Saturday, 14th December 2024

ಪಿಎಸ್‌ಐ ಅಕ್ರಮ: ವ್ಯವಸ್ಥೆ ಬದಲಾಗಬೇಕಿದೆ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಕೇಳಿ ಬರುತ್ತಿರುವ ಬಹುದೊಡ್ಡ ಮಾತೆಂದರೆ ಪಿಎಸ್‌ಐ ನೇಮಕದಲ್ಲಿ ಹಗರಣ ನಡೆದಿದೆ ಎನ್ನು ವುದು. ಒಂದು ಹುದ್ದೆಗೆ 70 ರಿಂದ 85 ಲಕ್ಷದವರೆಗೆ ಫಿಕ್ಸ್ ಆಗಿರುವುದು ತನಿಖೆಯ ವೇಳೆ ಹೊರಬರುತ್ತಿದೆ. ಈ ಅಕ್ರಮ ಹೊರ ಬರು ತ್ತಿದ್ದಂತೆ, ಇಡೀ ನೇಮಕ ಪ್ರಕ್ರಿಯೆಯನ್ನೇ ರದ್ದುಗೊಳಿಸಿ, ಮರುಪರೀಕ್ಷೆಗೆ ಆದೇಶವನ್ನು ಹೊರಡಿಸಿದೆ.

ಆದರೀಗ ಬಹುತೇಕರಲ್ಲಿರುವ ಪ್ರಶ್ನೆಯೆಂದರೆ, ಮರು ಪರೀಕ್ಷೆ ವೇಳೆ ಅಕ್ರಮ ನಡೆಯು ವುದಿಲ್ಲ ಎನ್ನುವುದಕ್ಕೆ ಸಾಕ್ಷಿಯೇನು ಎನ್ನುವುದಾ ಗಿದೆ. ಹೌದು, ಪಿಎಸ್‌ಐ ನೇಮಕ ದಲ್ಲಿನ ಭ್ರಷ್ಟಾಚಾರ ಪ್ರಕರಣ ಹೊರಬಂದಿರುವ ಕಾರಣಕ್ಕೆ, ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪರೀಕ್ಷೆ ಯನ್ನು ರದ್ದುಪಡಿಸಿ ಮರುಪರೀಕ್ಷೆ ನಡೆಸುವ ಮಹತ್ವದ ತೀರ್ಮಾನ ಸರಕಾರ ಕೈಗೊಂಡಿದೆ. ಈ ನಿರ್ಣಯವನ್ನು ಕೆಲವರು ಸ್ವಾಗತಿಸಿ ದ್ದರೆ, ಪ್ರಾಮಾಣಿಕವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳು ವಿರೋಧಿಸಿದ್ದಾರೆ.

ವಿರೋಧಿಸಿರುವವರಲ್ಲಿರುವ ಎರಡು ಪ್ರಶ್ನೆಗಳೆಂದರೆ, ಒಂದು ಕೆಲವರು ಮಾಡಿದ ಅಕ್ರಮದಿಂದ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಏನು ಮಾಡ ಬೇಕು? ಈ ಬಾರಿ ಪಾಸಾಗಿರುವ ಅಭ್ಯರ್ಥಿಗಳು ಮತ್ತೊಮ್ಮೆ ಬರೆದಾಗ ಪಾಸಾಗದಿದ್ದರೆ ಅವರೇನು ಮಾಡ ಬೇಕು ಎನ್ನುವುದಾಗಿದೆ. ಅಭ್ಯರ್ಥಿಗಳ ಈ ಪ್ರಶ್ನೆಯಲ್ಲಿ ತಪ್ಪಿಲ್ಲ. ಕಷ್ಟಪಟ್ಟು ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಕೆಲಸ ಸಿಗುವ ಖುಷಿಯಲ್ಲಿರುವ ಸಮಯ ದಲ್ಲಿ, ಮತ್ತೊಮ್ಮೆ ಪರೀಕ್ಷೆ ಬರೆದು ಪಾಸಾಗಿ ಎಂದರೆ ಸಹಜವಾಗಿಯೇ ವಿರೋಧ ವ್ಯಕ್ತಪಡಿಸುತ್ತಾರೆ.

ಅಷ್ಟಕ್ಕೂ ವಿಧ್ಯಾರ್ಥಿಗಳು ಕೇಳುತ್ತಿರುವ ಪ್ರಶ್ನೆ ಏನೆಂದರೆ, ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಕಾರಣಕ್ಕೆ ಮರುಪರೀಕ್ಷೆ ಮಾಡುವುದಾಗಿ ಸರಕಾರ ಹೇಳುತ್ತಿದೆ. ಆದರೆ ಪರೀಕ್ಷೆಯಲ್ಲಿ ಪಾರದರ್ಶಕವಾಗಿ ನಡೆಸುವುದು ಯಾವ ಕರ್ತವ್ಯ? ಸರಕಾರ ಅದನ್ನು ಸರಿಯಾಗಿ ಮಾಡದೇ, ಈಗ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎನ್ನುವ ಮಾತನ್ನು ಹೇಳುತ್ತಿದ್ದಾರೆ. ಅದು ನಿಜವೂ ಸಹ. ಆದರೆ ಇಲ್ಲಿರುವ ಎರಡನೇ ಪ್ರಶ್ನೆ ಎಂದರೆ, ಒಟ್ಟಾರೆ ವ್ಯವಸ್ಥೆಯ ಬಗ್ಗೆ. ಪಿಎಸ್‌ಐ ನೇಮಕಕ್ಕೆ ಸಂಬಂಧಿಸಿದಂತೆ ನಡೆಯುವ ಪರೀಕ್ಷೆಯಲ್ಲಿ ಭ್ರಷ್ಟಾಚಾರ ಬಹಿರಂಗವಾಗಿದ್ದಕ್ಕೆ, ಇದನ್ನು ಮರುಪರೀಕ್ಷೆ ಮಾಡುವ, ತಪ್ಪಿತಸ್ಥರನ್ನು ಜೈಲು ಕಳುಹಿಸುವ, ತನಿಖೆ ಮಾಡುವ ಕೆಲಸವನ್ನು
ಸರಕಾರ ಮಾಡುತ್ತಿದೆ. ಆದರೆ ಈ ರೀತಿಯ ಅಕ್ರಮ ಬಹಿರಂಗವಾಗಿರುವುದು ಇದೇ ಮೊದಲಲ್ಲವಲ್ಲ.

ಈ ಹಿಂದೆ ಕೆಪಿಎಸ್‌ಇಯಿಂದ ನಡೆದಿದ್ದ ಹಲವು ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪಗಳು ಕೇಳಿಬಂದಿತ್ತು. 1998
ಹಾಗೂ 2011ರ ಕೆಎಎಸ್ ನೇಮಕಾತಿಯಲ್ಲಿ ನಡೆದ ಹಗರಣಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿರುವುದನ್ನು ನಾವೆಲ್ಲ ನೋಡಿದ್ದೇವೆ. ಇದನ್ನು ಗಮನಿಸಿದಾಗ, ಈ ರೀತಿಯ ಅಕ್ರಮ ಹಾಗೂ ಅವ್ಯವಹಾರ ನಡೆದಿರುವುದು ಇದೇ ಮೊದಲಲ್ಲ. ಇದೇ ಕೊನೆಯೂ ಅಲ್ಲ ಎನ್ನುವುದು ಸ್ಪಷ್ಟ.

ಸರಕಾರ ಮರುಪರೀಕ್ಷೆಗೆ ಮಾಡಿರುವ ಆದೇಶಕ್ಕೆ ಅಭ್ಯರ್ಥಿಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಇದೇ ಕಾರಣಕ್ಕೆ. ಈ ಹಿಂದೆಯೂ ಹಗರಣಗಳು ನಡೆದಿದ್ದವು. ಆ ಸಮಯದಲ್ಲಿಯೂ ಸರಕಾರಗಳು, ಕಠಿಣ ಕ್ರಮ, ಪಾರದರ್ಶಕ ಪರೀಕ್ಷೆಗೆ ಕ್ರಮ ಸೇರಿದಂತೆ ಹಲವು ಭರವಸೆಯನ್ನು ನೀಡಿದ್ದವು. ಆ ಎಲ್ಲ ಭರವಸೆಗಳೂ, ಅಕ್ರಮ ಬಯಲಾದ ಕೆಲ ತಿಂಗಳಿಗೆ ಸೀಮಿತವಾಗಿತ್ತು. ಅದಾದ ಬಳಿಕ, ‘ಅದೇ ರಾಗ, ಅದೇ ಹಾಡು’ ಎನ್ನುವ ಪರಿಸ್ಥಿತಿಯಾಗಿರುವುದು ಈ ಹಿಂದೆ ನೋಡಿದ್ದೇವೆ.

ಆದ್ದರಿಂದ ಪಿಎಸ್‌ಐ ನೇಮಕದಲ್ಲಿ ನಡೆದಿರುವ ಅಕ್ರಮವನ್ನು ಮಾತ್ರ ಸರಿಪಡಿಸುವ ಲೆಕ್ಕಾಚಾರದಲ್ಲಿ ಯೋಚಿಸದೇ, ನೇಮಕ ವಿಷಯದಲ್ಲಿ ಕೆಪಿಎಸ್‌ಇಯ ಇಡೀ ವ್ಯವಸ್ಥೆಯನ್ನೇ ಬದಲಾಯಿಸುವ ದಿಕ್ಕಿನಲ್ಲಿ ಯೋಚಿಸಬೇಕಿದೆ. ಒಂದು ವೇಳೆ ಪಿಎಸ್‌ಐ ಹಗರಣ ಬೆಳಕಿಗೆ ಬಾರದೇ ಹೋಗಿದ್ದರೆ, 70, 80 ಲಕ್ಷ ಲಂಚ ಕೊಟ್ಟ ವ್ಯಕ್ತಿ, ಈ ವೇಳೆಗಾಗಲೇ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿ ಕೆಲಸದಲ್ಲಿರುತ್ತಿದ್ದ. ಇಷ್ಟು ದೊಡ್ಡ ಪ್ರಮಾಣದಲ್ಲಿ ಲಂಚ ಕೊಟ್ಟ ವ್ಯಕ್ತಿ, ಅಂತಹ ಆಯಕಟ್ಟಿನ ಸ್ಥಾನದಲ್ಲಿ ಕೂತಾಗ ಆತನಿಂದ ಏನು ನಿರೀಕ್ಷೆ ಮಾಡಲು ಸಾಧ್ಯ. ತಾನೇ ಅಕ್ರಮ ವಾಗಿ ಅಧಿಕಾರದ ಗದ್ದುಗೆ ಏರಿದರೆ, ಸಹಜವಾಗಿಯೇ ಆ ವ್ಯಕ್ತಿ ಕೊಟ್ಟ ಕಾಸನ್ನು ಬಡ್ಡಿ ಸಮೇತ ಹಿಂಪಡೆಯಲು ಲಂಚ ಪಡೆಯು ತ್ತಾನೆ. ಈಗಿರುವ ಭ್ರಷ್ಟ ವ್ಯವಸ್ಥೆಗೆ ಮತ್ತೊಂದು ಸೇರ್ಪಡೆಯಾಗುತ್ತದೆ.

ಏಕೆಂದರೆ, ಲಂಚಕೊಟ್ಟು ಕುರ್ಚಿಗೆ ಬರುವ ವ್ಯಕ್ತಿಯಿಂದ ‘ಪಾರದರ್ಶಕ, ಸತ್ಯದ ಪರವಾದ ಆಡಳಿತ ನಿರೀಕ್ಷಿಸಲು ಹೇಗೆ ಸಾಧ್ಯ?’ ಎನ್ನುವು ದನ್ನು ಯೋಚಿಸಬೇಕಿದೆ. ಇನ್ನು ಪಿಎಸ್‌ಐ ನೇಮಕದಲ್ಲಿನ ಅಕ್ರಮ ಬಯಲಿಗೆ ಬರುತ್ತಿದ್ದಂತೆ, ಕಲಬುರಗಿಯ ದಿವ್ಯಾ ಹಾಗರಗಿ ಅವರನ್ನು ‘ಕಿಂಗ್ ಪಿನ್’ ಎನ್ನುವ ಪಟ್ಟಕಟ್ಟಿ ಆಕೆಯ ಮೇಲೆ ಎಲ್ಲ ಆರೋಪಗಳನ್ನು ಹೋರಿಸಿ, ‘ಎ೧’ ಆರೋಪಿಯನ್ನಾಗಿಸಿದ್ದಾರೆ. ಆದರೆ ಸೂಕ್ಷ್ಮವಾಗಿ ಯೋಚಿಸಿದಾಗ, ಆಕೆಯೊಬ್ಬಳಿಂದ ಇಂತಹ ಬೃಹತ್ ಭ್ರಷ್ಟಾಚಾರ ನಡೆಸಲು ಸಾಧ್ಯವೇ ಎನ್ನುವುದನ್ನು ಯೋಚಿಸಬೇಕು. ಕಲಬುರಗಿ ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕಿಯೊಬ್ಬರು, ಜ್ಞಾನ ಜ್ಯೋತಿ ಶಾಲೆ ಮಾಲಕಿಯಾಗಿರುವ ಆಕೆಯಿಂದ ಇಡೀ ಪೊಲೀಸ್ ವ್ಯವಸ್ಥೆಯನ್ನು ಭೇದಿಸಿ, ಇಂತಹ ಅಕ್ರಮ ನಡೆಸಲು, ಅದರಲ್ಲಿಯೂ ಒಎಂಆರ್ ಶೀಟ್‌ನಲ್ಲಿಯೇ ಬದಲಾವಣೆ ಮಾಡಲು ಸಾಧ್ಯವೇ ಇಲ್ಲ. ಹಾಗೇ ನೋಡಿ ದರೆ, ಈ ಅಕ್ರಮದಲ್ಲಿ ದಿವ್ಯಾ ಹಾಗರಗಿ ಎನ್ನುವ ಆರೋಪಿಯ ಮೇಲೆ ಈ ಅಕ್ರಮದಲ್ಲಿ ಹತ್ತಾರು ಬಲಿಷ್ಠರಿದ್ದಾರೆ. ಈ ವಿಷಯದಲ್ಲಿ ಕೇವಲ ರಾಜಕಾರಣಿಗಳು ಮಾತ್ರವಲ್ಲ, ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಈ ಹಿಂದೆ ಇದೇ ರೀತಿಯ ಹಲವು ಅಕ್ರಮಗಳು ನಡೆದಿದ್ದವು. ಅದು ಕೆಎಎಸ್ ಅಧಿಕಾರಿಗಳ ನೇಮಕದಲ್ಲಿಯೂ ಕೇಳಿ ಬಂದು, ಸುಪ್ರೀಂ ಕೋರ್ಟ್ ತನಕ ಪ್ರಕರಣ ಹೋಗಿತ್ತು. ಇದೇ ರೀತಿ ಹಲವು ಬಾರಿ ಪೇದೆಗಳ ನೇಮಕಾತಿ, ಶಿಕ್ಷಕರ ನೇಮಕಾತಿ, ತೀರಾ ಇತ್ತೀಚಿಗೆ ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲಿಯೂ ಅಕ್ರಮದ ವಾಸನೆ ಬಂದಿತ್ತು. ಆದ್ದರಿಂದ ಅಕ್ರಮ ಎನ್ನುವುದು ಸರಕಾರಿ ನೇಮಕಾತಿಯ ಪ್ರತಿ ಹಂತದಲ್ಲಿಯೂ ಇದೆ. ಆದ್ದರಿಂದ ಕೇವಲ ಒಂದು ಪ್ರಕರಣವನ್ನು ಇಟ್ಟುಕೊಂಡು, ಅದನ್ನು ಬೇಧಿಸಿದ ಮಾತ್ರಕ್ಕೆ, ಎಲ್ಲವೂ ಸರಿ ಹೋಯಿತು ಎಂದುಕೊಳ್ಳಬಾರದು.

ಬದಲಿಗೆ, ಇಡೀ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಸರಕಾರಗಳು ಯೋಚಿಸಬೇಕಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಬಹುತೇಕರು
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ದಿವ್ಯಾ ಹಾಗರಗಿ ಬಿಜೆಪಿ ನಾಯಕಿಯಾಗಿರುವುರಿಂದ, ಈ ಪ್ರಕರಣವನ್ನು ಬಿಜೆಪಿ ತಲೆಗೆ ಕಟ್ಟಲು ಪ್ರಯತ್ನಿಸಿದರು. ಆದರೆ ಇದಾದ ಕೆಲವೇ ದಿನದಲ್ಲಿ ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರನ್ನು ಸಾಲು ಸಾಲಾಗಿ ಬಂಧಿಸಲು ಶುರು ಮಾಡುತ್ತಿದ್ದಂತೆ, ರಾಜಕೀಯ ದುರುದ್ದೇಶ ಎನ್ನುವ ಹಣೆಪಟ್ಟಿಯನ್ನು ಕಾಂಗ್ರೆಸ್ ನಾಯಕರು ಕಟ್ಟಿದರು. ಆದರೆ ನಿಜವಾಗಿ ಹೇಳ ಬೇಕೆಂದರೆ, ಈ ಅಕ್ರಮ ಕೇವಲ ಆಡಳಿತ ಪಕ್ಷಕ್ಕೆ ಅಥವಾ ಪ್ರತಿಪಕ್ಷಕ್ಕೆ ಸೀಮಿತವಾಗಿಲ್ಲ.

ಆಯಾ ಸಮಯದಲ್ಲಿ ಆಯಾ ನಾಯಕರು ತಮಗೆ ಬೇಕಾದ ರೀತಿಯಲ್ಲಿ ವ್ಯವಸ್ಥೆಯನ್ನು ‘ಹೊಂದಾಣಿಕೆ’ ಮಾಡಿಕೊಂಡಿರುತ್ತಾರೆ ಎನ್ನು ವುದು ಕಟುಸತ್ಯ. ಇಂತಹ ವಿಷಯದಲ್ಲಿ ರಾಜಕೀಯ ನಾಯಕರು ಮಾತನಾಡುವುದು, ಪ್ರಾಮಾಣಿಕ ಅಭ್ಯರ್ಥಿಗಳ ಪರವಾಗಿ, ಸತ್ಯದ ಪರವಾಗಿರುತ್ತದೆ ಎನ್ನುವುದಕ್ಕಿಂತ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬೇಕಾದ ರೀತಿಯಲ್ಲಿರುತ್ತದೆ ಎನ್ನುವುದನ್ನು ಮರೆಯ ಬಾರದು.

ಹಾಗೆಂದ ಮಾತ್ರಕ್ಕೆ ಈ ವಿಷಯದಲ್ಲಿ ಆಡಳಿತ ಪಕ್ಷದ ಯಾವುದೇ ವೈಫಲ್ಯವಿಲ್ಲ. ವ್ಯವಸ್ಥೆಯ ವಿಫಲತೆ ಎನ್ನಲು ಸಾಧ್ಯವಿಲ್ಲ. ಸರಕಾರ ವಾಗಿ, ಇಂತಹ ವಿಷಯದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ಸರಕಾರ ಪ್ರಮಾಣಿಕವಾಗಿಯೇ ನೇಮಕವನ್ನು ಮಾಡ ಬೇಕು ಎನ್ನುವ ಗಟ್ಟಿ ಮನಸು ಮಾಡಿದರೆ, ಇಂತಹ ಭ್ರಷ್ಟರನ್ನು ಪರೀಕ್ಷಾ ವ್ಯವಸ್ಥೆಯಿಂದ ದೂರವಿಡುವುದು ದೊಡ್ಡ ಕೆಲಸವಲ್ಲ. ಆದರೆ ಗೃಹ ಇಲಾಖೆ, ಈ ವಿಷಯದಲ್ಲಿ ‘ಗಟ್ಟಿ ನಿಲುವನ್ನು’ ಮೊದಲಿನಿಂದಲೂ ತಗೆದುಕೊಂಡಿಲ್ಲ ಎನ್ನುವುದು ಸ್ಪಷ್ಟ.

ಸರಕಾರ ಹಾಗೂ ಇಲಾಖೆಯೇ ಗಟ್ಟಿಯಾಗಿ ನಿಲ್ಲದಿದ್ದಾಗ, ಭ್ರಷ್ಟರಿಗೆ ಹಾಸಿಗೆ ಹಾಕಿಕೊಟ್ಟ ಹಾಗಾಯಿತು ಎಂದರೆ ತಪ್ಪಾಗುವುದಿಲ್ಲ.
ಸಮಾಜವನ್ನು ಸರಿಪಡಿಸಬೇಕಿರುವ ಪೊಲೀಸರ ನೇಮಕದಲ್ಲಿಯೇ ಈ ರೀತಿಯ ಹಗರಣ ಬಯಲಾಗುವ ಮೂಲಕ, ‘ಪಾರದರ್ಶಕ, ಸತ್ಯದ ಪರವಾದ’ ಆಡಳಿತವನ್ನು ಹುಡುಕಬೇಕಾಗಿದೆ ಎನ್ನುವ ಸ್ಥಿತಿ ಮತ್ತೊಮ್ಮೆ ಸಾಬೀತಾಗಿದೆ. ಇದು ಕೇವಲ ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಗಳ ಪ್ರಶ್ನೆಯಲ್ಲ. ಆಡಳಿತ-ಪ್ರತಿಪಕ್ಷಗಳಲ್ಲಿ ಯಾರೇ ಇದ್ದರೂ, ಈ ವ್ಯವಸ್ಥೆಯಂತೂ ಬದಲಾಗಿಲ್ಲ. ಆದ್ದರಿಂದ ರಾಜಕೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡುವ ಬದಲು, ಇಡೀ ವ್ಯವಸ್ಥೆಯನ್ನು ಬದಲಾಯಿಸುವ
ಕೆಲಸವಾಗಬೇಕಿದೆ.

ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು, ಸಾರ್ವಜನಿಕರು ಸೇರಿದಂತೆ ರಾಜ್ಯದ ಪ್ರತಿ ಪ್ರಜೆಯೂ ಯೋಚಿಸಿದರೆ ಮಾತ್ರ ಸರಿ ಹೋಗಲು ಸಾಧ್ಯವಿದೆ. ಇಲ್ಲದಿದ್ದರೆ, ಆ ಸಮಯಕ್ಕೆ ಭ್ರಷ್ಟಾಚಾರದ ಆರೋಪ, ಪ್ರತ್ಯಾರೋಪ ಅದಾದ ಬಳಿಕ ರಾಜಕೀಯ ಕೆಸರೆರಚಾಟ, ಕೆಲ ದಿನ ಗಳ ಬಳಿಕ ಮತ್ತೊಂದು ವಿಷಯವನ್ನು ಕೈಗೆತ್ತುಕೊಳ್ಳುತ್ತಿದ್ದಂತೆ, ಪುನಃ ಅದೇ ರಾಗ, ಅದೇ ಹಾಡಾಗಲಿದೆಯಷ್ಟೆ.