಸದಾ ಕಾರ್ಯಪ್ರವೃತ್ತವಾಗಿದೆ. ತಮಗಿರುವ ಕಾಂಟ್ಯಾಕ್ಟ್ ಬಳಸಿ ವ್ಯವಹಾರ ಕುದುರಿಸಿ ಎರಡೂ ಕಡೆಯಿಂದ ಕಮಿಷನ್
ಪಡೆಯುವ ನಿತ್ಯ ನಿರಂತರ ವ್ಯವಹಾರ ವ್ಯವಸ್ಥೆ. ಅಂದುಕೊಂಡಂತೆ, ಮಾತನಾಡಿದಂತೆ ವರ್ಗಾವಣೆ ಸಂಪನ್ನಗೊಂಡಾಗ ಲಕ್ಷಗಳಲ್ಲಿ ನಗದು ಕೂಡ ಹಲವು ಕೈಗಳಿಗೆ ವರ್ಗಾವಣೆಗೊಂಡಿರುತ್ತದೆ. ಸರಕಾರಿ ಇಲಾಖೆಗಳಲ್ಲಿ ಅನಾಯಾಸವಾಗಿ ಬೇಕಾದಲ್ಲಿಗೆ ವರ್ಗಾವಣೆ ಹೊಂದುವುದು ಮತ್ತು ನಾರ್ಮಲ್ ಹೆರಿಗೆಯಾಗುವುದು ಎರಡೂ ಒಂದೇ ಮತ್ತು ತೀರಾ ಅಪರೂಪ!
ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ಕಮಲ್ ಪಂತ್ ಅವರ ಹುಟ್ಟೂರು. ೧೯೯೯ರ ಐಪಿಎಸ್ ಬ್ಯಾಚಿನ ಸ್ವಚ್ಛ, ಖಡಕ್, ದಕ್ಷ, ವಿಶ್ವಾಸಾರ್ಹ ವ್ಯಕ್ತಿ-ವ್ಯಕ್ತಿತ್ವ. ತನ್ನ ಕೆಲಸ ಮತ್ತು ಸೇವಾ ಕೊಡುಗೆಯಿಂದ ಜನಾನುರಾಗಿ. ಕೇವಲ ವೃತ್ತಿಸೇವೆಯ ಮೂಲಕ ಈ ಎತ್ತರಕ್ಕೆ ಬೆಳೆದು ನಿಂತವರು. ‘ಎರಡು ಸಾವಿರ ಕಿಲೋಮೀಟರ್ ದೂರದಿಂದ ಇಲ್ಲಿಗೆ ಬಂದು ಸೇವೆ ಸಲ್ಲಿಸುತ್ತಿದ್ದೇನೆ. ನಮ್ಮ ಕುಟುಂಬದ ಯಾವುದೇ ಶುಭಕಾರ್ಯಗಳು, ಸಾವು-ನೋವು ಏನೇ ಆದರೂ ಕಾರ್ಯಬಾಹುಳ್ಯದಿಂದ ಅವುಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
ನಿಮ್ಮ ಕಡೆಯಿಂದಲೂ ನಾನು ಇಂಥಾ ಸೇವಾತತ್ಪರತೆಯನ್ನು ಬಯಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ…’ ಎಂದು ಮೊನ್ನೆಯ ಅಗ್ನಿಶಾಮಕದಳ ವಿಭಾಗದ ಸಾಮೂಹಿಕ ವರ್ಗಾವಣೆ ಸಂದರ್ಭದಲ್ಲಿ ಅವರು ಹೇಳಿದಾಗ ಎಲ್ಲರೂ ಒಕ್ಕೊರಲಿನಿಂದ ಸಮ್ಮತಿಸಿದರು ಮತ್ತು ಹಲವರ ಕಣ್ಣಂಚಿನಲ್ಲಿ ಕಮಲ್ ಪಂತ್ ಅವರೆಡೆಗೆ ಧನ್ಯತಾಭಾವದ ಕಣ್ಣೀರು. ಇಂತಹಾ ಹೊಸ ಇತಿಹಾಸ ಬರೆದು ಪಂತ್ ಇದೇ ಜೂನ್ ೩೦ರಂದು ಸೇವೆಯಿಂದ ನಿವೃತ್ತ ರಾಗಲಿದ್ದಾರೆ.
ಮಾಡುವ ಕೆಲಸಕ್ಕೆ ಯಾವುದೇ ಮೂಮೂಲು ಪಡೆಯದೆ ಕೇವಲ ತಿಂಗಳ ಪಗಾರ ಮಾತ್ರ ಪಡೆದು ಮೇಲ್ಪಂಕ್ತಿ ಹಾಕುವ ಇಂಥವರ ಸಂತತಿ ಎಡೆ ನೂರ್ಮಡಿ ಯಾಗಲಿ. ಸರಕಾರಿ ವಿಭಾಗಗಳಲ್ಲಿ ಆಗಬೇಕಾದ ಕೆಲಸಗಳು, ವರ್ಗಾವಣೆ, ಬಡ್ತಿ ಇತ್ಯಾದಿ ‘ಮಾಮೂಲು’ ಪಡೆಯುವ ಕಾರ್ಯಗಳಾಗದೆ ಮಾಮೂಲು ಕಾಯಕಗಳಾಗಲಿ. ಕಮಲ್ ಪಂತ್ ಹಾಕಿಕೊಟ್ಟ ಸ್ವಚ್ಛ, ಪಾರದರ್ಶಕ ಮಾರ್ಗ ಮಾದರಿ ಯಾಗಲಿ. ಸರಕಾರಿ ನೌಕರರಿಗೆ ‘ಬಡ್ತಿ ಭಾಗ್ಯ’ ಮತ್ತು ‘ವರ್ಗಾವಣೆ ಭಾಗ್ಯ’ ಹೆಸರಿನ ‘ಕನ್ನಡಿಯೊಳಗಿನ ಗಂಟು’ ಎಂಬಂತಿರುವ ಯೋಜನೆಗಳು ಗ್ಯಾರಂಟಿಯಾಗಿ, ಉಚಿತವಾಗಿ ಸಿಗುವಂತಾಗಲಿ.
ಕಮಲ್ ಪಂತ್ ಹಾಕಿಕೊಟ್ಟ ಈ ಉಚಿತ ವರ್ಗಾವಣೆಯ ಪಂಥ ಸರಕಾರದ ಎಲ್ಲ ಇಲಾಖೆಗಳಲ್ಲಿ ಸಾಂಕ್ರಾಮಿಕವಾಗಿ ಪಸರಿಸಲಿ. ಸರಕಾರ ನಡೆಸುವವ ರಿಗೆ, ವಿವಿಧ ಸರಕಾರಿ ಇಲಾಖೆಗಳ ಮುಖ್ಯಸ್ಥರಿಗೆ ಇದು ನಿಜಾರ್ಥದ ಪಂತಾಹ್ವಾನ, ಅಲ್ಲಲ್ಲ ಪಂಥಾಹ್ವಾನ! ವರ್ಗಾವಣೆ ದಂಧೆ ಅಂತ್ಯವಾಗಿ ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು…
(ಲೇಖಕರು: ಸಾಫ್ಟ್ ವೇರ್ ಉದ್ಯೋಗಿ, ಹವ್ಯಾಸಿ ಬರಹಗಾರರು)