Friday, 13th December 2024

ಪ್ರೋಟೀನ್‌: ದೇಹದ ಬೆಳವಣಿಗೆಗೆ ಅತ್ಯವಶ್ಯಕ

ಸ್ವಾಸ್ಥ್ಯ ಸಂಪದ

Yoganna55@gmail.com

ದೇಹದ ಎಲ್ಲ ಅಂಗಾಂಗಗಳು ಪ್ರೋಟೀನ್‌ನಿಂದ ರಚಿತವಾಗಿದ್ದು, ನೀರನ್ನು ಹೊರತುಪಡಿಸಿದಲ್ಲಿ ದೇಹದ ಬಹುಪಾಲು ತೂಕಕ್ಕೆ ಪ್ರೋಟೀನ್
ಕಾರಣ. ಜೀವಿತ ದೇಹದ ತೂಕದ ಆರನೇ ಒಂದು ಭಾಗ ಪ್ರೋಟೀನ್‌ನಿಂದ ಆಗಿದ್ದು, ಇದರಲ್ಲಿ ಮೂರನೇ ಒಂದು ಭಾಗದ ಪ್ರೋಟೀನ್ ಸ್ನಾಯು ಗಳಲ್ಲಿದೆ. ದೇಹದ ಎಲ್ಲಾ ಸ್ನಾಯುಗಳ ಬಹುಪಾಲು ಭಾಗ ಪ್ರೋಟೀನ್ ಭಾಗದಿಂದಾಗಿದೆ.

ಚರ್ಮ, ಮೂಳೆಗಳು ಇನ್ನಿತರ ಅಂಗಾಂಶಗಳು ಮತ್ತು ದೇಹದ್ರವಗಳಲ್ಲಿ ಪ್ರೋಟೀನ್ ಅಂಶವಿದೆ. ಪ್ರತಿಯೊಂದು ಜೀವಕೋಶಗಳ ಕೋಶಕೇಂದ್ರ ಮತ್ತು ಜೀವರಸಗಳು ಪ್ರೋಟೀನ್‌ಗಳಿಂದ ಆಗಿದ್ದು, ಜೀವಕೋಶಗಳ ರಚನೆ ಮತ್ತು ಕಾರ್ಯಗಳಿಗೆ ಪ್ರೋಟೀನ್ ಅತ್ಯವಶ್ಯಕ. ಪ್ರೋಟೀನ್‌ಗಳು ಸಹ ಕಾರ್ಬೋಹೈಡ್ರೇಟ್ಸ್ ಮತ್ತು ಕೊಬ್ಬುಗಳಂತೆ ಕಾರ್ಬನ್, ಹೈಡ್ರೋಜನ್ ಮತ್ತು ಆಮ್ಲಜನಕಗಳಿಂದ ರಚಿಸಲ್ಪಟ್ಟಿದ್ದು, ಇವುಗಳ ಜತೆಗೆ ಶೇ.೧೬ರಷ್ಟು ಸಸಾರಜನಕ (ನೈಟ್ರೋಜನ್) ಇದ್ದು, ಇದು ಪ್ರೋಟೀನ್‌ಗಳನ್ನು ಕಾರ್ಬೋಹೈಡ್ರೇಟ್ ಮತ್ತು ಕೊಬ್ಬುಗಳಿಂದ ಪ್ರತ್ಯೇಕಿಸುತ್ತದೆ.

ಕಾರ್ಬೋಹೈಡ್ರೇಟ್ ಮತ್ತು ಕೊಬ್ಬುಗಳಲ್ಲಿ ನೈಟ್ರೋಜನ್ ಇರುವುದಿಲ್ಲ. ಕೆಲವು ಪ್ರೋಟೀನ್‌ಗಳಲ್ಲಿ ಗಂಧಕ (ಸಲರ್), ರಂಜಕ(-ಸ್ಪರಸ್), ಕಬ್ಬಿಣ ಮತ್ತು ಕೋಬಾಲ್ ಗಳು ಜತೆಗೂಡಿರುತ್ತವೆ.

ಪ್ರೋಟೀನ್‌ಗಳ ರಚನೆ: ಪ್ರೋಟೀನ್‌ಗಳು ಅಮೈನಾಮ್ಲಗಳಿಂದ ರಚಿತವಾಗಿದ್ದು, ಅಮೈನಾಮ್ಲ ಗಳು ಒಂದಕ್ಕೊಂದು ಪೆಪ್ಟೈಡ್ ಬಾಂಡ್‌ನಿಂದ ಪರಸ್ಪರ ಬಂಧಿತವಾಗಿವೆ. ದೇಹ ಪ್ರೋಟೀನ್ನನ್ನು ಅಮೈನಾಮ್ಲಗಳ ಮೂಲಕ ಉಪಯೋಗಿಸಿಕೊಳ್ಳುತ್ತದೆ. ಸುಮಾರು ೨೨ ಅಮೈನಾಮ್ಲಗಳಿದ್ದು, ಇವೆಲ್ಲವೂ ದೇಹದ ಆರೋಗ್ಯಕ್ಕೆ ಅವಶ್ಯಕ. ಅಮೈನಾಮ್ಲಗಳಲ್ಲಿ ಅತ್ಯವಶ್ಯಕ ಅಮೈನಾಮ್ಲಗಳು (ಎಸೆನ್ಷಿಯಲ್ ಅಮೈನೋ ಆಸಿಡ್ಸ್) ಮತ್ತು ಅತ್ಯವಶ್ಯಕವಲ್ಲದ ಅಮೈನಾಮ್ಲಗಳು (ನಾನ್ ಎಸೆನ್ಷಿಯಲ್ ಅಮೈನೋ ಆಸಿಡ್ಸ್) ಎಂಬ ೨ ವಿಧಗಳಿವೆ. ೯ ಅತ್ಯಾವಶ್ಯಕ ಅಮೈನಾಮ್ಲಗಳಿದ್ದು (ಐಸೋಲ್ಯೂಸಿನ್, ಲ್ಯೂಸಿನ್, ಲೈಸಿನ್, ಮೆಥೋಯನಿನ್, ಫೀನೈಲ್ ಅಲನಿನ್, ತ್ರಿಯೋನಿನ್, ಟ್ರಿಪ್ಟೊ-ನ್, ಹಿಸ್ಟಿಡಿನ್, ವ್ಯಾಲಿನ್) ಇವನ್ನು ದೇಹ ತನ್ನೊಳಗೆ ತಯಾರಿಸಿಕೊಳ್ಳಲು ಸಾಧ್ಯವಿಲ್ಲವಾದುದರಿಂದ ಇವನ್ನು ಆಹಾರದ ಮೂಲಕವೇ ಒದಗಿಸಬೇಕು.

ಸೋಯಾಬಿನ್, ಮೊಟ್ಟೆ, ಕೋಳಿಮಾಂಸ, ಮೀನು, ಹಾಲು ಮತ್ತು ಡೈರಿ ಉತ್ಪನ್ನಗಳು, ಮಾಂಸ, ಗೋಧಿ ಇತ್ಯಾದಿಗಳಲ್ಲಿ ಅತ್ಯವಶ್ಯಕ ಅಮೈನಾಮ್ಲಗಳಿರುತ್ತವೆ. ಅವಶ್ಯಕವಲ್ಲದ ಅಮೈನಾಮ್ಲಗಳು (ಗ್ಲೈಸಿನ್, ಅಲನಿನ್, ಸೆರಿನ್, ಆಸ್ಪಾರ್ಟಿಕ್ ಆಮ್ಲ, ಗ್ಲುಟಾಮಿಕ್ ಆಮ್ಲ, ಸಿಸ್ಟೀನ್, ಸಿಸ್ಟೈನ್, ಪ್ರೋಲಿನ್, ಹೈಡ್ರಾಕ್ಸಿ ಪ್ರ್ರೋಲಿನ್, ಥೈರೋಸಿನ್) ಆಹಾರದಿಂದ ಲಭಿಸದಿದ್ದರೂ ಇವನ್ನು ದೇಹವೇ ಸೇವಿಸಿದ ಇನ್ನಿತರ ಪೋಷಕಾಂಶಗಳಿಂದ ತಯಾರಿಸಿಕೊಳ್ಳುತ್ತದೆ. ಹಾಗೆಂದು ಇವನ್ನು ದೀರ್ಘಕಾಲ ಸೇವಿಸದೇ ಇರಬಾರದು.

ದೀರ್ಘಕಾಲ ಇವುಗಳನ್ನು ಸೇವಿಸದಿದ್ದಲ್ಲಿ ಕೊರತೆಯಿಂದ ತೊಂದರೆಗಳುಂಟಾಗಬಹುದು. ಸಾಮಾನ್ಯವಾಗಿ ಪ್ರತಿಯೊಂದು ಪ್ರೋಟೀನ್ ಯುಕ್ತ ಆಹಾರ ಪದಾರ್ಥದಲ್ಲೂ ಅತ್ಯವಶ್ಯಕ ಮತ್ತು ಅತ್ಯವಶ್ಯಕವಲ್ಲದ ಅಮೈನಾಮ್ಲಗಳೆರಡೂ ಇದ್ದು, ಕೆಲವು ಪ್ರೋಟೀನ್‌ಯುಕ್ತ ಆಹಾರ ಪದಾರ್ಥಗಳಲ್ಲಿ ಅತ್ಯವಶ್ಯಕ ಅಮೈನಾಮ್ಲಗಳಿರುವುದಿಲ್ಲ.

ಪ್ರೋಟೀನ್‌ಗಳ ವಿಧಗಳು: ಪ್ರೋಟೀನ್‌ಗಳಲ್ಲಿ ಸಾಮಾನ್ಯ ಪ್ರೋಟೀನ್ ಮತ್ತು ಸಂಯುಕ್ತ ಪ್ರೋಟೀನ್ ಎಂಬ ೨ ಧಗಳಿವೆ. ಸಾಮಾನ್ಯ ಪ್ರೋಟೀನ್‌ಗಳು ಜಲವಿಚ್ಚೇದಿನೀಕರಣದಲ್ಲಿ ಅಮೈನಾಮ್ಲಗಳು ಮತ್ತು ಅಪರೂಪವಾಗಿ ಅಲ್ಪ ಪ್ರಮಾಣದ ಕಾರ್ಬೋಹೈಡ್ರೇಟ್ಸ್ ಸಂಯುಕ್ತ
ಗಳನ್ನು ನೀಡುತ್ತವೆ. ಉದಾ: ಅಲ್ಬ್ಯುಮಿನ್, ಗ್ಲಾಬ್ಯುಲಿನ್‌ಗಳು, ಗ್ಲ್ಯುಟಿಲಿನ್‌ಗಳು, ಆಲ್ಬ್ಯುಮಿನಾಯ್ಡ್‌ಗಳು, ಹಿಸ್ಟೋನ್‌ಗಳು ಮತ್ತು ಪ್ರೋಟಾಅಮೈನ್‌ ಗಳು. ಸಂಯುಕ್ತ ಪ್ರೋಟೀನ್ ಗಳು ಪ್ರೋಟೀನ್ ಜತೆಗೆ ಮತ್ತೊಂದು ವಿಭಿನ್ನ ರಾಸಾಯನಿಕ ಗುಂಪು ಜೋಡಣೆಯಾಗಿರುತ್ತದೆ.

ಉದಾ: ಹೀಮೋಗ್ಲಾಬ್ಯೂಲಿನ್, -ಸ್ಪೋ ಪ್ರೋಟೀನ್‌ಗಳು, ಗ್ಲೈಕೋ ಪ್ರೋಟೀನ್‌ಗಳು, ನ್ಯೂಕ್ಲಿಯೋ ಪ್ರೋಟೀನ್‌ಗಳು, ಲೈಪೋಪ್ರ್ರೋಟೀನ್‌ಗಳು ಇತ್ಯಾದಿ.

ಪ್ರೋಟೀನ್‌ಯುಕ್ತ ಆಹಾರ ಪದಾರ್ಥಗಳು: ಬಹುಪಾಲು ಎಲ್ಲಾ ಆಹಾರ ಪದಾರ್ಥಗಳಲ್ಲೂ ಪ್ರೋಟೀನ್ ಇರುತ್ತದೆಯಾದರೂ ಕೆಲವಲ್ಲಿ ಅತ್ಯ
ಽಕ ಪ್ರಮಾಣದಲ್ಲಿರುತ್ತದೆ. ಪ್ರೋಟೀನ್ ಆಹಾರ ಪದಾರ್ಥಗಳನ್ನು ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಆಹಾರ ಪದಾರ್ಥಗಳೆಂದು ವರ್ಗೀಕರಿಸಬಹು
ದಾಗಿದೆ. ಸೋಯಾಬಿನ್, ತೊಗರಿ, ಹಲಸಂದೆ, ಕಡ್ಲೆಕಾಳು, ಹೆಸರುಕಾಳು, ಉದ್ದಿನಕಾಳು, ಬಾದಾಮಿ, ಗೋಡಂಬಿ, ಕುಂಬಳಕಾಯಿ ಬೀಜಗಳು, ಪನೀರ್, ಬೀನ್ಸ್, ಕಾಳುಗಳು ಮತ್ತು ಎಲ್ಲಾ ಬೀಜಗಳು ಸಸ್ಯಜನ್ಯ ಪ್ರೋಟೀನ್‌ಯುಕ್ತ ಆಹಾರ ಪದಾರ್ಥಗಳಾಗಿವೆ.

ಹಾಲು, ಮೊಸರು, ಮಜ್ಜಿಗೆ, ಮೊಟ್ಟೆ, ಮಾಂಸಖಂಡ, ಕೋಳಿಮಾಂಸ, ಮೀನು, ಡೈರಿ ಆಹಾರ ಪದಾರ್ಥಗಳು, ಹಂದಿ ಮಾಂಸ ಇವು ಪ್ರಾಣಿಜನ್ಯ ಆಹಾರ ಪದಾರ್ಥಗಳು. ಕೋಳಿಮಾಂಸದಲ್ಲಿ ಅಧಿಕ ಪ್ರೋಟೀನ್ ಅಂಶವಿದೆ. ಇವುಗಳಲ್ಲಿ ಅತ್ಯವಶ್ಯಕ ಅಮೈನಾಮ್ಲಗಳು ಅಧಿಕ ಪ್ರಮಾಣದಲ್ಲಿದ್ದು, ಇವುಗಳನ್ನು ಕನಿಷ್ಠ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕ್ಕೆ ಪೂರಕ.

ಅವಶ್ಯಕ ಪ್ರೋಟೀನ್ ಪ್ರಮಾಣ: ಪ್ರತಿನಿತ್ಯ ಅವಶ್ಯಕವಿರುವ ಪ್ರೋಟೀನ್ ಪ್ರಮಾಣ ವಯಸ್ಸು, ದೇಹದ ಗಾತ್ರ, ಪರಿಸರ, ಲಿಂಗ, ಶರೀರದ ಚಯಾಪಚಯ ಕ್ರಿಯೆ ಮತ್ತು ಜತೆಗೂಡಿರುವ ಕಾಯಿಲೆಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ವಯಸ್ಕರಿಗೆ ೧ ಕೆ.ಜಿ ದೇಹದ ತೂಕಕ್ಕೆ ೦.೮೫ ಗ್ರಾಂ ಪ್ರೋಟೀನ್ ಅವಶ್ಯಕ. ಅಂದರೆ ೭೫ ಕೆ.ಜಿ ತೂಕವುಳ್ಳವರಿಗೆ ಪ್ರತಿನಿತ್ಯ ೬೦ ಗ್ರಾಂ ಪ್ರೋಟೀನ್ ಬೇಕಾಗಿರುತ್ತದೆ.

ಬೆಳೆಯುವ ಮಕ್ಕಳು, ಗರ್ಭಿಣಿಯರು, ಅತಿಯಾದ ದೈಹಿಕ ಶ್ರಮ ಮಾಡುವವರಿಗೆ ತುಸು ಹೆಚ್ಚು ಪ್ರೋಟೀನ್ ಅವಶ್ಯಕ. ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚು ಮಾಡುವ ಕಾಯಿಲೆಗಳಾದ ಜ್ವರ, ಥೈರಾಕ್ಸಿನ್ ಏರಿಕೆ ಕಾಯಿಲೆ, ಕ್ಯಾನ್ಸರ್, ಕ್ಷಯ ಮತ್ತು ಮೂತ್ರದಲ್ಲಿ ಪ್ರೋಟೀನ್ ಹೆಚ್ಚಾಗಿ ವಿಸರ್ಜನೆಯಾಗುವವರಿಗೆ ತುಸು ಹೆಚ್ಚಿನ ಪ್ರಮಾಣದ ಪ್ರೋಟೀನ್ ಅತ್ಯವಶ್ಯಕ. ಮೂತ್ರಜನಕಾಂಗದ ವಿಫಲತೆ ಮತ್ತು ಈಲಿಯ ವಿಫಲತೆ ಇರುವವರಿಗೆ ಪ್ರೋಟೀನ್ ಅನ್ನು ಕಡಿಮೆ ಪ್ರಮಾಣದಲ್ಲಿ ನೀಡಬೇಕು. ಇಲ್ಲದಿದ್ದಲ್ಲಿ ಕಾಯಿಲೆ ಉಲ್ಬಣಗೊಳ್ಳುತ್ತದೆ.

ಪ್ರೋಟೀನ್ ಜೀರ್ಣಿಕೆ: ಶೇ. ೭೫ರಷ್ಟು ಭಾರತೀಯರು ಮಿಶ್ರಿತ ಆಹಾರ ಪದ್ಧತಿಯನ್ನು ಪಾಲಿಸುತ್ತಿದ್ದು, ಮಾಂಸಾಹಾರಿಗಳಾಗಿದ್ದಾರೆ. ಶೇ. ೨೦ರಿಂದ ೩೯ರಷ್ಟು ಜನ ಸಸ್ಯಾಹಾರಿಗಳಾಗಿದ್ದಾರೆ. ಆಹಾರದಲ್ಲಿರುವ ಪ್ರೋಟೀನಿನ ಜೀರ್ಣಿಕೆ ಬಾಯಿಯಲ್ಲಿ ಜೊಲ್ಲುರಸದ ಜತೆ ಮಿಶ್ರಣವಾಗಿ ಅಗಿದು ಸಣ್ಣ
ಸಣ್ಣ ಚೂರುಗಳಾಗಿ ವಿಂಗಡಣೆಯಾಗಿ ಜಠರಕ್ಕೆ ಬಂದು ಜಠರದಲ್ಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಪ್ರೋಟೀಯೇಸ್ ಕಿಣ್ವಗಳ (ಪೆಪ್ಸಿನ್) ಜತೆ
ಮಿಶ್ರಣಗೊಂಡು ಸಣ್ಣ ಸಣ್ಣ ಸರಪಣಿಯ ಅಮೈನಾಮ್ಲಗಳಾಗಿ ವಿಭಜನೆ ಹೊಂದಿ ಅಲ್ಲಿಂದ ಸಣ್ಣ ಕರುಳಿಗೆ ರವಾನೆಯಾಗುತ್ತದೆ. ಸಣ್ಣ ಕರುಳಿನಲ್ಲಿ ಪ್ಯಾಂಕ್ರಿಯಾಸ್ ರಸದ ಪ್ರೋಟೀಯೇಸ್‌ಗಳು (ಟ್ರಿಪ್ಸಿನ್, ಕೈಮೋಟ್ರಿಪ್ಸಿನ್ ಮತ್ತು ಕಾರ್ಬಾಕ್ಸಿಪೆಪ್ಟಿಡೇಸ್) ಪ್ರೋಟೀನನ್ನು ಅಮೈನಾಮ್ಲಗಳಾಗಿ ವಿಭಜಿಸುತ್ತವೆ. ಇವು ಸಣ್ಣ ಕರುಳಿನಲ್ಲಿ ರಕ್ತಕ್ಕೆ ಹೀರಿಕೆಯಾಗುತ್ತವೆ. ದೇಹದಲ್ಲಿ ಪ್ರೋಟೀನ್‌ಗಳನ್ನು ಶೇಖರಿಸುವ ವ್ಯವಸ್ಥೆ ಇಲ್ಲ. ಅವಶ್ಯಕತೆಗಿಂತ ಹೆಚ್ಚಾಗಿ ಸೇವಿಸಿದ ಪ್ರೋಟೀನ್ ದೇಹದಲ್ಲಿ ಜಿಡ್ಡಾಗಿ ಪರಿವರ್ತನೆಯಾಗಿ ಶೇಖರಿಸಲ್ಪಡುತ್ತದೆ.

ಪ್ರೋಟೀನಿನ ಉಪಯೋಗಗಳು:
೧. ಪ್ರೋಟೀನ್‌ಗಳು ಜೀವಕೋಶ ಮತ್ತು ಅಂಗಾಂಶಗಳ ಅದರಲ್ಲೂ ಸ್ನಾಯುಗಳ ರಚನೆ ಮತ್ತು ಬೆಳವಣಿಗೆಗೆ ಅತ್ಯವಶ್ಯಕ.
೨. ಸವೆದ ಅಥವಾ ನಾಶವಾದ ಜೀವಕೋಶ/ಅಂಗಾಂಶಗಳ ಪುನರುತ್ಪತ್ತಿಗೆ ಪ್ರೋಟೀನ್ ಅತ್ಯವಶ್ಯಕ.
೩. ರಕ್ತದಲ್ಲಿರುವ ಸಂಯುಕ್ತ ಪ್ರೋಟೀನ್ ಹೀಮೋಗ್ಲಾಬಿನ್ ಆಮ್ಲಜನಕವನ್ನು ರವಾನಿಸುತ್ತದೆ.
೪. ಕಿಣ್ವಗಳ ತಯಾರಿಕೆಗೆ ಅತ್ಯವಶ್ಯಕ.
೫. ದೇಹದ ನಿರೋಧಕ ವ್ಯವಸ್ಥೆಯ ನಿರೋಧಕ ವಸ್ತುಗಳಾದ (ಆಂಟಿಬಾಡೀಸ್) ಗ್ಲಾಬ್ಯುಲಿನ್‌ಗಳು ಪ್ರೋಟೀನ್‌ನಿಂದಾಗಿವೆ.
೬. ರಕ್ತದ್ರವದಲ್ಲಿರುವ ಆಲ್ಬ್ಯೂಮಿನ್ ಪ್ರೋಟೀನ್ ರಕ್ತದಲ್ಲಿನ ದ್ರವಾಂಶ ಅಂಗಾಂಶದ ನಡುವಿನಾವರಣಕ್ಕೆ ಹೊರಹೋಗುವುದನ್ನು ನಿಯಂತ್ರಿಸುತ್ತದೆ.
೭. ಸ್ನಾಯುಗಳ ಸಂಕುಚಿತದ ತಂತುಗಳು ಪ್ರೋಟೀನ್‌ನಿಂದಾಗಿದ್ದು, ಸ್ನಾಯು ಸಂಕುಚಿತ ಮತ್ತು ಸಡಿಲವಾಗುವ ಕ್ರಿಯೆಗೆ ಪ್ರೋಟೀನ್ ಅವಶ್ಯಕ.
೮.ಜೀವಕೋಶದೊಳಗಿನ ಮೈಟೋಕಾಂಡ್ರಿಯಾಕ್ಕೆ ವಿವಿಧ ರಾಸಾಯನಿಕ ವಸ್ತುಗಳ ತಯಾರಿಕೆಗೆ ನ್ಯೂಕ್ಲಿಯಸ್‌ನಿಂದ ಬರುವ ಸಂದೇಶಗಳು ಪ್ರೋಟೀನ್ನಿಂದಾಗಿವೆ.
೯. ರಕ್ತದ ಪಿಎಚ್ ಮತ್ತು ದ್ರವಾಂಶಗಳ ಪ್ರಮಾಣ ವನ್ನು ನಿಯಂತ್ರಿಸುತ್ತವೆ.
೧೦. ಇನ್ನಿತರ ಆಹಾರಾಂಶಗಳನ್ನು ರವಾನಿಸಿ ಸಂಗ್ರಹಿಸುತ್ತವೆ.
೧೧. ದೇಹದ ಕಿಣ್ವಗಳ ಉತ್ಪತ್ತಿಗೆ ಅವಶ್ಯಕ.

೧೨. ಶಕ್ತಿಗಾಗಿ ಕಾರ್ಬೋಹೈಡ್ರೇಟ್‌ಗಳು ಮತ್ತು ಜಿಡ್ಡುಗಳು ಲಭ್ಯವಿಲ್ಲದಿದ್ದಾಗ ಪ್ರೋಟೀನ್‌ಗಳು ಶಕ್ತಿಗಾಗಿ ಉಪಯೋಗಿಸಲ್ಪಟ್ಟು ದೇಹ ಸವಕಲಾಗುತ್ತದೆ.

ಪ್ರೋಟೀನ್ ಪ್ರಮಾಣ ನಿರ್ಧರಿಸುವಿಕೆ: ತೋಳಿನ ಸ್ನಾಯುವಿನ ಸುತ್ತಳತೆ, ಶಕ್ತಿಹೀನ ಸ್ನಾಯುಗಳು ಮತ್ತು ರಕ್ತದಲ್ಲಿ ಆಲ್ಬ್ಯೂಮಿನ್ ಪ್ರೋಟೀನಿನ ಅವ್ಯವಸ್ಥೆಗಳು: ಆಹಾರದಲ್ಲಿ ಪ್ರೋಟೀನ್ ಕೊರತೆ, ಜೀರ್ಣವಾಗದಿರುವಿಕೆ, ರಕ್ತದಲ್ಲಿ ಪ್ರೋಟೀನ್‌ಗಳ ಕೊರತೆ, ಅನಾವಶ್ಯಕವಾಗಿ ಅಸಹಜ ಪ್ರೋಟೀನ್‌ಗಳ ಉತ್ಪತ್ತಿ, ಪ್ರೋಟೀನ್ ಮೂತ್ರದಲ್ಲಿ ವಿಸರ್ಜನೆ ಯಾಗುವಿಕೆ ಇವು ಸಂಭವಿಸಬಹುದಾದ ಅವ್ಯವಸ್ಥೆಗಳು.

ಪ್ರೋಟೀನ್ ಕೊರತೆ: ಆಹಾರದಲ್ಲಿ ಪ್ರೋಟೀನ್ ಕೊರತೆಯಾದಲ್ಲಿ ಅದರಲ್ಲೂ ಮಕ್ಕಳಲ್ಲಿ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಕೈ ಕಾಲು, ಮುಖ ಊದಿಕೊಳ್ಳುತ್ತವೆ, ಕೂದಲು ಕೆಂಚಗಾಗುತ್ತದೆ. ತೂಕ ನಷ್ಟವಾಗಿ ದೇಹ ಸವಕಲಾಗುತ್ತದೆ. ರೋಗ ನಿರೋಧಕ ಶಕ್ತಿ ಕುಗ್ಗಿ ಹಲವಾರು ಸೋಂಕು ರೋಗ ಗಳಿಗೆ ಈಡಾಗುತ್ತಾರೆ. ರಕ್ತಹೀನತೆ ಮತ್ತು ಜೀರ್ಣಾಂಗದ ಅವ್ಯವಸ್ಥೆಗಳು ಕಾಣಿಸಿಕೊಳ್ಳುತ್ತವೆ. ದೀರ್ಘಕಾಲ ಮುಂದುವರಿದಲ್ಲಿ ಈಲಿಯ ತೊಂದರೆಗಳು ಉಂಟಾಗುತ್ತವೆ.

ರಕ್ತಸ್ರಾವ ಉಂಟಾಗಬಹುದು. ರಕ್ತದಲ್ಲಿ ಒಟ್ಟಾರೆ ಪ್ರೋಟೀನ್‌ಗಳ ಪ್ರಮಾಣ ೬-೮ಗ್ರಾಂ/ಡಿ.ಎಲ್ ಗಳಾಗಿದ್ದು, ಇವುಗಳಲ್ಲಿ ಆಲ್ಬ್ಯೂಮಿನ್ ಪ್ರಮಾಣ
(ಸಹಜ ೩-೫ ಗ್ರಾಂ) ಮತ್ತು ಗ್ಲ್ಯಾಬ್ಯೂಲಿನ್ ಮತ್ತು -ಬ್ರಿನೋಜ಼ಿನ್ ಪ್ರಮಾಣ (ಸಹಜ ೩-೪ ಗ್ರಾಂ) ಕೊರತೆ ಇದ್ದಲ್ಲಿ ಇವುಗಳ ಪ್ರಮಾಣ ಕುಂದುತ್ತದೆ. ಆಹಾರದಲ್ಲಿ ಪ್ರೋಟೀನ್‌ಗಳ ಪ್ರಮಾಣವನ್ನು ಹೆಚ್ಚಿಸುವುದರಿಂದ ಕೊರತೆಯನ್ನು ನೀಗಿಸಲಾಗುತ್ತದೆ.

ಪ್ರೋಟೀನ್ ಅಜೀರ್ಣತೆ: ಪ್ರೋಟೀನ್‌ಗಳು ಕಿಣ್ವಗಳ ಕೊರತೆಯಿಂದಾಗಿ ಜೀರ್ಣವಾಗದೆ ತೊಂದರೆಗಳುಂಟಾಗುತ್ತವೆ. ಕರುಳಿನಲ್ಲಿ ಅತೀವ ಅನಿಲಗಳು ಉತ್ಪತ್ತಿಯಾಗುವಿಕೆ, ಉದರದ ಉಬ್ಬರ, ಉದರಬೇನೆ, ತೇಗು ಮತ್ತು ಬೇಽಗಳು ಉಂಟಾಗಬಹುದು. ಆಹಾರದಲ್ಲಿ ಅಲರ್ಜಿ ಉಂಟು ಮಾಡುವ ಪ್ರೋಟೀನ್‌ಗಳಿದ್ದಲ್ಲಿ ಚರ್ಮಗಂಧೆಗಳು ಇತ್ಯಾದಿ ಅಲರ್ಜಿ ತೊಂದರೆಗಳು ಉಂಟಾಗಬಹುದು.

ಫೀನೈಲ್ ಕೀಟೋನ್ಯೂರಿಯಾ: ಇದೊಂದು ವಂಶವಾಹಿ ಕಾಯಿಲೆಯಾಗಿದ್ದು, ವಂಶವಾಹಿ ನ್ಯೂನತೆ ಇರುವ ಮಕ್ಕಳಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಫೀನೈಲ್ ಅಲನೈನ್ ಅಮೈ ನಾಮ್ಲಗಳನ್ನು ದೇಹ ಉಪಯೋಗಿಸಿಕೊಳ್ಳುವ ಕೊರತೆಯಿಂದಾಗಿ ಇದು ಉಂಟಾಗುತ್ತದೆ. ರಕ್ತದಲ್ಲಿ ಇದರ ಪ್ರಮಾಣ ಹೆಚ್ಚಾಗಿ ಮೂತ್ರದಲ್ಲಿ ವಿಸರ್ಜನೆಯಾಗುತ್ತದೆ. ಮಕ್ಕಳಲ್ಲಿ ಮಾನಸಿಕ ಅವ್ಯವಸ್ಥೆಗಳು, ಅತಿ ಬಿಳಿಯಾದ ಚರ್ಮ, ಕೂದಲು, ಪದೇಪದೆ ರೋಗಕ್ಕೀಡಾಗುವಿಕೆ, ಮಿದುಳಿನ ತೊಂದರೆ ಮತ್ತು ಬೆಳವಣಿಗೆಯ ಅವ್ಯವಸ್ಥೆಗಳುಂಟಾಗುತ್ತವೆ. ಸಾವು ಸಂಭವಿಸಬಹುದು. ಇದಕ್ಕೆ ಸೂಕ್ತ ಚಿಕಿತ್ಸೆ ಇಲ್ಲ.

ಮೂತ್ರದಲ್ಲಿ ಆಲ್ಬ್ಯೂಮಿನ್ ವಿಸರ್ಜನೆ: ಮೂತ್ರದಲ್ಲಿ ಸಾಮಾನ್ಯವಾಗಿ ಪ್ರೋಟೀನ್‌ಗಳು ವಿಸರ್ಜನೆಯಾಗುವುದಿಲ್ಲ. ಮೂತ್ರಜನಕಾಂಗಗಳ
ತೊಂದರೆ ಇರುವವರಲ್ಲಿ ಮೂತ್ರದಲ್ಲಿ ಪ್ರೋಟೀನ್ ಗಳು ಹೊರಹೋಗುತ್ತವೆ.

ಪ್ಯಾರಾ ಪ್ರೋಟೀನೀಮಿಯ: ರಕ್ತದಲ್ಲಿ ಪ್ಲಾಸ್ಮಾ ಜೀವಕೋಶಗಳಿಂದ ಅತಿಯಾದ ಇಮ್ಯುನೋ ಗ್ಲ್ಯಾಬ್ಯೂಲಿನ್‌ಗಳು ಅಸಹಜವಾಗಿ ಉಂಟಾಗಿ ಮೂತ್ರಜನಕಾಂಗಗಳನ್ನು ತೊಂದರೆಗೀಡುಮಾಡುತ್ತವೆ. ಕೆಲವರಲ್ಲಿ ಇದು ಕ್ಯಾನ್ಸರ್ ಆಗಿಯೂ ಪರಿವರ್ತನೆಯಾಗಬಹುದು. ರಕ್ತದಲ್ಲಿ ಮತ್ತು ಮೂತ್ರದಲ್ಲಿ ಇವು ಹೊರಹೋಗುವುದನ್ನು ಗುರುತಿಸಿ ಕಾಯಿಲೆ ಯನ್ನು ದೃಢೀಕರಿಸಿಕೊಳ್ಳಲಾಗುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ.

ದೇಹದಲ್ಲಿನ ಪ್ರೋಟೀನ್ ಚಯಾಪಚಯ ಕ್ರಿಯೆಯ ಅವ್ಯವಸ್ಥೆಗಳಿಂದ ಆಲ್ಝೀಮರನ ಕಾಯಿಲೆ, ಹಂಟಿಂಗ್‌ಟನ್ನನ ಕಾಯಿಲೆ ಮತ್ತು ಹಲವಾರು ಬಗೆಯ ನರಮಂಡಲಗಳ ಕಾಯಿಲೆಗಳು ಉತ್ಪತ್ತಿಯಾಗುತ್ತವೆ. ಪ್ರೋಟೀನ್‌ಗಳು ದೇಹಕ್ಕೆ ಅತ್ಯವಶ್ಯಕವಾದ ಪೌಷ್ಟಿಕಾಂಶಗಳಾಗಿದ್ದು, ಪ್ರತಿನಿತ್ಯ ಸಸ್ಯ ಮತ್ತು
ಪ್ರಾಣಿಜನ್ಯ ಪ್ರೋಟೀನ್‌ಗಳೆರಡನ್ನೂ ಅವಶ್ಯಕ ಪ್ರಮಾಣದಲ್ಲಿ ಸೇವಿಸುವುದರಿಂದ ಪ್ರೋಟೀನ್ ಅವ್ಯವಸ್ಥೆಗಳಿಂದ ಪಾರಾಗಬಹುದು.