ಕೃಷಿ ರಂಗ
ನಾಗರಾಜ ಜಿ.ನಾಗಸಂದ್ರ
ಕೃಷಿಯನ್ನು ಬಿಟ್ಟು ಬದುಕಲಾರದ ರೈತರು, ಸಾಲ-ಸೋಲ ಮಾಡಿಯಾದರೂ ಕೊಳವೆ ಬಾವಿ ಕೊರೆಸಿ ಕೃಷಿಯನ್ನು ಮುಂದುವರಿಸು ತ್ತಿದ್ದಾರೆ. ಹೀಗೆ ಕೊರೆಯಿಸಿದ ಕೊಳವೆ ಬಾವಿಗಳಲ್ಲಿ ನೀರು ಸಿಗದೆ ಮತ್ತಷ್ಟು ತೊಂದರೆಗೆ ಸಿಲುಕಿದ್ದಾರೆ. ಕೃಷಿ ಕ್ಷೇತ್ರವು ಸಮಸ್ಯೆಗಳಲ್ಲೇ ನಲುಗುವುದು ವಾಡಿಕೆಯಾಗಿ ಬಿಟ್ಟಿದೆ.
ನೀರೆಂಬುದು ಮನುಷ್ಯ, ಪ್ರಾಣಿ- ಪಕ್ಷಿಗಳಿಗೆ ಮಾತ್ರವಲ್ಲದೆ ಪ್ರತಿಯೊಂದು ಜೀವಿಗೂ ಪ್ರಾಥಮಿಕ ಅಗತ್ಯವಾಗಿದೆ. ಒಂದು ಜೀವಿ ನೀರಿಲ್ಲದೆ ಕೆಲವೇ ದಿನಗಳವರೆಗೆ ಮಾತ್ರ ಜೀವಿಸಲು ಸಾಧ್ಯ. ಜೀವನಾವಶ್ಯಕ ಜಲ ಸಿಗದಿದ್ದಲ್ಲಿ ಇಡೀ ಜೀವ ಸಂಕುಲವೇ ನಾಶವಾಗಿಬಿಡುತ್ತದೆ. ಇದು ನೀರನ್ನು ನಾವೆಷ್ಟು
ಅವಲಂಬಿಸಿದ್ದೇವೆ ಎಂಬುದನ್ನು ತಿಳಿಸುತ್ತದೆ. ಮನುಷ್ಯರಾದ ನಮಗೆ ನೀರು ಬಹೂಪಯೋಗಿ. ದಾಹ ಹಿಂಗಿಸಲು, ಅಡುಗೆ ತಯಾರಿಗೆ, ನಿತ್ಯಕರ್ಮ ಗಳಿಗೆ, ಕೃಷಿಗೆ, ಸ್ವಚ್ಛತೆಗೆ, ಜಲಕ್ರೀಡೆಗೆ ಹೀಗೆ ನೀರನ್ನು ಪ್ರತಿನಿತ್ಯ ಹಲವಾರು ರೀತಿಯಲ್ಲಿ ಬಳಸುತ್ತೇವೆ.
ಹೀಗಾಗಿ ನೀರಿಲ್ಲದ ದಿನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಹಾಗೊಂದು ವೇಳೆ, ಅಂಥ ದುರ್ದಿನ ಬಂದೊದಗಿದರೆ ಪರಿಣಾಮವು ತೀರಾ ಭಯಾನಕ ವಾಗಿರುತ್ತದೆ; ಒಂದೊಮ್ಮೆ ಅದನ್ನು ಕಲ್ಪಿಸಿಕೊಂಡರೂ ಸಾಕು, ‘ನೀರಿಲ್ಲದ ಬದುಕು ಬೇಡ’ ಎನಿಸಿಬಿಡುತ್ತದೆ. ಇಂಥ ಅಮೂಲ್ಯ ಸಂಪತ್ತಾದ ನೀರನ್ನು ಸಾಧ್ಯವಾದಷ್ಟು ಮಟ್ಟಿಗೆ ಉಳಿಸುವ ಯೋಜನೆ ನಮ್ಮದಾಗಿರಬೇಕಲ್ಲವೇ? ಈ ನಿಟ್ಟಿನಲ್ಲಿ ಸರಕಾರಗಳು ಮಾತ್ರವೇ ಯೋಜನೆಗಳನ್ನು ರೂಪಿಸಿದರೆ ಸಾಲದು; ನೀರಿನ ಸಂರಕ್ಷಣೆ ಎಂಬುದು ಪ್ರಜ್ಞಾವಂತ ನಾಗರಿಕರೆಲ್ಲರ ಜವಾಬ್ದಾರಿ.
ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೊಂದು ಲೀಟರ್‌ನಷ್ಟು ನೀರನ್ನು ಉಳಿಸಿದರೆ, ೧೫೦ ಕೋಟಿ ಲೀಟರ್ ನೀರು ಉಳಿಯುತ್ತದೆ. ಹೀಗೆ ಒಂದು ವರ್ಷಕ್ಕೆ ಲೆಕ್ಕ
ಹಾಕಿದರೆ, ಒಂದು ಅಣೆಕಟ್ಟನ್ನೇ ತುಂಬುವಷ್ಟು ನೀರನ್ನು ಉಳಿಸಬಹುದಾಗಿದೆ. ಇಷ್ಟು ದೊಡ್ಡ ಪ್ರಮಾಣದ ಉಳಿಕೆಗೆ ನಮ್ಮ ಅಳಿಲುಸೇವೆ ಅತ್ಯಗತ್ಯ ಎಂಬುದನ್ನು ಅರಿತಲ್ಲಿ, ಪರಿಣಾಮಕಾರಿಯಾಗಿ ನೀರಿನ ಸಂರಕ್ಷಣೆ ಮಾಡಬಹುದು.
ಭೂಮಿಯ ಮೇಲೆ ನೀರು ಶೇ.೭೧ರಷ್ಟು ಅಗಾಧ ಪ್ರಮಾಣದಲ್ಲಿದ್ದರೂ, ಬಳಕೆಯೋಗ್ಯವಾದ ಶುದ್ಧ ನೀರಿನ ಪ್ರಮಾಣ ಶೇ.೦.೫ರಷ್ಟು ಮಾತ್ರ. ಇಷ್ಟು ಕಡಿಮೆ ಪ್ರಮಾಣದಲ್ಲಿರುವ ನೀರನ್ನು ನಮ್ಮ ಅಗತ್ಯತೆಗಳಿಗಿಂತ ಹೆಚ್ಚಾಗಿ ಬಳಸುವ ಮೂಲಕ, ಇಲ್ಲವೇ ಸ್ವಾರ್ಥಕ್ಕಾಗಿ ಕಲುಷಿತಗೊಳಿಸುವ ಮೂಲಕ, ಬಳಕೆಯೋಗ್ಯವಾದ ನೀರನ್ನು ನೋಡಲಾಗದ ಸ್ಥಿತಿಗೆ ತಲುಪುತ್ತಿದ್ದೇವೆ. ನಮ್ಮ ಈ ಧೋರಣೆ ಹೀಗೆಯೇ ಮುಂದುವರಿದರೆ, ಮುಂಬರುವ ದಿನಗಳಲ್ಲಿ ಶುದ್ಧ ನೀರಿರಲಿ, ಒಟ್ಟಾರೆಯಾಗಿ ನೀರೇ ಸಿಗದಂತಾಗುತ್ತದೆ. ಆದ್ದರಿಂದ ನೀರನ್ನು ಸದ್ಬಳಕೆ ಮಾಡುವ ಮೂಲಕ, ಅದನ್ನು ನಮ್ಮ ಮುಂದಿನ ತಲೆಮಾರಿ ನವರಿಗೂ ಉಳಿಸುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ.
ಲಭ್ಯವಿರುವ ಅಂಕಿ-ಅಂಶಗಳಂತೆ, ನಮ್ಮ ದೇಶದ ೧೩ ರಾಜ್ಯಗಳಲ್ಲಿನ ೭೪ ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿವೆ. ಇದು ಹೊಸದೇನೂ ಅಲ್ಲ. ೧೮೭೬, ೧೮೯೯, ೧೯೧೮, ೧೯೬೫, ೨೦೦೦ನೇ ಇಸವಿಗಳಲ್ಲಿ ಇಂಥ ಭಯಾನಕ ಬರಗಾಲಗಳನ್ನು ಕಂಡಿದ್ದೇವೆ. ಬರದ ಬೇಗೆಯಿಂದಾಗಿ ಜನರು ಮತ್ತು ಪ್ರಾಣಿ-ಪಕ್ಷಿಗಳಿಗೆ ನೀರು ಹಾಗೂ ಆಹಾರದ ಕೊರತೆ ಎದುರಾಗಿ ಬಹಳಷ್ಟು ಜೀವಹಾನಿಯಾಗಿದ್ದನ್ನು ದೇಶ ಕಂಡಿದೆ. ರಾಜಸ್ಥಾನ ರಾಜ್ಯವು ದೇಶದಲ್ಲಿ ಅತಿಹೆಚ್ಚು
ಬರಗಾಲದ ದಿನಗಳನ್ನು ಕಂಡಿದೆ. ಹಾಗೆಂದ ಮಾತ್ರಕ್ಕೆ ಮಿಕ್ಕ ರಾಜ್ಯಗಳು ಕ್ಷಾಮದ ಹೊಡೆತದಿಂದ ತಪ್ಪಿಸಿಕೊಂಡಿವೆ ಎಂದು ಅರ್ಥವಲ್ಲ.
ಕಳೆದ ಸಾಲಿನಲ್ಲಿ ಕರ್ನಾಟಕ ರಾಜ್ಯದ ೧೯೫ ತಾಲೂಕುಗಳು ಬರಗಾಲದ ಹೊಡೆತಕ್ಕೆ ಸಿಲುಕಿವೆ. ಇದರಿಂದಾಗಿ ಕೃಷಿ ಉತ್ಪನ್ನಗಳ ಉತ್ಪಾದನೆ/ಇಳುವರಿ ಬಹಳಷ್ಟು ಕುಸಿತ ಕಂಡಿದೆ. ನಿರೀಕ್ಷಿಸಿದಂತೆ ಬೆಳೆಗಳು ಕೈ ಸೇರದೆ ರೈತರು ಕಂಗಾಲಾಗಿದ್ದಾರೆ. ಆಹಾರ ಧಾನ್ಯಗಳ ಬೆಲೆಯು ಏರುಮುಖ ಕಾಣುತ್ತಿದೆ. ದನಕರುಗಳಿಗೆ ಮೇವು ಸಿಗದೆ ತತ್ವಾರವಾಗಿದೆ.
ಬಯಲುಸೀಮೆಯ ನೀರಿನ ಆಶ್ರಯತಾಣಗಳಾದ ಕೆರೆ, ನದಿ ಮತ್ತು ಬಾವಿಗಳು ಬರಗಾಲದ ಛಾಯೆಗೆ ಸಿಲುಕಿ ಬತ್ತಿವೆ. ಪರಿಣಾಮವಾಗಿ ಜನರು ಕೊಳವೆ ಬಾವಿ ಗಳ ಮೊರೆಹೋಗುತ್ತಿದ್ದಾರೆ. ಕೇವಲ ೧೫ರಿಂದ ೨೦ ಅಡಿಗಳಲ್ಲಿ ದೊರೆಯುತ್ತಿದ್ದ ಅಂತರ್ಜಲದ ಮಟ್ಟವು ೧೦೦೦ ಅಡಿಗಳಿಗೂ ಹೆಚ್ಚು ಆಳಕ್ಕೆ
ಇಳಿದಿರುವುದು ಆತಂಕಕಾರಿಯಾದ ವಿಷಯ. ಹೀಗೆ ಭೂಮಿಯ ಆಳದ ನೀರನ್ನು ಬಳಸಿದಲ್ಲಿ, ಅದರಲ್ಲಿನ ವಿವಿಧ ರಾಸಾಯನಿಕ ಅಂಶದಿಂದ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ. ಮೂಳೆಗಳ ಸವೆತ, ಕಿರಿಯ ಹರೆಯದಲ್ಲೇ ವಯಸ್ಸಾದವರಂತೆ ಕಾಣುವಿಕೆ ಇಂಥ ಹಲವಾರು ಸಮಸ್ಯೆಗಳಿಗೆ ಅದು ಕಾರಣವಾಗುತ್ತಿದೆ.
ಭಾರತವು ಕೃಷಿಪ್ರಧಾನ ದೇಶ. ಅದರಲ್ಲೂ ಹೆಚ್ಚು ಭೂಪ್ರದೇಶದವರು ಮಳೆಯನ್ನೇ ನಂಬಿ ಕೃಷಿ ಮಾಡುವುದು ನಮ್ಮಲ್ಲಿ ವಾಡಿಕೆ. ಒಂದೊಮ್ಮೆ ಮಳೆ ಬಾರದಿದ್ದರೆ ಬೆಳೆಯೂ ಬಾರದೆ ಬರಗಾಲದ ಸನ್ನಿವೇಶವನ್ನು ಎದುರಿಸುವುದು ಅನಿವಾರ್ಯವಾಗುತ್ತದೆ. ಬಯಲುಸೀಮೆಯ ಬಹುತೇಕ ಭಾಗವು ನೀರಾ ವರಿಗಾಗಿ ಕೃಷಿ ಕೆರೆಗಳನ್ನೇ ಅವಲಂಬಿಸಿದೆ. ಅಭಿವೃದ್ಧಿಯ ಹೆಸರಲ್ಲಿ ಅಥವಾ ಭೂಗಳ್ಳರ ಸ್ವಾರ್ಥ-ಲಾಲಸೆಯಿಂದಾಗಿ ಅವುಗಳಲ್ಲಿ ಕೆಲವು ಮಾಯ ವಾಗಿವೆ. ಇನ್ನು ಉಳಿದಿರುವ ಕೆರೆಗಳು ಮಳೆಯ ಕೊರತೆಯಿಂದಾಗಿ ಬತ್ತಿ ಹೋಗಿವೆ.
ಇದರಿಂದಾಗಿ ರೈತರು ತಮ್ಮ ಮಕ್ಕಳಂತೆ ಕಾಣುವ ದನಕರುಗಳಿಗೆ ಮೇವಿನ ಕೊರತೆಯನ್ನು ಎದುರಿಸುವಂತಾಗಿದೆ. ಪರಿಸ್ಥಿತಿ ಹೀಗೆಯೇ ಮುಂದು ವರಿದರೆ, ಅವುಗಳಿಗೆ ಮೇವನ್ನೂ ಒದಗಿಸಲಾಗದೆ ಕಸಾಯಿಖಾನೆಗೆ ಕಳುಹಿಸುವ ದಿನಗಳು ದೂರವಿಲ್ಲ. ಈ ಪರಿಸ್ಥಿತಿ ಬಯಲುಸೀಮೆಗೆ ಮಾತ್ರವೇ ಸೀಮಿತವಾಗಿಲ್ಲ. ದಕ್ಷಿಣ ಭಾರತದ ಬಹುತೇಕ ನದಿಗಳ ಉಗಮಸ್ಥಾನ ಎನಿಸಿರುವ ಸಹ್ಯಾದ್ರಿ ಪರ್ವತಶ್ರೇಣಿಯ ತಪ್ಪಲಿನಲ್ಲೂ ಈ ಸಮಸ್ಯೆ ಕಂಡುಬರುತ್ತಿದೆ. ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯ ಕಾರಣದಿಂದಾಗಿ ಇಲ್ಲಿಯೂ ಸಮಸ್ಯೆ ಹಿರಿದಾಗಿಯೇ ಇದೆ. ಅಲ್ಲಿನ ನದಿಗಳಲ್ಲಿ ನೀರಿಲ್ಲದೆ ಜನರು ಪರದಾಡಿರುವ ಸಾಕಷ್ಟು
ಉದಾಹರಣೆಗಳು ನಮ್ಮ ಕಣ್ಣಮುಂದಿವೆ.
ನದಿಗಳನ್ನೇ ನಂಬಿದ್ದ ಆ ಭಾಗದ ಸಾಕಷ್ಟು ತೀರ್ಥಕ್ಷೇತ್ರಗಳು ನೀರಿಗಾಗಿ ಟ್ಯಾಂಕರ್‌ಗಳ ಮೊರೆಹೋಗಿರುವ ನಿದರ್ಶನಗಳಿವೆ. ಇಂಥ ದುರ್ಭರ ಪರಿಸ್ಥಿತಿ ಯನ್ನು ಕಂಡ ಮೇಲಾದರೂ ನಾವು ಬುದ್ಧಿ ಕಲಿಯಬೇಕಾಗಿದೆ. ಇನ್ನು ಕೃಷಿಯನ್ನು ಬಿಟ್ಟು ಬದುಕಲಾರದ ರೈತರು, ಸಾಲ-ಸೋಲ ಮಾಡಿಯಾದರೂ ಕೊಳವೆ ಬಾವಿ ಕೊರೆಸಿ ಕೃಷಿಯನ್ನು ಮುಂದುವರಿಸುತ್ತಿದ್ದಾರೆ. ಹೀಗೆ ಕೊರೆಯಿಸಿದ ಹಲವು ಕೊಳವೆ ಬಾವಿಗಳಲ್ಲಿ ನಿರೀಕ್ಷೆಯಂತೆ ನೀರು ಸಿಗದೆ ಮತ್ತಷ್ಟು ತೊಂದರೆಗೆ ಸಿಲುಕಿದ್ದಾರೆ.
ಮತ್ತೆ ಕೆಲವಷ್ಟು ರೈತರು ಸಿಕ್ಕ ನೀರಿನಲ್ಲೇ ಕೃಷಿ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದಾರೆ. ಅವುಗಳಿಗೂ ವಿದ್ಯುತ್ ಅಭಾವದ ಬಿಸಿ ತಟ್ಟಿದೆ. ಹೀಗೆ ಹೇಳುತ್ತಾ ಹೋದರೆ, ಕೃಷಿ ಕ್ಷೇತ್ರವು ಸದಾ ಸಮಸ್ಯೆಗಳಲ್ಲೇ ನಲುಗುತ್ತಿದೆ. ಬೇಸಗೆ ಬಂತೆಂದರೆ ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಗುತ್ತದೆ. ಕೊಳವೆ ಬಾವಿ/ಪಂಪ್‌ಸೆಟ್‌ಗಳನ್ನೇ ನಂಬಿ ಕೃಷಿಕಾರ್ಯ ನಡೆಸುತ್ತಿರುವವರಿಗೆ ಇದರಿಂದ ಬಹಳಷ್ಟು ತೊಂದರೆಯಾಗುತ್ತದೆ. ಬೇಸಗೆಯಲ್ಲೇ ಬೆಳೆಗಳಿಗೆ ಹೆಚ್ಚಿನ ನೀರಿನ ಅಗತ್ಯವಿರುತ್ತದೆ; ಆದರೆ ಅಂಥ ಅನಿವಾರ್ಯ ಸಂದರ್ಭದಲ್ಲೇ ವಿದ್ಯುತ್ ಅಭಾವವೂ ತಲೆ ದೋರಿ ಬೆಳೆಗಳಿಗೆ ನೀರುಣಿಸಲಾಗುತ್ತಿಲ್ಲ.
ಹೀಗಾಗಿ ಅಪಾರ ಪ್ರಮಾಣದಲ್ಲಿ ಬೆಳೆನಷ್ಟ ಉಂಟಾಗುತ್ತಿದೆ. ಹೀಗೆ ನೀರಿನ ಕೊರತೆಯಿಂದ ಉದ್ಭವಿಸುವ ಸಮಸ್ಯೆಗಳ ವಿವಿಧ ಆಯಾಮವನ್ನು ಸರಕಾರ ಗಳು ಗಮನಿಸಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಮೂಲಕ ಹನಿ ನೀರಾವರಿ ಹಾಗೂ ತುಂತುರು ನೀರಾವರಿಯಂಥ ಯೋಜನೆಗಳಿಗೆ ಶೇ.೯೦ ರವರೆಗೆ ಸಹಾಯಧನ ನೀಡುತ್ತಿವೆ. ವಿದ್ಯುತ್ ಅಭಾವ ಎದುರಿಸುತ್ತಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಸೌರವಿದ್ಯುತ್ ಅಳವಡಿಸಲೂ ಸಹಾಯಧನ ಸಿಗುತ್ತಿದೆ. ಈ ಯೋಜ ನೆಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ನೀರಿನ ಸಂರಕ್ಷಣೆಯ ಜತೆಗೆ ಆದಾಯವನ್ನೂ ಹೆಚ್ಚಿಸಿಕೊಳ್ಳಬಹುದಾಗಿದೆ. ಕೃಷಿ ಜಮೀನು ಗಳಲ್ಲಿ ಕಾಲುವೆಗಳ ಮೂಲಕ ನೀರನ್ನು ಹರಿಸುವಾಗ, ಶೇ.೩೦ಕ್ಕೂ ಹೆಚ್ಚಿನ ಪ್ರಮಾಣದ ನೀರು ಕಾಲುವೆಗಳಲ್ಲಿ ಹಿಂಗುತ್ತದೆ.
ಇಂಥ ಅನಗತ್ಯ ಹಿಂಗುವಿಕೆಯನ್ನು ತಡೆಯಲು ತುಂತುರು ನೀರಾವರಿಯನ್ನು ಬಳಸಿ, ಬೆಳೆಗಳಿಗೆ ಅಗತ್ಯ ಪ್ರಮಾಣದ ನೀರನ್ನು ಸ್ಪ್ರಿಂಕ್ಲರ್‌ಗಳ ಮೂಲಕ ಉಣಿಸಲಾಗುತ್ತದೆ. ಕಡಿಮೆ ಪ್ರಮಾ ಣದ ನೀರಿನಲ್ಲಿ ಹೆಚ್ಚುವರಿ ಜಮೀನಿಗೆ ಹೀಗೆ ನೀರುಣಿಸುವ ಈ ಕ್ರಮವು ಹೆಚ್ಚು ಪ್ರದೇಶದಲ್ಲಿ ಬೆಳೆ ಬೆಳೆಯುವ ನಿಟ್ಟಿ ನಲ್ಲಿ ರೈತರಿಗೆ ಸಹಕಾರಿಯಾಗಿದೆ. ಅಷ್ಟು ಮಾತ್ರವಲ್ಲದೆ, ಜಮೀನಿನ ಉದ್ದಗಲಕ್ಕೂ ಓಡಾಡಿಕೊಂಡು ನೀರು ಹಾಯಿಸುವ ಕಾರ್ಯವನ್ನು ಇದು
ಸುಲಭ ಗೊಳಿಸುತ್ತದೆ.
ಇದರಿಂದಾಗಿ ನೀರು ಮತ್ತು ಸಮಯವನ್ನು ಉಳಿಸಬಹುದಾಗಿದೆ. ತೋಟಗಾರಿಕೆ ಬೆಳೆಗಳಿಗೆ ನೀರುಣಿಸಲು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿ ಕೊಂಡಲ್ಲಿ, ಅಲ್ಲಿ ಪೋಲಾಗುವ ಶೇ.೭೦ರಷ್ಟು ನೀರನ್ನು ಉಳಿಸಬಹುದಾಗಿದೆ. ಕಾಲುವೆಗಳಲ್ಲಿ ಹಿಂಗುವ ನೀರು ಮಾತ್ರವಲ್ಲದೆ, ಸಸ್ಯಗಳ ಬೇರುಗಳಿಲ್ಲದ
ಖಾಲಿ ಪ್ರದೇಶದಲ್ಲಿ ಹಿಂಗುವ ನೀರು ನಿರರ್ಥಕವಾಗುತ್ತದೆ. ಈ ವಿಧಾನದಲ್ಲಿ ನೀರನ್ನು ನೇರವಾಗಿ ಸಸ್ಯಗಳ ಬುಡದಲ್ಲಿ ಒಸರುವಂತೆ ಮಾಡುವು ದರಿಂದ, ಬೇರುಗಳ ಹತ್ತಿರ ಮಾತ್ರ ನೀರು ಜಿನುಗಿ ಸಸ್ಯಕ್ಕೆ ಅಗತ್ಯವಾದಷ್ಟು ನೀರನ್ನು ಒದಗಿಸುತ್ತದೆ.
ಇಲ್ಲಿ ಭೂಮಿಯಲ್ಲಿ ಅನಗತ್ಯವಾಗಿ ಹಿಂಗುವ ನೀರಿನ ಪ್ರಮಾಣ ಬಹಳಷ್ಟು ಕಡಿಮೆಯಾಗುತ್ತದೆ. ಇದರಿಂದಾಗಿ ಕಡಿಮೆ ನೀರಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಕಡಿಮೆ ಪ್ರಮಾಣದ ನೀರನ್ನು ಬಳಸಿ ಹೆಚ್ಚು ಬೆಳೆ ಬೆಳೆಯುವ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ತಮ್ಮ ಶ್ರಮವನ್ನು ಕಡಿಮೆ ಮಾಡಿಕೊಳ್ಳುವುದರ ಜತೆಗೆ ಆದಾಯವನ್ನೂ ವೃದ್ಧಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ಮುಂದಿನ ತಲೆಮಾರಿಗೂ
ನೀರನ್ನು ಉಳಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗಮನ ಹರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಲಿ.
(ಲೇಖಕರು ಶಿಕ್ಷಕರು)