Friday, 13th December 2024

ಪಿಯುಸಿ ಶಿಕ್ಷಣ ಉದ್ಯಮವಾಗುತ್ತಿರುವುದೇಕೆ ?

ವಿಚಾರ ಮಂಟಪ

ರಾಕೇಶ್ ಕುಮಾರ‍್ ಕಮ್ಮಜೆ

ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರಲ್ಲಿ ಪಿಯುಸಿ ತರಗತಿಗಳಿಗೆ ಮಿತಿಮೀರಿ ಶುಲ್ಕ ಪಡೆಯುತ್ತಿದ್ದಾರೆಂದು ಆರೋಪಿಸಿ, ಅದರ ಮಾನ್ಯತೆಯ ರದ್ದಿಗೆ ಸರಕಾರ ಅಡಿಯಿಡಲಿದೆ ಎಂಬ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆಗಳಾಗಿದ್ದವು. ಇಂಥ ಚರ್ಚೆಯ ವೇಳೆ, ಖಾಸಗಿ ಪಿಯು ಶಿಕ್ಷಣ ಸಂಸ್ಥೆಗಳು ಸಹಜವಾಗಿಯೇ ಸಾಮಾಜಿಕ ನಿಂದನೆಗೆ ಗುರಿಯಾಗುತ್ತವೆ. ಆದರಿಂದು ವೃತ್ತಿಪರ ಕೋರ್ಸ್‌ಗಿಂತಲೂ ಪಿಯು ದುಬಾರಿಯಾಗುತ್ತಿರುವುದೇಕೆ ಎಂಬುದನ್ನು ಅನೇಕರು ಗಮನಿಸುವುದಿಲ್ಲ, ಹೆಚ್ಚಿನವರಿಗೆ ಅದರ ಅರಿವೂ ಇಲ್ಲ!

ಇಂದು ರಾಜ್ಯದ ಸರಕಾರಿ ಪದವಿಪೂರ್ವ ವಿದ್ಯಾಲಯಗಳಲ್ಲಿನ ವಿಜ್ಞಾನ ತರಗತಿಗಳ ಶುಲ್ಕ ೩,೦೦೦ ರು. ಒಳಗಿದೆ (ಹುಡುಗಿಯರಿಗೆ ೧,೫೦೦ ರು). ಹೀಗಿರು ವಾಗ ಖಾಸಗಿ ಸಂಸ್ಥೆಗಳಲ್ಲಿ ಐದಾರು ಲಕ್ಷ ಆಗುವುದಾದರೂ ಹೇಗೆ? ಇದು ಊರವರ ಮಂಡೆ ಬಡಿದು ಹಣ ಮಾಡುವ ದಂಧೆಯಲ್ಲವೇ? ಎಂದು ಅನೇಕರು ಪ್ರಶ್ನಿಸುವುದಿದೆ. ಆದರೆ ವಾಸ್ತವವೇ ಬೇರೆ! ಈಚೀಚೆಗೆ ವಿಜ್ಞಾನ ತರಗತಿಗಳಿಗೆ ಮಕ್ಕಳನ್ನು ಸೇರಿಸುವ ಹೆತ್ತವರು, ತಮ್ಮ ಮಕ್ಕಳು ಎಂಜಿನಿಯರಿಂಗ್ ಅಥವಾ ಮೆಡಿಕಲ್ ಓದಬೇಕೆಂದು ಹಂಬಲಿಸುತ್ತಿದ್ದಾರೆ. ಮಕ್ಕಳ ಚಿತ್ತಸ್ಥಿತಿ/ ಸಾಮರ್ಥ್ಯ ಅದಕ್ಕೆ ತಕ್ಕಂತಿದೆಯೇ ಎಂಬುದನ್ನೂ ಲಕ್ಷಿಸದೆ ‘ಹೇಗಾದರೂ ಮಾಡಿ’ ಅವರನ್ನು ಡಾಕ್ಟರ್/ಎಂಜಿನಿಯರ್ ಆಗಿಸುವ ಯತ್ನಗಳಾಗುತ್ತಿವೆ. ಹಾಗೆಂದು ಮಕ್ಕಳನ್ನು ಓದಿಸುವ, ಅಂಥ ಕೋರ್ಸ್‌ಗಳಿಗೆ ತಯಾರು ಮಾಡುವ ವ್ಯವಧಾನ/ಬಿಡುವು ಹೆತ್ತವರಲ್ಲಿಲ್ಲ. ಅನೇಕ ಪೋಷಕರಿಗೆ ಅದು ಸಾಧ್ಯವೂ ಇಲ್ಲ.

ಹೀಗಾಗಿ ತಮ್ಮ ಮಕ್ಕಳನ್ನು ದಾಖಲಿಸಿಕೊಳ್ಳುವ ಶಿಕ್ಷಣ ಸಂಸ್ಥೆಗಳೇ, ಅವರನ್ನು ಓದಿಸುವ, ಬುದ್ಧಿವಂತರನ್ನಾಗಿಸುವ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು
ಮಾಡುವ, ಅದಕ್ಕಾಗಿ ಹತ್ತಾರು ಬಾರಿ ಮಾದರಿ ಪರೀಕ್ಷೆ ನಡೆಸುವ ಹೊಣೆಯನ್ನೂ ಹೊಣೆಯನ್ನೂ ಹೊರಬೇಕೆಂದು ಬಯಸುತ್ತಿದ್ದಾರೆ ಮತ್ತು ಅಂಥ ಜವಾಬ್ದಾರಿ ಹೊರುವ ಸಂಸ್ಥೆಗಳಿಗೇ ಮಕ್ಕಳನ್ನು ಸೇರಿಸುತ್ತಿದ್ದಾರೆ. ಪರಿಣಾಮ, ಜೆಇಇ, ನೀಟ್, ಸಿಇಟಿಗಳಂಥ ಪರೀಕ್ಷೆಗಳಲ್ಲಿ ಅತ್ಯುತ್ತಮ ರ‍್ಯಾಂಕ್ ಗಳಿಸುತ್ತಿರುವ ಸಂಸ್ಥೆ ಗಳಿಗಷ್ಟೇ ವಿದ್ಯಾರ್ಥಿಗಳು ಅಡಿಯಿಡುತ್ತಿದ್ದಾರೆ.

ಮೇಲಿನವು ಹೆತ್ತವರ ಮನೋಭಾವಕ್ಕೆ ಸಂಬಂಧಿಸಿದ ಸಂಗತಿಗಳಾಗಿದ್ದರೆ, ಶಿಕ್ಷಣಸಂಸ್ಥೆಗಳ ಕಷ್ಟ-ಸುಖ ಬೇರೆಯೇ ಇವೆ. ಜೆಇಇ, ನೀಟ್‌ನಂಥ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕೆಂದರೆ ಅದಕ್ಕೆ ನುರಿತ ಉಪನ್ಯಾಸಕರೇ ಬೇಕು. ವಿದ್ಯಾರ್ಥಿಗಳೆಲ್ಲರೂ ಹೇಗೆ ನೂರಕ್ಕೆ ನೂರರಷ್ಟು ಅಂಕ ಗಳಿಸಲು ಅಶಕ್ತರೋ, ಹಾಗೆಯೇ ಪಿಯು ಉಪನ್ಯಾಸಕರೆಲ್ಲರೂ ಇಂಥ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವಷ್ಟು ಶಕ್ತರಲ್ಲ. ಆದ್ದರಿಂದ ಸಾಕಷ್ಟು ನುರಿತ, ಬುದ್ಧಿವಂತ ಉಪನ್ಯಾಸಕರೇ ಬೇಕಾಗುತ್ತಾರೆ. ಇಂಥವರು ಯಥೇಚ್ಛವಾಗಿಲ್ಲದ ಕಾರಣ, ಈಗ ಇರುವವರಿಗೆ ಸಾಕಷ್ಟು ಬೇಡಿಕೆಯಿದೆ. ಇಂಥ ಉಪನ್ಯಾಸಕರಿಗೆ ೨-೩ ಲಕ್ಷ ರು.ವರೆಗೆ ಮಾಸಿಕ ವೇತನ ನೀಡಬೇಕಾಗುತ್ತದೆ.

ಇದಲ್ಲದೆ, ಆಗಾಗ ನಡೆಸುವ ತರಗತಿ ಪರೀಕ್ಷೆಗಳಿಗೆ ಪ್ರಶ್ನೆಪತ್ರಿಕೆ ರೂಪಿಸಿದ್ದಕ್ಕೆ, ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ, ನೋಟ್ಸ್ ರಚಿಸಿಕೊಟ್ಟಿದ್ದಕ್ಕೆ ಪ್ರತ್ಯೇಕ ಸಂಭಾವನೆ ನೀಡಬೇಕು. ಇಂಥ ಉಪನ್ಯಾಸಕರನ್ನು ಸಂಸ್ಥೆಯಲ್ಲಿಟ್ಟುಕೊಳ್ಳುವುದು ಆನೆ ಸಾಕುವುದಕ್ಕಿಂತಲೂ ಕಷ್ಟ! ಇನ್ನು, ೧೦ನೇ ತರಗತಿಯಲ್ಲಿ ಸಾಮಾನ್ಯ ಅಂಕ ಗಳಿಸಿದ ವಿದ್ಯಾರ್ಥಿಯನ್ನೂ ಡಾಕ್ಟರ್/ಎಂಜಿನಿಯರ್ ಮಾಡಬೇಕಾದ ಹೊಣೆಯ ನೆರವೇರಿಕೆಗೆಂದು, ಅಂಥವರಿಗೆ ತರಗತಿ ಯಾಚೆಗೂ, ಹಾಸ್ಟೆಲ್‌ನಲ್ಲೂ ಕೋಚಿಂಗ್ ಮತ್ತು ಸಂದೇಹ ಪರಿಹಾರದ ತರಗತಿಗಳನ್ನೆಲ್ಲ ನಡೆಸಬೇಕಾಗುತ್ತದೆ. ಇದಕ್ಕೆ ತರಗತಿಯಲ್ಲಿ ಬೋಽಸುವವರಲ್ಲದೆ ಮತ್ತಷ್ಟು ಉಪನ್ಯಾಸಕರು ಬೇಕಾಗುತ್ತಾರೆ. ಇವರದ್ದೂ ಸಾಮಾನ್ಯ ವೇತನವಲ್ಲ.

ಇನ್ನೂ ಗಂಭೀರ ಸಂಗತಿಯೆಂದರೆ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯಲ್ಲಿ ನಿಪುಣರಾದ ಕೆಲವು ಉಪನ್ಯಾಸಕರು, ಯಾವ ಶಿಕ್ಷಣ ಸಂಸ್ಥೆಗೂ ಸೇರಿಕೊಳ್ಳುವುದಿಲ್ಲ. ಒಂದೆರಡು ದಿನ ಒಂದೆಡೆ, ಮತ್ತೊಂದೆರಡು ದಿನ ಇನ್ನೊಂದೆಡೆ, ಮತ್ತೆರಡು ದಿನ ಬೇರೆಲ್ಲೋ, ಭಾನುವಾರದಂದು ಮತ್ತೊಂದು ರಾಜ್ಯಕ್ಕೆ ಹೋಗಿ ಅವರು ಬೋಧಿಸುತ್ತಾರೆ! ತಮ್ಮ ಸಂಸ್ಥೆಗೆ ಬಂದು ಬೋಧಿಸಿದ್ದಕ್ಕೆ ಇಂಥವರಿಗೆ ಆಡಳಿತ ಮಂಡಳಿಯು ದಿನವೊಂದಕ್ಕೆ ಸುಮಾರು ೧೦-೧೫ ಸಾವಿರ ರು. ನೀಡಬೇಕಾಗು ತ್ತದೆ.ಇವರ ಪಾಠಗಳೇನೋ ಅದ್ಭುತವಾಗಿರುತ್ತವೆ, ಆದರೆ ಇವರು ಯಾವ ಸಂಸ್ಥೆಯಲ್ಲೂ ಸೇರಿಕೊಳ್ಳದೆ ಎಲ್ಲೆಡೆಯೂ ‘ಅತಿಥಿ’ಯಾಗಿಯೇ ಇರುವುದರಿಂದ ಮತ್ತು ಬೋಧನೆಯ ನಂತರ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಅಲಭ್ಯರಾಗುವುದರಿಂದ, ನಂತರದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಆಯಾ ಪಠ್ಯದ ಹೆಚ್ಚುವರಿ ಮಾರ್ಗ ದರ್ಶನಕ್ಕೆ ಮತ್ತಾರನ್ನೋ ನೇಮಿಸಬೇಕಾಗುತ್ತದೆ, ಅವರಿಗೂ ವೇತನ ನೀಡಬೇಕಾಗುತ್ತದೆ.

ಈ ಮಧ್ಯೆ ಹೆತ್ತವರು, ಶಿಕ್ಷಣ ಸಂಸ್ಥೆಯಲ್ಲಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ, ಸ್ಮಾರ್ಟ್‌ಬೋರ್ಡ್, ಉತ್ತಮ ಕ್ಯಾಂಟೀನ್, ಪಂಚತಾರಾ ಹೋಟೆಲ್‌ನಂಥ ಹಾಸ್ಟೆಲ್ ಇರಬೇಕೆಂದೂ ಬಯಸುತ್ತಿದ್ದಾರೆ. ಇನ್ನು ಗುರುತಿನ ಚೀಟಿಯಿಂದ ಮೊದಲ್ಗೊಂಡು ಸಮವಸ್ತ್ರದವರೆಗೆ ಪ್ರತಿಷ್ಠೆ ಕಾಯ್ದುಕೊಳ್ಳದಿದ್ದರೆ ಹೆತ್ತವರು ಅಂಥ ಸಂಸ್ಥೆಯನ್ನು ನಿರ್ಲಕ್ಷಿಸುತ್ತಾರೆ. ಆಡಿಯೋ ವಿಷುವಲ್ ಕೋಣೆ, ಒಳಾಂಗಣ ಕ್ರೀಡಾಂಗಣ, ಆಕರ್ಷಕ ಕಟ್ಟಡಗಳೂ ದಾಖಲಾತಿಗೆ ಮಾನದಂಡವಾಗುತ್ತಿರುವು ದರಿಂದ, ಹೆಚ್ಚಿನ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಸಾಲದ ಸುಳಿಯಲ್ಲಿ ಸಿಲುಕುವಂತಾಗುತ್ತಿದೆ.

ಹೀಗಾದಾಗ ಸಂಸ್ಥೆಗಳು ಅಧಿಕ ಶುಲ್ಕ ಪಡೆಯದೆ ಇನ್ನೇನಾಗುತ್ತದೆ ಹೇಳಿ? ಹಾಗಂತ ಅವರು ಐದಾರು ಲಕ್ಷಕ್ಕಿಂತಲೂ ಹೆಚ್ಚು ಶುಲ್ಕ ವಿಧಿಸುತ್ತಿರುವುದು ಸಮರ್ಥನೀಯವಲ್ಲ. ಆದರೆ ಹಾಗೆ ಶುಲ್ಕ ವಿಧಿಸಬಹುದಾದ ಅವಕಾಶ ಮತ್ತು ಅನಿವಾರ್ಯವನ್ನೂಧಿ ನಾವೇ ಸೃಷ್ಟಿಸಿದ್ದೇವೆ ಎಂಬುದನ್ನು ಮರೆಯಬಾರದು.
ಹಾಗೆಂದು, ಅತ್ಯಧಿಕ ವೇತನ ಪಡೆಯುತ್ತಿರುವ ಉಪನ್ಯಾಸಕರನ್ನೂ ಆಕ್ಷೇಪಿಸಲಾಗದು. ಐಐಟಿ ವಿದ್ಯಾರ್ಥಿಯೊಬ್ಬ ಕೋಟಿಗೆ ಸನಿಹದಲ್ಲಿ, ರಾಜ್ಯ ಮಟ್ಟದ ಅತ್ಯುತ್ತಮ ಕಾಲೇಜಿನಿಂದ ಹೊರಬರುವ ವಿದ್ಯಾರ್ಥಿ ೨೦-೩೦ ಲಕ್ಷದ ಶ್ರೇಣಿಯಲ್ಲಿ ಸಂಪಾದಿಸುತ್ತಾನೆಂದರೆ ಅವರನ್ನು ಆ ಮಟ್ಟಿಗೆ ತಯಾರು ಮಾಡಿದ ಉಪನ್ಯಾಸಕ ಮಾತ್ರ ಊರಿಡೀ ಸಾಲಮಾಡಿ ಕೊಂಡು ತಿರುಗಾಡುವ ಪರಿಸ್ಥಿತಿಯಲ್ಲಿರಬೇಕೆಂದು ಬಯಸುವುದು ಸರಿಯಲ್ಲ.

ಉಪನ್ಯಾಸಕ ವೃತ್ತಿಗೆ ಜಾಣರು ಅಡಿಯಿಡುವಲ್ಲಿ ಇಂಥ ವೇತನವೇ ಪ್ರಮುಖ ಕಾರಣ; ಹಾಗಾಗಿ ಸಮರ್ಥರು ಬೇಕೆಂದರೆ ಅವರಿಗೆ ನೀಡುವ ವೇತನವೂ
ಚೆನ್ನಾಗಿರಬೇಕಾಗುತ್ತದೆ. ಇಲ್ಲವಾದಲ್ಲಿ ಪಿಯು ಶಿಕ್ಷಣಕ್ಷೇತ್ರ ಸೊರಗಿಹೋದೀತು. ಹಾಗಂತ ದುಃಖಿಸಬೇಕಿಲ್ಲ, ಸಮಸ್ಯೆಗೆ ಪರಿಹಾರ ನಮ್ಮ ಕೈಯಲ್ಲೇ ಇದೆ. ಮೊದಲಿಗೆ, ಮೆಡಿಕಲ್/ಎಂಜಿನಿಯರಿಂಗ್ ಸೀಟುಗಳನ್ನು ಸಹಜವಾಗಿ ಪಡೆಯಬಲ್ಲ ಬುದ್ಧಿಮತ್ತೆ ನಮ್ಮ ಮಕ್ಕಳಲ್ಲಿದೆಯಾ ಎಂದು ಗುರುತಿಸಬೇಕು. ಹಾಗೆಂದು ಅಂಥ ಬುದ್ಧಿಮತ್ತೆಯಿಲ್ಲದವ ಶತದಡ್ಡ ಎಂದರ್ಥವಲ್ಲ; ಮತ್ತೊಂದು ರಂಗದಲ್ಲಿ ಅಮೋಘವಾದುದನ್ನು ಸಾಧಿಸುವ ಜ್ಞಾನ ಮತ್ತು ಸಾಮರ್ಥ್ಯ ಆತನಲ್ಲಿದ್ದಿರಬಹುದು. ಹಾಗಾಗಿ ಮಕ್ಕಳಲ್ಲಿ ಯಾವ ಕ್ಷೇತ್ರದೆಡೆಗೆ ಆಸಕ್ತಿಯಿದೆ, ಅಲ್ಲಿರುವ ಅವಕಾಶ/ ಸಾಧ್ಯತೆಗಳೇನು ಎಂಬುದನ್ನರಿತು ಪೋಷಕರು ಹೆಜ್ಜೆಯಿಡಬೇಕಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಮೆಡಿಕಲ್/ಎಂಜಿನಿಯರಿಂಗ್ ಹೊರತಾಗಿಯೂ ಬದುಕಿದೆ ಎಂಬುದು ಹೆತ್ತವರಿಗೆ ಅರ್ಥವಾಗಬೇಕು. ಎಲ್ಲರೂ ಒಂದೆರಡು ಕ್ಷೇತ್ರಗಳಿಗೇ ಮೀಸಲಾಗುತ್ತಾ ಹೋದರೆ, ಮುಂದೆ ಇದು ನಾನಾ ಕ್ಷೇತ್ರಗಳ ನಡುವಿನ ಅಸಮಾನತೆಗೆ ಕಾರಣವಾಗಿ ಅಗೋಚರ ಸಮಸ್ಯೆಗೆ ಮೂಲವಾಗಬಹುದು. ಕಲಾವಿದ ರೊಬ್ಬರ ಗಾಯನ, ಕೊಳಲು-ತಬಲಾ ವಾದನ ಕೇಳುವಾಗ ತಲೆಯಾಡಿಸುವವರು ತಮ್ಮ ಮಕ್ಕಳು ಅಂಥ ಕ್ಷೇತ್ರಗಳೆಡೆಗೆ ವ್ಯಾಮೋಹ ಬೆಳೆಸಿಕೊಳ್ಳದಂತೆ, ಹವ್ಯಾಸ/ಅಭಿರುಚಿಗಳಿಗೆ ಸಮಯ ಕೊಡದಂತೆ, ಸಿಸಿ ಕ್ಯಾಮರಾದಂತೆ ವರ್ತಿಸುವುದನ್ನು ಕಂಡಾಗ ವ್ಯಥೆಯಾಗುತ್ತದೆ.

ರಾಜ್ಯದಲ್ಲಿ ಸಂಸ್ಕೃತಿ-ಸಂಸ್ಕಾರಗಳ ಸಹಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರುವ ಸಂಸ್ಥೆಗಳಿವೆ. ಅಂಥವನ್ನು ಗುರುತಿಸಿ ಮಕ್ಕಳನ್ನು ಅಲ್ಲಿಗೆ ಸೇರಿಸುವುದು ಉತ್ತಮ. ಅಷ್ಟಕ್ಕೂ, ಮಕ್ಕಳು ಸುಖಾಕಾಂಕ್ಷಿಯಾಗಿರ ಬಾರದ ವಯಸ್ಸು ಮತ್ತು ಸಂದರ್ಭದಲ್ಲಿ ಅವರನ್ನು
ಐಷಾರಾಮಿ ಹಾಸ್ಟೆಲ್‌ನಲ್ಲಿಟ್ಟು ಓದಿಸುವಂಥ ಮನಸ್ಥಿತಿ ನಮಗೇಕೆ ಬೇಕು? ಇದು ಮಕ್ಕಳನ್ನು ನಾವೇ ಕೈಯಾರೆ ಹಾಳುಗೆಡಹುವ ಲಕ್ಷಣವಲ್ಲವೇ? ಸರಳವಾದ ಊಟ, ಸಾಮಾನ್ಯ ಕೊಠಡಿ, ಉತ್ತಮ ಉಪನ್ಯಾಸಕರಿರುವ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸಿದರೆ ಹಾಸ್ಟೆಲ್‌ನ ವಾರ್ಷಿಕ ವೆಚ್ಚವೂ ಸೇರಿದಂತೆ ೧-೨ ಲಕ್ಷದೊಳಗೆ ಮೆಡಿಕಲ್/ಎಂಜಿನಿಯರಿಂಗ್‌ಗೆ ಅರ್ಹ ಮಕ್ಕಳನ್ನು ಸಜ್ಜುಗೊಳಿಸುವುದಕ್ಕೆ ಈಗಲೂ ಸಾಧ್ಯವಿದೆ.

ಮಕ್ಕಳಿಗೆ ನಿಜಾಸಕ್ತಿಯಿದ್ದರೆ, ಮನೆಯಿಂದಲೇ ಕಾಲೇಜಿಗೆ ಓಡಾಡುವಂತಿದ್ದರೆ ೫೦-೭೫ ಸಾವಿರದೊಳಗೇ ಅವರಿಗೆ ಕೋಚಿಂಗ್ ಸಹಿತ ಪಿಯು ಶಿಕ್ಷಣ ಒದಗಿಸ ಬಹುದು. ಮಕ್ಕಳು ಮೂಲವಿಜ್ಞಾನ ಕ್ಷೇತ್ರದಲ್ಲೇ ಮುಂದುವರಿಯುತ್ತಾರೆಂದರೆ, ಸನಿಹದ ಸರಕಾರಿ ಕಾಲೇಜಿನಲ್ಲೇ ಆ ಸಾಧನೆ ಸಾಧ್ಯವಿದೆ. ನಿಜ, ಕೆಲವು ಶಿಕ್ಷಣ ಸಂಸ್ಥೆಗಳು ಬಾಚುವುದನ್ನೇ ಗುರಿಮಾಡಿಕೊಂಡು ದಂಧೆಗಿಳಿದಿವೆ. ಇಂಥವನ್ನು ಬೆಳೆಸಿದ್ದು ನಾವೇ. ನಮಗೆ ಶಿಕ್ಷಣದ ಗುಣಮಟ್ಟವಷ್ಟೇ ಮುಖ್ಯವೇ ವಿನಾ, ಭರ್ಜರಿ ಕಟ್ಟಡ-ವೈಭೋಗಗಳಲ್ಲ ಎಂದು ಪೋಷಕರು ನಿಶ್ಚಯಿಸಿ ಇಂಥ ಸಂಸ್ಥೆಗಳಿಗೆ ಬೆನ್ನುಹಾಕಿದರೆ, ಅವುಗಳ ಅಬ್ಬರ-ಆಟಾಟೋಪ-ಸ್ಪರ್ಧೆ ಕೊನೆಗೊಂಡು ಶುಲ್ಕವೂ ಮಿತಿಯೊಳಗೆ ಬಂದು ನಿಲ್ಲುತ್ತದೆ.

ಹೊಟ್ಟೆ ತುಂಬಾ ಊಟಮಾಡುವುದಕ್ಕೆ ಸಾಮಾನ್ಯ ಹೋಟೆಲೂ ಸಾಕು; ಆದರೆ ಪಂಚತಾರಾ ಹೋಟೆಲೇ ಬೇಕೆಂದು ಹಪಹಪಿಸಿ, ಜತೆಗೆ ಎ.ಸಿ. ರೂಮಿನಲ್ಲೇ ಕುಳಿತು, ಕೊನೆಗೆ ‘ದರ ಹೆಚ್ಚಾಯಿತು’ ಎಂದು ಗೋಳುಗರೆಯುವುದರಿಂದ ಪ್ರಯೋಜನವಿಲ್ಲ. ಎಲ್ಲಿ ಉಣ್ಣುತ್ತೇವೆ ಎಂಬುದಕ್ಕಿಂತ ಹಸಿವನ್ನು ನೀಗಿಸಿಕೊಳ್ಳಲು
ಮಹತ್ವ ನೀಡಿದರೆ ಸಮಸ್ಯೆಗಳೇ ಉದ್ಭವಿಸುವುದಿಲ್ಲ!

(ಲೇಖಕರು ಪ್ರಾಂಶುಪಾಲರು)